ಚಂದನವನದ ಪಾಲಿಗೆ ಅಮ್ಮನಂತಿದ್ದ ಲೀಲಮ್ಮ ಕಣ್ಮುಚ್ಚಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಲೀಲಮ್ಮ ನಿನ್ನೆ ಕೊನೆಯುಸಿರೆಳೆದಿದ್ದಾರೆ. ಇಂದು ಸಂಜೆ ಅಂತ್ಯ ಸಂಸ್ಕಾರ ನೆರವೇರಲಿದೆ. ಲೀಲಮ್ಮ ಕಟ್ಟಿ ಬೆಳೆಸಿದ ಬೆಂಗಳೂರಿನ ನೆಲಮಂಗಲದ ಸೋಲದೇವನಹಳ್ಳಿ ಬಳಿಯ ತೋಟದಲ್ಲೇ ಮಣ್ಣಾಗಲಿದ್ದಾರೆ. ಇಡೀ ಚಿತ್ರರಂಗ ಲೀಲಮ್ಮನ ಸಾವಿಗೆ ಕಂಬನಿ ಮಿಡಿಯುತ್ತಿದೆ. ಕಲಾವಿದರು ಮಾತ್ರವಲ್ಲದೇ ರಾಜಕೀಯ ಗಣ್ಯರು ಸೇರಿದಂತೆ ಪ್ರಧಾನಿ ಮೋದಿಜೀ ಕೂಡ ಟ್ವೀಟ್ ಮಾಡಿ ಹಿರಿಯ ನಟಿಯ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
ಲೀಲಮ್ಮ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯವರು. ಡಿಸೆಂಬರ್ 24 1937ರಲ್ಲಿ ಜನಿಸಿದ ಇವರು, 6 ವರ್ಷದ ಮಗುವಿದ್ದಾಗಲೇ ಹೆತ್ತವರನ್ನ ಕಳೆದುಕೊಳ್ತಾರೆ. ಅಲ್ಲಿಂದ ಅನಾಥೆಯಾದ ಲೀಲಮ್ಮ ಕಡುಬಡತನದಲ್ಲಿ ಬೆಳೆಯುತ್ತಾ, ಅವರಿವರ ಮನೆಯಲ್ಲಿ ಪಾತ್ರೆ ತೊಳೆಯುತ್ತಾ ಬಾಲ್ಯ ಕಳೆಯುತ್ತಾರೆ. ಹೆಣ್ಣು ಮಗು ಅನ್ನೋ ಕಾರಣಕ್ಕೆ ಈಕೆಯ ಕುಟುಂಬಸ್ಥರು ತುಚ್ಚವಾಗಿ ಕಂಡಿಲ್ಲದೇ ಮನೆಯಿಂದಲೇ ಹೊರಗಾಕುತ್ತಾರಂತೆ. ಅಲ್ಲಿಂದ ಬದುಕು ಕಟ್ಟಕೊಳ್ಳೋದಕ್ಕೆ ರಂಗಭೂಮಿ ಕಡೆ ಮುಖ ಮಾಡಿದ ಲೀಲಮ್ಮ, ಮಹಾನಟಿಯಾಗಿ ಮೆರೆದು ಬೆಳ್ಳಿತೆರೆ ಲೋಕದಲ್ಲಿ ಯಾರೂ ತಿಕ್ಕಿ ಅಳಿಸಲಾಗದ ಚರಿತ್ರೆ ಸೃಷ್ಟಿಸಿ ಬದುಕು ಮುಗಿಸಿದ್ದಾರೆ.
ಅಂದ್ಹಾಗೇ, ಲೀಲಮ್ಮನಿಗೆ ತಾನು ನಟಿಯಾಗಬೇಕು, ಮಾಯಲೋಕದಲ್ಲಿ ಮಿಂಚಬೇಕು ಎನ್ನುವ ಆಸೆ-ಆಕಾಂಕ್ಷೆಗಳು ಇರಲಿಲ್ಲ. ಆದರೆ, ಅವರ ಮನೆಯಲ್ಲಿದ್ದ ಕಡುಬಡತನವೇ ಲೀಲಮ್ಮ ಅವ್ರನ್ನ ಬಣ್ಣ ಹಚ್ಚುವಂತೆ ಮಾಡ್ತು. ವೃತ್ತಿರಂಗಭೂಮಿಯಲ್ಲಿ ಕೆಲಸ ಮಾಡುತ್ತಾ ನಂತರ ಬಣ್ಣದ ಜಗತ್ತಿಗೆ ಪದಾರ್ಪಣೆ ಮಾಡಿದ ಲೀಲಮ್ಮ 63 ವರ್ಷಗಳ ಕಾಲ ಸಿನಿಮಾರಂಗದಲ್ಲಿ ನಾಯಕಿಯಾಗಿ, ಪೋಷಕ ನಟಿಯಾಗಿ ಮಿಂಚಿದರು. ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲೂ ಅಭಿನಯಿಸಿ ಸೈ ಎನಿಸಿಕೊಂಡರು. ಕನ್ನಡದಲ್ಲೇ ಭರ್ತಿ 400 ಸಿನಿಮಾಗಳಿಗೆ ಜೀವ ತುಂಬಿದ ಲೀಲಾವತಿಯವರು, ಪರಭಾಷೆಯ 200 ಸಿನಿಮಾಗಳಿಗೆ ಬಣ್ಣ ಹಚ್ಚಿ ಬೆಳ್ಳಿತೆರೆ ಮೇಲೆ ಮೋಡಿ ಮಾಡಿದ್ದಾರೆ. ಅಭಿಜಾತ ಕಲಾವಿದೆಯಾಗಿ ಮಿಂಚಿ ಬೆಳ್ಳಿತೆರೆ ಮಾತ್ರವಲ್ಲದೇ ಕೋಟ್ಯಾಂತರ ಅಭಿಮಾನಿ ಮನೆಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ.
ಲೀಲಮ್ಮ ತುಂಬಾ ಕಷ್ಟಜೀವಿ. ಹುಟ್ಟಿನಿಂದಲೂ ಬರೀ ಕಷ್ಟಗಳನ್ನೇ ಉಂಡಿದ್ದ ಈ ತಾಯಿ, ಮಹಾನಟಿಯಾಗಿ ನೆಲೆನಿಂತ್ಮೇಲೂ ಕೂಡ ಕಷ್ಟಗಳು ದೂರವಾಗಲಿಲ್ಲ. ಬದುಕಿನುದ್ದಕ್ಕೂ ಕಷ್ಟ-ದುಃಖ-ನೋವಿನ ಜೊತೆ ಹೋರಾಡುತ್ತಲೇ ಸಾಗಿದ ಲೀಲಮ್ಮ ವೀಕೆಂಡ್ ವಿತ್ ರಮೇಶ್ ವೇದಿಕೆಗೆ ಬಂದಾಗ ಎದೆಯಲ್ಲಿದ್ದ ನೋವನ್ನೆಲ್ಲಾ ಹೊರಹಾಕಿದ್ದರು. ಎಲ್ಲರೂ ಲೀಲಾವತಿಯವರ ಅಭಿನಯ ನೋಡಿ ಆನಂದ ಪಟ್ಟರೇ ವಿನಃ, ಯಾರೊಬ್ಬರು ಕೂಡ ನನ್ನ ಅಂತರಂಗದ ನೋವನ್ನ ಕೇಳಲೇ ಇಲ್ಲ. ಅದಕ್ಕೇನು ಬೇಜಾರಿಲ್ಲ, ಈ ಲೀಲಾವತಿ, ಈ ಲೀಲಾವತಿ ಮಗ ಎಲ್ಲೋ ಬದುಕ್ತೀವಿ ಎನ್ನುತ್ತಾ ಮನಸ್ಸನ್ನ ಭಾರ ಮಾಡಿಕೊಂಡು ಕಣ್ಣೀರು ಸುರಿಸಿದ ಲೀಲಮ್ಮ, ವಿನೋದ್ ಹೊಟ್ಟೆಯಲ್ಲಿದ್ದಾಗ ನಂಗೆ ಮೊಟ್ಟೆ ತಿನ್ನಬೇಕು ಅನಿಸುತ್ತಿತ್ತು. ನಾಟಿ ಕೋಳಿ ಮೊಟ್ಟೆ ತಿನ್ನೋಕೆ ಕೈಯಲ್ಲಿ ಕಾಸಿಲ್ಲದೇ, 10 ಪೈಸೆ ಕೊಟ್ಟು ಬಾತುಕೋಳಿ ಮೊಟ್ಟೆ ತಿನ್ಕೊಂಡು ಬಸುರಿ ಬಯಕೆ ಈಡೇರಿಸಿಕೊಂಡಿದ್ದೆ ಅಂತ ಒಡಲೊಳಗಿನ ವೇದನೆ ಹೊರಹಾಕಿದ್ದರು ಹಿರಿಯ ನಟಿ ಲೀಲಾವತಿಯವರು.
ಹೀಗೆ ಮನಸ್ಸಿನ ನೋವನ್ನೆಲ್ಲಾ ಒಂದೊಂದಾಗಿ ಹೊರಹಾಕಿದ್ದ ಲೀಲಾವತಿಯವರು, ನಾನು ಗರ್ಭಿಣಿ ಅನ್ನೋ ವಿಚಾರ ಎಲ್ಲರಿಗೂ ಗೊತ್ತಾದಾಗ ಎಷ್ಟೋ ಸಿನಿಮಾಗಳು ನನ್ನ ಕೈತಪ್ಪಿದವು. ಅಡ್ವಾನ್ಸ್ ಕೊಟ್ಟವರು ಎಲ್ಲರೂ ವಾಪಾಸ್ ಇಸ್ಕೊಂಡು ನನ್ನ ಜಾಗಕ್ಕೆ ಬೇರೊಬ್ಬ ನಾಯಕಿನಾ ತಂದು ಸಿನಿಮಾ ಮಾಡಿಸಿದರು. ಆ ಟೈಮ್ ನಲ್ಲಿ ನಾನು 3 ತಿಂಗಳ ಗರ್ಭಿಣಿ. ಆಗ ಬದುಕು ಇನ್ನೂ ಕಷ್ಟ ಆಯ್ತು. ಜೀವನ ಮಾಡೋದಕ್ಕೆ ಮತ್ತೆ ನಾನು ರಂಗಭೂಮಿ ಕಡೆ ಹೋಗಬೇಕಾಯ್ತು. 50000 ಸಂಭಾವನೆ ತಗೊಂಡು ಸಿನಿಮಾ ಮಾಡ್ತಿದ್ದ ಕಾಲದಲ್ಲಿ, ಮತ್ತೆ 500 ರೂ ಇಸ್ಕೊಂಡು ರಂಗಭೂಮಿಗೆ ಹೋಗಿ ನಾಟಕದಲ್ಲಿ ಅಭಿನಯಿಸ್ತಿದ್ದೆ. ಇಂತಹ ದಿನಗಳನ್ನೆಲ್ಲಾ ನೋಡಿ ಇವತ್ತು ನಿಮ್ಮ ಮುಂದೆ ನಿಂತಿದ್ದೇನೆ. ಈಗಲೂ, ನನ್ನ ಕಷ್ಟ ಯಾರೂ ಕೇಳೋರಿಲ್ಲ. ನನ್ನ ಮಗನಿಗೆ ನಾನು, ನನಗೆ ಅವನು. ಒಬ್ಬರಿಗೊಬ್ಬರು ಆಸರೆಯಾಗಿ ಸೋಲದೇವನಹಳ್ಳಿ ತೋಟದ ಮನೆಯಲ್ಲಿ, ಗಿಡ-ಮರ-ಪ್ರಾಣಿ-ಪಕ್ಷಿ-ಬೆಟ್ಟ-ಗುಡ್ಡಗಳ ನಡುವೆ ಬದುಕುತ್ತಿದ್ದೇವೆ ಅಂತ ದುಃಖ ಪಟ್ಕೊಂಡಿದ್ದರು ಹಿರಿಯ ನಟಿ ಲೀಲಾವತಿಯವರು. ಅವರ ನೋವೇನು ಅವರ ಸಂಕಟ ಏನು ಅನ್ನೋದು ಅವರಿಗಷ್ಟೇ ಗೊತ್ತು. ಆ ಭಗವಂತ ಆ ಸ್ವರ್ಗದಲ್ಲಾದರೂ ಅವರನ್ನ ನೆಮ್ಮದಿಯಾಗಿಟ್ಟಿರಲಿ. ಲೀಲಮ್ಮನ ಆತ್ಮಕ್ಕೆ ಶಾಂತಿಸಿಗಲಿ