ನಟ ವಿಜಯ ರಾಘವೇಂದ್ರ ಸದ್ದಿಲ್ಲದೆ ಹೊಸ ಸಿನಿಮಾಕ್ಕೆ ತಯಾರಿ ನಡೆಸುತ್ತಿದ್ದಾರೆ. ಇದೀಗ ವಿಜಯ ರಾಘವೇಂದ್ರ ಅಭಿನಯದ ಹೊಸ ಸಿನಿಮಾಕ್ಕೆ ‘ಜೋಗ್ 101’ ಎಂದು ಹೆಸರಿಡಲಾಗಿದ್ದು, ಇತ್ತೀಚೆಗೆ ‘ಜೋಗ್ 101’ ಸಿನಿಮಾದ ಟೈಟಲ್ ಪೋಸ್ಟರ್ ಮತ್ತಿ ಫಸ್ಟ್ ಲುಕ್ ಬಿಡುಗಡೆಯಾಗಿದೆ. ‘ಸೆವೆನ್ ಸ್ಟಾರ್ ಪಿಕ್ಚರ್ಸ್’ ಲಾಂಛನದಲ್ಲಿ ರಘು (ರಾಘವೇಂದ್ರ ) ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಕ್ರಿಯೇಟಿವ್ ಡೈರೆಕ್ಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ವಿಜಯ್ ಕನ್ನಡಿಗ ಈ ಚಿತ್ರದ ನಿರ್ದೇಶಕರು.
ಸದ್ದಿಲ್ಲದೆ ಚಿತ್ರೀಕರಣ ಮುಗಿಸಿರುವ ‘ಜೋಗ್ 101’ ಚಿತ್ರ ಈಗಾಗಲೇ ಬಿಡುಗಡೆಯ ಸನಿಹದಲ್ಲಿದೆ. ಪ್ರಚಾರ ಕಾರ್ಯ ಆರಂಭಿಸಿರುವ ಚಿತ್ರತಂಡ ಮೊದಲ ಹೆಜ್ಜೆಯಾಗಿ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಮುಂದೆ ಟೀಸರ್, ಹಾಡುಗಳು ಹಾಗೂ ಟ್ರೇಲರ್ ಸಹ ಬರಲಿದೆ. ಅವಿನಾಶ್ ಆರ್ ಬಾಸೂತ್ಕರ್ ಸಂಗೀತ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಡಾ. ವಿ. ನಾಗೇಂದ್ರಪ್ರಸಾದ್, ಜಯಂತ್ ಕಾಯ್ಕಿಣಿ ಹಾಗೂ ಮನ್ವರ್ಷಿ ನವಲಗುಂದ ಬರೆದಿದ್ದಾರೆ. ರಘು ದೀಕ್ಷಿತ್ ಮತ್ತು ಸಂಚಿತ್ ಹೆಗಡೆ ಹಾಡಿದ್ದಾರೆ. ಸುನೀತ್ ಹಲಗೇರಿ ಛಾಯಾಗ್ರಹಣ, ಮೋಹನ್ ರಂಗಕಹಳೆ ಸಂಕಲನ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ ಹಾಗೂ ಕಲೈ ಮಾಸ್ಟರ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.
ವಿಜಯ ರಾಘವೇಂದ್ರ ಅವರಿಗೆ ನಾಯಕಿಯಾಗಿ ತೇಜಸ್ವಿನಿ ಶೇಖರ್ ನಟಿಸಿದ್ದಾರೆ. ಗೋವಿಂದೇ ಗೌಡ, ಕಡಿಪುಡಿ ಚಂದ್ರು, ರಾಜೇಶ್ ನಟರಂಗ, ತಿಲಕ್, ನಿರಂಜನ್ ದೇಶಪಾಂಡೆ, ಶಶಿಧರ್, ಪ್ರಸನ್ನ, ಸುಂದರಶ್ರೀ, ಹರ್ಷಿತಾ ಗೌಡ ‘ಜೋಗ್ 101’ ಚಿತ್ರದ ತಾರಾಬಳಗದಲ್ಲಿದ್ದಾರೆ.