ತಮಿಳು ನಟ ವಿಜಯ್ ಸೇತುಪತಿ ಮತ್ತು ಬಾಲಿವುಡ್ ನಟಿ ಕತ್ರಿನಾ ಕೈಫ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ ‘ಮೆರ್ರಿ ಕ್ರಿಸ್ಮಸ್’. ‘ಬದ್ಲಾಪುರ್’ ಮತ್ತು ‘ಅಂಧಾದುನ್’ ಖ್ಯಾತಿಯ ನಿರ್ದೇಶಕ ಶ್ರೀರಾಮ್ ರಾಘವನ್ ಆ್ಯಕ್ಷನ್-ಕಟ್ ಹೇಳಿರುವ ಥ್ರಿಲ್ಲರ್ ಚಿತ್ರವಿದು. ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಕುತೂಹಲ ಮೂಡಿಸುವಂತಿದೆ.
ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ಇಬ್ಬರು ಅಪರಿಚಿತರು ಭೇಟಿಯಾಗುತ್ತಾರೆ. ಕೆಲವೇ ತಾಸುಗಳಲ್ಲಿ ಅವರ ನಡುವೆ ಗೆಳೆತನ ಬೆಳೆದು, ಪ್ರೀತಿಯೂ ಚಿಗುರುತ್ತದೆ. ಜತೆಗೆ ಅಷ್ಟೇ ವೇಗವಾಗಿ ಇಬ್ಬರೂ ಪರಸ್ಪರ ವೈರಿಗಳಾಗಿ, ಒಬ್ಬರು ಮತ್ತೊಬ್ಬರ ಜೀವಕ್ಕೆ ಕಂಟಕವಾಗುತ್ತಾರೆ. ಹೀಗೆ ಒಂದೇ ರಾತ್ರಿ ನಡೆಯುವ ಕಥೆಯನ್ನು ಥ್ರಿಲ್ಲಿಂಗ್ ಟ್ರೇಲರ್ ಮೂಲಕ ಪ್ರೇಕ್ಷಕರ ಮುಂದೆ ತಂದಿದ್ದಾರೆ ನಿರ್ದೇಶಕ ಶ್ರೀರಾಮ್. ಜತೆಗೆ ಕತ್ರಿನಾ ಮತ್ತು ವಿಜಯ್ ನಡುವಿನ ರೊಮ್ಯಾನ್ಸ್ ಟ್ರೇಲರ್ನ ಹೈಲೈಟ್ ಆಗಿದೆ.
ಒಟಿಟಿಯಲ್ಲಿ ಬಿಡುಗಡೆಯಾದ ‘ಮುಂಬೈಕರ್’ ಚಿತ್ರದ ಮೂಲಕ ನಾಯಕನಾಗಿ ಬಾಲಿವುಡ್ ಡೆಬ್ಯೂ ಮಾಡಿದ್ದ ವಿಜಯ್ ಸೇತುಪತಿ ನಂತರ ‘ಜವಾನ್’ ಚಿತ್ರದಲ್ಲಿ ವಿಲನ್ ಆಗಿ ಮಿಂಚಿದ್ದರು. ಇದೀಗ ‘ಮೆರ್ರಿ ಕ್ರಿಸ್ಮಸ್’ ಮೂಲಕ ಮತ್ತೆ ಬಿಟೌನ್ನಲ್ಲಿ ಹೀರೋ ಆಗಿದ್ದಾರೆ. ಇನ್ನು ಈ ಹಿಂದೆ ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಕತ್ರಿನಾ ಕೈಫ್, ‘ಮೆರ್ರಿ ಕ್ರಿಸ್ಮಸ್’ ಮೂಲಕ ಕಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ 2024ರ ಜ. 12ರಂದು ಹಿಂದಿ ಮತ್ತು ತಮಿಳು ಭಾಷೆಗಳಲ್ಲಿ ರಿಲೀಸ್ ಆಗಲಿದೆ.