ಎಲ್ಲದರತ್ತಲೂ ಬೆರಗಾಗಿ ದಿಟ್ಟಿಸುವ ಗುಣವೊಂದಿದ್ದರೆ, ಈ ಜಗತ್ತೇ ಚಿತ್ರ ವಿಚಿತ್ರ ಅಚ್ಚರಿಗಳ ಸಂತೆಯಂತೆ ಕಾಣಿಸುತ್ತೆ. ಕೇಳಿದಾಕ್ಷಣ ಇಂಥಾದ್ದೊಂದು ಇರಲಿಕ್ಕೆ ಸಾಧ್ಯವಾ ಎಂಬಂಥಾ ಬೆರಗು ಮೂಡಿಸಬಲ್ಲ ಅಚ್ಚರಿಗಳು ಈ ಜಗತ್ತಿನಲ್ಲಿ ಯಥೇಚ್ಛವಾಗಿವೆ. ನಾವು ಒಂದ್ಯಾವುದೋ ಗಮ್ಯದ ಹಿಂದೆ ಬಿದ್ದು, ಅದನ್ನು ತಲುಪಿಕೊಳ್ಳೋದನ್ನೇ ಗುರಿಯಾಗಿಸಿಕೊಂಡು ಒಂದಷ್ಟು ಅಚ್ಚರಿಗಳಿಗೆ ಕಿವುಡು, ಕುರುಡಾಗಿ ಬಿಟ್ಟಿರುತ್ತೇವೆ. ಕೊಂಚ ಬೆರಗನ್ನು ಆವಾಹಿಸಿಕೊಂಡು ದಿಟ್ಟಿಸಿದರೆ, ಈ ಜಗತ್ತೊಂದು ವಿಸ್ಮಯಗಳ ಕಟಾಂಜನದಂತೆ ಕಾಣಿಸುತ್ತದೆ. ಹಾಗಂತ ಅವುಗಳನ್ನೆಲ್ಲ ಒಂದೇ ಬೊಗಸೆಯಲ್ಲಿಟ್ಟು ದಿಟ್ಟಿಸಲು ಸಾಧ್ಯವಾಗೋದಿಲ್ಲ. ಹುಡುಕುತ್ತಾ ಹೋದರಂತೆ ಅಂಥಾ ವಿಶೇಷ ಸುದ್ದಿಗಳ ಸಾಗರವೇ ಕಣ್ಣೆದುರು ಕಾಣಿಸುತ್ತೆ. ಬೊಗಸೆಯೊಡ್ಡಿದರೆ ದಕ್ಕೋದು ಒಂದಷ್ಟು ಹನೆಗಳು ಮಾತ್ರ. ಅಂಥಾ ಕೆಲವಾರು ವಿಸ್ಮಯಕಾರಿ ಸುದ್ದಿಗಳು ಇಲ್ಲಿವೆ…
ವಿಚಿತ್ರ ಮನುಷ್ಯ
ಮುನುಷ್ಯರೆಂದರೆ ಒಂದೇ ತಲೆ, ಒಂದೇ ಮುಖ, ಇಂತಿಂಥಾದ್ದೇ ಅಂಗಗಳು ಮತ್ತು ಅವುಗಳಿಗೊಂದಿಷ್ಟು ನಿಖರ ರಚನೆಗಳಿರುತ್ತವೆ. ಆದರೆ ಪ್ರಕೃತಿಯ ವೈಚಿತ್ರ್ಯ ಮಾತ್ರ ಆ ಗೆರೆ ದಾಟಿಕೊಂಡು ಕೆಲ ಮನುಷ್ಯರನ್ನು ಸೃಷ್ಟಿಸಿ ಬಿಡುತ್ತೆ. ಅದಕ್ಕೆ ಉದಾಹರಣೆಯಾಗಿ ಹತ್ತಾರು ವಿಚಿತ್ರಗಳಿವೆ. ಎರಡು ದೇಹಗಳು ಒಂದಕ್ಕೊಂದು ಹೊಸೆದುಕೊಂಡಿರೋ ಸಯಾಮಿಗಳು ನಮಗೆಲ್ಲ ಪರಿಚಿತ. ಅವುಗಳನ್ನು ನೋಡಿಯೇ ಅದೆಷ್ಟೋ ಸಲ ನಾವೆಲ್ಲ ಹೌಹಾರುತ್ತೇವೆ. ಆದರೆ ಅದನ್ನೇ ಮೀರಿಸುವಂಥ ವಿಚಿತ್ರವಾದ ಮನುಷ್ಯರು ಈ ನೆಲದಲ್ಲಿ ನಡೆದಾಡಿದ್ದಾರೆ. ಅಂಥವರೆಲ್ಲ ಕಡೇಯವರೆಗೂ ವೈದ್ಯಕೀಯ ಜಗತ್ತಿಗೇ ಸವಾಲೆಸೆಯುವಂತೆ ಬದುಕಿ ಹೋಗಿದ್ದಾರೆ.
ಹದಿನೆಂಟನೇ ಶತಮಾನದಲ್ಲಿ ಬದುಕಿದ್ದ ಎಡ್ವರ್ಡ್ ಮಾರ್ಡಾರ್ಕ್ ಎಂಬಾತ ವಿಚಿತ್ರದಲ್ಲಿಯೇ ವಿಚಿತ್ರ ಸೃಷ್ಟಿಗೊಂದು ತಾಜಾ ಉದಾಹರಣೆ. ಅಸಾಧ್ಯ ಬುದ್ಧಿವಂತಿಕೆ ಹೊಂದಿದ್ದ ಎಡ್ವರ್ಡ್‌ಗೆ ಪ್ರಾಕೃತಿಕವಾಗಿಯೇ ಶಾಪದಂಥಾ ದೇಹ ರಚನೆ ಬಂದಿತ್ತು. ಹಾಗಂತ ಆತನ ದೇಹದಲ್ಲೇನು ಬೇರೆಯವರಿಗಿಂತ ಭಿನ್ನವಾದ, ವಿಚಿತ್ರವಾದ ರಚನೆಗಳಿರಲಿಲ್ಲ. ನೋಡಿದರೆ ಮಾಮೂಲಿ ಮನುಷ್ಯನಂತೆಯೇ ಕಾಣಿಸುತ್ತಿದ್ದ ಆತನಿಗೆ ತಲೆಯಲ್ಲಿಯೂ ಒಂದು ಮುಖವಿತ್ತು. ಮಾಮೂಲಿಯಾಗಿರೋ ಮುಖದ ಹಿಂಬಾಗದಲ್ಲಿ ಮೂಗು, ಬಾಯಿ, ಕಣ್ಣುಗಳಿರೋ ಮತ್ತೊಂದು ಮುಖವಿತ್ತು!
ಮಾಮೂಲಿ ಮುಖವನ್ನೇ ಹೋಲುವಂಥಾ ಎರಡನೇ ಮುಖದಲ್ಲಿ ಆತನಿಗೆ ಮಾತಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಅದರಲ್ಲಿಯೂ ಒಂದಷ್ಟು ಭಾವನೆಗಳನ್ನು ಹೊಮ್ಮಿಸಬಹುದಾಗಿತ್ತು. ಅಷ್ಟೇ ಆಗಿದ್ದರೆ ಆತನ ಬದುಕೇನು ಅಷ್ಟಾಗಿ ಸಂಕಷ್ಟಕ್ಕೀಡಾಗುತ್ತಿರಲಿಲ್ಲ. ಆದರೆ ರಾತ್ರಿಯ ಸಮಯದಲ್ಲಿ ಎರಡನೇ ಮುಖದಿಂದ ಚಿತ್ರವಿಚಿತ್ರವಾದ ಶಬ್ದಗಳು ಬರೀ ಅವನಿಗೆ ಮಾತ್ರವೇ ಕೇಳುವಂತೆ ಹೊಮ್ಮುತ್ತಿತ್ತಂತೆ. ಅದರಿಂದ ಅದೆಷ್ಟು ಕಿರಿ ಕಿರಿಗೀಡಾಗುತ್ತಿದ್ದನೆಂದರೆ ಸತ್ತೇ ಹೋಗುವಷ್ಟು ಹಿಂಸೆಯಾಗುತ್ತಿತ್ತಂತೆ. ಆದರೆ ಅದೇನೇ ಚಿಕಿತ್ಸೆ ತೆಗೆದುಕೊಂಡರೂ ಎರಡನೇ ಮುಖದ ಶಬ್ಧ ಮಾತ್ರ ನಿಂತಿರಲಿಲ್ಲ. ಅದನ್ನು ತಾಳಲಾರದೆ ಕಡೆಗೂ ಎಡ್ವರ್ಡ್ ಆತ್ಮಹತ್ಯೆಗೆ ಶರಣಾಗಿದ್ದ!
ಬೆತ್ತಲೆ ರೆಸ್ಟೋರೆಂಟ್
ಮನುಷ್ಯರಷ್ಟು ಹುಚ್ಚಿನ ಪ್ರಮಾಣ ಅತಿಯಾಗಿರೋ ಮತ್ತೊಂದು ಪ್ರಾಣಿ ಈ ಭೂಮಿ ಮೇಲೆ ಸಿಗಲು ಸಾಧ್ಯವೇ ಇಲ್ಲ. ಈ ಮಾತಿಗೆ ತಕ್ಕುದಾಗಿ ಸಾವಿರಾರು ಉದಾಹರಣೆಗಳನ್ನು ಕೊಡಬಹುದೇನೋ. ನಮಗೆಲ್ಲ ಕ್ರಿಯೇಟಿವ್ ಆಗಿ ಆಲೋಚಿಸುವ, ಅಂಥಾದ್ದನ್ನೇ ಮಾಡಿ ಭೇಷ್ ಅನ್ನಿಸಿಕೊಳ್ಳುವ ಬಯಕೆ ಇರುತ್ತೆ. ಆದರೆ ಈ ಜಗತ್ತಿನ ವಿದ್ಯಮಾನಗಳತ್ತ ಒಮ್ಮೆ ಕಣ್ಣು ಹಾಯಿಸಿದ್ರೆ ನಮ್ಮ ಕಲ್ಪನೆಯನ್ನೂ ಮೀರಿ ಜಗತ್ತು ಮುಂದುವರೆದಿದೆ ಅನ್ನಿಸಿ ಬಿಡುತ್ತೆ. ಆ ಹುಡುಕಾಟದಲ್ಲಿಯೇ ಕ್ರಿಯೇಟಿವಿಟಿಯ ಹೆಸರಲ್ಲಿ ವಿಕೃತಿಗಳೂ ಸಂಭವಿಸುತ್ತಿವೆ ಅನ್ನಿಸದಿರೋದಿಲ್ಲ. ಪ್ಯಾರಿಸ್‌ನಲ್ಲಿರೋ ವಿಚಿತ್ರ ರೆಸ್ಟೋರೆಂಟ್ ಒಂದರ ಕಥೆ ಕೇಳಿದರೆ ಈ ಮಾತಲ್ಲಿ ನಿಮಗೂ ಕೂಡಾ ನಂಬಿಕೆ ಹುಟ್ಟದಿರೋದಿಲ್ಲ.
ಪ್ಯಾರಿಸ್ ಅನ್ನೋದು ಪ್ರವಾಸ ಪ್ರಿಯರ ಹಾಟ್ ಫೇವರಿಟ್ ದೇಶ. ಜೀವಮಾನದಲ್ಲಿ ಆ ದೇಶಕ್ಕೊಮ್ಮೆ ಹೋಗಿ ಸುತ್ತಾಡಿಕೊಂಡು ಬರಬೇಕನ್ನೋದು ಅದೆಷ್ಟೋ ಸಹಸ್ರ ಜನರ ಆಸೆ. ಪಟ್ಟಿ ಮಾಡಿದರೆ ಆ ದೇಶದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನೋಡಲೇ ಬೇಕಾದ ಸ್ಥಳಗಳಿರೋದು ಪತ್ತೆಯಾಗುತ್ತೆ. ಅಂಥಾ ಪ್ರವಾಸಿಗರ ಪಾಲಿನ ಸ್ವರ್ಗದೊಳಗೇ ಒಂದು ವಿಚಿತ್ರದಲ್ಲೇ ವಿಚಿತ್ರವಾದ ರೆಸ್ಟೋರೆಂಟ್ ಒಂದಿದೆ. ಅದೇನು ಅಂತಿಂಥ ರೆಸ್ಟೋರಾಂಟ್ ಅಲ್ಲ. ಅದರೊಳಗೆ ಪ್ರವೇಶ ಪಡೆಯಬೇಕಂದ್ರೆ ಹೆಂಗಸರು, ಗಂಡಸರು, ಚಿಳ್ಳೆ ಪಿಳ್ಳೆಗಳೆಂಬ ಬೇಧ ಭಾವವಿಲ್ಲದೆ ಪ್ರತಿಯೊಬ್ಬರೂ ಬಟ್ಟೆ ಕಳಚಿ ಬೆತ್ತಲಾಗಲೇ ಬೇಕಿದೆ.
ಅದರೊಳಗೆ ಎಲ್ಲವೂ ಬೆತ್ತಲೆ ಮಯ. ಅಡುಗೆ ಮಾಡುವವರಿರಿಂದ ಹಿಡಿದು ಸರ್ವ್ ಮಾಡೋವರೆಗೆ ಎಲ್ಲರೂ ಮೈ ಮೇಲೆ ನೂಲರಿವೆಯೂ ಇಲ್ಲದಂತೆ ಬೆತ್ತಲಾಗಿರ್‍ತಾರೆ. ಅದರೊಳಗೆ ಜನ ಯಾವ ಮುಜುಗರವೂ ಇಲ್ಲದಂತೆ ಬರೇ ಬೆತ್ತಲಾಗಿ ಇಷ್ಟದ ತಿನಿಸುಗಳನ್ನ ಚಪ್ಪರಿಸುತ್ತಾರೆ. ನಮಗೆ ಈ ವಿಚಾರ ಕೇಳಿದಾಕ್ಷಣವೇ ಮುಜುಗರವಾಗುತ್ತೆ. ಆದ್ರೆ ಆ ರೆಸ್ಟಾರಾಂಟಿಗೆ ಹೋಗಿ ಬೆತ್ತಲಾಗಿ ತಿನ್ನೋದಕ್ಕೆ ನೂಕು ನುಗ್ಗಲಿದೆ. ಪ್ರತೀ ದಿನ ಲಕ್ಷಾಂತರ ಮಂದಿ ಅಲ್ಲಿ ಮುಂಗಡ ಬುಕ್ಕಿಂಗ್ ಮಾಡಲು ಕ್ಯೂ ನಿಲ್ಲುತ್ತಾರೆ. ಅಲ್ಲಿ ಪ್ರವೇಶ ಸಿಗಬೇಕೆಂದರೆ ಎರಡ್ಮೂರು ತಿಂಗಳ ಮುನ್ನವೇ ಪ್ರಯತ್ನ ಆರಂಭಿಸಬೇಕಾಗುತ್ತದೆಯಂತೆ!
೨೪೦೦ ವರ್ಷದ ಸೂಪ್!
ಭೂಮಿಯನ್ನು ಅಗೆದು ಉತ್ಖನನ ಮಾಡಿದಾಗೆಲ್ಲ ನೂರಾರು, ಸಾವಿರಾರು ವರ್ಷಗಳ ಇತಿಹಾಸ ತೆರೆದುಕೊಳ್ಳುತ್ತಲೇ ಇರುತ್ತೆ. ಆದ್ದರಿಂದಲೇ ವಿಶ್ವದ ನಾನಾ ದೇಶಗಳಲ್ಲಿರುವ ಪುರಾತತ್ವ ಇಲಾಖೆಯ ಮಂದಿ ಅವ್ಯಾಹತವಾಗಿ ಉತ್ಖನನ ನಡೆಸುತ್ತಲೇ ಇದ್ದಾರೆ. ಈ ಭೂಮಿಯ ಮೇಲೆ ಮನುಷ್ಯ ಜೀವಿಯ ಅಟಾಟೋಪ ಶುರುವಾಗಿ ಸಾವಿರಾರು ವರ್ಷಗಳೇ ಕಳೆದಿವೆ. ಅಲ್ಲಿಂದೀಚೆಗಿನ ಆತನ ಹೆಜ್ಜೆ ಗುರುತುಗಳು ಇಂಥ ಉತ್ಖನನದ ಸಂದರ್ಭದಲ್ಲೆಲ್ಲ ಹೊಸಾ ಬಗೆಯಲ್ಲಿ ಹೊಳಪು ಪಡೆಯುತ್ತಿವೆ. ಇಂಥಾ ತಲಾಶಿನ ಸಂದರ್ಭದಲ್ಲಿ ಇದುವರೆಗೂ ನಾನಾ ವಸ್ತುಗಳು ಸಿಕ್ಕಿವೆ. ಆದರೆ ಚೀನಾದ ಸಮಾಧಿಯೊಂದರಲ್ಲಿ ಸಿಕ್ಕಿರೋದು ಕೊಂಚ ಡಿಫರೆಂಟಾಗಿರೋ ಐಟಮ್ಮು!
ಇಂಥಾದ್ದೊಂದು ಅಚ್ಚರಿದಾಯಕ ವಸ್ತು ಪತ್ತೆಯಾಗಿರೋದು ಚೀನಾದ ಕ್ಸಿಯಾನಾಂಗ್ ಪ್ರದೇಶದಲ್ಲಿ. ಅಲ್ಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಂದನೇ ಹಂತದ ಕಾಮಗಾರಿ ಪೂರ್ಣಗೊಂಡಿತ್ತು. ೨೦೧೦ರ ಸುಮಾರಿಗೆ ಎರಡನೇ ಹಂತದ ಕಾಮಗಾರಿಗೆಂದು ನಿಗಧಿತ ಪ್ರದೇಶದ ಸ್ವಚ್ಛತಾ ಕಾರ್ಯ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಭೂಮಿಯನ್ನು ಅಗೆಯುವಾಗ ಪುರಾತನ ಕಾಲದ ಸಮಾಧಿಯೊಂದು ಪತ್ತೆಯಾಗಿತ್ತು. ತಕ್ಷಣವೇ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಹೋಗಿ ಅವರ ಸಮ್ಮುಖದಲ್ಲಿಯೇ ಮತ್ತೊಂದಷ್ಟು ಅಗೆತ ನಡೆದಿತ್ತು. ಆಗ ಆ ಸಮಾಧಿಯ ಮಗ್ಗುಲಲ್ಲಿ ಸಿಕ್ಕಿದ್ದು ವಿಶಿಷ್ಟ ಆಕಾರದ ಕಂಚಿನ ಮಡಕೆ!
ಆ ಮಡಕೆಯನ್ನು ತೆರೆದು ನೋಡಿದಾಗ ಅದರಲ್ಲಿ ವಾಸನೆಯೇ ಇಲ್ಲದ ದ್ರವ ತುಂಬಿಕೊಂಡಿತ್ತು. ಅದರಾಳದಲ್ಲಿ ಮೂಳೆಗಳೂ ಇದ್ದವು. ಆದ್ದರಿಂದಲೇ ಹಲವಾರು ಪರೀಕ್ಷೆಗಳ ನಂತರ ಅದು ಸೂಪ್ ಅನ್ನೋ ನಿರ್ಧಾರಕ್ಕೆ ಬರಲಾಗಿದೆಯಂತೆ. ಅಂದಹಾಗೆ ಈ ರೀತಿಯ ಸೂಪ್ ಪತ್ತೆಯಾಗಿದ್ದು ಚೀನಾದಲ್ಲಿ ಅದೆ ಮೊದಲಂತೆ. ಚೀನಾದ ಮಂದಿ ಆಹಾರ ಪ್ರಿಯರು. ಸೂಪ್‌ಗಳೆಂದರೆ ಅವರಿಗೆಲ್ಲ ಪ್ರಾಣ. ಆದ್ದರಿಂದಲೇ ಹಲ್ಲಿ, ಹಾವು, ಹುಳ ಹುಪ್ಪಟೆಗಳನ್ನೆಲ್ಲ ಬೇಯಿಸಿ ಸೂಪ್ ಮಾಡಿಕೊಂಡು ಕುಡಿಯುತ್ತಾರೆ. ಅಲ್ಲಿನ ಮಂದಿ ಸತ್ತಾಗ ಸಮಾಧಿಯಲ್ಲಿ ಅವರಿಷ್ಟದ ಸೂಪ್ ಇಡೋ ಪದ್ಧತಿ ಒಂದು ಕಾಲದಲ್ಲಿ ಇದ್ದಿರಬಹುದು. ಅದು ಕಂಚಿನ ಪಾತ್ರೆಯಾದ್ದರಿಂದ ೨೪೦೦ ವರ್ಷಗಳಷ್ಟು ದೀರ್ಘ ಕಾಲ ಬಾಳಿಕೆ ಬಂದಿರಬಹುದೆಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಲವ್ ಅಲ್ಲ; ಡ್ರಗ್ಸ್!
ಒಂದು ವಯಸ್ಸಿನಲ್ಲಿ ಪ್ರೀತಿ ಅನ್ನೋ ಮಾಯೆ ಯಾರನ್ನೇ ಆದರೂ ಆವರಿಸಿಕೊಳ್ಳುತ್ತೆ. ಅದೇನೇ ಮುಚ್ಚಿಟ್ಟರೂ, ಬಚ್ಚಿಟ್ಟರೂ ಇಂಥಾ ಪ್ರೀತಿಯ ಪರಿಣಾಮ ಹೊರಜಗತ್ತಿಗೆ ಸ್ಪಷ್ಟವಾಗಿ ಗೊತ್ತಾಗುವಂತಿರುತ್ತೆ. ಯಾಕಂದ್ರೆ, ಪ್ರೀತಿಯಲ್ಲಿ ಬಿದ್ದವರ ವರ್ತನೆಗಳೇ ವಿಚಿತ್ರವಾಗಿರುತ್ತವೆ. ಕಾಲಡಿಯಲ್ಲಿ ಸದಾ ಚಿಮ್ಮು ಹಲಗೆಯನ್ನಿಟ್ಟುಕೊಂಡವರಂತೆ ಸದಾ ಕಾಲವೂ ಪುಟಿದೇಳುತ್ತಿರುತ್ತಾರೆ. ತೀರಾ ಮಂಕುದಿಣ್ಣೆಗಳಂತಿರುವವರೂ ಕೂಡಾ ಪಕ್ಕಾ ಆಕ್ಟೀವ್ ಆಗಿ ಬಿಡುತ್ತಾರೆ.
ಹಾಗಾದ್ರೆ ಪ್ರೀತಿಗೆ ಆ ಥರದ ಅಗಾಧ ಶಕ್ತಿ ಇದೆಯಾ? ಯಾಕೆ ಪ್ರೀತಿ ಅನ್ನೋ ಮಾಯೆ ಥರ ಥರದಲ್ಲಿ ಕಾಡಿಸುತ್ತೆ ಎಂಬ ಪ್ರಶ್ನೆಗಳಿಗೆಲ್ಲ ಮನೋ ವಿಜ್ಞಾನ ಮಜವಾದ ಉತ್ತರವನ್ನೇ ಆವಿಷ್ಕರಿಸಿದೆ. ಆ ವಿವರಗಳು ನಿಜಕ್ಕೂ ಗಾಬರಿ ಬೀಳುವಂತಿದೆ. ಅದು ಪ್ರೀತಿಯನ್ನು ಡ್ರಗ್ಸ್‌ನೊಂದಿಗೆ ಸಮೀಕರಿಸುವಂತೆಯೂ ಇದೆ. ಯಾಕಂದ್ರೆ, ಪ್ರೀತಿಯ ಭಾವಗಳು ಕೊಕೇನ್‌ನಷ್ಟೇ ಪ್ರಮಾಣದಲ್ಲಿ ಉತ್ಸಾಹವನ್ನ ಪುಟಿದೆಬ್ಬಿಸಿ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆಯಂತೆ. ಕೊಕೇನ್ ಮೆದುಳಿನ ಮೇಲೆ ಯಾವ ಥರದಲ್ಲಿ ಪರಿಣಾಮ ಬೀರುತ್ತದೆಂಬುದು ಗೊತ್ತಿರೋದೇ. ಪ್ರೀತಿಯೂ ಕೂಡಾ ಅದರೊಂದಿಗೆ ಪೈಪೋಟಿಗೆ ಬೀದ್ದಂತಿದೆ.
ಪ್ರೀತಿ ಕೂಡಾ ನಮ್ಮ ದೇಹದಲ್ಲಿ ಹಲವಾರು ರಾಸಾಯನಿಕಗಳನ್ನು ಉತ್ಪತ್ತಿ ಮಾಡುತ್ತವೆಯಂತೆ. ಅದು ಮೆದುಳಿನಿಂದ ಸೀದಾ ನರಮಂಡಲಕ್ಕೂ ಕನೆಕ್ಷನ್ನು ಕಲ್ಪಿಸುತ್ತೆ. ಪ್ರೀತಿಯಲ್ಲಿ ಬಿದ್ದು ಅದು ಉತ್ತುಂಗದಲ್ಲಿರುವ ಕ್ಷಣಗಳಲ್ಲಿ ಅದರ ಪರಿಣಾಮ ಮೆದುಳಿನ ಮೇಲೆ ಅತಿಯಾಗಿರುತ್ತೆ. ಅದು ಮೆದುಳಿನ ಹನ್ನೆರಡು ಸೂಕ್ಷ್ಮ ಬಿಂದುಗಳನ್ನು ಪ್ರಚೋದಿಸುತ್ತದೆಯಂತೆ. ಪ್ರೀತಿಸಿದ ಜೀವ ಹೇಳಿದರೆ ಪ್ರಪಾತಕ್ಕೆ ಬೀಳಲೂ ರೆಡಿಯಾಗೋ ಮನಸ್ಥಿತಿಗಳಿವೆಯಲ್ಲಾ? ಅದೆಲ್ಲವೂ ಪ್ರೀತಿ ಪಡಿಮೂಡಿಸೋ ರಾಸಾಯನಿಕ ಛಾಯೆಗಳ ಚಮಾತ್ಕಾರವಲ್ಲದೆ ಬೇರೇನೂ ಅಲ್ಲ!
ಕೊಬ್ಬಿನ ಕಥೆ!
ಕೊಬ್ಬು ಅತಿಯಾದ್ರೆ ಮನುಷ್ಯ ನಾನಾ ಥರದ ಸಂಕಷ್ಟಗಳಿಗೀಡಾಗಬೇಕಾಗುತ್ತೆ. ಅದು ವರ್ತನೆಯಲ್ಲಿ ಅಡಕವಾಗಿರೋ ಕೊಬ್ಬಾದರೂ ಸರಿ, ದೇಹದೊಳಗೆ ಶೇಖರಣೆಯಾಗೋ ಕೊಬ್ಬು, ಅರ್ಥಾತ್ ಫ್ಯಾಟ್ ಆದರೂ ಸರಿಯೇ… ಅತಿಯಾದ್ರೆ ಅಪಾಯ ಖಾಯಂ. ಈಗ ನಾವು ಹೇಳ ಹೊರಟಿರೋದು ನಮ್ಮ ದೇಹದ ಒಳಗೆ ಪ್ರಾಕೃತಿಕವಾಗಿರೋ ಕೊಬ್ಬಿನ ಬಗ್ಗೆ. ಈ ಕೊಬ್ಬು ಒಂದು ಮಟ್ಟಕ್ಕಿದ್ದರೆ ಅದು ದೇಹವನ್ನು ಸಮತೋಲನದಲ್ಲಿಡುತ್ತೆ. ಅದೇನಾದ್ರೂ ಅತಿಯಾದರೆ ನಾನಾ ಕಾಯಿಲೆ ಕಸಾಲೆಗಳಿಗೆ ಆಹ್ವಾನ ಕೊಡುತ್ತೆ. ಈ ಕೊಬ್ಬಿನ ಅಸಲೀ ಕಥೆ ನಿಜಕ್ಕೂ ಇಂಟರೆಸ್ಟಿಂಗ್ ಆಗಿದೆ.
ಅತಿಯಾದ ಕೊಬ್ಬಿನ ಕಥೆ ಒತ್ತಟ್ಟಿಗಿರಲಿ; ಮನುಷ್ಯನ ದೇಹದಲ್ಲಿ ಸಾಮಾನ್ಯವಾಗಿ ಎಷ್ಟು ಪ್ರಮಾಣದ ಕೊಬ್ಬಿರುತ್ತೆ ಅನ್ನೋದು ಅಸಲೀ ಪ್ರಶ್ನೆ. ಈ ನಮಿಟ್ಟಿನಲ್ಲಿ ಹುಡಕಾಟಕ್ಕಿಳಿದರೆ ನಿಜಕ್ಕೂ ಕುತೂಹಲಕರವಾದ ಒಂದಷ್ಟು ಅಂಶಗಳು ಹೊರಬೀಳುತ್ತವೆ. ಅಂದಹಾಗೆ ನಮ್ಮ ದೇಹದಲ್ಲಿ ಏಳು ಬಾರ್ ಸೋಪ್ ತಯಾರಿಸುವಷ್ಟು ಕೊಬ್ಬು ಇರುತ್ತದೆಯಂತೆ. ಆರೋಗ್ಯವಂತ ಮನುಷ್ಯರ ದೇಹದಲ್ಲೆಲ್ಲ ಇಷ್ಟು ಪ್ರಮಾಣದ ಕೊಬ್ಬು ಇದ್ದೇ ಇರುತ್ತೆ. ಅದನ್ನು ಸೋಪ್ ಲೆಕ್ಕದಲ್ಲಿ ಅಳೆದು ಹೇಳಿರೋದಕ್ಕೂ ಗಹನವಾದೊಂದು ಕಾರಣ ಇದ್ದೇ ಇದೆ.
ಈ ಸಾಬೂನುಗಳು ಕೊಬ್ಬು ಮತ್ತು ಆಯಿಲ್ ಕಂಟೆಂಟಿನಿಂದಲೇ ತಯಾರಾಗುತ್ತವೆ. ಪ್ರಾಣಿ ಮತ್ತಯು ಸಸ್ಯ ಮೂಲಗಳಿಂದ ಅವು ಮಾಡಲ್ಪಟ್ಟಿರುತ್ತವೆ. ಅದರಲ್ಲಿ ಕೊಬ್ಬೇ ಪ್ರಧಾನವಾಗಿರೋದರಿಂದ ನಮ್ಮ ದೇಹದಲ್ಲಿರೋ ಕೊಬ್ಬಿನಿಂದ ಸಲೀಸಾಗಿ ಸೋಪ್ ತಯಾರಿಸಬಹುದು. ನಮ್ಮ ದೇಹದೊಳಗಿರೋ ಕೊಬ್ಬನ್ನು ಸೋಡಿಯಂನೊಂದಿಗೆ ಸಂಯೋಜಿಸಿದರೆ ಘನ ರೂಪದ ಗಟ್ಟಿಯಾದ ಸೋಪು ತಯಾರಾಗುತ್ತೆ. ಅದಕ್ಕೆ ಪೊಟ್ಯಾಶಿಯಂ ಹೈಡ್ರಾಕ್ಸೈಡ್ ಸೇರಿಸಿದರೆ ಲಿಕ್ವಿಡ್ ಸೋಪ್ ರೆಡಿಯಾಗುತ್ತೆ. ಇನ್ನು ತುಂಬಾ ಕೊಬ್ಬು ತುಂಬಿಕೊಂಡು ಬೊಜ್ಜು ಬೆಳೆಸಿಕೊಂಡು ಕೂತವರನ್ನು ನಿಕೃಷ್ಟವಾಗಿ ಕಾಣುವಂತಿಲ್ಲ. ಯಾಕಂದ್ರೆ ಅವರೊಂಥರಾ ಕಷ್ಟಪಟ್ಟು ನಡೆದಾಡೋ ಸಾಬೂನು ಕಾರ್ಖಾನೆಯಿದ್ದಂತೆ!