ಡಾಲಿ ಧನಂಜಯ್ ರಾಜಕೀಯ ಎಂಟ್ರಿ ಬಗ್ಗೆ ಕಳೆದೊಂದು ವಾರದಿಂದ ಸುದ್ದಿಯಾಗ್ತಿತ್ತು. ಈ ಬಾರಿಯ ಎಂಪಿ ಎಲೆಕ್ಷನ್‌ನಲ್ಲಿ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಡಾಲಿ ಸ್ಪರ್ಧೆ ಮಾಡ್ತಾರೆನ್ನುವ ಸುದ್ದಿ ಜೋರಾಗಿ ಕೇಳಿಬಂದಿತ್ತು. ಇದೀಗ ಸ್ವತಃ ಡಾಲಿಯೇ ಇದಕ್ಕೆ ಉತ್ತರ ಕೊಟ್ಟಿದ್ದಾರೆ. ಶೂಟಿಂಗ್ ನಿಮಿತ್ತ ಹೈದ್ರಬಾದ್‌ಗೆ ತೆರಳಿದ್ದ ನಟರಾಕ್ಷಸ ಡಾಲಿ, ಅಲ್ಲಿಂದ ಬಂದ ತಕ್ಷಣವೇ ರಾಜಕೀಯ ಎಂಟ್ರಿ ಸುದ್ದಿಗೆ ಬಿಗ್ ಬ್ರೇಕ್ ಹಾಕುವ ಕೆಲಸ ಮಾಡಿದ್ದಾರೆ.
ನಾನು ಕೆಲಸದ ನಿಮಿತ್ತ ಹೈದ್ರಬಾದ್‌ಗೆ ತೆರಳಿದ್ದೆ. ಅಲ್ಲಿಂದ ಬರುವಷ್ಟರಲ್ಲಿ ನನ್ನನ್ನು ಎಲೆಕ್ಷನ್‌ಗೆ ನಿಲ್ಲಿಸಿ, ನನಗೆ ಟಿಕೆಟ್ ಕೊಡಿಸಿದ್ದೀರಾ. ಇದೆಲ್ಲ ನೀವೇ ಮಾಡಿರೋದ್ರಿಂದ ನೀವೇ ಎಲ್ಲಾ ಹೇಳಬೇಕು ಎನ್ನುತ್ತಾ, ನಗುತ್ತಲೇ ಮಾಧ್ಯಮಮಿತ್ರರನ್ನ ಪ್ರಶ್ನೆ ಮಾಡಿದ ಡಾಲಿ, ನಾನು ನಟನಾಗುವ ನಿಟ್ಟಿನಲ್ಲಿ ಕನಸು ಕಟ್ಟಿಕೊಂಡು ಚಿತ್ರರಂಗಕ್ಕೆ ಬಂದವನು. ಈಗ ನಟನಾಗಿ, ನಿರ್ಮಾಪಕನಾಗಿ ಸಿನಿಮಾ ಕ್ಷೇತ್ರದಲ್ಲಿ ಮಾಡುವುದು ಸಾಕಷ್ಟಿದೆ. ಜನರಿಂದ ಅಪಾರವಾದ ಪ್ರೀತಿ ಸಿಕ್ಕಿದ್ದು ಇಲ್ಲಿದ್ದುಕೊಂಡೇ ಜನರಿಗೆ ಸಹಾಯ ಮಾಡ್ತೀನಿ ಎಂದರು. ಒಂದ್ವೇಳೆ ಆಫರ್ ಬಂದರೆ ಏನ್ಮಾಡ್ತೀರಿ ಎಂದಿದ್ದಕ್ಕೆ ಉತ್ತರಿಸಿದ ಡಾಲಿ ಸದ್ಯಕ್ಕೆ ನಾನು ನನ್ನ ಸಿನಿಮಾ ಅಷ್ಟೇ. ಅಷ್ಟಕ್ಕೂ, ನಾನು ಲಿಡ್ಕರ್ ಬ್ರ್ಯಾಂಡ್‌ಗೆ ಅಂಬಾಸೀಡರ್ ಆಗಲು ಒಪ್ಪಿದ್ದು ಸಾವಿರಾರು ಬಡ ಕುಟುಂಬಗಳಿವೆ ಅನ್ನೋ ಕಾರಣಕ್ಕಷ್ಟೇ. ಅದರ ಹಿಂದೆ ಯಾವುದೇ ರಾಜಕೀಯ ಉದ್ದೇಶವಿಲ್ಲ ಅನ್ನೋದನ್ನ ಸ್ಪಷ್ಟಪಡಿಸಿದರು.
ಇದೇ ವೇಳೆ ಮಾತು ಮುಂದುವರೆಸಿದ ಡಾಲಿ ರಾಜಕಾರಣಕ್ಕೆ ಬೇರೆ ರೀತಿಯ ಮೈಂಡ್‌ಸೆಟ್ ಬೇಕಾಗುತ್ತೆ. ಅಷ್ಟಕ್ಕೂ, ನಾನು ಇಲ್ಲಿತನಕ ಯಾರೊಬ್ಬರ ಪರವಾಗಿ ಕ್ಯಾಂಪೇನ್ ಕೂಡ ಮಾಡಿಲ್ಲ. ಪ್ರಚಾರಕ್ಕಾಗಿ ನನ್ನ ಹಲವರು ಸಂಪರ್ಕಿಸಿದ್ದುಂಟು, ಬೇರೆ ಬೇರೆ ಪಕ್ಷದಲ್ಲಿ ನನ್ನ ಆಪ್ತರು ಇರುವುದುಂಟು. ಆದರೆ, ರಾಜಕಾರಣ ಹಾಗೂ ಪ್ರಚಾರ ನನ್ನ ಕಪ್ ಆಫ್ ಟೀ ಅಲ್ಲದ ಕಾರಣಕ್ಕೆ ನಾನು ಅಲ್ಲಿ ಗುರ್ತಿಸಿಕೊಂಡಿಲ್ಲ. ನಾನೊಬ್ಬ ಕಾಮನ್ ಮ್ಯಾನ್. ಕಾಮನ್ ಮ್ಯಾನ್ ಆಗಿ ಇರೋದಕ್ಕೆ ಇಷ್ಟಪಡ್ತೀನಿ ಎಂದರು. ಇದೇ ಜೂನ್‌ನಲ್ಲಿ ನನ್ನ ʻಕೋಟಿʼ ಸಿನಿಮಾ ರಿಲೀಸ್ ಆಗ್ತಿದೆ. ಕೋಟಿಯಲ್ಲಿ ಕಾಮನ್‌ಮ್ಯಾನ್ ಪಾತ್ರ ನಿರ್ವಹಿಸಿದ್ದೇನೆ ಎಲ್ಲರು ಬಂದು ಸಿನಿಮಾ ನೋಡಿ ಎಂದರು. ಇದೇ ವೇಳೆ ರಾಜಕೀಯದ ಬಗ್ಗೆ ತಮ್ಮ ನಿಲುವನ್ನ ಸ್ಪಷ್ಟವಾಗಿ ವ್ಯಕ್ತಪಡಿಸಿದ ಜಾಲಿರೆಡ್ಡಿ ಉರುಫ್ ಡಾಲಿ, ನಂಗೆ ರಾಜಕಾರಣ ಗೊತ್ತಿಲ್ಲ ಆದರೆ ಗುಡ್ ಲೀಡರ್ ಎನಿಸಿಕೊಂಡವರು ಸಮಾಜದಲ್ಲಿ ಕೆಳಹಂತದಲ್ಲಿರುವವರನ್ನ ಮೇಲಕ್ಕೆ ತರಬೇಕು. ಅವರಿಗೋಸ್ಕರ ಯಾರೆಲ್ಲಾ ಶ್ರಮಿಸ್ತಾರೋ ಅವರೆಲ್ಲರೂ ಕೂಡ ಒಳ್ಳೆ ನಾಯಕರು ಎಂದರು.