ಯಂಗ್‌ಸ್ಟರ್‌ಗಳಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತ ಎಲ್ಲರಲ್ಲೂ ಆರೋಗ್ಯದ ಬಗ್ಗೆ ಆತಂಕವನ್ನು ಹೆಚ್ಚಿಸಿದೆ. ಉತ್ತಮ ಆರೋಗ್ಯಕ್ಕಾಗಿ ಯಾವುದು ಸರಿ? ಯಾವುದು ತಪ್ಪು? ಎನ್ನುವ ಚರ್ಚೆಯನ್ನು ಹುಟ್ಟು ಹಾಕಿದೆ. ಸ್ಯಾಂಡಲ್‌ವುಡ್ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಸಾವು ಜಿಮ್, ಡಯಟ್ ವಿಚಾರದ ಬಗ್ಗೆ ಅನುಮಾನ ಹುಟ್ಟುಹಾಕಿದೆ. ಅತಿಯಾದರೆ ಅಮೃತವೂ ವಿಷ ಎನ್ನುವಂತೆ, ತೆಳ್ಳಗಾಗಲು, ಫಿಟ್‌ನೆಸ್‌ಗಾಗಿ ಅತಿಯಾದ ಜಿಮ್, ಡಯಟ್ ಮೊರೆ ಹೋಗುವುದು ಒಳ್ಳೆಯದಲ್ಲ ಎಂಬ ಸಂದೇಶ ನೀಡಿದೆ.
ಜಿಮ್, ಡಯಟ್ ಬಗ್ಗೆ ಬಗ್ಗೆ ಪರ- ವಿರೋಧ ಚರ್ಚೆ ನಡೆಯುತ್ತಿರುವ ನಡುವೆ ನಟ ಪ್ರಥಮ್ ಜಿಮ್-ಡಯಟ್ ಎನ್ನುವವರಿಗೆ ಸಲಹೆ ನೀಡಿದ್ದಾರೆ. ಬೇಗ ಸ್ಲಿಮ್ ಆಗ್ಬೇಕು ಅಂತ ಅತಿಯಾಗಿ ಜಿಮ್‌ಗೆ ಹೋದ್ರೆ ಹೃದಯ ಢಂ ಅನ್ನಬಹುದು.ಚೆನ್ನಾಗಿ ವಾಕ್ ಮಾಡಿ, ವ್ಯಾಯಾಮ ಮಾಡಿ, ನಿದ್ರೆ ಸರಿಯಾಗಿ ಮಾಡಿ. ಸಾಧ್ಯವಾದಷ್ಟು ಮನೆ ಊಟ ಸೇವಿಸಿ, 10 ತಾಸು ನಿದ್ರೆ ಮಾಡಿ, ಮನಸಿನ ಆರೋಗ್ಯಕ್ಕೆ ಧ್ಯಾನ ಮಾಡಿ. ಸುಮ್ನೆ ಅತಿಯಾದ ಡಯಟ್ ಬೇಡ, ಇದ್ಯಾವುದು ಮಾಡದೇ ನಿಮ್ಮಪ್ಪ ತಾತ ಚೆನ್ನಾಗಿದ್ರು ಅನ್ನೋದ ಮರೀಬೇಡಿ. ಒಳ್ಳೇದನ್ನ ಕೇಳಿ ಎಂದಿದ್ದಾರೆ.
ಇದರ ಬಗ್ಗೆ ಇನ್ನು ಮುಂದುವರೆಯುತ್ತಾ ಮತ್ತೊಂದು ಪೋಸ್ಟ್ ಹಂಚಿಕೊಂಡಿದ್ದಾರೆ. ‘ನಾನು ಜನರಿಗೆ ಒಳ್ಳೆಯದನ್ನೇ ಹೇಳೋದು. ಜಾಸ್ತಿ ನೀರು ಕುಡಿಯಿರಿ. ನಿದ್ರೆ ಮಾಡಿ. ಮದುವೆಯಾಗಿದ್ರೆ ಆರೋಗ್ಯಕರ ಸೆಕ್ಸ್ ಮಾಡಿ. ಎಣ್ಣೆ ಪದಾರ್ಥ ಹೆಚ್ಚಾಗಿ ತಿನ್ನಬೇಡಿ. ಇದಿಷ್ಟು ಮಾಡಿದ್ರೆ ಆರೋಗ್ಯವಂತರಾಗಿ ಚೆನ್ನಾಗಿರ್ತೀರಾ. ಫಿಟ್ ಆಗಿ ಇರ್ಬೇಕು ಅಂತ ಪ್ರೋಟೀನ್ಸ್ ಅದು ಇದು ಯಾವುದು ಬೇಡ. ಸುಮ್ನೆ ಯಾರದೋ ಬಾಡಿ ನೋಡ್ಕೊಂಡು ನಾನು ಹಂಗೆ ಆಗೋಗ್ತೀನಿ ಅಂತ ನಿಮ್ಮ ಆಹಾರ ಪ್ರಕ್ರಿಯೆ ಬದಲಿಸಿಕೊಳ್ಳಬೇಡಿ. ನನ್ನ ಮಾತನ್ನ ಕೇಳಿ. ಆರೋಗ್ಯವಂತರಾಗಿ ಬಾಳ್ತೀರಾ. ಅತಿಯಾದ ಎನರ್ಜಿ ಡ್ರಿಂಕ್, ಪ್ರೋಟೀನ್ಸ್ ಅಂತ ಹೋದ್ರೆ ದೇವ್ರಾಣೆ ಕಷ್ಟ’ ಎಂದು ಬರೆದುಕೊಂಡಿದ್ದಾರೆ.