ಅಪ್ಪು ಉತ್ತರಾಧಿಕಾರಿ ಯುವರಾಜ್ ಕುಮಾರ್ಗೆ ಜೇಮ್ಸ್ ಡೈರೆಕ್ಟರ್ ಆ್ಯಕ್ಷನ್ ಕಟ್ ಹೇಳ್ತಾರಾ? ಹೀಗೊಂದು ಕುತೂಹಲದ ಪ್ರಶ್ನೆ ಹುಟ್ಟಿಕೊಳ್ಳುವುದಕ್ಕೆ ಕಾರಣ ಅಪ್ಪು ಅಭಿಮಾನಿ ಬಳಗದ ವಾಟ್ಸಾಪ್ ಗ್ರೂಪ್ ಗಳಲ್ಲಿ ಮತ್ತು ಅಪ್ಪು ಅಭಿಮಾನಿ ಸಂಘಗಳ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಶೇರ್ ಆಗ್ತಿದೆ. ಅದು ನಿರ್ದೇಶಕ ಚೇತನ್ ಕುಮಾರ್ ಅವರ ಅಪ್ ಕಮ್ಮಿಂಗ್ ಸಿನಿಮಾದ ಘೋಷಣೆ ಕುರಿತಾಗಿರುವ ಪೋಸ್ಟರ್ ಎನ್ನುವುದು ವಿಶೇಷ. ಹೌದು, ನಿರ್ದೇಶಕ ಚೇತನ್ ಕುಮಾರ್ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. ಜೇಮ್ಸ್ ಸಿನಿಮಾ ನಂತರ ಹೆಚ್ಚು ಕಮ್ಮಿ ಒಂದೂವರೆ ವರ್ಷಗಳ ಕಾಲ ಸೈಲೆಂಟಾಗಿದ್ದರು. ಈಗ ನಯಾ ಕಥೆ ಜೊತೆ ಕಣಕ್ಕಿಳಿಯೋದಕ್ಕೆ ರೆಡಿಯಾಗಿದ್ದಾರೆ. ಆಗಸ್ಟ್ 25ರಂದು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತಮ್ಮ ಮುಂದಿನ ಚಿತ್ರವನ್ನ ಘೋಷಣೆ ಮಾಡಲಿದ್ದಾರೆ. ಅಷ್ಟಕ್ಕೂ, ಆ ಸಿನಿಮಾದ ಕಥಾನಾಯಕ ಯಾರು? ಯಾವ ಸ್ಟಾರ್ ಜೊತೆ ಕೈಜೋಡಿಸಿದ್ದಾರೆ? ಈ ಪ್ರಶ್ನೆಗೆ ಉತ್ತರವಿಲ್ಲ. ಸದ್ಯ ಹೊರಬಿದ್ದಿರುವ ಪೋಸ್ಟರ್ ನಲ್ಲಿ `ಬಿಗ್ ಅನೌನ್ಸ್ ಮೆಂಟ್ ಲೋಡಿಂಗ್’ ಎಂದಷ್ಟೇ ಬರಹವಿರುವುದರಿಂದ ಕುತೂಹಲ ಹೆಚ್ಚಿದೆ. ಜೇಮ್ಸ್ ಡೈರೆಕ್ಟರ್ ಗೆ ಅಪ್ಪು ಉತ್ತರಾಧಿಕಾರಿ ಯುವರಾಜ್‍ಕುಮಾರ್ ಕಾಲ್‍ಶೀಟ್ ಸಿಕ್ಕಿರಬಹುದು ಎಂತಲೂ ಚರ್ಚೆಯಾಗ್ತಿದೆ.
ಜೇಮ್ಸ್ ಅಪ್ಪು ನಟನೆಯ ಕೊನೆಯ ಚಿತ್ರ. `ಬಹದ್ದೂರ್’, `ಭರ್ಜರಿ’, `ಭರಾಟೆ’ ಸಿನಿಮಾಗಳನ್ನು ನೋಡಿ ಮೆಚ್ಚಿಕೊಂಡಿದ್ದ ಅಪ್ಪು, ನಿರ್ದೇಶಕ ಚೇತನ್ ಅವ್ರಿಗೆ ಕಾಲ್‍ಶೀಟ್ ಕೊಟ್ಟಿದ್ದರು. ನಟಸಾರ್ವಭೌಮ ಅಪ್ಪುನಾ ತೆರೆಮೇಲೆ ವಿಭಿನ್ನವಾಗಿ ತೋರಿಸುವ ಪ್ರಯತ್ನ ಚೇತನ್ ಮಾಡಿದ್ದರು. ಆದರೆ, ವಿಧಿಯ ಕೈವಾಡದಿಂದ ದೊಡ್ಮನೆ ರಾಜಕುಮಾರನನ್ನ ಕಳೆದುಕೊಳ್ಳುವಂತಾಯ್ತು.ಅನಂತರ ತೆರೆಗೆ ಬಂದ ಜೇಮ್ಸ್ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಗ್ತು, ಸಿನಿಮಾ ನೂರು ಕೋಟಿ ಕ್ಲಬ್ ಕೂಡ ಸೇರಿತು. ಈಗ ಅದೆಲ್ಲವೂ ಇತಿಹಾಸದ ಪುಟ ಸೇರಿಯಾಗಿದೆ. ಮತ್ತೊಂದು ಚರಿತ್ರೆ ಬರಿಯೋಕೆ ಹೊರಟು ನಿಂತಿರುವ ಚೇತನ್‍ಗೆ ಯುವರಾಜ್ ಸಾಥ್ ಸಿಕ್ಕಿದೆಯಾ ಇಲ್ಲವಾ ಎನ್ನುವ ಪ್ರಶ್ನೆ ಸದ್ಯಕ್ಕೆ ಪ್ರಶ್ನೆಯಾಗೇ ಉಳಿದಿದೆ. ಆಗಸ್ಟ್ 25ರಂದು ಎಲ್ಲಾ ಅನುಮಾನಕ್ಕೂ ಬ್ರೇಕ್ ಬೀಳಲಿದೆ. ಸರಿಯಾದ ಉತ್ತರ ಅಂದೇ ಸಿಗಲಿದೆ.
ನಿಮಗೆಲ್ಲ ಗೊತ್ತಿರುವಂತೆ `ಯುವ’ ಸಿನಿಮಾದ ಮೂಲಕ ಯುವರಾಜ್‍ಕುಮಾರ್ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ನಿರ್ದೇಶಕ ಸಂತೋಷ್ ಆನಂದ್ ರಾಮ್ ಡೈರೆಕ್ಷನ್‍ನಲ್ಲಿ ಯುವ ಚೊಚ್ಚಲ ಚಿತ್ರ ಮೂಡಿಬರುತ್ತಿದ್ದು ಹೊಂಬಾಳೆ ಸಂಸ್ಥೆ ಬಂಡವಾಳ ಹೂಡಿದೆ. ಅಪ್ಪುಗೆ `ನಿನ್ನಿಂದಲೇ’ ಹೆಸರಿನ ಸಿನಿಮಾ ಮಾಡಿ ಪ್ರೊಡಕ್ಷನ್ ಶುರುಮಾಡಿದ್ದ ಹೊಂಬಾಳೆ ಇವತ್ತು ಪ್ರಖ್ಯಾತ ನಿರ್ಮಾಣ ಸಂಸ್ಥೆಯಾಗಿ ಬೆಳೆದು ನಿಂತಿದೆ. ಆ ಕೃತ್ಞತೆ ಮತ್ತು ದೊಡ್ಮನೆ ಜೊತೆಗಿರುವ ನಂಟಿಗೆ `ಯುವ’ ಸಾಕ್ಷಿಯಾಗ್ತಿದೆ. ಬೆಳ್ಳಿಪರದೆಯಲ್ಲಿ ಹೊಸದೊಂದು ಪರ್ವ ಶುರುವಾಗ್ತಿದ್ದು, ಅದ್ದೂರಿಯಾಗಿ ಸಿನಿಮಾ ಮೂಡಿಬರುತ್ತಿದೆ. ಇದೇ ಡಿಸೆಂಬರ್ 22ರಂದು `ಯುವ’ ಚಿತ್ರ ತೆರೆಗಪ್ಪಳಿಸುತ್ತಿದೆ.
ಅಂದ್ಹಾಗೇ, ದೊಡ್ಮನೆಯ ಪುಟ್ಟ ರಾಜಕುಮಾರ, ಕರುನಾಡ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿದ ಮೇಲೆ ಅವರ ಅಭಿಮಾನಿಗಳು ಯುವರಾಜ್‍ಕುಮಾರ್ ಕಣ್ಣಲ್ಲಿ ಅಪ್ಪುನಾ ಕಾಣ್ತಿದ್ದಾರೆ. ಮಾತ್ರವಲ್ಲ ಯುವರಾಜ್‍ಗೆ ಅಪ್ಪು ಉತ್ತರಾಧಿಕಾರಿ ಪಟ್ಟ ಕಟ್ಟಿ, `ಪವರ್ ಪ್ರಿನ್ಸ್’ ಎನ್ನುವ ಬಿರುದು ನೀಡಿದ್ದಾರೆ. ಯುವರತ್ನನಿಗೆ ಅದೆಷ್ಟು ಪ್ರೀತಿ ತೋರುತ್ತಿದ್ದಾರೋ, ಅದೆಷ್ಟು ಅಭಿಮಾನದಿಂದ ಕಾಣುತ್ತಿದ್ದರೋ, ಅಷ್ಟೇ ಪ್ರೀತಿ ಮತ್ತು ಅಭಿಮಾನವನ್ನ ಯುವ ಮೇಲೆಯೂ ತೋರುತ್ತಿದ್ದಾರೆ. ಇದನ್ನೆಲ್ಲಾ ನೋಡುತ್ತಿರುವ ಯುವ ಯಾವುದೋ ಜನ್ಮದ ಪುಣ್ಯವೆಂದು ಕಣ್ಣಿಗೆ ಹೊತ್ತುಕೊಂಡಿದ್ದಾರೆ. ಅಪ್ಪು ಅಭಿಮಾನಿಗಳು ಕೊಡ್ತಿರುವ ಗೌರವ, ಕಾಳಜಿಯನ್ನು ಉಳಿಸಿಕೊಳ್ಳೋಕೆ ಪಣತೊಟ್ಟಿದ್ದಾರೆ. ಅಂಜನಿಪುತ್ರನಂತೆಯೇ ಅಭಿಮಾನಿ ದೇವರುಗಳನ್ನು ಕಾಣುತ್ತಿರುವ ಯುವರಾಜ್, `ಯುವ’ ಸಿನಿಮಾದ ಮೂಲಕ ದೊಡ್ಮನೆ ಅಭಿಮಾನಿಗಳನ್ನ ಮಾತ್ರವಲ್ಲ ಸಮಸ್ತ ಕರುನಾಡ ಮಂದಿಯನ್ನು ರಂಜಿಸೋಕೆ ಬೆವರು ಹರಿಸುತ್ತಿದ್ದಾರೆ. ಅಪ್ಪು ಉತ್ತರಾಧಿಕಾರಿಯಾಗಿ ಹೆಸರು ಉಳಿಸಿಕೊಂಡು ಹೋಗುವುದಕ್ಕೆ ಶ್ರಮಿಸುತ್ತಿದ್ದಾರೆ.