ಬಿಟೌನ್ ಕಿಂಗ್ ಖಾನ್ ಶಾರುಖ್ ಕನ್ನಡಕ್ಕೆ ಬರುತ್ತಾರಾ? ಈ ಸುದ್ದಿ ಕೇಳಿದಾಕ್ಷಣ ಕಿವಿ ನೆಟ್ಟಗಾಗೋದು ಸಹಜ. ಯಾವ್ ಸಿನಿಮಾ? ಏನ್ ಕಥೆ? ಕರೆತರುವವರು ಯಾರು? ಹೀಗೆ ಒಮ್ಮೆಲೆ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಅದಕ್ಕೆ ನಿಖರವಾದ ಆನ್ಸರ್ ನಮ್ಮ ಬಳಿಯೂ ಇಲ್ಲ. ಆದರೆ, ಗಾಂಧಿನಗರದಲ್ಲಿ ಹರಿದಾಡ್ತಿರೋ ಮ್ಯಾಟ್ರು ಪ್ರಕಾರ, ಮಾನ್‌ಸ್ಟರ್ ಯಶ್ ಅಭಿನಯದ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಟಾಕ್ಸಿಕ್ ಮೂಲಕ ಬಿಟೌನ್ ಕಿಂಗ್ ಖಾನ್ ಕನ್ನಡಕ್ಕೆ ಬರುತ್ತಿದ್ದಾರಂತೆ. ಕೆವಿಎನ್ ಸಂಸ್ಥೆ ಹಾಗೂ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸ್ತಿರೋ ಟಾಕ್ಸಿಕ್ ಚಿತ್ರದಲ್ಲಿ ಬಾಲಿವುಡ್ ಬಾದ್ ಷಾ ಬಣ್ಣ ಹಚ್ಚೋದು ಖರ್ರೆ ಎನ್ನುವ ಖಬರ್ ಕೇಳಿಬರುತ್ತಿದೆ.
ಅಷ್ಟಕ್ಕೂ, ರಾಕಿಭಾಯ್ ʻಕೆಜಿಎಫ್ʼ ಮುಂದೆ ʻಜೀರೋʼ ಆದ ಕಿಂಗ್ ಖಾನ್ ಶಾರುಖ್, ಯಶ್ ʻಟಾಕ್ಸಿಕ್ʼ ಸಿನಿಮಾಗೆ ಕಾಲ್‌ಶೀಟ್ ಕೊಟ್ಟರಾ? ಕನ್ನಡಕ್ಕೆ ಬರಲು ಒಪ್ಪಿದ್ರಾ? ಮಾನ್‌ಸ್ಟರ್ ಜೊತೆ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ರಾ? ಇದ್ಯಾವ ಪ್ರಶ್ನೆಗೂ ಸದ್ಯಕ್ಕೆ ಉತ್ತರವಿಲ್ಲ. ಆದರೆ, ಟಾಕ್ಸಿಕ್ ಚಿತ್ರದಲ್ಲಿ ಪಠಾಣ್ ಪವರ್‌ಫುಲ್ ರೋಲ್ ಪ್ಲೇ ಮಾಡ್ತಾರೆನ್ನುವ ಸುದ್ದಿ ಮಾತ್ರ ಗಾಸಿಪ್ ಲೋಕದಲ್ಲಿ ಗಿರಕಿ ಹೊಡೆಯುತ್ತಿದೆ. ಬಾಲಿವುಡ್ ಬಾದ್‌ಷಾರನ್ನ ಮಾನ್‌ಸ್ಟರ್ ಟೀಮ್ ಅಪ್ರೋಚ್ ಮಾಡಿರೋದು ಸತ್ಯ ಎನ್ನುವ ಸುದ್ದಿಯೂ ಕೇಕೆಹಾಕ್ತಿದೆ.
ಟಾಕ್ಸಿಕ್ ಶೂಟಿಂಗ್ ಭರದಿಂದ ಸಾಗಿದೆ. ಮಲಯಾಳಂನ ಖ್ಯಾತ ನಿರ್ದೇಶಕಿ ಗೀತು ಮೋಹನ್‌ದಾಸ್ ಡೈರೆಕ್ಷನ್‌ನಲ್ಲಿ ಟಾಕ್ಸಿಕ್ ಚಿತ್ರ ಮೂಡಿಬರುತ್ತಿದೆ. ಸಿನಿಮಾ ಶೀರ್ಷಿಕೆ ಘೋಷಣೆಯ ಟೀಸರ್ ಹೊರತುಪಡಿಸಿ ಮತ್ಯಾವ ಪಟವೂ ಟಾಕ್ಸಿಕ್ ಅಂಗಳದಿಂದ ಹೊರಬಿದ್ದಿಲ್ಲ. ಚಿತ್ರಕ್ಕೆ ಯಾರೆಲ್ಲಾ ವರ್ಕ್ ಮಾಡ್ತಿದ್ದಾರೆ. ಚಿತ್ರದ ತಾರಾಬಳಗದಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವ ಕುತೂಹಲಕ್ಕೆ ಟಾಕ್ಸಿಕ್ ಟೀಮ್ ಬ್ರೇಕ್ ಹಾಕಿಲ್ಲ. ಹೀಗಾಗಿ, ಚಿತ್ರದ ಮೇಲೆ ಕುತೂಹಲ ಹೆಚ್ಚೇಯಿದೆ. ಡ್ರಗ್ ಮಾಫಿಯಾ ಕುರಿತಾದ ಟಾಕ್ಸಿಕ್‌ಗಾಗಿ ಪ್ಯಾನ್ ವರ್ಲ್ಡ್ ಕೂಡ ಎದುರುನೋಡ್ತಿದೆ.