ಕರೆಂಟ್ ಇಲ್ಲಾ ಅಂದ್ರೇ ನಾವು ಕಣ್ಣೀರು ಸುರಿಸುತ್ತೇವೆ. ಆದರೆ ಕಣ್ಣೀರು ಸುರಿಸಿ ಕರೆಂಟ್ ಕೊಡ್ತೀವಿ ಅನ್ನುತ್ತಾರೆ ವಿಜ್ಞಾನಿಗಳು. ಜರ್ನಲ್ ಆಫ್ ಅಪ್ಲೈಡ್ ಫಿಸಿಕ್ಸ್ ವರದಿಯಂತೆ ಐರ್‍ಲೆಂಡ್‌ನ ವಿಜ್ಞಾನಿಗಳು ಕಣ್ಣೀರಿಂದ ಕರೆಂಟ್ ಮಾಡಬಹುದೆನ್ನುತ್ತಾರೆ. ಕಣ್ಣೀರಿನಲ್ಲಿ ಕಿಣ್ವಗಳಿದ್ದು ಇವುಗಳಿಂದ ಕರೆಂಟ್ ತೆಗೆಯಬಹುದೆನ್ನುತ್ತಾರೆ. ಓ.ಹೋ… ನಮ್ಮ ಅಳುಬುರುಕು ತಾರೆಯರಾದ ಶ್ರುತಿ, ಲಕ್ಷ್ಮೀ, ಆರತಿಯವರಂತೆ ಇದ್ಯಾರೋ ಲೇಡಿ ವಿಜ್ಞಾನಿಯೇ ಈ ಕರೆಂಟ್ ಕಂಡು ಹಿಡಿದಿರಬೇಕು ಅಲ್ವಾ? ಹೌದು. ಮಹಿಳಾ ವಿಜ್ಞಾನಿ ಸ್ಟ್ಯಾಪ್ಲಟನ್ ಮತ್ತು ಅವಳ ತಂಡ ‘ಕಣ್ಣೀರ ಧಾರೆ ಇದೇಕೇ….ಇದೇಕೇ..’ ಎಂದು ಹಾಡುತ್ತಾ… ಕರೆಂಟ್ ಕಂಡು ಹಿಡಿಯಲು ನಿಂತರು. ಪ್ರಯೋಗ ಯಶಸ್ವಿಯಾದ ನಂತರ ‘ಬಂತೂ ಬಂತೂ ಕರೆಂಟ್ ಬಂತೂ’ ಎಂದು ಹಾಡಿದ್ದು ವರಿಯಾಗಿಲ್ಲ.
ಪಂಚ್ ಬಿಟ್ಟು ವಿಷಯ ಹೇಳ್ರೀ ಸಾಕು… ಲೈಜೋಜೈಮ್ ಎಂಬ ಕಿಣ್ವಗಳು ಕಣ್ಣೀರಲ್ಲಿ ಸ್ಪಟಿಕ ರೂಪದಲ್ಲಿರಲಿವೆ. ಇವಗಳಿಗೆ ವೈಜ್ಞಾನಿಕರೀತಿಯಲ್ಲಿ ಒತ್ತಡ ಹೇರಿದಾಗ ಇವು ಮುರಿದುಕೊಂಡು ವಿದ್ಯುತ್ ಉತ್ಪಾದನೆಯಾಗುತ್ತದೆ. ಈರೀತಿಯ ಕರೆಂಟ್‌ನ್ನು ಪೈಜೋ ಎಲೆಕ್ಟ್ರಿಸಿಟಿ ಎಂದಿದ್ದಾಳೆ. ಸಸ್ತನಿಗಳ ಹಾಲಿನಲ್ಲಿ, ಕಣ್ಣೀರು ಬಾಯಲ್ಲಿ ಉತ್ಪನ್ನವಾಗುವ ಲಾಲಾರಸ ಇವುಗಳೆಲ್ಲಾ ಲೈಜೋಮ್ ಇದ್ದು ಕರೆಂಟ್ ಉತ್ಪನ್ನ ಮಾಡಲು ಸಾಧ್ಯವೆನ್ನುತ್ತಾಳೆ ಸ್ಟೆಪ್ಲೆಟನ್. ಊರವರೆಲ್ಲಾ ಕಣ್ಣೀರು ಸುರಿಸಿದರೆ ಕರೆಂಟ್ ಕೊಡಲು ಸಾಧ್ಯವಾ? ‘ದಿನಾ ಸಾಯೋರಿಗೆ ಅಳೋರ್‍ಯಾರು?’ ಅನ್ನುವಂತೆ… ‘ಕರೆಂಟ್‌ಗಾಗಿ ಕಣ್ಣೀರು ಸುರಿಸೋರ್‍ಯಾರು?’ ಅಂತ ಕೇಳಬೇಕಿದೆ!
ಅನನ್ಯ ಬಾಳೆ
ಅನುಮಾನುವೇ ಬೇಡ ಇದು ಬಾಳೆಹಣ್ಣು. ಮೂಂಗೀ ಬಾಳೆ ಅಂತೆ. ಅಂದರೆ ಅನನ್ಯ ಕದಳಿ ಹಣ್ಣು. ನೋಡಲು ಮಜಬೂತಾಗಿದ್ದರೂ ತಿನ್ನಲು ಮಜವಾಗಿಲ್ಲ. ಸಿಪ್ಪೆ ಮಾಮೂಲಿ ಬಾಳೆಗಿಂತಲೂ ತೆಳುವಿದೆ. ರುಚಿಯಲ್ಲಿ ಕೊಂಚ ಒಗರು-ಹುಳಿ. ಇಷ್ಟೇನಾ ವಿಶೇಷ? ಅಲ್ಲ. ಇದು ಕೃತಕವಾಗಿರೋದೆ ವಿಶೇಷ. ಸೇವಿಸಬಹುದಾದ ಬಾಳೆ ಹಣ್ಣಿನ ಸಿಪ್ಪೆಯಿಂದ ಕಸಿ ಮಾಡಿ ಮೂಂಗಿಯನ್ನು ತಯಾರಿಸಿದ್ದಾರೆ. ಶೇ. ೧೦೦ ಯಶಸ್ಸಗಿಟ್ಟಿಸುವ ಹವಣಿಕೆಂiiಲ್ಲಿದ್ದಾರೆ. ಚೀನಿಯರು ನಕಲಿ ಮೊಟ್ಟೆ, ನಕಲಿ ಅಕ್ಕಿ, ನಕಲಿ ಕೋಸು ಮಾಡಿದ್ದು ಹಳೇ ಸುದ್ದಿ ಇದೀಗ ಜಪಾನೀಯರು ಈ ನಕಲಿ ಬಾಳೆ ಸೃಷ್ಟಿಸಿರುವುದೇ ವಿಸ್ಮಯ. ಹಾಗೆಂದು ಚೀನೀಯರಂತೆ ‘ಯದ್ವಾ-ತದ್ವಾ’ ಮಾಡಿಲ್ಲ ಈ ‘ಕುಳ್ಳ’ ಜಪಾನ್.
ಸುಮಾರು ೨೦,೦೦೦ ವರ್ಷಗಳ ಹಿಂದೆ ಹಿಮಯುಗದ ಅಂತ್ಯದಲ್ಲಿದ್ದ ‘ಫ್ರೀಜ್ ಥಾ ಅವೇಕನಿಂಗ್’ ಎಂಬ ಸ್ಥಿತಿಯನ್ನೇ ಮರುಸೃಷ್ಟಿ ಮಾಡಿದ್ದಾರೆ. -೬೦ ಡಿಗ್ರಿಸೆಲ್ಶಿಯಸ್‌ನಲ್ಲಿ ಬಾಳೆ ಕಸಿ ಮಾಡಿ ಫಲ ತೆಗೆಸೋಷ್ಟರಲ್ಲಿ ಇವರಿಗೆ ‘ಬಾಳ’ ಸಾಕಾಗಿದೆ. ಸಾಕಷ್ಟು ಬೆವರದೆ, ಗಡ ಗಡ ನಡುಗಿ ಅನನ್ಯಬಾಳೆ ತೆಗೆದಿದ್ದಾರೆ. ಜಪಾನಿನ ಒಕಯಾಮದ ತೋಟಗಾರಿಕಾ ಇಲಾಖೆಯ ಸಂಶೋಧನಾ ಮತ್ತು ಅಭಿವೃದ್ಧಿ ವಿಭಾಗದ ‘ಫಲ’ವಿದು. ಪ್ರತಿವಾರ ಸುಮಾರು ೧೦ ಬಾಳೆಹಣ್ಣುಗಳನ್ನು ಮಾತ್ರವೇ ಇವರು ಬೆಳೆಸಲು ಶಕ್ಯವಾಗಿದ್ದು, ಓಕಯಾಮದ ‘ತೆನ್ಮಾನ್ಯ’ ಎಂಬಲ್ಲಿ ಮಾತ್ರವೇ ದೊರೆಯಲಿದೆ. ಕೊಂಡುಕೊಳ್ಳುವಿರಾದರೆ ಮೊದಲೆ ಬುಕ್ ಮಾಡಬೇಕು. ಸರದಿ ಬಂದಾಗ ೬ ಡಾಲರ್ ತೆರಬೇಕು! ಇಷ್ಟುಹಣ (ರೂ. ೪೦೦) ತೆತ್ತರೆ ಒಂದು ಬಾಳೆ ಸಿಗಲಿದೆ. ಈ ಪಾಟಿ ರೇಟಲ್ಲಿ ನಮ್ಮಲ್ಲೂ ಹಣ್ಣು ಮಾರಾಟ ಮಾಡಿದರೆ?
ಖಾದ್ಯ ಸ್ಪೂನ್ ಬಳಸಿ – ನೀರುಳಿಸಿ
ಚಮಚಾಗಿರಿ ತಗ್ಗಿಸಲು ಸ್ಪೂನ್‌ಗಳನ್ನೇ ತಿಂದು ಹಾಕಬೇಕು! ಎಂದು ಪ್ರಾಮಾಣಿಕರು ಆಗಾಗ ‘ಚಮಚಾ’ಗಳ ವಿರುದ್ಧ ಗುಡುಗುತ್ತಾರೆ. ನಮ್ಮ ಈ ಮಾತುಗಳನ್ನು ನೆರೆಯ ಹೈದ್ರಾಬಾದಿಗಳು ಕದ್ದು ಕೇಳಿರಬೇಕು. ಈ ಗುಮಾನಿ ಏಕೆಂದರೆ ಅಕ್ಷರಶಃ ತಿಂದುಹಾಕುವಂತಹ ಸ್ಪೂನ್‌ಗಳನ್ನು ತಯಾರಿಸಿದ್ದಾರೆ. ಚಹಾ, ಕಾಫಿ, ಪಾಯಸ, ಇನ್ನಿತರೆ ಬಿಸಿ ಹಾಗೂ ಸಿಹಿ ಪಾನೀಯಗಳನ್ನು ಕಲಕಿಕೊಳ್ಳುವ ಸ್ಪೂನ್‌ಗಳಿವೆ. ಅಲ್ಲದೆ ಸೂಪ್, ಸಾಂಬಾರ್, ಚಟ್ನಿ, ರಸಂ ಮುಂತಾದ ಖಾರದ ವಸ್ತುಗಳನ್ನು ಕಲಕಿಕೊಳ್ಳುವ ಚಮಚಾಗಳು ಇವೆ…! ಸಿಹಿ ಮತ್ತು ಖಾರಕ್ಕೆ ಬೇರೆ ಬೇರೆ ಚಮಚಾಗಳೇಕೆ? ಹೌದು. ಧಾನ್ಯ, ಅಕ್ಕಿ, ಹಾಗೂ ಗೋದಿಯ ಮಿಶ್ರಣದೊಂದಿಗೆ ತಯಾರಾದ ಖಾರದ ಚಮಚಗಳಿಂದ ಸಾಂಬಾರ್, ಸೂಪ್‌ಗಳನ್ನು ಸೇವಿಸಲು ಬಳಸಬಹುದು.
ಶುಂಠಿ, ಬೆಳ್ಳುಳ್ಳಿ, ಏಲಕ್ಕಿ, ಕಾಳುಮೆಣಸು, ಪುದಿನಾ, ಮುಂತಾದ ಫ್ಲೇವರ್‌ಗಳ ಚಮಚಗಳು ಬಂದಿದ್ದು ಇವುಗಳಿಂದ ಸೂಪ್ ಮುಂತಾದ ಹೆಚ್ಚಿನ ಮಸಾಲೆಯ ಪಾನೀಯಗಳನ್ನು ಸೇವನೆಗೆ ಯೋಗ್ಯ. ಅಕ್ಕಿ, ಗೋದಿ, ಯಾಲಕ್ಕಿಗಳಿಂದ ಸ್ಪೂನ್‌ಗಳನ್ನು ಮಾಡಿದ್ದು ಇವುಗಳನ್ನು ಪಾಯಸ ಮುಂತಾದ ಸಿಹಿ ತಿನಿಸುಗಳನ್ನು ತಿಂದು ತೇಗಲು ಬಳಸಬಹುದು. ತೊಳೆದಿಡಬೇಕಿಲ್ಲ. ಬದಲಿಗೆ ಸ್ಪೂನ್ ಸಮೇತ ಉದರಕ್ಕಿಳಿಸಬಹುದು. ಇವುಗಳು ತಿನಿಸುಗಳ ರುಚಿ ಹೆಚ್ಚಿಸಲಿದೆ. ತಿಂದ್ಹಾಕಿ ನೀರುಳಿಸಬಹುದು. ಹೈದ್ರಾಬಾದ್‌ನ ಕಂಪೆನಿಯೊಂದು ಈ ಸ್ಪೂನ್‌ಗಳ ಪೇಟೆಂಟ್‌ಗಿಟ್ಟಿಸಿಕೊಂಡಿದೆ. ಭಾರತದಲ್ಲಿ ಈ ಕಲ್ಪನೆ ಇದೇ ಮೊದಲಂತೆ. ಬಿಡುಗಡೆಗೆ ಭರ್ಜರಿ ತಯಾರಿ ನಡೆದಿದೆ. ಇಂತಹ ಖಾದ್ಯ ಚಮಚಗಳನ್ನು ಉಚಿತವಾಗಿ ಮತ್ತೊಂದು ಕಂಪೆನಿ ನೀಡಿದರೆ ಏನನ್ನಬಹುದು? ಸ್ಪೂನ್ಸರರ್‍ಸ್ !
‘ಬೇ’ ವಾಚ್!
ಕುಲಗೆಟ್ಟ ಗಡಿಯಾರವೂ ದಿನಕ್ಕೆ ಎರಡು ಬಾರಿ ಸರಿಯಾದ ಸಮಯ ತೋರುತ್ತದೆ. ಆದರೆ ‘ಪ್ಲೇಗ್ರೌಂಡ್ ಲೆಬಿರಿಂತ್’ ವಾಚ್ ಟೈಮ್ ತೋರುವುದಿಲ್ಲ. ಧರಿಸಿದವರೇ ಸಮಯ ಊಹಿಸಬೇಕು. ಹಾಗಾದ್ರೆ ಇದು ಮಕ್ಕಳು ಧರಿಸುವ ಜಾತ್ರೆ ವಾಚಾ? ಅಲ್ಲ. ಶ್ರೀಮಂತರು ಕ್ಷಮಿಸಿ ‘ಐಷಾರಾಮಿ’ಗಳಿಗೆಂದೇ ಇವುಗಳನ್ನು ತಯಾರು ಮಾಡಲಾಗಿದೆ. ಸ್ವಿಸ್ ದೇಶದ ಹಾಟೆಲೆನ್ಸ್ ಕಂಪೆನಿಯ ಈ ಕೈಗಡಿಯಾರಕ್ಕೆ ರೂ.೮,೩೫,೯೭೮(೧೨,೦೦೦ Sತಿiss ಜಿಡಿಚಿಟಿಛಿs) ಬೆಲೆ ನಿಗದಿಪಡಿಸಿದೆ. ಸಮಯ, ಸಂದರ್ಭ ತೋರಿಸದಿದ್ದರೂ ಈ ಪಾಟಿ ದುಬಾರಿ ಏಕೆ? ಚಿನ್ನ, ಪ್ಲಾಟಿನಂಗಳನ್ನು ಬಳಸಿ ‘ವಾಚ್ ಕೇಸ್’ ಮಾಡಲಾಗಿದೆ. ಉತ್ತಮ ಲೆದರ್‌ನಿಂದ ಬೆಲ್ಟ್ ಹೆಣೆದು ಪೋಣಿಸಲಾಗಿದೆ.
ಚರ್ಮದ ಕಾಯಿಲೆ ಉಳ್ಳವರು ಧರಿಸಿದರೂ ಅಲರ್ಜಿಯಾಗುವುದಿಲ್ಲವಂತೆ. ಅಂಥಹ ಉತ್ಕೃಷ್ಟತೆಯ ಖಾತ್ರಿಯನ್ನು ಕಂಪೆನಿ ನೀಡುತ್ತಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಗಡಿಯಾರದಲ್ಲೇ ಪ್ಲಾಟಿನಂ ಬಾನ್ನು ಅಳವಡಿಸಲಾಗಿದೆ. ಕೈ ಅಲುಗಾಡಿಸುತ್ತಾ ನಿಶ್ಚಿತ ‘ಹೊಲ್’ ಒಳಗೆ ಇಳಿಸಬೇಕು. ಬೆರಳುಗಳಲ್ಲಿ ಹಿಡಿದು ಈ ಆಟ ವಾಡುವಂತಿಲ್ಲ. ಬದಲಿಗೆ ಕೈಗಳಿಗೆ ಧರಿಸಿಯೇ ಮಾಡಬೇಕು. ಸರಳವಾದರೂ ಇದೊಂದು ‘ಸಕ್ಕತ್’ ಚಾಲೆಂಜಿಂಗ್. ಈ ಪುಟ್ಟ ಆಟಕ್ಕಾಗಿಯೇ ದೊಡ್ಡ ಮೊತ್ತದ ಹಣತೆತ್ತು ಕೊಳ್ಳುವವರೂ ಇದ್ದಾರೆ. ಹಲವರು ಆನ್‌ಲೈನ್ ಕ್ಯೂನಲ್ಲಿ ನಿಂತಿದ್ದಾರೆ. ಇದರೊಂದಿಗೆ ಕಾಲ ಕಳೆಯುತ್ತಿದ್ದರೆ ಸಮಯ ಸವೆದು ಹೋಗುವುದೇ ತಿಳಿಯದು. ಪ್ರಾಯಶಃ ಈ ಕಾರಣಕ್ಕಾಗಿಯೇ ಟೈಮ್ ತೋರದಂತೆ ಮಾಡಿರಬೇಕು!? ಗೊತ್ತಿಲ್ಲ ಗಡಿಯಾರವಲ್ಲದ ‘ಬೇ’ವಾಚ್‌ನ ಶೋ ರೂಂ ಆರಂಭಿಸಲು ಮುಖ್ಯಮಂತ್ರಿಗಳನ್ನು ಕೋರಿದರೆ ಹೇಗೆ? ತಮ್ಮ ಹ್ಯೂಬ್ಲೆಟ್ ವಾಚ್ ನೆನೆಪಾಗಿ ಅವರು ‘ವಾಚ್‌ಮಗೋಚರ’ವಾಗಿ ನಿಂದಿಸಬಹುದು!
ಲೇಸಿಲ್ಲದಾ ಶೂಸೇ ಲೇಸೆಂದ
ಲೇಸಿಲ್ಲದ ಶೂಗಳು ಬಗೆಗೆ ಗೊತ್ತಾ? ಗೊತ್ತು… ಇದೇನ್ ಮಹಾ…ವಿಶೇಷವೂ ಇರದು ಹೊಸತು ಇರದು. ಅದಲ್ಲ…ರೀ… ರಾಟೆ, ಬ್ಯಾಟರಿಗಳಿಂದ ಚಾಲನೆಯಾಗುವ ಲೇಸಿಲ್ಲದ ಬೂಟುಗಳು… ಈ ಬಗೆಗೆ ಅರಿವಿಲ್ಲಾ ಅಂದ್ರೆ ಈಗ ತಿಳಿದುಕೊಳ್ಳಿ… ‘…ಲೇಸು ಲೇಸೆಂದ’ ಅನ್ನುವ ಸರ್ವಜ್ಞ ವಚನಗಳಿಗೆ ಈಗ ‘ಲೇಸನ್ನು’ ಸೇರ್ಪಡೆಗೊಳಿಸಬಹುದು… ಸುಪ್ರಸಿದ್ಧ ನೈಕ್ ಶೂ ಕಂಪೆನಿ ಹೊರತಂದಿರುವ ಬೂಟುಗಳಲ್ಲಿ ರಾಟೆಗಳ ಸರಣಿಯೇ ಇದ್ದು ಇವುಗಳನ್ನು ಒಂದೊಕ್ಕೊಂದು ಬೆಸೆಯಲಾಗಿದೆ. ಒಂದರ್ಥದಲ್ಲಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮವೀಲ್ & ಆಕ್ಸೆಲ್ ಫ್ಯಾಕ್ಟರಿಯೇ ಬೂಟಲ್ಲಿ ಇದೆ! ಇವುಗಳನ್ನು ಪುಟ್ಟ ಎಲ್.ಐ. ಬ್ಯಾಟರಿಗೆ ಸಂಪರ್ಕ ಕಲ್ಪಿಸಲಾಗಿದೆ.
ಬೂಟಲ್ಲಿನ ಸ್ವಿಚ್ ಒತ್ತಿದ ಕೂಡಲೇ ಇವೆಲ್ಲಾ ಕಾರ್ಯನಿರ್ವಹಿಸಿ ಕಾಲಿನ ‘ಹಿಡಿ’ತಕ್ಕೆ ಲೇಸು ಬಿಗಿದುಕೊಳ್ಳಲಿದೆ. ೧೯೮೯ರಲ್ಲಿ ಬ್ಯಾಕ್ ಟು ಪ್ಯೂಚರ್ ಚಿತ್ರದಲ್ಲಿ ಇಂತಹ ಬೂಟುಗಳನ್ನು ಕಾಲ್ಪಾನಿಕವಾಗಿ ಚಿತ್ರಿಸಿ ತೋರಿಸಲಾಯಿತು. ಆಗ ‘ಫ್ಯೂಚರ್’ ಆಗಬಹದೆಂದು ಯಾರೂ ಊಹಿಸಿರಲಿಲ್ಲ. ಈಗ ‘ಬ್ಯಾಕ್’ಗೆ ತೆರಳಿ ಅವುಗಳಂತೆಯೇ ಈ ಲೇಸ್ ರಹಿತ ಶೂ ತಯಾರಿಸಲಾಗಿದೆ. ಸದ್ಯ ಅಮೆರಿಕದಲ್ಲಿ ಲಭ್ಯವಿರುವ ಈ ಶೂಸ್‌ಗಳು ನಾಳೆ ಇಲ್ಲಿಗೂ ಬರಲಿದೆ. ‘ಲೇಸಿಲ್ಲದಾ ಶೂಸೇ ಲೇಸೆಂದ…’ ಎಂದರೆ ಸರ್ವಜ್ಞನ ಅಭಿಮಾನಿಗಳಿಗೆ ಕೋಪಬಾರದು!
‘ದಾರ್‌ಬಾರ್’
ಕುಡಿದು ತೂರಾಡುವುದಕ್ಕಿಂತಲೂ ಕುಳಿತು ‘ಎಳೆ’ದಾಡುವುದೇ ಮೇಲು! ಇದೇನು ವಿವೇಕವಾಣಿಯಲ್ಲ ಹೀಗಾಗಿ ವಿವೇಕ ಭಕ್ತರು ಕೋಪಿಸಿಕೊಳ್ಳುವ ಅಗತ್ಯವೂ ಇಲ್ಲ. ಹಾಗಾದರೆ ಏನು ಎಳೆದಾಡಬೇಕೆಂದು ತಿಳಿಯಲು ಇಲ್ಲಿದೆ ಮಾಹಿತಿ… ಜಪಾನ್ ರಾಜಧಾನಿ ಟೋಕಿಯೋದಲ್ಲಿ ‘ಕಾಟನ್ ವಿಲೇಜ್’ ಬಾರಿದೆ. ಇಲ್ಲಿ ಕುಡಿತಕ್ಕೂ – ಎಳೆತಕ್ಕೂ ಅವಕಾಶವಿದೆ. ಮದ್ಯಕ್ಕೆ ಆರ್ಡರ್ ಮಾಡಿದರೆ ಹತ್ತಿ ಉಂಡೆ ಕೈಗಿಡುತ್ತಾರೆ. ನೂಲು ತೆಗೆಯಲು ಹೇಳುತ್ತಾರೆ. ಅರಿತಿಲ್ಲದವರಿಗೆ ತೆಗೆಯುವುದನ್ನೂ ಹೇಳಿಕೊಡುತ್ತಾರೆ. ಮದಿರೆಯ ಬಾಟಲಿ ಕೈಗೆ ಬರುವುದರೊಳಗೆ ನೂಲಬೇಕು. ನೂತಿದ್ದ ದಾರ ಬೇಕಿದ್ದರೆ ಜೋಬಿಗಿಳಿಸಿಕೊಳ್ಳಬಬಹುದು. ಬೇಕೆನಿಸಿದರೆ ಉಡುದಾರ ಮಾಡಿಕೊಂಡು ಧರಿಸಿಕೊಳ್ಳಬಹುದು. ಬೇಡವೆನಿಸಿದರೆ ಅಲ್ಲೇ ಬಿಟ್ಟು ಬರಬಹುದು.
‘ಕಾಯೋದು ಅಂದ್ರೇ ಸಾಯೋದು’ ಅನ್ನೋ ಮಾತನ್ನು ‘ಕಾಯೋದು ಅಂದ್ರೇ ನೂಲೋದು’ ಅಂತ ಬದಲಿಸಬೇಕು. ಎಲ್ಲಾ ಓ.ಕೆ. ನೂಲೋದ್ ಯಾಕೆ? ‘ಎಳೆ’ದಾಡುವುದರಿಂದ ಮೆದುಳು, ಶರೀರ ‘ರಿಲ್ಯಾಕ್ಸ್’ ದಕ್ಕೀತು. ನಿತ್ಯದ ಜಂಜಾಟ ನೀಗಿಸಿ ಮನಸ್ಸು ‘ಫ್ರೆಶ್’ ಆಗಲಿದೆ. ಹಿಂದೆ ನಮ್ಮ ದೇಶದ ಸ್ವತಂತ್ರ್ಯ ಪೂರ್ವದಲ್ಲಿ ಹಲವರು ಇದೇ ಕೆಲಸವನ್ನು ಮಾಡುತ್ತಿದ್ದರು. ನಾವು ನೂಲುವುದನ್ನೂ ಬಿಟ್ಟೆವು. ಜಪಾನ್‌ನ ಬಾರ್‌ಗೆ ನಮ್ಮ ಇತಿಹಾಸ ಗೊತ್ತಿಲ್ಲದಿದರು ನೂಲಿಸಲು ಹೊರಟಿರುವುದು ಉತ್ತಮ ಬೆಳವಣಿಗೆಯನ್ನಲು ತಪ್ಪೇನಿಲ್ಲ! ಕೇವಲ ಕುಡಿಸಿ, ಹಾಳು ಮಾಡುವ ಬಾರ್‌ಗಳಿಂತಲೂ ಇರೋದ್ರಲ್ಲಿ ಬೆಟರ್ ಬಾರ್ ಅಲ್ವಾ?
‘ಮರಣಾನಂದ!’
ಬುದ್ಧನಕ್ಕಾಗ ಎನ್ನುವ ಮಾತು ಬೌದ್ಧರಲ್ಲಿದೆ. ಬುದ್ಧ ನಕ್ಕಿದ್ದು ಯಾರೂ ಕಂಡಿಲ್ಲ. ಅವನ ಭಕ್ತರು ನಕ್ಕರೆ ಅದು ಕೂಡ ವಿಶೇಷವೇ? ಯಾಕೆ ಬೌದ್ಧರು ನಗುವಂತಿಲ್ಲವೇ? ನಗಬಹುದು ರೀ… ಆದರೆ ಸತ್ತ ನಂತರ ಮಂದಹಾಸ ಬೀರಬೇಕು! ಅದು ಕೇವಲ ನಿರ್ವಾಣ ಹೊಂದಿದ ಬೌದ್ಧರಿಗೆ ಮಾತ್ರ ಸಾಧ್ಯ. ಇತಿಹಾಸವನ್ನು ಜಾಲಾಡಿದರೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ನಕ್ಕಿದ್ದಾರು! ಈಗ್ಯಾಕೆ ಈ ನಿರ್ವಾಣದ ಸುದ್ದಿ? ೯೨ವರ್ಷಗಳ ಭಿಕ್ಷು ಲುಆಂಗ್ ಫೊರ್ ಪಾನ್ ಕಳೆದ ವರ್ಷ ನವೆಂಬರ್ ೧೬ರಂದೇ ಅಸುನೀಗಿದರು. ಅವರನ್ನು ಕಾಫಿನ್ ಬಾಕ್ಸ್‌ನಲ್ಲಿಡಲಾಯಿತು. ೨೨ನೇ ಜನವರಿ ೨೦೧೮ರಂದು ಅವರ ಪಾರ್ಥಿವ ಶರೀರವನ್ನು ಹೊರತೆಗೆಯಲಾಯಿತು. ಬೌದ್ಧ ಭಿಕ್ಷುವಿನ ಶರೀರ ಕೊಳೆತಿರಲಿಲ್ಲ! ಅಷ್ಟೇ ಮುಖದಲ್ಲಿ ಮಂದಹಾಸ ಮೂಡಿತ್ತು!
ದೇಹ ಕೆಡದಂತೆ ರಸಾಯನಿಕಗಳಿಂದ ಕಾಪಾಡಲಾಗಿತ್ತಾ? ಇಲ್ಲ. ಅಂಥದ್ದೇನು ಮಾಡಿರಲಿಲ್ಲ. ನಿರ್ವಾಣ ಹೊಂದಿದವರ ಶರೀರ ಕೆಡುವುದಿಲ್ಲವೆಂಬ ನಂಬಿಕೆ ಬೌದ್ಧರಲ್ಲಿದೆ. ವಿಜ್ಞಾನ ಏನು ಹೇಳುತ್ತದೆ? ವಿಜ್ಞಾನದಲ್ಲಿ ಇಂತಹ ಅನೇಕ ನಿದರ್ಶನಗಳಿವೆ. ವಿವರಣೆಗೆ ನಿಲುಕದ, ತರ್ಕಕ್ಕೆ ಎಟುಕದ ಇಂತಹ ಹಲವು ನಿದರ್ಶನಗಳು ಜಗತ್ತಿನಲ್ಲಿವೆ. ರಾಮಾನುಜಾಚಾರ್ಯರು, ಕೆಲವೇ ವರ್ಷಗಳ ಹಿಂದೆ ಅಸು ನೀಗಿದ ಸಾಯಿಬಾಬ ಅವರ ಕುರಿತು ಕೂಡ ಹೀಗೆ ಹೇಳಲಗುತ್ತಿದೆ. ಈಗ ಭಿಕ್ಷು ಲು ಆಂಗ್ ಪೊರ್ ಅವರ ಸರದಿ. ಎಲ್ಲಾ ಓ.ಕೆ. ಈಗ ಬೌದ್ಧ ಭಿಕ್ಷುವಿನ ಶರೀರ ಹೊರ ತೆಗೆದಿದ್ದೇಕೆ? ಅವರ ಪದ್ಧತಿಯಂತೆ ಶರೀರಕ್ಕೆ ಹೊಸ ವಸ್ತ್ರಗಳನ್ನು ತೊಡಿಸಬೇಕಿತ್ತು. ಈಗ ಈ ಸನ್ಯಾಸಿಯ ಪಾರ್ಥಿವ ಶರೀರವನ್ನು ಥಾಯ್‌ಲ್ಯಾಂಡ್‌ನ ಲೋಪುರಿಯಲ್ಲಿಡಲಾಗಿದೆ. ದಕ್ಷಿಣೆ – ಪ್ರದಕ್ಷಿಣೆ ಹಾಕಿ ಬರುವವರು ತೆರಳಬಹುದು.
ತುಟಿಗೆ ಬಂತು ಟಾಯ್ಲೆಟ್ ಪೇಪರ್!
ತುಟಿ ರಂಗಿಗೆ ಲಿಪ್ಸಿಟಿಕ್ ಬಳಿಯೋರು ಗೊತ್ತು. ಕೆಂಪಗಿರಲಿ ಮುಸುಡಿ ಎಂದು ಹಳ್ಳಿಗರು ಎಲೆ ಅಡಿಕೆ ಜಗಿವುದು ಉಂಟು. ಆದರೆ ಇಲ್ಲಬ್ಬೊಳು ನೋಡಿ ಟಾಯ್ಲೆಟ್ ಪೇಪರ್ ಮೆತ್ತಿಕೊಂಡಿದ್ದಾಳೆ. ಇಸ್ಸೀ… ಎನ್ನದಿರಿ… ಹೊಟ್ಟೆಗೆ ತಿನ್ನುವ ಆಹಾರವಿರಬಹುದು ತುಟಿಗೆ ಸವರುವ ಬಣ್ಣವಿರಬಹುದು…ಎಲ್ಲವೂ ಬದಲಾಗುತ್ತಿದೆ. ಉದರಕ್ಕೆ ವೇಫರ್‍ಸ್ ಅದರಕ್ಕೆ ಪೇಪರ್‍ಸ್ ಬಂದಿದೆ-ಅಲಿಯಾಸ್ ಟಾಯ್ಲೆಟ್ ಪೇಪರ್‍ಸ್ ಬಂದಿದೆ. ಮೃದು ಮತ್ತು ಅಷ್ಟೇ ಮೆದುವಾದ ಟಾಯ್ಲೆಟ್ ಪೇಪರ್‌ನ ತುಟಿಗೆ ಮೆತ್ತಿಕೊಂಡು, ಅದರ ಮೇಲೆ ಐಲಾಸ್ ಗ್ಲೂ (ಮೇಕಪ್‌ನಲ್ಲಿ ಇದನ್ನು ಬಳಸುತ್ತಾರೆ) ಮೆತ್ತಿ ನಂತರದ ಇಷ್ಟದ ಲಿಪ್ಸಿಟಿಕ್ ಬಣ್ಣ ಲೇಪಿಸಿದರೆ ಸಾಕು ಲಬಕನೆ ಮೆತ್ತಿಕೊಳ್ಳಲಿದೆ. ಸಕ್ಕತ್ ಶೋಕಿ ಸಕ್ಕತ್ತ ಹಾಟ್!
ಮಿಸ್ಸಮ್ಮಗಳಿಗೆ ಇದು ಹೇಳಿ ಮಾಡಿಸಿದ್ದು. ತುಟಿಕ್ ಪಿಟಿಕ್ ಅನ್ನದೆ ತುಟಿಗಳಲ್ಲೇ ಕಾಮಕಸ್ತೂರಿ ಅರಳಿಸುವ ನಟಿ ಮಣಿಯರಿಗೆ ಇದು ಆಪ್ಯಾಯಮಾನವಾದೀತು. ಯಾಕೆ ಮುತ್ತೈದೆಯರು ಬಳಿದುಕೊಳ್ಳಬಾರ್‍ದಾ? ಗುಂಡ್ರುಗೋವಿ ಗಂಡುಗಳಿಂದ ಆರಂಭಿಸಿ – ಹೌಸ್‌ವೈಫ್‌ವರೆಗೆ ಯಾರು ಬೇಕಿದ್ದರೂ ಇದನ್ನು ಬಳಸಬಹುದು.
ಕಳೆದ ವರ್ಷ ಗ್ರೇಟಾ ಅಗ್ಯಾಜಿ ಎಂಬ ಇಟಲಿಯ ಮೇಕಪ್ ಆರ್ಟಿಸ್ಟ್ ಇದನ್ನು ಬಳಸಿ ಇದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ತೇಲಿ ಬಿಟ್ಟಳು. ಅಂದಿನಿಂದಲೂ ಇದು ಭಲೇ ಟ್ರೆಂಡ್ ಆಗಿದೆ. ಗ್ರೇಟಾ ಕೂಡ ಸುಮ್ಮನಿಲ್ಲ ಇನ್ನಷ್ಟು ಮತ್ತಷ್ಟು ರಂಗು-ರಂಗಿನ ತುಟಿ ಶೈಲಿಗಳನ್ನು ಹರಿಯಬಿಟ್ಟಿದ್ದಾಳೆ. ಮಹಿಳಾ ಮಣಿಯರು ಈ ಹೊಸ ಟ್ರೆಂಡ್‌ಗೆ ಮಾರು ಹೋಗಿದ್ದಾರೆ. ಟಾಯ್ಲೆಟ್ ಪೇಪರ್‌ಗೆ ಬೇಡಿಕೆ ಬಂದಿದೆ. ಸಂಡಾಸಿನಲ್ಲಿರಬೇಕಾದ್ದು ಸುಂದರಿಯ ತುಟಿಗೆ ಬಂದಿದೆ.
ಭಾರತದ ಕಲಾವಿದ ಆರ್.ಆರ್. ಮಿಧುನ್‌ರನ್ನು ‘ರೋಮ’ನ್ ಆರ್ಟಿಸ್ಟ್ ಎನ್ನಲು ಅಡ್ಡಿಯಿಲ್ಲ. ಅಲ್ರೀ ಭಾರತದವನು ಅಂತೀರಾ… ರೋಮನ್ ಅಂತಿರಾ..ಏನ್ರೀ ನಿಮ್ಮ ಗೋಳು? ಸಾರ್…. ಇಲ್ಲ… ಇವರು ರೋಮದಿಂದ ಅಂದರೆ ಕೂದಲಿಂದ ಕಲೆ ಅರಳಿಸುತ್ತಾರೆ… ಹೀಗಾಗಿ ‘ರೋಮ’ನ್ ಆರ್ಟಿಸ್ಟ್ ಎನ್ನಬೇಕಾಗಿದೆ. ಕೇಶದ ಕೂದಲು, ಮೈಮೇಲಿನ ರೋಮ ಎಲ್ಲವನ್ನೂ ಬಳಸಿ, ಬಿಳಿ ಕ್ಯಾನ್ವಾಸ್‌ನ ಮೇಲೆ ಚಿತ್ರ ಅರಳಿಸುತ್ತಾರೆ. ತಾವು ಅಂದಾಜಿಸಿದ ಚಿತ್ರವನ್ನು ಕೂದಲಿನಲ್ಲಿ ಅರಳಿಸುತ್ತಾರೆ. ನಂತರ ಗ್ಲಾಸ್ ಇಟ್ಟು ಉದುರದ-ಉಳುಕದ ರೀತಿ ಫ್ರೇಮ್ ಜಡಿದು ಕೊಡುತ್ತಾರೆ.