-ಒಂದೇ ಸಲಕ್ಕೆ ಸಾವಿರಾರು ಮೊಟ್ಟೆಯಿಡೋ ಜೀವಿ!
-ಇಲ್ಲಿ ಎಲ್ಲವೂ ಚಿತ್ರವಿಚಿತ್ರ!
ಈ ವರ್ಷವೂ ನಾಗರ ಪಂಚಮಿ ಆಗಮಿಸೋದರಲ್ಲಿದೆ. ಪ್ರತಿಯೊಂದರಲ್ಲೂ ಭಕ್ತಿ ಹಾಸುಹೊಕ್ಕಾಗಿರೋ ನಮ್ಮಲ್ಲಿ ಹಾವುಗಳ ಬಗ್ಗೆಯೂ ಒಂದಷ್ಟು ನಂಬಿಕೆಗಳಿದ್ದಾವೆ. ಆದ್ರೆ ಹಾವುಗಳ ಬಗೆಗಿನ ಅಸಲೀ ವಿಚಾರಗಳು ನಮ್ಮೆಲ್ಲರ ನಂಬಿಕೆಗಳನ್ನು ಮೀರಿದಂಥಾದ್ದು. ನಾವೆಲ್ಲ ಹಾವೆಂದರೆ ಬೆಚ್ಚಿ ಬೀಳ್ತೇವೆ. ಈ ಜಗತ್ತಿನಲ್ಲಿರೋ ಎಲ್ಲ ಹಾವುಗಳೂ ಡೇಂಜರಸ್ ಅನ್ನೋದಷ್ಟೇ ನಮ್ಮ ಕುರುಡು ನಂಬಿಕೆ. ಇದರಿಂದಾಗಿಯೇ ಈವತ್ತು ಹಾವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ. ಹಾಗೆ ಮನುಷ್ಯ ಪ್ರಹಾರಕ್ಕೆ ಸಿಕ್ಕು ನಶಿಸಿದರೂ ಈ ಹಾವುಗಳದ್ದು ಈವತ್ತಿಗೂ ಬಹು ದೊಡ್ಡ ಫ್ಯಾಮಿಲಿ.
ಅಚ್ಚರಿಯ ಜೀವಿಗಳು

ಈ ಹಾವುಗಳು ಸೃಷ್ಟಿಯ ಅತ್ಯಂತ ಅಚ್ಚರಿದಾಯಕ ಜೀವಿಗಳು. ಸ್ವಚ್ಚತೆಗೆ ರೋಲ್ ಮಾಡೆಲ್ಲುಗಳಿಂತಿರೋ ಹಾವುಗಳ ಚಹರೆ, ಜೀವನಕ್ರಮ, ಪ್ರಬೇಧಗಳು ಸೇರಿದಂತೆ ಎಲ್ಲವೂ ಅಚ್ಚರಿಯ ಆಗರಗಳೇ. ಜೀವ ವೈವಿಧ್ಯದಲ್ಲಿ ತಮ್ಮದೇ ಸ್ಥಾನ ಉಳಿಸಿಕೊಂಡಿರೋ ಹಾವುಗಳದ್ದು ಬಹುದೊಡ್ಡ ಕುಟುಂಬ. ಜಗತ್ತಿನ ಬಹುತೇಕ ಭೂಭಾಗಗಳಲ್ಲಿ ಹಬ್ಬಿಕೊಂಡಿರೋ ಇವುಗಳಲ್ಲಿ ಹತ್ತತ್ತಿರ ನಾಲಕ್ಕು ಸಾವಿರಕ್ಕೂ ಮೀರಿದ ಪ್ರಬೇಧಗಳಿವೆ. ಇದ್ರಲ್ಲಿ ನಲವತ್ತರಷ್ಟು ವಿಭಿನ್ನ ಉಪ ಪಂಗಡಗಳಿದ್ದಾರೆ. ಇನ್ನೂ ತಲಾಶು ನಡೆಸಿದರೆ ನಾಲಕ್ಕೂ ಚಿಲ್ಲರೆ ಸಾವಿರ ಪ್ರಬೇಧದ ಹಾವುಗಳೆಲ್ಲ ನೂರಾ ನಲವತ್ತು ಭಿನ್ನ ಕುಟುಂಬಗಳಲ್ಲಿ ಜೀವಿಸುತ್ತಿರುವ ವಿಚಾರವೂ ಜಾಹೀರಾಗುತ್ತೆ.
ಈ ಪ್ರಕೃತಿಯೇ ಒಂದು ವಿಸ್ಮಯ. ಇಲ್ಲಿನ ಪ್ರತೀ ಜೀವಿಗಳನ್ನೂ ಕೂಡಾ ಅದು ಆಯಾ ವಾತಾವರಣಕ್ಕೆ ತಕ್ಕುದಾಗಿಯೇ ಸೃಷ್ಟಿಸಿದೆ. ಕೆಲವೊಮ್ಮೆ ಕೆಲ ಜೀವಿಗಳ ಬಗ್ಗೆ ನಾವಂದುಕೊಂಡಿರೋದನ್ನು ಪ್ರಾಕೃತಿಕ ವಿಸ್ಮಯಗಳು ಸುಳ್ಳು ಮಾಡುತ್ತವೆ. ಹಾವುಗಳ ಜೀವನಕ್ರಮವೂ ಅದಕ್ಕೆ ಹೊರತಾಗಿಲ್ಲ. ಯಾವುದೇ ಜೀವಿಯ ಸಂತಾನೋತ್ಪತ್ತಿ ವಿಶಿಷ್ಟ ಪ್ರಕ್ರಿಯೆ. ಹಾವುಗಳು ಮೊಟ್ಟೆಯಿಡೋ ಮೂಲಕವೇ ಸಂತಾನೋತ್ಪತ್ತಿಯಾಗುತ್ತೆ ಅಂತ ಬಹುಪಾಲು ಮಂದಿ ನಂಬಿದ್ದಾರೆ. ಆದ್ರೆ ಅದು ಅರ್ಧ ಸತ್ಯ. ಯಾಕಂದ್ರೆ, ಶೇಖಡಾ ಅರವತ್ತರಷ್ಟು ಹಾವುಗಳು ಮಾತ್ರವೇ ಮೊಟ್ಟೆಯಿಟ್ಟು ಮರಿ ಮಾಡುತ್ವೆ. ಮಿಕ್ಕ ಒಂದಷ್ಟು ಹಾವುಗಳು ನೇರವಾಗಿ ಮರಿ ಹಾಕುತ್ವೆ. ಕೆಲ ಶೀತ ಪ್ರದೇಶಗಳಲ್ಲಿ ಮೊಟ್ಟೆಯಿಟ್ಟು ಅವುಗಳನ್ನು ಕಾಪಾಡಿಕೊಂಡು ಮರಿ ಮಾಡೋದು ಕಷ್ಟವಾಗುತ್ತೆ. ಆದ್ದರಿಂದಲೇ ಅಂಥಾ ಪ್ರದೇಶಗಳಲ್ಲಿ ಬದುಕೋ ಹಾವುಗಳಿಗೆ ಪ್ರಕೃತಿ ಇಂಥಾದ್ದೊಂದು ವಿಶೇಷವಾದ ವರ ಕೊಟ್ಟಂತಿದೆ.
ಎದೆಯಲ್ಲೊಂದು ಕೌತುಕ ಇದ್ರೆ ಈ ಜೀವಜಗತ್ತೊಂದು ಅಚ್ಚರಿಗಳ ಕೊಂಪೆಯಂತೆ ಭಾಸವಾಗುತ್ತೆ. ಅದರಲ್ಲಿ ಈ ಹಾವುಗಳದ್ದೇ ಸಿಂಹಪಾಲು. ನೀವು ಗಮನಿಸಿದ್ದೀರಾ? ಈ ಹಾವುಗಳಿಗೆ ನಮ್ಮಂತೆ ಕಣ್ಣು ರೆಪ್ಪೆಗಳಿರೋದಿಲ್ಲ. ನಾವು ರೆಪ್ಪೆಗಳಿರದ ಕಣ್ಣನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದ್ರೆ ಹಾವುಗಳು ರೆಪ್ಪೆಗಳ ಹೊರತಾಗಿಯೂ ಹಾಯಾಗಿರುತ್ತವೆ. ಅವು ಕಣ್ಣು ಬಿಟ್ಟುಕೊಂಡೇ ನಿದ್ರೆ ಮಾಡೋ ಅನಿವಾರ್ಯತೆ ಇದೆ. ಆದ್ರೆ ಕಣ್ಣನ್ನು ರಕ್ಷಣೆ ಮಾಡೋದಕ್ಕಾಗಿ ಹಾವುಗಳಿಗೆ ತೆಳುವಾದ ಪೊರೆಯೊಂದಿರುತ್ತೆ. ಅದಕ್ಕೆ ಬ್ರಿಲ್ ಅಂತ ಕರೆಯಲಾಗುತ್ತೆ. ಅಂದಹಾಗೆ ಬ್ರಿಲ್ ಅಂದ್ರೆ ಜರ್ಮನ್ ಭಾಷೆಯಲ್ಲಿ ಕನ್ನಡಕ ಅನ್ನೋ ಅರ್ಥವಿದೆ.
ಐವತ್ತಾರು ಸಾವಿರ ಮೊಟ್ಟೆ

ಕೆದಕಿ ನೋಡುವ ಉತ್ಸಾಹ ಒಳಗಿರದಿದ್ದರೆ ಕಣ್ಣೆದುರು ಕಾಣೋದು ಮಾತ್ರವೇ ಸತ್ಯವಾಗಿ ಬಿಡೋ ಅಪಾಯವಿರುತ್ತೆ. ನಮ್ಮೆಲ್ಲ ಹತಾಶೆ, ಒತ್ತಡಗಳನ್ನೆಲ್ಲ ಒತ್ತಟ್ಟಿಗಿಟ್ಟು ಒಂದೇ ಒಂದು ಸಲ ಕಣ್ಣರಳಿಸಿದರೂ ಈ ಜಗತ್ತಿನ ನಾನಾ ಅಚ್ಚರಿಗಳ ಪರಾಗ ತಂತಾನೇ ಮನಸಿನ ಮಿದುವಿಗೆ ಮೆತ್ತಿಕೊಳ್ಳುತ್ತೆ. ಬೇರೇನೂ ಬೇಡ; ನಿಮ್ಮೆಲ್ಲ ಜಡತ್ವ ಇಳಿದು ಹೋಗಬೇಕಂದ್ರೆ ನಮ್ಮ ಸುತ್ತ ಹಬ್ಬಿಕೊಂಡಿರೋ ಜೀವ ಜಾಲದತ್ತ ಕುತೂಹಲ ಬೆಳೆಸಿಕೊಳ್ಳಿ. ಅಲ್ಲಿಂದ ಹೊಮ್ಮಿಕೊಳ್ಳೋ ಒಂದೊಂದು ಅಚ್ಚರಿಗಳೂ ನಿಮ್ಮೊಳಗೆ ನವೋಲ್ಲಾಸ ತುಂಬುತ್ತವೆ. ಅಚ್ಚರಿಯೆಂಬುದು ಚೈತನ್ಯವಾಗಿ ನಿಮ್ಮ ನರನಾಡಿಗಳನ್ನೆಲ್ಲ ಆವರಿಸಿಕೊಳ್ಳುತ್ತೆ.
ಈಗ ಹೇಳ ಹೊರಟಿರೋದು ಜೀವ ಜಗತ್ತಿನ ಅಂಥಾದ್ದೇ ಒಂದು ವಿಸ್ಮಯದ ಬಗ್ಗೆ. ಇದರ ಕೇಂದ್ರಬಿಂದು ಆಕ್ಟೋಪಸ್. ಸಮುದ್ರದ ನಾನಾ ಭಾಗಗಳಲ್ಲಿ ಹಾಗೂ ಹವಳ ದಂಡೆಗಳ ಸಾಮಿಪ್ಯದಲ್ಲಿ ಬದುಕೋ ಜೀವಿಗಳಿವು. ಸೆಫಲಾಫೋಡಾ ಪ್ರಬೇಧಕ್ಕೆ ಸೇರಿರುವ ಆಕ್ಟೋಪಸ್‌ಗಳು ಅಸ್ಥಿಪಂಜರವಿಲ್ಲದ ಜೀವಿಗಳು. ಆಕಾರಕ್ಕಿಂತ ಪುಟ್ಟ ಪ್ರದೇಶದಲ್ಲಿಯೂ ತೂರಿಕೊಳ್ಳುವ ಇವುಗಳನ್ನು ಕಂಡರೆ ಭಯ ಬೀಳುವವರಿದ್ದಾರೆ. ಬಾಯಿ ಚಪ್ಪರಿಸಿಕೊಂಡು ತಿನ್ನುವವರೂ ಸಾಕಷ್ಟಿದ್ದಾರೆ. ಜೆಲ್‌ನಂಥಾ ತನ್ನ ದೇಹದ ಆಕ್ಟೋಪಸ್‌ಗಳು ತನ್ನ ಎಂಟು ಬಾಹುಗಳನ್ನು ಹಿಂದೆ ತೇಲಿಸಿಕೊಂಡು ಈಜುತ್ತವೆ. ಅಂದಹಾಗೆ ಇವುಗಳು ಅತ್ಯಂತ ಬುದ್ಧಿಶಾಲಿ ಜಲಚರಗಳೆಂದೂ ಹೆಸರಾಗಿವೆ. ತನ್ನ ಮೇಲಾಗೋ ದಾಳಿಗಳಿಂದ ಇವು ಬುದ್ಧಿವಂತಿಕೆಯಿಂದಲೇ ಬಚಾವಾಗುತ್ತವೆ. ಅಂಥಾ ಸಂದಿಗ್ಧ ಕಾಲದಲ್ಲಿ ಇವು ಇಂಕಿನಂಥಾ ದ್ರವವನ್ನು ಉಗುಳಿ ಬಣ್ಣ ಬದಲಾಯಿಸಿಕೊಂಡು ತಪ್ಪಿಸಿಕೊಳ್ತಾವಂತೆ.
ಇಂಥಾ ಆಕ್ಟೋಪಸ್‌ಗಳು ಸಂತಾನಾಭಿವೃದ್ಧಿಯ ವಿಚಾರದಲ್ಲಿಯೂ ಭಲೇ ಡಿಫರೆಂಟು. ಬಹುಶಃ ಬೇರೆಲ್ಲ ಜೀವಿಗಳಿಗಿಂತಲೂ ಸಂತಾನೋತ್ಪತ್ತಿಯಲ್ಲಿ ಅತ್ಯಂತ ಹೆಚ್ಚು ಶಕ್ತಿ ಆಕ್ಟೋಪಸ್‌ಗಳಿಗಿವೆ. ಇವುಗಳಲ್ಲಿ ಗಂಡು ಹೆಣ್ಣಿನ ಸಮ್ಮಿಲನವೂ ಇಭಿನ್ನ. ಆ ಪ್ರಕ್ರಿಯೆಯ ನಂತರ ಫಲ ಪಡೆಯುವ ಹೆಣ್ಣು ಆಕ್ಟೋಪಸ್ ನಂತರ ಮೊಟ್ಟೆಯಿಡುತ್ತೆ. ಅದೇನು ಸಾಮಾನ್ಯ ಮಟ್ಟಕ್ಕಲ್ಲ. ಏಕ ಕಾಲದಲ್ಲಿ ಹೆಣ್ಣು ಆಕ್ಟೋಪಸ್ ಐವತ್ತಾರು ಸಾವಿರಕ್ಕೂ ಹೆಚ್ಚು ಮೊಟ್ಟೆಯಿಡುತ್ತೆ. ಅದೆಲ್ಲವನ್ನೂ ಕೂಡಾ ಗಂಡು ಆಕ್ಟೋಪಸ್ ಕಾಪಾಡಿಕೊಳ್ಳುತ್ತೆ. ಈ ಕಾರಣದಿಂದಲೇ ಸಮುದ್ರದ ನಾನಾ ಭಾಗಗಳಲ್ಲಿ ಮನುಷ್ಯರ ಹಸ್ತಕ್ಷೇಪ ಇದ್ದರೂ ಆಕ್ಟೋಪಸ್‌ಗಳ ಸಂತತಿ ಹೆಚ್ಚಾಗಿದೆ. ಅತ್ಯಂತ ತೀಕ್ಷ್ಣ ಬುದ್ಧಿಮತ್ತೆ, ಶತ್ರುಗಳಿಂದ ಪಾರಾಗೋ ಜಾಣ್ಮೆಯೂ ಸೇರಿದಂತೆ ಆಕ್ಟೋಪಸ್ ಒಂದು ಅಪರೂಪದ ಜಲಚರ.
ಚಿಟ್ಟೆಯ ರುಚಿಯ ವಿಷಯ

ಈ ಜೀವ ಜಗತ್ತು ಮತ್ತು ಅದಕ್ಕೆ ಪ್ರಕೃತಿಯೇ ಕೊಡಮಾಡಿರೋ ಸೌಕರ್ಯಗಳು ಯಾವ ನಿಲುಕಿಗೂ ಸಿಗುವಂಥಾದ್ದಲ್ಲ. ಅದರಲ್ಲೊಂದಷ್ಟನ್ನು ಒಂದಷ್ಟು ಅಧ್ಯಯನಗಳು ಜಾಹೀರು ಮಾಡಿವೆಯಷ್ಟೆ. ಇಡೀ ಜಗತ್ತು ಯಾವುದೋ ಸ್ಪರ್ಧೆಗೆ ಬಿದ್ದಿರುವಾಗ ಒಂದಷ್ಟು ಜೀವಗಳು ಜೀವಜಗತ್ತಿನ ಸೂಕ್ಷ್ಮಗಳಿಗೆ ಕಣ್ಣಾಗಿವೆ. ಪುಟ್ಟ ಜೀವಿಗಳ ಮಿಸುಕಾಟವನ್ನೂ ಮನನ ಮಾಡಿಕೊಳ್ಳೋ ಉತ್ಸಾಹವೇ ಜೀವಜಾಲದ ಒಂದಷ್ಟು ಅಚ್ಚರಿಗಳನ್ನು ನಮ್ಮೆದುರಿಗೆ ತೆರೆದಿಟ್ಟಿವೆ. ಅದರ ಫಲವಾಗಿಯೇ ನೋಡಿದಾಕ್ಷಣ ಮನಸನ್ನು ಪ್ರಫುಲ್ಲಗೊಳಿಸೋ ಚಿಟ್ಟೆಗಳ ಬಗ್ಗೆಯೂ ಅಧ್ಯಯನಗಳು ನಡೆದಿವೆ. ಅದು ಅನಾವರಣಗೊಳಿಸಿರೋ ಸತ್ಯ ನಿಜಕ್ಕೂ ಆಹ್ಲಾದಕರವಾಗಿದೆ.
ನಮಗೆಲ್ಲ ಸಿಹಿ, ಕಹಿ, ಒಗರಿನಂಥಾ ಎಲ್ಲ ರುಚಿಗಳನ್ನೂ ಗ್ರಹಿಸೋ ಏಕೈಕ ಅಂಗ ನಾಲಗೆ. ರುಚಿಯನ್ನು ಆಘ್ರಾಣಿಸೋ ಗಂಥಿಗಳೆಲ್ಲ ಇರೋದು ನಮ್ಮ ನಾಲಗೆಯಲ್ಲಿಯೇ. ಒಂದು ವೇಳೆ ನಮ್ಮ ಕೈನಲ್ಲೋ, ಪಾದದಲ್ಲೋ ರುಚಿಯ ಗ್ರಂಥಿ ಇದ್ದಿದ್ದರೆ ಗ್ರಹಿಸಬಾರದ ರುಚಿಗಳನ್ನೆಲ್ಲ ಗ್ರಹಿಸಿ ವಾಂತಿ ಮಾಡಿಕೊಳ್ಳಬೇಕಾಗ್ತಿತ್ತೇನೋ. ನಮ್ಮ ಪಾಲಿಗೆ ಅಸಾಧ್ಯ ಅನ್ನಿಸೋ ಅಂಗದಲ್ಲಿಯೇ ಚಿಟ್ಟೆಗೆ ಪ್ರಕೃತಿ ರುಚಿಯ ಗಂಥಿಯನ್ನಿಟ್ಟಿದೆ. ವಿಶೇಷ ಅಂದ್ರೆ, ಈ ಚಿಟ್ಟೆಗಳು ರುಚಿಯನ್ನು ಗ್ರಹಿಸೋದು ಅವುಗಳ ಕಾಲಿನ ಮೂಲಕ. ಅದು ಸುಮ್ಮನೆ ಎಲ್ಲಿ ಹೋಗಿ ಕೂತರೂ ಅದರ ಹಿಂದೆ ಆಹಾರ ಅರಸೋ ಉದ್ದೇಶವಿರುತ್ತೆ. ಒಂದು ಎಲೆಯ ಮೇಲೆ ಅದು ಹಾರಿ ಕೂತರೂ ಅದರ ರುಚಿಯನ್ನದು ಬೇಗನೆ ಪತ್ತೆ ಹಚ್ಚುತ್ತೆ.
ಹೀಗಿರೋದರಿಂದಲೇ ಚೆಂದದ ಪರಾಗ ಹೊದ್ದು ಹಾರಾಡೋ ಈ ಮುದ್ದಾದ ಜೀವಿ ಆಹಾರಕ್ಕೆ ತತ್ವಾರ ಪಡೋದಿಲ್ಲ. ತನಗಿಷ್ಟವಾದ ಆಹಾರದಾಚೆಗೂ ಕೆಲವೊಮ್ಮೆ ಕಾಂಪ್ರೋಮೈಸ್ ಮಾಡಿಕೊಂಡು ಉದರ ತುಂಬಿಸಿಕೊಳ್ಳುತ್ತೆ. ಹೀಗೆ ಬೇಗನೆ ತನ್ನ ಆಹಾರ ಪತ್ತೆಹಚ್ಚೋ ಚಿಟ್ಟೆ ಅದನ್ನು ಕಬಳಿಸಲು ನಾಲಗೆಯನ್ನೇ ಆಶ್ರಯಿಸಿದೆ. ಆಹಾರ ಸಿಕ್ಕಾಕ್ಷಣವೇ ತನ್ನ ಕೊಳವೆಯಾಕಾರದ ನಾಲಗೆಯ ಮೂಲಕ ಅದನ್ನು ಹೊಟ್ಟೆಗಿಳಿಸಿಕೊಳ್ಳುತ್ತೆ. ನಾವೆಲ್ಲ ಚಿಟ್ಟೆಗಳು ಹಾದು ಹೋದಾಗೆಲ್ಲ ಉಲ್ಲಸಿತರಾಗುತ್ತೇವೆ. ಕಣ್ಣೆದುರಲ್ಲಿ ಚೆಂದದ ಚಿಟ್ಟೆ ಹಾರಾಡಿದರೂ ಜೀವ ಚೈತನ್ಯ ನರನಾಡಿಗಳಲ್ಲಿ ತುಂಬಿಕೊಂಡಂತಾಗುತ್ತೆ. ಆದರೆ ಪ್ರಕೃತಿ ಅದರ ಉದರ ತುಂಬಿಸಲು ಬೇರೆಯದ್ದೇ ಸೌಕರ್ಯ ಕಲ್ಪಿಸಿದೆ. ಅದು ಎಲ್ಲರನ್ನೂ ಚಕಿತಗೊಳಿಸುವಂತಿದೆ.
ಅದೊಂದು ವಿಚಿತ್ರ ರೋಗ

ಈ ವಿಶ್ವದಲ್ಲಿ ಚಿತ್ರ ವಿಚಿತ್ರವಾದ ಕಾಯಿಲೆಗಳಿದ್ದಾವೆ. ಬಂದರೆ ಜೀವವನ್ನೇ ತೆಗೆದು ಬಿಡುವಂಥವು, ಅಕ್ಷರಶಃ ನರಕಯಾತನೆ ತಂದಿಡುವಂಥವೂ ಸೇರಿದಂತೆ ಕಾಯಿಲೆಗಳಿಗೆ ನಾನಾ ಮುಖ. ಅದು ದೈಹಿಕ ಕಾಯಿಲೆಗಳ ವಿಚಾರ. ಇನ್ನುಳಿದಂತೆ ಕೆಲ ಮಾನಸಿಕ ವ್ಯಾಧಿಗಳಿದ್ದಾವೆ. ಅವುಗಳ ಬಗ್ಗೆ ಅರಿಯುತ್ತಾ ಹೋದಂತೆ ನಂಬಲಸಾಧ್ಯವಾದ, ಇಂಥಾ ಕಾಯಿಲೆಗಳೀ ಇರ್‍ತಾವಾ ಎಂಬಂತೆ ಅಚ್ಚರಿ ಮೂಡಿಸುವವಿವರಗಳು ಬಿಚ್ಚಿಕೊಳ್ಳುತ್ತವೆ. ಹಾಗೆ ನೋಡಿದರೆ ಮನಸಿಗೆ ಸಂಬಂಧಿಸಿದ ಕಾಯಿಲೆಗಳದ್ದೊಂದು ದೊಡ್ಡ ಪಟ್ಟಿಯೇ ಇದೆ. ನಮ್ಮ ಪಾಲಿಗೆ ಬೋಧ ಕಳೆದುಕೊಂಡು ಕಂಡ ಕಂಡಲ್ಲಿ ಸುತ್ತುವಂಥಾದ್ದು ಮಾನಸಿಕ ಕಾಯಿಲೆ. ಆದರೆ ಅದಕ್ಕೆ ಅದೆಲ್ಲವನ್ನೂ ಮೀರಿದ ಮಜಲುಗಳಿದ್ದಾವೆ.
ಈಗ ನಾವು ಹೇಳ ಹೊರಟಿರೋದು ಅಂಥಾದ್ದೇ ಒಂದು ವಿಚಿತ್ರವಾದ ಕಾಯಿಲೆಯ ಬಗ್ಗೆ, ಈ ಮಾನಸಿಕ ವ್ಯಾಧಿ ಅಮರಿಕೊಂಡರೆ ಆ ರೋಗಿಗೆ ಮಾತ್ರವ್ಲ್ಲದೇ ಮನೆ ಮಂದಿಗೂ ನರಕ ಕಾಣಿಸುತ್ತೆ. ಯಾಕಂದ್ರೆ ಈ ಕಾಯಿಲೆಗೀಡಾದವರು ತಮ್ಮನ್ನು ತಾವು ಹಸು ಎಂದೇ ಭ್ರಮಿಸ್ತಾರಂತೆ. ಅದೇನು ಸಾಮಾನ್ಯದ ಭ್ರಮೆಯಲ್ಲ. ಅದು ಆವರಿಸಿಕೊಳ್ಳುತ್ತಿದ್ದಂತೆಯೇ ಅವರು ಥೇಟು ಹಸುವಿನಂತೆ ವರ್ತಿಸಲಾರಂಭಿಸ್ತಾರೆ. ಎರಡು ಕಾಲುಗಳಲ್ಲಿ ನಡೆಯೋದನ್ನು ಮರೆತು ನೆಲಕ್ಕೆ ಕೈಯೂರಿ ನಡೆಯಲಾರಂಭಿಸ್ತಾರೆ. ಅದು ಉಲ್ಬಣಿಸುತ್ತಿದ್ದಂತೆಯೇ ಊಟ, ತಿಂಡಿಗಳನ್ನ ಮರೆತು ಹುಲ್ಲು ಮೇಯಲು ಹೊರಟು ಬಿಡ್ತಾರೆ.
ಇಂಥಾದ್ದೊಂದು ಅನಾಹುತಕಾರಿ ಮನೋ ರೋಗಕ್ಕೆ ಮನಃಶಾಸ್ತ್ರಜ್ಞರು ಬಾನ್ತ್ರೊಪಿ ಅನ್ನೋ ಹೆಸರಿಟ್ಟಿದ್ದಾರೆ. ನಮ್ಮಲ್ಲಿ ಇಂಥಾ ಕಾಯಿಲೆ ಬಂದರೆ ಮಾಟ ಮಂತ್ರ ಮುಂತಾದ ಅನುಮಾನಗಳು ಹುಟ್ಟಿಕೊಳ್ಳಬಹುದು. ಅದರ ನಿವಾರಣೆಗೆಂದು ಮಂತ್ರವಾದಿಗಳ ಮೊರೆ ಹೋಗುವ ಹೊತ್ತಿಗೆಲ್ಲ ಅದು ಉತ್ತುಂಗಕ್ಕೇರಿದರೂ ಅಚ್ಚರಿಯೇನಿಲ್ಲ. ಆದ್ರೆ, ಇಂಥಾ ಮಾನಸಿಕ ಕಾಯಿಲೆಗೂ ಕೂಡಾ ಇತರೇ ಕಾಯಿಲೆಯಂತೆಯೇ ಮದ್ದಿದೆ. ಮನೋ ವೈದ್ಯರು ಸತತವಾದ ಕೌನ್ಸೆಲಿಂಗ್ ಮತ್ತು ಟ್ರೀಟ್ಮೆಂಟುಗಳ ಮೂಲಕ ವಾಸಿ ಮಾಡುತ್ತಾರೆ. ಆದರೆ ಅದಕ್ಕೆ ಒಂದಷ್ಟು ಸಮಯ ಹಿಡಿಯುತ್ತಂತೆ.
ಇದೆಂಥಾ ಗೀಳು?

ಯಾವುದನ್ನೇ ಆದ್ರೂ ಆಳವಾಗಿ ಹಚ್ಚಿಕೊಳ್ತಾ ಹೋದಂತೆ ಅದೊಂದು ಕಾಯಿಲೆಯಾಗಿ ಬೇರಿಳಿಸೋ ಅಪಾಯವೇ ಹೆಚ್ಚು. ಕೆಲವೊಮ್ಮೆ ನಾವು ಮಾಮೂಲು ಅಂದುಕೊಳ್ಳೋ ಅದೆಷ್ಟೋ ಮಾನಸಿಕ ಪಲ್ಲಟಗಳು ನಮ್ಮನ್ನೇ ಹಿಂಸೆಗೀಡುಮಾಡೋ ಅಪಾಯವಿರುತ್ತೆ. ನಿಮಗೆ ಅಚ್ಚರಿಯಾದೀತು, ಆದ್ರೆ ಸಿನಿಮಾ, ಕ್ರೀಡೆ ಸೇರಿದಂತೆ ನೀವ್ಯಾರನ್ನಾದ್ರೂ ಅಪಾರವಾಗಿ ಹಚ್ಚಿಕೊಂಡ್ರೆ ಅದೂ ಕೂಡಾ ಒಂದು ಮಾನಸಿಕ ವ್ಯಾಧಿಯಾಗಿ ಮಾರ್ಪಾಡಾಗಬಹುದು. ಇದು ವಿಚಿತ್ರವಾದ್ರೂ ಸತ್ಯ. ವಿಶ್ವದಲ್ಲಿ ಅದೆಷ್ಟೋ ಮಂದಿ ಇಂಥಾದ್ದೊಂದು ಹೇಳಿಕೊಳ್ಳಲಾರದ ಕಾಯಿಲೆಯಿಂದ ಪರಿತಪಿಸ್ತಿದ್ದಾರೆ.
ಸಾಮಾನ್ಯವಾಗಿ ಸಿನಿಮಾ ತಾರೆಯರ ಬಗ್ಗೆ ವಿಪರೀತ ಅಭಿಮಾನವಿರುತ್ತೆ. ಸಿನಿಮಾಗಳಲ್ಲಿ ಅಂಥವ್ರ ಅಭಿನಯ ನೋಡಿ ಮೆಚ್ಚಿಕೊಳ್ಳೋದು, ಅವರನ್ನೊಮ್ಮೆ ಭೇಟಿಯಾಗಬೇಕಂತ ಹಂಬಲಿಸೋದೆಲ್ಲ ಮಾಮೂಲಿ. ಆದ್ರೆ ಅದನ್ನ ಮೀರಿದ ಮತ್ತೊಂದು ಹಂತವಿದೆ. ಅದು ಸೀರಿಯಸ್ಸಾಗಿ ಅಂಥಾ ತಾರೆಯರೊಂದಿಗೆ ಲವ್ವಲ್ಲಿ ಬೀಳೋ ಹಂತ. ನೀವೇನಾದ್ರು ಆ ಘಟ್ಟ ತಲುಪಿಕೊಂಡಿದ್ದೀರಾದ್ರೆ ಕೊಂಚ ಯೋಚಿಸಿ ಅದ್ರಿಂದ ಹೊರ ಬನ್ನಿ. ಯಾಕಂದ್ರೆ ಅದೊಂದು ಭ್ರಾಮಕ ಕಾಯಿಲೆ!
ಇಂಥಾ ಕಾಯಿಲೆಗೆ ಮನೋ ವೈದ್ಯರು ಎರಟೋಮೇನಿಯಾ ಎಂಬ ಹೆಸರಿಟ್ಟಿದ್ದಾರೆ. ಅದೇನಾದ್ರೂ ಉಲ್ಬಣಿಸಿದ್ರೆ ಸ್ಕಿಜೋಫ್ರೇನಿಯಾ, ಬೈಪೋಲಾರ್ ಡಿಸಾರ್ಡರ್‌ನಂಥಾ ಮನೋರೋಗಗಳಷ್ಟೇ ಅಪಾಯಕ್ಕೀಡು ಮಾಡುತ್ತೆ. ಹಾಗಾದ್ರೆ ಈ ಕಾಯಿಲೆಯ ನಿಖರ ಲಕ್ಷಣಗಳೇನು ಅನ್ನೋದನ್ನ ಮೊದಲು ತಿಳಿಯೋಣ. ಗಂಡು ಅಥವಾ ಹೆಣ್ಣಿಗೆ ವಿರುದ್ಧ ಲಿಂಗದ ಸೆಲೆಬ್ರಿಟಿಗಳ ಮೇಲೆ ಇಂಥಾ ಭ್ರಮೆಯ ಲವ್ವಾದ್ರೆ ಮುಗಿದೇ ಹೋಯ್ತು. ಅವರೊಂದಿಗೆ ಲವ್ವಲ್ಲಿ ಬಿದ್ದವರಂತೆ ನಂಬಿ ಭಾವ ಲೋಕದಲ್ಲಿ ಮಿಂದೇಳ್ತಾರೆ. ಅದು ಮೊದಲ ಘಟ್ಟ. ನಂತರ ಅವರೂ ಕೂಡಾ ತಮ್ಮನ್ನ ಪ್ರೀತಿಸ್ತಾರೆಂದೇ ಭ್ರಮಿಸಿ ಸಂಭ್ರಮಿಸ್ತಾರೆ. ಅದು ಯಾವ ರೇಂಜಿಗಿರುತ್ತೆ ಅಂದ್ರೆ, ಆ ಸೆಲೆಬ್ರಿಟಿ ತನ್ನನ್ನು ಪ್ರೀತಿಸ್ತಿದ್ದಾರೆಂದು ಹತ್ತಿರದವರ ಬಳಿ ಹೇಳಿಕೊಂಡು ಓಡಾಡೋಕೆ ಶುರು ಮಾಡಿ ಬಿಡ್ತಾರೆ.
ವಿಚಿತ್ರ ಶಿಕ್ಷೆ

ನಮ್ಮದು ಕೆಲವಾರು ಚಿತ್ರವಿಚಿತ್ರ ನಂಬಿಕೆಗಳು, ಆಚರಣೆಗಳು ಉಸಿರಾಗಿರೋ ದೇಶ. ಹುಡುಕುತ್ತಾ ಹೋದ್ರೆ ಅಂಥಾ ಸಾವಿರ ಆಚರಣೆಗಳು, ಬದುಕಿನೊಂದಿಗೆ ಹೊಸೆದುಕೊಂಡಿರೋ ಆಚರಣೆಗಳು ಸಿಕ್ಕಾವು. ಆದ್ರೆ ಆಧುನಿಕತೆಯ ಭರಾಟೆಯಲ್ಲಿರೋ ನಾವೆಲ್ಲ ಎಲ್ಲವನ್ನೂ ಮೂಢನಂಬಿಕೆಯ ಮೂಟೆಯೊಳಗೆ ತುರುಕಿ ಮತ್ಯಾವುದರತ್ತಲೋ ಕೈಚಾಚಿ ಹೊರಟು ಬಿಡ್ತೇವೆ. ನಾವು ನಮ್ಮಲ್ಲಿನ ಕೆಲ ನಂಬಿಕೆಗಳನ್ನ ಮೂಢ ನಂಬಿಕೆ ಅಂತೇವೆ. ನಮ್ಮಲ್ಲಿ ಮಾತ್ರವೇ ಇಂಥಾದ್ದೆಲ್ಲ ಇರೋದೇನೋ ಎಂಬಂತೆ ತಕಾರು ತೆಗೀತೇವೆ. ಆದ್ರೆ ಅದೆಲ್ಲವನ್ನೂ ಮೀರಿಸುವಂಥಾ ಚಿತ್ರವಿಚಿತ್ರವಾದ ನಂಬಿಕೆ, ಆಚರಣೆಗಳು ಆಧುನಿಕತೆಗೆ ಒಗ್ಗಿಕೊಂಡ ಮುಂದುವರೆದ ದೇಶಗಳಲ್ಲಿಯೂ ಇದೆ.
ಬೇರೆಲ್ಲ ಹಾಗಿರಲಿ, ಮದುವೆ ವಿಚಾರದಲ್ಲಿ ಕೆಲ ದೇಶಗಳಲ್ಲಿರೋ ರೀತಿ ರಿವಾಜುಗಳನ್ನ ನೋಡಿದ್ರೆ ಯಾರೇ ಆದ್ರೂ ಕಂಗಾಲಾಗ್ಬೇಕಾಗುತ್ತೆ. ನಮ್ಮಲ್ಲಿ ಮದುವೆ ಅನ್ನೋದೊಂದು ಮಹತ್ವದ ಘಟ್ಟ ಅಂತಲೇ ಬಿಂಬಿಸಲ್ಪಟ್ಟಿದೆ. ಏನಾಗದೇ ಹೋದ್ರೂ ಮದ್ವೆ ಮಾತ್ರ ಅಚ್ಚುಕಟ್ಟಾಗಿ, ಸರಿಯಾದ ವಯಸ್ಸಿಗೆ ಆಗಲೇ ಬೇಕನ್ನೋ ಮನಃಸ್ಥಿತಿಯೂ ಇದೆ. ಒಂದು ಪ್ರಾಯ ಕ್ರಾಸ್ ಆಗುತ್ತಲೇ ಹುಡುಗ, ಹುಡುಗಿಗೆ ಹಿರೀಕರಿಂದ ಪ್ರಶ್ನೆಗಳು ಶುರುವಾಗುತ್ವೆ. ಕೆಲವರಿಗೆ ಧಾರಾಳವಾಗಿ ಮನೆಮಂದಿಯಿಂದ ಉಗಿತದ ಅಭ್ಯಂಜನವೂ ಆಗಬಹುದು. ಅದಕ್ಕೂ ಕ್ಯಾರೇ ಅನ್ನದೆ ಮುಂದುವರೆದ್ರೆ ಈ ಸಮಾಜದ ದಿಕ್ಕಿನಿಂದ ಒಂದಷ್ಟು ರೂಮರ್‍ಸ್ ಹಬ್ಬಿಕ್ಕೊಳ್ಳಬಹುದು. ಅದಕ್ಕೂ ಮಂಡೆಬಿಸಿ ಮಾಡಿಕೊಳ್ಳದಿದ್ರೆ ಹಾಳುಬಿದ್ದೋಗ್ಲಿ ಅಂತ ಸುಮ್ಮನಾಗಲೂ ಬಹುದು. ಪುಣ್ಯಕ್ಕೆ ನಮ್ಮಲ್ಲಿ ಅದಕ್ಕಾಗಿ ಶಿಕ್ಷೆಯೇನೂ ಇಲ್ಲ.
ಆದ್ರೆ ಈ ಜಗತ್ತಿನ ಒಂದಷ್ಟು ದೇಶಗಳಲ್ಲಿ ಆಯಾ ವಯಸ್ಸಿಗೆ ಮದುವೆಯಾಗದಿರೋದೇ ಮಹಾ ಅಪರಾಧ. ಅದಕ್ಕಾಗಿ ಅಲ್ಲಿ ಭಯಾನಕವಾದ ಶಿಕ್ಷೆಗಳಿದ್ದಾವೆ. ಜರ್ಮನಿಯ ಬಗ್ಗೆ ಹೇಳೋದಾದ್ರೆ, ಆ ದೇಶದಲ್ಲಿ ಹುಡುಗನೊಬ್ಬ ಇಪ್ಪತೈದನೇ ವಯಸ್ಸಿನೊಳಗೆ ಮದುವೆಯಾಗಲೇ ಬೇಕು. ಒಂದು ವೇಳೆ ಆಗಲಿಲ್ಲ ಅಂತಿಟ್ಕೊಳ್ಳಿ ಆತನ ಪಾಲಿಗೆ ಜೀವದ ಸ್ನೇಹಿತರೇ ವಿಲನ್ನುಗಳಾಗಿ ಬಿಡ್ತಾರೆ. ಹೆಜ್ಜೆ ಹೆಜ್ಜೆಗೂ ಕಾಡಿಸುತ್ತಾ ಮದುವೆಯಾಗದ ಯುವಕನನ್ನು ಒಂದು ಕೋಣೆಯಲ್ಲಿ ಕೆಡವಿ ದಿನವಿಡೀ ದಾಲ್ಚಿನ್ನಿ ಪುಡಿಯನ್ನು ಮೈಮೇಲೆ ಸುರುವಿ ಉಳ್ಳಾಡಿಸ್ತಾರೆ. ಆ ಪುಡಿ ಕಣ್ಣು ಮೂಗು ಮತ್ತು ಇತರೇ ಭಾಗಗಳಿಗೆ ಹೋಗಿ ಕಿರಿಕಿರಿಯಾಗುತ್ತದಲ್ಲಾ? ಆಗ ಮದುವೆಯಾಗೋದಾಗಿ ಒಪ್ಪಿಕೊಂಡ್ರೇನೇ ಬ್ರಹ್ಮಚಾರಿ ಬಚಾವಾಗಲು ಸಾಧ್ಯ.
ಮೇಲೆ ಹೇಳಿದ್ದು ಮೊದಲ ಡೋಸೇಜಿನ ಬಗ್ಗೆ. ಹಾಗೂ ಬ್ರಹ್ಮಚಾರಿ ಯುವಕ ದಾಲ್ಚಿನ್ನು ಪೌಡರ್‌ಗೆ ಬಗ್ಗಲಿಲ್ಲ ಎಂದಾದರೆ ಮತ್ಚತೊಂದು ಘನಘೋರ ಕ್ರೂರ ಅಸ್ತ್ರ ಪ್ರಯೋಗವಾಗುತ್ತೆ. ಅದಕ್ಕೆ ಆ ಯುವಕ ಮೂವತ್ತನೇ ವರ್ಷ ದಾಟುವವರೆಗಿನ ಗಡಿಯೂ ಇರುತ್ತೆ. ಒಂದುವೇಳೆ ಮೂವತ್ತು ದಾಟಿದರೂ ಯಾವನಾದ್ರೂ ಮದುವೆಯಾಗದೆ ಉಳಿದ್ರೆ ಅವನನ್ನು ಮತ್ತೆ ರೂಮೊಂದರಲ್ಲಿ ಬೋರಲು ಮಲಗಿಸಿ ಮೈತುಂಬಾ ಕರಿಮೆಣಸಿನ ಪುಡಿ ಉದುರಿಸಿ ಕಾಟ ಕೊಡಲಾಗುತ್ತೆ. ಹೆಚ್ಚಿನ ಮಂದಿ ಈ ಉರಿಯಿಂದ ತಪ್ಪಿಸಿಕೊಳ್ಳಲು ಬೇರೆ ದಾರಿ ಕಾಣದೆ ಮದುವೆಯೆಂಬ ಬಾಣಲೆಗೆ ಜಿಗೀತಾರಂತೆ. ಏನೇ ಆದ್ರೂ ನಮ್ಮ ದೇಶವೇ ನೆಮ್ಮದಿ!
ಇದೆಂಥಾ ಸ್ಪರ್ಧೆ?

ನಮ್ಮ ದೇಶಕ್ಕೂ, ಇತರೇ ದೇಶಗಳಿಗೂ ನಾನಾ ವಿಚಾರಗಳಲ್ಲಿ ಸಾಮ್ಯತೆಗಳಿದ್ದಾವೆ. ನಮ್ಮಲ್ಲಿ ಮನರಂಜನೆಗೆಂದು ಆಡುವ, ಕೆಲ ಪ್ರದೇಶಗಳಿಗೆ ಮಾತ್ರವೇ ಸೀಮಿತವಾದ ಕೆಲ ಆಟಗಳು ಕೆಲ ದೇಶಗಳಲ್ಲಿ ಭಲೇ ಪ್ರಸಿದ್ಧಿ ಪಡೆದುಕೊಂಡಿವೆ. ಕೆಲವಂತೂ ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಖ್ಯಾತಿ ಗಳಿಸಿಕೊಂಡಿವೆ. ಅದೆಲ್ಲದ್ರಲ್ಲಿ ಭಾರೀ ಖ್ಯಾತಿ ಗಳಿಸಿಕೊಂಡಿರೋದು ಹೆಂಡತಿಯನ್ನು ಎತ್ತಿಕೊಂಡು ಓಡೋ ಓಟ. ನಮ್ಮಲ್ಲಿ ಸ್ಥಳೀಯವಾಗಿ ಕೆಲವೆಡೆಗಳಲ್ಲಿ ಈ ಕ್ರೀಡೆ ಚಾಲ್ತಿಯಲ್ಲಿದೆ. ಆದ್ರೆ ಕೆಲ ಗಂಡಂದಿರು ಬಹುಮಾನದ ಆಸೆಯನ್ನು ಅದುಮಿಟ್ಟುಕೊಂಡು ಈ ಅಪಾಯಕಾರಿ ಆಟದಿಂದ ದೂರವುಳಿದು ಬಿಡ್ತಾರೆ.
ಅದೊಂದು ದೇಶದಲ್ಲಿ ಮಾತ್ರ ಅಲ್ಲಿನ ಗಂಡಂದಿರ ಪಾಲಿಗಿದು ಫೇವರಿಟ್ ಗೇಮ್. ಅಂದಹಾಗೆ, ಇಂಥಾದ್ದೊಂದು ಕ್ರೀಡೆ ರಾಜ ಮರ್ಯಾದೆಯೊಂದಿಗೆ ಚಾಲ್ತಿಯಲ್ಲಿರೋದು ಫಿನ್‌ಲ್ಯಾಂಡಿನಲ್ಲಿ. ಇಲ್ಲಿನ ಸೊಂಕಾಜಾರ್ವಿ ಎಂಬ ಪ್ರದೇಶದಲ್ಲಿ ಪ್ರತೀ ವರ್ಷ ಈ ಕ್ರೀಡೆ ನಡೆಯುತ್ತೆ. ಇದರಲ್ಲಿ ಪಾಲ್ಗೊಳ್ಳದು ಕೇವಲ ಫಿನ್ಲ್ಯಾಡಿನಿಂದ ಮಾತ್ರವಲ್ಲದೇ ಬೇರೆ ದೇಶಗಳಿಂದಲೂ ದಂಪತಿಗಳು ಆಗಮಿಸ್ತಾರೆ. ಗಂಡಂದಿರೆಲ್ಲ ತಂತಮ್ಮ ಹೆಂಡತಿಯರನ್ನ ಎತ್ತಿಕೊಂಡು ಓಡಿ ಸಂಬ್ರಮಿಸ್ತಾರೆ.
ವಿಶೇಷ ಅಂದ್ರೆ, ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಗಂಡಂದಿರು ತಮ್ಮ ಹೆಂಡತಿ ದಪ್ಪಗಿರಲಿ ಅಂತಾನೇ ಬಯಸ್ತಾರೆ. ಯಾಕಂದ್ರೆ, ಇದ್ರಲ್ಲಿ ಗೆದ್ದೋರ ಬಹುಮಾನದ ಪ್ರಮಾಣ ನಿಗಧಿಯಾಗೋದು ಹೆಂಡತಿಯ ತೂಕದ ಆಧಾರದ ಮೇಲೆ. ಇದ್ರಲ್ಲಿ ಗೆದ್ದಾತನ ಹೆಂಡತಿ ಎಷ್ಟು ತೂಕವಿರ್‍ತಾಳೋ ಅದಕ್ಕೆ ಸಮನಾದ ತೂಕದ ಬಿಯರ್ ಬಹುಮಾನವಾಗಿ ಸಿಗುತ್ತದಂತೆ. ಈ ಅಗಾಧ ಪ್ರಮಾಣದ ಬಿಯರಿನಾಸೆಗೇ ಹೆಚ್ಚಿನ ಮಂದಿಯ ಉತ್ಸಾಹ ಒತ್ತರಿಸಿಕೊಂಡಿರಲೂ ಬಹುದು.
ಹಾಗಂತ ಇದು ಮೋಜಿಗಾಗಿ ಈ ತಲೆಮಾರಿನ ಮಂದಿ ಚಾಲ್ತಿಗೆ ತಂದ ಕ್ರೀಡೆಯಲ್ಲ. ಅದಕ್ಕೆ ಶತಮಾನಗಳಷ್ಟು ಪುರಾತನ ಇತಿಹಾಸವಿದೆ. ಹತ್ತೊಂಬತ್ತನೇ ಶತಮಾನದಿಂದಲೂ ಈ ಕ್ರೀಡೆ ಚಾಲ್ತಿಯಲ್ಲಿದೆ. ಅಂದಿನ ಉತ್ಸಾಹ ಇಂದಿಗೂ ಕೂಡಾ ಕುಂದದೆ ಮುಂದುವರೆಯುತ್ತಿದೆ. ೧೯೯೨ರಲ್ಲಿ ಇದಕ್ಕೆ ಅಧಿಕೃತವಾಗಿ ಅಂತಾರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಈ ಕ್ರೀಡೆಯನ್ನೀಗ ಇಂಟರ್‌ನ್ಯಾಷನಲ್ ವೈಫ್ ಕ್ಯಾರಿಯಿಂಗ್ ಚಾಂಪಿಯನ್ ಶಿಪ್ ಎಂಬ ಹೆಸರಿಂದ ಕರೆಯಲಾಗ್ತಿದೆ.
ಕೆಂಡದ ಮೇಲಿನ ನಡಿಗೆ

ಅದ್ಯಾವ ದೇಶ, ಭಾಷೆಗಳ ಮಂದಿಯೇ ಇರಲಿ; ತಾಯ್ತನ, ತಂದೆಯಾಗೋ ಸಂಭ್ರಮವೆಲ್ಲ ಒಂದೇ ಆಗಿರುತ್ತೆ. ಮದುವೆ ಮುಂತಾದ ಸಂಪ್ರದಾಯಗಳಲ್ಲಿ ವ್ಯತ್ಯಾಸವಿದ್ದರೂ ಅದರ ಪುಳಕಗಳಲ್ಲಿ ಸಾಮ್ಯತೆ ಇದ್ದೇ ಇದೆ. ಹಾಗಿದ್ದ ಮೇಲೆ ನಮ್ಮಲ್ಲಿರೋ ಒಂದಷ್ಟು ನಂಬಿಕೆಗಳೂ ಕೂಡಾ ಪರಸ್ಪರ ಮ್ಯಾಚ್ ಆಗೋದ್ರಲ್ಲಿ ಅಚ್ಚರಿಯೇನಿಲ್ಲ. ನಮ್ಮದು ಹೇಳಿ ಕೇಳಿ ಸಂಪ್ರದಾಯ, ನಂಬಿಕೆಗಳಿಂದ ತುಂಬಿಕೊಂಡಿರೋ ನೆಲ. ಇಲ್ಲಿ ಅದಕ್ಕೆ ತಕ್ಕುದಾದ ಅನೇಕಾನೇಕ ಆಚರಣೆಗಳಿವೆ, ನಂಬಿಕೆಗಳಿವೆ. ಆದ್ರೆ ನಮ್ಮತನದ ಬಗ್ಗೆ ನಮಗೆ ತಾತ್ಸಾರ ಹೆಚ್ಚು. ಆದ್ದರಿಂದಲೇ ಅದೆಲ್ಲವನ್ನೂ ಒಂದೇ ದೃಷ್ಟಿಕೋನದಿಂದ ನೋಡಿ ಮೂಢನಂಬಿಕೆಯೆಂಬ ಲೇಬಲ್ಲು ಅಂಟಿಸಿ ಕಡೆಗಣಿಸಿ ಬಿಡುತ್ತೇವೆ. ನಂಬಲೇ ಬೇಕಾದ ವಿಚಾರ ಅಂದ್ರೆ, ಕೆಲವಾರು ನಂಬಿಕೆಗಳು ನಮಗೆ ಮಾತ್ರವೇ ಸೀಮಿತವಲ್ಲ. ಕೆಲ ಮೂಢ ನಂಬಿಕೆಗಳಂಥವು ಬೇರೆ ದೇಶಗಳಲ್ಲಿಯೂ ಇವೆ.
ಈ ಮಾತಿಗೆ ಉದಾಹರಣೆಯಾಗಿ ನಿಲ್ಲೋದು ಚೀನಾ. ಕೊರೋನಾ ವೈರಸ್ಸಿನ ಮೂಲಕ ಚೀನಾ ಇಡೀ ವಿಶ್ವದಲ್ಲಿ ವಿಲನ್ ಸ್ಥಾನ ಪಡೆದುಕೊಂಡಿದೆ. ಸದಾ ಒಂದಿಲ್ಲೊಂದು ಕಿತಾಪತಿಗೆ ಹೆಸರಾಗಿರೋ ಈ ದೇಶ ಹೆಚ್ಚಿನ ಜನಸಂಖ್ಯೆಗೂ ಫೇಮಸ್ಸು. ಬೇರೆಲ್ಲವನ್ನೂ ಬದಿಗಿಟ್ಟು ನೋಡಿದರೆ ಆ ದೇಶದೊಳಗೆ ಬೆರಗಾಗಿಸೋ ನಾನಾ ವಿಚಾರಗಳಿರೋದು ಸುಳ್ಳಲ್ಲ. ಅದ್ರಲ್ಲೂ ಅಲ್ಲಿನ ಜನರ ಬದುಕಿನಲ್ಲಿ ನಮ್ಮಲ್ಲಿರುವಂಥಾದ್ದೇ ನಂಬಿಕೆಗಳು ಹಾಸುಹೊಕ್ಕಾಗಿವೆ. ಅಂಥಾದ್ದೇ ಒಂದು ನಂಬಿಕೆ ಅಲ್ಲಿನ ಪ್ರಾಂತ್ಯ ಒಂದರಲ್ಲಿ ಈವತ್ತಿಗೂ ಜೀವಂತವಾಗಿದೆ. ಅದೊಂಥರಾ ಗಂಡು ಜನುಮಕ್ಕೆ ಅಪ್ಪನಾಗೋ ಸಂಭ್ರವೂ ಬೆಚ್ಚಿ ಬೀಳುವಂಥಾ ಸಂಪ್ರದಾಯ.
ಚೀನಾದ ಆ ಪ್ರಾಂತ್ಯದಲ್ಲಿ ಓರ್ವ ಗಂಡ ತನ್ನ ಹೆಂಡತಿ ಗರ್ಭಿಣಿಯಾದಾಕ್ಷಣವೇ ಬೆವರಾಡಲು ಶುರುವಿಡುತ್ತಾನೆ. ಯಾಕಂದ್ರೆ, ಆತನಿಗೆ ಅಪ್ಪನಾಗೋ ಸಂಭ್ರಮಕ್ಕೆ ಗರ್ಭೀಣಿ ಮಡದಿಯನ್ನೆತ್ತಿಕೊಂಡು ನಿಗಿನಿಗಿಸೋ ಕೆಂಡದ ಮೇಲೆ ನಡೆಯೋ ಕಂಟಕವೆದುರಾಗುತ್ತೆ. ನಮ್ಮಲ್ಲಿ ನಾನಾ ಹರಕೆ ಹೊತ್ತು ಕೆಂಡ ಹಾಯೋ ಸಂಪ್ರದಾಯವಿದೆಯಲ್ಲಾ? ಅದೂ ಕೂಡಾ ಹೆಚ್ಚೂ ಕಮ್ಮಿ ಹಾಗೆಯೇ.
ನಮ್ಮಲ್ಲಿಯಾದರೆ ಕೆಂಡ ಹಾಯೋವಲ್ಲಿ ಹೆಚ್ಚು ಜನ ಇದ್ದರೆ ಮೊದಲು ಹಾಯುವವರಿಗೆ ಮಾತ್ರ ಬಿಸಿ ತಾಗುತ್ತೆ. ಕಡೇಗೆ ನಡೆಯುವವರ ಪಾದದಡಿ ಉಳಿಯೋದು ಇದ್ದಿಲ ಮಸಿ ಮಾತ್ರ. ಆದರೆ ಚೀನಾದಲ್ಲಿ ಗರ್ಭೀಣಿ ಮಡದಿಯನ್ನು ಎತ್ತಿಕೊಂಡು ಕೆಂಡ ಹಾಯೋ ಬಡಪಾಯಿ ಗಂಡನಿಗೆ ಮಸಿಯ ಭಾಗ್ಯವಿಲ್ಲ. ಯಾಕಂದ್ರೆ ಅಪ್ಪ ಆದದ್ದು ಅವನೊಬ್ಬನೇ ಆದ್ದರಿಂದ ನಿಗಿನಿಗಿ ಕೆಂಡವನ್ನ ಆತನೇ ಹಾಯಬೇಕು. ಅದೂ ಬರಿಗಾಲಿನಲ್ಲಿ. ಅದೇನೇ ದೈವಶಕ್ತಿ, ಭ್ರಮೆಗಳಿದ್ದರೂ ಗಂಡನ ಪಾದಗಳಲ್ಲಿ ಬಿಸಿಗೆ ಬಿರಿದ ಬೊಬ್ಬೆಗಳು ಖಾಯಂ. ಒಂದಷ್ಟು ದಿನ ಆ ಉರಿ ಗಾಯದಲ್ಲಿ ನರಳೋ ಶಿಕ್ಷೆಯೂ ಆತನಿಗೆ ಕಟ್ಟಿಟ್ಟ ಬುತ್ತಿ. ಅಂದಹಾಗೆ, ಈ ರೀತಿ ಕೆಂಡ ಹಾಯೋದರಿಂದ ಮಗು ಸಲೀಸಾಗಿ ಈ ಜಗತ್ತಿಗೆ ಕಣ್ತೆರೆಯುತ್ತೆ, ನೋವಿಲ್ಲದೆ ಪ್ರಸವವಾಗುತ್ತೆ ಅನ್ನೋ ನಂಬಿಕೆ ಅಲ್ಲಿನ ಜನರಲ್ಲಿದೆಯಂತೆ.