-ರೈಲ್ವೇ ಹಳಿಗಳ ಮೇಲೆ ಮಲಗೋ ಥೆರಪಿ!
-ಆ ಮಾರ್ಕೆಟ್ಟಿನಲ್ಲಿ ಮಹಿಳೆಯರದ್ದೇ ರಾಜ್ಯಭಾರ!
ಹೆಣ್ಣಿಗಿಂತಲೂ ಗಂಡು ಯಾವುದರಲ್ಲಿ ಕಮ್ಮಿ ಹೇಳ್ರೀ? ಹೆಣ್ಣಿನ ಬಟ್ಟೆ ಧರಿಸುತ್ತಾನೆ. ಅವರಂತೆ ಎದೆಯುಬ್ಬಿಸಿಕೊಳ್ಳುತ್ತಾನೆ. ಬ್ರಾತೊಡುತ್ತಾನೆ… ಸ್ತ್ರೀ ಸಮಾನಿಯಾಗಿದ್ದಾನೆ ಗಂಡು. ಪುರುಷುರ ಪೌರುಷ ಏನೇ ಇರಬಹುದು ರೀ…ಹೆಣ್ಣಿನಂತೆ ಹೆರಿಗೆ ನೋವು ಅನುಭವಿಸಲಾದೀತೆ…? ಖಂಡಿತ ಇಲ್ಲ ಎನ್ನುವುದು ನಿಮ್ಮ ಉತ್ತರವಾಗಿದ್ದರೆ ಅದು ತಪ್ಪು! ಏಕೆಂದರೆ ಈಗ ಹೆರಿಗೆ ನೋವು ಅನುಭವಿಸಬಹುದಾಗಿದೆ. ಚೈನಾದ ಅಯ್ಮಾ ಹೆರಿಗೆ ಆಸ್ಪತ್ರೆಗೆ ತೆರಳಿದರೆ ಹೆರಿಗೆಬಾಧೆಯನ್ನು ಅನುಭವಿಸುತ್ತಿರುವ ಹಲವು ಗಂಡುಗಳು ಕಂಡಾರು. ಇದೇನು ಪ್ರಕೃತಿ ಸೋಜಿಗವೂ ಅಲ್ಲ. ಅಥವಾ ಗಂಡುಗಳ ಉದರದೊಳಗೆ ಕೂಸಿನ ಕಸಿಯ ವಿಕೃತಿಯೂ ಇಲ್ಲ. ಬದಲಿಗೆ ಹೊಟ್ಟೆಯ ಸುತ್ತ ವಿಶೇಷ ವಿದ್ಯುತ್ ಪ್ಯಾಡ್‌ಗಳನ್ನಿಟ್ಟು ವಿದ್ಯುತ್ ಹರಿಸಿ ಬೇನೆ ತರಿಸುತ್ತಾರೆ. ಇದು ಅಕ್ಷರಶಃ ಮಹಿಳೆಯರು ಅನುಭವಿಸುವ ಹೆರಿಗೆ ನೋವಿಗೆ ಸಮವಾಗಿರುತ್ತದಂತೆ. ಹಾಗೆಂದು ಮಹಿಳೆಯರು ನುಡಿದ ನಂತರವಷ್ಟೇ ಪುರುಷರ ಮೇಲೆ ಈ ಪ್ರಯೋಗಳು ನಡೆಯುತ್ತಿವೆ.

‘ಅಯ್ಮಾ’ ಆಸ್ಪತ್ರೆಯಲ್ಲಿ ನೀಡುವ ಈ ನೋವು ತಡೆಯಲಾರೆ ಪುರುಷರು ‘ಅಯ್ಯಯ್ಯಮ್ಮಾ’ ಎನ್ನುವಂತಾಗುತ್ತದೆ. ಅದು ಸರಿ ಹೀಗೆ ನೋವು ಪಟ್ಟರೆ ಫಲವೇನು? ಏನೂ ಇಲ್ಲ! ಅಂದಹಾಗೆ ಈ ಬೇನೆ ಪುಗಸಟ್ಟೆಯಲ್ಲ. ರೊಕ್ಕ ಕೊಟ್ಟು ಅನುಭವಿಸಬೇಕು. ಪ್ರೇಮಿಗಳೊಂದಿಗೆ ಬರುವ ಪುರುಷರು ಹೀಗೆ ನೋವುಪಟ್ಟರೆ ಮಿಟಕಲಾಡಿಯರು ಸಂತಸಪಟ್ಟು ಸಂಭ್ರಮಿಸುತ್ತಾರಂತೆ. ನಮ್ಮಲ್ಲಿ ಹುಡುಗರು ತಮ್ಮ ಗೆಳತಿಯನ್ನು ಖುಷಿ ಪಡಿಸಲು, ಐಸ್‌ಕ್ರೀಂ ಪಾರ್‍ಲರ್, ಥಿಯೇಟರ್ -ಮಾಲ್‌ಗಳಿಗೆ ಕರೆದೊಯ್ದರೆ, ಅಲ್ಲಿ ‘ಅಯ್ಮ’ಗಳಂತಹ ಕೇಂದ್ರಗಳಿಗೆ ಕರೆದೊಯ್ಯುವ ಟ್ರೆಂಡ್ ಆರಂಭವಾಗಿದೆಯಂತೆ… ನಮ್ಮ ಹುಡುಗರದ್ದು ಒಂದು ರೀತಿಯ ವೇದನೆಯಾದರೆ ಚೀನಾ ಹುಡುಗರದ್ದು ಮತ್ತೊಂದು ರೀತಿಯ ನೋವು. ಸಂತೋಷವಾಗಿರುವುದೆಂದರೆ ಹುಡುಗಿಯರು ಮಾತ್ರ ರೀ…!
She & he
‘ಯಮ್ಮ ಯಮ್ಮ ನೋಡ್ದೆ… ನೋಡ್ದೆ… ನೋಡಬಾರದ್ದನ್ನು ನಾ ನೋಡಿದೆ’ ಎಂದು ವಿದ್ಯಾರ್ಥಿಗಳು ಗುನುಗುನುಗಿಸುವ ಕಾಲ ಬಂದಿದೆ. ಏಕೆಂದರೇ ಸ್ಯಾಂಟೀ ಎಜುಕೇಶನ್ ಕಾಂಪ್ಲೆಕ್ಸ್‌ನ ಪೌಢಶಾಲೆಯ ರೆಸ್ಟ್‌ರೂಂಗಳಲ್ಲಿ ಅಲಿಯಾಸ್ ಶೌಚಾಲಾಯದಲ್ಲಿ ಹುಡುಗ, ಹುಡುಗಿ ಇಬ್ಬರಿಗೂ ಏಕಕಾಲದಲ್ಲೇ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಇಂಥಹ ಶಾಲೆ ಲಾಸ್‌ಅಮೆರಿಕದ ಏಂಜಲಿಸ್‌ನಲ್ಲಿಯೇ ಪ್ರಪ್ರಥಮವೆಂಬ ಹೆಮ್ಮೆ ಆ ಶಾಲೆಯದ್ದು. ಇಸ್ಸೀ… ಪ್ರೌಢರಾಗುವ ಮುನ್ನವೇ ‘ಪ್ರೌಢ’ಶಾಲೆಯಲ್ಲಿ ಏನಿದು ಅದ್ವಾನ ಎಂಬುದು ನಮ್ಮ ನಿಮ್ಮೆಲ್ಲರ ಅಭಿಪ್ರಾಯವಾಗಿರಬಹುದು. ಆದರೆ ಇದೊಂದು ಕ್ರಾಂತಿಕಾರಿ ನಿರ್ಧಾರವಂತೆ. ಲಿಂಗ ಅಸಮಾನತೆ ದೂರವಿಡಲು ಇಂತಹ ಟಾಯ್ಲೆಟ್‌ಗಳು ಸಹಕಾರಿ ಎನ್ನುತ್ತಾರೆ ಶಾಲೆಯ ಆಡಳಿತ ಮಂಡಳಿಯವರು.
ಅಯ್ಯೊ ಜಾಗ ಇರ್‍ಲಿಲ್ಲಾ ಅಂದರೆ ಕನಿಷ್ಠ ಅಲ್ಲೊಬ್ಬರನ್ನು ನೇಮಿಸಿ ಹುಡುಗರು ಮುಗಿಸಿ ಬಂದ ನಂತರ ವಿದ್ಯಾರ್ಥಿಗಳಿಗೆ ಅವಕಾಶ ಕೊಡಬಹುದಿತ್ತು. ಕಿಶೋರಾವಸ್ಥೆಯ ವಿದ್ಯಾಥಿಗಳಿಗೆ ಅವಕಾಶ ಕಲ್ಪಿಸಿರುವುದು ಟೀಕೆಗೆ ಒಳಗಾಗಿದೆ. ಆದರೆ, ಮ್ಯಾನೇಜ್‌ಮೆಂಟ್ ನಿರ್ಧಾರವನ್ನು (ಎಳೆ)ಪಡ್ಡೆಗಳು ಸಪೋರ್‍ಟ್ ಮಾಡಬಹುದು. ಕ್ಲಾಸ್‌ಗಿಂತ ಹೆಚ್ಚಾಗಿ ಇವರು ಟಾಯ್ಲೆಟ್‌ನಲ್ಲಿಯೇ ಕಾಲ ಕಳೆದರೂ ಅಚ್ಚರಿಯಿಲ್ಲ. ಕ್ಲಾಸ್‌ಗೆ ಚೆಕ್ಕರ್ ಹೊಡೆದರೂ ಲೆಟ್ರಿನ್‌ಗೆ ತಪ್ಪದೆ ಹಾಜರಿ ಹಾಕಬಹುದು. ಮಡಿ ಹುಡುಗಿಯರಿಗಿಂತಲೂ ಮಿಡಿ ಹುಡುಗಿಯರು ಹೆಚ್ಚಾಗಿ ಇಂತಹ ಲೆಟ್ರಿನ್‌ಗಳಲ್ಲಿ ಕಾಣಿಸಬಹುದು. ಒಟ್ಟಿನಲ್ಲಿ ಸಂಡಾಸ ಕೇಂದ್ರಗಳು ಪಡ್ಡೆ ಕಿಶೋರರಲ್ಲಿ ‘ಮಂದಹಾಸ’ ತರಿಸುವುದು ಖಚಿತವಾಗಿದೆ. ನಮ್ಮ ಶಾಲೆಗಳಲ್ಲೂ ಇಂತಹ ‘ಲೆಟ್ರಿನ್ ಶಾಲೆಗಳು’ ಬಂದರೆ….ಕುತೂಹಲವೇ ಎಲ್ಲವೂ ಆಗಿರುವ ವಯಸ್ಸಿನಲ್ಲಿ ಕೋಲಾಹಲವಾಗುವುದು ಖಚಿತ.
ಹಳಿಗಳ ಮೇಲೆ ಶಯನ

ನಮ್ಮಲ್ಲಿ ರೈಲ್ವೆ ಹಳಿಗಳ ಮೇಲೆ ಮಲಗುವುದಿರಲಿ… ಕಾಲಿಗೆ ಚಪ್ಪಲಿ ಧರಿಸಿಕೊಂಡು, ಮೂಗು ಮುಚ್ಚಿಕೊಂಡು ಅಡ್ಡಾಡುವುದೇ ಕಷ್ಟ. ಅಷ್ಟು ಚೆನ್ನಾಗಿ ನಮ್ಮ ರೈಲ್ವೇ ಹಳಿಗಳನ್ನು ಇರಿಸಿಕೊಂಡಿರುತ್ತೇವೆ. ಅಂತಿರುವಾಗಿ ಇವರು ಲಕ್ಷಣವಾಗಿ ಮಲಗಿದ್ದಾರೆ ನೋಡಿ… ಏನು… ರೈಲ್ವೆ ತಡೆ ಚಳುವಳಿ ಮಾಡುತ್ತಿದ್ದಾರಾ? ಇಲ್ಲ. ಇವರೆಲ್ಲಾ…ರೋಗ ನಿವಾರಣಾ ಶಿಬಿರದಲ್ಲಿದ್ದಾರೆ. ಹಳಿಗಳ ಮೇಲೆ ಮಲಗಿದರೆ ಮಧುಮೇಹ, ಬಿಪಿ, ಆರ್ಥರೈಟಿಸ್… ಕಾಯಿಲೆಗಳು ವಾಸಿಯಾಗಿರುವುದಾಗಿ ಅನೇಕರು ‘ಗುಣ’ಗಾನ ಮಾಡುತ್ತಿದ್ದಾರೆ. ಮಾತ್ರೆ, ಇಂಜೆಕ್ಷನ್‌ಗಳಿಗೆ ಕಾಯಿಲೆಗಳು ಗುಣವಾಗುವುದಿಲ್ಲ. ಅಂತಿರುವಾಗ ರೈಲ್ವೆ ಹಳಿಗಳ ಮೇಲೆ ಮಲಗಿದರೆ ಗುಣವಾಗುವುದಾದರೂ ಹೇಗೆ? ಇಂತಹ ನಂಬಿಕೆಗಳಿಗೆ ವೈಜ್ಞಾನಿಕ ಪುರಾವೆಗಳಿಲ್ಲ. ಆದರೂ ಇಂಡೋನೇಷ್ಯದ ಜಕಾರ್ತದದಲ್ಲಿ ‘ಹಳಿ’ ನಂಬಿಕೆಯಿದೆ. ಇದೀಗ ಕಮ್ಯೂನಿಸ್ಟ್ ಚೈನಾ ದೇಶಕ್ಕೂ ಹಬ್ಬಿದೆ. ಎಲ್ಲಾ ಸರಿ ರೀ…ಒಂದುವೇಳೆ ಮಲಗಿದ್ದಾಗ ರೈಲು ಹರಿದು ಹೋದರೇ…? ಹಾಗಾಗದು. ಜೋಪಾನ ಮಾಡಿಕೊಂಡೇ ಶಯನ ಮಾಡುತ್ತಾರೆ.ಲೆಕ್ಕಾಚಾರ ಮೀರಿ ರೈಲು ಓಡಿದರೆ ಆಗ ರೋಗದ ಜೊತೆಗೆ ಪ್ರಾಣವೂ….ಈ ಅಪಘಾತ ಮತ್ತು ಹಳಿ ನಂಬಿಕೆಯ ಮೌಢ್ಯ ತಪ್ಪಿಸಲು ಏನು ಮಾಡಬೇಕು? ಸುಲಭ ನಮ್ಮ ನಮ್ಮ ಭಾರತೀಯ ರೈಲ್ವೆ ಟ್ರಾಕ್‌ಗಳ ರೀತಿಯಲ್ಲಿ ಜಕಾರ್ತದಲ್ಲೂ ಮಾಡಬೇಕು ಅಷ್ಟೇ!
ನೀರಾಹಾರ

ಆರೋಗ್ಯವಂತರಿಗೆ ಗರಿಷ್ಠ ನಿತ್ಯ ೫-೬ ಲೀಟರ್ ನೀರು ಸಾಕಾದೀತು. ಆದರೆ ಈತನಿಗೆ ಗಂಟೆಗೊಮ್ಮೆ ಕನಿಷ್ಠ ೧ ಲೀಟರ್ ನೀರು ಬೇಕೆ ಬೇಕು. ಇಲ್ಲಾ ಅಂದರೆ ಲೋ ಬಿ.ಪಿ. ಆಗಿ ತಲೆ ಸುತ್ತಿ ಬೀಳುತ್ತಾನೆ. ಹೀಗಾಗಿ ನಿತ್ಯ ಏನಿಲ್ಲವೆಂದರೂ ಸುಮಾರು ೨೦ ಲೀಟರ್ ನೀರು ಕುಡಿಯುತ್ತಾನೆ. ಈ ಪಾಟಿ ನೀರು ಕುಡಿಯುತ್ತಿದ್ದರೆ, ಅಷ್ಟೇ ಪ್ರಮಾಣದಲ್ಲಿ ನೀರು ಹೊರ ಹೋಗಲೇ ಬೇಕಲ್ಲವೇ? ಹೌದು! ಜಲಬಾಧೆಯ ಸಮಸ್ಯೆ ಸಹಜವಾಗಿಯೇ ಈತನನ್ನು ಕಾಡುತ್ತಿದೆ. ಗಂಟೆಗೊಮ್ಮೆ ಕುಡಿದ ನೀರು ಮೂತ್ರದ ರೂಪದಲ್ಲಿ ಹರಿದು ಹೋಗುತ್ತಿದೆ. ಈ ಪಾಟಿ ನೀರು ಕುಡಿಯುವುದರಿಂದ ಸೇವಿಸುವ ಆಹಾರದ ಪ್ರಮಾಣವೂ ಅತ್ಯಲ್ಪದ್ದು. ಗಡದ್ದಾಗಿ ನಿದ್ದೆ ಮಾಡಿದರೆ ಕೊಂಚವಾದರೂ ಈತನ ನೀರಿನ ದಾಹ ಕಮ್ಮಿಯಾಗಬಹುದಲ್ಲವೇ? ಇಲ್ಲ, ಸವಿ ನಿದ್ದೆಯಲ್ಲೂ ಬಾಯಾರಿಕೆ ಮೂತ್ರ ವಿಸರ್ಜನೆಯ ಬಾಧೆ ಇವನ ಕಾಡುತ್ತಿದೆ.
ಎಲ್ಲಾ ಓ.ಕೆ. ಈ ಸಮಸ್ಯೆಯಾಕೆ? ಅತ್ಯಂತ ಅಪರೂಪದ ಮಧುಮೇಹದ ರೋಗದಿಂದ ಬಳಲುತ್ತಿರುವುದೇ ಇದಕ್ಕೆ ಕಾರಣವೆನ್ನುತ್ತಾರೆ ವೈದ್ಯರು. ನೀರು ಕುಡಿಡಯುವುದೇ ಇವನಿಗೆ ಪರಿ(ಆ)ಹಾರ ಎಲ್ಲವೂ ಆಗಿದೆ. ನೀರೇ ಆಹಾರ ಮಾಡಿಕೊಂಡಿರುವ ಜರ್ಮನಿಯ ಮಾರ್‍ಕ್ ಊಬರ್‌ಕೋಸ್ಟ್‌ನನ್ನು ನೀರಾಹಾರಿ ಎನ್ನಲು ಅಡ್ಡಿಯಿಲ್ಲ. ವೃತ್ತಿಯಲ್ಲಿ ಆರ್ಕಿಟೆಕ್ಟ್ ಎಂಜಿನಿಯರ್ ಆಗಿರುವ ಈತನಿಗೆ ಕಸ್ಟಮರ್‌ಗಳ ಕಾಟಕ್ಕಿಂತಲೂ ತನ್ನ ಜಲ-ನಿರ್ಜಲದ್ದೇ ವಿಚಿತ್ರ ಸಮಸ್ಯೆಯಾಗಿದೆ. ನೀರು ಕುಡಿಯೋದು ವಿಚಿತ್ರ ಕಾಯಿಲೆಯಾ? ಗಂಟೆಗೊಮ್ಮೆ ನೀರು ಕುಡಿಯುವುದು ನಿಜಕ್ಕೂ ಹಿಂಸೆ. ಒಂದೆರಡು ದಿನಕ್ಕಾದರೆ ಈ ಸಮಸ್ಯೆ ಹೇಗೋ ನಿಬಾಯಿಸಬಹುದು. ಆದರೆ ಜೀವನ ಪರ್ಯಂತ ಏಗುವುದೆಂದರೆ ಹುಡುಗಾಟವಲ್ಲ… ಶಿಕ್ಷೆಯಾಗುತ್ತದೆ.
ಚಪ್ಪಟ್ಟೆ ಭೂಮಿ ಅರಿಯಲು ಉದ್ದನೆಯ ರಾಕೆಟ್!

ಭೂಮಿ ಹೇಗಿದೆ ಎಂದರೆ…. ಗುಂಡಗಿದೆ ಎಂದು ‘ಗುಂಡಿ’ನ ಅಂಕಗಳಿಸುವ ಗುಂಡ್ರುಗೋವಿ ಕೂಡ ಉತ್ತರ ನೀಡುತ್ತಾನೆ. ಹಲವು ನೂರು ವರ್ಷಗಳ ಹಿಂದೆಯೇ ಭೂಮಿ ಗುಂಡಗಿದೆ ಎಂಬ ಸತ್ಯದ ಸಾಕ್ಷಾತ್ಕಾರವಾಗಿತ್ತು. ಆದರೂ ನಾಸಾದವರು ಅಂದರೆ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯವರು ಭೂಮಿ ಗುಂಡಗಿದೆ ಎಂದು ಹೇಳಿದ್ದರು. ಅಂತರಿಕ್ಷಕ್ಕೆ ಹಾರಿ ಅಲ್ಲಿಂದ ಛಾಯಾಚಿತ್ರಗಳನ್ನು ಕೂಡ ಕಳುಹಿಸಿದ್ದರು. ನೇರ ಚಂದ್ರನಿಗೆ ಹಾರಿ, ಅಲ್ಲಿಂದಲೂ ದುಂಡನೆಯ ಭೂಮಿಯ ಚಿತ್ರಗಳನ್ನು ಕಳಹಿಸಿದ್ದರು. ಆದರೂ ‘ಫ್ಲಾಟ್ ಅರ್ಥ್’ ಎಂಬ ಅಮೆರಿಕದ ಸಂಸ್ಥೆಗೆ ಮಾತ್ರ ಈ ವಿಚಾರದಲ್ಲಿ ನಂಬಿಕೆಯಿಲ್ಲ. ನಾಸಾ ಹೇಳುವುದೆಲ್ಲಾ ಸತ್ಯವಲ್ಲ ಎಂದು ಅವರು ನಿರೂಪಿಸಲು ಹರಸಾಹಸ ಮಾಡುತ್ತಿದ್ದಾರೆ. ಥೇಟ್ ನಾಸಾದವರಂತೆ ಬಾಹ್ಯಾಕಾಶಕ್ಕೆ ಹಾರಿ ಅಲ್ಲಿಂದ ಚಪ್ಪಟ್ಟೆ ಭೂಮಿಯ ಚಿತ್ರ ತೆಗೆದುಕಳುಹಿಸುವುದು ಇವರ ಉದ್ದೇಶ.
ಅದಕ್ಕಾಗಿ ಮೈಕ್ ಹೂಜೆಸ್ ರಾಕೆಟ್ ಮಾಡಿದ್ದಾನೆ. ಅಂತರಿಕ್ಷಕ್ಕೆ ಹಾರಿ ಭೂಮಿ ಚಪ್ಪಟ್ಟೆಯಾಗಿರುವುದನ್ನು ಅರಿಯುತ್ತಾನಂತೆ.! ಇಂತಹ ಹುಚ್ಚಾಟ ಇದೇ ಮೊದಲಲ್ಲ. ೨೦೧೪ರಲ್ಲೂ ರಾಕೆಟ್ ಮಾಡಿದ್ದ. ಅರ್ಧಕ್ಕೆ ಹಾರಿ ಉದುರಿ ಬಿದ್ದಿತ್ತು. ಈಗ ಪೂರ್ಣ ಪ್ರಮಾಣದ ರಾಕೆಟ್ ಹಾರಿಸುವ ಉಮೇದು ಈತನದ್ದು. ‘ಭೂಮಿ’ಯ ಆಕಾರವನ್ನೇ ನಂಬದ ‘ಫ್ಲಾಟ್ ಅರ್ಥ್’ನವರು ಅಂತರಿಕ್ಷ ಇದೆ ಎಂದು ಹೇಗೆ ನಂಬಿದ್ದಾರೆ? ಗೊತ್ತಿಲ್ಲ. ನಾಸಾ ಹುಚ್ಚಾಟವನ್ನು ಬಯಲು ಮಾಡಲು ‘ಫ್ಲಾಟ್ ಅರ್ಥ್’ ಎಂಬ ಹುಚ್ಚರು ಹೊರಟಿದ್ದಾರೆ. ಅಂದಹಾಗೆ ಫ್ಲಾಟ್ ಅರ್ಥ್‌ನವರಿಗೆ ನಾಸಾ ವಿಜ್ಞಾನಿಗಳು ಚಂದ್ರನ ಅಂಗಳದಲ್ಲಿ ಕಾಲಿರಿಸಿದ್ದರೆಂಬ ಸಂಗತಿಯನ್ನೂ ಒಪ್ಪುವುದಿಲ್ಲ. ಅದೆಲ್ಲವನ್ನೂ ಅರಿಯಲು ಮೊದಲಿಗೆ ಬಾಹ್ಯಾಕಾಶಕ್ಕೆ ಹಾರಿ, ಭೂಮಿ ಆಕಾರ ತಿಳಿಯುವ ತವಕ. ಹೀಗಾಗಿ ಉದ್ದನೆಯ ರಾಕೆಟ್ ಹಾರಿಸಲು ಹೊರಟಿದ್ದಾರೆ.
ಸ್ತ್ರೀ ಸಂತೆ

ನೂರು ಜುಟ್ಟು ಒಂದಾದರೂ ಎರಡು ಜಡೆ ಒಂದಾಗದು ಎಂಬ ಗಾದೆ ಸುಳ್ಳಾಗಿಸಿದೆ-ಮಣಿಪುರದ ಇಂಫಾಲ ನಗರದ ಈ ‘ಮದರ್‍ಸ್ ಮಾರ್‍ಕೆಟ್’! ಇಲ್ಲಿ ತರಕಾರಿ, ಮೀನು, ಮಾಂಸ- ಚಾಕುಚೂರಿಗಳು, ದಿನ ಬಳಕೆಯ ವಸ್ತುಗಳು, ದಿನಸಿ ಹೀಗೆ ಇಲ್ಲಿ ಅನೇಕವು ಲಭ್ಯ. ಸುಮಾರು ೪,೦೦೦ ಅಂಗಡಿಗಳಿವೆ. ಈ ಎಲ್ಲವನ್ನೂ ಮಹಿಳೆಯರೇ ನಿರ್ವಹಣೆ ಮಾಡುತ್ತಿರುವರು. ಅಂಗಡಿಯ ಮಾಲಕಿ, ಸೇವಕಿ, ಸಹಾಯಕಿ ಎಲ್ಲರೂ ಸ್ತ್ರೀಯರೇ! ಇಂಥಾದ್ದೊಂದು ಸ್ತ್ರೀ ಸಂತೆ ವಿಶ್ವದಲ್ಲಿಯೇ ಅಪರೂಪ. ಅಮೆರಿಕ, ಆಸ್ಟ್ರೇಲಿಯಗಳಲ್ಲಿ ಹೈಟೆಕ್ ಮಾಲ್‌ಗಳಲ್ಲಿ ಕೆಲವನ್ನು ಮಹಿಳೆಯರು ನಿರ್ವಹಿಸುತ್ತಿರುವರು. ಆದರೆ ಈ ರೀತಿ ಪರಿಪೂರ್ಣ ಸ್ತ್ರೀ ಸಂತೆ ಇಲ್ಲ. ಹೀಗಾಗಿ ಭಾರತದ ಮಣಿಪುರದ ಮಹಿಳಾಮಣಿಗಳ ಈ ಮಾರುಕಟ್ಟೆಗೆ ಜಾಗತಿಕ ಮನ್ನಣೆ ಕೂಡ ಇದೆ. ಅಷ್ಟೇ ಅಲ್ಲ ೫೦೦ ವರ್ಷಗಳ ಇತಿಹಾಸವಿದ್ದು ಏಷ್ಯಾದ ಬೃಹತ್ ಮಹಿಳಾ ಮಾರುಕಟ್ಟೆ ಎಂಬ ಕೀರ್ತಿ ಇದಕ್ಕುಂಟು.
ಪುರುಷ ಪ್ರಭಾವ ವ್ಯವಸ್ಥೆಯ ‘ಗಂಡ್ರು’ಗೋವಿಗಳು ಈ ಮಾರುಕಟ್ಟೆಯನ್ನು ಕಬಳಿಸಿ ಇಲ್ಲೊಂದು ಮಾಡ್ರನ್ ಮಾರುಕಟ್ಟೆ ಕಟ್ಟಲು ಹಲವು ಬಾರಿ ಯತ್ನ ಮಾಡಿದ್ದರು. ಸ್ಥಳೀಯ ರಾಜಕಾರಣಿಗಳೂ ಅವರ ಬೆನ್ನಿಗಿದ್ದರು. ಆದರೆ ಆಗೆಲ್ಲಾ ಇಲ್ಲಿನ ‘ಮಾತ್ರು’ಗಳು ಜಡೆ ಕಟ್ಟಿ ನಿಂತು, ಹೋರಾಡಿ ಗೆದ್ದಿದ್ದಾರೆ. ಮಹಿಳೆಯರೇ ನಡೆಸುವ ಈ ಮಾರುಕಟ್ಟೆಗೆ ಪುರುಷರಿಗೆ ಪ್ರವೇಶ ಉಂಟು… ಆದರೆ ಕಾಮಣ್ಣರು ತೆರಳಿದರೆ…ಧರ್ಮದೇಟು ಖಚಿತ
ಹೊಸಗಾದೆ: ‘ಮಹಿಳಾ ಶಕ್ತಿಕ್ಕೆ ಮಾರುಕಟ್ಟೆ ಉಳಿದೀತು-ಸ್ತ್ರೀ ಶಕ್ತಿಗೆ ಸಂತೆ ಅರಳೀತು’
‘ಬೋಗಭಾಗ್ಯ’

ಹಠಯೋಗ, ರಾಜಯೋಗ, ಇವೆಲ್ಲಾ ಗೊತ್ತಿರೋದೆ… ಅದೇ ಬೀರ್ ಯೋಗ ಅಲಿಯಾಸ್ ‘ಬೋಗ.’ ಕನ್ನಡದಲ್ಲಿ ಬೇಕಿದ್ದರೆ ‘ಬೀಗ’ ಎನ್ನಲ್ಲು ಖಂಡಿತ ಅಡ್ಡಿಲ್ಲ. ಏನದು ‘ಬೀಗ’ ಇಲ್ಲಿದೆ… ಯೋಗದ ವ್ಯಾಯಾಮಕ್ಕೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಯೋಗಕ್ಕೆ ಬೀರ್ ಮಿಕ್ಸ್ ಮಾಡಿದ್ದಾರೆ. ಬೀರ್ + ಯೋಗ ಸೇರಿ (ಃeeಡಿ +ಙogಚಿ = ಃogಚಿ)ಬೋಗ ಆಗಿದೆ. ಕನ್ನಡದಲ್ಲಿ ಹೇಳಬೇಕೆಂದರೆ ಬೀರ್ +ಯೋಗ = ಬೀಗ! ಎನ್ನಬಹುದು. ಬೀರ್ ಬಾಟಲಿಯನ್ನು ಸಮತೋಲನದಲ್ಲಿ ಬಳಸುವ ಕಲೆ ಅಥವಾ ವ್ಯಾಯಾಮವಿದು. ತಲೆಯ ಮೇಲೆ, ಕೈಗಳಲ್ಲಿ, ಹೀಗೆ ಬೀರ್‌ಬಾಟಲಿಯನ್ನು ಬ್ಯಾಲೆನ್ಸ್ ಕಾಯ್ದುಕೊಡು ವರ್ಕ್‌ಔಟ್ ಮಾಡಬೇಕು. ಬಾಟಲಿ ಬೀಳುವಂತಿಲ್ಲ. ವ್ಯಾಯಾಮ ಮಾಡುವವನೇ ಬಿದ್ದರೆ? ಅಡ್ಡಿಯಿಲ್ಲ!
ಯೋಗ ಮಾಡುತ್ತಾ ಮಧ್ಯ ‘ಮದ್ಯೆ’ ಬೀರ್ ಹೀರಿದರೆ? ಅಭ್ಯಂತರವಿಲ್ಲ. ಕುಡಿದು ತೂರಾಡಿದರೆ? ಅದನ್ನೂ ವ್ಯಾಯಾಮವೆನ್ನಬಹುದು! ಬಿದ್ದು ಮಲಗಿದರೆ ‘ಶವಾಸನ’ ಎನಡ್ನಬಹುದು! ಅರ್ಧಂಬರ್ಧ ಕುಡಿದು ನಾಯಿಯಂತೆ ಅಬ್ಬರಿಸಿದರೆ ‘ಶ್ವಾನಾಸನ’ ಎನ್ನಬಹುದು. ಸಿಂಹದಂತೆ ಘರ್ಜಿಸಿದರೆ ‘ಸಿಂಹಾಸನ’ ಎನ್ನುಬಹುದು… ಒಟ್ಟಿನಲ್ಲಿ ಯೋಗಾ ಮಾಡಿ ಎನ್ನುತ್ತಾರೆ. ‘ಬೋಗಭಾಗ್ಯ’ ಅನುಭವಿಸಲು ಜರ್ಮನಿಯ ಬರ್ಲಿನ್‌ಗೆ ತೆರಳಬೇಕು. ನಮ್ಮ ಕರುನಾಡು, ಯೋಗದ ಬೀಡಿಗೆ ಈ ಬೋಗ (ಬೀಗ)ವನ್ನು ಯಾರಾದರು ತಂದರೆ ಅವರಿಗೆ ಏನನ್ನಬಹುದು?ಬೀಗರು! ಮುಂದಿನ ವರ್ಷದ ಜೂನ್ ೨೧ರ ಯೋಗಾ ದಿನಕ್ಕೆ ನಮ್ಮಲ್ಲೂ ಇಂತಹ ಬೀಗರು ಬಂದರೆ ನಾ ಮುಂದು ತಾ ಮುಂದು ಎಂದು ‘ಗುಂಡು’ ಹಾಕುವ ಆಸಾಮಿಗಳೆಲ್ಲಾ ಬರಬಹುದು.