ಹಿಮಾಲಯ ಅಂತೊಂದು ಹೆಸರು ಕಿವಿ ಸೋಕಿದರೆ ಸ್ಫಟಿಕಸದೃಷ ದೈವೀಕ ಭಾವವೊಂದು ಮೈ ಮನಸುಗಳನ್ನು ಆವಚರಿಸಿಕೊಳ್ಳುತ್ತೆ. ಭಾರತ ಹೇಳಿಕೇಳಿ ಅಧ್ಯಾತ್ಮಿಕ ನಂಬಿಕೆಗಳ ತವರು. ಇಲ್ಲಿ ನದಿ ಸರೋವರ ಬೆಟ್ಟ ಗುಡ್ಡಗಳನ್ನೆಲ್ಲ ದೇವರೆಂದೇ ಭಾವಿಸಲಾಗುತ್ತೆ. ಪ್ರಕೃತಿಯನ್ನೂ ಕೂಡಾ ಆರಾಧಿಸಲಾಗುತ್ತೆ. ವಿಜ್ಞಾನ ಅದೇನೇ ಹೇಳಿದರೂ ಕೂಡಾ ಈ ಜಗತ್ತಿನ ಚರಾಚರಗಳೂ ದೈವ ಸೃಷ್ಟಿ ಎಂಬುದನ್ನು ಭಾರತದ ಪರಂಪರೆ ಬಲವಾಗಿಯೇ ಬೋಧಿಸುತ್ತಾ ಬಂದಿದೆ. ಅಂಥಾ ವಾತಾವರಣದಲ್ಲಿಯೇ ಬೆಳೆದು ಬಂದ ಭಾರತೀಯರೆಲ್ಲರೂ ಇಂಥಾ ಗಾಢ ವಾದ ನಂಬಿಕೆಗಳಿಂದ ಬಹುಶಃ ಎಂದಿಗೂ ಕಳಚಿಕೊಂಡು ಬದುಕೋದು ಸಾಧ್ಯವಿಲ್ಲವೇನೋ… ಹೀಗಿರುವಾಗ ಹೆಕ್ಟೇರು ಗಟ್ಟಲೆ ಭೂಭಾಗದಲ್ಲಿ ಮೈಚಾಚಿಕೊಂಡು, ಮೈ ತುಂಬಾ ಹಿಮ ಹೊದ್ದು ನಿಂತಿರುವ ಹಿಮಾಲಯ ಪರ್ವತದ ಬಗ್ಗೆ ನಾನಾ ನಂಬಿಕೆ, ಪುರಾಣಗಳ ಭೂಮಿಕೆಯ ಕಥನಗಳು ಇಲ್ಲದಿರಲು ಸಾಧ್ಯವೇ?
ಹಿಮಾಲಯ ಎಂಬುದು ತಪೋಭೂಮಿ ಅಂತಲೇ ಭಾರತದ ಅಧ್ಯಾತ್ಮ ಜಗತ್ತು ಉಲ್ಲೇಖಿಸುತ್ತಾ ಬಂದಿದೆ. ವೇದ ಪುರಾಣಗಳೂ ಕೂಡಾ ಹಿಮಾಲಯದ ಮಹಿಮೆಗಳನ್ನು ಉಲ್ಲೇಕಿಸಿಕೊಂಡೇ ಮೈ ಕೈ ತುಂಬಿಕೊಂಡಿವೆ. ಹಿಮಾಲಯದಲ್ಲಿ ಘೋರ ತಪಸ್ಸು ಮಾಡಿ ಸಾಕ್ಷಾತ್ಕಾರ ಪಡೆದುಕೊಂಡ ಅನೇಕಾನೇಕ ಋಷಿ ಮುನಿಗಳ ಕಥೆಗಳೂ ಇದ್ದಾವೆ. ಬಹುಶಃ ಹಿಮಾಲಯವನ್ನು ಹೊರತಾಗಿಸಿಕೊಂಡ ಪುರಾಣ ಪುಣ್ಯ ಕಥೆಗಳು ವಿರಳ. ಈವತ್ತಿಗೆ ಜಗತ್ತು ಹಲವಾರು ರೂಪಾಂತರ, ಮನ್ವಂತರಗಳೊಂದಿಗೆ ಆಧುನಿಕತೆಯತ್ತ ಮುಖ ಮಾಡಿಕೊಂಡಿದೆ. ದೈವೀಕ ನಂಬಿಕೆಗಳೂ ಕೂಡಾ ಕೊಂಚ ಸಡಿಲಗೊಂಡಂತೆ ಕಾಣಿಸುತ್ತಿದೆ. ಆಧುನಿಕ ಜಗತ್ತಿನ ಕೊಡುಗೆ ಎಂಬಂತೆ ಜಾಗತಿಕ ತಾಪಮಾನದ ಪರಿಣಾಮ ಜಗತ್ತಿನ ಎಲ್ಲ ದೇಶಗಳ ಮೇಲೂ ಆಗುತ್ತಿದೆ. ಇದರಿಂದಾಗಿ ಹಿಮಾಲಯದ ಹಿಮವೂ ಕೂಡಾ ಕರಗಿ ನೀರಾಗಿ, ಬೋಳು ಗುಡ್ಡ ಮಾತ್ರವೇ ಉಳಿದುಕೊಳ್ಳಬಹುದೇನೋ ಎಂಬಂಥಾ ಭಯವೂ ಮೂಡಿಕೊಂಡಿದೆ. ಆದರೆ, ಹಿಮ ಕರಗಿದರೂ ಬಯಲಾಗದಂಥಾ ಭಯಾನಕ ನಿಗೂಢಗಳಿಂದ ಹಿಮಾಲಯ ಆವೃತವಾಗಿದೆ!
ಅದೊಂದು ಅಧ್ಯಾತ್ಮಿಕ ಸೆಳೆತ
ಈವತ್ತಿಗೆ ಧಾರ್ಮಿಕ ನಂಬಿಕೆಗಳು ಚಹರೆ ಬದಲಿಸಿಕೊಂಡಿವೆ. ತಾಜಾತನದ ನಂಬಿಕೆಗಳನ್ನೆಲ್ಲ ಕಲುಷಿತಗೊಳಿಸುವಂಥಾ ಒಂದಷ್ಟು ವಿದ್ಯಮಾನಗಳು ಕೂಡಾ ನಡೆಯುತ್ತಿರೋದು ಸತ್ಯ. ಇದೆಲ್ಲವೂ ಆಧುನಿಕ ಜಗತ್ತು ಎಲ್ಲವನ್ನೂ ವ್ಯವಹಾರದ ಸರಕಾಗಿಸಿಕೊಂಡಿರೋದರ ಅಡ್ಡ ಪರಿಣಾಮ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ, ಇಂಥಾ ಅಡೆತಡೆಗಳಾಚೆಗೂ ಕೂಡಾ ಈ ನೆಲದಲ್ಲಿ ಅಧ್ಯಾತ್ಮಿಕ ಸೆಳೆ ಕಮ್ಮಿಯಾಗಿಲ್ಲ. ಹಿಮಾಲಯ ಪರ್ವತ ಅದೆಷ್ಟು ಅಚಲವಾಗಿ ನಿಂತಿದೆಯೋ ಅದೇ ತೆರನಾಗಿ ಇಂಥಾ ನಂಬಿಕೆಗಳೂ ಕೂಡಾ ಬೇರೂರಿಕೊಂಡಿವೆ. ಅಂಥಾ ಎಲ್ಲ ನಂಬಿಕೆಗಳ ಕೇಂದ್ರ ಬಿಂದುವಿನಂತಿರುವ ಮಾಯೆ ಹಿಮಾಲಯ ಪರ್ವತ. ಅದು ವೈರಾಗ್ಯದ ಬಿಂದುವೂ ಹೌದು. ಸಾಕ್ಷಾತ್ಕಾರದ ಚಮತ್ಕಾರವೂ ಹೌದು.
ಆದರೆ, ಈ ಕ್ಷಣಕ್ಕೂ ಹಿಮಾಲಯವನ್ನು ಒಂದಷ್ಟು ಪದಗಳಲ್ಲಿ ಹಿಡಿದಿಡೋದು ಕಷ್ಟ. ಯಾಕೆಂದರೆ, ಖುದ್ದು ಅದರೊಂದಿಗೆ ಜೀವನ ಪರ್ಯಂತ ಒಡನಾಡಿದ ಹಿಮಾಲಯನ್ ಸಾಧಕರಿಗೂ ಕೂಡಾ ಈ ಪರ್ವತಶ್ರೇಣಿ ಅಂದಾಜಿಗೆ ಸಿಕ್ಕಿಲ್ಲ. ಬಹುಶಃ ಈ ಭೂಮಿ ಇರುವವರೆಗೂ ಹಿಮಾಲಯವೆಂಬ ಅದ್ಭುತ ಯಾರ ಅಂಕೆಗೂ ಸಿಗುವುದಿಲ್ಲ. ಅದನ್ನು ಸಂಪೂರ್ಣವಾಗಿ ತೆರೆದಿಡಲು ಕೂಡಾ ಸಾಧ್ಯವಿಲ್ಲ. ಇದುವರೆಗೂ ಆಧುನಿಕ ಜಗತ್ತಿನ ಒಂದಷ್ಟು ಮಂದಿ ಸಂತರು ಎಲ್ಲವನ್ನೂ ತೊರೆದು ಹಿಮಾಲಯದ ಮಡಿಲು ಸೇರಿಕೊಂಡಿದ್ದಾರೆ. ಅಲ್ಲೇ ತಪಸ್ಸಿನಂಥಾ ಅಧ್ಯಾತ್ಮಿಕ ಸಾಧನೆ ಮಾಡಿದ್ದಾರೆ. ಅಂಥಾ ಮಹಾನ್ ಸಾಧಕರ ಪಾಲಿಗೂ ನಿಗೂಢವಾಗಿಯೇ ಉಳಿದುಕೊಂಡಿರೋದು ಹಿಮಾಲಯದ ನಿಜವಾದ ರಹಸ್ಯ!
ಎಂತೆಂಥಾ ನಿಗೂಢ
ಹಿಮಾಲಯದ ಬಗ್ಗೆ ಅಧ್ಯಾತ್ಮಿಕ ಅನುಭೂತಿ ಹೊಂದಿರುವ ಕಂತೆಗಟ್ಟಲೆ ಕಥೆಗಳಿವೆ. ಅವೆಲ್ಲವನ್ನೂ ಈ ನೆಲದ ಜನ ಕಣ್ಣಿಗೊತ್ತಿಕೊಂಡು ಎದೆಗಿಳಿಸಿಕೊಂಡಿದ್ದಾರೆ. ಮತ್ತೊಂದಷ್ಟು ವಿಚಾರಗಳನ್ನು ಬದುಕಿನ ಭಾಗವಾಗಿಸಿಕೊಂಡಿದ್ದಾರೆ. ಇದೆಲ್ಲವೂ ಪುರಾಣ ಕಾಲದ ನಂಬಿಕೆಗಳಾದವು. ಇದು ಆಧುನಿಕ ಯುಗ. ಇದರ ಭರಾಟೆಯಲ್ಲಿ ಯಾವ ನಿಗೂಢಗಳೂ ಕೂಡಾ ಈಗ ನಮ್ಮೊಳಗೊಂದು ಬೆರಗು ಉಳಿಸಿಲ್ಲ. ಸೋಶಿಯಲ್ ಮೀಡಿಯಾ ಮಂದಿ ಅದನ್ನು ದಿಕ್ಕು ದಿಕ್ಕುಗಳಿಂದ್ ಬಗೆ ಬಗೆದು ಬಯಲಾಗಿಸುತ್ತಿದ್ದಾರೆ. ಸುಮ್ಮನೊಮ್ಮೆ ಆಲೋಚಿಸಿ ನೋಡಿ, ಸೋಶಿಯಲ್ ಮೀಡಿಯ ಕ್ಯಾಮೆರಾಗಳು ಹಿಮಾಲಯದತ್ತ ದೃಷ್ಟಿ ನೆಡೇದು ವಿರಳ. ಹೆಚ್ಚೆಂದರೆ, ಕ್ಯಾಮೆರಾ ಫೋಕಸ್ಸು ಹಿಮಾಲಯದ ಒಂದಷ್ಟು ಪಾರ್ಶ್ವಗಳ ಮೈ ಸವರಿ ಸುಸ್ತೆದ್ದು ಹೋಗುತ್ತವೆ.
ಅದಕ್ಕೆ ಕಾರಣವಾಗಿರೋದು ಹಿಮಾಲಯದ ತಪ್ಪಲಿನಲ್ಲಿರುವ ನಿಗೂಢ ಸ್ಥಳಗಳು. ಈವತ್ತಿಗೆ ದೇವರು ದಿಂಡಿರು ಸೇರಿದಂತೆ ಯಾವ ಅಧ್ಯಾತ್ಮಿಕ ನಂಕೆಗಳು ಇಲ್ಲದವರೂ ಕೂಡಾ ಅಂಥಾ ನಿಗೂಢಗಳನ್ನು ಬೇಧಿಸುವ ತಂಟೆಗೆ ಹೋಗುತ್ತಿಲ್ಲ. ಯಾಕೆಂದರೆ, ಅಂಥಾ ಹಿಮಾಲಯನ್ ನಿಗೂಢಗಳನ್ನು ಇಲ್ಲ ಅನ್ನುವ, ಮೂಢ ನಂಬಿಕೆ ಅಂತ ಅಲ್ಲಗಳೆಯುವ ಧೈರ್ಯ ಬಹುತೇಕ ಯಾರಲ್ಲಿಯೂ ಇಲ್ಲ. ಯಾಕಂದ್ರೆ, ಅಲ್ಲಿರೋದು ಭ ರಮೆಯಿಂದ ಸೃಷ್ಟಿಯಾದ ಅಚ್ಚರಿಯಲ್ಲ. ಅದು ಕಣ್ಣೆದುರು ನಿಲ್ಲಬಲ್ಲ ನಿಗೂಢಗಳು. ಈವತ್ತಿಗೂ ಹಿಮಾಲಯದ ಒಂದಷ್ಟು ಭಾಗಕ್ಕೆ ಮಾತ್ರವೇ ಮಾನವ ಸ್ಪರ್ಶವಾಗಿದೆ. ಬಹುಪಾಲಿ ಭಾಗಕ್ಕೆ ಮಂದಿ ಕಾಲಿಡಲೂ ಅಂಜುತ್ತಾರೆ. ಎಲ್ಲ ಅಂಥಾ ನಿಗೂಊಢಗಳಲ್ಲಿ ಕಳೆದು ಹೋಗಬೇಕಾಗುತ್ತೋ, ಜೀವಕ್ಕೇ ಆಪತ್ತು ಬಂದು ಬಿಡುತ್ತೋ ಎಂಬಂಥಾ ಭಯ ಎಲ್ಲರಲ್ಲಿದೆ!
ಅದು ಅಚ್ಚರಿಗಳ ಆಗರ
ಹಿಮಾಲಯ ಅಂದರೆ ಆಕಾಶದೆತ್ತರಕ್ಕೆ ಬೆಳೆದು ನಿಂತ ಹಿಮಾವೃತ ಪರ್ವತ ಶ್ರೇಣಿ ಅಂತೊಂದು ನಂಬಿಕೆ ಬಹಳಷ್ಟು ಜನರಲ್ಲಿದೆ. ಆದರೆ ಅದರಾಚೆಗೂ ಅದರ ಸೆಳೆತಗಳು ಹಬ್ಬಿಕೊಂಡಿದ್ದಾವೆ. ಬರಿಗಣ್ಣಿಗೆ ದಿಟ್ಟಿಸಲಾರದಂತೆ ತಲೆ ಎತ್ತಿ ನಿಂತ ಪರ್ವತ ಶ್ರೇಣಿ, ಅದರ ಇಕ್ಕೆಲಗಳಲ್ಲಿಯೇ ತಾಜಾತನದಿಂದ ಹಬ್ಬಿಕೊಂಡಿರುವಂಥಾ ಸರೋವರಗಳು, ಅಲ್ಲಲ್ಲಿ ಕಾಣಿಸುವ ವಿಶಿಷ್ಟವಾದ ವಿನ್ಯಾಸದ ಮನೆಗಳು ಮತ್ತು ಎಂಥವರನ್ನೂ ಒಂದರೆಕ್ಷಣ ಬೇರೆ ಲೋಕಕ್ಕೆ ಹೋದಂಥಾ ಭಾವ ಮೂಡಿಸಬಲ್ಲ ಗುಡಿಗಳು… ನಿಖರವಾಗಿ ಹೇಳಬೇಕೆಂದರೆ, ಹಿಮಾಲಯ ಪರ್ವತ ಶ್ರೇಣಿ ಅನ್ನೋದು ನಿಜಕ್ಕೂ ಅಚ್ಚರಿಗಳ ಆಗರ.
ಹೀಗೆ ಹಿಮಾಲಯದ ಹೊರ ಮೈ ಮೇಲೆ ಕಾಣಿಸುವ ಸಾವಿರ ಪಾಲು ಅಚ್ಚರಿಗಳು ಹಿಮಾಲಯ ಪರ್ವತ ಶ್ರೇಣಿಯನ್ನು ಆವರಿಸಿಕೊಂಡಿವೆ. ಅಂಥಾ ಅನೇಕ ರಹಸ್ಯ ಸ್ಥಳಗಳಿಗೆ ಮನುಷ್ಯರ ಪ್ರವೇಶವಾಗಿದೆ. ಮತ್ತೊಂದಷ್ಟು ಪೌರಾಣಿಕ ಹಿನ್ನೆಲೆ ಹೊಂದಿರುಉವ ಸ್ಥಳಗಳೂ ಇದ್ದಾವೆ. ಆದರೆ, ಅದನ್ನು ಹುಡುಕಿ ಹೊರಡುವ, ಅದರೊಳಗೆ ಪ್ರವೇಶಿಸುವ ಧೈರ್ಯ ಮಾತ್ರ ಇದ್ದಂತಿಲ್ಲ. ಅಂತೂ ಆಧುನಿಕ ಜಗತ್ತು ಹಿಮದ ರಾಶಿಯಂತಿರುವ ಈ ಪರ್ವತ ಶ್ರೇಣಿಯೊಳಗಿನ ನಿಗೂಢಗಳನ್ನು ಹುಡುಕಲು ಶತಮಾನಗಳ ಕಾಲ ಶ್ರಮಿಸಿದೆ. ಈ ಸುದೀರ್ಘ ಕಾಲಾವಧಿಯ ನಿರಂತರ ಪ್ರಯತ್ನದ ಫಲವಾಗಿ ಒಂದಷ್ಟು ರಹಸ್ಯ ಸ್ಥಳಗಳು ಪತ್ತೆಯಾಗಿವೆ. ಚಾರಣಿಗರು, ಸಾಹಸ ಪ್ರವಾಸ ಪ್ರಿಯರನ್ನು ಅಂಥಾ ಕೆಲ ಜಾಗಗಳು ಸೆಳೆಯುತ್ತಾ ಬಂದಿವೆ.
ಅದು ಅದ್ಭುತ ಸರೋವರ
ಹಿಮಾಲಯ ಪರ್ವತವೆಂದರೆ ಬರೀ ಬೆಟ್ಟವಷ್ಟೇ ಅಂತಂದುಕೊಂಡಿವರುವವರ ಸಾಕಷ್ಟಿದ್ದಾರೆ. ಆದರೆ ಈ ಬೆಟ್ಟದ ಮೈ ತುಂಬಾ ಅನೇಕ ರಮಣೀಯ ತಾಣಗಳಿದ್ದಾವೆ. ಅದರ ಒಡಲಲ್ಲಿ ರಹಸ್ಯಗಳದ್ದೊಂದು ನಿಕ್ಷೇಪವೇ ಇರುವುದು ಸುಳ್ಳಲ್ಲ. ಹೀಮಾಲಯಕ್ಕೆ ಯಾರೇ ಹೋದರೂ ಯಾವ ಕಾರಣಕ್ಕೂ ಮಿಸ್ ಮಾಡಿಕೊಳ್ಳಬಾರದ ಅಂಥಾದ್ದೊಂದು ವಿಷಿಷ್ಠ ಸ್ಥಳಗಳು ಅನೇಕವಿವೆ. ಆ ಪ್ರತೀ ಸ್ಥಳಗಳ ಹಿನ್ನೆಲೆಯಲ್ಲಿಯೂ ರಸವತ್ತಾದ, ಪುರಾಣಗಳೊಂದಿಗೆ ಹೊಸೆದುಕೊಂಡಿರುವ ಕಥೆಗಳಿದ್ದಾವೆ. ಆ ಸಾಲಿನಲ್ಲಿ ಹಿಮಾಲಯದ ಪ್ರಧಾನ ಆಕರ್ಷಣೆಯಾಗಿ ಗುರುತಿಸಿಕೊಂಡಿರುವ ಗುರು ಡೊಂಗ್ಮಾರ್ ಸರೋವರವಿದೆ. ಈ ಸರೋವರ ಎಂಥವರನ್ನಾದರೂ ಸೆಳೆಯುವ ಗುಣ ಮಾತ್ರವಲ್ಲದೇ, ಅನೇಕ ದೈವೀಕ ಪವಾಡಗಳ ಕೇಂದ್ರಬಿಂದುವಾಗಿಯೂ ಸ್ಥಾನ ಪಡೆದುಕೊಂಡಿದೆ.
ಇದಕ್ಕೆ ವಿಶ್ವದ ಅತೀ ಎತ್ತರದಲ್ಲಿರುವ ಸರೋವರ ಎಂಬ ಹೆಗ್ಗಳಿಕೆ ಇದೆ. ಭೂ ಮಟ್ಟದಿಂದ ಹದಿನೇಳೂ ಚಿಲ್ಲರೆ ಸಾವಿರ ಅಡಿಗಳಷ್ಟು ಎತ್ತರದಲ್ಲಿ ಈ ದೈವೀಕ ಸರೋವರವಿದೆ. ಇದರ ಒಟ್ಟಾರೆ ವಿಸ್ತಾರ ಕೂಡಾ ಅಚ್ಚರಿ ಮೂಡಿಸುವಂತಿದೆ. ಇದರ ತೀರ ಪ್ರದೇಶವೇ ಐದೂವರೆ ಕಿಲೋಮೀಟರುಗಳಷ್ಟು ದೂರ ಹಬ್ಬಿಕೊಂಡಿದೆ. ಇದು ಧಾರ್ಮಿಕವಾಗಿ ಸಿಖ್ ಮತ್ತು ಬೌದ್ಧರಿಗೆ ಅತ್ಯಂತ ಪವಿತ್ರ ಸ್ಥಳವಾಗಿಯೂ ದಾಖಲಾಗಿದೆ. ಇದರ ಹಿಂದೊಂದು ಕಥನವಿದೆ. ಅದೆಷ್ಟೋ ವರ್ಷಗಳ ಹಿಂದೆ ಸೃಷ್ಗಟಿಯಾಗಿದ್ದ ಈ ಸರೋವರ ಹೆಚ್ಚಿನ ಕಾಲಾವಧಿಯಲ್ಗಿ ಹೆಪ್ಪುಗಟ್ಟಿದ ಸ್ಥಿತಿಯಲ್ಲಿರುತ್ತಿತ್ತು. ಈ ಕಾರಣದಿಂದಲೇ ಅವಶ್ಯಕತೆ ಇದ್ದರೂ ಕೂಡಾ ಈ ಸರೋವರದ ನೀರು ಜನರಿಗೆ ಸಿಗುತ್ತಿರಲಿಲ್ಲ.
ಹೇಗಾದರೂ ಈ ನೀರು ಸದಾ ಕಾಲ ಸಿಗುವಂತಾಗಲೆಂಬುದು ಸ್ಥಳೀಯ ಜನರ ಆಸೆಯಾಗಿತ್ತು. ಹೀಗಿರುವಾಗಲೇ ಟಿಬೆಟ್ಟಿನಿಂದ ಬೌದ್ಧ ಗುರುಗಳೊಬ್ಬರು ಈ ಭಾಗಕ್ಕೆ ಬಂದಿದ್ದರಂತೆ. ಅವರನ್ನು ಸುತ್ತುವರೆದ ಈ ಭಾಗದ ಸ್ಥಳೀಯ ಮಂದಿ ಈ ಸರೋವರದ ನೀರು ಹೆಪ್ಪುಗಟ್ಟದಂತೆ ನೋಡಿಕೊಳ್ಳಬೇಕೆರಂದು ಬೇಡಿಕೆ ಇಟ್ಟಿದ್ದರು. ಒಟ್ಟಾರೆ ಆ ನೀರಿನ ಅವಶ್ಯಕತೆ ಮನಗಂಡ ಆ ಬೌದ್ಧ ಗುರುಗಳು ಆ ಸರೋವರದ ಹೆಪ್ಪುಗಟ್ಟಿದ ಪ್ರದೇಶದ ಮೇಲೆ ಕೈಯಿಟ್ಟಿದ್ದೇ ನೀರು ಜೀವಂತಿಕೆಯಿಂದ ನಳ ನಳಿಸಲಾರಂಭಿಸಿತ್ತು. ಆ ಬಳಿಕ ಆ ಸರೋವರವೆಂದೂ ಹೆಪ್ಪುಗಟ್ಟಿದ್ದೇ ಇಲ್ಲ. ಅಲ್ಲಿಂದೀಚೆಗೆ ಹನಿ ನೀರಿಗೆ ಪರದಾಡುತ್ತಿದ್ದ ಸ್ಥಳೀಯ ಜನರಿಗೆ ಯಥೇಚ್ಛವಾಗಿ ನೀರು ಸಿಗಲಾರಂಭಿಸಿತ್ತು. ಈ ನೀರನ್ನು ಕುಡಿದರೆ ಮಕ್ಕಳಾಗದ ದಂಪತಿಗಳಿಗೂ ಮಕ್ಕಳಾಗುತ್ತವೆಂಬ ನಂಬಿಕೆ ಇದೆ. ಇದರ ನೀರನ್ನು ತೀರ್ಥವೆಂದೇ ಪರಿಭಾವಿಸುವ ಜನ ಬಂಗಾಗೆಲ್ಲ ನೀರನ್ನು ಎತ್ತಿಕೊಂಡು ಹೋಗುತ್ತಾರೆ. ಆದರೆ ಇಲ್ಲಿ ರಾತ್ರಿ ಸಮಯದಲ್ಲಿ ತಂಗುವುದು ಸುರಕ್ಷಿತವಲ್ಲ. ಯಾಕೆಂದರೆ, ಈ ವಾತಾವರಣದಲ್ಲಿ ಆಮ್ಲಜನಕಕ್ಕೆ ತತ್ವಾರವಿದೆಯಂತೆ.
ವಿಚಿತ್ರ ಪರ್ವತ
ಹಿಮಾಲಯದ ಒಟ್ಟಾರೆ ವಿಸ್ತೀರ್ಣವನ್ನು ಸಲೀಸಾಗಿ ಅಂದಾಜಿಸುವುಉದು ನಿಜಕ್ಕೂ ಕಷ್ಟದ ಸಂಗತಿ. ಹಿಮಾಲಯ ವೆಂದರೆ ಏಕ ಬೆಟ್ಟ ಎಂಬಂಥಾ ಕಲ್ಪನೆ ಇರುತ್ತದೆ. ಆದರೆ, ಅದುರ ಸಂತಾನದಂಥಾ ಅನೇಕ ಪರ್ವತಗಳು ಸುತ್ತಲ ಪ್ರದೇಶಗಳಲ್ಲಿಯೂ ಹಬ್ಬಿಕೊಂಡಿವೆ. ಒಂದು ವೇಳೆ ನೀವೇನಾದರೂ ಹಿಮಾಲಯದ ಭಾಗವಾಗಿರುವ ಅಷ್ಟೂ ಪ್ರದೇಶಗಳನ್ನು ನೋಡಬೇಕೆಂದರೆ ವರ್ಷವೊಂದು ಸಾಲುವುದಿಲ್ಲವೇನೋ… ಹೀಗೆ ಹಿಮಾಲಯದ ಭಾಗವಾಗಿರುವ ಗಂಗ್ಕರ್ ಪುಯೆನ್ಸಮ್ ಅನ್ನೋ ಬೆಟ್ಟವೊಂದಿದೆ. ಅಲ್ಲಿ ಚಿತ್ರ ವಿಚಿತ್ರವಾದ ಪವಾಡಗಳು, ಘಟನಾವಳಿಗಳು ಸಂಭವಿಸುತ್ತವೆಂದು ಹೇಳಲಾಗುತ್ತದೆ. ಆ ಬಗೆಗಿನ ಕಥೆಗಳು ನಿಜಕ್ಕೂ ಅಚ್ಚರಿದಾಯಕವಾಗಿವೆ.
ಈ ಪರ್ವತವನ್ನು ಸರಿಯಾಗಿ ಅಳತೆ ಮಾಡುವ ಪ್ರಯತ್ನಗಳು ಇದುವರೆಗೂ ಲೆಕ್ಕವಿಲ್ಲದಷ್ಟು ಸಲ ನಡೆದಿದೆ. ಆದರೆ ಯಾವ ಪ್ರಯತ್ನಗಳೂ ಕೂಡಾ ಸಂಪೂರ್ಣವಾಗಿ ಫಲಕಾರಿಯಾಗಿಲ್ಲ. ಅದರ ಹಿಂದೆಯೂ ನಾನಾ ಕಥೆಗಳಿದ್ದಾವೆ. ಇದರಾಚೆಗೆ ಇಲ್ಲಿ ನಾನಾ ನಿಗೂಢಗಳು ಘಟಿಸುತ್ತವೆಂದು ಹೇಳಲಾಗುತ್ತದೆ. ಅಲ್ಲಿಗೆ ಒಬ್ಬೊಬ್ಬರೇ ತೆರಳಲು ಸ್ಥಳೀಯರೇ ಹಿಂದೇಟು ಹಾಕುತ್ತಾರೆ. ಈ ಪರ್ವತದ ಮೇಲೆ ಅಲ್ಲಲ್ಲಿ ತಿಳಿ ನೀರ ಸೆಲೆ ಇದೆ. ಹಿನದ ಅಂಚಿನಲ್ಲಿಯೇಋ ನೀರು ನಿಂತಿರುತ್ತೆ. ಈ ಪರ್ವತದಿಂದ ಚಿತ್ರವಿಚಿತ್ರವಾದ ಸಬ್ಧಗಳು ಸ್ಥಳೀಯರಿಗೆ ಕೇಳಿಸುತ್ತದೆಯಂತೆ. ಕೆಲ ರಾತ್ರಿಗಳಲ್ಲಿ ಥರ ಥರದ ಬೆಳಕೂ ಕೂಡಾ ಈ ಪರ್ವತದಿಂದ ಹೊಮ್ಮುತ್ತವಂತೆ. ಅಂತೂ ಈ ಪರ್ವತ ದೇವರ ಸ್ವಂತ ಜಾಗ ಅಂತ ಸ್ಥಳೀಯರು ನಂಬಿಕೊಂಡಿದ್ದಾರೆ.
ಕಣಿವೆಯಲ್ಲೊಂದು ಪಟ್ಟಣ
ಹಿಮಾಲಯದ ಇಕ್ಕೆಲಗಳಲ್ಲಿ ಸುಲಭಕ್ಕೆ ಸಂಧಿಸಲು ಸಾಧ್ಯವಾಗದ ಅದೆಷ್ಟೋ ಅಚ್ಚರಿಗಳಿದ್ದಾವೆ. ಕೆಲ ಭಾಗಗಳ ಬಗ್ಗೆ ಕೇವಲ ಕೇಳ ಬಹುದೇ ಹೊರತು ಅಲ್ಲಿಗೆ ಭೇಟಿ ನೀಡಿ ಕಣ್ತುಂಬಿಕೊಳ್ಳೋದು ಬಲು ಕಷ್ಟದ ಕೆಲಸ. ತೀರಾ ಅಲ್ಲಿಯೇ ವಾಸಿಸುವ ಸ್ಥಳೀಯರು ಕೂಡಾ ದೈವೀಕ ನಂಬಿಕೆಗಳ ಕಾರಣದಿಂದ ಪ್ರಯಾಸ ಪಟ್ಟು ಅಲ್ಲಿಗೆ ಭೇಟಿ ನೀಡೋದಿದೆ. ಆದರೆ ಕೆಲ ಸ್ಥಳಗಳಿಗೆ ಸ್ಥಳೀಯರೂ ಭೇಟಿ ಕೊಡಲು ಸಾಧ್ಯವಾಗಿಲ್ಲ. ಅಂಥಾ ವಿಶೇಷವಾದ ಸ್ಥಳಗಳಲ್ಲಿ ಗಂಯಂಗಂಜ್ ಪಟ್ಟಣವೂ ಸೇರಿಕೊಳ್ಳುತ್ತೆ. ಗಯಂಗಂಜ್ ಎಂಬುದು ಅಮರ ಜೀವಿಗಳ ನಗರ ಎಂಬ ಖ್ಯಾತಿಯನ್ನೂ ಪಡೆದುಕೊಂಡಿದೆ. ಆ ಸ್ಥಳದ ಬಗ್ಗೆ ನಾನಾ ಕಥೆಗಳಿದ್ದರೂ ಕೂಡಾ ಯಾರಿಂದಲೂ ಅಲ್ಲಿಗೆ ಭೇಟಿ ಕೊಡಲು ಸಾಧ್ಯವಾಗಿಲ್ಲ.
ಅದಕ್ಕೆ ಕಾರಣವೂ ಇಲ್ಲದಿಲ್ಲ. ಮನುಷ್ಯರು ಅದೇನೇ ಸಾಹಸ ಮಾಡಿದರೂ ಭೇಟಿ ಕೊಡಲಾಗದ ಭಯಾನಕ ಕಣಿವೆಯೊಂದರ ಒಳಗೆ ಈ ನಗರ ಇದೆ ಎಂದು ಹೇಳಲಾಗುತ್ತದೆ. ಒಂದು ಕಾಲದಲ್ಲಿ ಅದು ಸುಂದರ ನಗರವಾಗಿತ್ತಂತೆ. ಬಹುಶಃ ಭೂಕುಸಿತದಂಥಾ ಪಲ್ಲಟದಿಂದಾಗಿ ಕಣಿವೆ ಸೃಷ್ಟಿಯಾಗಿ ನಂತರ ಅದು ದುರ್ಗಮವಾಗಿರಲೂ ಬಹುದು. ಚಾರಣ ನಡೆಸುವವರೂ ಕೂಡಾ ಅದನ್ನು ಪತ್ತೆ ಹಚ್ಚುವ ಸರ್ಕಸ್ಸು ನಡೆಸಿದ್ದಿದೆ. ಆದರದು ಸಾಧ್ಯವಾಗಿಲ್ಲ. ಆಧುನಿಕ ತಂತ್ರಜ್ಞಾನಗಳೂ ಕೂಡಾ ಈ ನಿಗೂಢದ ಮುಂದೆ ಮಂಡಿಯೂರಿವೆ. ಇನ್ನೊಂದು ಮೂಲದ ಪ್ರಕಾರ ಋಷಿ ಮುನಿಗಳಂಥಾ ಮಹಾತ್ಮರು ಮಾತ್ರವೇ ಅಲ್ಲಿಗೆ ಭೇಟಿ ಕೊಡಲು ಸಾಧ್ಯವಂತೆ. ಅಂಥಾ ಮಹಾನ್ ಯೋಗಿಗಳು ಅಲ್ಲಿ ವಾಸವಿದ್ದರೆಂದು ಹೇಳಲಾಗುತ್ತದೆ. ಅಲ್ಲಿ ಸಂಧಿಸುವವರು ಅಮರತ್ವ ಪಡೆಯುತ್ತಾರೆಂದ ಬಗ್ಗೆ ಸ್ಥಳೀಯ ಜಾನಪದ ಕಥೆಗಳಲ್ಲಿಯೂ ಉಲ್ಲೇಖಗಳಿದ್ದಾವೆ.
ಗಡಿಪಾರಾದವರ ನೆಲೆಯದು
ಹಿಮಾಲಯದಲ್ಲಿ ಅತ್ಯಂತ ದುರ್ಗಮವಾದ ಪ್ರದೇಶಗಳಿದ್ದಾವೆ. ಚಾರಣಿಗರೂ ಕೂಡಾ ಅತ್ಯಂತ ಪ್ರಯಾಸ ಪಟ್ಟುಕೊಂಡೇ ಅಂಥವುಗಳನ್ನು ತಲಾಶು ನಡೆಸಬೇಕಾಗುತ್ತದೆ. ಆದರೆ, ಅಂಥಾ ಪ್ರದೇಶಗಳಲ್ಲಿಯೂ ಕೂಡಾ ಅಚ್ಚರಿದಾಯಕವೆಂಬಂತೆ ಜನವಸತಿ ಇದೆ. ಅಂಥಾ ಪ್ರದೇಶಗಳಲ್ಲಿ ಧೌಲಾಧರ್ ಎಂಬ ಭೂಭಾಗ ಪ್ರಧಾನವಾಗಿ ಸೇರಿಕೊಳ್ಳುತ್ತದೆ. ಸಾವಿರಾರು ಅಡಿಗಳಷ್ಟು ಎತ್ತರದಲ್ಲಿರುವ ಈ ಪ್ರದೇಶದಲ್ಲಿ ಗಡಿಪಾರಾದ ಟಿಬೇಟಿಯನ್ನರು ನೆಲೆಸುತ್ತಾರೆ. ಅಲ್ಲಿಯೇ ಹುಟ್ಟಿ ಬೆಳೆದ ಒಂದಷ್ಟು ಸ್ಥಳೀಯರು ಕೂಡಾ ವಾಸವಿದ್ದಾರೆ. ಓಬೆಟಿಯನ್ನರ ಪಾಲಿಗಿದು ಅತ್ಯಂತ ಪವಿತ್ರ ಸ್ಥಳವೂ ಹೌದು. ಸುರಕ್ಷಿತವಾದ ಜಾಗವೂ ಹೌದು.
ಇಲ್ಲೊಂದು ಸಣ್ಣ ಪಟ್ಟಣವೇ ಇದೆ. ಎಂಥವರೂ ಅರೆಕ್ಷಣ ವಶವಾಗಿ ಬಿಡುವಂಥಾ ಅತ್ಯಂತ ಸುಂದರ ವಿನ್ಯಾಸದ ದೇಸೀ ಮನೆಗಳೂ ಇಲ್ಲಿವೆ. ಇದಂತೂ ಟಿಬೆಟಿಯನ್ನರ ಪಾಲಿಗೆ, ಬೌಧ ಧರ್ಮೀಯರ ಪಾಲಿಗೆ ಅತ್ಯಂತ ವಿಶೇಷವಾದ ಸ್ಥಳ. ದಲೈಲಾಮಾ ವಾಸವಿರುವ ಸ್ಥಳವೂ ಕೂಡಾ ಇಲ್ಲಿಯೇ ಇರೋದು ನಿಜವಾದ ವಿಶೇಷ. ಓಬೆಟಿಯನ್ ಶೈಲಿಯ ಅನೇಕ ತರಬೇತಿ ತಾಣಗಳೂ ಇಲ್ಲಿದ್ದಾವೆ. ಅತ್ಯಂತ ಸುಂದರವಾದ, ಜಗತ್ತಿನ ಬೇರ್‍ಯಾವ ಭೂಭಾಗಗಳಲ್ಲಿಯೂ ಕಾಣ ಸಿಗದಂಥಾ ರಮಣೀಯವಾದ ಪಟ್ಟಣವಾಗಿಯೂ ಈ ಪ್ರದೇಶ ಗಮನ ಸೆಳೆಯುತ್ತದೆ. ನಿಜಕ್ಕೂ ಅಲ್ಲಿನ ವಾತಾವರಣ ಸ್ವರ್ಗದಂತಿದೆ. ಆದರೆ ಅಲ್ಲಿಗೆ ಭೇಟಿ ಕೊಡೋದು ಅಷ್ಟು ಸಲೀಸಿನ ಸಂಗತಿಯಲ್ಲ!