-ಹೀಗೊಂದಿಷ್ಟು ಬೆರಗಿನ ಸುದ್ದಿಗಳು!
-ನಿಮ್ಮನ್ನು ಚಕಿತಗೊಳಿಸೋ ಸಣ್ಣ ಸಣ್ಣ ವಿಚಾರಗಳು!
ಸಾಮಾನ್ಯವಾಗಿ ನಾವೆಲ್ಲ ಅಸಾಮಾನ್ಯ ಸುದ್ದಿಗಳತ್ತ ಮಾತ್ರವೇ ಗಮನ ಹರಿಸುತ್ತೇವೆ. ಈಗಂತೂ ದಿನದ ಇಪ್ಪತ್ನಾಲಕ್ಕು ಗಂಟೆಗಳ ಕಾಲವೂ ಸುದ್ದಿ ಹುಟ್ಟಿಸುವ ಕಾರ್ಖಾನೆಗಳಂಥಾ ಸುದ್ದಿ ಮಾಧ್ಯಮಗಳ ಭರಾಟೆ ನಡೆಯುತ್ತಿದೆ. ಸುಮ್ಮನೊಮ್ಮೆ ಅದರತ್ತ ಕಣ್ಣು ಹಾಯಿಸಿದರೂ ಅದೇ ರಾಜಕೀಯ, ರಾಜಕೀಯ ನಾಯಕರ ನಡುವಿನ ಕೆಸರೆರಚಾಟ, ಮತ್ತದೇ ಭ್ರಷ್ಟಾಚಾರ, ಸ್ಕ್ಯಾಂಡಲ್ಲುಗಳಂಥಾ ಸುದ್ದಿಗಳೇ ತುಂಬಿ ತುಳುಕಾಡುತ್ತಿರುತ್ತವೆ. ಇಂಥಾ ಸುದ್ದಿಗಳಾಚೆಗೂ ನಮ್ಮನ್ನು ಆಹ್ಲಾದಕ್ಕೆ ದೂಡುವಂಥಾ, ಕೇಳಿದಾಕ್ಷಣವೇ ಬರಗಾಗಿಸುವಂಥಾ ಅನೇಕ ವಿಸ್ಮಯದ ಸಂಗತಿಗಳು ನಮ್ಮ ನಡುವಲ್ಲಿವೆ. ಸುಮ್ಮನೊಮ್ಮೆ ಯೋಚಿಸಿ ನೋಡಿ… ನಾವು ದಿನ ನಿತ್ಯ ಬಳಸುವ ವಸ್ತುಗಳ ಸುತ್ತಲೂ ಒಂದು ರೋಚಕ ಕಥೆಯಿರುತ್ತೆ. ಈ ಜಗತ್ತಿನಲ್ಲಿ ನಮಗೇ ಗೊತ್ತಿಲ್ಲದಂಥಾ ಅನೇಕಾನೇಕ ಅಚ್ಚರಿಯ ವಿಚಾರಗಳೂ ಯಥೇಚ್ಚವಾಗಿರುತ್ತೆ. ಅಂಥಾ ಒಂದಷ್ಟು ವಿಸ್ಮಯಕರ ಸುದ್ದಿಗಳ ತುಣುಕುಗಳು ಇಲ್ಲಿವೆ…
ಕಳ್ಳನ ಕರಾಮತ್ತು!

ಬದುಕೋದಕ್ಕೆ ನಾನಾ ದಾರಿಗಳಿವೆ. ಕೊಂಚ ಕಷ್ಟವಾದರೂ ಕೂಡಾ ಸರಿದಾರಿಯಲ್ಲಿ ನಡೆದು ಹಾಳಾದೋರು ಕಡಿಮೆ. ಆದರೆ ಅಡ್ಡಹಾದಿಯ ಘೋರ ಪರಿಣಾಮಗಳು ಕಣ್ಣೆದುರೇ ಇದ್ದರೂ ಹೆಚ್ಚಿನ ಜನ ಸರಿದಾರಿಯಲ್ಲಿ ಹೆಜ್ಜೆಯಿರಿಸಲು ಹಿಂದೆ ಮುಂದೆ ನೋಡುತ್ತಾರೆ. ಹೇಗಾದರೂ ಮಾಡಿ ಬೇಗನೆ ಕಾಸು ಸಂಪಾದಿಸಬೇಕೆಂಬ ಅವಸರದಲ್ಲಿ ಕಳ್ಳತನದಂಥಾ ಹಾದಿ ಹಿಡಿಯುವವರೂ ಇದ್ದಾರೆ. ಇಡೀ ಪ್ರಪಂಚದ ತುಂಬೆಲ್ಲ ಇಂಥ ಅಡ್ಡಕಸುಬಿಗಳ ಸಂಖ್ಯೆ ಮಿತಿ ಮೀರಿಕೊಂಡಿದೆ. ಹೀಗೆ ಕಳ್ಳತನಕ್ಕಿಳಿದವರಲ್ಲಿ ಎಂತೆಂಥಾ ಚಾಲಾಕಿಗಳಿದ್ದಾರೆಂದರೆ ನುರಿತ ಪೊಲೀಸ್ ಅಧಿಕಾರಿಗಳೇ ಅಂಥವರ ಆಟಗಳ ಮುಂದೆ ತಬ್ಬಿಬ್ಬುಗೊಂಡಿದ್ದಿದೆ.
ಜಗತ್ತಿನಲ್ಲಿ ಚಾಲಾಕಿ ಕಳ್ಳರ ರಸವತ್ತಾದ ಅನೇಕ ಕಥೆಗಳಿದ್ದಾವೆ. ಎಂಥವರನ್ನೂ ಯಾಮಾರಿಸಿ ಕದ್ದು ಬಿಡುವ, ಪೊಲೀಸರ ಕಣ್ಣು ತಪ್ಪಿಸಲೆಂದೇ ಬುದ್ಧಿವಂತಿಕೆಯ ರೂಟು ಕಂಡುಕೊಂಡಿರೋ ಅನೇಕ ಕಳ್ಳರಿದ್ದಾರೆ. ಆದರೆ ಬಾಂಬೆಯ ಐನಾತಿ ಕಳ್ಳನೊಬ್ಬ ಚೈನು ಕದ್ದು ಪೊಲೀಸರಿಂದ ತಪ್ಪಿಸಿಕೊಳ್ಳಲು ಮಾಡಿದ ಸರ್ಕಸ್ಸು ಮಾತ್ರ ತುಂಬಾನೇ ವಿಚಿತ್ರ. ಆತ ಮುಂಬೈನ ನಾನಾ ಕಡೆಗಳಲ್ಲಿ ಚಿನ್ನದ ಚೈನುಗಳನ್ನು ಎಗರಿಸುತ್ತಿದ್ದ. ಈ ಬಗ್ಗೆ ದಿನ ನಿತ್ಯ ಹತ್ತಾರು ಕೇಸುಗಳು ನಾನಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆಯಲಾರಂಭಿಸಿದ್ದವು.
ಆ ಕಳ್ಳನನ್ನು ಹೇಗಾದ್ರೂ ಹಿಡಿಯಲೇ ಬೇಕೆಂದು ವಿಶೇಷ ತಂಡವೂ ರಚನೆಯಾಗಿತ್ತು. ಅಧಿಕಾರಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾದು ಕೂತು, ಕಾರ್ಯಾಚರಣೆ ನಡೆಸಿ ಕಡೆಗೂ ಆತನನ್ನು ರೆಡ್ ಹ್ಯಾಂಡಾಗಿ ಬಂಧಿಸಿದ್ದರು. ಆದರೆ ಆ ಐನಾತಿ ಪೊಲೀಸರ ಬಲೆಗೆ ಬೀಳೋ ಸೂಚನೆ ಸಿಗುತ್ತಲೇ ಫೆಶ್ ಆಗಿ ಕದ್ದಿದ್ದ ಮಣ ಭಾರದ ಚೈನನ್ನು ಸಲೀಸಾಗಿ ನುಂಗಿದ್ದ. ಪಿತ್ಥ ಕೆದರಿಸಿಕೊಂಡ ಪೊಲೀಸರು ಒಂದು ಬುಟ್ಟಿಯ ತುಂಬಾ ಬಾಳೆ ಹಣ್ಣುಗಳನ್ನಿಟ್ಟು ಒತ್ತಾಯಪೂರ್ವಕವಾಗಿ ಆತನಿಗೆ ತಿನ್ನಿಸಿದ್ದರು. ಪೊಲೀಸರ ಭಯಕ್ಕೆ ಆತ ಬರೋಬ್ಬರಿ ನಲವತ್ತೆಂಟು ಬಾಳೆ ಹಣ್ಣು ತಿಂದಿದ್ದ. ಈ ಪಾಟಿ ಬಾಳೆ ಹಣ್ಣು ತಿಂದ ಮೇಲೆ ಆತ ವಿಸರ್ಜಿಸೋದನ್ನೇ ಕಾದು ಕೂತ ಪೊಲೀಸರು ಕಡೆಗೂ ಮಲದಿಂದ ಕದ್ದ ಚಿನ್ನದ ಚೈನನ್ನು ಆಯ್ದುಕೊಂಡು ವಶಪಡಿಸಿಕೊಳ್ಳಬೇಕಾಯ್ತು!
ಬ್ರಷ್ ಹಿಸ್ಟರಿ

ಟೂತ್ ಬ್ರೆಷ್ ಅನ್ನೋದು ನಮ್ಮ ಬದುಕಿನ ಭಾಗ. ದಿನಾ ಬೆಳಗೆದ್ದು ನಿದ್ದೆಗಣ್ಣಿನಲ್ಲಿಯೇ ಅದಕ್ಕಾಗಿ ತಡಕಾಡಿ ಹಲ್ಲುಜ್ಜಿಕೊಂಡರೇನೇ ಆ ದಿನ ಆರಂಭವಾಗುತ್ತೆ. ಹೀಗೆ ದಿನವನ್ನು ಆರಂಭಿಸದ ಕೊಳಕರ ಸಂಖ್ಯೆಯೂ ಈ ಜಗತ್ತಿನಲ್ಲಿರಬಹುದು. ಆದ್ರೆ ಅದು ನಾನಾ ರೋಗಗಳಿಗೆ ಆಹ್ವಾನ ನೀಡುವಂಥ ಕೆಟ್ಟ ಅಭ್ಯಾಸ. ಇರಲಿ, ನಮ್ಮ ಬದುಕಿನ ಅತ್ಯಾವಶ್ಯಕ ವಸ್ತುಗಳಲ್ಲಿ ಒಂದಾಗಿರೋ ಟೂತ್ ಬ್ರ್ರೆಷ್ ಇದೀಗ ಅತ್ಯಣಂತ ಆಧುನಿಕ ಅವತಾರದಲ್ಲಿ ನಮಗೆಲ್ಲ ಸಿಗುತ್ತಿದೆ. ಆದ್ರೆ ನೀವ್ಯಾವತ್ತಾದರೂ ಅದು ಹುಟ್ಟು ಪಡೆದದ್ದು ಯಾವ ಕಾಲಮಾನದಲ್ಲಿ? ಆ ಹೊತ್ತಿನಲ್ಲಿ ಅದರ ರೂಪುರೇಷೆ ಹೇಗಿತ್ತು ಅಂತೇನಾದರೂ ಆಲೋಚಿಸಿದ್ದೀರಾ?
ದಿನಾ ಬೆಳಗೆದ್ದು ಹಲ್ಲುಜ್ಜುವಾಗ ಒಂದು ಪ್ರಸನ್ನ ಘಳಿಗೆ ನಿಮ್ಮನ್ನಾವರಿಸಿಕೊಳ್ಳುತ್ತದಲ್ಲಾ? ಆ ಹೊತ್ತಿನಲ್ಲಿ ಕೆಲ ಮಂದಿಗಾದರೂ ಬ್ರೆಷ್‌ನ ಉಗಮದ ಬಗ್ಗೆ ಕುತೂಹಲ ಮೂಡಿಕೊಂಡಿರಬಹುದು. ಹಾಗೆ ಮೂಡಿಕೊಂಡ ಕೌತುಕದ ಮೂಲ ಹುಡುಕಿದರೆ ಅದು ನಿಮ್ಮನ್ನು ಐದು ಸಾವಿರ ವರ್ಷಗಳಷ್ಟು ಹಿಂದಕ್ಕೆ ಕೈ ಹಿಡಿದು ಕರೆದೊಯ್ಯುತ್ತೆ. ಹಲ್ಲುಗಳ ಆರೋಗ್ಯ, ಸ್ವಚ್ಛತೆಯ ಬಗ್ಗೆ ಐದು ಸಾವಿರ ವರ್ಷಗಳ ಹಿಂದೆಯೇ ಅರಿವು ಮೂಡಿಕೊಂಡಿತ್ತು. ಆ ನಿಟ್ಟಿನಲ್ಲಿ ಮೊದಲ ಹೆಜ್ಜೆಯಿಟ್ಟದ್ದು ಈಜಿಪ್ಟಿಯನ್ನರು. ಅವರು ಆ ಕಾಲದಲ್ಲಿಯೇ ಮೊಟ್ಟೆಯ ಚಿಪ್ಪನ್ನು ಪುಡಿ ಮಾಡಿ ಅದನ್ನೇ ಟೂತ್ ಪೌಡರ್‌ನಂತೆ ಬಳಸುತ್ತಿದ್ದರಂತೆ. ತೆಂಗಿನ ನಾರಿನಂಥಾದ್ದನ್ನು ಟೂತ್ ಬ್ರಷ್ ರೀತಿಯಲ್ಲಿಯೇ ಕಡ್ಡಿಗೆ ಕಟ್ಟಿ ಹಲ್ಲುಜ್ಜುತ್ತಿದ್ದರಂತೆ.
ಬ್ರಷ್‌ಗಳಿಗೊಂದು ನಿಗಧಿತ ಆಕಾರ ಮೂಡಿಕೊಂಡಿದ್ದು ೧೭೦೦ರ ಹೊತ್ತಿಗೆ. ಆ ಕಾಲಕ್ಕೆ ಚೀನಾದ ಮಂದಿ ಪ್ರಾಣಿಗಳ ಮೂಳೆಗೆ ಹಂದಿಯ ಬಿರುಸಾದ ಕೂದಲನ್ನು ಪೋಣಿಸಿ ಬ್ರಷ್ ಮಾಡಿದ್ದರಂತೆ. ಅದನ್ನೇ ಮೂಲವಾಗಿಟ್ಟುಕೊಂಡು ಬ್ರಟೀಷರು ಟೂತ್ ಬ್ರಷ್ ಅನ್ನು ವಿನ್ಯಾಸಗೊಳಿಸಿದ್ದರಂತೆ. ಆ ಬಳಿಕ ನೈಲಾನ್ ದಾರದ ಆಧುನಿಕ ಟೂತ್ ಬ್ರಷ್‌ಗಳು ಮಾರುಕಟ್ಟೆಗೆ ಬಂದಿದ್ದು ೧೯೩೦ರ ಉತ್ತರಾರ್ಧದಲ್ಲಿ. ಹೀಗೆ ಸಾಗಿ ಬಂದ ಟೂತ್ ಬ್ರಷ್‌ಗಳು ಈವತ್ತಿಗೆ ನಾನಾ ಬಗೆಯಲ್ಲಿ, ಹೈಫೈ ದರಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದ್ದಾವೆ.
ಬೆರಗಿನ ಸುರಂಗ

ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಪರ್ಕ ಸಾಧಿಸುವಲ್ಲಿ ರಸ್ತೆಗಳದ್ದು ಪ್ರಧಾನ ಪಾತ್ರ. ಒಂದು ಬಿಂದುವಿನಿಂದ ಇಂಥಾ ರಸ್ತೆಗಳು ಇಡೀ ಜಗತ್ತಿನ ನಾನಾ ಭಾಗಗಳನ್ನು ಬೆಸೆದಿವೆ. ಆಯಾ ದೇಶಗಳ ಜನ ಜೀವನವನ್ನು ಸಂಪರ್ಕಿಸುತ್ತಿವೆ. ಆದರೆ ಕೆಲವಾರು ಪ್ರದೇಶಗಳಿಗೆ ಸಂಪರ್ಕವೇ ಅಸಾಧ್ಯ ಅನ್ನುವಂತಿರುತ್ತವೆ. ಅದಕ್ಕೆ ಕಾರಣವಾಗಿರೋದು ಪ್ರಾಕೃತಿಕ ರಚನೆ ಮತ್ತು ಅದು ತಂದೊಡುವ ಸವಾಲುಗಳು. ಇಂಥಾದ್ದರಿಂದಲೇ ಅದೆಷ್ಟೋ ಪ್ರದೇಶಗಳು ಶತಮಾನಗಳ ಕಾಲ ನಾಗರಿಕ ಬದುಕಿನ ಸಂಪರ್ಕವೇ ಇಲ್ಲದಂತಿರುತ್ತಿದ್ದವು.
ಅಂಥಾ ಕ್ಲಿಷ್ಟಕರ ಪ್ರದೇಶಗಳನ್ನು ಬೆಸೆಯಲೆಂದೇ ಆಧುನಿಕ ಆವಿಷ್ಕಾರಗಳು ಕಂಡುಕೊಂಡಿರೋದು ಸುರಂಗ ಮಾರ್ಗಗಳನ್ನು. ಅಷ್ಟಕ್ಕೂ ಇಂಥಾ ಸುರಂಗ ಮಾರ್ಗಗಳ ಶತ ಶತ ಮಾನಗಳಿಂದಲೂ ಇದ್ದಾವೆ. ಹುಡುಕ ಹೋದರೆ ಅದರ ಹಿಸ್ಟರಿಯೇ ಬಲು ರೋಚಕ. ಆದರೆ ಆಧುನಿಕ ಮನುಷ್ಯ ನಿರ್ಮಿತ ಸುರಂಗಗಳಂತೂ ಎಲ್ಲವನ್ನೂ ಹಿಂದಿಕ್ಕುವಂತಿವೆ. ಇದೀಗ ಪ್ರತೀ ದೇಶಗಳಲ್ಲಿಯೂ ಸುರಂಗ ಮಾರ್ಗಗಳಿವೆ. ಆದರೆ ನಾರ್ವೆ ದೇಶದಲ್ಲಿರೋ ಸುರಂಗ ಮಾರ್ಗ ಮಾತ್ರ ಅವೆಲ್ಲವುಗಳಲ್ಲಿ ಮೊದಲ ಸ್ಥಾನ ಕಾಯ್ದಿಟ್ಟುಕೊಂಡಿದೆ.
ಅದು ನಾರ್ವೆಯ ಲಾರ್ಡಾಲ್ ಸುರಂಗ. ಅಲ್ಲಿನ ಬೆಟ್ಟ ಗುಡ್ಡಗಳಿಂದಾವೃತವಾದ ಪ್ರದೇಶಗಳ ಜನರಿಗೆ ಅನುಕೂಲವಾಗಲೆಂದೇ ಅದನ್ನು ನಿರ್ಮಾಣ ಮಾಡಲಾಗಿದೆ. ಅದಕ್ಕೀಗ ವಿಶ್ವತ ಅತೀ ದೊಡ್ಡ, ಉದ್ದದ ಸುರಂಗ ಮಾರ್ಗವೆಂಬ ಹೆಗ್ಗಳಿಕೆಯೂ ಸಿಕ್ಕಿದೆ. ಅಂದಹಾಗೆ ಆ ಸುರಂಗ ಮಾರ್ಗ ೨೪.೫ ಕಿಲೋಮೀಟರ್‌ನಷ್ಟು ಉದ್ದವಿದೆ. ಅದನ್ನು ನಿರ್ಮಾಣ ಮಾಡಲು ಒಂದು ಬಿಲಿಯನ್ ನಾರ್ವೇಜಿಯನ್ ಕ್ರೋನರ್ ಅಂದರೆ ಹತ್ತತ್ತಿರ ೧೧೦ ಮಿಲಿಯನ್ ಡಾಲರ್ ವೆಚ್ಚ ಮಾಡಲಾಗಿದೆ. ಅದೊಂದು ಸುಸಜ್ಜಿತವಾದ ಸುರಂಗ. ಅದು ಕೇವಲ ಉದ್ದದಲ್ಲಿ ಮಾತ್ರವಲ್ಲ; ಸುರಂಗ ಮಾರ್ಗವೊಂದು ಹೇಗೆ ಅಚ್ಚುಕಟ್ಟಾಗಿರಬೇಕು, ಹೇಗೆ ವ್ಯವಸ್ಥಿತವಾಗಿ ನಿರ್ಮಾಣ ಮಾಡಬೇಕೆಂಬುದಕ್ಕೂ ತಾಜಾ ಉದಾಹರಣೆಯಂತಿದೆ.
ಕಪ್ಪೆಯ ವಿಸ್ಮಯ

ನಮಗೆ ಗೊತ್ತಿರೋ ಒಂದಷ್ಟು ಪ್ರಬೇಧದ ಜೀವಿಗಳ ಬದುಕಿನ ಕ್ರಮದ ಬಗ್ಗೆ ನಮಗೆಲ್ಲ ತೆಳುವಾಗಿ ಗೊತ್ತಿರುತ್ತೆ. ಅವುಗಳ ಆಹಾರ ಕ್ರಮ, ಅವುಗಳ ವರ್ತನೆ, ಅವುಗಳಿಂದ ನಮಗಾಗಬಹುದಾದ ಅಪಾಯಗಳ ಬಗ್ಗೆ ಮಾತ್ರವೇ ನಮ್ಮ ದೃಷಿ ನೆಟ್ಟಿರುತ್ತೆ. ಆದರೆ ನಮ್ಮ ಕಣ್ಣಿಗೆ ಕಾಣಿಸೋ ಅದೆಷ್ಟೋ ಜೀವಿಗಳ ಬಗ್ಗೆ ನಮಗೆಲ್ಲ ಏನೆಂದರೆ ಏನೂ ಗೊತ್ತಿರೋದಿಲ್ಲ. ಅದೇನಿದ್ದರೂ ಅಸೀಮ ಕುತೂಹಲ, ತಪಸ್ಸಿನಂಥಾ ಅಧ್ಯಯನಗಳಿಗೆ ಮಾತ್ರವೇ ದಕ್ಕುವಂಥಾದ್ದು.
ಈ ಮಾತಿಗೆ ಕಪ್ಪೆಗಳಿಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಕಪ್ಪೆಗಳಲ್ಲಿ ನಾನಾ ಪ್ರಬೇಧಗಳಿದ್ದಾವೆ. ಮನುಷ್ಯರು ವಾಸವಿರೋ ಪ್ರದೇಶಗಳಲ್ಲಿಯೇ ಒಂದಷ್ಟು ಜಾತಿಯ ಕಪ್ಪೆಗಳು ವಾಸಿಸುತ್ತವೆ. ಮಲೆನಾಡಿನ ಪ್ರದೇಶಗಳಲ್ಲಿಯಂತೂ ಅವೂ ಕೂಡಾ ಮನುಷ್ಯರ ಸಹಜೀವಿಗಳಂತಿರುತ್ತವೆ. ಆದರೆ ಹಾಗೆ ಕಪ್ಪೆಗಳನ್ನು ದಿನನಿತ್ಯ ನೋಡುವವರಿಗೂ ಕೂಡಾ ಅವುಗಳ ಬಗ್ಗೆ ಏನೂ ಗೊತ್ತಿರೋದಿಲ್ಲ. ಅದೆಷ್ಟೋ ವರ್ಷಗಳ ಕಾಲ ಇಂಥಾ ಕಪ್ಪೆಗಳ ಬಗ್ಗೆ ಜೀವ ಶಾಸ್ತ್ರಜ್ಞರು ಅಧ್ಯಯನ ನಡೆಸುತ್ತಾ ಬಂದಿದ್ದಾರೆ. ಜಗತ್ತಿನ ನಾನಾ ಭಾಗಗಳಲ್ಲಿ ನಡೆದಿರೋ ಇಂಥಾ ಅಧ್ಯಯನಗಳು ಕಪ್ಪೆಗಳ ಜೀವನಕ್ರಮದ ಬಗ್ಗೆ ಅಚ್ಚರಿಯ ಸಂಗತಿಗಳನ್ನ ಬಯಲಾಗಿಸಿವೆ.
ಅದೆಲ್ಲದರಲ್ಲಿ ಯಾರೇ ಆದರೂ ಅಚ್ಚರಿಗೀಡಾಗೋವಂಥಾ ಒಂದು ವಿಚಾರವಿದೆ. ಅದು ಕಪ್ಪೆಗಳ ವಾಂತಿಗೆ ಸಂಬಂಧಿಸಿದ್ದು. ತಿಂದಿದ್ದು ಪಥ್ಯವಾಗದೆ, ಹೆಚ್ಚಾದರೆ ವಾಂತಿ ಮಾಡಿಕೊಳ್ಳೋದು ಮಾಮೂಲು. ಆದರೆ ಕಪ್ಪೆಗಳಿಗೆ ಮಾತ್ರ ನಮ್ಮ ಹಾಗೆ ಬಾಯಿಂದ ವಾಂತಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ತಿಂದ ಆಹಾರ ಜೀರ್ಣವಾಗದೇ ಇದ್ದರೆ ಹೊಟ್ಟೆಯನ್ನೇ ಹೊರತೆಗೆಯುತ್ತವೆ. ನಂತರ ಕಾಲುಗಳ ಸಹಾಯದಿಂದ ಹೊಟ್ಟೆಯೊಳಗೆ ಅಪಥ್ಯವಾಗಿ ಜೀರ್ಣವಾಗದ ವಸ್ತುಗಳನ್ನು ಹೊರ ತಳ್ಳುತ್ತವೆ. ಹಾಗೆ ಸಮಾಧಾನವಾದ ನಂತರ ಮತ್ತೆ ಹೊಟ್ಟೆಯನ್ನು ಒಳಗೆ ತಳ್ಳಿಕೊಳ್ಳುತ್ತವೆಯಂತೆ.
ತಿಮಿಂಗಿಲದ ಹೃದಯದ ವಿಷ್ಯ

ಸಮುದ್ರದಲ್ಲಿ ವಾಸಿಸೋ ತಿಮಿಂಗಿಲ ಅತ್ಯಂತ ಅಪಾಯಕಾರಿ ಜಲಚರ. ಟನ್ನುಗಟ್ಟಲೆ ತೂಕದ, ಎಂಥಾ ದೊಡ್ಡ ಪ್ರಾಣಿಗಳನ್ನಾದರೂ ಸಲೀಸಾಗಿ ನುಂಗಿ ಜೀರ್ಣಿಸಿಕೊಳ್ಳಬಲ್ಲ ಸಾಮರ್ಥ್ಯ ಹೊಂದಿರೋ ತಿಮಿಂಗಿಲದ ಬಗೆಗಿನ ಸತ್ಯಗಳು ಅದರ ಗಾತ್ರದಷ್ಟೇ ಅಗಾಧವಾಗಿವೆ. ತಿಮಿಂಗಿಲ ಅತ್ಯಂತ ದೊಡ್ಡ ಗಾತ್ರದ ಜಲಚರ. ಹಾಗಿದ್ದ ಮೇಲೆ ಅವುಗಳ ಜೀವನ ಕ್ರಮ, ಅಂಗಾಗಗಳ ವಿಸ್ಮಯಗಳೂ ಕೂಡಾ ಅಷ್ಟೇ ದೊಡ್ಡ ಗಾತ್ರದ್ದಾಗಿರುತ್ತವೆ. ಒಂದು ಅಧ್ಯಯನ ತಿಮಿಂಗಿಲದ ಹೃದಯದ ಬಗೆಗಿನ ಇಂಟರೆಸ್ಟಿಂಗ್ ವಿಚಾರಗಳನ್ನು ಪತ್ತೆಹಚ್ಚಿದೆ.
ತಿಮಿಂಗಿಲಗಳು ಕಡಿಮೆ ಅಂದರೂ ನೂರಾ ಐವತ್ತು ಟನ್‌ಗಿಂತ ಅಧಿಕ ತೂಕ ಹೊಂದಿರುತ್ತವೆ. ಅವುಗಳು ಸುಮ್ಮನೊಮ್ಮೆ ಮಿಸುಕಾಡಲೂ ಕೂಡಾ ತೊಂಭತ್ತು ಅಡಿಗಳಷ್ಟು ವಿಶಾಲವಾದ ಪ್ರದೇಶ ಬೇಕಾಗುತ್ತೆ. ಇಂಥಾ ದೈತ್ಯ ಗಾತ್ರದ ಹೃದಯವೇ ಒಂದು ವಿಸ್ಮಯ. ತಿಮಿಂಗಿಲಗಳ ಗಾತ್ರಕ್ಕೆ ತಕ್ಕ ಹಾಗೆಯೇ ಅವುಗಳ ಹೃದಯವೂ ಇರುತ್ತದೆ. ಅದು ಎಷ್ಟು ದೊಡ್ಡದಾಗಿರುತ್ತೆ ಅಂದ್ರೆ, ಅದರ ಗಾತ್ರ ಕಾರುಗಳಷ್ಟಿರುತ್ತೆ. ಅದನ್ನು ತೂಕಕ್ಕಿಟ್ಟರೆ ೧೩೦೦ ಪೌಂಡುಗಳಷ್ಟು ತೂಗುತ್ತೆ.
ಕೇವಲ ಹೃದಯ ಮಾತ್ರವಲ್ಲದೆ ಅವುಗಳ ಪ್ರತೀ ಅಂಗಾಂಗಗಳೂ ಕೂಡಾ ಅಷ್ಟೇ ದೊಡ್ಡ ಗಾತ್ರದ್ದಾಗಿರುತ್ತವಂತೆ. ಅಷ್ಟು ದೊಡ್ಡದಾದ ದೇಹ ಪ್ರಕೃತಿಯನ್ನೆಲ್ಲ ಹೃದಯವೇ ತಡೆದುಕೊಳ್ಳಬೇಕಲ್ಲಾ? ಅದಕ್ಕೆಂದೇ ತಿಮಿಂಗಿಲಗಳ ಹೃದಯ ಹೆಚ್ಚು ಶಕ್ತಿಶಾಲಿಯಾಗಿರುತ್ತೆ. ಅದರ ಹೃದಯದ ಬಡಿತ ಸಮುದ್ರದೊಳಗೆ ಎರಡು ಕಿಲೋಮೀಟರುಗಳಷ್ಟು ದೂರ ಕೇಳಿಸುತ್ತೆ ಅಂದರೆ ಅದರ ತಾಖತ್ತು ಎಂಥಾದ್ದೆಂದು ಯಾರಿಗಾದ್ರೂ ಅರ್ಥವಾಗುತ್ತೆ. ಪ್ರತೀ ನಿಮಿಷಕ್ಕೆ ಎಂಟರಿಂದ ಹತ್ತು ಬಾರಿ ಮಾತ್ರವೇ ಬಡಿದುಕೊಳ್ಳೋದರಿಂದ ತಿಮಿಂಗಿಲಳ ಹೃದಯ ಬಡಿತ ಆ ಪಾಟಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತದೆಯಂತೆ.
ವಿಚಿತ್ರ ಟೂತ್ ಪೇಸ್ಟ್

ಈಗಂತೂ ಮಾರುಕಟ್ಟೆಗೆ ತೆರಳಿದರೆ, ಅಂಗಡಿ ಹೊಕ್ಕರೆ ಯಾವುದನ್ನು ತೆಗೆದುಕೊಳ್ಳಬೇಕೆಂದೇ ಕನ್ಪ್ಯೂಸ್ ಆಗುವಷ್ಟು ಟೂತ್ ಪೇಸ್ಟುಗಳಿವೆ. ಟಿವಿ ಚಾನೆಲ್ಲುಗಳನ್ನ ಆನ್ ಮಾಡಿದರೆ ಆನ್ ಏರಲ್ಲೇ ಬಕರಾ ತೋರಿಸುವಂಥಾ ಥರ ಥರದ ಜಾಹೀರಾತುಗಳೂ ಮೇಳೈಸುತ್ತವೆ. ನೀವೊಮ್ಮೆ ಸುಮ್ಮನೆ ಕಲ್ಪಿಸಿಕೊಳ್ಳಿ; ಯಾವ ಆವಿಷ್ಕಾರಗಳೂ ಆಗದಿದ್ದ ಕಾಲದಲ್ಲಿ ಜನ ಟೂತ್ ಪೇಸ್ಟಿನಂತೆ ಏನನ್ನು ಬಳಸುತ್ತಿದ್ದರು. ಇಜ್ಜಿಲು, ಬೇವಿನ ಕಡ್ಡಿಯಂಥಾ ಪಾರಂಪರಿಕ ಮಾರ್ಗಗಳಾಚೆಗೆ ಟೂತ್ ಪೇಸ್ಟ್ ಅನ್ನೋ ಕಲ್ಪನೆ ಮೂಡಿಕೊಂಡಿದ್ದು ಹೇಗೆ ಎಂಬೆಲ್ಲ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ.
ಆನ ಪಾರಂಪರಿಕವಾದ ಕ್ರಮಗಳಾಚೆಗೆ ಹಲ್ಲುಜ್ಜೋದಕ್ಕಾಗಿ ಹಲವಾರು ಪ್ರಯೋಗಗಳನ್ನ ಮಾಡಲಾರಂಭಿಸಿದ್ದರು. ಹುಡುಕುತ್ತಾ ಹೋದರೆ ಒಂದಷ್ಟು ಚಿತ್ರವಿಚಿತ್ರವಾದ ಆವಿಷ್ಕಾರಗಳು ನಡೆದಿರೋದು ಪತ್ತೆಯಾಗುತ್ತೆ. ಅದು ಒಂದು ದೇಶಕ್ಕಿಂತ ದೇಶಕ್ಕೆ ಬದಲಾಗುತ್ತಾ ಸಾಗೋದೂ ಕೂಡಾ ಗಮನಕ್ಕೆ ಬರುತ್ತೆ. ಆದ್ರೆ ಕೆಲವೊಂದು ದೇಶಗಳಲ್ಲಿನ ಆರಂಭಿಕ ಟೂತ್ ಪೇಸ್ಟುಗಳಂತೂ ನಿಜಕ್ಕೂ ವಾಕರಿಕೆ ಹುಟ್ಟಿಸುವಂತಿವೆ. ರೋಮನ್ನರು ಒಂದು ಕಾಲದಲ್ಲಿ ಬಳಸುತ್ತಿದ್ದ ಟೂತ್ ಪೇಸ್ಟಿನ ಬಗ್ಗೆ ಕೇಳಿದರಂತೂ ಯಾರಿಗೇ ಆದರೂ ಬವಳಿ ಬಂದಂತಾಗದಿರೋದಿಲ್ಲ.
ರೋಮನ್ನರು ಅಂಥಾ ವೆರೈಟಿಯ ಯಾವ ಟೂತ್ ಪೇಸ್ಟ್ ಬಳಸುತ್ತಿದ್ದರೆನ್ನೋ ಕುತೂಹಲ ನಿಮ್ಮೊಳಗೂ ಒತ್ತರಿಸಿಕೊಂಡಿರಬಹುದು. ಅಲ್ಲಿ ಒಂದು ಕಾಲಕ್ಕೆ ಇಲಿಗಳ ಮೆದುಳಿಂದ ತಯಾರಿಸಲಾದ ಟೂತ್ ಪೇಸ್ಟ್‌ಗಳನ್ನ ಬಳಸಲಾಗುತ್ತಿತ್ತಂತೆ. ಇಲಿಗಳ ಮೆದುಳನ್ನು ನಾಜೂಕಿನಿಂದ ಹೊರ ತೆಗೆದು ಅದನ್ನು ಒಂದಷ್ಟು ಕಾಲ ಒಣಗಿಸಲಾಗುತ್ತಿತ್ತು. ಆ ನಂತರ ಅದನ್ನು ನುಣ್ಣಗೆ ಪುಡಿ ಮಾಡಿ ಅದನ್ನೇ ಟೂತ್ ಪೇಸ್ಟ್ ಆಗಿ ಬಳಸಲಾಗುತ್ತಿತ್ತಂತೆ. ಅದಕ್ಕೆಂದೇ ಅದೆಷ್ಟೋ ಇಲಿಗಳ ಮಾರಣಹೋಮ ನಡೆದ ನಂತರದಲ್ಲಿ ಇದೀಗ ರೋಮನ್ನರು ನಾವೆಲ್ಲ ಬಳಸುವಂಥಾ ಆಧುನಿಕ ಟೂತ್ ಪೇಸ್ಟುಗಳನ್ನೇ ಬಳಸುತ್ತಿದ್ದಾರಂತೆ.
ಕಿಸ್ ಪಕ್ಕಾ ಡೇಂಜರ್!

ವಯಸ್ಸು ಯೌವನದತ್ತ ಹೊರಳಿಕೊಳ್ಳುತ್ತಲೇ ಮನಸು ನಾನಾ ಭಾವನೆಗಳಿಂದ ಕಳೆಗಟ್ಟಿಕೊಳ್ಳಲಾರಂಭಿಸುತ್ತೆ. ಅದರಲ್ಲಿ ಪ್ರಧಾನವಾಗಿ ಕಂಡು ಬರೋದು ಗಂಡು ಹೆಣ್ಣುಗಳ ಪರಸ್ಪರ ಆಕರ್ಷಣೆ. ಎದುರಿಗೆ ಚೆಂದದ ಹುಡುಗೀರು ಹಾದು ಹೋದಾಗೆಲ್ಲ ತಂಗಾಳಿ ತೀಡಿದಂತಾಗಿ, ಅದೇ ಗುಂಪಿನ ಒಬ್ಬಳೊಂದಿಗೆ ಲವ್ವಲ್ಲಿ ಬಿದ್ದು ಸಾಮಿಪ್ಯಕ್ಕಾಗಿ ಹಂಬಲಿಸೋದಿದೆಯಲ್ಲಾ? ಬಹುಶಃ ಅದು ಸ್ಫುರಿಸೋ ಭಾವನೆಗಳಿಗೆ ಗಡಿರೇಖೆಗಳ ಹಂಗಿಲ್ಲ. ಹಾಗೆ ಹುಟ್ಟಿಕೊಳ್ಳುವ ಪ್ರೀತಿಯಲ್ಲಿ ಪ್ರಪೋಸು ಹಾಳುಮೂಳುಗಳ ಸಂತೆಯಲ್ಲಿ ಪ್ರಧಾನವಾಗಿ ಗುರುತಿಸಿಕೊಳ್ಳೋದು ಕಿಸ್ ಅರ್ಥಾತ್ ಮುತ್ತು!
ಈಗಂತೂ ಸ್ಪೀಡ್ ದುನಿಯಾ. ಹುಡುಗ ಹುಡುಗೀರೆಲ್ಲರೂ ಎಲ್ಲ ವಿಚಾರದಲ್ಲಿಯೂ ವೇಗಕ್ಕೆ ಒಗ್ಗಿಕೊಂಡಿದ್ದಾರೆ. ಪ್ರೀತಿ ಪ್ರೇಮಗಳ ವಿಚಾರಕ್ಕೂ ಅದು ಪಕ್ಕಾ ಅನ್ವಯಿಸುತ್ತೆ. ಹಿಂದಿನ ಕಾಲದಲ್ಲಿ ವರ್ಷಾಂತರಗಳ ಕಾಲದ ಪ್ರೀತಿಯಲ್ಲಿ ಘಟಿಸುವಂಥವೆಲ್ಲ ಈಗ ಒಂದೇ ವಾರದಲ್ಲಿಯೇ ಘಟಿಸಿ ಬಿಡುತ್ತವೆ. ಬೆಳಗ್ಗೆ ಪ್ರೀತಿಯಾದರೆ ಮಧ್ಯಾನ್ಹ ಪ್ರಪೋಸ್ ಮಾಡ್ತಾರೆ. ಸಂಜೆ ಗೋಧೂಳಿಯ ಹೊತ್ತಿಗೆಲ್ಲ ಕಾಫಿ ಶಾಪುಗಳಲ್ಲಿ ಎದುರುಬದುರಾಗಿ, ಕತ್ತಲ ಸೆರಗು ಹಾಸುತ್ತಲೇ ಮುತ್ತಿನ ವಿನಿಮಯವಾಗಿ ಜೋಡಿ ಜೀವಗಳು ಬೆಚ್ಚಗಾಗುತ್ತವೆ.
ಹೀಗೆ ರೋಮಾಂಚಕ ಭಾವ ಮೂಡಿಸೋ ಮುತ್ತು ಅದೆಷ್ಟು ಅಪಾಯ ಅಂತೇನಾದರೂ ತಿಳಿದರೆ ಅದರ ಬಗೆಗಿರೋ ಅಷ್ಟೂ ರೊಮ್ಯಾಂಟಿಕ್ ಕಲ್ಪನೆಗಳು ತಕ್ಷಣವೇ ಕಮರಿ ಹೋಗುತ್ತವೆ. ಡಚ್ ವಿಜ್ಞಾನಿಗಳು ನಡೆಸಿದ ಸಂಶೋಧನೆಯೊಂದು ಈ ಥರದ ಭೀಕರ ಸತ್ಯವನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ. ಅದರನ್ವಯ ಹೇಳೋದಾದ್ರೆ, ಒಂದು ಸಲ ಮುತ್ತಿಟ್ಟರೆ ಎಂಭತ್ತು ಮಿಲಿಯನ್ನಿಗೂ ಹೆಚ್ಚು ಬ್ಯಾಕ್ಟೀರಿಯಾಗಳು ದಾಟಿಕೊಳ್ತಾವಂತೆ. ಈ ವಿಜ್ಞಾನಿಗಳು ಇಪ್ಪತ್ತೊಂದು ಜೋಡಿಗಳನ್ನು ನಿರಂತರವಾಗಿ ಅಧ್ಯಯನಕ್ಕೊಳಪಡಿಸಿದಾಗ ಇಂಥಾದ್ದೊಂದು ಭಯಾನಕ ಸಂಗತಿ ಮನದಟ್ಟಾಗಿದೆಯಂತೆ!
ಮೆಸೇಜಿನ ಪವರ್!

ಈಗ ನಮ್ಮ ಮಾತುಗಳೆಲ್ಲವೂ ಬೆರಳಂಚಿಗೆ ಬಂದು ನಿಂತಿವೆ. ಸಂಭಾಷಣೆ, ಆಲೋಚನೆ, ವ್ಯವಹಾರಗಳೆಲ್ಲವೂ ಬೆರಳ ತುದಿಯಲ್ಲಿ ನಿಂತು ಲಾಸ್ಯವಾಡಲಾರಂಭಿಸಿವೆ. ಒಂದು ಕಾಲದಲ್ಲಿ ಸ್ನೇಹಿತರು, ಸಂಬಂಧಿಕರು ವರ್ಷಕ್ಕೊಂದು ಸಾರಿ ಸೇರಿದರೆ ಅದೇ ಹೆಚ್ಚು. ಆ ನಂತರದ ಸಂಭಾಷಣೆ, ಹಾರೈಕೆಗಳೆಲ್ಲವೂ ಮನಸಲ್ಲಿಯೇ ಸಂಭವಿಸುತ್ತಿತ್ತು. ಈಗ ಮೊಬೈಲು ಎಲ್ಲರನ್ನೂ ಹತ್ತಿರ ಬೆಸೆದಿದೆ. ದಿನಾ ಬೆಳಗ್ಗೆ ಒಂದು ಗುಡ್ ಮಾರ್ನಿಂಗ್, ಗುಡ್ ನೈಟ್ ಮೆಸೇಜು ಬಿಟ್ಟರೇನೇ ಸಂಬಂಧ ಗಟ್ಟಿಯಾಗಿರುತ್ತೆಂಬಂತೆ ಬಹುತೇಕರು ಅದಕ್ಕೆ ಅಡಿಕ್ಟ್ ಆಗಿಬಿಟ್ಟಿದ್ದಾರೆ.
ತೀರಾ ಕೆಲಸ ಕಾರ್ಯಕ್ಕೆ ಸಂಬಂಧಿಸಿದ ಮೆಸೇಜುಗಳೇ ಕಿರಿಕಿರಿ ಉಂಟು ಮಾಡುತ್ತವೆ. ಅಂಥಾ ಒತ್ತಡದಲ್ಲಿರುವವರ ಪಾಲಿಗೆ ಗುಡ್ ಮಾರ್ನಿಂಗ್ ಮತ್ತು ಗುಡ್‌ನೈಟ್‌ಗಳಂಥ ಯಾಂತ್ರಿಕ ಮೆಸೇಜುಗಳಂದ್ರೆ ಅಲರ್ಜಿ. ಕಸುಬಿಲ್ಲದವರು ಮಾತ್ರವೇ ಅಂಥಾದ್ದನ್ನು ವಿನಿಮಯ ಮಾಡಿಕೊಳ್ತಾರೆ ಅನ್ನೋದು ಆ ವೆರೈಟಿಯ ಜನರ ಅಚಲ ನಂಬಿಕೆ. ಇಂತಿಂಥವರಿಗೇ ಅಂತೇನಿಲ್ಲ; ಇಂಥಾ ಯಾಂತ್ರಿಕ ಮೆಸೇಜುಗಳ ವಿನಿಮಯ ನಮಗೆಲ್ಲರಿಗೂ ಒಂದಲ್ಲ ಒಂದು ಹಂತದಲ್ಲಿ ರೇಜಿಗೆ ಹುಟ್ಟಿಸಿರುತ್ತೆ. ಆದರೆ ಸೈಕಾಲಜಿ ಮಾತ್ರ ಇದಕ್ಕೆ ತದ್ವಿರುದ್ಧವಾದ ಸಂಶೋಧನೆಯೊಂದನ್ನು ನಡೆಸಿದೆ.
ಅದರನ್ವಯ ಹೇಳೋದಾದ್ರೆ, ಬೆಳಗ್ಗೆ ಮತ್ತು ರಾತ್ರಿ ವಿನಿಮಯ ಮಾಡೋ ಇಂಥ ಮೆಸೇಜುಗಳು ಮಿದುಳಲ್ಲಿರೋ ಖುಷಿಯ ಕಣಗಳನ್ನು ಆಕ್ಟೀವ್ ಆಗಿಡುತ್ತದೆಯಂತೆ. ಅದೊಂದು ಥರದಲ್ಲಿ ಬೆಚ್ಚನೆಯ ಭಾವವನ್ನ ಮೂಡಿಸುತ್ತದೆಯಂತೆ. ಒಂದು ದಿಕ್ಕಿನಲ್ಲಿ ಆಲೋಚಿಸಿದರೆ ಈ ಸಂಶೋಧನೆಯಲ್ಲಿ ಸತ್ಯವಿದ್ದರೂ ಇರಬಹುದು. ಯಾರೂ ಇಲ್ಲದೆ ಅನಾಥರಾಗಿರುವವರು, ಎಲ್ಲರೂ ಇದ್ದೂ ಆ ಪ್ರೀತಿ ದಕ್ಕದಿರೋ ಜೀವಗಳ ಪಾಲಿಗೆ ಇಂಥಾ ಮೆಸೇಜುಗಳು ತಮ್ಮನ್ನು ವಿಚಾರಿಸಿಕೊಳ್ಳಲು ಯಾರೋ ಇದ್ದಾರೆಂಬ ಭಾವ ಮೂಡಬಹುದು.
ಏಕಾಂತ ಒಳ್ಳೇದಲ್ಲ

ಆಧುನಿಕ ಜಗತ್ತು ಪ್ರತಿಯೊಬ್ಬರಿಗೂ ಒತ್ತಡದ ಬಳುವಳಿ ಕೊಟ್ಟಿದೆ. ಕೆಲಸ, ಕಾರ್ಯ , ಕಷ್ಟ ಕಾರ್ಪಣ್ಯಗಳು ಸೇರಿದಂತೆ ಇಲ್ಲಿ ಎಲ್ಲವೂ ಉಸಿರುಗಟ್ಟಿಸೋ ಸರಕುಗಳೇ. ರೇಸಿಗಿಳಿದಂತೆ ಪ್ರತೀ ದಿನ ಕಳೆಯೋ ಮಂದಿಯ ಪಾಲಿಗೆ ಕೊಂಚ ಏಕಾಂತ, ತಟುಕು ಸಮಾಧಾನವೂ ಮರೀಚಿಕೆಯಾಗಿ ಬಿಟ್ಟಿದೆ. ಇಂಥಾ ಜಂಜಾಟಗಳಲ್ಲಿ ಸಿಕ್ಕಿಕೊಂಡಿರೋ ಪ್ರತಿಯೊಬ್ಬರೂ ಸಣ್ಣದೊಂದು ಏಕಾಂತದಲ್ಲಿ ಮಿಂದೆದ್ದು ನಿರಾಳವಾಗಲು ಸದಾ ಹಪಾಹಪಿಸ್ತಾರೆ. ಆದ್ರೆ ಅದೇನೇ ಪ್ರಯತ್ನ ಪಟ್ಟರೂ ಅದು ಬಹುತೇಕರಿಗೆ ಸಿಗೋದೇ ಇಲ್ಲ. ಆ ನಿರಾಸೆಯ ಮುಂದೆ ಹೆಚ್ಚಿನವರಿಗೆ ಕಂತೆ ಕಂತೆ ಕಾಸೂ ಕಸದಂತೆ ಕಾಣಿಸಲಾರಂಭಿಸುತ್ತೆ.
ಹಾಗಾದ್ರೆ ಈ ಏಕಾಂತ, ಬ್ಯುಸಿ ಲೈಫಿನ ಬಾನಿನಲ್ಲಿ ಮೂಡೋ ಕಾಮನಬಿಲ್ಲಿನಂಥಾ ಒಚಿಟಿ ವಾತಾವರಣ ಅಷ್ಟೊಂದು ಪಾಸಿಟಿವ್ ಎನರ್ಜಿ ತುಂಬುತ್ತಾ ಅನ್ನೋ ಪ್ರಶ್ನೆ ಮೂಡುತ್ತೆ. ಇದಕ್ಕೆ ನಮ್ಮ ನಡುವೆ ಬಿಲ್ಡಪ್ಪುಗಳ ಒಂದಷ್ಟು ಉತ್ತರಗಳು ಸಿದ್ಧವಿರಬಹುದು. ಆದರೆ ವಿಜ್ನಾನ, ಸೈಕಾಲಜಿ ಮತ್ತು ಅದರ ತಳಹದಿಯಲ್ಲಿ ನಡೆದಿರೋ ಒಂದಷ್ಟು ಸಂಶೋಧನೆಗಳು ಮಾತ್ರ ಮತ್ತೊಂದು ಭಯಾನಕ ಸಂಗತಿಯನ್ನ ಜಾಹೀರು ಮಾಡುತ್ತವೆ.
ಅಂಥಾ ಸಂಶೋಧನೆಗಳು ಏಕಾಂತದ ಡೇಂಜರಸ್ ಮುಖವನ್ನು ಅನಾವರಣಗೊಳಿಸಿದೆ. ಒಂದಷ್ಟು ಮಂದಿ ಸಂಶೋಧಕರು ಏಕಾಂತದ ಬಗ್ಗೆ ವಿವರವಾದ ಅಧ್ಯಯನ ನಡೆಸಿದ್ದರು. ಅದರ ವಿವಿಧ ಹಂತಗಳನ್ನು ಅಭ್ಯಸಿಸಿದ್ದರು. ಆ ಸಂದರ್ಭದಲ್ಲಿ ಏಕಾಂತವೆಂಬುದು ಹೆಚ್ಚು ದಿನಗಳ ಕಾಲ ನಿರಂತರವಾಗಿದ್ದರೆ ಅದರಿಂದ ಅನಾಹುತಗಳೇ ಜಾಸ್ತಿ ಸಂಭವಿಸ್ತವೆ ಎಂಬ ವಿಚಾರವನ್ನ ಮನಗಂಡಿದ್ದಾರೆ. ಅತಿಯಾದ ಏಕಾಂತ ಅದೆಷ್ಟು ಡೇಂಜರ್ ಅಂದ್ರೆ, ಅದು ಪ್ರತೀ ದಿನ ಹದಿನೈದು ಸಿಗರೇಟು ನಮ್ಮ ಆರೋಗ್ಯವನ್ನು ಘಾಸಿಗೊಳಿಸಬಹುದಾದಷ್ಟೇ ಮನಸು ದೇಹಗಳ ಮೇಲೆ ಪ್ರಭಾವ ಬೀರುತ್ತೆ. ಏಕಾಂತ ಬಯಸುವವರು ಅದರ ಈ ಮಗ್ಗುಲನ್ನೂ ಅರಿತುಕೊಂಡು ಎಚ್ಚರಿಕೆಯಿಂದಿದ್ದರೊಳಿತು.
ಗಡ್ಡ ಬಿಟ್ಟೋರು ಗಡಗಡ
ಮನುಷ್ಯನ ಮನಸೆಂಬುದು ತಡಕಿದಷ್ಟೂ ವೈಚಿತ್ರ್ಯಗಳೇ ಸಿಗೋ ಉಗ್ರಾಣವಿದ್ದಂತೆ. ಅಲ್ಲಿ ರಂಗು ರಂಗಾದ ಅಂಶಗಳ ಜೊತೆಗೆ ಅರಗಿಸಿಕೊಳ್ಳಲಾಗದಂಥಾ ಭಯಾನಕ ಭಯ, ಕಾಯಿಲೆಗಳೂ ಇದ್ದಾವೆ. ಅವುಗಳನ್ನೆಲ್ಲ ಬಗೆದು ತೆಗೆಯುವ ಸಲುವಾಗಿ ಮನಃಶಾಸ್ತ್ರಜ್ಞರು ಸದಾ ಕಾಲವೂ ಪ್ರಯತ್ನಿಸುತ್ತಲೇ ಇದ್ದಾರೆ. ಆದರೆ ಅದರ ಅಗೋಚರ, ಅಗಣಿತ ವಿಸ್ತಾರದ ಮುಂದೆ ತಜ್ಞರೇ ಆಗಾಗ ಸೋತು ಮಂಡಿಯೂರುತ್ತಿದ್ದಾರೆ. ನೀವೇನಾದರೂ ಮನುಷ್ಯನಿಗಿರೋ ಫೋಬಿಯಾಗಳ ಬಗ್ಗೆ ತಲಾಶಿಗಿಳಿದರೆ ಮನುಷ್ಯನ ಮನಸ್ಸಿನ ನಿಜವಾದ ಸಂಕೀರ್ಣತೆ ಕಂಡಿತಾ ಅರಿವಿಗೆ ಬರುತ್ತೆ.
ಈಗ ನಾವು ಹೇಳಹೊರಟಿರೋದು ಅದೇ ಥರದ ವಿಚಿತ್ರ ಫೋಬಿಯಾದ ಬಗ್ಗೆ. ಕೆಲ ಮಂದಿಗೆ ಎತ್ತರ, ನೀರು, ಪ್ರಾಣಿಗಳು ಸೇರಿದಂತೆ ಅನೇಕಾನೇಕ ವಿಚಾರದಲ್ಲಿ ಭಯಗಳಿರುತ್ತವೆ. ಆದ್ರೆ ಈಗ ಫ್ಯಾಶನ್ ಆಗಿರೋ ಗಡ್ಡದ ಬಗ್ಗೆಯೂ ಬೆಚ್ಚಿಬೀಳುವಂಥಾ ಫೋಬಿಯಾವೊಂದಿದೆ ಅಂದ್ರೆ ನಂಬಲೇ ಬೇಕು. ಗಡ್ಡ ಬಿಟ್ಟವರನ್ನ ಕಂಡರೆ ಒಂದು ಕಾಲದಲ್ಲಿ ಮಕ್ಕಳು ಹೆದರುತ್ತಿದ್ದವು. ಆದರೆ ಈಗಿನ ಜನರೇಷನ್ನಿನ ಮಕ್ಕಳು ನಿರಾಯಾಸವಾಗಿ ಗಡ್ಡ ನೀವಿ, ಕೆದರಿ ಚೆಲ್ಲಾಪಿಲ್ಲಿ ಮಾಡಿ ಕೇಕೆ ಹಾಕುತ್ತವೆ. ಆದರೆ ಅದೆಷ್ಟೋ ದೊಡ್ಡವರೇ ಗಡ್ಡ ಕಂಡರೆ ಎದೆ ಬಡಿತ ಹೆಚ್ಚಾಗಿ ನಿಂತೇ ಹೋದಂತೆ ಭಯ ಪಡ್ತಾರಂತೆ!
ಇದು ವಿಚಿತ್ರವಾದರೂ ನಂಬಲೇ ಬೇಕಾದ ವಿಚಾರ. ಅಂಥಾ ಭಯಕ್ಕೆ ಮನಃಶಾಸ್ತ್ರಜ್ಞರು ಬಿಯರ್ಡ್ ಫೋಬಿಯಾ ಎಂದೇ ಹೆಸರಿಟ್ಟಿದ್ದಾರೆ. ಈ ಫೋಬಿಯಾ ಹೊಂದಿರೋ ವ್ಯಕ್ತಿಗಳು ಗಡ್ಡ ಕಂಡರೆ ಹುಲಿ ಸಿಂಹ ಕಂಡಂತೆ ಬೆಚ್ಚಿ ಬೀಲ್ತಾರಂತೆ. ಅಂಥವರೆದುರು ಏಕಾಏಕಿ ಗಡ್ಡಧಾರಿಯೊಬ್ಬ ಕಾಣಿಸಿಕೊಂಡರೆ ಅಕ್ಷರಶಃ ಬೆವರಾಡ್ತಾರೆ. ಅವರ ನಾಲಿಗೆ ಪಸೆ ಆರಿ ಎದೆ ತೀವ್ರವಾದ ವೇಗದಲ್ಲಿ ಬಡಿದುಕೊಳ್ಳಲಾರಂಭಿಸುತ್ತೆ. ಈ ಫೋಬಿಯಾ ಇರುವವರು ಸಾರ್ವಜನಿಕ ಸ್ಥಳಗಳಲ್ಲಿ ಒಂಟಿಯಾಗಿ ಓಡಾಡಲೂ ಅಂಜುತ್ತಾರೆ. ತೀರಾ ಖಾಸಗಿ ಸಮಾರಂಭಗಳಲ್ಲಿ ಅದೆಲ್ಲಿ ಗಡ್ಡಧಾರಿಗಳಿರುತ್ತಾರೋ ಎಂಬ ಭಯದಿಂದ ಸಮಾರಂಭಗಳಿಗೆ ಹೋಗಲೂ ಹಿಂದೇಟು ಹಾಕ್ತಾರಂತೆ!
ಹಾರರ್ ವಾರ್ನಿಂಗ್
ಪ್ರತೀ ಸಿನಿಮಾ ಪ್ರೇಮಿಗಳ ಪಾಲಿಗೂ ಒಂದೊಂದು ನಿರ್ದಿಷ್ಟ ಜಾನರಿನ ಸಿನಿಮಾಗಳು ಪ್ರಿಯವಾಗಿರುತ್ತವೆ. ಆದರೆ ಈ ಹಾರರ್ ಸಿನಿಮಾಗಳ ಮೋಹ ಮಾತ್ರ ಬಹುತೇಕ ಎಲ್ಲ ವರ್ಗಗಳ ಪ್ರೇಕ್ಷಕರನ್ನೂ ಬಹುವಾಗಿ ಆವರಿಸಿಕೊಂಡಿದೆ. ಬೇರೆ ಭಾಷೆಗಳ ಕಥೆ ಹಾಗಿರಲಿ; ನಮ್ಮ ಕನ್ನಡ ಸಿನಿಮಾ ಪ್ರೇಮಿಗಳೂ ಕೂಡಾ ಹಾರರ್ ಮೂವಿಗಳನ್ನ ಮುಗಿಬಿದ್ದು ನೋಡ್ತಾರೆ. ಕಥೆ, ನಿರೂಪಣೆ ಕೊಂಚ ಚೆನ್ನಾಗಿದ್ದರೂ ಕೂಡಾ ಇಂಥಾ ಸಿನಿಮಾಗಳು ಭರ್ಜರಿ ಕಲೆಕ್ಷನ್ನಿನೊಂದಿಗೆ ಜಯ ಗಳಿಸಿ ಬಿಡುತ್ತವೆ. ಆದರೆ ಇಂಥ ಹಾರರ್ ಸಿನಿಮಾಗಳು ನಮ್ಮ ಮೇಲೆ ಮಾಡೋ ಪರಿಣಾಮಗಳ ಕಥೆ ಮಾತ್ರ ತುಂಬಾನೇ ಹಾರಿಬಲ್ ಆಗಿದೆ!
ಹಾರರ್ ಸಿನಿಮಾ ನೋಡಲು ಒಂದು ರೇಂಜಿಗೆ ಗುಂಡಿಗೆ ಇರಬೇಕಾಗುತ್ತೆ. ಅದರಲ್ಲಿನ ಕೆಲ ಸೀನುಗಳಂತೂ ರೋಮವೆಲ್ಲ ಸೆಟೆದು ನಿಂತು ಭಯವಾಗಿ ಬಾಯಿ ಬಡಿದುಕೊಳ್ಳುವಂತಿರುತ್ತವೆ. ಅಂಥಾ ಭಯದ ಉತ್ತುಂಗದಲ್ಲಿ ನಮ್ಮ ದೇಹದೊಳಗೆ ಎಂತೆಂಥಾ ಬದಲಾವಣೆಗಳಾಗಬಹುದು, ಯಾವ್ಯಾವ ಥರದ ರಾಸಾಯನಿಕಗಳು ಉತ್ಪತ್ತಿಯಾಗಬಹುದೆಂದು ಅರ್ಥವಾಗದಿರುವಂಥಾದ್ದೇನೂ ಅಲ್ಲ. ಆ ಭಯವೇ ನಸೀಬುಗೆಟ್ಟರೆ ಜೀವವನ್ನೇ ಕಿತ್ತುಕೊಳ್ಳುವಷ್ಟು ಅನಾಹುತಕಾರಿಯಾಗಿರುತ್ತದೆ.
ಆ ಹುಚ್ಚು ಜೀವ ಉಳಿಸಿತು!

ಈಗಿನ ಮಕ್ಕಳು ಊಟ ತಿಂಡಿ ಬಿಟ್ಟರೂ ಮೊಬೈಲ್ ಬಿಡೋದಿಲ್ಲ ಅನ್ನೋದು ಸರ್ವವ್ಯಾಪಿಯಾಗಿರೋ ಅಪವಾದ. ಆದರೆ ಯುವ ಸಮುದಾಯ ಮಾತ್ರ ಈ ಅಪವಾದದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹಾಗೆ ಯಾರೇನು ಅಂದುಕೊಳ್ಳುತ್ತಾರೆ, ತಮ್ಮ ಬಗ್ಗೆ ಏನು ಮಾತಾಡಿಕೊಳ್ಳುತ್ತಾರೆ ಎಂಬ ಬಗ್ಗೆ ಆಲೋಚಿಸುವಷ್ಟು ಪುರಸೊತ್ತೂ ಅವರಿಗಿಲ್ಲ. ಯಾಕಂದ್ರೆ ವೆಬ್ ಸರಣಿಗಳನ್ನು ಬೇಗ ಬೇಗನೆ ನೋಡಿ ಮುಗಿಸುವ, ಥರ ಥರದ ಗೇಮುಗಳಲ್ಲಿ ಮುಳುಗೇಳುತ್ತಾ, ಆನ್‌ಲೈನ್‌ನಲ್ಲೇ ಚೆಂದದ ಹುಡುಗೀರಿಗೆ ಬಲೆ ಬೀಸೋ ತುರ್ತು ಅವರೆಲ್ಲರಿಗಿದೆ. ಆದರೆ ರಾತ್ರಿಯೆಲ್ಲ ನಿದ್ದೆಗೆಟ್ಟು ಎದ್ದು ಕೂರಿಸೋ ಮೊಬೈಲ್ ಮೋಹವೇ ಅದೆಷ್ಟೋ ಮಂದಿಯ ಜೀವ ಉಳಿಸಲೂ ಬಹುದೆಂಬುದಕ್ಕೆ ಉದಾಹರಣೆಯಂಥ ಘಟನೆಯೊಂದು ಮಹರಾಷ್ಟ್ರದಲ್ಲಿ ನಡೆದಿದೆ.
ಈಗ ಎಲ್ಲ ಗೇಮುಗಳನ್ನೂ ನುಂಗಿಕೊಂಡಂತೆ ವೆಬ್ ಸೀರೀಸ್‌ಗಳು ಜನರನ್ನ ಆವರಿಸಿಕೊಂಡಿವೆ. ಅಂಥಾದ್ದೇ ವೆಬ್ ಸೀರೀಸ್ ಹುಚ್ಚಿಗೆ ಬಿದ್ದಿದ್ದ ಹುಡುಗ ಕುನಾಲ್ ಮೊಹೈಟ್. ಆತನಿಗಿನ್ನೂ ಹದಿನೆಂಟು ವರ್ಷ ವಯಸ್ಸು. ಆತನಿಗೆ ವೆಬ್ ಸೀರೀಸ್ ಮೇಲೆ ಅದೆಂಥಾ ಮೋಹವಿತ್ತೆಂದರೆ ಅದಕ್ಕಾಗಿ ಹದಿನೆಂಟು ತಾಸು ಸಿಕ್ಕರೂ ಸಾಲುತ್ತಿರಲಿಲ್ಲ. ಆದ್ದರಿಂದಲೇ ಅಹೋರಾತ್ರಿ ಹೆಚ್ಚೂ ಕಮ್ಮಿ ಎಚ್ಚರವಾಗಿಯೇ ಇರುತ್ತಿದ್ದ. ದೊಂಬಿವಿಲಿಯಲ್ಲಿ ವಾಸಿಸುತ್ತಿದ್ದ ಈ ಹುಡುಗ ಇತ್ತೀಚೆಗೆ ಒಂದು ದಿನ ಯಥಾ ಪ್ರಕಾರ ವೆಬ್ ಸೀರೀಸ್ ನೋಡುತ್ತಿದ್ದ. ನಸುಕಿನ ವೇಳೆ ಸುಮಾರು ನಾಲಕ್ಕು ಘಂಟೆಗೆ ಹೊರಗಡೆಯಿಂದ ವಿಚಿತ್ರ ಶಬ್ದ ಕೇಳಿಸಿದೆ.
ತಕ್ಷಣವೇ ಆ ಹುಡುಗ ಏನೋ ಅನಾಹುತ ನಡೆದಿದೆ ಅಂದುಕೊಂಡು ಹೊರ ಬಂದು ನೋಡಿದರೆ ಎದುರಿನ ಎರಡಂತಸ್ತಿನ ಅಪಾರ್ಟ್‌ಮೆಂಟಿನ ಸೀಲಿಂಗ್ ಸಿಂಕ್ ಆಗಿ ಕೆಳಕ್ಕೆ ಬರಲಾರಂಭಿಸಿತ್ತು. ಆ ಅಪಾರ್ಟ್‌ಮೆಂಟಿನ ಮಂದಿಯೆಲ್ಲ ಗಾಢ ನಿದ್ದೆಯಲ್ಲಿದ್ದರು. ಆದರೂ ಹುಡುಗ ಆಸುಪಾಸಿನವರನ್ನು ಕರೆದೆಬ್ಬಿಸಿ ಬೊಬ್ಬೆ ಹೊಡೆದು ಎಚ್ಚರಿಕೆ ನೀಡಿದ್ದಾನೆ. ತಕ್ಷಣವೇ ಆ ಅಪಾರ್ಟ್‌ಮೆಂಟಿನಲ್ಲಿದ್ದ ಎಪ್ಪತೈದು ಮಂದಿ ಓಡೋಡಿ ಹೊರ ಬಂದಿದ್ದಾರೆ. ಅದಾಗಿ ಸ್ವಲ್ಪ ಹೊತ್ತಿನಲ್ಲಿಯೇ ಇಡೀ ಕಟ್ಟಡ ಹಂತ ಹಂತವಾಗಿ ನೆಲಕ್ಕುರುಳಿದೆ. ಆ ಹುಡುಗನಿಗೆ ವೆಬ್ ಸೀರೀಸ್ ಹುಚ್ಚಿಲ್ಲದೇ ಹೋಗಿದ್ದರೆ ಆ ಎಪ್ಪತೈದು ಮಂದಿ ಗಾಢ ನಿದ್ರೆಯಲ್ಲಿಯೇ ಚಿರನಿದ್ರೆಗೆ ಜಾರಿ ಬಿಡುತ್ತಿದ್ದರು. ಈ ಹುಡುಗನ ಸಮಯ ಪ್ರಜ್ಞೆ ಮತ್ತು ಸಾಹಸವನ್ನು ಆಸುಪಾಸಿನ ಜನರು, ಪೊಲೀಸರೆಲ್ಲ ಕೊಂಡಾಡಿದ್ದಾರೆ. ಕೆಲವೊಮ್ಮೆ ಚಟಗಳೂ ಕೆಲಸಕ್ಕೆ ಬರುತ್ತವೆಂಬುದಕ್ಕೆ ಇದಕ್ಕಿಂತಲೂ ಬೇರೆ ಉದಾಹರಣೆ ಬೇಕಿಲ್ಲವೇನೋ…