ಈ ಭೂಮಿಯ ಮೇಲೆ ಸಹಸ್ರಾರು ಕೋಟಿ ಜೀವ ಸಂಕುಲವಿರೋದು ಗೊತ್ತಿರುವ ವಿಚಾರ. ಈವತ್ತಿಗೂ ಇಂಥಾ ಅನೇಕ ಜೀವಿಗಳು ಯಾವ ಸಂಶೋಧನೆಗಳ ನಿಲುಕಿಗೂ ಸಿಗದೆ ಜೀವಿಸುತ್ತಿವೆ. ಅಂಥವುಗಳ ಜಾಡು ಹಿಡಿದು ಹೊರಟಿರುವ ದೊಡ್ಡದೊಂದು ಜೀವ ವಿಜ್ಞಾನಿಗಳ ಪಡೆಯೇ ಜಗತ್ತಿನಲ್ಲಿದೆ. ಹೀಗೆ ಭೂಮಿಯ ಮೇಲೆರುವ ಜೀವರಾಶಿಗಳನ್ನು ಪತ್ತೆ ಹಚ್ಚೋದು, ಅವುಗಳ ಪ್ರಬೇಧಗಳನ್ನು ಗುರುತಿಸೋದೇ ಅಷ್ಟು ಕಷ್ಟವಾಗಿರುವಾಗ, ಸಮುದ್ರದಾಳದಲ್ಲಿರುವ ಅಖಂಡ ಜಲಚರಗಳನ್ನ ಜಾಡು ಹಿಡಿಯೋದು ಅದೆಂಥಾ ಕಷ್ಟದ ವಿಚಾರ ಅನ್ನೋದು ಯಾರಿಗಾದರೂ ಅರಿವಾಗದಿರೋದಿಲ್ಲ. ಇಷ್ಟು ಜಟಿಲವಾಗಿದ್ದರೂ ಕೂಡಾ ಈ ವರೆಗೂ ಒಂದಷ್ಟು ಜಲಚರ ಜೀವಿಗಳ ಜಾಡನ್ನು ಪತ್ತೆಹಚ್ಚಲಾಗಿದೆ. ಅದರಲ್ಲಿಯೂ ನಮಗೆ ಪರಿಚಿತವಿರುವ ಮೀನುಗಳ ಜಗತ್ತಿನ ಅಪರಿಚಿತವಾದ ವಿಚಾರಗಳಿವೆಯಲ್ಲಾ? ಅದು ನಿಜಕ್ಕೂ ಬೆರಗಾಗಿಸುವಂತಿರೋದು ಸುಳ್ಳಲ್ಲ!
ಈ ಸಾಲಿನಲ್ಲಿ ಮೊದಲಿಗೆ ಅತ್ಯಂತ ವಿಷಕಾರಿಯಾದ, ಯಾಮಾರಿದರೆ ಕ್ಷಣಾರ್ಧದಲ್ಲಿ ಮನುಷ್ಯರ ಜೀವವನ್ನೇ ತೆಗೆಯಬಲ್ಲ ಮೀನುಗಳ ಬಗ್ಗೆ ಹೇಳೋದೊಳಿತು. ವಿಶ್ವದ ಅತ್ಯಂತ ವಿಷಕಾರಿ ಮೀನು ಎಂದರೆ ಅದು ಕಲ್ಲುಮೀನು. ಭಾರತೀಯ ಸಾಗರ ಹಾಗೂ ಪೆಸಿಫಿಕ್ ಸಾಗರಗಳ ಕರಾವಳಿ ಪ್ರದೇಶಗಳಲ್ಲಿ ಸರಿಸುಮಾರು ಐದು ಜಾತಿಯ ಕಲ್ಲು ಮೀನುಗಳು ಕಾಣ ಸಿಗುತ್ತವೆ. ಮಿಡ್ಜೆಟ್ ಸ್ಟೋನ್ ಫಿಶ್, ಎಸ್ಟುವಾರಿನ್ ಸ್ಟೋನ್‌ಫಿಶ್, ಕೆಂಪು ಸಮುದ್ರದ ಕಲ್ಲುಮೀನು, ಸಿನಾನ್ಸಿಯಾ ಪ್ಲಾಟಿರಿಂಚಾ, ಸ್ಟೋನ್‌ಫಿಶ್ ಗಳನ್ನು ಈ ಸಾಲಿನಲ್ಲಿ ಪ್ರಧಾನವಾಗಿ ಗುರುತಿಸಲಾಗುತ್ತದೆ. ಈ ಜಾತಿಯಲ್ಲಿಯೇ ಕೆಲ ಪ್ರಬೇಧಗಳ ಕಲ್ಲುಮೀನುಗಳು ವಿರಳವಾಗಿ ನದಿಗಳಲ್ಲಿ ವಾಸಿಸೋದೂ ಇದೆ.
ಕಲ್ಲು ಮೀನುಗಳ ಜಗತ್ತು!
ಹೀಗೆ ಮೈ ತುಂಬಾ ವಿಷ ಹೊಂದಿರುವ ಕಲ್ಲು ಮೀನುಗಳ ಇರುವಿಕೆ ಮತ್ತು ಜೀವನ ಶೈಲಿ ನಿಜಕ್ಕೂ ವಿಶೇಷವಾಗಿದೆ. ಕಲ್ಲುಮೀನು ಹವಳದ ಬಂಡೆಗಳು ಹಾಗೂ ಕೆಲ ಆಯ್ದ ಬಂಡೆಗಳ ಮರೆಯಲ್ಲಿಯೇ ವಾಸಿಸುತ್ತವೆ. ಇದರ ದೇಹದಾದ್ಯಂತ ಪಾಚಿಗಳು ಬ್ಬಿಕೊಂಡು ಬೆಳೆದಿರುತ್ತವೆ. ಈ ಮೀನು ತನ್ನ ದೇಹದ ಮೇಲೆ ಬೆಳೆದ ಪಾಚಿಯನ್ನು ಶತ್ರು ಪಡೆಯಿಂದ ತಪ್ಪಿಸಿಕೊಳ್ಳಲು ಬಳಸುತ್ತದೆ. ಸಾಗರ ತಳದಲ್ಲಿ ಉಸುಕಿನಿಂದ ತನ್ನ ದೇಹವನ್ನು ಮುಚ್ಚಿಕೊಂಡಿರೋದರಿಂದ ಈ ಮೀನು ಕಲ್ಲಿನಂತೆ ಕಾಣಿಸುತ್ತದೆ. ಈ ಕಾರಣದಿಂದಲೇ ಇದನ್ನು ಕಲ್ಲುಮೀನು ಎಂಬ ಹೆಸರು ಬಂದಿದೆ. ಅದರ ವಿಚಿತ್ರವಾದ ಬಾಹ್ಯ ಆಕಾರದಿಂದಲೇ ಅದಕ್ಕೊಂದು ವಿಶೇಷತೆ ಬಂದಿದೆ. ಪ್ರಪಂಚದಾದ್ಯಂತ ತೊಟ್ಟಿಯಲ್ಲಿಟ್ಟು ಸಾಕೋದೂ ಇದೆ. ಹೀಗೆ ಮಾನವನ ಕಣ್ಣು ಬಿದ್ದಿದ್ದರಿಂದಾಗಿ ಈ ಮೀನುಗಳ ಸಂತತಿ ಕಡಿಮೆಯಾದಂತಿದೆ.
ಆದರೂ ಕೂಡಾ ಇವುಗಳ ಸಂಖ್ಯೆ ಗಣನೀಯವಾಗಿದೆ. ಈ ಕಾರಣದಿಂದಲೇ ಕಲ್ಲುಮೀನುಗಳು ಅಳಿವಿನಂಚಿನಲ್ಲಿರುವ ಜಾತಿಗಳ ಪಟ್ಟಿಯಲ್ಲಿಲ್ಲ. ಈ ಕಲ್ಲುಮೀನಿನ ಗಾತ್ರ ಅವುಗಳ ಜಾತಿಯ ಮೇಲೆ ಅವಲಂಬಿತವಾಗಿರುತ್ತದೆ. ಇದು ಸಾಮಾನ್ಯವಾಗಿ ಎರಡೂವರೆ ಕೇಜಿ ತೂಕ ಹೊಂದಿರುತ್ತದೆ. ಇಂಥಾ ಬಹುತೇಕ ಪ್ರಬೇಧದ ಕಲ್ಲುಮೀನಿನ ದೇಹ ಕೆಂಪು, ಕಿತ್ತಳೆ ಹಾಗೂ ಹಳದಿ ಬಣ್ಣದಿಂದ ಆವರಿಸಿಕೊಂಡಿರುತ್ತವೆ. ಅವುಗಳ ಬಣ್ಣ ಮೈಮೇಲೆ ಹಬ್ಬಿಕೊಂಡಿರುವ ಪಾಚಿಗಳ ಆಧಾರದಲ್ಲಿ ನಿರ್ಧಾರಗೊಳ್ಳುತ್ತದೆ. ಈ ಕಲ್ಲುಮೀನುಗಳು ಸುತ್ತಮುತ್ತಲಿನ ಪರಿಸರದೊಂದಿಗೆ ಸುಲಭವಾಗಿ ಹೊಂದಿಕೊಳ್ಳುತ್ತವೆ. ಕಲ್ಲುಮೀನಿನ ಬೆನ್ನಿನ ರೆಕ್ಕೆ ಹದಿಮೂರು ಮುಳ್ಳುಗಳನ್ನು ಹೊಂದಿರುತ್ತೆ. ಕಲ್ಲು ಮೀನಿಗೆ ಯಾವುದೇ ಅಪಾಯವೆದುರಾದಾಗ ಈ ಮುಳ್ಳುಗಳು ಸೆಟೆದು ನಿಂತು ಯುದ್ಧಕ್ಕೆ ಸನ್ನದ್ಧವಾಗುತ್ತದೆ.
ಹಾಗಂತ ಇದರ ಆಯುಧದಂಥಾ ಮುಳ್ಳುಗಳ ಸಂಖ್ಯೆ ಕೇವಲ ಹದಿಮೂರು ಮಾತ್ರ ಅಂದುಕೊಳ್ಳುವಂತಿಲ್ಲ. ಕಲ್ಲುಮೀನಿನಲ್ಲಿ ಸೊಂಟದಲ್ಲಿ ಎರಡು ಮುಳ್ಳುಗಳಿದ್ದರೆ, ಗುದದ ಬಳಿ ಮತ್ತೆ ಮೂರು ವಿಷಕಾರಿ ಮುಳ್ಳುಗಳಿರುತ್ತವೆ. ಅವ್ಯಾವುವೂ ಹೊರಗೆ ಕಾಣಿಸೋದಿಲ್ಲ; ಚರ್ಮದ ಒಳಗಿರುತ್ತವೆ. ಈ ಮೀನುಗಳು ಭೀತಿ ಮೂಡಿಸೋದು ಈ ಕಾರಣದಿಂದಲೇ. ಇನ್ನುಳಿದಂತೆ ಬೆನ್ನೆಲುಬಿನ ಮೇಲೆ ಇರುವ ಮುಳ್ಳುಗಳ ಕೆಳಭಾಗದ ಗ್ರಂಥಿಯಲ್ಲಿ ವಿಷ ಸೃಷ್ಟಿಯಾಗುತ್ತದೆ. ಯಾವುದೇ ಸಂದರ್ಭದಲ್ಲಿ ಈ ಮೀನು ಉದ್ವೇಗಗೊಂಡು ದೇಹದ ಮೇಲೆ ಒತ್ತಡ ಹಾಕಿದಾಗ ಆ ವಿಷ ಬಿಡುಗಡೆಯಾಗುತ್ತದೆ. ಯಾವ ಸಂದರ್ಭದಲ್ಲಿ ಎಷ್ಟು ವಿಷ ಬಿಡುಗಡೆಗೊಳಿಸಬೇಕೆಂದು ತೀರ್ಮಾನಿಸಿ, ಅದಕ್ಕನುಗುಣವಾಗಿ ಮುಳ್ಳುಗಳ ಮೂಲಕ ವಿಷ ಕಾರುವ ವಿಶೇಷವಾದ ಶಕ್ತಿಯೂ ಈ ಮೀನುಗಳಿಗಿದೆ.
ವಿಷಕ್ಕಾಗಿ ವಿಶೇಷ ವ್ಯವಸ್ಥೆ
ಇದರಲ್ಲಿ ವಿಷ ಬಿಡುಗಡೆಗೆಂದೇ ವಿಶೇಷವಾದ ದೇಹ ರಚನೆ ಇರುತ್ತದೆ. ವಿಷ ಯಥೇಚ್ಛವಾಗಿ ಸ್ರವಿಸಿದಾಗ ವಿಷದ ಚೀಲಗಳು ಖಾಲಿಯಾಗೋದಿದೆ. ಖಾಲಿ ವಿಷದ ಚೀಲಗಳು ಒಂದೆರಡು ವಾರಗಳಲ್ಲಿ ಮರು ಪೂರಣಗೊಳ್ಳುತ್ತದೆ. ಕಲ್ಲು ಮೀನಿನಿಂದ ಉತ್ಪತ್ತಿಯಾಗುವ ಸಣ್ಣ ಪ್ರಮಾಣದ ವಿಷ ಕೂಡಾ ಮಾರಣಾಂತಿಕವಾಗಿದೆ. ತೀವ್ರವಾದ ನೋವು, ಪಾರ್ಶ್ವವಾಯು ಮತ್ತು ಅಂಗಾಂಶ ನೆಕ್ರೋಸಿಸ್ ಅನ್ನು ರೂಪಿಸುತ್ತದೆ. ಇದು ಹೃದಯಾಘಾತಕ್ಕೂ ಕಾರಣವಾಗಬಹುದು. ಅಂಥಾ ಸ್ಥಿತಿಯಲ್ಲಿ ವೈದ್ಯಕೀಯ ನೆರವು ಅತ್ಯಗತ್ಯವಾಗಿದೆ. ಸಂಪೂರ್ಣ ಚೇತರಿಕೆಗೆ ಸಾಕಷ್ಟು ಪ್ರಮಾಣದ ಪ್ರತಿವಿಷದ ಅಗತ್ಯವಿರುತ್ತದೆ. ಇನ್ನುಳಿದಂತೆ ಆಹಾರದ ವಿಚಾರಕ್ಕೆ ಬಂದರೆ, ಈ ಕಲ್ಲುಮೀನು ಮಾಂಸಾಹಾರಿ. ಇದರ ಆಹಾರ ವಿವಿಧ ರೀತಿಯ ಮೀನುಗಳನ್ನು, ಕಠಿಣ ಚರ್ಮದ ಜೀವಿಗಳನ್ನು ಹಾಗೂ ಸೀಗಡಿಗಳನ್ನು ಭಕ್ಷಿಸುತ್ತವೆ.
ಈ ಕಲ್ಲು ಮೀನುಗಳು ಬೇಟೆಯಾಡುವ ರೀತಿ ಕೂಡಾ ವಿಶೇಷವಾಗಿರುತ್ತದೆ. ಅದು ತನ್ನ ಬೇಟೆಯನ್ನು ದಕ್ಕಿಸಿಕೊಳ್ಳೋದು ಕೂಡಾ ರೋಚಕ ವಿಚಾರ. ಬೇಟೆ ಕಣ್ಣೆದುರು ಕಾಣಿಸಿಕೊಳ್ಳುವವರೆಗೆ ತಾಳ್ಮೆಯಿಂದ ಕಾಯುತ್ತವೆ. ಆ ಜೀವಿ ಹತ್ತಿರ ಸುಳಿಯುತ್ತಲೇ ಶರ ವೇಗದಲ್ಲಿ ಅದನ್ನು ನುಂಗುತ್ತದೆ. ಈ ದಾಳಿ ನಡೆಯೋದು ಸೆಕೆಂಡುಗಳ ಲೆಕ್ಕದಲ್ಲಿ ಮಾತ್ರ. ಕಲ್ಲುಮೀನು ಬೇಟೆಯನ್ನು ಅಟ್ಟಿಸಿಕೊಂಡು ಹೋಗುವುದ ಬಿಟ್ಟರೆ ಅದರ ಈಜಿನ ಶೈಲಿ ಮಂದಗತಿಯಲ್ಲಿರುತ್ತದೆ. ಇಂಥಾ ಕಲ್ಲುಮೀನಗಳನ್ನು ತಿಮಿಂಗಿಲುಗಳು, ಹಾವು ಮೀನುಗಳು, ಸಮುದ್ರದ ಹಾವುಗಳು ತಿನ್ನುತ್ತವೆ. ಇತರ ಜಾತಿಯ ಮೀನುಗಳಿಗಿಂತ ಭಿನ್ನವಾಗಿರುವ ಕಲ್ಲುಮೀನು ನೀರಿಂದ ಹೊರ ಬಿದ್ದ ನಂತರವೂ ಭರ್ತಿ ಒಂದು ದಿನ ಬದುಕುವಂಥಾ ಶಕ್ತಿ ಹೊಂದಿರುತ್ತವೆ.
ಒಂಟಿ ಜೀವಿ!
ಈ ಕಲ್ಲು ಮೀನುಗಳು ಇತರೇ ಮೀನುಗಳಿಗಿಂತ ಪ್ರತಿಯೊಂದು ವಿಚಾರದಲ್ಲಿಯೂ ಕೂಡಾ ಭಿನ್ನವಾಗಿರುತ್ತವೆ. ಅದು ಒಂಟಿ ಜೀವಿಯಾಗಿ ಬದುಕುತ್ತಲೇ ತನ್ನ ಪ್ರಬೇಧದ ದಂಡಿನೊಂದಿಗೂ ನಿರಾಯಾಸವಾಗಿ ಜೀವಿಸುತ್ತದೆ. ಇತರ ಅನೇಕ ಸಮುದ್ರಜೀವಿಗಳಂತೆ ಇದರ ಮೈಥುನ ನೀರಿನಲ್ಲಿ ನಡೆಯುತ್ತದೆ. ಹೆಣ್ಣು ದೊಡ್ಡ ಸಂಖ್ಯೆಯ ಮೊಟ್ಟೆಗಳನ್ನು ಬಿಡುಗಡೆ ಮಾಡುತ್ತದೆ. ಮೊಟ್ಟೆಗಳ ಮೇಲೆ ಗಂಡು ಕಲ್ಲುಮೀನು ತನ್ನ ವೀರ್ಯವನ್ನು ಹರಿಸುತ್ತೆ. ಈ ಮೊಟ್ಟೆಗಳು ಅನೇಕ ಸಮುದ್ರಜೀವಿಗಳಿಗೆ ಆಹಾರವಾಗೋದೂ ಇದೆ. ಕಡಿಮೆ ಸಂಖ್ಯೆಯ ಮೊಟ್ಟೆಗಳು ಮಾತ್ರ ಉಳಿದುಕೊಂಡು ಮರಿಯಾಗುತ್ತವೆ. ಈ ಕಲ್ಲುಮೀನುಗಳು ಮಾರಣಾಂತಿಕ ಆಯುಧವನ್ನು ಹೊಂದಿರುತ್ತವೆ. ಇದು ಸ್ವಿಚ್‌ಬ್ಲೇಡ್‌ಗೆ ಸಮನಾಗಿರುತ್ತದೆ. ಈ ಜೀವಿಗಳ ತಲೆಯ ಮೇಲೆ ನೇರವಾಗಿರುತ್ತೆ.
ಈ ಕಲ್ಲು ಮೀನಿನ ಕಣ್ಣುಗಳ ಅಡಿಯಲ್ಲಿ ಮೂಳೆಯಿಂದ ಇಂಥಾ ವಿಷಕಾರಿ ಗಂಥಿಗಳು ಬೆಳೆಯುತ್ತವೆ. ಕಲ್ಲುಮೀನುಗಳು ಅಪಾಯ ಎದುರಿಸಿದಾಗ ಅಂಥಾ ವಿಷವನ್ನು ಹೊರಹಾಕುವ ಸಾಮರ್ಥ್ಯವನ್ನೂ ಹೊಂದಿರುತ್ತವೆ. ಕಲ್ಲುಮೀನುಗಳು ತಮ್ಮ ಮುಳ್ಳುಗಳಿಂದ ನಮ್ಮ ದೇಹಕ್ಕೆ ಚುಚ್ಚಿದಾಗ ನಾವು ಬಿಸಿನೀರು ಅಥವಾ ವಿನೆಗರ್ ಅನ್ನು ಆ ಗಾಯಕ್ಕೆ ಹಚ್ಚಿದರೆ ಮಾತ್ರವೇ ನೋವು ಕಡಿಮೆಯಾಗುತ್ತದೆ. ನಂತರ ವೈದ್ಯರ ಬಳಿಗೆ ಹೋಗಲೇ ಬೇಕಿದೆ. ಇಂಥಾ ವಿಷಕಾರಿ ಕಲ್ಲು ಮೀನುಗಳ ಜೀವಿತಾವಧಿ ಸರಿಸುಮಾರು ಹತ್ತು ವರ್ಷ. ಸಾಗರದಾಳದಲ್ಲಿ ಅನೇಕಾನೇಕ ಬಗೆಯ ವಿಷಕಾರಿ ಮೀನುಗಳಿದ್ದಾವೆ. ಅವುಗಳಲ್ಲಿ ಅನೇಕವನ್ನು ಸಾಂಬಾರು ಮಾಡಿ ತಿಂದರೆ ಸಾವು ಖಚಿಕತ. ಅಂಥಾ ವಿಷದ ಮೀನುಗಳಲ್ಲಿ ಕಲ್ಲು ಮೀನುಗಳು ಭಿನ್ನವಾಗಿ ಕಾಣಿಸುತ್ತವೆ.
ವಿಶೇಷ ಮೀನುಗಳು
ಸಾಗರದ ಗರ್ಭದಲ್ಲಿ ಲೆಕ್ಕವಿಡಲಾರದಷ್ಟು ಸಂಖ್ಯೆಯಲ್ಲಿ ಮೀನುಗಳಿದ್ದಾವೆ. ಅವುಗಳಲ್ಲಿ ಕೆಲವು ವಿಶೇಷವಾದ ಗುಣ ಲಕ್ಷಣಗಳನ್ನು ಹೊಂದಿರುತ್ತವೆ. ಮನುಷ್ಯ ಎಕ್ಸ್ ರೇ ಅಥವಾ ಕ್ಷ ಕಿರಣ ಪರೀಕ್ಷೆ ಮಾಡಿಸಿದರೆ ದೇಹದ ಒಳಗಿನ ಅಂಗಗಳು ಕಾಣುತ್ತವೆ. ಆದರೆ ದೇಹದ ಒಳಗಿರುವ ಎಲ್ಲಾ ಅಂಶಗಳು ಎಕ್ಸ್ ರೇ ಮೀನಿನಲ್ಲಿ ಬರಿಗಣ್ಣಿಗೇ ಕಾಣಿಸುತ್ತವೆ. ಇವುಗಳನ್ನು ಪಾರದರ್ಶಕ ಮೀನು ಎಂದೂ ಕರೆಯುತ್ತಾರೆ. ಇದರ ದೇಹದ ಒಳಗಿನ ಮುಳ್ಳು, ಒಳಗಿನ ಅಂಗಾಂಗಗಳನ್ನು ಹೊರಗಡೆಯಿಂದಲೇ ನೋಡಬಹುದು. ಈ ಮೀನುಗಳು ದಕ್ಷಿಣ ಅಮೇರಿಕಾದ ಕಡಲುಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಕಂಡು ಬರುತ್ತವೆ. ಇವುಗಳ ದೇಹದ ಒಳಗೆ ಬೆಳಕು ಹರಿದಾಗ ಇನ್ನಷ್ಟು ಸ್ಪಷ್ಟವಾಗಿ ಇದರ ದೇಹ ರಚನೆ ಕಂಡು ಬರುತ್ತದೆ. ಈ ಕಾರಣದಿಂದಲೇ ಎಕ್ಸ್ ರೇ ಮೀನು ಜನಾಕರ್ಶಣೆ ಪಡೆದುಕೊಂಡಿದೆ.
ಅಂಥಾದ್ದೇ ವಿಶಿಷ್ಟ ಬಗೆಯ ಮತ್ತೊಂದು ಮೀನಿದೆ ಬಾವಲಿಯಂತಹ ದೇಹರಚನೆಯನ್ನು ಹೊಂದಿರುವ ಕಾರಣ ಇವುಗಳಿಗೆ ಬಾವಲಿ ಮೀನೆಂಬ ಹೆಸರು ಬಂದಿದೆ. ಬೆನ್ನು ಹಾಗೂ ಹೊಟ್ಟೆಯ ರೆಕ್ಕೆಗಳು ದೇಹದ ಉದ್ದಕ್ಕೂ ಚಾಚಿರುವ ತೆಳ್ಳನೆಯ ಹಾಳೆಯಾಗಿರುವುದರಿಂದ ಅದು ಬಾವಲಿಯ ತೊಗಲಿನ ರೀತಿ ಕಾಣಿಸುತ್ತದೆ. ಇವುಗಳು ಅಧಿಕ ಸಂಖ್ಯೆಯಲ್ಲಿ ಹಿಂದೂ ಮಹಾಸಾಗರದಲ್ಲಿ ಕಂಡು ಬರುತ್ತವೆ. ಇನ್ನೊಂದು ರೇ ಫಿಶ್. ಈ ಮೀನುಗಳು ಗಾಳಿಪಟದಂತೆ ಚೌಕಾಕಾರದಲ್ಲಿರುತ್ತವೆ. ಇವುಗಳು ಸ್ವಲ್ಪ ಮಟ್ಟಿಗೆ ವಿದ್ಯುತ್ ಶಕ್ತಿಯನ್ನು ಹೊಂದಿರುತ್ತವೆ. ಚಪ್ಪಟೆ ಮೀನು ಮುಟ್ಟಿದಾಗ ಸಣ್ಣ ಸಣ್ನ ಜೀವಿಗಳು ಕರೆಂಟು ಹೊಡೆದು ಜೀವ ಕಳೆದುಕೊಳ್ಳುತ್ತವೆ. ಇನ್ನುಳಿದಂತೆ ಸೂಜಿ ಮೀನಿನ ಬಾಯಿ ಚೂಪಾಗಿರುತ್ತೆ. ಸೂಜಿ ಮೀನಿನ ದೇಹ ತೆಳ್ಳಗಿರುತ್ತೆ. ಇದರ ಸೂಜಿಯಂತಹ ಬಾಯಿಯಲ್ಲಿ ಹಲ್ಲಿನಂತಹ ಅಂಗವಿದೆ. ಹಳದಿ ಬಣ್ಣದ ಕಣ್ಣುಗಳನ್ನು ಹೊಂದಿರುವ ಸೂಜಿ ಮೀನುಗಳು ಅಪಾಯಕಾರಿಯಲ್ಲ. ಆದರೂ ಇದರ ಉದ್ದನೆಯ ಗರಗಸದಂತಹ ಮೂತಿಯು ಗಾಬರಿ ಹುಟ್ಟಿಸುತ್ತದೆ. ಆದರೂ ಅವು ಅಷ್ಟೇನು ಅಪಾಯಕಾರಿಯಲ್ಲ.
ವಿಶೇಷ ಜಲಚರಗಳಲ್ಲಿ, ಮೀನಿನ ಸಂತತಿಯಲ್ಲಿ ಹಾರುವ ಮೀನುಗಳಂತೂ ಅತ್ಯಂತ ವಿಶೇಷವಾಗಿವೆ. ಇವು ರೆಕ್ಕೆಗಳಂಥವನ್ನು ಹೊಂದಿರುತ್ತವೆ. ಅಟ್ಲಾಂಟಿಕ್ ಸಾಗರದಲ್ಲಿ ಸಾಲ್ಮೊನ್ ಪ್ರಬೇದ ಮಾತ್ರ ಕಂಡುಬಂದರೆ, ಪೆಸಿಫಿಕ್ ಸಾಗರದಲ್ಲಿ ಈ ಜಾತಿಗೆ ಸೇರಿದ ಹಲವಾರು ಪ್ರಭೇದಗಳು ಕಂಡು ಬರುತ್ತವೆ. ಸಿಹಿ ನೀರಿನಲ್ಲಿ ಇಟ್ಟ ಸಾಲ್ಮೊನ್ ಮೊಟ್ಟೆಗಳು ಕೇಸರಿ ಬಣ್ಣದಿಂದ ಕೂಡಿದ್ದು ಬಟಾಣಿ ಕಾಳಿನ ಗಾತ್ರದ್ದಾಗಿರುತ್ತದೆ. ಮೊಟ್ಟೆಯಿಂದ ಹೊರಬಂದ ಮೂರು ರಿಂದ ಆರು ವಾರದ ಮರಿಗಳಿಗೆ ಎಂಟು ರೆಕ್ಕೆಗಳಿರುತ್ತದೆ. ಇದು ನೀರಿನಲ್ಲಿ ಈಜುವಾಗ ನೀರಿನ ಹರಿಯುವ ವಿರುದ್ದ ದಿಕ್ಕಿಗೆ ಈಜಲು ಪ್ರಯತ್ನಪಡುತ್ತದೆ. ಈ ಹಂತದಲ್ಲಿ ಬದುಕುಳಿಯುವ ಸಾದ್ಯತೆ ನೀರಿನ ಉಷ್ಣಾಂಶವನ್ನು ಅವಲಂಬಿಸಿರುತ್ತದೆ. ಹೆಚ್ಚಿನ ಮೀನುಗಳು ಅಂಥಾ ವಾತಾವರಣದಲ್ಲಿ ಅಸು ನೀಗುತ್ತವೆ.
ಸೋಶಿಯಲ್ ಮೀಡಿಯಾಗಳಲ್ಲಿಯೂ ಇವುಗಳ ಹವಾವಿದೆ. ಜಲಪಾತದ ಬಳಿ ಕರಡಿಗಳು ಹಾರುತ್ತಿರುವ ಮೀನುಗಳನ್ನು ಹಿಡಿದು ತಿನ್ನುತ್ತಿರುತ್ತದೆ. ಇವು ಜಲಪಾತವನ್ನು ಹತ್ತಿ ಏಪ್ರಿಲ್ ನಿಂದ ನವಂಬರ್ ವೇಳೆಗೆ ತಾವು ಹುಟ್ಟಿದ ನದಿಗೆ ಬಂದು ಸೇರುತ್ತದೆ. ಸಿಹಿನೀರಿಗೆ ಬಂದಮೇಲೆ ಇವು ಆಹಾರ ತ್ಯಜಿಸುತ್ತವೆ. ನಂತರದಲ್ಲಿ ದೇಹದಲ್ಲಿ ಶೇಖರಣೆಯಾದ ಕೊಬ್ಬಿನಿಂದಲೇ ಜೀವನ ಸಾಗಿಸುತ್ತದೆ. ಸಮುದ್ರದಲ್ಲಿ ಸಾವಿರಾರು ಕೀಮೀ ಈಜಿ ಬಂದದ್ದರಿಂದ ಇವುಗಳು ತಮ್ಮ ಶಕ್ತಿಯನ್ನು ಕಳೆದುಕೊಂಡು ನಿತ್ರಾಣವಾಗುತ್ತದೆ. ಈ ಹಂತದಲ್ಲಿ ಇವು ರೋಗಗಳಿಗೆ ಹಾಗೂ ಬೇರೆ ಪ್ರಾಣಿಗಳಿಗೆ ಬಲಿಯಗುತ್ತದೆ. ಮೊಟ್ಟೆಗಳನ್ನಿಟ್ಟ ಇವು ಸಾಯುವ ಮೂಲಕ ಜೀವನ ಚಕ್ರ ಪೂರ್ಣಗೊಳ್ಳುತ್ತದೆ.