ಪ್ರತಿಯೊಂದರತ್ತಲೂ ಕಣ್ಣರಳಿಸಿ ನೋಡುವಂಥಾ ಬೆರಗೊಂದನ್ನು ಎದೆಯಲ್ಲಿಟ್ಟುಕೊಂಡು ಬದುಕೋದಿದೆಯಲ್ಲಾ? ಅಂಥಾ ಮನಃಸ್ಥಿತಿ ಯಾಂತ್ರಿಕ ಜೀವನವನ್ನು ಸಾಕಷ್ಟು ಸಹ್ಯವಾಗಿಸುತ್ತೆ. ನಿಜ, ಈವತ್ತಿನ ವಾತಾವರಣದಲ್ಲಿ ಸ್ಪರ್ಧೆಗೆ ಬಿದ್ದಂತೆ ಬದುಕದಿದ್ದರೆ, ನೆಲೆ ಕಂಡುಕೊಳ್ಳೋದೇ ಕಷ್ಟವಾಗುತ್ತೆ. ಹಾಗಂತ ಒಂದ್ಯಾವುದೋ ಗುರಿಯಿಟ್ಟುಕೊಂಡು, ಬರೀ ಅದರತ್ತಲೇ ದೃಷ್ಟಿ ಕೇಂದ್ರೀಕರಿಸಿದರೆ ನಮ್ಮ ಸುತ್ತಲ ಅಚ್ಚರಿಗಳಿಗೆ ಕುರುಡಾಗಬೇಕಾಗುತ್ತೆ. ತೀರಾ ಪ್ರಾಕ್ಟಿಕಲ್ ಮಂದಿಗೆ ಇಂಥಾದ್ದೆಲ್ಲ ಕೆಲಸಕ್ಕೆ ಬಾರದ ವಿಚಾರದಂತೆ ಕಾಣಿಸಬಹುದೇನೋ… ಆದರೆ, ನಮ್ಮೊಳಗೊಂದು ಇಂಥಾ ಅಕಾರಣ ಅಚ್ಚರಿ ಇಲ್ಲದೇ ಹೋದರೆ, ಮತ್ಯಾವತ್ತೂ ದಕ್ಕದ, ಕೋಟಿ ಕಾಸಿನ ಮರ್ಜಿಗೂ ಬೀಳದ ಅಮೋಘ ಅನುಭೂತಿಯೊಂದನ್ನು ಅನ್ಯಾಯವಾಗಿ ಕಳೆದುಕೊಂಡಂತಾಗುತ್ತದೆ ಅನ್ನೋದರಲ್ಲಿ ಯಾವ ಅಚ್ಚರಿಯೂ ಇಲ್ಲ. ಅದರಲ್ಲೀ ನಮ್ಮ ಸುತ್ತಾ ಸುಳಿದಾಡುವ ಕೀಟ ಜಗತ್ತು ನಿಜಕ್ಕೂ ಅಚ್ಚರಿಯ ಕಣಜ ಇದ್ದಂತೆ.
ಅಂಥಾ ಕೀಟಗಳ ಸಾಲಿನಲ್ಲಿ ಕಣಜದ ಹುಳುಗಳೂ ಪ್ರಧಾನವಾಗಿ ಸೇರಿಕೊಳ್ಳುತ್ತವೆ. ಸಾಮಾನ್ಯವಾಗಿ ಎಲ್ಲ ಕಡೆಗಳಲ್ಲಿಯೂ ಇವುಗಳು ಇರುತ್ತವಾದರೂ, ಅದರ ಸಂತತಿ ಅತಿ ಹೆಚ್ಚಾಗಿ ಕಾಣ ಸಿಗೋದು ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿರುವ ಮಲೆನಾಡಿನಲ್ಲಿ. ಇಲ್ಲಂತೂ ಕಾಡಿಗೆ ಹೊಂದಿಕೊಂಡಂತೆಯೇ ಗದ್ದೆ ತೋಟಗಳಿರುತ್ತವೆ.ಯಾವುದೋ ಒಂದು ಪ್ರದೇಶದಲ್ಲಿ ಕೈಗೆಟುಕುವಂತೆಯೇ ಇಂಥಾ ಕಣಜಗಳ ಗೂಡುಗಳಿರುತ್ತವೆ. ಅಪ್ಪಿ ತಪ್ಪಿ ಯಾರಾದರೂ ಅಂಥಾ ಗೂಡುಗಳನ್ನು ಪುಡಿ ಮಾಡೋದೋ, ಆಕಸ್ಮಿಕವಾಗಿ ತಾಗಿಸೋದು ಮಾಡಿದರೆ ಗ್ರಹಚಾರ ಕೆಟ್ಟಿತೆಂದೇ ಅರ್ಥ. ಯಾಕೆಂದರೆ, ಈ ಹುಳುಗಳು ಏಕಾಏಕಿ ದಾಳಿ ನಡೆಸುತ್ತವೆ. ಇವುಗಳ ಕೊಂಡಿಯಲ್ಲಿ ಅದೆಂಥಾ ವಿಷ ಇರುತ್ತೆಂದೆರೆ, ಒಂದು ವೇಳೆ ಹತ್ತಾರು ಹುಳುಗಳು ಒಟ್ಟೊಟ್ಟಾಗಿ ಮನುಷ್ಯರ ತಲೆಯ ಭಾಗಕ್ಕೆ ಕಚ್ಚಿದರೆ, ಆತ ಬದುಕೋದು ಕಷ್ಟ.
ಡೆಡ್ಲಿ ಅಟ್ಯಾಕ್!
ಈವತ್ತಿಗೂ ಮಲೆನಾಡು ಭಾಗದಲ್ಲಿ ವರ್ಷಕ್ಕೆ ಒಂದಿಬ್ಬರಾದರೂ ಇಂಥಾ ಕಣಜಗಳ ಡೆಡ್ಲಿ ಅಟ್ಯಾಕಿನಿಂದ ಜೀವ ಬಿಡುತ್ತಾರೆ. ಈ ಭಾಗಗಳಲ್ಲಿ ಇಂಥಾ ಸುದ್ದಿಗಳು ಮಾಮೂಲಾಗಿರುತ್ತವೆ. ಸಾಮಾನ್ಯವಾಗಿ ಜೇನು ಸಾಕಲಾಣೆ ಮಾಡುವವರೆಲ್ಲರ ಪಾಲಿಗೆ ಈ ಕಣಜಗಳು ಪರಿಚಿತವಾದವುಗಳೇ. ಇವುಗಳ ಜೀವನ ಕ್ರಮ ಕೂಡಾ ಅಚ್ಚರಿದಾಯಕವಾಗಿವೆ. ಇಂಥಾ ಕಣಜಗಳು ಜೇನು ಕೃಷಿಗೂ ಕಂಟಕಪ್ರಾಯವಾಗಿವೆ. ಒಂದು ವೇಳೆ ಕಣಜಕ್ಕೆ ಜೇನು ಹುಳುಗಳಿರೋದು ಗೊತ್ತಾದರೆ ಹೊಂಚಿ ಕೂತು ಪೆಟ್ಟಿಗೆಯಲ್ಲಿರುವ ಬಹುತೇಕ ಹುಳುಗಳನ್ನು ನಾಶ ಪಡಿಸುತ್ತೆ. ಒಂದು ವೇಳೆ ಜೇನು ಪೆಟ್ಟಿಗೆಯೊಳಗೆ ಈ ಹುಳುಗಳಿಗೆ ನುಗ್ಗುವ ಅವಕಾಶವಿದ್ದರೆ, ಅದರೊಳಗಿನ ಜೇನು ಕುಟುಂಬ ಸರ್ವನಾಶವಾಯ್ತೆಂದೇ ಅರ್ಥ. ಕೆಲವೊಮ್ಮೆ ಕಣಜಗಳ ದಾಳಿಗೆ ಹೆದರಿ ಜೇನುಗಳು ಊರು ಬಿಡೋದೂ ಇದೆ.
ಮಲೆನಾಡಿನ ಕಾಡುಗಳಲ್ಲಿ ನಾನಾ ಪ್ರಬೇಧದ ಜೇನುಗಳಿರುತ್ತವೆ. ಅದರಲ್ಲಿ ನಾನಾ ಪ್ರಬೇಧಗಳಿರುತ್ತವೆ. ಅವುಗಳಲ್ಲಿ ಹೆಜ್ಜೇನು ಅನ್ನೋದು ಡೇಂಜರಸ್ ಜೇನು ತಳಿ. ಇದರ ತುಪ್ಪವಂತೂ ಅಮೃತಕ್ಕೆ ಸಮಾನ. ಯಾರೂ ಸಲೀಸಾಗಿ ತಲುಪಲಾರದ ದೊಡ್ಡ ಗಾತ್ರದ ಮರದ ಕೊಂಬೆಗಳಲ್ಲಿ ಇವು ಸಂಸಾರ ನಡೆಸುತ್ತವೆ. ಕಣಜಗಳಿಗೆ ಹೇಳಿಕೇಳಿ ಜೇನು ನೊಣಗಳು ಇಷ್ಟದ ಆಹಾರ. ಇಂಥಾ ಹೆಜ್ಜೇನು ಕಂಡರೆ ಕಷ್ಟ ಪಟ್ಟಾದರೂ ಕಣಜಗಳು ದಾಳಿ ಮಾಡುತ್ತವೆ. ಇದ್ರಿಂದ ರೊಚ್ಚಿಗೆದ್ದ ಹೆಜ್ಜೇನುಗಳು ಆಸುಪಾಸಿನ ಮನುಷ್ಯರ ಮೇಲೆ ದಾಳಿ ನಡೆಸಿದ ಉದಾಹಣೆಗಳೂಈ ಇದ್ದಾವೆ. ಗಮನಿಸಬೇಕಾದ ಅಂಶವೆಂದರೆ ಅಪಾಯದ ವಿಚಾರದಲ್ಲಿ ಈ ಹೆಜ್ಜೇನುಗಳು ಕಣಜಗಳನ್ನೇ ಮೀರಿಸುತ್ತವೆ. ಈ ಕಣಜಗಳು ಆಗಾಗ ಕಳ್ಳು ಕುಡಿಯೋದೂ ಇದೆ. ಹಾಗೆ ಕಳ್ಳು ಕುಡಿದು ನಶೆಗೀಡಾದ ಕಣಭಜಗಳು ಕಾರಣವೇ ಇಲ್ಲದೆ ಮನುಷ್ಯರ ಮೇಲೆ ದಾಳಿ ನಡೆಸಿ ಬಲಿ ಪಡೆದುಕೊಂಡಿದ್ದೂ ಇದೆ!
ಅದೊಂದು ಅಚ್ಚರಿಯ ಕೀಟ
ಹಾಗಂತ ಈ ಕಣಜದ ಹುಳುಗಳನ್ನು ಡೇಂಜರಸ್ ಪ್ರಬೇಧಕ್ಕೆ ಸೇರಿಸಿ ಸುಮ್ಮನಾಗುವಂತಿಲ್ಲ. ಅವುಗಳ ಜೀವನ ಕ್ರಮ ಕಂಡರೆ ಎಂಥವರಿಗಾದರೂ ಅಚ್ಚರಿಯಾಗದಿರೋದಿಲ್ಲ. ಪಕೃತಿಯ ಮಡಿಲಲ್ಲಿರುವ ಕೋಟ್ಯಂತರ ಕೀಟಗಳಲ್ಲಿ ಅಚ್ಚರಿಯ ಕೀಟವಾಗಿ ಕಣಜದ ಹುಳು ಗುರುತಿಸಿಕೊಂಡಿದೆ. ಅದು ಗೋಡೆಯಂಥಾ ಮಣ್ಣಿನ ಗೂಡು ಕಟ್ಟುವ ಕೆಲಸಗಾರಿಕೆ ಎಂಥವರನ್ನೂ ದಂಗುಬಡಿಸುತ್ತೆ. ಗಾರೆ ಮೇಸ್ತ್ರಿಗಿಂತಲೂ ಚೆನ್ನಾಗಿ ಗೋಡೆ ಕಟ್ಟಿ ಗೂಡು ಕಟ್ಟುವ ಈ ಕಣಜದ ಹುಳುವಿನ ಕಠಿಣ ದುಡಿಮೆ ಎಂಥವರಿಗೂ ಬೆರಗು ಹುಟ್ಟಿಸುತ್ತೆ. ಗೂಡು ಕಟ್ಟೋ ವಿಚಾರದಲ್ಲಿ ಅದು ಮೇಸ್ತ್ರಿಗಿಂತಲೂ ಮಿಗಿಲಾಗಿ ಅಕ್ಷರಶಃ ಇಂಜಿನಿಯರ್ ಇದ್ದಂತೆ. ಗಂಡು ಮತ್ತು ಹೆಣ್ಣು ಪರಸ್ಪರ ಸಂಧಿಸಿದ ನಂತರ ಗರ್ಭ ಧರಿಸುವ ಹೆಣ್ಣು ಕಣಜದ ಹುಳು ಥೇಟು ಹುಳದಂಥಾ ಒಂದು ಮರಿಯನ್ನು ಮರದ ಎಲೆಯ ಮೇಲೆ ಜೋಪಾನವಾಗಿ ಬಚ್ಚಿಟ್ಟುಟ್ಟುಕೊಂಡಿರುತ್ತದೆ. ಅದನ್ನು ಜತನದಿಂದ ಇಡೀ ಪರಿವಾರವೇ ಕಾಯುತ್ತೆ.
ಹಾಗೆ ನೋಡಿದರೆ ಕಣಜದ ಹುಳುಗಳ ಜೀವನ ಕ್ರಮವೇ ಭಿನ್ನ. ಬೇರೆ ಪ್ರಾಣಿಗಳು, ಕೀಟಗಳು ಮೊದಲು ಗೂಡು ಕಟ್ಟಿ ನಂತರ ಮರಿ ಮಾಡುವ ಕಾರ್ಯದಲ್ಲಿ ತೊಡಗಿದರೆ, ಕಣಜದ ಹುಳುಗಳು ಮಾತ್ರ ಮರಿ ಇಟ್ಟ ನಂತರವಷ್ಟೇ ಗೂಡು ಕಟ್ಟುವ ಕೆಲಸ ಆರಂಭಿಸುತ್ತವೆ. ಹೆಣ್ಗಣು ಮರಿ ಹಾಕುತ್ತದಷ್ಟೆ. ಆ ನಂತರ ಬಾಣಂತನದಲ್ಲಿ ಅದು ಹಾಯಾಗಿರುತ್ತೆ. ಮರಿಯನ್ನು ಸಾಕುವ ಜವಾಬ್ದಾರಿ ಅದಕ್ಕಿಲ್ಲ. ಒಂದು ಮಣ್ಣಿನ ಗೋಡೆ ಕಟ್ಟಿ ಅದರಲ್ಲಿ ಮರಿಯನ್ನು ಇಟ್ಟು ಗೋಡೆಯನ್ನು ಮುಚ್ಚಿದರೆ ಆಮೇಲೆ ಮರಿಯೇ ತನ್ನಷ್ಟಕ್ಕೆ ಹೊರಬರುತ್ತದೆ. ಅಂಥಾ ಬೆರಗಿನ ಜೀವಮಾನ ಕಣಜಗಳದ್ದು. ಕಣಜಗಳಲ್ಲಿ ಸಂಸಾರದ ಬಹು ದೊಡ್ಡ ಜವಾಬ್ದಾರಿ ಗಂಡು ಹುಳುಗಳಿಗಿರುತ್ತದೆ. ತನ್ನಿಂದ ಗರ್ಭವತಿಯಾದ ಹೆಣ್ಣು ಕಣಜ ಮರಿ ಇಡುತ್ತಲೇ ಅದಕ್ಕೆ ಮಂಡೆಬಿಸಿ ಶುರುವಾಗುತ್ತೆ. ಸೂಕ್ತ ಜಾಗದ ಅನ್ವೇಷಣೆಯಲ್ಲಿ ಕಣಜದ ಹುಳು ಬ್ಯುಸಿಯಾಗುತ್ತೆ. ಸರಿಕಟ್ಟಾದ ಜಾಗ ಸಿಕ್ಕರಷ್ಟೇ ಸಾಲುವುದಿಲ್ಲ: ಅಲ್ಲಿ ಗೂಡು ಕಟ್ಟಲು ಮಣ್ಣಿನ ವ್ಯವಸ್ಥೆಯೂ ಇರಬೇಕು. ಹಾಗಂತ ಸಿಕ್ಕ ಸಿಕ್ಕ ಮಣ್ಣಿನಲ್ಲೆಲ್ಲ ಅದು ಗೂಡು ಕಟ್ಟೋದಿಲ್ಲ. ಅದಕ್ಕೆ ಒಂದು ಬಗೆಯ ನಿಖರ ಮಣ್ಣೇ ಆಗಬೇಕು!
ಗೂಡೆಂಬ ಅಚ್ಚರಿ
ಗಂಡು ಕಣಜ ಗೂಡು ಕಟ್ಟಲು ಸ್ಥಳಕ್ಕಾಗಿ ವಾರಗಟ್ಟಲೆ ಹುಡುಕಾಟ ನಡೆಸುತ್ತೆ. ಕಡೆಗೆ ಹೇಗೋ ಒಂದು ಜಾಗವನ್ನು ಆಯ್ಕೆ ಮಾಡಿ ಅದರಲ್ಲೇ ಗೂಡು ಕಟ್ಟಲಾರಂಭಿಸುತ್ತದೆ. ಎತ್ತರವಾದ ಗೋಡೆ, ಮನೆಯ ಛಾವಣಿಯ ಅಡಿಯ ಭಾಗವನ್ನು ಗಂಡು ಕಣಜ ಆಯ್ಕೆ ಮಾಡುತ್ತದೆ. ಗೂಡು ಕಟ್ಟಿದ ನಂತರ ಅದರ ಜವಾಬ್ದಾರಿ ಮುಗಿಯೋದಿಲ್ಲ. ತಕ್ಷಣವೇ ಜೇಡರ ಬಲೆಯ ಹುಡುಕಾಟಕ್ಕಿಳಿಯುತ್ತೆ. ಕಷ್ಟ ಪಟ್ಟು ಜೇಡರ ಬಲೆಯನ್ನು ಸಂಗ್ರಹಿಸಿ ಒಂದು ಕಡೆ ಸಂಗ್ರಹಿಸಿಡುತ್ತದೆ. ಗೂಡು ಕಟ್ಟೋ ಕೆಲಸ ಮುಗಿದ ನಂತರ ತನ್ನ ಹುಳದಂಥಾ ಮರಿಯ ಸುತ್ತ ಜೇಡರ ಬಲೆ ನೇಯ್ದು ಅದನ್ನೊಂದು ಗಾತ್ರಕ್ಕೆ ತಂದು ನಂತರ ಗೂಡಿನೊಳಗೆ ಜೋಪಾನವಾಗಿಟ್ಟು ಮಣ್ಣಿನಿಂದಲೇ ಹದವಾಗಿ ಮುಚ್ಚಿಡುತ್ತೆ. ಅಷ್ಟಾದರೆ ಗಂಡು ಕಣಜದ ಕೆಲಸ ಒಂದು ಹಂತಕ್ಕೆ ಸಮಾಪ್ತಿಯಾಗುತ್ತೆ.
ಈ ಕಣಜ ತನ್ನ ಗೂಡನ್ನೆ ಅಬೇಧ್ಯವಾಗಿ ಕಟ್ಟೋದೇ ಒಂದು ವಿಸ್ಮಯ. ವಾರಗಟ್ಟಲೆ ಶ್ರಮ ವಹಿಸಿ ಸ್ಥಳವನ್ನು ನಿಗಧಿ ಪಡಿಸಿದ ನಂತರ ಆ ಜಾಗದಲ್ಲಿ ನಿಗಧಿತವಾದ ಮಣ್ಣಿನಲ್ಲಿ ಗೋಡೆ ಕಟ್ಟಲು ಶುರುಮಾಡುತ್ತದೆ. ತನ್ನ ಬಾಯಿಯಿಂದಲೇ ಸ್ವಲ್ಪ ಸ್ವಲ್ಪವೇ ಮಣ್ಣನ್ನು ತಂದು ಬಾಯಿಯಲ್ಲಿ ಇರುವ ಅಂಟಿನಂಥಾ ನೀರನ್ನು ಬಳಸಿ ಗೋಡೆ ಕಟ್ಟಲಾರಂಭಿಸಿಸುತ್ತದೆ. ಈ ಕಾರ್ಯವನ್ನದು ಅತ್ತಿತ್ತ ಮಿಸುಕಾಡದೆ ಧ್ಯಾನದಂತೆ ಮಾಡೋದನ್ನು ನೋಡೋದೇ ಚೆಂದ. ಈ ಗೋಡೆ ಎಷ್ಟು ಗಟ್ಟಿಮುಟ್ಟಾಗಿರುತ್ತದೆಂದರೆ, ಅದನ್ನು ಮುರಿಯಲು ಮನುಷ್ಯರನ್ನು ಬಿಟ್ಟರೆ ಬೇರೆ ಯಾವ ಪ್ರಾಣಿ ಪಕ್ಷಿ ಕೀಟಗಳಿಂದಲೂ ಸಾಧ್ಯವಿಲ್ಲ. ಇಂಥಾ ಗಂಡು ಕಣಜದ ಹುಳು ಒಂದರ ಪಕ್ಕದಲ್ಲಿ ಎಷ್ಟು ಗೂಡುಗಳನ್ನು ಬೇಕಾದರೂ ಕಟ್ಟಬಲ್ಲದು. ಅದೆಂಥಾ ಸ್ಥಿತಿ ಬಂದರೂ ಕೂಡಾ ಒಮ್ಮೆ ಉಪಯೋಗಿಸಿದ ಗೂಡನ್ನು ಮತ್ತೆಂದೂ ಅದು ಬಳಸೋದಿಲ್ಲ. ಹೀಗೆ ದಿನಗಟ್ಟಲೆ ಶ್ರಮ ಪಡುವ ಗಂಡು ಕಣಜ, ಗೂಡು ಒಂದು ಗಾತ್ರ್ರಕ್ಕೆ ಬಂದಾಕ್ಷಣವೇ ನಿರ್ದಿಷ್ಟ ಸ್ಥಳದಲ್ಲಿಟ್ಟಿರುವ ಮರಿಯನ್ನು ಜೋಪಾನವಾಗಿ ತಂದು ಗೂಡಲ್ಲಿಡುತ್ತದೆ. ಆ ಮರಿ ಹಳದಂತೆಯೇ ಕಾಣಿಸುತ್ತೆ.
ಜೀವ ವಿಜ್ಞಾನದ ಪ್ರಕಾರ ಅದು ಹುಳವಲ್ಲ; ಕಣಜದ ಪ್ರೀತಿಯ ಮರಿ. ನಂತರ ಆ ಮರಿಯನ್ನು ಕಣಜದ ಹುಳು ತಾನು ಹೆಣೆದ ಗೂಡಿನೊಳಗೆ ಜೇಡರ ಬಲೆಯ ಮೆದು ಪ್ರದೇಶದಲ್ಲಿ ಬೆಚ್ಚಗಿಡುತ್ತದೆ. ಗೂಡಿನೊಳಗೆ ಇಟ್ಟ ನಂತರ ಅದರ ಬಾಯನ್ನು ಮುಚ್ಚಿ ಮರಿ ಶಾಶ್ವತವಾಗಿ ಅದರೊಳಗೆ ಇರುವಂತೆ ಮಾಡುತ್ತದೆ. ಅಲ್ಲಿಗೆ ಗಂಡು ಕಣಜದ ಸಾಂಸಾರಿಕ ಜವಾಬ್ದಾರಿ ಒಂದು ಹತ ತಲುಪಿದಂತಾಗುತ್ತದೆ. ಈ ಘಟ್ಟದ ಬಳಿಕ ಅದರ ಪಕ್ಕದಲ್ಲಿ ಇನ್ನೊಂದು ಮತ್ತೊಂದು ಗೂಡಿನ ನಿರ್ಮಾಣ ಕಾರ್ಯ ಚಾಲೂ ಆಗುತ್ತೆ. ಆ ಬಳಿಕ ಅದರ ಪಕ್ಕ ಇನ್ನೂ ಹಲವಾರು ಗೂಡುಗಳನ್ನು ಒಂದೇ ಗಾತ್ರದಲ್ಲಿ ಕಟ್ಟುತ್ತಾ ಸಾಗುತ್ತದೆ. ಆ ಗೂಡು ಕಟ್ಟುವಲ್ಲಿನ ತಲ್ಲೀನತೆ, ಅದೆಂಥಾದ್ದೇ ಸಂದರ್ಭ ಬಂದರೂ ಕೆಲಸ ನಿಲ್ಲಿಸದಂತೆ ನಿಗದಿತ ಸಮಯದೊಳಗಾಗಿ ನಿರ್ಮಾಣ ಮಾಡಿ ಮುಗಿಸುವ ಕಣಜ ನಮ್ಮಲ್ಲಿನ ಯಾವ ಮೇಸ್ತ್ರಿಗಳಿಗೂ ಕಡಿಮೆಯೇನಿಲ್ಲ.
ಮರಿ ಕಣಜದ ಸೃಷ್ಟಿ
ಹೀಗೆ ಸೃಷ್ಟಿಯಾದ ಗೂಡಿನಲ್ಲಿ ಒಂದು ವಾರದವರೆಗೂ ಕಣಜದ ಹುಳು ಬಂಧಿಯಾಗಿರುತ್ತೆ. ಹಾಗೆ ಗೂಡೊಳಗೆಯೇ ಕಣಜದ ಹುಳು ಶಾರೀರಿಕವಾಗಿ ವಿಕಾಸವಾಗುತ್ತೆ. ಹದಿನೈದು ದಿನಗಳಷ್ಟು ಕಾಲ ವಿಕಾಸಗೊಂಡ ಬಳಿಕ ಆ ಮರಿ ಗೂಡಿನ ಬಾಗಿಲನ್ನು ಒಡೆದುಕೊಂಡು ಹೊರ ಬರುತ್ತೆ. ಬಳಿಕ ಹಿರಿಯ ಕಣಜಗಳ ಗೊಡವೆಯಿಲ್ಲದೆ ಸ್ವತಂತ್ರವಾಗಿ ಬದುಕು ಕಟ್ಟಿಕೊಳ್ಳುತ್ತೆ. ಮಲೆನಾಡಿನಲ್ಲಿ ಮುಂಗಾರು ಹಬ್ಬಿಕೊಳ್ಳುವ ಘಳಿಗೆಯಲ್ಲಿಯೇ ಕಾಡಿನ ದಾರಿಯಲ್ಲಿ, ತೋಟದ ಬದುವಿನಲ್ಲಿ ನಡೆದು ಹೋಗುವಾಗ ಭೀತಿಯಿಂದಲೇ ಹೆಜ್ಜೆ ಹಾಕುವ ವಾತಾವರಣವಿರುತ್ತೆ. ಸುಳಿವೇ ಕೊಡದಂತೆ ಕಣಜಗಳು ದಾಳಿ ನಡೆಸಿ ಕಣ್ಮರೆಯಾಗುತ್ತವೆ. ಏಕಾಏಕಿ ಮೈ ತುಂಬಾ ಉರಿ ಕಾಣಿಸಿಕೊಂಡರೆರ ಅದು ದೇಹಕ್ಕೆಲ್ಲ ಹಬ್ಬಿದಂತಾಗುತ್ತೆ. ಹೆಚ್ಚಿನ ಹುಳುಗಳು ದಾಳಿಯಾಗಿದ್‌ದರೆ ಮೈತುಂಬಾ ಉರಿ ತುಂಬಿಕೊಳ್ಳುತ್ತೆ. ಕೊಂಚ ಯಾಮಾರಿದರೂ ಸತ್ತೇ ಹೋಗುವಂಥಾ ಸ್ಥಿತಿಯೂ ಬಂದೊದಗುತ್ತದೆ. ಹಾಗಂತ ಅವುಗಳೇನು ಸುಮ್ಮನೆ ದಾಳಿ ಮಾಡೋದಿಲ್ಲ. ಅವುಗಳ ಗೂಡಿಗೆ ತೊಂದರೆಯಾದರೆ ಮನುಷ್ಯ ಮಾತ್ರವಲ್ಲದೇ ಆನೆಯಾದರೂ ಕೂಡಾ ಕಣಜದ ದಾಳಿ ತಪ್ಪೋದಿಲ್ಲ.
ಜೀವ ಶಾಸ್ತ್ರದಲ್ಲಿ ಕಣಜದ ಹುಳುಗಳನ್ನು ವ್ಯಾಸ್ಪ್ ಅಂತ ಗುರುತಿಸಲಾಗಿದೆ. ಈ ಕೀಟದ ವಂಶ ವಾಸ್ಪಡೈ ಅಂತಲೂ ಕೀಟ ಶಾಸ್ತ್ರಜ್ಞರು ಕಂಡುಕೊಂಡಿದ್ದಾರೆ. ಇದರ ಜೀವನ ಕ್ರಮ, ಗೂಡು ಕಟ್ಟುವಿಕೆಯಂತೆಯೇ ಆಹಾರ ಕ್ರಮದಲ್ಲಿಯೂ ಕೂಡಾ ಕಣಜಗಳು ಭಿನ್ನವಾಗಿವೆ. ಕಣಜದ ಹೂವುಗಳ ವೆಜ್ಜೂ ಹೌದು, ನಾನ್ ವೆಜ್ಜೂ ಹೌದು. ಆ ವಿಚಾರದಲ್ಲಿವು ಮನುಷ್ಯರನ್ನು ಹೋಲುತ್ತವೆ. ಹೂವಿನ ಮಕರಂದ ಇವುಗಳ ಫೇವರಿಟ್ ಫುಡ್ಡು. ತನಗಿಂತ ಗಾತ್ರದಲ್ಲಿ ಚಿಕ್ಕದಾದ ಕೀಟಗಳನ್ನು ಇವು ಚಪ್ಪರಿಸಿ ತಿನ್ನುತ್ತವೆ. ಹೆಚ್ಚೂ ಕಡಿಮೆ ಜೇನಿನಂತೆಯೇ ಕಣಜಗಳ ಜೀವನ ಕ್ರಮವಿರುತ್ತೆ. ಆದರೆ ಈ ಕಣಜಗಳು ರಾಣಿಯನ್ನು ಅವಲಂಬಿಸದೆ ಜೀವಿಸುತ್ತವೆ. ಜೇನು ಹುಳುಗಳ ಶತ್ರುವಾದ ಕಣಜ ದಿನವೊಂದಕ್ಕೆ ಕನಿಷ್ಠ ಮೂವತ್ತು ನಲವತ್ತು ಜೇನುಹುಳುಗಳ ಸಾವಿಗೆ ಕಾರಣವಾಗುತ್ತದೆ. ಕಷ್ಟ ಪಟ್ಟು ಹಿಡಿದ ಜೇನುನೊಣವನ್ನು ತನ್ನ ಮರಿಗಳಿಗೆ ಆಹಾರವಾಗಿ ಕೊಡುತ್ತವೆ.
ಜೇನುಪ್ರಿಯ ಕಣಜ!
ಹೀಗೆ ಜೇನು ಹುಳುಗಳ ಪ್ರಿಯರಾದ ಕಣಜದ ಹುಳುಗಳ ಜೇನು ಬೇಟೆ ಕೂಡಾ ಅಚ್ಚರಿಯ ಸಂಗತಿಯೇ. ಕಣಜ ಜೇನುಗೂಡಿನ ಹೊರಗೆ ವಿಚಿತ್ರ ಸದ್ದು ಮಾಡುತ್ತಾ ಸುಳಿದಾಡುತ್ತವೆ. ಅದು ಜೇನು ಹುಳಖುಗಳನ್ನು ಕೆರಳಿಸುವಂಥಾ ಸದ್ದು. ಅದನ್ನು ಕೇಳಿದೇಟಿಗೆ ಜೇನು ಹುಳುಗಳು ಕೋಪಗೊಂಡು ದಾಳಿ ನಡೆಸಲು ಸಜ್ಜಾಗಿ ಹೊರ ಬರುತ್ತವೆ. ಹೀಗೆ ಹೊರ ಬಂದ ಜೇನ್ನೊಣಗಳನ್ನು ಕ್ಷಣಮಾತ್ರದಲ್ಲಿ ಕಾಲಿನ ಮೂಲಕ ಹೊಸಕಿ ಕೊಲ್ಲುವ ಕಣಜಗಳು ಗೂಡಿನತ್ತ ಹಾರುತ್ತವೆ. ಅಪರೂಪಕ್ಕೊಮ್ಮೆ ಜೇನುಗಳೇ ಗುಂಪು ಗುಂಪಾಗಿ ಧಾಳಿ ಮಾಡಿ ಕಣಜವನ್ನು ಬಲಿ ತೆಗೆದುಕೊಳ್ಳುವುದೂ ಉಂಟು. ಆದರದು ಅಪರೂಪದ ವಿದ್ಯಮಾನ. ಜೇನುಗೂಡಿನ ದ್ವಾರದ ಮೂಲಕ ನುಸುಳುವ ಕಣಜದ ಮೇಲೆ ಏಕಾಏಕಿ ನೂರಾರು ಜೇನುನೊಣಗಳು ಮುತ್ತಿಕೊಳ್ಳುತ್ತವೆ. ಹಾಗಾದಾಗ ಕಣಜ ಉಸಿರುಗಟ್ಟಿ, ಒಳಗಿನ ತಾಪಮಾನ ತಡೆದುಕೊಳ್ಳಲಾರದೆ ಜೀವ ಬಿಡುತ್ತೆ. ಆದರೆ ಕಣಜಗಳಿಂದಾಗುವ ಜೇನುನೊಣಗಳ ಸಾವಿನ ಪ್ರಮಾಣವೇ ಹೆಚ್ಚಿದೆ. ಜೇನು ಸಾಕಾಣೆ ಮಾಡುವವರು ಗೂಡನ್ನು ಕಣಜದಿಂದ ರಕ್ಷಿಸಲು ನಾನಾ ನಿಟ್ಟಿನಲ್ಲಿ ಪ್ರಯತ್ನಿಸುತ್ತಾರೆ. ಹತ್ತಿರದಲ್ಲಿರುವ ಕಣಜದ ಗೂಡನ್ನು ಪತ್ತೆ ಮಾಡಿ ಸುಡದಿದ್ದರೆ ಜೇನುಗೂಡನ್ನೇ ಕಳೆದುಕೊಳ್ಳಬೇಕಾಗುತ್ತೆ. ಒಂದು ವೇಳೆ ಕಣಜ ಜೇನುಪೆಟ್ಟಿಗೆಯ ಬಳಿ ಹಾರಾಡತೊಡಗಿತೆಂದರೆ ತಕ್ಷಣ ಜೇನು ಕೃಷಿಕರು ಕಣಜದ ಗೂಡಿನ ತಲಾಷಿಗಿಳಿಯುತ್ತಾರೆ. ಎಷ್ಟು ತ್ರಾಸವಾದರೂ ಹುಡುಕಿ ಅದಕ್ಕೆ ಬೆಂಕಿಯಿಟ್ಟು ನಾಶಗೊಳಿಸುತ್ತಾರೆ.
ಇಂಥಾ ಅಗ್ರೆಸಿವ್ ಸ್ವಭಾವ ಅದೇನೇ ಇದ್ದರೂ ಈ ಕಣಜಗಳ ಗೂಡು ಮತ್ತದರ ರಚನೆ ಅಚ್ಚರಿ ಮೂಡಿಸುತ್ತೆ. ಎರಡು ಅಡಿ ಎತ್ತರದವರೆಗೂ ಬೃಹತ್ ಗೂಡು ನಿರ್ಮಿಸುವ ಕಣಳು ಬೆರಗು ಮೂಡಿಸುತ್ತವೆ. ಆಯಾ ಸಂಸಾರದ ಸಂಖ್ಯೆಗನುಗುಣವಾಗಿ ಕಣಜಗಳ ಗೂಡಿನ ಗಾತ್ರ ನಿರ್ಧಾರವಾಗುತ್ತೆ. ಅದನ್ನು ಕಟ್ಟುವ ಬಗೆ ಕೂಡಾ ವಿಶಿಷ್ಟವೇ. ಸಗಣಿ ಮತ್ತು ಮಣ್ಣನ್ನು ಹದವಾಗಿ ಕಲೆಸಿಕೊಂಡು ಬಾಯಿಯ ದ್ರವದ ಮೂಲಕ ಕಣಜಗಳು ಗೂಡು ಕಟ್ಟುತ್ತವೆ. ಇದು ಸುಂದರವಾಗಿರೋದು ನಿಜ. ಆದರೆ ಕಣಜದ ದಾಳಿಯ ರುಚಿ ಬಲ್ಲವರು ಇಂಥಾ ಗೂಡು ನೋಡಿದರೆ ಬೆಚ್ಚಿ ಹೋಗುತ್ತಾರೆ. ಜೇನನ್ನು ಉಳಿಸಿಬೇಕಾದರೆ ಇಂಥಾ ಸುಂದರ ಕಣಜದ ಗೂಡಿಗೆ ಬೆಂಕಿಯಿಡೋ ಅನಿವಾರ್ಯತೆ ರೈತರದ್ದು. ಒಂದು ವೇಳೆ ಗೂಡು ನಾಶ ಮಾಡದಿದ್ದರೆ ಡಿಸೆಂಬರ್ ವರೆಗೂ ಇವುಗಳ ಹಾವಳಿ ಮುಂದುವರೆಯುತ್ತೆ.
ಆಯುಷ್ಯ ಕಡಿಮೆ
ಇದರ ಜೀವನ ಶೈಲಿ ಮಾತ್ರವಲ್ಲದೆ ಆಯುಷ್ಯ ಕೂಡಾ ಅಚ್ಚರಿದಾಯಕವಾಗಿದೆ. ಈ ಕಣಜಗಳು ಮಿತಾಯುಷಿಗಳು. ಅವು ಈ ಭೂಮಿ ಮೇಲೆ ಇರೋದು ಏಳರಿಂದ ಎಂಟು ತಿಂಗಳು ಮಾತ್ರ. ಒಂದು ಕಣಜ ತನ್ನ ಜೀವಿತದಲ್ಲಿ ಒಂದು ಬಾರಿ ಮಾತ್ರ ಸಂಸಾರ ಸುಖ ಅನುಭವಿಸುತ್ತೆ. ಶ್ರಮ ವಹಿಸಿ ಬದುಕುತ್ತದೆ. ಡಿಸೆಂಬರ್ ತಿಂಗಳಿನಲ್ಲಿ ವಿಶೇಷವಾದ ಗಿಡವೊಂದರ ಹೂವು ಅರಳಿದಾಗ ಅದರ ಮಕರಂದ ಹೀರಲು ಹೋಗಿ ಸಾವನ್ನಪ್ಪುತ್ತದೆ ಎಂಬ ನಂಬಿಕೆ ಜನ ಸಾಮಾನ್ಯರಲ್ಲಿದೆ. ಅಡಿಕೆಯ ಕೊಳೆ ರೋಗದ ಹೆಚ್ಚಳಕ್ಕೂ ಇವು ಕಾರಣ ಎಂಬ ಆರೋಪವಿದೆ. ಜೇನು ಗೂಡನ್ನು ಮನೆಯಲ್ಲಿಟ್ಟಿರುವ ಕೃಷಿಕರು ಕಣಜದ ಗೂಡನ್ನು ಜೂನ್ ತಿಂಗಳಿನಲ್ಲಿ ಪತ್ತೆ ಮಾಡಿ ಬೆಂಕಿ ಹಚ್ಚುತ್ತಾರೆ. ಒಂದು ಬಹುಮಹಡಿ ಕಟ್ಟಡ ಕಟ್ಟಬೇಕೆಂದರೆ ಹಲವು ಮಂದಿ ಕಷ್ಟ ಪಡಬೇಕಾಗುತ್ತದೆ. ಕಣಜ ಮಾತ್ರ ಯಾರ ಸಹಾಯವೂ ಇಲ್ಲದೆ ಗೂಡು ಕಟ್ಟಿಕೊಳ್ಳುತ್ತೆ.
ಮನೆ ಅನ್ನೋದರ ಉದ್ದೇಶದ ವಿಚಾರದಲ್ಲಿಯೂ ಕಣಜಗಳು ಭಿನ್ನ. ಯಾಕೆಂದರೆ, ಎಲ್ಲರೂ ವಾಸಕ್ಕಾಗಿ ಮನೆಗಳನ್ನು ಕಟ್ಟಿಕೊಂಡರೆ, ಕಣಜ ಮಾತ್ರ ಸಂತಾನಕ್ಕಾಗಿ ಗೂಡು ಕಟ್ಟುತ್ತೆ. ಪುಟ್ಟದಾದ ಗೂಡಿಗಾಗಿ ಒಂದೇ ಬಗೆಯ ಮಣ್ಣನ್ನು ಹುಡುಕಿ ಅದರಿಂದಲೇ ಗೂಡು ಕಟ್ಟುತ್ತೆ. ನಂತರ ಆ ಹದಗೊಂಡ ಮಣ್ಣನ್ನು ಉಂಡೆ ಕಟ್ಟಿ ನಿದಿಷ್ಟ ಸ್ಥಳವೊಂದರಲ್ಲಿ ಗೂಡು ಕಟ್ಟುತ್ತದೆ. ಮರಿ ರಕ್ಷಣೆಯ ಗೂಡನ್ನು ಗಂಡು ಕಣಜ ಕಟ್ಟಿದರೆ, ಹೆಣ್ಣ ಕಣಜ ಕೂಡಾ ಮನೆ ಕಟ್ಟೋದರಲ್ಲಿ ಜಾಣೆಯಾಗಿರುತ್ತೆ. ಹೆಣ್ಣು ಕಣಜವೊಂದು ಒಂದು ದಿನದೊಳಗಾಗಿ ಅದು ಮನೆಯನ್ನು ಕಟ್ಟಿ ಮುಗಿಸುತ್ತದೆ. ಕಣಜ ತನ್ನ ಮರಿಗಳಿಗಾಗಿ ಒಂದಕ್ಕಿಂತಲೂ ಹೆಚ್ಚು ಗೂಡುಗಳನ್ನು ಕಟ್ಟುತ್ತೆ. ಕೆಲವೊಮ್ಮೆ ಅವು ನೆಲದ ಒಳಗೂ ಗೂಡು ಕಟ್ಟುತ್ತವೆ. ಗೋಡೆ ಅಥವಾ ಮರದ ಕೊಂಬೆಗಳಲ್ಲಿಯೇ ಅವು ಗೂಡು ಕಟ್ಟೋದು ವಾಡಿಕೆ. ಕಣಜ ಹುಳು ಚೂಪಾದ ಮುಳ್ಳುಗಳನ್ನು ಹೊಂದಿರುವ ಅಪರೂಪದ ಶಿಸ್ತನ್ನು ಮೈಗೂಡಿಸಿಕೊಂಡಿರುತ್ತವೆ.
ಕಣಜ ಅನಿವಾರ್ಯ
ಮೇಲು ನೋಟಕ್ಕೆ ಗಾತ್ರದಲ್ಲಿ ತುಸು ವ್ಯತ್ಯಾಸವಿದ್ದರೂ ಕಣಜಗಳು ಜೇನು ಹುಳುವಿನಂತೆಯೇ ಕಾಣೋದು ನಿಜ. ಆದರೆ ಶಾರೀರಿಕವಾಗಿ ಭಾರೀ ವ್ಯತ್ಯಾಸಗಳಿದ್ದಾವೆ. ಈ ಕಣಜದ ಮುಳ್ಳು ಜೇನಿಗಿಂತ ಹತ್ತಾರು ಪಟ್ಟು ಹೆಚ್ಚು ವಿಷ ಹೊಂದಿರುತ್ತೆ. ಒಂದು ವೇಳೆ ಕಣಜ ಚುಚ್ಚಿದರೆ ಆ ಜಾಗದಲ್ಲಿ ವಿಚಿತ್ರವಾದ ಅಸಾಧ್ಯ ನೋವು ಕಾಣಿಸಿಕೊಳ್ಳುತ್ತೆ. ಇವು ಕಪ್ಪು ಬಣ್ಣ ಹೊಂದಿರುವಂಣತೆ ಕಂಡರೂ ಅದರಲ್ಲೂ ಬೇರೆ ಬೇರೆ ರಂಗಿನ ಪಟ್ಟೆಗಳಿರುತ್ತವೆ. ನಮ್ಮ ಸುತ್ತಾ ಇರೋದು ಕಣಜದ ಒಂದಷ್ಟು ಬಗೆಗಳು ಮಾತ್ರ. ಆದರೆ ಇವುಗಳ ಫ್ಯಾಮಿಲ್ ಭಾರೀ ಜೊಡ್ಡದಿದೆ. ಎರಡು ಸಾವಿರ ಚಿಲ್ಗಲರೆ ಪ್ರಬೇಧದ ಕಣಜಗಳಿವೆ ಅಂದರೆ ಅದರ ಅಗಾಧತೆ ಎಂಥಾದ್ದೆಂಬುದು ಯಾರಿಗಾದರೂ ಅರ್ಥವಾಗುತ್ತದೆ. ಪ್ರೌಢಾವಸ್ಥೆಗೆ ಬರುವ ಕಣಜ ಆರಂಭದಲ್ಲಿ ಹೂವಿನ ಮಕರಂದ ಹೀರಿ ಬದುಕುತ್ತೆ.
ಇವು ಪರಿಸರ ಮತ್ತು ರೈತ ಸ್ನೇಹಿಯೂ ಹೌದು. ಬೆಳೆಗಳನ್ನು ಸರ್ವನಾಶಮಾಡುವ ಕಂಬಳಿಹುಳುಗಳನ್ನು ತಿನ್ನುತ್ತವೆ. ಪರಾಗಸ್ಪರ್ಶದಲ್ಲಿಯೂ ಇವುಗಳ ಪಾಲಿದ್ದೇ ಇದೆ. ಈ ಕೀಟ ಜೇನುನೊಣಗಳ ಪಂಗಡಕ್ಕೇ ಸೇರಿದ್ದಾದರೂ ಜೀವನ ಕ್ರಮ ಭಿನ್ನವಾಗಿದೆ. ಇವು ಒಂದಷ್ಟು ಅಪಾಯಕಾರಿ ಹೌದಾದರೂ ಜೇನುನೊಣ ದಷ್ಟೇ ಪ್ರಾಮುಖ್ಯತೆ ಹೊಂದಿವೆ. ಆದರೆ ಕಣಜದ ಗೂಡು ಮನೆಯ ಆಸುಪಾಸಿನಲ್ಲಿ ಕಂಡರೆ ಬೆಂಕಿಯಿಂದ ಸುಟ್ಟುಬಿಡಲಾಗುತ್ತೆ. ನಮ್ಮಲ್ಲಿರುವ ಕಣಜಗಳಲ್ಲಿ ಎರಡು ಬಗೆಗಳಿದ್ದಾವೆ. ಜೇನುನೊಣಗಳಂತೆ ಗುಂಪುಗುಂಪಾಗಿ ಬದುಕೋ ಕಣಜಗಳು ಹೆಚ್ಚಿವೆ. ಒಂಟಿಯಾಗಿ ಬದುಕವುಗಳೂ ಇದ್ದಾವೆ. ಕೆಲವು ಜಾತಿಯ ಹೆಣ್ಣು ಕಣಜಗಳು ಅದರ ಆಹಾರದ ಜೀವಿಯನ್ನು ಹುಡುಕಿ ಅದನ್ನು ತನ್ನ ಕಿಣ್ವಗಳಿಂದ ನಿಷ್ಕ್ರಿಯಗೊಳಿಸಿ ಅದರಲಿಯೇ ಮೊಟ್ಟೆಗಳನ್ನಿಟ್ಟು ಸುತ್ತ ಗೂಡು ಕಟ್ಟಿ ಭದ್ರ ಮಾಡುತ್ತವೆ. ಗೂಡಿನೊಳಗೆ ಮೊಟ್ಟೆಯಿಟ್ಟು ಅಲ್ಲಿಯೇ ಬೇಟೆಯಾಡಿದ ಕೀಟವನ್ನು ಇಡುತ್ತವೆ. ಆ ಗೂಡಲ್ಲಿರುವ ಮರಿ ನಂತರ ಆ ಕೀಟವನ್ನು ತಿನ್ನುತ್ತಾ ಬದುಕುತ್ತದೆ.
ಒಟ್ಟಾರೆಯಾಗಿಒ ಈ ಕಣಜಗಳು ಪ್ರಾಕೃತಿಕ ಸಮತೋಲನದ ದೃಷ್ಟಿಯಿಂದ ಜೇನಿನಷ್ಟೇ ಮಹತ್ವ ಹೊಂದಿರುವ ಕೀಟಗಳು. ಇವು ಒಂದು ಮಟ್ಟಿಗೆ ಮನುಷ್ಯರ ಪಾಲಿಗೆ ಕಂಟಕವೂ ಹೌದು. ನೆಂಟಸ್ತನ ಹೊಂದಿರುವವೂ ಹೌದು. ಒಂದು ಪ್ರದೇಶದಲ್ಲಿ ಇವುಗಳಿದ್ದರೆ ಗೂಡಿಗೆ ತೊಂದರೆ ಯಾಗದಂತೆ ನೋಡಿಕೊಂಡರೆ ಯಾವ ಅಪಾಯವೂ ಇಲ್ಲ. ಅವುಗಳ:ನ್ನು ವರ್ಷಾ ವರ್ಷ ಸುಟ್ಟು ಹಾಕಿದರೆ ಅವುಗಳ ಪ್ರಬೇಧವೇ ವಿನಾಶಗೊಳ್ಳುತ್ತದೆ. ಒಂದು ಅಧ್ಯಯನದ ಪ್ರಕಾರ ಈಗಾಗಲೇ ಕಣಜದ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ. ಇನ್ನುಳಿದಮತೆ ಬಕೆಲ ಭಾಗಗಳಲ್ಲಿ ಕಣಜದ ಗೂಡಿಗೆ ಬೆಂಕಿಯಿಟ್ಟು, ಅದರ ಮೊಟ್ಟೆಗಳನ್ನು ಸಂಗ್ರಹಿಸಿ ಹಿನ್ನುವ ಪರಿಪಾಠವೂ ಇದೆ. ಅದು ಔಷಧಿಯೂ ಹೌದೆಂಬ ನಂಬಿಕೆ ಇದೆ. ಹೀಗೆಯೇ ಮುಂದುವರೆದರೆ ಕಣಜಗಳು ನಾಶವಾಗಿ ಪ್ರಾಕೃತಿಕ ಸಮತೋಲನ ಮತ್ತಷ್ಟು ಹದಗೆಡುವ ಸಾಧ್ಯತೆಗಳಿದ್ದಾವೆ.