ಮಂಗಳವಾರ, ಜುಲೈ 1, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

World Sparrow Day: ಸಣ್ಣ ದೇಹದ ಗುಬ್ಬಚ್ಚಿ ಮರೆಯಾಗಿರೋದು ದೊಡ್ಡ ಗಂಡಾಂತರದ ಮುನ್ಸೂಚನೆ!

Majja Webdeskby Majja Webdesk
22/03/2025
in Lifestyle, Majja Special
Reading Time: 1 min read
World Sparrow Day: ಸಣ್ಣ ದೇಹದ ಗುಬ್ಬಚ್ಚಿ ಮರೆಯಾಗಿರೋದು ದೊಡ್ಡ ಗಂಡಾಂತರದ ಮುನ್ಸೂಚನೆ!

-ಪುಟ್ಟ ಜೀವಿಗಳೆಲ್ಲ ಎಲ್ಲಿ ಹೋದವು?

-ಗುಬ್ಬಚ್ಚಿಗಳನ್ನು ಸಂಹರಿಸಿದ್ದು ಆಧುನೀಕರ!

 

ನಮ್ಮ ನಡುವಿದ್ದ ಮನುಷ್ಯರು ಮರೆಯಾದರೆ ಒಂದಷ್ಟು ದಿನಗಳ ನಂತರ ಪರ್ಮನೆಂಟಾಗಿ ಮರೆತು ಬಿಡುವವರು ನಾವು. ಹಾಗಿರುವಾಗ ನಮ್ಮ ಆಸುಪಾಸಲ್ಲಿ ಚಿಂವ್ ಗುಡುತ್ತಾ, ಏಕಾಏಕಿ ಕಣ್ಮರೆಯಾಗೋ ಸಣ್ಣಪುಟ್ಟ ಜೀವಿಗಳನ್ನು ನೆನಪಿಟ್ಟುಕೊಳ್ಳೋದುಂಟೇ? ದಶಕದ ಹಿಂದೆ ಸುಮ್ಮನೆ ಪೇಟೆಯಲ್ಲಿ ಹಾದುಹೋಗುವಾಗ ಕಾಳುಗಳನ್ನು ತಿನ್ನುತ್ತಿರುವ ಗುಬ್ಬಿಗಳ ಹಿಂಡೇ ಕಾಣಸಿಗುತ್ತಿತ್ತು. ಆದರೀಗ ಪರಿಸ್ಥಿತಿ ಪಟ್ಟಂಪೂರಾ ಬದಲಾಗಿದೆ. ನಗರದಲ್ಲಿ ಗುಬ್ಬಚ್ಚಿಗಳ ಕಲರವ ಕಣ್ಮರೆಯಾಗಿದೆ. ಚಿಂವ್ ಚಿಂವ್ ಎನ್ನುವ ಮಧುರ ಧ್ವನಿ ಮಾಯವಾಗಿದೆ. ಹೀಗೇ ಮುಂದುವರೆದರೆ ಮುಂದೊಂದು ದಿನ ಗುಬ್ಬಚ್ಚಿಗಳು ಅಳಿದು ಹೋದ ಪಕ್ಷಿ ಪ್ರಬೇಧಗಳ ಜೊತೆ ಸೇರುವ ಲಕ್ಷಣ ದಟ್ಟವಾಗಿದೆ. ನಮ್ಮ ಮುಂದಿನ ಪೀಳಿಗೆ ಈ ಗುಬ್ಬಿಗಳನ್ನು ಗೂಗಲ್ಲಿನಲ್ಲಿ ನೋಡಿ ಪುಳಕಗೊಳ್ಳಬೇಕಾಗಿ ಬರ ಬಹುದೇನೋ. ಆದರೆ, ಸಣ್ಣ ದೇಹದ ಗುಬ್ಬಚ್ಚಿಗಳ ಕಣ್ಮರೆ ದೊಡ್ಡ ಆಘಾತವೊಂದರ ಮುನ್ಸೂಚನೆ ಅನ್ನೋದನ್ನು ಯಾರೆಂದರೆ ಯಾರೂ ಮರೆಯುವಂತಿಲ್ಲ!

ಒಂದು ಕಾಲದಲ್ಲಿ ಗುಬ್ಬಚ್ಚಿಗಳು ನಮ್ಮಲ್ಲದ ಸಹಜೀವಿಗಳಂತೆ ಸ್ವಚ್ಛಂದವಾಗಿದ್ದವು. ಮನೆ ಶಾಲೆ ಸೇರಿದಂತೆ ಜನ ಸಂದಣಿ ಇರುವ ಪ್ರದೇಶದಲ್ಲಿಯೇ ಗೂಡು ಕಟ್ಟಿಕೊಂಡು ಹಾಯಾಗಿದ್ದವು. ಆದರೆ ಬರ ಬರುತ್ತಾ ಇಂಡಿಯನ್ ರಾಬಿನ್, ಮುನಿಯಾ, ಬುಲ್ ಬುಲ್, ಕಾಜಾಣ, ನವಿಲು, ಕೆಂಬೂತಗಳು ಸಾಕಷ್ಟು ಸಂಖ್ಯೆಯಲ್ಲಿ ಕಾಣಿಸಿಕೊಂಡರೂ ಅದೇಕೋ ಗುಬ್ಬಚ್ಚಿಗಳ ಸುಳಿವೇ ಇಲ್ಲ. ಯಾವುದೇ ಪ್ರದೇಶಗಳಲ್ಲಿ ಆಗಾಗ ಮಾತ್ರವೇ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಗುಬ್ಬಚ್ಚಿಗಳು ಕಾಣಸಿಗೋದಿದೆ. ಆದರೆ ಆ ಕಾಲದಲ್ಲಿದ್ದ ಗುಬ್ಬಚ್ಚಿಗಳ ಸಂಖ್ಯೆಗೂ ಈವಾಗಿನ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸಗಳಿದ್ದಾವೆ.

ಎಲ್ಲಿ ಹೋದವು ಗುಬ್ಬಚ್ಚಿಗಳು?


ಹಾಗಾದರೆ ಈ ಗುಬ್ಬಚ್ಚಿಗಳು ಹೀಗೆ ಏಕಾಏಕಿ ಕಣ್ಮರೆಯಾಗಿದ್ದೇಕೆ? ಬದಲಾಗುತ್ತಿರುವ ಪರಿಸರ, ಕಾಂಕ್ರೀಟ್ ಕಾಡುಗಳ ನಡುವೆ ಗೂಡು ಕಟ್ಟಲಾಗದ ಸಂದಿಗ್ಧ ಸ್ಥಿತಿ ಗುಬ್ಬಚ್ಚಿಗಳಿಗೆ ಕಾಡುತ್ತಿದೆ ಅನ್ನಿಸುತ್ತೆ. ಮೊದಲಾದರೆ ಹಂಚಿನ, ಹುಲ್ಲಿನ ಮನೆಗಳು. ಧಾರಾಳವಾದ ಜಾಗ ಗುಬ್ಬಚ್ಚಿಗಳಿಗೆ ಗೂಡು ಕಟ್ಟಲು ಸಿಗುತ್ತಿತ್ತು. ಆಗೆಲ್ಲಾ ಹೊಲಗದ್ದೆಗಳಲ್ಲಿ ಕಾಳು, ಸಣ್ಣ ಪುಟ್ಟ ಕೀಟಗಳು, ಹುಳ ಹುಪ್ಪಟೆಗಳು ಧಾರಾಳವಾಗಿ ಸಿಗುತ್ತಿದ್ದವು. ಈ ಗುಬ್ಬಚ್ಚಿಗಳೂ ಅವುಗಳನ್ನು ತಿಂದು ಸುಖವಾಗಿದ್ದವು. ಈಗ ಕಾಳೂ ಇಲ್ಲ, ಹುಳಗಳೂ ಇಲ್ಲ. ರಾಸಾಯನಿಕ ಸಿಂಪರಣೆಯ ಹೊಡೆತಕ್ಕೆ ಸಣ್ಣ ಪುಟ್ಟ ಹುಳ, ಕೀಟಗಳು ಸತ್ತು ಹೋಗಿವೆ. ಇದರಿಂದ ಹಕ್ಕಿಗಳಿಗೆ ಆಹಾರದ ಕೊರತೆಯಾಗಿರಲೂ ಬಹುದು. ತನ್ನ ನೈಸರ್ಗಿಕ ಆಹಾರವಲ್ಲದ ಅನ್ನವನ್ನು ಹಕ್ಕಿಗಳು ತಿನ್ನುವುದನ್ನು ನೋಡುವಾಗ ನೋವಾಗುತ್ತದೆ. ಹೊಟ್ಟೆಯ ಹಸಿವು ಮತ್ತು ಬದುಕುವ ಆಸೆ ಹಕ್ಕಿಗಳನ್ನು ಮಾನವ ಬಳಸುವ ಆಹಾರವನ್ನು ಸೇವಿಸುವ ಅನಿವಾರ್ಯತೆಗೆ ತಂದು ನಿಲ್ಲಿಸಿದೆ. ಗುಬ್ಬಚ್ಚಿಗಳಿಗೂ ಕೂಡಾ ಅಂಥಾದ್ದೇ ಸ್ಥಿತಿ ಬಂದಿದ್ದೀತು. ಇನ್ನುಳಿದಂತೆ ಮೊಬೈಲ್ ಟವರುಗಳ ವಿಕಿರಣ ಪುಟ್ಟ ಗುಬ್ಬಚ್ಚಿಗಳನ್ನು ತಣ್ಣಗೆ ಕೊಲ್ಲುತ್ತಯಿರೋದನ್ನು ನಂಬದಿರಲಾಗೋದಿಲ್ಲ!
ವಿಶ್ವಾದ್ಯಂತ ಈ ಗುಬ್ಬಿಗಳೀಗ ಅಳಿವಿನಂಚಿನಲ್ಲಿವೆ. ಅವುಗಳ ಸಂತತಿಯನ್ನು ಉಳಿಸುವ ಸಲುವಾಗಿ ಭಾರತದ ನೇಚರ್ ಫಾರೆವರ್ ಸೊಸೈಟಿ ಐವತ್ತು ರಾಷ್ಟ್ರಗಳಲ್ಲಿ ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸುತ್ತಿದೆ. ಈ ಮೂಲಕ ಈ ಜೀವಿಗಳ ಉಳಿವಿಗಾಗಿ ಒಂದಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಬದಲಾದ ಬದುಕು, ಯಾಂತ್ರಿಕ ಜಗತ್ತು, ಪ್ಯಾಕೆಟ್ ಆಹಾರ, ಕೀಟನಾಶಕಗಳ ವಿಪರೀತ ಬಳಕೆ, ಬದಲಾದ ಮಾನವ ಜೀವನ ಶೈಲಿ ಇದಕ್ಕೆ ಗುಬ್ಬಚ್ಚಿಗಳು ಹೊಂದುತ್ತಿಲ್ಲ. ಈ ಕಾರಣದಿಂದಾಗಿ ಅವುಗಳು ಅವನತಿಯತ್ತ ಸಾಗುತ್ತಿವೆ. ಮೊಹಮ್ಮದ್ ದಿಲಾವರ್ ಎಂಬ ವ್ಯಕ್ತಿಯ ನೇತೃತ್ವದಲ್ಲಿ ಆರಂಭವಾದ ನೇಚರ್ ಫಾರೆವರ್ ಸೊಸೈಟಿ ಗುಬ್ಬಚ್ಚಿಗಳ ಹೆಚ್ಚಳಕ್ಕೆ ಶ್ರಮಿಸುತ್ತಿದೆ. ನಮ್ಮೆಲ್ಲದ ಆಧುನಿಕತೆಯ ಹುಚ್ಚು ಪುಟ್ಟ ಪಕ್ಷಿಯೊಂದರ ಬದುಕು ಕಸಿಯುತ್ತಿದೆ. ಇದರ ನಡುವಲ್ಲಿಯೇ ನಮ್ಮ ದೇಶದಲ್ಲಿ ಗುಬ್ಬಚ್ಚಿಯ ಉಳಿವಿಗಾಗಿ ಪ್ರಯತ್ನಗಳು ನಡೆಯುತ್ತಿವೆ. ಇದೆಲ್ಲದರ ನಡುವಲ್ಲಿಯೂ ಗುಬ್ಬಚ್ಚಿಗಳ ಸಂಖ್ಯೆ ದಿನೇ ದಿನೆ ಕ್ಷೀನಿಸುತ್ತಿರೋದು ಮಾತ್ರ ಆಘಾತಕಾರಿ ಸಂಗತಿ.

ಸ್ವಚ್ಚಂದ ಬದುಕು

Port Alberni, BC

ಈಗ ಗುಬ್ಬಿಗಳನ್ನು ಅಪರೂಪಕ್ಕೊಮ್ಮೆ ನೋಡಿದಾಗ ಬಾಲ್ಯದಲ್ಲಿ ಅದರೊಂದಿಗಿನ ಹಲವು ಸಂದರ್ಭಗಳನ್ನು ಮೆಲುಕು ಹಾಕುವಂತಾಗುತ್ತೆ. ಆ ಕಾಲದಲ್ಲಿ ಮನೆಯಂಗಳದಲ್ಲಿ ಮಣ್ಣಿನ ಗೋಡೆಯಲ್ಲಿ ಮರಿಗಳನ್ನು ಹಾಕಿ ಬಹು ಸಂಭ್ರಮದಿಂದ ಜೀವನ ಕಳೆದ ಗುಬ್ಬಚ್ಚಿಯ ಸುಂದರ ಬದುಕಿನ ಕ್ಷಣಗಳನ್ನು ಈಗಿನ ಕಾಂಕ್ರೀಟ್ ಕಟ್ಟಡಗಳಿಂದ ಅವುಗಳ ಬದುಕು ದುಸ್ತರವಾಗಿದ್ದನ್ನು ಸ್ಮರಿಸಿಕೊಂಡರೆ ಹೃದಯ ಭಾರವಾಗುತ್ತದೆ. ನಮ್ಮ ಸಹಜೀವಿಗಳಾಗಿ ಬದುಕುವ ಪ್ರಾಣಿ ಪಕ್ಷಿಗಳ ಬಗ್ಗೆಯೂ ನಿಗಾ ವಹಿಸಿ, ಪ್ರತೀ ಜೀವಗಳಿಗೂ ಘನತೆಯಿದೆ, ಬದುಕುವ ಹಕ್ಕಿದೆ ಅನ್ನೋದನ್ನು ಮನಗಂಡರೆ ಗುಬ್ಬಚ್ಚಿಗಳೂ ಸೇರಿದಂತೆ ಇನ್ನೊಂದಷ್ಟು ಜೀವಿಗಳು ಉಳಿದುಕೊಳ್ಳಬಹುದೇನೋ…
ಈ ಗುಬ್ಬಿಗಳು ಮನುಷ್ಯರೊಂದಿಗೆ ಅತಿಹೆಚ್ಚು ಹೊಂದಿಕೊಂಡಿರುವ ಹಕ್ಕಿಗಳು. ಈ ಕಾರಣದಿಂದಲೇ ಎಲ್ಲರಿಗೂ ಈ ಜೀವಿಗಳೆಂದರೆ ಅತೀವ ಪ್ರೀತಿ. ಅದಕ್ಕೆ ಅವುಗಳನ್ನು ಗುಬ್ಬಕ್ಕ ಎಂದೇ ನಾವು ಪ್ರೀತಿಯಿಂದ ಸಂಭೋದಿಸುತ್ತೇವೆ. ಹೀಗೆ ಹತ್ತಿರದ ಬಂಧುವಿನ ರೀತಿಯಿದ್ದ ಗುಬ್ಬಚ್ಚಿಗಳ ಸಂಖ್ಯೆ ಈಗ ಗಣನೀಯವಾಗಿ ಕಡಿಮೆಯಾಗಿದೆ. ಇದು ಜಾಗತಿಕವಾಗಿ ಆಗಿರುವ ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂಬುದು ಈಗಾಗಲೇ ಜಾಹೀರಾಗಿದೆ. ಅವುಗಳು ಹೇಗೆ ಕಡಿಮೆಯಾದವು ಎಂಬುದರ ಬಗ್ಗೆ ಜಗತ್ತಿನಾದ್ಯಂತ ನೂರಾರು ಸಂಶೋಧನಾ ಪ್ರಬಂಧಗಳು ಬಂದಿವೆಯಾದರೂ ಇಲ್ಲಿಯವರೆಗೂ ಅವುಗಳ ಸಂತತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂಬುದು ನಿಜಕ್ಕೂ ನೋವಿನ ಸಂಗತಿ.

ತಾಂತ್ರಿಕತೆಯೇ ಶಾಪ

ನಾವು ಆಧುನೀಕರಣದ ಭಾಗವಾಗಿ ಜಗತ್ತು ಮುಂದುವರೆದಿರೋದನ್ನು ಸಂಭ್ರಮಿಸುತ್ತೇವೆ. ಆದರೆ ಅತಿಯಾದ ತಾಂತ್ರಿಕತೆ ಇತರೇ ಜೀವಿಗಳ ಸಂತತಿಗೇ ಮುಳುವಾದ ವಾಸ್ತವಕ್ಕೆ ಕುರುಡಾಗುತ್ತೇವೆ. ತಾಂತ್ರಿಕತೆ ಮುಂದುವರಿದಂತೆಲ್ಲ ಪಕ್ಷಿಸಂಕುಲ ಅಳಿವಿನ ಅಂಚಿಗೆ ತಲುಪಿ, ನಾವೇ ಅವುಗಳ ಮಾರಣಹೋಮದಲ್ಲಿ ಪಾಲು ಪಡೆದಿದ್ದೇವೆ.ನಗರ ಪ್ರದೇಶವಷ್ಟೇ ಅಲ್ಲ, ಹಳ್ಳಿಗಾಡಿನ ಪ್ರದೇಶಗಳೂ ಕೂಡ ನಗರ ಪ್ರದೇಶಗಳಾಗಿ ಅಭಿವೃದ್ಧಿ ಹೊಂದುವ ನೆಪದಲ್ಲಿ ಕಾಂಕ್ರೀಟ್ ಕಾಡುಗಳಾಗಿ ಮಾರ್ಪಟ್ಟಿದ್ದು ಪಕ್ಷಿ ಸಂಕುಲಗಳ ಬದುಕಿಗೆ ಕೊಡಲಿಯನ್ನು ಇಟ್ಟಿದ್ದೇವೆ.ಇದೆಲ್ಲದರ ಪರಿಣಾಮ ಮೂಕ ಜೀವಿಗಳ ಮೇಲಾಗುತ್ತಿದೆ. ಅದು ಶೀಘ್ರದಲ್ಲಿಯೇ ನಮ್ಮನ್ನೂ ತಲುಪಿಕೊಳ್ಳಲಿದೆ ಅನ್ನೋದು ಖಚಿತ!
ಹೀಗೆ ನಮ್ಮೆಲ್ಲರ ಪ್ರೀತಿಯ ಗುಬ್ಬಚ್ಚಿಗಳು ನಮ್ಮಿಂದ ಮರೆಯಾಗಲು ಕಾರಣವೇನೆಂಬ ಬಗ್ಗೆ ನಾನಾ ವಿಶ್ಲೇಷಣೆಗಳಿದ್ದಾವೆ. ಅತಿಯಾದ ಶಬ್ದ ಮಾಲಿನ್ಯ, ಮೊಬೈಲ್ ಟವರ್ ಗಳ ಮೂಲಕ ಹೊರ ಸೂಸುವ ತರಂಗಗಳು, ಅತಿಯಾದ ಬೆಳೆ ತೆಗೆಯುವ ಉದ್ದೇಶದಿಂದ ರೈತರು ಆಧುನಿಕ ಕೃಷಿಗೆ ಒಗ್ಗಿಕೊಂಡು ಹೆಚ್ಚೆಚ್ಚು ರಸಗೊಬ್ಬರಗಳ ಬಳಕೆ,ವಾಹನ ಮಾಲಿನ್ಯದಿಂದ ಹೊರಸೂಸುವ ಶಬ್ದ ಮಾಲಿನ್ಯ, ಅಷ್ಟೇ ಅಲ್ಲ ಬೆಳೆಗಳಿಗೆ ಅತಿಯಾದ ಕ್ರಿಮಿನಾಶಕ ಸಿಂಪಡಣೆ ಹಾಗೂ ವಿಷಕಾರಿ ಅಂಶಗಳನ್ನೊಳಗೊಂಡ ರಾಸಾಯನಿಕದಿಂದ ಪಕ್ಷಿ ಸಂಕುಲಗಳ ಬದುಕಿಗೆ ಸಂಚಕಾರ ತಂದು ಗುಬ್ಬಚ್ಚಿಗಳ ಬದುಕುವ ಹಂದರವನ್ನು ಕೆಡವಿ ನಿರ್ನಾಮ ಮಾಡಿದ್ದೇವೆ. ಅದರ ಫಲವನ್ನು ಮನುಕುಲ ಇಷ್ಟರಲ್ಲಿಯೇ ಮರಳಿ ಪಡೆಯಲಿದೆ.
ಹೀಗೆ ಗುಬ್ಬಚ್ಚಿಗಳು ಮರೆಯಾಗುತ್ತಿದ್ದರೂ ಕೂಡಾ ಅದು ಈ ಸಮಾಜಕ್ಕೊಂದು ಗಂಭೀರ ವಿಚಾರವಾಗಿ ಕಾಣಿಸುತ್ತಿಲ್ಲ. ಗುಬ್ಬಚ್ಚಿಯ ರಕ್ಷಣೆ ಮತ್ತು ಸಂತತಿಯ ಉಳಿವಿಗಾಗಿ ಇಂದಿನ ಸಮಾಜ ನಿರ್ಲಕ್ಷಿಸಿದೆ. ಪರಿಸರ ಸಮತೋಲನದಲ್ಲಿ ಬಹುಮುಖ್ಯ ಪಾತ್ರ ವಹಿಸುವ ಪಕ್ಷಿ ಸಂಕುಲಗಳ ಅವನತಿಯಿಂದ ಮುಂದೊಂದು ದಿನ ಪರಿಸ್ಥಿತಿ ಭೀಕರವಾಗಲಿದೆ. ಗುಬ್ಬಿಗಳನ್ನು ಸಂರಕ್ಷಿಸುವ ದೃಷ್ಟಿ ಪರಿಣಾಮಕಾರಿಯಾಗಿ ಮೂಡಿ ಎಲ್ಲರ ಹೃದಯ ತಟ್ಟುವಂತೆ ಜಾಗೃತಿ ಮೂಡಿಸಲು ನಾವೆಲ್ಲರೂ ಪಣ ತೊಡಬೇಕಾಗಿರುವುದು ಈವತ್ತಿನ ತುರ್ತು. ಅದಕ್ಕಾಗಿ ತೀರಾ ವ್ಯವಸ್ಥಿತವಾದ ಕಾರ್ಯತಂತ್ರಗಳೊಂದಿಗೆ ಅಖಾಡಕ್ಕಿಳಿಯಬೇಕಾದ ಅನಿವಾರ್ಯತೆಯೂ ಈಗ ಮೂಡಿಕೊಂಡಿದೆ.


ಈಗಂತೂ ಸಕಲ ಪ್ರಾಣಿ ಪಕ್ಷಿಗಳಿಗೂ ಪ್ರತಿಕೂಲ ವಾತಾವರಣ ಬಂದೊದಗಿದೆ. ಬೇಸಿಗೆ ಕಾಲದಲ್ಲಂತೂ ನಿತ್ಯ ಬಿರು ಬಿಸಿಲು ಹೆಚ್ಚಾಗಿ ಮನುಷ್ಯರೇ ಬದುಕಲು ಹೆಣಗಾಡುವ ಆ ಸಂದರ್ಭದಲ್ಲಿ ಬಂದೊದಗಿದೆ. ಹಾಗಿರುವಾಗ ಪಕ್ಷಿಗಳು ಬದುಕೊದು ಕಷ್ಟವಿದೆ. ಇದು ಹೀಗೆಯೇ ಮುಂದುವರೆದರೆ ಮುಂಬರುವ ದಿನಗಳಲ್ಲಿ ಪರಿಸರ ಸಮತೋಲನ ಕಳೆದುಕೊಂಡು ನಾನಾ ಪ್ರಾಕೃತಿಕ ವಿಕೋಪಗಳು ನಮ್ಮೆಲ್ಲರ ಜೀವಕ್ಕೆ ಎರವಾದರೂ ಅಚ್ಚರಿಯೇನಿಲ್ಲ. ಇಂದಿನ ಯುವ ಜನಾಂಗದಲ್ಲಿ ಪರಿಸರ ಪ್ರೇಮಿಗಳಲ್ಲಿ ಪಕ್ಷಿ ಸಂಕುಲಗಳ ಬಗ್ಗೆ ಜಾಗೃತಿ ಮೂಡುವಂತಾದರೆ ಅವುಗಳ ಜೀವನ ಸಾರ್ಥಕತೆ ಕಂಡೀತು ಎಂಬ ಬಲವಾದ ಭರವಸೆ ನನ್ನದು.
ಇಂಥಾ ಪುಟ್ಟ ಗುಬ್ಬಿಗಳು ನಮ್ಮ ಪರಿಸರದಲ್ಲಿ ಅತ್ಯಂತ ಶಕ್ತಿಶಾಲಿಯಾದ ಪಾತ್ರವನ್ನು ಹೊಂದಿವೆ. ನಮ್ಮ ಪರಿಸರ ಸಮತೋಲನದಲ್ಲಿ ಬಹುಮುಖ್ಯ ಪಾತ್ರ ವಹಿಸುವ ಗುಬ್ಬಚ್ಚಿಗಳು ನಾವೆಲ್ಲ ಕೊಂಚ ಎಚ್ಚರ ತಪ್ಪಿದರೂ ಮುಂದೊಂದು ದಿನ ಗೂಗಲ್, ಚಿತ್ರಗಳಲ್ಲಿ ಮಾತ್ರವೇ ನೋಡುವಂಥಾ ಸ್ಥಿತಿ ಬರುತರ್‍ತದೆ. ಆದರೂ ಕೂಡಾ ಈ ಸಮಾಜಕ್ಕೆ ಗುಬ್ಬಿಗಳ ಕಣ್ಮರೆ ಒಂದು ಸಮಸ್ಯೆಯಾಗಿ ಕಾಣಿಸುತ್ತಿಲ್ಲ. ಈ ಆತಂಕವನ್ನು ಹಲವು ದಶಕಗಳ ಹಿಂದೆಯೇ ದೇಶದ ಅಂತಾರಾಷ್ಟ್ರೀಯ ಖ್ಯಾತಿಯ ಪಕ್ಷಿ ತಜ್ಞ ಡಾ ಸಲೀಂ ಅಲಿ ಪದೇ ಪದೆ ಹೇಳುತ್ತಲೇ ಬಂದಿದ್ದರು. ಆದರೆ, ಯಾರೂ ಕೂಡಾ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ.ಲ್ಲೀ ಕಾರಣದಿಂದಲೇ ಗುಬ್ಬಚ್ಚಿಗಳು ಈವತ್ತಿಗೆ ಸಂಪೂರ್ಣವಾಗಿ ಮರೆಯಾಗಿದೆ. ಮನೆಯ ಮಾಡಿನ ಮೇಲೆ ಹುಲ್ಲು, ಕಡ್ಡಿ ಬಟ್ಟೆಯ ತುಂಡುಗಳನ್ನು ಬಳಸಿ ಗೂಡು ಕಟ್ಟಿ, ಮೊಟ್ಟೆ ಇಟ್ಟು ಮರಿ ಮಾಡುವ ಈ ಗುಬ್ಬಚ್ಚಿಯ ದಿನಚರಿ ನೋಡುವುದೇ ಖುಷಿಯಾಗಿತ್ತು ಕಪ್ಪು, ಬೂದು ಹಾಗೂ ಬಿಳಿ ಬಣ್ಣಗಳಿಂದ ಕೂಡಿದ ಈ ಪುಟ್ಟ ಹಕ್ಕಿ ಚೂಪಾದ ಕೊಕ್ಕು, ಸಣ್ಣ ಬಾಲದೊಂದಿಗೆ ಎಲ್ಲರನ್ನೂ ಸೆಳೆಯುತ್ತಿತ್ತು.

ಗುಬ್ಬಿಗಳ ಶಕ್ತಿ


ಹಾಗಾದರೆ ಈ ಗುಬ್ಬಚ್ಚಿಗಳು ಬೇರ್‍ಯಾವ್ಯಾವ ದೇಶಗಳಲ್ಲಿ ವಾಸಿಸುತ್ತಿವೆ? ಅಲ್ಲಿ ಅವುಗಳ ಪರಿಸ್ಥಿತಿ ಹೇಗಿದೆ ಎಂಬಿತ್ಯಾಧಿ ಪ್ರಶ್ನೆಗಳು ಸಹಜವಾಗಿಯೇ ಕಾಡುತ್ತವೆ. ಪ್ರಪಂಚದ ಬಹಳಷ್ಟು ರಾಷ್ಟ್ರಗಳಲ್ಲಿ ಜೀವಿಸುತ್ತಿರುವ ಈ ಹಕ್ಕಿ, ಪ್ರತ್ಯೇಕವಾಗಿ ಇಲ್ಲವೇ ಹಿಂಡು ಗಳಲ್ಲಿಯೂ ವಾಸಿಸುತ್ತಿರುತ್ತದೆ. ಹಣ್ಣು, ಕೀಟ, ಬೀಜ ಇಲ್ಲವೇ ಅನ್ನದ ಅಗಳುಗಳು ಗುಬ್ಬಚ್ಚಿಯ ಆಹಾರಗಳು. ಸಣ್ಣ ದೇಹದ ಈ ಮುಗ್ಧ ಪಕ್ಷಿ ಸುಮಾರು ಏಳು ವರ್ಷಗಳ ಕಾಲ ಯಾರಿಗೂ ತೊಂದರೆ ಕೊಡದೆ, ಕೇವಲ ಮುದವನ್ನಷ್ಟೇ ನೀಡುತ್ತಾ ಬದುಕಬಲ್ಲವು. ಜಾತಿ ಧರ್ಮಗಳ ಹಂಗಿಲ್ಲದೆ ಪ್ರತಿಯೊಬ್ಬರ ಮನೆ ಮಂದಿರ, ಮಸೀದಿ, ಬಸದಿ, ಚರ್ಚ್, ಗುರುದ್ವಾರಗಳೆಂದು ಭೇದ ತೋರದೆ ತನಗಿಷ್ಟ ಬಂದಲ್ಲಿ ಗೂಡು ಕಟ್ಟುವ ಈ ಹಕ್ಕಿ ಸೌಹಾರ್ದತೆಯ ಪ್ರತೀಕವೂ ಹೌದು.
ಈ ಹಕ್ಕಿಗಳ ದೇಹರಚನೆ ಕೂಡಾ ಭಿನ್ನ. ತನ್ನ ಕಾಲುಗಳು ಬಲಿಷ್ಠವಿಲ್ಲದ ಕಾರಣ ಗುಬ್ಬಚ್ಚಿ ನಡೆಯುವುದು ವಿರಳ. ಅದು ಕುಪ್ಪಳಿಸುತ್ತಾ ಚಲಿಸುತ್ತದೆ ಇಲ್ಲವೇ ಹಾರಿ ಹೋಗುತ್ತದೆ. ಇಂದು ನಾಶವಾಗುತ್ತಿರುವ ಪಕ್ಷಿಕುಲಗಳಲ್ಲಿ ಗುಬ್ಬಚ್ಚಿ ಸಂತತಿ ಮುಂಚೂಣಿಯಲ್ಲಿದೆ. ಪಕ್ಷಿಗಳ ನಾಶವು ಹಾಳಾಗುತ್ತಿರುವ ಪರಿಸರದ ಲಕ್ಷಣಗಳಾಗಿವೆ. ಪರಿಸರ ನಾಶದ ಮೊದಲ ಮುನ್ಸೂಚನೆಯೇ ಹಕ್ಕಿಗಳ ಕಣ್ಮರೆ. ಅದರಲ್ಲೂ ಮುಖ್ಯವಾಗಿ ಮೊಬೈಲ್ ಟವರ್ ಗಳು ಗುಬ್ಬಚ್ಚಿಗಳ ನಾಶಕ್ಕೆ ಬಹುಮುಖ್ಯ ಕಾರಣವಾಗಿದೆ ಎಂದು ಹೇಳುತ್ತಾರೆ. ಪ್ರತಿಯೊಬ್ಬರ ಮನೆಯ ಮುಂದೆ ಗುಬ್ಬಚ್ಚಿಗಳ ಕಲರವ ಕಣ್ಮರೆಯಾಗಿದೆ. ಎಲ್ಲೋ ಒಂದೆರಡು ಕಡೆಗಳಲ್ಲಿ ಮಾತ್ರ ಕಾಣ ಸಿಗುವ ಗುಬ್ಬಚ್ಚಿ ಮುಂದಿನ ದಿನಗಳಲ್ಲಿ ಕಥೆಗಳಲ್ಲಿ ಮಾತ್ರ ಉಳಿಯಬಹುದೇನೋ? ಪ್ರಕೃತಿ ವೈಪರೀತ್ಯದಿಂದ ವಿನಾಶ ಸಂಭವಿಸುವಾಗ ಮೊದಲು ಹಕ್ಕಿಗಳೇ ಬಲಿಪಶುಗಳಾಗುತ್ತದೆ ಎಂದು ಹೇಳಲಾಗುತ್ತದೆ. ಹಕ್ಕಿಗಳ ನಾಶದ ನಂತರ ಮನುಷ್ಯರ ಅವನತಿ ಆರಂಭಗೊಳ್ಳುತ್ತದೆ ಎಂಬುವುದು ಹಿರಿಯರ ಮಾತು. ಮನುಷ್ಯನ ಉಳಿವಿಗಾಗಿ ಹಕ್ಕಿಗಳ ಸಂತತಿಯೂ ಉಳಿಯಲೇ ಬೇಕಿದೆ. ಇಂದು ಮುಗ್ಧ ಹಕ್ಕಿಗಳ ಸಂತತಿ ಮಕ್ಕಳ ಕಥೆಗಳಾಗದೆ ಮತ್ತಷ್ಟು ವೃದ್ಧಿಸಲಿ ಎಂಬ ಹಾರೈಕೆಯೊಂದು ಪಕ್ಷಿ ಪ್ರಿಯರಲ್ಲಿದೆ.
ಒಂದು ಕಾಲದಲ್ಲಿ ಗುಬ್ಬಚ್ಚಿ ಎಲೆಲ್ಲೂ ಕಣ್ಣಿಗೆ ಬೀಳುವ ಒಂದು ಹಕ್ಕಿಯಾಗಿತ್ತು. ಗುಬ್ಬಚ್ಚಿಗಳು ಯಾವಾಗಲು ಜೋಡಿಯಾಗಿರುತ್ತವೆ. ಅವುಗಳ ಬಣ್ಣ ಕಂದು.ಬೆನ್ನು ಮತ್ತು ಪಕ್ಕಗಳಲ್ಲಿ ಬಿಳಿ ಮತ್ತು ಕಪ್ಪು ಬಣ್ಣಗಳು ಮಿಶ್ರಿತವಾಗಿರುತ್ತದೆ. ಮುಂಭಾಗ ಬೆಳ್ಳಗಿರುತ್ತದೆ. ಗಂಡು ಗುಬ್ಬಿಗೆ ಗಂಟಲ ಮೇಲೆ ಕಪ್ಪು ಕಲೆ ಇರುತ್ತದೆ. ಗುಬ್ಬಚ್ಚಿ ಧಾನ್ಯಗಳನ್ನು,ಹುಳುಹುಪ್ಪಟೆ ಮತ್ತು ಗಿಡದ ಎಳೆ ಕುಡಿಗಳನ್ನು ತಿನ್ನುತ್ತದೆ. ಬೇಯಿಸಿದ ಆಹಾರ ಸಹ ಅದಕ್ಕೆ ತುಂಬ ಇಷ್ಟ. ಗುಬ್ಬಿ ಕಿಟಕಿಯ ಅಡಿಭಾಗ, ಬಾಗಿಲಿನ ಮೇಲ್ಭಾಗ, ಅಲ್ಮಿರಾ, ಮನೆಯ ಮೂಲೆಗಳು ಹೀಗೆ ಎಲ್ಲಿ ಜಾಗ ಸಿಕ್ಕರೆ ಅಲ್ಲಿ ಗೂಡು ಕಟ್ಟುತ್ತದೆ. ಗೋಡೆಗಳಲ್ಲಿರುವ ರಂಧ್ರಗಳು,ಮಾಡುಗಳಲ್ಲಿ ಗುಬ್ಬಿ ಗೂಡು ಕಟ್ಟಿಕೊಳ್ಳುತ್ತದೆ. ತಾಯಿ ಗುಬ್ಬಿ ನಸು ಹಸಿರು ಮಿಶ್ರಿತ ಬಿಳಿ ಬಣ್ಣದ ಮೂರು ಅಥವ ನಾಲ್ಕು ಮೊಟ್ಟೆಗಳನ್ನು ಇಡುತ್ತದೆ.ಗುಬ್ಬಚ್ಚಿ ಒಂದು ವರುಷದಲ್ಲಿ ಅನೇಕ ಬಾರಿ ಮೊಟ್ಟೆಗಳನ್ನು ಇಟ್ಟು, ತನ್ನ ಸಂತಾನವನ್ನು ಬೆಳೆಸಿಕೊಳ್ಳುತ್ತದೆ.ಈ ಹಕ್ಕಿಯ ಕಾಲುಗಳು ತೀರ ತೆಳ್ಳಗಿರುವದರಿಂದ ಅದು ತನ್ನ ಮೈಭಾರವನ್ನು ಹೊರಲಾರದು. ಹಾಗಾಗಿ ಗುಬ್ಬಚ್ಚಿ ನಡೆಯುವದು ವಿರಳ. ಹತ್ತಿರದ ಗೂಡನ್ನು ಜಿಗಿಯುತ್ತ ಅಥವಾ ಹಾರುತ್ತ ಸೇರಿಕೊಳ್ಳುತ್ತಾ ಬದುಕುತ್ತೆ.


ಈ ಪಕ್ಷಿಗಳ ಸೌಂದರ್ಯದಲ್ಲಿಯೂ ಕೂಡಾ ಭಿನ್ನವಾಗಿವೆ. ಹೆಣ್ಣು ಪಕ್ಷಿ ಕಂದು ಬಣ್ಣದ ದೇಹವನ್ನೊಳಗೊಂಡಿದೆ. ರೆಕ್ಕೆಗಳ ಮೇಲೆ ಕಂಡು ಬಣ್ಣದ ಜೊತೆಗೆ ಕಪ್ಪು ಪಟ್ಟಿಗಳಿವೆ. ಕಂದು ಬಣ್ಣದ ಕಾಲುಗಳಿವೆ, ಕೊಕ್ಕಿನಲ್ಲಿ ಬೂದು ಕಪ್ಪು ಗುಲಾಬಿ ಹಳದಿ ಬಣ್ಣಗಳನ್ನು ಗುರುತಿಸಬಹುದು. ಹೆಣ್ಣು ಗುಬ್ಬಚ್ಚಿಗೆ ಹೋಲಿಸಿದರೆ ಗಂಡು ಪಕ್ಷಿಯಲ್ಲಿ ಹೆಚ್ಚಿನ ವರ್ಣ ವೈವಿಧ್ಯತೆಯಿದೆ. ಗಂಡು ಗುಬ್ಬಚ್ಚಿಯ ನೆತ್ತಿ ಬೂದು ಬಣ್ಣದ್ದಾಗಿದೆ. ಕಣ್ಣಿನ ಸುತ್ತ ಮತ್ತು ಎದೆಯ ಮೇಲ್ಬಾಗದಲ್ಲಿ ಕಪ್ಪು ಬಣ್ಣವಿದೆ. ಎದೆ – ಕತ್ತಿನ ಉಳಿದ ಭಾಗ ಬಿಳಿ ಬೂದು ಬಣ್ಣವನ್ನೊಂದಿದೆ. ರೆಕ್ಕೆಯಲ್ಲಿ ಮತ್ತು ನೆತ್ತಿಯ ಕೆಳಗೆ ಕಂದು ಬಣ್ಣವಿದೆ. ಹೆಣ್ಣಿನಂತೆಯೇ ಗಂಡಿನ ರೆಕ್ಕೆಯಲ್ಲೂ ಕಪ್ಪು ಬಣ್ಣದ ಪಟ್ಟಿಗಳಿವೆ. ಈ ಮೂಲಕವೇ ಅವು ಇತರೇ ಪಕ್ಷಿ ಪ್ರಬೇಧಗಳಿಗಿಂತ ಭಿನ್ನವಾಗಿವೆ.
ಇವುಗಳ ಗೂಡು ಕೂಡಾ ಭಿನ್ನವಾಗಿ ಕಾಣುತ್ತದೆ. ಕಡ್ಡಿ, ಎಲೆ, ಹುಲ್ಲು, ಪಕ್ಷಿಗಳ ಉದುರಿದ ರೆಕ್ಕೆಗಳನ್ನು ಬಳಸಿಕೊಂಡು ಮನುಷ್ಯನ ವಾಸಸ್ಥಾನದ ಬಳಿಯೇ ಗೂಡು ಕಟ್ಟಿಕೊಳ್ಳುತ್ತವೆ. ಸಾಮಾನ್ಯವಾಗಿ ಹೆಂಚಿನ ಮನೆಯ ಮಾಡು ಇವುಗಳಿಗೆ ಅಚ್ಚುಮೆಚ್ಚಿನಸ್ಥಳ. ಆಹಾರದ ವಿಚಾರದಲ್ಲಿಯೂ ಗುಬ್ಬಚ್ಚಿಗಳು ಭಲೇ ಡಿಫರೆಂಟು. ಮಿಶ್ರಹಾರಿಯಾದ ಗುಬ್ಬಚ್ಚಿಗಳು ಸಣ್ಣ ಪುಟ್ಟ ಕೀಟ, ಕಾಳು, ಹಣ್ಣು, ಮನುಷ್ಯ ಎಸೆದ ಆಹಾರ ಪದಾರ್ಥಗಳನ್ನು ಜೀವಿಸುತ್ತವೆ. ನಗರೀಕರಣ ಪ್ರಕ್ರಿಯೆಯಿಂದಾಗಿ ಮೊಬೈಲು ಟವರುಗಳಿಂದಾಗಿ ಇವುಗಳ ಸಂಖ್ಯೆಯಲ್ಲಿ ದೊಡ್ಡ ಮಟ್ಟದ ಇಳಿಕೆಯಾಗಿದೆ ಎನ್ನಲಾಗುತ್ತದೆ. ಹೆಂಚಿನ ಮನೆಗಳಿರುವ ಪ್ರದೇಶಗಳಲ್ಲಿ ಮೊಬೈಲು ಟವರಿನ ಕೆಳಗೇ ಕಾಣಿಸಿಕೊಳ್ಳುವುದೂ ಉಂಟು. ಮೊಬೈಲು ಟವರುಗಳಿಂದಾಗಿಯೇ ಇವುಗಳ ಸಂಖ್ಯೆ ಕುಸಿಯಿತಾ ಅಥವಾ ಗೂಡು ಕಟ್ಟಿಕೊಳ್ಳಲು ಸೂಕ್ತ ಸ್ಥಳಾವಕಾಶವಿಲ್ಲದ ಆಧುನಿಕ ಮನೆಗಳಿಂದ ಇವುಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆಯಾ ಎಂಬುದು ಗೊಂದಲವಾಗಿದೆ. ಆದರೆ, ಇವುಗಳ ಸಂತತಿ ಉಳಿಯದಿದ್‌ದರೆ ಅದರಿಂದ ಜೀವ ಸಂಕುಲಕ್ಕೆ ಗಂಡಾಂತರವಾಗುತ್ತದೆ ಅನ್ನೋದರಲ್ಲಿ ಯಾವ ಸಂಶಯವೂ ಇಲ್ಲ!

Tags: #sparrow

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
sad story of elephant: ಭಾವಜೀವಿ ಆನೆಯ ಮೂಕರೋಧನೆ!

sad story of elephant: ಭಾವಜೀವಿ ಆನೆಯ ಮೂಕರೋಧನೆ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.