ಸತ್ಯ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಇತ್ತೀಚಿಗೆ ಮುಹೂರ್ತ ಕಂಡ ರಾಷ್ಟ್ರಪ್ರಶಸ್ತಿ ಹಾಗೂ ರಾಜ್ಯಪ್ರಶಸ್ತಿ ವಿಜೇತ ನಿರ್ದೇಶಕ ಡಿ.ಸತ್ಯಪ್ರಕಾಶ್ ನಿರ್ದೇಶನದ “X&Y” ಚಿತ್ರದ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ. ಡಿಸೆಂಬರ್ 21 ರಿಂದ ಬೆಂಗಳೂರಿನಲ್ಲಿ ಚಿತ್ರೀಕರಣ ಪ್ರಾರಂಭಿಸಿರುವ ಚಿತ್ರತಂಡ, ಒಂದು ತಿಂಗಳು ಕಾಲ ಬೆಂಗಳೂರಿನಲ್ಲಿ ಶೂಟಿಂಗ್ ನಡೆಸಿ, ಹೊಸವರ್ಷದ ಫೆಬ್ರವರಿಯಲ್ಲಿ ಮಂಗಳೂರಿಗೆ ಪ್ರಯಾಣ ಬೆಳಸಲಿದೆ. ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಡಿ.ಸತ್ಯ ಪ್ರಕಾಶ್ ಚಿತ್ರ ಸೆಟ್ಟೇರಿತು ಎಂದರೆ ಏನಾದರೊಂದಷ್ಟು ವಿಶೇಷತೆಗಳನ್ನು ಹೊಂದಿರುತ್ತದೆ ಎಂದು ಪ್ರೇಕ್ಷಕರು ಮತ್ತು ಚಿತ್ರೋದ್ಯಮದ ಮಂದಿ ಎದುರು ನೋಡುತ್ತಾರೆ. ಅದನ್ನು ಅಷ್ಟೇ ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ ನಿರ್ದೇಶಕ ಸತ್ಯ. ಬಹಳ ದಿನಗಳ ನಂತರ ಈಗ ಅಳೆದು ತೂಗಿ ಅತ್ಯಾಪ್ತ ಕಥೆ ಮಾಡಿಕೊಂಡು ಅದಕ್ಕೆ “ಎಕ್ಸ್ ಅಂಡ್ ವೈ” ಎಂದು ಶೀರ್ಷಿಕೆ ಇಟ್ಟುಕೊಂಡು ಅಖಾಡಕ್ಕೆ ಇಳಿದಿದ್ದಾರೆ.
‘ಈಗ ಮಾಡಲು ಹೊರಟಿರುವ ಕಥೆಯನ್ನು ನಾನೇ ಬರೆದಿದ್ದೇನೆ. ಈ ಚಿತ್ರದಲ್ಲಿಎರಡು ಪ್ರಮುಖ ಪಾತ್ರಗಳು ಬರಲಿದ್ದು, ಒಂದನ್ನು ನಾನು ನಿರ್ವಹಿಸುತ್ತಿದ್ದೇನೆ. ಪಾತ್ರಕ್ಕೆ ನಾನು ಸೂಕ್ತವಾಗಿ ಹೊಂದಿಕೆಯಾಗುತ್ತೇನೆ ಎಂದು ಅನಿಸಿ ಮೇಲೆ ನಟನಾಗಲು ನಿರ್ಧರಿಸಿದೆ. ಈಗಾಗಲೇ ಅದಕ್ಕೆ ಬೇಕಾದ ತಯಾರಿಯನ್ನು ಮಾಡಿಕೊಳ್ಳುತ್ತಿದ್ದೇನೆ. ಪ್ರೇಕ್ಷಕರನ್ನು ನಕ್ಕು ನಗಿಸುತ್ತಾ ಒಂದು ಭಾವನಾತ್ಮಕ ಕಥೆಯನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನವಾಗಲಿದೆ.’ಎನ್ನುವುದು ಸತ್ಯಪ್ರಕಾಶ್ ಮಾತು. ಕೊಂಚ ಫ್ಯಾಂಟಸಿ ಮತ್ತು ಕಮರ್ಷಿಯಲ್ ಎಲಿಮೆಂಟ್ಗಳಿರುವ ಈ ಹೊಸ ಸಿನಿಮಾದಲ್ಲಿ ಫ್ರೆಶ್ ಆಗಿರುವ ನಕ್ಕು ನಗಿಸುವಂತಹ ಕಥೆಯನ್ನು ಸಿನಿಮಾದಲ್ಲಿ ಸತ್ಯಪ್ರಕಾಶ್ ಹೇಳಲಿದ್ದಾರೆ. ಈ ಚಿತ್ರದಲ್ಲಿ ಸತ್ಯಪ್ರಕಾಶ್ ಜತೆಗೆ ಅಥರ್ವ ಪ್ರಕಾಶ್ ಎಂಬ ಯುವಕ ಕೂಡಾ ನಟಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಇವರ ನಿರ್ದೇಶನಲ್ಲಿ ‘ಮ್ಯಾನ್ ಆಫ್ ದಿ ಮ್ಯಾಚ್’ ಎಂಬ ಸಿನಿಮಾ ಮೂಡಿ ಬಂದಿತ್ತು. ಈ ಸಿನಿಮಾದಲ್ಲಿ ಅಥರ್ವ ಪ್ರಕಾಶ್ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಿ ಗಮನ ಸೆಳೆದಿದ್ದರು. ಈಗ “X&Y” ಹೊಸ ಚಿತ್ರದಲ್ಲಿ ಸತ್ಯಪ್ರಕಾಶ್ ಮತ್ತು ಅಥರ್ವ ಪ್ರಕಾಶ್ ನಾಯಕರಾಗಿ ಅಭಿನಯಿಸುತ್ತಿದ್ದಾರೆ.
ನಿರ್ಮಾಣ ಹಾಗೂ ನಿರ್ದೇಶನದ ಜೊತೆಗೆ ಸತ್ಯಪ್ರಕಾಶ್ ಹಾಗೂ ಅಥರ್ವ ಪ್ರಕಾಶ್ ನಾಯಕರಾಗಿ ಅಭಿನಯಿಸುತ್ತಿದ್ದು ಲವಿತ್ ಛಾಯಾಗ್ರಹಣ, ವಾಸುಕಿ ವೈಭವ್ ಸಂಗೀತ ನರ್ದೇಶನ, ಬಿ.ಎಸ್ ಕೆಂಪರಾಜು ಅವರ ಸಂಕಲನ ಇದೆ. ವರದರಾಜ್ ಕಾಮತ್ ಕಲಾನಿರ್ದೇಶನ ಮಾಡುತ್ತಿದ್ದಾರೆ. ಇಡೀ ಚಿತ್ರ ಬೆಂಗಳೂರು ಮತ್ತು ಮಂಗಳೂರು ಸುತ್ತ ಮುತ್ತಣ ಪರಿಸರದಲ್ಲಿ ಚಿತ್ರೀಕರಿಸಲು ಯೋಜಿಸಲಾಗಿದೆ ಎಂದು ಸತ್ಯಪ್ರಕಾಶ್ ತಿಳಿಸಿದ್ದಾರೆ.ನಿರ್ದೇಶನದ ಜತೆಗೆ ತಮ್ಮದೇ ಬ್ಯಾನರ್ ನಲ್ಲಿ ನಿರ್ಮಾಣವನ್ನು ಸಹ ಮಾಡುವ ಸತ್ಯ ಸಿನಿಮಾಗಳ ವಿತರಣೆಯನ್ನು ಸಹ ಕಳೆದ ಒಂದೂವರೆ ವರ್ಷಗಳಿಂದ ಮಾಡುತ್ತಿದ್ದಾರೆ.