-ವಿಶ್ವದ ಅತ್ಯಂತ ತಣ್ಣನೆಯ ಹಳ್ಳಿ ಎಲ್ಲಿದೆ ಗೊತ್ತೇ?
-ಅವನು ನಡೆದಾಡುವ ಅಯಸ್ಕಾಂತ!
‘ಒಲೆ ಹೊತ್ತಿ ಉರಿದೊಡೆ ನಿಲಬಹುದಯ್ಯಾ| ಧರೆ ಹೊತ್ತಿ ಉರಿದೊಡೆ ನಿಲ್ಲಬಹುದೇ ಅಯ್ಯಾ?’ ಎಂದರು ಭಕ್ತಿ ಭಂಡಾರಿ ಬಸವಣ್ಣ. ನಿಲ್ಲಬಹುದು! ಬೇಕಿದ್ದರೇ ನೀವೇ ನೋಡಿ…. ಇಲ್ಲಿ ೨೪ ತಾಸೂ ಬೆಂಕಿಯದ್ದೇ ದರ್ಭಾರ್. ವರ್ಷದ ೩೬೫ ದಿನಗಳೂ ಇಲ್ಲಿ ದಗ ಧಗ, ಭಗ-ಭಗ ಬೆಂಕಿ ಉರಿಯುತ್ತದೆ. ಬೆಂಕಿ ನೆಲವೆಲ್ಲಾ ಆವರಿಸಿ ಸುಡದೆ? ಇಲ್ಲ ಬೆಟ್ಟದ ಮೇಲೆ ಗೋಚರಿಸಿ ಕಿಡಿ ಕಾರುತ್ತದೆ. ಜನ ಅದರ ಸಮೀಪ ತೆರಳು. ಆದರೆ ಅಂಜದೆ ಅಳುಕದೆ ಅದರ ಸದುಪಯೋಗಕ್ಕೆ ಇಳಿದಿದ್ದಾರೆ. ಬೆಂಕಿ ತೋರಿಸುವ ಪ್ರವಾಸೋದ್ಯಮವೇ ಆರಂಭವಾಗಿದೆ. ಅಗ್ನಿ ನರ್ತನವನ್ನು ಅಮಾವಾಸ್ಯೆಯ ಅರೆ ರಾತ್ರಿಯಲ್ಲಿ ಅನುಭವಿಸುವುದೇ ಆನಂದ…ಈ ಅಗ್ನಿದಿವ್ಯವನ್ನು ಕಾಣಲೆಂದೇ ದೇಶವಿದೇಶಗಳಿಂದ ಜನ ಇಲ್ಲಿಗೆ ಬರುತ್ತಾರೆ.

ಅಜರ್ ಬೈಜಾನ್ ದೇಶಕ್ಕೆ ತೆರಳಿ, ಅಲ್ಲಿಂದ ಬಕು ಪಟ್ಟಣ ತಲುಪಿ, ನಂತರ ಉತ್ತರ ಪೂರ್ವದಿಕ್ಕಿನಲ್ಲಿ ೨೫ ಕಿ.ಮೀ ದೂರ ಕ್ರಮಿಸಿದರೆ ಅಲ್ಲಿ ೧೧೬ ಮೀಟರ್ ಎತ್ತರದ ಯಾನಾರ್ ದಾಗ್ ಎಂಬ ಪುಟ್ಟ ಬೆಟ್ಟವಿದೆ. ಇದರ ಮೇಲೆ ೧೦ ಮೀಟರ್ ಉದ್ದದ ಗೋಡೆಯ ರೀತಿಯಲ್ಲಿ ಧರೆ ಹೊತ್ತಿ ಉರಿಯುತ್ತದೆ. ಅಜರ್ ಬೈಜಾನ್ನ ಬೇಜಾನ್ ಬೆಂಕಿಗೇನು ಕಾರಣ? ನೈಸರ್ಗಿಕ ಅನಿಲ ಇಲ್ಲಿ ಉತ್ಪನ್ನವಾಗುತ್ತದೆ. ತಗಲಿದ ಬೆಂಕಿ ತಣ್ಣಗಾಗಿಲ್ಲ. ನಿತ್ಯ ಇಲ್ಲಿ ಅಗ್ನಿಯದ್ದೇ ಡ್ಯಾನ್ಸ್. ಅಗ್ನಿ ದಹಿಸುತ್ತಿದೆ ಎನ್ನುವುದನ್ನು ಸಾಕ್ಷಿ ಸಮೇತ ಅರಿಯಲು ಯಾರನ್ನು ಕಳುಹಿಸಬೇಕು?
ವಿಶ್ವದ ತಣ್ಣನೆಯ ಹಳ್ಳಿ

ಈ ಗ್ರಾಮದಲ್ಲೇ ಫ್ರಿಡ್ಜ್ ಗತಿಯಿಲ್ಲ. ಆದರೂ ತಿಂಗಳು ಗಟ್ಟಳೆ ಮಾಂಸ, ಮೀನು, ಹಾಲು ತರಕಾರಿಗಳು ಕೆಡದು. ಇದೇನು ಪವಾಡವಲ್ಲ. ಬದಲಿಗೆ ನಿಸರ್ಗ ಕೊಟ್ಟ ವರ-ಶಾಪವಿದು. ಮಾಡಿಟ್ಟ ಜ್ಯೂಸ್ ನೋಡ ನೋಡುತ್ತಿದ್ದಂತೆಯೇ ಐಸ್ ಆಗುತ್ತದೆ. ಕುದಿಸಿ ಕುಡಿಯಬೇಕು. ಧರಿಸುವ ಕನ್ನಡ್ಕ, ಕಣ್ಣಿನ ರೆಪ್ಪೆ, ಹುಬ್ಬು, ಮೀಸೆ…ಧರಿಸುವ ಬಟ್ಟೆಗಳ ಮೇಲೆಲ್ಲಾ ಹಿಮ ಹೆಪ್ಪುಗಟ್ಟುತ್ತದೆ. ಬರಿಯುವ ಪೆನ್ನ ಇಂಕ್, ಹಿಡಿಯುವ ಬ್ಯಾಟರಿ ಎಲ್ಲವೂ ಹೆಪ್ಪುಗಟ್ಟಿರುತ್ತದೆ.
ಇದು ವರ್ಷದ ಯಾವುದೋ ೧-೨ ತಿಂಗಳ ಸೀ(ಸ)ನಲ್ಲ. ೧೨ತಿಂಗಳು ಪೂರ್ತಿ ಇದೇ ದೃಶ್ಯವೇ ಖಾಯಂ. ಜನವರಿ – ಫೆಬ್ರವರಿ ತಿಂಗಳಲ್ಲಿ ಇದು ತಾರಕಕ್ಕೆ ಏರಿರುತ್ತದೆ. ಅಂದಾಜು ಉಷ್ಣಾಂಶವೇ -೫೦ ಡಿಗ್ರಿ ಸೆಲ್ಶಿಯಸ್. ಚಳಿಗಾಲದಲ್ಲಿ -೬೭ಡಿಗ್ರಿ ಸೆಲ್ಶಿಯಸ್ಗೂ ಜಾರಲಿದೆ. ದಿನದಲ್ಲಿ ೩-೪ ಗಂಟೆಗಳಷ್ಟು ಮಾತ್ರ ಸೂರ್ಯ ದರ್ಶನ. ಚಳಿಗಾಲದಲ್ಲಿ ೧-೨ ತಾಸಿಗೆ ಇಳಿಯಲಿದೆ. ವಿಶೇಷವೆಂದರೆ ಇಲ್ಲೊಂದು ಪುಟ್ಟ ಶಾಲೆಕಾರ್ಯ ನಿರ್ವಹಿಸುತ್ತಿದೆ. -೫೨ ಡಿಗ್ರಿ ಸೆಲ್ಶಿಯಸ್ ದಾಖಲಾದರೆ ಮಾತ್ರ ರಜೆ. ಉಳಿದಂತೆ ಮಕ್ಕಳು ಚಕ್ಕರ್ ಹಾಕುವಂತಿಲ್ಲ.
ಯಾವ ಬೆಳೆಯೂ ಈ ಊರಲ್ಲಿ ಬೆಳೆಯದು. ನೀರವ ಹಾಗೂ ನಿಸ್ತೇಜವೇ ಇಲ್ಲಿನವರ ಬದುಕಾಗಿದೆ. ಕುದುರೆ, ಸಾರಂಗದ ಮಾಂಸವೇ ಇಲ್ಲಿನವರ ಆಹಾರ. ಅಪರಿಮಿತ ಬಟ್ಟೆ ಧರಿಸಿ ಅಡ್ಡಾಡುವುದರಿಂದ ಮೈಭಾರದ ಸಮಸ್ಯೆಯೂ ಉಂಟು. ಸತ್ತವರನ್ನು ಮಣ್ಣು ಮಾಡುವಂತೆಯೂ ಇಲ್ಲ. ಏಕೆಂದರೆ ಇಲ್ಲಿ ಮಣ್ಣೇ ಇಲ್ಲ. ಪೂರ್ತಿ ಹಿಮದ ಗಡ್ಡೆಯೇ ಆವರಿಸಿರುತ್ತದೆ. ಇಲ್ಲಿ ಹೆಣ ಸುಡುವುದೆಂದರೆ ಹೆಣಗಾಟವೇ ಸರಿ. ಏಕೆಂದರೆ, ಒಂದು ಹೆಣ ಸುಡಬೇಕೆಂದರೆ ಹಲವು ದಿನ ಬೆಂಕಿ ಉರಿಸಬೇಕು. ಈ ಹೆಣಗಾಟದ ನಡುವೆ ಇಲ್ಲಿನವರ ಬದುಕು ನಿರಂತರ ಸಾಗಿದೆ. ಉತ್ತರ ದಕ್ಷಿಣ ದೃವಗಳ ನಂತರ ವಿಶ್ವದ ಅತಿ ತಣ್ಣಗಿನ ಹಳ್ಳಿ ಖ್ಯಾತಿಯ ಒಯ್ಮಕೊನ್ ರಷ್ಯಾ ದೇಶದಲ್ಲಿದೆ.
ಮೆತ್ತಿಕೊಂಡಿತಲ್ಲಾ…
ಈತ ಚರಾಚರಾವಸ್ತುಗಳನ್ನು ಆಕರ್ಷಿಸಬಲ್ಲ. ಲೋಹದ ಪಾತ್ರೆಗಳು, ಕೊಲಾಕ್ಯಾನ್ಗಳು ಇವನ ಸೆಳೆತಕ್ಕೆ ಒಳಗಾಗುತ್ತದೆ. ಹಣೆ, ಕೈಗಳಿಗೆಲ್ಲಾ ಪಾತ್ರೆಗಳು ಮೆತ್ತಿಕೊಳ್ಳುತ್ತವೆ. ಟಾಲ್ಕಂಪೌಡರ್ ಲೇಪಿಸಿ, ದೂರ ಇರಿಸಿಟ್ಟರೂ ಇವನ ಮೋಡಿಗೆ ಒಳಗಾಗಾಗಿ ಅಪ್ಪುತ್ತದೆ. ಬಿಡಿಸುವುದು ಹೇಗೆ? ಈತನೇ ಅವುಗಳನ್ನು ಕೊಡವಿ ಕೆಳಗಿಳಿಸಬೇಕು. ಇಲ್ಲ ಬಲವಂತವಾಗಿ ಯಾರಾದರೂ ಕೀಳಬೇಕು. ಮ್ಯಾಗ್ನೆಟಿಕ್ ಮ್ಯಾನ್ ಎಂದೇ ಇವನು ಪ್ರಸಿದ್ಧಿ ಪಡೆದಿದ್ದಾನೆ. ಹಾಗೆಂದು ಕೇವಲ ಸ್ಟೀಲ್/ಕಬ್ಬಿಣದ ಪಾತ್ರೆಗಳು ಮಾತ್ರವೇ ಇವನಿಗೆ ಮೆತ್ತಿಕೊಳ್ಳುವುದಿಲ್ಲ. ಬದಲಿಗೆ ಪ್ಲಾಸ್ಟಿಕ್ ಕೂಡ ಮೆತ್ತಿಕೊಳ್ಳುವತ್ತವೆ.
ಇವನಿಗೆ ಈ ವರ ಸಿದ್ದಿಸಿದ್ದು ಹೇಗೆ? ಟೆಲಿಪಥಿ ವಿದ್ಯೆ ಸಿದ್ಧಿಸಿದ್ದು- ಈ ಕಿತಾಪತಿ ಮಾಡುತ್ತಾನೆಂದು ಹೇಳುತ್ತಾರೆ. ಇದೇನು ಹಾರ್ಮೋನ್ಗಳ ವೈಪರೀತ್ಯವೋ ಅಥವಾ ಪವಾಡವೋ ಎಂಬುದೇ ಈವರೆವಿಗಿನ ವಿಸ್ಮಯ.
ಕಳೆದ ೩೦ ವರ್ಷಗಳಿಂದಲೂ ಇವನಿಗೆ ಹೀಗೆ ‘ಮೆತ್ತಿಕೊಳ್ಳುವ ಗುಣ’ ಮೆತ್ತಿಕೊಂಡಿದೆ! ೧೯೮೮ರಲ್ಲಿ ತಾನು ತನ್ನ ಮೆದುಳಿನ ಎಲ್ಲಾ ಅಂಶಗಳನ್ನು ಬಳಸುತ್ತಿಲ್ಲ ಎಂದು ಜ್ಞಾನೋದಯವಾಯಿತಂತೆ ಆನಂತರ ಯೋಗ, ಧ್ಯಾನ, ಮತ್ತಿತರ ಮನೋ ಶಾರೀರಿಕ ಕಸರತ್ತಿನ ಮೂಲಕ ಈ ‘ಮೆತ್ತಿ’ಕೊಳ್ಳುವ ಮೆತ್ತಿಸಿಕೊಂಡನಂತೆ! ಇವನ ಕ್ಯಪ್ಯಾಸಿಟಿ ಇಷ್ಟೇನಾ? ಮನೋಚಲನಾ ಶಕ್ತಿಯಿಂದಾಗಿ ಅನೇಕ ಕಾಯಿಲೆಗಳನ್ನು ಈತ ಸ್ಪರ್ಶ ಮಾತ್ರದಿಂದಲೇ ಗುಣಪಡಿಸುತ್ತಾನಂತೆ. ಇದೆಲ್ಲಾ ನಿಜವಾ? ಪವಾಡ ಬಯಲು ತಜ್ಞರು ಏನನ್ನುತ್ತಾರೆ? ವಿಶ್ವದ ಅಗ್ರಮಾನ್ಯ ಪವಾಡಬಯಲು ತಜ್ಞ ಡಾ. ಜೇಮ್ಸ್ ರ್ಯಾಂಡಿಯೊಂದಿಗೇ ಇವನು ಕೆಲಸ ಮಾಡಿದ್ದ. ಆದರೆ ಆತ ಇವನ ಮೆತ್ತಿಕೊಳ್ಳುವ ಗುಣದ ಬಗೆಗೆ ವಿಶೇಷ ಎಂದಷ್ಟೇ ಹೇಳಿದ್ದಾನೆ. ಪವಾಡ ಎಂದಿಲ್ಲ. ಮಾಗೊಲ ಹೆಸರಿನ ಇವನ ದರ್ಶನ, ಪ್ರದರ್ಶನ ಕಾಣಬಯಸುವವರು ಜರ್ಮನಿಗೆ ತೆರಳಬೇಕು.
ತಲೆಬಾಗುವ ಗಜಪಡೆ

‘ಆನೆ ನಡೆದಿದ್ದೇ ಹಾದಿ…’ ಎಂಬುದು ಗಾದೆ ಮಾತು. ಹಾಗಂತ ಬೇಕಾಬಿಟ್ಟಿ ಬಿಡಕ್ಕಾಗುತ್ತಾ? ಇಲ್ಲ.. ನಿರ್ಮಲಾ ಟೊಪ್ಪೊಳನ್ನು ಕರೆಸಿ ಸರಿದಾರಿಗೆ ತರಬಹುದು. ರೊಚ್ಚಿಗೆದ್ದ ಆನೆಗಳಿಗೆ ಅರಿವಳಿಕೆ ಕೊಡುವುದಿಲ್ಲ. ಶೂಟ್ ಮಾಡಿ ಕೆಡವುದಿಲ್ಲ. ಪಟಾಕಿ ಸಿಡಿಸಿ ಹೆದರಿಸುವುದಿಲ್ಲ. ತನ್ನ ಮಾತಿನಿಂದಲೇ ಅವುಗಳನ್ನು ಸರಿದಾರಿಗೆ ತರುತ್ತಾಳೆ. ಇವಳೇ ಆನೆಗಳ ಸೈಕಾಲಜಿ ಬಲ್ಲವಳೇ. ನೊ ನೊ… ಆದರೆ, ಆನೆಗಳನ್ನು ತನ್ನ ಸನ್ನೆ, ಮಾತುಗಳಿಂದಲೇ ಮೋಡಿ ಮಾಡಬಲ್ಲಳು. ಟೊಪ್ಪೊ ಒರಿಸ್ಸಾದ ರೂರ್ಕೆಲದ ನಾಯಕಿಯಾಗಿದ್ದಾಳೆ. ಆನೆದಾಳಿಯಿಂದ ಹಲವು ಕುಟುಂಬಗಳನ್ನು ಕಾಪಾಡಿದ್ದಾಳೆ. ಗಜಪಡೆಯನ್ನು ನಿಗ್ರಹಿಸಿ ಬೇಷ್ ಎನಿಸಿಕೊಂಡಿದ್ದಾಳೆ…ರೊಚ್ಚಿಗೆದ್ದ ಆನೆಗಳನ್ನು ನಿಯಂತ್ರಿಸಲು ಅರಣ್ಯ ಸಿಬ್ಬಂದಿ ಹರಸಾಹಸ ಮಾಡುತ್ತಾರೆ. ಆದರೆ ಟೊಪ್ಪೊ ಇದ್ದಲ್ಲಿ ಎಲ್ಲವೂ ಸಲೀಸು. ೫-೬ ಜನ ಮಾಡುವ ಕಾರ್ಯವನ್ನು ಇವಳೊಬ್ಬಳೆ ಮಾಡುತ್ತಾಳೆ.
ಅಯ್ಯೋ ಅಪಾಯ ಅಲ್ವಾ? ಹೌದು. ಆನೆ ದಾಳಿಗೆ ತನ್ನ ಅಮ್ಮನನ್ನೇ ಕಳೆದುಕೊಂಡಳು. ಹಲವು ಕಿಲೋಮೀಟರ್ಗಳಷ್ಟು ದೂರ ಕಾಡಿನಲ್ಲಿಯೇ ತೆರಳಬೇಕು. ವಿಷ ಜಂತುಗಳು- ಉಗ್ರ ಮೃಗಗಳಿಗೆ ಇವಳು ತುತ್ತಾಗುವ ಎಲ್ಲಾ ಅವಕಾಶಗಳಿವೆ. ಎದ್ದು ಬಿದ್ದು ಸಾಗಿ ಆನೆ ಪಳಗಿಸಬೇಕು. ಸೂಕ್ತ ರಕ್ಷಣೆ ಇವಳಿಗಿಲ್ಲ. ೨-೩ ಬಾರಿ ಆಸ್ಪತ್ರೆಗೂ ದಾಖಲಾಗಿ ಚಿಕಿತ್ಸೆ ಪಡೆದಿದ್ದಾಳೆ. ಮನೆಯಲ್ಲಿ ಬಡತನದ ಹೊರತಾಗಿ ಇನ್ನಾವುದೇ ಶ್ರೀಮಂತಿಕೆ ಇಲ್ಲ!
ಒರಿಸ್ಸಾದ ರೂರ್ಕಿ ಮಾತ್ರವಲ್ಲದೆ ಜಾರ್ಖಂಡ್, ಛತ್ತೀಸ್ ಘರ್, ಗಳಾದ್ಯಂತ ಸುಮಾರು ೩,೦೦೦ ಆನೆಗಳ ಹಿಂಡಿದ್ದು ಮಾನವ-ಪ್ರಾಣಿ ಸಂಘರ್ಷ ನಿರಂತರವಾಗಿದೆ. ೨೦೦ಕ್ಕೂ ಹೆಚ್ಚು ಜನ ಆನೆ ತುಳಿತಕ್ಕೆ ಆಹುತಿಯಾಗಿದ್ದಾರೆ. ಆದರೆ ನಿರ್ಮಲ ಆನೆಗಳ ವಿರುದ್ಧ ಸಿಡಿದು ನಿಲ್ಲಲಿಲ್ಲ. ಬದಲಿಗೆ ಪ್ರೀತಿಸಿ ಅವುಗಳಿಗೆ ತಕ್ಕ ‘ಭಾಷೆ’ ಹೇಳಿ ಸಮಾಧಾನ ಮಾಡಿಸಿದ್ದಾಳೆ. ಬಿಬಿಸಿ ಸಂಸ್ಥೆ ಇವಳನ್ನು ಭಾರತದ ಲೇಡಿ ಟಾರ್ಜಾನ್ ಎಂದು ಪ್ರಶಂಶಿಸಿದೆ. ಸ್ಥಳೀಯ ಸಂಸ್ಥೆಗಳು ಇವಳ ಸೇವೆಯನ್ನು ಶ್ಲಾಘಿಸಿವೆ. ಈ ೧೭ರ ಬಾಲೆಗೆ ‘ಹ್ಯಾಟ್ಸಾಫ್’ ಹೇಳೋಣ.
‘ಕಣ್ಣಾ’ವಿದ.
‘ಕಣ್ಣಲ್ಲೇ ನನ್ನ ಚಿತ್ರ ಬರೇದನೋ…’ಎಂದು ನಟಿ ನೀತು ಹಾಡಿ ದಶಕವಾಗಿದೆ. ಆ ಗಾಯನಕ್ಕೆ ಈ ‘ನಯನ’ ಸಾಕ್ಷಿಯಾಗಿದೆ. ಇವಳ್ಯಾರು ಹೊಸ ಕಲಾವಿದೆ ನಯನ? ಕಣ್ಣು ರೀ…ಅರ್ಜೆಂಟೈನಾದ ಲಿಯನಾರ್ಡೋ ಗ್ರಾಂಟೋ ಕಣ್ಣಲ್ಲೇ ಚಿತ್ರ ಬಿಡಿಸುತ್ತಾನೆ. ಬಣ್ಣಗಳ ದ್ರಾವಣವನ್ನು ನಾಸಿಕಕ್ಕೆ ಇಳಿಸುತ್ತಾನೆ. ಮೂಗು ಮುಚ್ಚಿಕೊಂಡು ಒತ್ತಡ ಹೇರಿ, ನಂತರ ಅಕ್ಷಿಗೆ ತರಿಸಿಕೊಂಡು ಚಿಮ್ಮಿಸಿ ಚಿತ್ರಿಸುತ್ತಾನೆ. ಒಂದು ಚಿತ್ರ ರಚನೆಗೆ ಸುಮಾರು ೮೦೦ ಮಿ.ಲೀ. ಲೀಟರ್ ಬಣ್ಣ ಬಳಕೆಯಾಗುತ್ತದಂತೆ. ಹಲವು ಗಂಟೆಗಳ ಏಕಾಗ್ರತೆ ಬೇಕೆನ್ನುತ್ತಾರೆ.
ಅಪಾಯ ಅಲ್ವಾ? ಹೌದು. ಅಪಾಯವನ್ನು ‘ಕಣ್ಣಿ’ಗೆ ಗಂಟು ಹಾಕಿಕೊಂಡೇ ಈತ ಚಿತ್ತಾರ ಬಿಡಿಸುತ್ತಾನೆ. ಆಗ ಇವನ ವೈತಾರ ನೋಡುವುದೇ ಒಂದು (ವಿ)ಚಿತ್ರಾನಂದ! ಅದ್ಯಾಕೆ ಕಣ್ಣುರಿಗಾ?ಒಂದು ರೀತಿಯಲ್ಲಿ ಹೌದು. ಮತ್ತೊಂದು ರೀತಿಯಲ್ಲಿ ಕಣ್ಣುಗಳನ್ನು ಬ್ಯಾಲೆನ್ಸ್ ಮಾಡಿ ಪೇಂಟಿಂಗ್ ಮೇಲೆ ನಿಗಾ ಇರಿಸಿ ಮಾಡುವುದು ಸುಲಭವಲ್ಲ. ಅಕ್ಷಿಗಳಲ್ಲೇ ಅಪಾಯವಿದ್ದರೂ ಉಪಾಯವಾಗಿ ಕಲೆ ಅರಳಿಸುತ್ತಾನೆ. ಕಣ್ಣಲ್ಲಿ ಮೂಗಲ್ಲಿ ಹಾಕಿಕೊಂಡು ದುಡಿಯೋದು ಅಂದ್ರೇ ಇದೇ ಇರಬೇಕು. ಅದೆಲ್ಲಾ ಬಿಡ್ರೀ…ಇವನ ಪೈಂಟಿಂಗ್ಗಳ ಧಾರಣೆ ಎಷ್ಟೋ? ಒಂದರಿಂದ ಒಂದೂವರೆ ಲಕ್ಷ ರೂಪಾಯಿಗಳು… ಗ್ರಾಂಟೋ ಕಣ್ಣಲ್ಲಿ ಮಾತ್ರವಲ್ಲದೆ ಆತನ ಚಿತ್ರಗಳನ್ನು ಕೊಳ್ಳುಗರ ಕಣ್ಣುಗಳಲ್ಲೂ ನೀರಿಳಿಸುತ್ತಾನೆ. ಕಣ್ಣುಗಳೇ ಕಮಲಗಳೂ… ಎಂಬ ಡಾ||ರಾಜ್ ಹಾಡನ್ನು ‘ಕಣ್ಣುಗಳೇ ಕುಂಚಗಳೂ’ ಎಂದು ಬದಲಿಸಿ ಹಾಡಬೇಕಾಗುತ್ತದೆ.
ಕೊಲಾವಿದ
ರುಂಡ, ಮುಂಡಾ, ಕೈ ಕಾಲುಗಳು, ತುಂಡು ಬೆರಳುಗಳು, ಹೃದಯ ವಿದ್ರಾವಕ ದೃಶ್ಯಗಳು. ಅಬ್ಬಾ! ಇದ್ಯಾಕ್ರೀ ಇಲ್ಲಿ ಕ್ರೈಂ ಸ್ಟೋರಿ…? ಕ್ರೈಂ ಅಲ್ಲಾ ರೀ… ಕ್ರೀಮು! ಬೇಕೆನಿಸಿದರೆ ಕೊಂಡು ತಿನ್ನಬಹುದು. ಥೈಲ್ಯಾಂಡ್ನಲ್ಲಿ ಲಭ್ಯ. ಛೀ… ಥೂ.. ಎನ್ನದೆ ಮುಂದೆ ಓದಿರಿ… ಕಿಟ್ಟಿವಾಟ್ – ಅನರೋರಮ್ ಎಂಬ ಥೈಲ್ಯಾಂಡ್ನ ಕಲಾಕಾರನ ಕಲ್ಪನೆಯಲ್ಲಿ ಅರಳಿದ ಕಲಾಕೃತಿಯಿದು. ಬ್ರೆಡ್ನಲ್ಲಿ ಬಾಡಿ ಮಾಡಿ, ಜಾಮನ್ನು ರಕ್ತದಂತೆ ಸುರಿದಿದ್ದಾನೆ. ಹೃದಯ, ಮೆದುಳಿನ ಶಿಲ್ಪಕ್ಕಾಗಿ ಕ್ರೀಂ ಬಳಸಿದ್ದಾನೆ. ಕಲೆಯನ್ನು ಕೊಲೆ ಮಾಡಿ… ಕ್ಷಮಿಸಿ… ಕೊಲೆಯನ್ನು ಕಲೆ ಮಾಡಿದ ಕಲಾವಿದನನ್ನು ‘ಕೊಲಾವಿದ’ ಎನ್ನುವುದೇ ವಾಸಿ.
ಅದೆಲ್ಲಾ ಬಿಡ್ರಿ ಇವನ್ಯಾಕೆ ಹಿಂಗೆ ವಿಕ್ಷಿಪ್ತನಾ ಅಥವಾ ಉಮೇಶ್ ರೆಡ್ಡಿ ಬಳಗದವನಾ? ಅದ್ಯಾವುದೂ ಅಲ್ಲ… ಈತ ಕಲಾವಿದ. ಕಲೆ ಅರಳಿಸುವ ಕಲಾವಿದರು ಕ್ಯಾನ್ವಾಸೇ ಬೇಕೆಂದು ಹಠ ಹಿಡಿಯುವುದಿಲ್ಲ. ಸಿಕ್ಕಲ್ಲೇ ಚಿತ್ರ ಬಿಡಿಸುತ್ತಾನೆ. ಈತನ ತಂದೆ ಉನರೊರಮ್ ಬೇಕರಿ ಮಾಲೀಕ. ಅಪ್ಪನ ದುಡಿಮೆಗೆ ಸಹಾಯ ಮಾಡುತ್ತಾ…ಚುಲಾಲಾಂಗ್ಕೋರಂ ವಿಶ್ವವಿದ್ಯಾಲಯದಲ್ಲಿ ಲಲಿತ ಕಲೆಗಳನ್ನು ಅರಳಿಸುವುದು ಅರಿತ. ತನ್ನ ಬೇಕರಿಯ ಪಾಕಶಾಲೆಯಲ್ಲಿಯೇ ಮೈ ಬಣ್ಣಕ್ಕೆ ಸರಿ ಹೊಂದುವ ಬ್ರೆಡ್ಗಳನ್ನು ಕಂಡು ಈಗ ಬಾಡಿಗಳನ್ನೇ ಬ್ರೆಡ್ಗಳನ್ನಾಗಿ ಮಾಡಿ ಬಿಕರಿಗಿಟ್ಟಿದ್ದಾನೆ. ಯಾವ ಬಿಕಾರಿ ತಿಂದಾನು? ಹಾಗೆಲ್ಲಾ ಏನೂ ಇಲ್ಲಾ ರೀ… ಕೊಂಡು ತಿನ್ನುವ ಜನಕ್ಕೆ ಹಾಂಕಾಂಗ್ನಲ್ಲಿ ಕೊರತೆಯಿಲ್ಲ.