ದೊಡ್ಮನೆಯ ರಾಜಕುಮಾರ, ಕರುನಾಡ ರಾಜರತ್ನ, ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಮಾಡಬೇಕಿದ್ದ ಅದೆಷ್ಟೋ ಪಾತ್ರಗಳು ಈಗ ಬೇರೆ ಕಲಾವಿದರ ಪಾಲಾಗಿವೆ. ವಿಧಿಯ ಆಟಕ್ಕೆ ಅಪ್ಪು ಆಟ ಮುಗಿಸಿದ್ದರಿಂದ, ಅಪ್ಪು ಮಾಡ್ಬೇಕಿದ್ದ ಸಿನಿಮಾಗಳಲ್ಲಿ ಬೇರೆ ತಾರೆಯರು ಮಿಂಚುತ್ತಿದ್ದಾರೆ. ಅಚ್ಚರಿ ಅಂದರೆ `ಟೋಬಿ’ ಸಿನಿಮಾದ ಕಥೆಯನ್ನ ಕೇಳಿ ಪುನೀತ್ ಸರ್ ಬಹುವಾಗಿ ಮೆಚ್ಚಿಕೊಂಡಿದ್ದರಂತೆ. ಬಟ್, ಈ ಸಿನಿಮಾನ ನಾನು ಮಾಡೋದಕ್ಕೆ ಆಗಲ್ಲ ಎಂತಲೂ ಹೇಳಿಕೊಂಡಿದ್ರಂತೆ. ಅಷ್ಟಕ್ಕೂ, ಪರಮಾತ್ಮ `ಟೋಬಿ’ ಸಿನಿಮಾನ ಯಾಕ್ ಮಾಡಲ್ಲ ಎಂದಿದ್ದರು? ಈ ಬಗ್ಗೆ ಟೋಬಿ ಕಥೆಗಾರ ಟಿ.ಕೆ ದಯಾನಂದ್ ಏನಂದ್ರು ಹೇಳ್ತೀವಿ ಕೇಳಿ
`ಟೋಬಿ’ ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಸಿನಿಮಾ. ಟೈಟಲ್‍ನಿಂದಲೇ ಸಿನಿದುನಿಯಾದಲ್ಲಿ ಸಖತ್ ಸೌಂಡ್ ಮಾಡಿದ್ದ ಈ ಚಿತ್ರ ಈಗ ಟ್ರೇಲರ್ ನಿಂದ ಗಂಧದಗುಡಿಯಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಟೋಬಿಯಾಗಿ ರಾಜ್ ಬಿ ಶೆಟ್ಟಿ ಅಬ್ಬರಿಸಿ ಬೊಬ್ಬಿರಿದಿದ್ದು ಸಿನಿಮಾ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಶೆಟ್ರ ಲುಕ್ಕು-ಗೆಟಪ್ ಪ್ರೇಕ್ಷಕರನ್ನ ಒಂಟಿಕಾಲಿನಲ್ಲಿ ನಿಲ್ಲಿಸಿದೆ. ಹರಕೆಯ ಕುರಿ ಮಾರಿಯಾಗಿ ಹೇಗೆ ಬದಲಾಗುತ್ತೆ ಅನ್ನೋದನ್ನ ನೋಡೋದಕ್ಕೆ ಕುತೂಹಲದಿಂದ ಕಾಯುವಂತಾಗಿದೆ. ಟಿಕೆ ದಯಾನಂದ್ ಅವರ ಕಥೆಗೆ ರಾಜ್ ಬಿ ಶೆಟ್ಟಿ ಸ್ಕ್ರೀನ್ ಪ್ಲೇ ರಚಿಸಿದ್ದು, ಯುವನಿರ್ದೇಶಕ ಬಸಿಲ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚೆಗೆ ನಡೆದ ಟ್ರೈಲರ್ ಲಾಂಚ್‍ನಲ್ಲಿ ಟೋಬಿ ಕಥೆನಾ ಮೊದಲು ಅಪ್ಪುಗೆ ಹೇಳಿದ್ದಾಗಿ ಕಥೆಗಾರ ಟಿ.ಕೆ. ದಯಾನಂದ್ ಅವರು ಹೇಳಿಕೊಂಡಿದ್ದಾರೆ
ಅಪ್ಪು ಮೆಚ್ಚಿಕೊಂಡಿದ್ದ ಟೋಬಿಗೆ ಜೀವ ತುಂಬಿದ ರಾಜ್ ಬಿ ಶೆಟ್ಟಿ
ಟೋಬಿ ಕಥೆನಾ ಸಿನಿಮಾ ಮಾಡ್ಬೇಕು ಎಂದುಕೊಂಡ ನಾನು ಮೊದಲು ಅಪ್ಪು ಅವರನ್ನ ಸಂಪರ್ಕ ಮಾಡಿದೆ.’ಒಂದು ಸಲ ಆಫೀಸ್‌ಗೆ ಬನ್ನಿ ಮಾತನಾಡೋಣ ಎಂದಿದ್ದರಂತೆ. ‘ಗ್ರಾಮಾಯಣ’ ಸಿನಿಮಾ ನಿರ್ದೇಶಕ ದೇವನೂರು ಚಂದ್ರು ಮತ್ತು ನಾನು ಅವರ ಆಫಿಸ್‌ಗೆ ಹೋಗಿದ್ದೆವು. ನಾನು ಟೋಬಿ ಕಥೆಯನ್ನು ಅಪ್ಪು ಸರ್‌ಗೆ ಹೇಳಿದೆ.. ಆಗ ಅಲ್ಲಿ ಅಶ್ವಿನಿ ಮೇಡಂ ಕೂಡ ಇದ್ರು, ‘ನಾನು ಸುಮಾರು ಎರಡೂವರೆ ಗಂಟೆ ಅಪ್ಪು ಸರ್‌ಗೆ ಕಥೆ ಹೇಳಿದ್ದೆ. ಆಗ ಅವರು ಒಂದು ಮಾತು ಹೇಳಿದ್ದರು. ಇದು ಎಮೋಷನಲಿ ತುಂಬ ಕಿತ್ತು ತಿನ್ನುವ ಕಥೆ ಇದು. ಮಲಯಾಳಂಗೆ ಸರಿಯಾಗಿ ಕೂರುತ್ತದೆ. ನಾನೀಗ ಫ್ಯಾಮಿಲಿ & ಯೂತ್‌ಗೆ ಹೆಚ್ಚು ಕನೆಕ್ಟ್ ಆಗಿರುವಂತಹ ನಟ. ನನ್ನ ವೃತ್ತಿ ಬದುಕಿನ ಈ ಘಟ್ಟದಲ್ಲಿ ಇಂಥದ್ದೊಂದು ಪಾತ್ರ ಮಾಡಿದರೆ, ಪ್ರೇಕ್ಷಕರು ರಿಸೀವ್ ಮಾಡ್ತಾರಾ ಅನ್ನೋ ಡೌಟು ಇದೆ ನಂಗೆ. ಸದ್ಯಕ್ಕೆ ಇಂತಹ ಪ್ರಯೋಗ ಮಾಡೋದಕ್ಕೆ ಆಗಲ್ಲ ಅಂತ ಅಪ್ಪು ಸರ್ ಹೇಳಿದ್ದರು’. ಆನಂತರ ರಿಷಬ್ ಶೆಟ್ಟಿಗೆ ಈ ಕಥೆ ಹೇಳಲಾಗಿತ್ತಾದ್ರೂ, ಅವರು ಬೇರೆ ಬೇರೆ ಪ್ರಾಜೆಕ್ಟ್ ನಲ್ಲಿ ಬ್ಯುಸಿ ಇದ್ದ ಕಾರಣ ಟೋಬಿ ರಾಜ್ ಬಿ ಶೆಟ್ಟಿ ಕೈ ಸೇರಿತು ಎನ್ನುತ್ತಾರೆ ಟೋಬಿ ಕಥೆಗಾರ ಟಿ.ಕೆ ದಯಾನಂದ್
ಟೋಬಿ ಕಥೆ ಕೇಳಿ ಮನಸೋತಿದ್ದ ಮಿಲ್ಕಿಬ್ಯೂಟಿ
‘ಸಿಗ್ನೇಚರ್ ಮಾಸ್ಟರ್ ಕ್ಲಾಸ್ ಸಂಸ್ಥೆ ನಡೆಸುವ ಕಥಾ ಸ್ಪರ್ಧೆಯಲ್ಲಿ ನಾನು ಬರೆದಿದ್ದ ಈ ‘ಟೋಬಿ’ ಕಥೆಯನ್ನೂ ಕಳಿಸಿದ್ದೆ. ಅಲ್ಲಿ 3.73 ಲಕ್ಷಕ್ಕೂ ಅಧಿಕ ಕಥೆಗಳು ಬಂದಿದ್ದವು. ಆಯುಷ್ಮಾನ್ ಖುರಾನಾ, ಕುಬ್ರಾ ಸೇಠ್, ರಾಜ್‌ಕುಮಾರ್ ರಾವ್ ಮತ್ತು ತಮನ್ನಾ ಭಾಟಿಯಾ ಈ ಕಥಾ ಸ್ಪರ್ಧೆಯ ಜಡ್ಜ್ ಆಗಿದ್ದರು. ನನಗೆ ಅವಾರ್ಡ್ ಬರಲ್ಲ ಎಂದುಕೊಂಡೇ ನಾನು ಅಂದಕೊಂಡಿದ್ದೆ. ಲಕ್ಷಾಂತರ ಕಥೆಗಳ ಮಧ್ಯೆ ‘ಟೋಬಿ’ ಕಥೆ ಆಯ್ಕೆಯಾಗಿ, ಅದಕ್ಕೆ ಪ್ರಶಸ್ತಿ ಬಂತು. ಆಗ ತಮನ್ನಾ ಅವರು, ‘ನೀನು ಈ ಕಥೆಯನ್ನು ಯಾಕೆ ಬರೆದೆಯೋ, ಏನಕ್ಕೆ ಬರೆದೆಯೋ ನನಗೆ ಗೊತ್ತಿಲ್ಲ. ಆದರೆ ಇದು ನನ್ನನ್ನು ತುಂಬ ಡಿಸ್ಟರ್ಬ್ ಮಾಡ್ತು’ ಎಂದಿದ್ದರು. ಆ ಟೋಬಿ ಎಲ್ಲರಿಗೂ ಡಿಸ್ಟರ್ಬ್ ಮಾಡ್ತಾನೆ’ ಅಂತಲೂ ಹೇಳಿಕೊಂಡಿದ್ದರು ಎಂದು ಜೈಲರ್ ಚೆಲುವೆನಾ ನೆನಸಿಕೊಳ್ತಾರೆ ಕಥೆಗಾರ ದಯಾನಂದ್
‘ಒಂದು ಮೊಟ್ಟೆಯ ಕಥೆ’, `ಗರುಡ ಗಮನ ವೃಷಭ ವಾಹನ’,ಮುಂತಾದ ಚಿತ್ರಗಳ ಮೂಲಕ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿರೋದು ನಟ/ ನಿರ್ದೇಶಕ ರಾಜ್ ಬಿ ಶೆಟ್ಟಿ. ಸಧ್ಯ ತಮ್ಮ ನಟನೆಯ ‘ಟೋಬಿ’ ಚಿತ್ರದ ಮೂಲಕ ಮತ್ತೆ ಬಣ್ಣದ ಲೋಕದಲ್ಲಿ ಸಂಚಲನ ಹುಟ್ಟುಹಾಕಲು ಸಜ್ಜಾಗಿದ್ದಾರೆ. ರಾಜ್ ಬಿ ಶೆಟ್ಟಿ ಜೊತೆಗೆ ಗೋಪಾಲ ಕೃಷ್ಣ ದೇಶಪಾಂಡೆ, ಚೈತ್ರಾ ಆಚಾರ್, ಸಂಯುಕ್ತಾ ಹೊರನಾಡು, ರಾಜ್ ದೀಪಕ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ. ಮಿಥುನ್ ಮುಕುಂದನ್ ಸಂಗೀತ ಸಂಯೋಜಿಸಿದ್ದಾರೆ. ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ ಮಾಡಿದ್ದು, ನಿತಿನ್ ಶೆಟ್ಟಿ ಸಂಕಲನ ಮಾಡಿದ್ದಾರೆ. ಲೈಟರ್ ಬುದ್ಧ ಫಿಲ್ಮ್ಸ್, ಆಗಸ್ತ್ರ್ಯ ಫಿಲ್ಮ್ಸ್, ಕಾಫಿ ಗ್ಯಾಂಗ್ ಸ್ಟುಡಿಯೋ, ಸ್ಮೂತ್ ಸೈಲರ್ಸ್ ಜಂಟಿಯಾಗಿ ‘ಟೋಬಿ’ ಸಿನಿಮಾವನ್ನು ಜಂಟಿಯಾಗಿ ನಿರ್ಮಾಣ ಮಾಡಿವೆ. ಕೆವಿಎನ್‌ಪ್ರೊಡಕ್ಷನ್ಸ್ ಈ ಸಿನಿಮಾವನ್ನು ವಿತರಣೆ ಮಾಡುತ್ತಿದೆ.ಇದೇ ೨೫ ರಿಂದ ಥಿಯೇಟರ್ ನಲ್ಲಿ ಟೋಬಿ ಯ ಹವಾ ಶುರುವಾಗಲಿದೆ.