ಯಾವ ದಿನಕ್ಕಾಗಿ, ಯಾವ ಕ್ಷಣಕ್ಕಾಗಿ ದೊಡ್ಮನೆ ಭಕ್ತಗಣ ಕಣ್ಣರಳಿಸಿ ಕಾದಿತ್ತೋ, ಆ ದಿನ ಮತ್ತು ಆ ಕ್ಷಣ ಸಮೀಪಿಸಿದೆ. ಇನ್ನೇನು ಕೆಲವೇ ಕೆಲವು ಗಂಟೆಗಳಲ್ಲಿ ದೊಡ್ಮನೆ ಭಕ್ತಬಳಗ ಕುಣಿದು ಕುಪ್ಪಳಿಸಲಿದೆ. ಸರಪಟಾಕಿ ಹಚ್ಚಿ ಕೇಕೆ ಹೊಡೆಯಲಿದೆ. ಯಸ್, ದೊಡ್ಮನೆಯ ದೊಡ್ಡ ಭರವಸೆ, ಅಪ್ಪು ಉತ್ತರಾಧಿಕಾರಿ ಯುವರಾಜ್‌ಕುಮಾರ್ ನಟನೆಯ ʻಯುವʼ ಚಿತ್ರದ ಮೊದಲ ಹಾಡು ಅನಾವರಣಗೊಳ್ಳಲಿದೆ. ಚಾಮರಾಜನಗರದಲ್ಲಿ ಅದ್ದೂರಿ ಆಡಿಯೋ ಲಾಂಚ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್ ಸ್ಪೆಷಲ್ ಗೆಸ್ಟ್ ಆಗಿ ಎಂಟ್ರಿಕೊಡ್ತಿದ್ದಾರೆ.
ಯಸ್, ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್ ಯುವರಾಜ್‌ಕುಮಾರ್‌ಗೆ ಸಾಥ್ ನೀಡಲು ಸಿಲಿಕಾನ್ ಸಿಟಿಗೆ ಬಂದಿಳಿದಿದ್ದಾರೆ. ಈಗಾಗಲೇ ನಿರ್ದೇಶಕ ಪ್ರಶಾಂತ್ ನೀಲ್ ಮನೆಗೆ ಭೇಟಿಕೊಟ್ಟಿದ್ದು ಅಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರ್, ನಟ ಕಂ ನಿರ್ದೇಶಕ ರಿಷಬ್ ಶೆಟ್ಟಿಯವರನ್ನ ಭೇಟಿ ಮಾಡಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋಗಳು ವೈರಲ್ ಆಗಿವೆ.
ಕೆಜಿಎಫ್ ಕ್ಯಾಪ್ಟನ್ ಪ್ಲಸ್ ಕಾಂತಾರ ಕ್ಯಾಪ್ಟನ್ ನಡುವೆ ಕೊಮರಮ್ ಭೀಮ್ ಕಾಣಿಸಿಕೊಂಡಿದ್ದು ಮೂವರ ಕಾಂಬಿನೇಷನ್‌ನಲ್ಲಿ ಸಿನಿಮಾ ಬಂದರೆ ಗ್ಲೋಬಲ್ ಬಾಕ್ಸ್ ಆಫೀಸ್ ಶೇಕ್ ಶೇಕ್ ಆಗೋದು ಗ್ಯಾರಂಟಿ ಅಂತ ಮೂವರ ಫ್ಯಾನ್ಸ್ ಕಮೆಂಟ್ ಮಾಡ್ತಿದ್ದಾರೆ. ಆದಷ್ಟು ಬೇಗ ದೇವರ ಮುಗಿಸಿ ನೀಲ್ ಅಖಾಡಕ್ಕೆ ಧುಮ್ಕಿ ಬಾಸ್ ಅಂತ ಯಂಗ್ ಟೈಗರ್‌ನ ರಿಕ್ವೆಸ್ಟ್ ಮಾಡಿಕೊಳ್ತಿದ್ದಾರೆ.
ನಿಮಗೆಲ್ಲ ಗೊತ್ತಿರೋ ಹಾಗೇ ಯಂಗ್ ಟೈಗರ್ ಕುಟುಂಬಕ್ಕೂ, ದೊಡ್ಮನೆಗೂ ಅವಿನಾಭಾವ ಸಂಬಂಧವಿದೆ. ಅಣ್ಣಾವ್ರು ಹಾಗೂ ಎನ್‌ಟಿಆರ್‌ರಾಮ್ ರಾವ್ ಅವರ ನಡುವೆ ಸುಮಧುರ ಬಾಂದವ್ಯವಿತ್ತು. ಅದು ಅಪ್ಪು ಹಾದಿಯಾಗಿ ಈಗ ಯುವರಾಜ್ ಕುಮಾರ್ ವರೆಗೂ ತಲುಪಿದೆ. ಅಂದು ಅಪ್ಪುಗೋಸ್ಕರ ಜೂನಿಯರ್ ಎನ್‌ಟಿಆರ್, ಚಕ್ರವ್ಯೂಹ ಸಿನಿಮಾದಲ್ಲಿ ಗೆಳೆಯಾ ಗೆಳೆಯಾ ಅಂತ ಹಾಡಿದ್ದರು. ಇವತ್ತು ಅಪ್ಪು ಉತ್ತರಾಧಿಕಾರಿ ಯುವಗೋಸ್ಕರ ಯುವ ಸಿನಿಮಾದ ಹಾಡು ರಿಲೀಸ್ ಮಾಡಿಕೊಡುವುದಕ್ಕೆ ಬಂದಿದ್ದಾರೆ.
ಇನ್ನೇನು ಕೆಲವೇ ಕೆಲವು ಗಂಟೆಗಳಲ್ಲಿ ಯುವ ಸಿನಿಮಾದ ಮೊದಲ ಹಾಡು ಲೋಕಾರ್ಪಣೆಗೊಳ್ಳಲಿದೆ. ಸಂತೋಷ್ ಆನಂದರಾಮ್ ಹೊಸೆದಿರುವ, ಅಜನೀಶ್ ಲೋಕನಾಥ್ ಸಂಗೀತ ನೀಡಿರುವ ‘ಒಬ್ಬನೇ ಶಿವ ಒಬ್ಬನೇ ಯುವ’ ಹಾಡು ಹೇಗಿರಲಿದೆ ಎನ್ನುವ ಕೂತೂಹಲಕ್ಕೆ ಬಿಗ್ ಬ್ರೇಕ್ ಬೀಳಲಿದೆ. ವಿಜಯ್ ಕಿರಗಂದೂರ್ ನಿರ್ಮಾಣದಲ್ಲಿ ಯುವ ಸಿನಿಮಾ ಅದ್ದೂರಿಯಾಗಿ ಮೂಡಿಬಂದಿದ್ದು, ಇದೇ ಮಾರ್ಚ್ 29ರಂದು ಬೆಳ್ಳಿತೆರೆಗೆ ಲಗ್ಗೆ ಇಡಲಿದೆ.