YuvaRajkumar:ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವ ರಾಜ್ ಕುಮಾರ್(Yuva Rajkumar) ನಾಯಕ ನಟನಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ. ʻಯುವʼ (Yuva) ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮಾರ್ಚ್ ೨೯ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಸಮಯದಲ್ಲಿ ಯುವ ರಾಜ್ ಕುಮಾರ್ ತಮ್ಮ ಮನದಾಳದ ಹಲವು ಮಾತುಗಳನ್ನು ಹಂಚಿಕೊಂಡಿದ್ದಾರೆ.
ನಾನು ಸಿನಿಮಾಗೆ ಸಂಬಂಧಿಸಿದಂತೆ ಏನಾದ್ರು ಪ್ರಯತ್ನ ಪಟ್ಟಾಗ ಚಿಕ್ಕಪ್ಪನಿಗೆ(ಪುನೀತ್ ರಾಜ್ ಕುಮಾರ್)ತೋರಿಸುತ್ತಿದ್ದೆ. ಚೆನ್ನಾಗಿ ಮಾಡಿದ್ಯ, ಒಳ್ಳೆ ಫ್ಯೂಚರ್ ಇದೆ ಅಂತ ಅಷ್ಟೇ ಹೇಳೋರು. ಆದ್ರೆ ಅವರ ಸ್ನೇಹಿತರೊಂದಿಗೆಲ್ಲ ನನ್ನ ವೀಡಿಯೋ ತೋರಿಸಿ ಯುವ ಎಷ್ಟು ಚೆನ್ನಾಗಿ ಮಾಡಿದ್ದಾನೆ ಅಂತ ಖುಷಿ ಪಡುತ್ತಿದ್ರು. ನನ್ನ ಮೇಲೆ ಚಿಕ್ಕಪ್ಪ ತುಂಬಾ ಹೋಪ್ಸ್ ಇಟ್ಟುಕೊಂಡಿದ್ದಾರೆ ಎಂದು ಅವರ ಫ್ರೆಂಡ್ಸ್ ಮೂಲಕ ನನಗೆ ಗೊತ್ತಾಗುತ್ತಿತ್ತು. ಅಂತಹ ಒಳ್ಳೆಯ ವ್ಯಕ್ತಿತ್ವ ಅವರದ್ದು ಎಂದು ಯುವ ಚಿಕ್ಕಪ್ಪನನ್ನು ಸ್ಮರಿಸಿಕೊಂಡಿದ್ದಾರೆ.
ಒಂದು ಕುಟುಂಬವಾಗಿ ನಮ್ಮನ್ನು ಎಂತಹದ್ದೇ ಸಂದರ್ಭದಲ್ಲೂ ದೊಡ್ಡಪ್ಪ(ಶಿವಣ್ಣ), ಚಿಕ್ಕಪ್ಪ(ಪುನೀತ್ ರಾಜ್ ಕುಮಾರ್) ಬಿಟ್ಟುಕೊಟ್ಟಿಲ್ಲ. ತಂದೆಗೆ ಸ್ಟ್ರೋಕ್ ಆದಾಗ ಚಿಕಿತ್ಸೆಗೆ ಸಿಂಗಾಪುರಕ್ಕೆ ಕರೆದುಕೊಂಡು ಹೋಗಲಾಯ್ತು ಆ ಸಮಯದಲ್ಲಿ ದೊಡ್ಡಪ್ಪ, ಚಿಕ್ಕಪ್ಪ ಎಲ್ಲರೂ ಜೊತೆಗಿದ್ರು. ಅವರೇ ತಂದೆಯನ್ನು ನೋಡಿಕೊಂಡಿದ್ದು. ದೊಡ್ಡಪ್ಪ ಶೂಟಿಂಗ್ ಸಿಂಗಾಪುರಕ್ಕೆ ಶಿಫ್ಟ್ ಮಾಡಿಕೊಂಡು, ಅಲ್ಲೇ ಮನೆ ಮಾಡಿ ಜೊತೆಗೆ ಇಟ್ಟುಕೊಂಡು ನೋಡಿಕೊಂಡಿದ್ದಾರೆ. ದೊಡ್ಡಪ್ಪ ಇಲ್ಲದಾಗ ಚಿಕ್ಕಪ್ಪ ಜೊತೆಗಿರೋರು. ಇಂತಹ ಫ್ಯಾಮಿಲಿಯಲ್ಲಿ ಹುಟ್ಟಿರೋದಕ್ಕೆ ನಾನು ತುಂಬಾ ಅದೃಷ್ಟ ಮಾಡಿದ್ದೇನೆ ಎಂದಿದ್ದಾರೆ ಯುವ.