ಸಿನಿಮಾ ಕ್ಷೇತ್ರದ ಸಾಧಕರಿಗೆ ಕೊಡಮಾಡುವ ಪ್ರತಿಷ್ಟಿತ ಪ್ರಶಸ್ತಿಗಳ ಪೈಕಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕೂಡ ಒಂದು. ಕೇಂದ್ರ ಸರ್ಕಾರ ನೀಡುವ, ಖುದ್ದು ರಾಷ್ಟ್ರಪತಿಗಳೇ ಪ್ರದಾನ ಮಾಡುವ ಈ ಪ್ರಶಸ್ತಿಗೆ ಬಹುಮುಖ್ಯವಾದ ಸ್ಥಾನವಿದೆ. ಅಂದ್ಹಾಗೇ, ಕರೋನಾ ಕಾರಣದಿಂದ 2021ರಲ್ಲಿ ರಿಲೀಸ್ ಆಗಿರುವ ಚಿತ್ರಗಳಿಗೆ ಪ್ರಶಸ್ತಿ ಘೋಷಣೆ ಆಗಿರಲಿಲ್ಲ. ಇದೀಗ ಆ ವರ್ಷ ರಿಲೀಸ್ ಆಗಿರುವ ಚಿತ್ರಗಳಿಗೆ ಮಾತ್ರ ಪ್ರಶಸ್ತಿ ಘೋಷಣೆ ಮಾಡಿ ಪ್ರದಾನ ಮಾಡಲಾಗಿದೆ. ನಿನ್ನೆ ದೆಹಲಿಯ ವಿಜ್ಞಾನ ವಿಭಾಗದಲ್ಲಿ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ನೆರವೇರಿದ್ದು, ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರು ಪ್ರಶಸ್ತಿ ಪ್ರಧಾನ ಮಾಡಿದ್ದಾರೆ. ಸ್ವರ್ಣ ಕಮಲ ಪ್ರಶಸ್ತಿ ಮತ್ತು 2.50 ಲಕ್ಷ ರೂಪಾಯಿ ನಗದು ಹಣದ ಜೊತೆಗೆ ಅವಾರ್ಡ್ ನೀಡಿ ಗೌರವಿಸಿದ್ದಾರೆ.
ಅತ್ಯುತ್ತಮ ನಟ ಪ್ರಶಸ್ತಿಗೆ ಅಲ್ಲು ಅರ್ಜುನ್ , ಅತ್ಯುತ್ತಮ ನಟಿ ಪ್ರಶಸ್ತಿಗೆ ಅಲಿಯಾ ಭಟ್ ಹಾಗೂ ಕೃತಿ ಸನಾನ್ ಪಾತ್ರರಾಗಿದ್ದಾರೆ. ಪುಷ್ಪ ಚಿತ್ರದ ಅಭಿನಯಕ್ಕಾಗಿ ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್, ಗಂಗೂಬಾಯಿ ಕಾಠಿಯಾವಾಡಿ ಚಿತ್ರದ ನಟನೆಗಾಗಿ ಅಲಿಯಾ ಭಟ್ ಹಾಗೂ ಮಿಮಿ ಸಿನಿಮಾದ ಅಭಿನಯಕ್ಕಾಗಿ ನಟಿ ಕೃತಿ ಸನಾನ್ ನ್ಯಾಷನಲ್ ಅವಾರ್ಡ್ ಮುಡಿಗೇರಿಸಿಕೊಂಡಿದ್ದಾರೆ. ಇಂಟ್ರೆಸ್ಟಿಂಗ್ ಅಂದರೆ ನಟಿ ಅಲಿಯಾ ಭಟ್ ಮದುವೆ ಸೀರೆಯುಟ್ಟು ಬಂದು ರಾಷ್ಟ್ರಪ್ರಶಸ್ತಿ ಸ್ವೀಕರಿಸಿದರು. ಪತಿ ರಣಬೀರ್ ಜೊತೆಯಾಗಿ ಬಂದ ಕ್ಯೂಟಿ ಪೈ ಅಲಿಯಾ ಮದುಮಗಳಂತೆಯೇ ಕಾಣಿಸಿಕೊಂಡಿದ್ದನ್ನ ನೋಡಿ ವಾರೆವ್ಹಾ ಅಲಿಯಾ ಅಂತ ಎಲ್ಲರೂ ಹುಬ್ಬೇರಿಸಿದರು. ನಟಿ ಕೃತಿ ಕೂಡ ಭಾರತೀಯ ನಾರಿಯಂತೆ ಸೀರೆಯುಟ್ಟು ಕಂಗೊಳಿಸಿದರು
ಇನ್ನೂ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ರಾಷ್ಟ್ರಪ್ರಶಸ್ತಿ ಸ್ವೀಕರಿಸುವುದಕ್ಕೆ ಫ್ಯಾಮಿಲಿ ಜೊತೆಗೆ ದೆಹಲಿಗೆ ಬಂದಿದ್ದರು. ವೇದಿಕೆ ಏರುವ ಮುನ್ನವೇ ಮಾಧ್ಯಮಗಳ ಜೊತೆ ಮಾತನಾಡಿ ಖುಷಿ ವ್ಯಕ್ತಪಡಿಸಿದ ಸ್ಟೈಲಿಷ್ ಸ್ಟಾರ್ ಪುಷ್ಪ ಸಿನಿಮಾದ `ತಗ್ಗೆದೆಲೆ’ ಡೈಲಾಗ್ ಹೊಡೆದರು. ಬಾಲಿವುಡ್ ನಟಿ ಕೃತಿ ಜೊತೆಯಾಗಿ ತಗ್ಗೆದೆಲೆ ಪೋಸ್ ಕೂಡ ಕೊಟ್ಟರು. ಸದ್ಯ, ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ. ಕಮರ್ಷಿಯಲ್ ಸಿನಿಮಾಗೆ ನ್ಯಾಷನಲ್ ಅವಾರ್ಡ್ ಗೆದ್ದುಕೊಂಡಿರೋ ಪುಷ್ಪರಾಜ್ ಮೇಲೆ ಜವಾಬ್ದಾರಿ ಹೆಚ್ಚಿದ್ದು, ಪುಷ್ಪ-2 ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಪ್ಯಾನ್ ಇಂಡಿಯಾ ಮಾತ್ರವಲ್ಲ ಪ್ಯಾನ್ ವಲ್ರ್ಡ್ ಕೂಡ `ಪುಷ್ಪ-2′ ಗಾಗಿ ಎದುರುನೋಡ್ತಿದೆ.

ಈ ಭಾರಿ ಕನ್ನಡಕ್ಕೆ ನಾಲ್ಕು ರಾಷ್ಟ್ರೀಯ ಪ್ರಶಸ್ತಿ ಸಂದಿದೆ. ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಿಸಿದ `ಚಾರ್ಲಿ’ ಸಿನಿಮಾಗೆ ಪ್ರಾದೇಶಿಕ ವಿಭಾಗದಲ್ಲಿ ಮೀಸಲಿಟ್ಟ ಅತ್ಯುತ್ತಮ ಕನ್ನಡ ಚಿತ್ರ ಪ್ರಶಸ್ತಿ ಲಭಿಸಿದೆ. ರಕ್ಷಿತ್ ಶೆಟ್ಟಿ ಹಾಗೂ ನಿರ್ದೇಶಕ ಕಿರಣ್ ರಾಜ್ ಇಬ್ಬರು ಕೂಡ ದೆಹಲಿಗೆ ತೆರಳಿ ಪ್ರಶಸ್ತಿ ಸ್ವೀಕರಿಸಿ ಸಂಭ್ರಮಿಸಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಟಿ ಭಾರತಿ ವಿಷ್ಣುವರ್ಧನ್ ಅವರ ಸಾಧನೆ ಹಾಗೂ ಜೀವನ ಪಯಣ ಕುರಿತಾದ `ಬಾಳೆ ಬಂಗಾರ’ ಸಾಕ್ಷ್ಯಚಿತ್ರಕ್ಕೆ ನಾನ್-ಫೀಚರ್ ಫಿಲ್ಮ್ ವಿಭಾಗದಲ್ಲಿ ರಾಷ್ಟ್ರಪ್ರಶಸ್ತಿ ಲಭಿಸಿದೆ. ನಿರ್ದೇಶಕ ಅನಿರುದ್ದ್ ಅವರು ಬಹಳ ಹೆಮ್ಮೆಯಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ. ಸಿನಿಮಾ ಪತ್ರಕರ್ತರಿಗೆ ನೀಡುವ ‘ಅತ್ಯುತ್ತಮ ಸಿನಿಮಾ ವಿಮರ್ಶಕ (ಸ್ಪೆಷಲ್ ಮೆನ್ಷನ್ ಕ್ರಿಟಿಕ್) ಪ್ರಶಸ್ತಿಯು ಕನ್ನಡದ ಹಿರಿಯ ಸಿನಿಮಾ ಪತ್ರಕರ್ತ ಸುಬ್ರಮಣ್ಯ ಬಾಡೂರು ಅವರಿಗೆ ದೊರೆತಿದೆ.
ಇನ್ನೂ ಜಕ್ಕಣ್ಣನ `ಆರ್ ಆರ್ ಆರ್’ ಚಿತ್ರ ಅತ್ಯುತ್ತಮ ಜನಪ್ರಿಯ ಸಿನಿಮಾ ಪ್ರಶಸ್ತಿ ಜೊತೆಗೆ ಬೆಸ್ಟ್ ಆ್ಯಕ್ಷನ್ ಡೈರೆಕ್ಷನ್, ಬೆಸ್ಟ್ ಕೊರಿಯಾಗ್ರಫಿ, ಬೆಸ್ಟ್ ಸ್ಪೆಷಲ್ ಎಫೆಕ್ಟ್ಸ್ ಸೇರಿ ಒಟ್ಟು 6 ವಿಭಾಗದಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ನಟ ಮಾಧವನ್ ನಟನೆಯ ‘ ರಾಕೆಟ್- ದಿ ನಂಬಿ ಎಫೆಕ್ಟ್’ ಚಿತ್ರಕ್ಕೆ ಬೆಸ್ಟ್ ಫೀಚರ್ ಫಿಲ್ಮ್ ಅವಾರ್ಡ್ ಸಿಕ್ಕಿದೆ. ಹಿರಿಯ ನಟಿ ವಹೀದಾ ರೆಹಮಾನ್ ಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗಿದೆ.






