ಮಂಗಳವಾರ, ಜುಲೈ 1, 2025
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle
No Result
View All Result
Its Majja
  • Home
  • Majja Special
  • Entertainment
  • Lifestyle

budhisagar krishnappa kunderan: ಕನ್ನಡಿಗ ಕ್ರಿಕೆಟಿಗನಿಗಾಗಿತ್ತು ಘೋರ ಮೋಸ!

Majja Webdeskby Majja Webdesk
24/02/2025
in Majja Special
Reading Time: 1 min read
budhisagar krishnappa kunderan: ಕನ್ನಡಿಗ ಕ್ರಿಕೆಟಿಗನಿಗಾಗಿತ್ತು ಘೋರ ಮೋಸ!

-ಕನ್ನಡಿಗರು ಮರೆತೆ ಅಪ್ಪಟ ಕನ್ನಡಿಗ ಕ್ರಿಕೆಟರ್!

-ಧೋನಿಯನ್ನೇ ಮೀರಿಸುವ ಅದ್ಭುತ ಕ್ರಿಕೆಟರ್!  

 

ಭಾರತೀಯ ಕ್ರಿಕೆಟ್ ಈಗ ಕ್ರೀಡಾ ಗುಣ, ಮೌಲ್ಯಗಳನ್ನೆಲ್ಲ ಕಳೆದುಕೊಂಡು ಹಣದ ಹೊಳೆ ಹರಿಸುವ ಒಂದು ಉದ್ಯಮವಾಗಿ ಮಾರ್ಪಟ್ಟಿದೆ. ಈಗ ಒಬ್ಬ ಕ್ರಿಕೆಟಿಗ ಒಂದೇ ಒಂದು ಪಂದ್ಯದಲ್ಲಿ ಮಿಂಚಿದರೂ ಮುಂದಿನ ಐದಾರು ಪಂದ್ಯಗಳಿಗೆ ಆತ ತಂಡದ ಕಾಯಂ ಸದಸ್ಯ. ಆ ಮೂಲಕ ಆತ ಕೋಟ್ಯಾಧಿಪತಿ. ಆದರೆ ಅರವತ್ತರ ದಶಕದಲ್ಲಿ ಈಗಿನ ನಮ್ಮ ಏಕದಿನ ತಂಡದ ನಾಯಕ ವಿಕೆಟ್ ಕೀಪರ್, ಬ್ಯಾಟ್ಸಮನ್ ಮಹೇಂದ್ರ ಸಿಂಗ್ ಧೋನಿಯನ್ನು ಮೀರಿಸುವಂತ ಒಬ್ಬ ಉತ್ತಮ ವಿಕೆಟ್ ಕೀಪರ್, ಆಕ್ರಮಣಶೀಲ ಬ್ಯಾಟ್ಸಮನ್ ಹೇಗೆ ನಮ್ಮ ಕ್ರಿಕೆಟ್ ಮಂಡಳಿಯ ಹೊಲಸು ರಾಜಕೀಯಕ್ಕೆ ಬಲಿಯಾಗಿ ಮೂವತ್ತನೇ ವಯಸ್ಸಿನಲ್ಲಿಯೇ ದೇಶ ತೊರೆದು ಸ್ಕಾಟ್ ಲ್ಯಾಂಡ್ ಹೋಗಿ ನೆಲಸಬೇಕಾಯಿತು. ಆತನನ್ನು ನಮ್ಮ ಕ್ರಿಕೆಟ್ ಮಂಡಳಿ ಹೀನಾಯವಾಗಿ ಮರೆತೇಬಿಟ್ಟಿತು. ಕ್ರಿಕೆಟ್ ಮಂಡಳಿಯ ಕಥೆ ಹಾಗಿರಲಿ; ಸ್ವತಃ ಕನ್ನಡಿಗರಾದ ನಾವೇ ಆ ಅಪ್ಪಟ ಕನ್ನಡಿಗ ಕ್ರಿಕೆಟ್ ಕಣ್ಮಣಿಯನ್ನು ಮರೆತೇ ಬಿಟ್ಟಿರೋದು ನಿಜಕ್ಕೂ ದುರಂತ!
ಹಾಗಾದರೆ, ಹಾಗೆ ಕ್ರಿಕೆಟ್ ಜಗತ್ತಿನ ನೌಟಂಕಿ ಆಟಗಳಿಂದ ಕಂಗೆಟ್ಟು ವಿದೇಶ ಸೇರಿಕೊಂಡ ಆ ಕನ್ನಡಿಗ ಕ್ರಿಕೆಟರ್ ಯಾರು? ಆತ ನಮ್ಮ ಕರುನಾಡಿನ ಯಾವ ಊರಿಗೆ ಸೇರಿದವರು? ಹೀಗೆ ನಾನಾ ಪ್ರಶ್ನೆ ಕ್ರಿಕೆಟ್ ಪ್ರೇಮಿಗಳಲ್ಲಿ ಮೂಡಿಕೊಳ್ಳೋದು ಸಹಜ. ಆ ನತದೃಷ್ಟ ಕ್ರಿಕೆಟಿಗ ಕನ್ನಡ ನಾಡಿನ ಬುಧಿಸಾಗರ್ ಕೃಷ್ಣಪ್ಪ ಕುಂದರನ್. ೧೯೩೯ ರ ಅಕ್ಟೋಬರ್ ೨ರಂದು ಹುಟ್ಟಿದ ಬುಧಿಸಾಗರ್ ಕುಂದರನ್ ರ ಹುಟ್ಟೂರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಚ್ಚಿಲ. ಅಲ್ಲಿನ ಎರ್ಮಾಳಿನಲ್ಲಿ ಜನಿಸಿದ್ದವರು ಬುಧಿಸಾಗರ್. ಆ ಕಾಲಕ್ಕೆ ಬಹುತೇಕ ಕರಾವಳಿಯ ಜನರು ಉದ್ಯೋಗವನ್ನರಸಿ ಮುಂಬೈಗೆ ಗುಳೇ ಹೋಗೋದು ಮಾಮೂಲಿಯಾಗಿತ್ತು. ಅದರಂತೆಯೇ ಬುಧಿಸಾಗರ್ ಕುಟುಂಬ ಕೂಡಾ ಮುಂಬೈಗೆ ವಲಸೆ ಹೋಗಿತ್ತು. ಚಿಕ್ಕಂದಿನಲ್ಲೇ ಕ್ರಿಕೆಟ್ನಲ್ಲಿ ಆಸಕ್ತಿ ಬೆಳಸಿಕೊಂಡ ಬುಧಿಸಾಗರ್ ಆ ಬಡತನದಲ್ಲಿಯೂ ದೊಡ್ಡ ಕ್ರಿಕೆಟ್ ಪಟುವಾಗಬೇಕೆಂಬ ಕನಸನ್ನು ಸಾಕಿಕೊಂಡಿದ್ದರು.

ಬಡತನದ ಬೇಗೆ


ತಮ್ಮ ಮಿತಿಯಲ್ಲಿಯೇ ತೀವ್ರವಾಗಿ ಶ್ರಮ ಹಾಕುತ್ತಾ, ಮುಂದೊಂದು ದಿನ ಕ್ರಿಕೆಟ್ ಆಟದಲ್ಲಿ ಭಾರತವನ್ನು ಪ್ರತಿನಿಧಿಸುವ ಕನಸು ಕಾಣುತ್ತಿದ್ದರು. ಹಾಗಂತ ಇವರೇನು ಅಗರ್ಭ ಶ್ರೀಮಂತರಾಗಿರಲಿಲ್ಲ. ಈವತ್ತಿಗೆ ಕ್ರಿಕೆಟ್ ಕನಸು ಕಾಣಲೂ ಕೂಡಾ ಶ್ರೀಮಂತಿಕೆ ಇರಲೇ ಬೇಕೆಂಬಂಥಾ ವಾತಾವರಣವಿದೆ. ಆದರೆ ಅವರ ತಂದೆ ತಾಯಿ ಬದುಕನ್ನರಸಿಕೊಂಡು ಮುಂಬೈಗೆ ತೆರಳಿದ್ದವರು. ಇವರ ಕ್ರಿಕೆಟ್ ಹುಚ್ಚಿನ ಬಗ್ಗೆ ತಂದೆಗೆ ಆಕ್ರೋಶವಿದ್ದರೂ ತಾಯಿ ಮಾತ್ರ ಮಗನ ಬೆಂಬಲಕ್ಕೆ ನಿಂತಿದ್ದರು. ತಮ್ಮ ತಾಯಿ, ತಂದೆಗೆ ಅರಿವಿಲ್ಲದಂತೆ ಅವರ ಬಿಳಿ ಬಣ್ಣದ ಪ್ಯಾಂಟ್ ಶರ್ಟನ್ನು ಕ್ರಿಕೆಟಿನ ಬಿಳಿಯುಡುಗೆಯಾಗಿ ಪರಿವರ್ತಿಸಿ ಕೊಟ್ಟಿದ್ದೇ ಬುಧಿಸಾಗರ್ ರವರ ಮೊದಲ ಕ್ರಿಕೆಟ್ ಉಡುಗೆಯಾಯಿತು.
ಹೀಗೆ ಕ್ರಿಕೆಟ್ ಕನಸು ಕಂಡಿದ್ದ ಬುಧಿಸಾಗರ್ ಈವಾಗಿನ ಕ್ರಿಕೆಟಿಗಳು ಊಹಿಸಿಕೊಳ್ಳಲೂ ಸಾಧ್ಯವಾಗದಂಥಾ ಕಡುಕಷ್ಟದ ಹಾದಿಯನ್ನು ಕ್ರಮಿಸಿದ್ದಾರೆ. ತಮ್ಮ ಮಿತಿ, ಪರಿಧಿಗಳಾಚೆ ಕೈ ಚಾಚುತ್ತಾ, ಕ್ರಿಕೆಟಿಗನಾಗಿ ನೆಲೆ ಕಂಡುಕೊಳ್ಳಲು ಬೇಕಾದ ಎಲ್ಲ ರೀತಿಯಿಂದಲೂ ಪ್ರಯತ್ನಿಸುತ್ತಾ, ಇತರೇ ಕ್ರಿಕೆಟರ್ ಗಳೇ ಅಚ್ಚರಿ ಪಡುವಂಥಾ ಪ್ರಕಾಂಡ ಪ್ರತಿಭೆಯನ್ನು ಹೊಂದಿದ್ದವರು ಬುಧಿಸಾಗರ್. ಹೀಗೆ ಹಂತ ಹಂತವಾಗಿ ಕ್ರಿಕೆಟ್ ಆಟದಲ್ಲಿ ಪಳಗಿಕೊಂಡಿದ್ದ ಬುಧಿ ಸಾಗರ್ ಮುಂಬೈನಲ್ಲಿ ತಮ್ಮ ಆರಂಭದ ದಿನಗಳಲ್ಲಿ ಬುಧಿಸಾಗರ್ ಪೋರ್ಟ್ ವಿಜಯ್ ಮತ್ತು ಪಿ.ಜೆ.ಹಿಂದೂ ಜಿಮ್ಖಾನ ಪರವಾಗಿ ಆಡುತ್ತಿದ್ದರು. ತಾನಾಡಿದ ಮೊದಲ ಸ್ಥಳೀಯ ಪಂದ್ಯದಲ್ಲಿಯೇ ದ್ವಿಶತಕ ಬಾರಿಸಿ ಭಾರತೀಯ ಕ್ರಿಕೆಟ್ ಲೋಕಕ್ಕೆ ತಮ್ಮ ಆಗಮನವನ್ನು ಸಾರಿದ್ದರು.ಸ್ಥಳೀಯ ಕ್ರಿಕೆಟ್ ಕ್ಲಬ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಬುದಿಸಾಗರ್, ಆ ನಂತರದಲ್ಲಿ ೧೯೫೮-೫೯ರಲ್ಲಿ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದ ಪರವಾಗಿ ಪ್ರವಾಸಿ ವಿಂಡಿಸ್ ತಂಡದ ವಿರುದ್ಧ ಮೊದಲ ದರ್ಜೆ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದರು.
ಅಪ್ಪಟ ಸಾಹಸಿ
ಹಾಗೆ ಸಿಕ್ಕ ಅವಕಾಶವನ್ನು ತಮ್ಮ ಅಗಾಧ ಪರಿಶ್ರಮ ಮತ್ತು ಪ್ರತಿಭೆಯ ಮೂಲಕವೇ ಸದುಪಯೋಗ ಪಡಿಸಿಕೊಂಡವರು ಬುಧಿಸಾಗರ್. ಆ ಎರಡು ಪಂದ್ಯಗಳ ಬಳಿಕ ಮರು ವರ್ಷ ಅಂದರೆ, ೧೯೬೦ರಲ್ಲಿ ಎಲ್ಲರ ಹುಬ್ಬೇರುವಂತೆ ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ಪ್ರವಾಸಿ ಆಸ್ಟ್ರೇಲಿಯಾದ ವಿರುz ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದರು. ಸಾಧನೆ ಕಂಡು ಎಲ್ಲರೂ ಅಚ್ಚರಿಗೀಡಾಗುವ ಘಳಿಗೆಯಲ್ಲಿ ಬುಧಿಸಾಗರ್ ಗೆ ಕೇವಲ ಇಪ್ಪತ್ತು ವರ್ಷವಾಗಿತ್ತೆಂದರೆ ಯಾರಿಗಾದರೂ ಅಚ್ಚರಿಯಾಗದಿರೋದಿಲ್ಲ. ವಿಶೇಷವೆಂದರೆ, ಕೇವಲ ಇಕಕಪ್ಪತ್ತು ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ ಬುಧಿಸಾಗರ್ ಆ ಮುಂಚೆ ಯಾವುದೇ ರಣಜಿ ಪಂದ್ಯವನ್ನಾಡಿರಲಿಲ್ಲ. ರಣಜಿ ಪಂದ್ಯಾವಳಿ ಪ್ರಾರಂಭವಾದ ಮೇಲೆ ಯಾವುದೇ ರಣಜಿ ಪಂದ್ಯವನ್ನಾಡದೆ ನೇರವಾಗಿ ಟೆಸ್ಟ್ ಪಂದ್ಯಗಳಿಗೆ ಅವಕಾಶ ಪಡೆದವರು ಕುಂದರನ್. ಅವರ ನಂತರ ವಿವೇಕ್ ರಾಜ್ದಾನ್ ಮತ್ತು ಪಾರ್ಥಿವ್ ಪಟೇಲ್ ಮಾತ್ರ ಇಂಥಾದ್ದೊಂದು ಅಚ್ಚರಿದಾಯಕ ಪ್ರವೇಶ ಪಡೆದಿದ್ದರಷ್ಟೆ.

ಬುಧಿ ಸಾಗರ್ ಬೆಳೆದು ನಿಂತಿದ್ದ ಪರಿ ಕಂಡಟು ಎಲ್ಲರೂ ಅಚ್ಚರಿಯಾಗಿದ್ದರು. ಆವತ್ತಿಗೂ ಈವತ್ತಿಗೂ ಅದೊಂದು ದೊಡ್ಡ ಮಟ್ಟದ ಸಾಧನೆ ಅನ್ನೋದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ, ಅಂಥಾದ್ದೊಂದು ಸಾಧನೆ ಮಾಡಿ ಅನೇಕರಿಗೆ ಸ್ಫೂರ್ತಿಯಾಗಿದ್ದ ಬುಧಿ ಸಾಗರ್ ಪರಿಸ್ಥಿತಿ ಆವತ್ತಿಗೆ ನಿಜಕ್ಕೂ ಹೀನಾಯವಾಗಿತ್ತು. ತಮ್ಮ ಮೊದಲ ಟೆಸ್ಟ್ ಪಂದ್ಯಕ್ಕೆ ಕೀಪಿಂಗ್ ಮಾಡಲು ಸೂಕ್ತ ಗ್ಲೌಸಿಲ್ಲದೆ ತಂಡದ ಇನ್ನೊಬ್ಬ ಕೀಪರ್ ನರೇನ್ ತಹ್ಮನೆಯಿಂದ ಗ್ಲೌಸ್’ನ್ನು ಎರವಲು ಪಡೆದು ಕೀಪಿಂಗ್ ಆರಂಭಿಸಿದ್ದರು. ಮನೆಯಲ್ಲಿ ಮಲಗಿದರೆ ನೆರೆಹೊರೆಯವರ ವಿಪರೀತ ಗಲಾಟೆಗಳು ತೊಂದರೆ ಮಾಡುತ್ತದೆ ಎಂದುಕೊಂಡು ಪಂದ್ಯ ನಡೆದ ಐದೂ ದಿನ ರಾತ್ರಿ ಮುಂಬೈನ ಆಜಾದ್ ಮೈದಾನದಲ್ಲಿ ಬುಧಿಸಾಗರ್ ನಿದ್ದೆ ಮಾಡಿದ್ದರೆಂದರೆ ಆವತ್ತಿಗೆ ಬುಧಿ ಸಾಗರ್ ಇದ್ದ ಸ್ಥಿತಿಯ ಬಗ್ಗೆ ಮತ್ತೇನೂ ಬಿಡಿಸಿ ಹೇಳುವ ಅಗತ್ಯವಿಲ್ಲ.
ಕಷ್ಟಕ್ಕೂ ಅಂಜಲಿಲ್ಲ
ಇಂಥಾ ಎಲ್ಲ ಕಷ್ಟ ಕೋಟಲೆಗಳಿಂದಲೂ ಅವರು ಗಟ್ಟಿಯಾಗುತ್ತಾ ಸಾಗಿದ್ದರೇ ಹೊರತು ಕೊರಗಿ ಕಂಗೆಟ್ಟಿರಲಿಲ್ಲ. ಮುಂದೆ ಮದ್ರಾಸಿನಲ್ಲಿ ನಡೆದ ಮುಂದಿನ ಟೆಸ್ಟ್’ನಲ್ಲಿ ಕುಂದರನ್ ತನ್ನ ಪರಾಕ್ರಮ ತೋರಿಸಿದ್ದರು. ತಾನೆದುರಿಸಿದ ಮೊದಲ ಓವರಿನಲ್ಲಿಯೆ ಹದಿನಾರು ರನ್ ಬಾರಿಸಿದ್ದ ಕುಂದರನ್ ಅವರ ಬಳಿ ನಂತರ ಆಸ್ಟ್ರೇಲಿಯಾದ ಕ್ರಿಕೆಟ್ ವಿವರಣೆಕಾರ ಮೈಕಲ್ ಚಾರ್ಲ್ ಟನ್ ಧಾವಿಸಿ `ನೀನು ಆಡುತ್ತಿರುವುದು ಟೆಸ್ಟ್ ಕ್ರಿಕೆಟ್ ಎಂಬ ಅರಿವಿದೆಯೇ’ ಅಂತ ಅಚ್ಚರಿಯಿಂದ ಕೇಳಿದ್ದರಂತೆ. ಇಂದಿನ ಏಕದಿನ ಪಂದ್ಯಗಳಲ್ಲಿರುವಂತೆ ತಮ್ಮ ಶಕ್ತಿಯುತ ಹೊಡೆತಗಳಿಗೆ ಹೆಸರಾಗಿದ್ದ ಕುಂದರನ್ ಆಸ್ಟ್ರೇಲಿಯಾದ ಬೌಲರಗಳನ್ನು ಹೀನಾಮಾನ ಎದುರಿಸಿ ಎಪ್ಪತ್ತೊಂದು ರನ್ನುಗಳನ್ನು ಪಡೆದಿದ್ದರು. ಆ ಇನ್ನಿಂಗ್ಸಿನಲ್ಲಿ ಭಾರತದ ಮೊತ್ತ ಕೇವಲ ನೂರಾ ನಲವತ್ತೊಂಬತ್ತು. ಮುಂದಿನ ಇನ್ನಿಂಗ್ಸಿನಲ್ಲಿ ಕುಂದರನ್ ಅವರ ಗಳಿಕೆ ಮೂವತ್ಮೂರು ರನ್. ಭಾರತ ಆ ಟೆಸ್ಟ್ ಸೋತರೂ ಭಾರತೀಯ ಟೆಸ್ಟ್ ಕ್ರಿಕೆಟಿಗೆ ಓರ್ವ ಆಕರ್ಷಕ ದಾಂಡಿಗ ಮತ್ತು ವಿಕೆಟ್ ಕಿಪರ್ ಆಗಮನವಾದಂತಾಗಿ ಕ್ರಿಟ್ ಪ್ರೇಮಿಗಳು ಖುಷಿಗೊಂಡಿದ್ದರು.
ಹೀಗೆ ಸಿಕ್ಕ ಅವಕಾಶವನ್ನು ಎಲ್ಲರೂ ನಿಬ್ಬೆರಗಾಗುವಂತೆ ಬಳಸಿಕೊಳ್ಳುತ್ತಾ ಸಾಗಿದ್ದ ಬೂದಿಸಾಗರ್ ತನ್ನ ಮೂರನೇ ಟೆಸ್ಟ್ ಬಳಿಕ ರಣಜಿ ಕ್ರಿಕೆಟ್ಟಿಗೆ ಪ್ರವೇಶ ಮಾಡಿದರು. ರೈಲ್ವೇಸ್ ಪರವಾಗಿ ಆಡಿದ ಅವರು ಮೊದಲ ಪಂದ್ಯದಲ್ಲಿಯೇ ಅಮೋಘ ದ್ವಿಶತಕ ದಾಖಲಿಸಿದರು. ಅದೇ ವರ್ಷದ ಕೊನೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಮತ್ತೊಂದು ಶತಕ ಸಿಡಿಸಿದರು. ಈ ಮೂಲಕ ಭಾರತೀಯ ಕ್ರಿಕೆಟ್ ಪ್ರೇಮಿಗಳನ್ನು ಸಾರಾಸಗಟಾಗಿ ತಮ್ಮತ್ತ ಸೆಳೆದುಕೊಂಡಿದ್ದರು. ಮುಂದಿನ ಋತುವಿನಲ್ಲಿ ಸ್ವದೇಶದಲ್ಲಿ ನಡೆದ ಇಂಗ್ಲೆಂಡ್ ವಿರುದ್ದ ಸರಣಿಯಲ್ಲಿ ಮತ್ತು ವಿಂಡಿಸ್ ಪ್ರವಾಸದಲ್ಲಿ ಆಗ ತಾನೆ ಪ್ರವರ್ಧಮಾನಕ್ಕೆ ಬಂದ ಫಾರುಕ್ ಇಂಜಿನಿಯರ್ ಜೊತೆ ಸ್ಥಾನ ಹಂಚಿಕೊಳ್ಳಬೇಕಾಗಿ ಬಂದಿತ್ತು. ಇದೆಲ್ಲದರಾಚೆಗೆ ಬುಧಿಸಾಗರ್ ಅತ್ಯಂತ ಕಡಿಮೆ ಅವಧಿಯಲ್ಲಿಯೇ ತಮ್ಮ ಮಿಂಚಿನ ವೇಗದ ಆಟದ ಶೈಲಿಯಿಂದ ಎಲ್ಲರ ಮನ ಗೆದ್ದಿದ್ದರು.
ಬಂದೆರಗಿದ ಶಾಪ
ಹೀಗೆ ಇದೇ ವೇಗದಲ್ಲಿ ಅಡೆತಡೆಗಳಿಲ್ಲದೆ೪ ಮುಂದುಉವರೆದಿದ್ದರೆ ಬುಧಿ ಸಾಗರ್ರ ಕ್ರಿಕೆಟ್ ತಾರೆಯಾಗಿ ಮಿಂಚೋದು ಖಾತರಿಯಿತ್ತು. ಆದರೆ, ೧೯೬೨ರಲ್ಲಿ ನಡೆದ ಭಾರತ ಚೀನಾ ಯುದ್ದ ಅವರ ಪಾಲಿಗೆ ಶಾಪವಾಯಿತು. ರೈಲ್ವೇಸ್ ಯುದ್ಧದ ನಿಮಿತ್ತ ತನ್ನ ತಂಡವನ್ನು ಪಂದ್ಯಾವಳಿಯಿಂದ ಹಿಂದೆಗೆದುಕೊಂಡಿತು. ಬುಧಿ ಬರಿಗೈಯಲ್ಲಿ ಕೂರಬೇಕಾಯಿತು. ಆ ಸಂದರ್ಭವನ್ನು ಉಪಯೋಗಿಸಿಕೊಂಡ ಫಾರುಕ್ ಇಂಜಿನಿಯರ್ ಭಾರತೀಯ ತಂಡದಲ್ಲಿ ಬುಧಿ ಸ್ಥಾನಕ್ಕೆ ಸಂಚಕಾರ ತಂದರು. ಬುಧಿ ತನ್ನ ಸ್ಥಾನ ಮರಳಿ ಪಡೆಯಲು ೧೯೬೩-೬೪ರ ಇಂಗ್ಲೆಂಡ್ ವಿರುದ್ಧ ಸ್ವದೇಶದಲ್ಲಿ ನಡೆದ ಸರಣಿವರೆಗೆ ಕಾಯಬೇಕಾಯಿತು. ಈ ಸುದೀರ್ಘಾವಧಿಯವರೆಗೆ ಅವರು ಪಟ್ಟಿದ್ದ ಯಾತನೆ ಸಾಮಾನ್ಯದ್ದೇನಲ್ಲ.
ಇಂಥಾ ನಿರಾಸೆಗಳನ್ನು ನುಂಗಿಕೊಂಡು ಪುಟಿದೇಳುವ ಕಲೆ ಬುಧಿ ಸಾಗರ್ ಪಾಲಿಗೆ ಸಿದ್ಧಿಸಿತ್ತು. ೧೯೬೪ರಲ್ಲಿ ಭಾರತದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಸರಣಿ ಬುಧಿಗೆ ಮಾತ್ರವಲ್ಲದೆ ಭಾರತೀಯ ಕ್ರಿಕೆಟ್ ಪಾಲಿಗೆ ಅವಿಸ್ಮರಣೀಯವಾಗಿತ್ತು ಸರಣಿಗೆ ಆಯ್ಕೆಯಾಗಿದ್ದ ಇಂಜಿನಿಯರ್ ಗಾಯದ ಸಮಸ್ಯೆಯಿಂದ ಅನರ್ಹಗೊಂಡಾಗ ಬುಧಿಸಾಗರ್ ತಂಡಕ್ಕೆ ಮತ್ತೆ ಕಾಲಿಟ್ಟರು. ಮದರಾಸಿನಲ್ಲಿ ನಡೆದ ಮೊದಲ ಟೆಸ್ಟಿನಲ್ಲಿ ಆರಂಭಿಕ ಆಟಗಾರನಾಗಿ ಕ್ರೀಸಿಗೆ ಆಗಮಿಸಿದ ಬುಧಿ ಇಂಗ್ಲೆಂಡ್ ಬೌಲರ್ ಗಳನ್ನು ಬೆವರಿಳಿಸಿ ಬಿಟ್ಟಿದ್ದರು. ಮೊದಲ ದಿನವೇ ನೂರಾ ಎಪ್ಪತ್ತು ರನ್ ಸಿಡಿಸಿದ ಬುಧಿ ಆ ಇನ್ನಿಂಗ್ಸಿನಲ್ಲಿ ಮೂವತ್ತೊಂದು ಬೌಂಡರಿಗಳ ಮೂಲಕ ನೂರಾ ತೊಂಬತ್ತೆರಡು ರನ್ ಗಳಿಸಿದರು. ಇದು ಈತನಕ ಭಾರತೀಯ ಕೀಪರ್ ಓರ್ವನ ಸಾರ್ವಕಾಲಿಕ ವೈಯಕ್ತಿಕ ಮೊತ್ತ. ಅವರ ಮೂವತ್ತೊಂದು ಬೌಂಡರಿಗಳ ದಾಖಲೆ ಮುರಿಯಲು ಆಸ್ಟ್ರೇಲಿಯ ವಿರುದ್ಧ ಸರಣಿಯಲ್ಲಿ ವಿ ವಿ ಎಸ್ ಲಕ್ಷ್ಮಣ್ ಬರಬೇಕಾಯಿತು!
ಆ ಪಂದ್ಯಾಟದಲ್ಲಿ ಬುಧಿಯ ಸಾಧನೆ ಅಷ್ಟಕ್ಕೇ ಸೀಮಿತವಾಗಿರಲಿಲ್ಲ. ಆ ಪಂದ್ಯದಲ್ಲಿ ವಿಕೆಟ್ ಹಿಂಬಾಗದಲ್ಲಿ ನಿಂತೇ ಆರು ಬಲಿ ಪಡೆದಿದ್ದರು. ಅದೇ ಸರಣಿಯ ನಾಲ್ಕನೇ ಟೆಸ್ಟಿನಲ್ಲಿ ಬುಧಿ ಮತ್ತೊಂದು ಶತಕ ಸಿಡಿಸಿ ಸರಣಿಯಲ್ಲಿ ಒಟ್ಟು ಐದುನೂರಾ ಇಪ್ಪತೈದು ರನ್ ಕೂಡಿಸಿದರು. ಇಂತಹ ಒಂದು ಉತ್ತಮ ಪ್ರದರ್ಶನದ ಹೊರತಾಗಿಯು ಅವರನ್ನು ಮುಂದಿನ ಆಸ್ಟ್ರೇಲಿಯಾ ವಿರುದ್ದ ಸರಣಿಗೆ ತಂಡದಿಂದ ಕೈಬಿಡಲಾಯಿತು. ಇದು ಶುದ್ದ ರಾಜಕಿಯವಲ್ಲದೆ ಮತ್ತಿನ್ನೇನು? ಬುಧಿ ಸಾಗರ್ ಕಷ್ಟ ಕೋಟಲೆಗಳ ವಿರುದ್ಧ ಹೋರಾಡಿ ಗೆಲ್ಲುವ ಛಾತಿ ಹೊಂದಿದ್ದರು. ಆದರೆ ಕ್ರಿಕೆಟ್ ಜಗತ್ತಿನಲ್ಲಿ ಚಾಲ್ತಿಯಲ್ಲಿದ್ದ ರಾಜಕೀಯವನ್ನು ಎದುರಿಸುವ ಯಾವ ಶಕ್ತಿಯೂಊ ಅವರಲ್ಲಿರಲಿಲ್ಲ. ಸಿಕ್ಕ ಅವಕಾಶವನ್ನೆಲ್ಲ ಬಳಸಿಕೊಂಡು ಗೆದ್ದು ಬೀಗಿದ್ದ ಅವರು ರಾಜಕೀಯ ಮೇಲಾಟದ ಮುಂದೆ ಸೋತು ಕೂರುವಂತಾಗಿತ್ತು.
ಆ ಬಳಿಕ ಹೆಜ್ಜೆ ಹೆಜ್ಜೆಗೂ ಬುಧಿ ಸಾಗರ್ ನಾನಾ ಸವಾಲುಉಗಳನ್ನು, ಷಡ್ಯಂತ್ರಗಳನ್ನುಉ ದಾಟಿಕೊಳ್ಳುಉವಂಥಾ ಸ್ಥಿತಿ ನಿರ್ಮಾಣಗೊಂಡಿತ್ತುಉ. ೧೯೬೫ರಲ್ಲಿ ಬುಧಿ ರಣಜಿ ಪಂದ್ಯಾವಳಿಗೆ ರೈಲ್ವೇಸ್ ತೊರೆದು ತನ್ನ ರಾಜ್ಯದ ಮೈಸೂರು ತಂಡ ಮತ್ತು ದಕ್ಷಿಣ ವಲಯದ ಪರವಾಗಿ ಆಡತೊಡಗಿದರು. ೧೯೬೬ ರಲ್ಲಿ ಮತ್ತೆ ರಾಷ್ಟ್ರೀಯ ತಂಡ ಸೇರಿಕೊಂಡ ಬುದಿಸಾಗರ್, ಮುಂಬೈನಲ್ಲಿ ವಿಂಡಿಸ್ ವಿರುದ್ದ ಟೆಸ್ಟಿನಲ್ಲಿ ವೇಗದ ಎಪ್ಪತ್ತೊಂಬತ್ತು ರನ್ ಗಳಿಸಿ ಮತ್ತೊಮ್ಮೆ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಮುಂದಿನ ಟೆಸ್ಟಿನಲ್ಲಿ ಉತ್ತಮ ಪ್ರದರ್ಶನ ಮಾಡಿದ್ದರು. ಈ ಮಧ್ಯೆ ಅವರು ಅಭ್ಯಾಸ ಪಂದ್ಯವೊಂದರಲ್ಲಿ ಎರಡು ಗಂಟೆಗಳಲ್ಲಿ ನೂರಾ ನಾಲಕ್ಕು ರನ್ ಸಿಡಿಸಿದ್ದರೂ ಮತ್ತೊಮ್ಮೆ ಅವರನ್ನು ಮುಂದಿನ ಸರಣಿಗೆ ಕೈಬಿಡಲಾಯಿತೆಂದರೆ ಭಾರತೀಯ ಕ್ರಿಕೆಟ್ ಮಂಡಳಿಯಲ್ಲಿ ಆ ಕಾಲದಲ್ಲಿಯೇ ಅದೆಂಥಾ ಕೊಳಕುಉ ರಾಜಕಾರಣ ಚಾಲ್ತಿಯಲ್ಲಿತ್ತೆಂಬುದು ಅರ್ಥವಾಗುತ್ತದೆ.
ಕಡೇಯ ಘಟ್ಟ
ಹೀಗೆ ಮೇರುಉ ಕ್ರಿಕೆಟರ್ ಆಗುವ ಎಲ್ಲ ಲಕ್ಷಣಗಳನ್ನು ಹೊಂದಿದ್ದ ಬುಧಿ ಸಾಗರ್ರ ಅವ ವೃತ್ತಿ ಬದುಕು ಬಹು ಬೇಗನೆ ಅಂತ್ಯಗೊಂಡಿದ್ದು ಮಾತ್ರ ಭಾರತೀಯ ಕ್ರಿಕೆಟ್ ಲೋಕದ ಘೋರ ದುರಂತ. ಈ ನಡುವೆ ೧೯೬೭ರಲ್ಲಿ ಇಂಗ್ಲೆಂಡ್ ಪ್ರವಾಸಕ್ಕೆ ಫಾರುಕ್ ಇಂಜಿನಿಯರ್ ಜೊತೆ ತಂಡಕ್ಕೆ ಮತ್ತೆ ಆಯ್ಕೆಗೊಂಡರು. ಇಂತಹ ಒಂದು ಕಣ್ಣಾಮುಚ್ಚಾಲೆ ಆಟ ಯಾವ ಕ್ರಿಕೆಟಿಗನ ಬಾಳಿನಲ್ಲೂ ನಡೆದಿರಲಿಕ್ಕಿಲ್ಲ. ಉತ್ತಮ ಪ್ರದರ್ಶನದ ನೀಡಿದರೂ ಮುಂದಿನ ಸರಣಿಗೆ ಅವರ ಸ್ಥಾನ ನಿಶ್ಚಿತವಾಗಿರುತ್ತಿರಲಿಲ್ಲ. ಈ ಸರಣಿಯ ಎರಡನೆ ಟೆಸ್ಟಿನಲ್ಲಿ ಭಾರತದ ನೂರಾ ಹತ್ತು ರನ್ನುಗಳಲ್ಲಿ ಬುಧಿ ಪಾಲು ನಲವತ್ತೇಳೆಂದರೆ ಆತನ ಶಕ್ತಿ ಏನೆಂಬುದು ಯಾರಿಗಾದರೂ ಅರ್ಥವಾಗುತ್ತದೆ. ಈ ಸರಣಿಯ ಕೊನೆಯ ಟೆಸ್ಟಿನಲ್ಲಿ ಬುಧಿ ಆರಂಭಿಕ ಆಟಗಾರನಲ್ಲದೆ, ಆರಂಭಿಕ ಬೌಲರ್ ಆಗಿ ಕೂಡ ಪ್ರದರ್ಶನ ನೀಡಿದ್ದರು. ವಿಕೆಟ್ ಹಿಂದುಗಡೆ ಫಾರುಕ್ ಇಂಜಿನಿಯರ್ ಇದ್ದದ್ದರಿಂದಾಗಿ ಅದೇ ಪಂದ್ಯ ಭಾರತದ ಪರ ಅವರ ಕೊನೆಯ ಪಂದ್ಯವಾದದ್ದು ಮಾತ್ರ ಘೋರ ದುರಂತ.
ಹೀಗೆ ಅತ್ಯುತ್ತಮ ಪ್ರದರ್ಶನ ನೀಡಿದರೂ ಕೂಡಾ ಇಂಜಿನಿಯರ್ ಮರ್ಜಿಗೆ ಬಿದ್ದ ಕ್ರಿಕೆಟ್ ಮಂದಳಿ ಬುಧಿ ಸಾಗರ್ ಅವರಿಗೆ ದೋಖಾ ಮಾಡಿತ್ತು. ಯಾಕೆಂದರೆ, ಮುಂದಿನ ಆಸ್ಟ್ರೇಲಿಯಾ ವಿರುದ್ದ ಸರಣಿಗೆ ಮತ್ತೆ ಅವರನ್ನು ತಂಡದಿಂದ ಕೈಬಿಡಲಾಯಿತು. ಮುಂದೆ ಬುಧಿಸಾಗರ್ ಮೂರು ವರ್ಷಗಳ ಕಾಲ ಮೈಸೂರು ಪರ ರಣಜಿ ಪಂದ್ಯವನ್ನಾಡಿದರು. ಆದರೂ ಕೂಡಾ ಅವಕಾಶ ಕೈ ತಪ್ಪಿದ ಬೇಸರ ಅವರನ್ನು ತೀವ್ರವಾಗಿ ಕಾಡಿತ್ತು. ಭಾರತದ ಕ್ರಿಕೆಟ್ ಮಂಡಳಿಯ ರಾಜಕೀಯದಿಂದ ಬೆಸತ್ತ ಬುಧಿ ಕುಂದರನ್ ೧೯೭೦ರಲ್ಲಿ ಗ್ಲಾಸ್ಗವ್ ಗೆ ವಲಸೆ ಹೋದರು. ಹೋಗುವಾಗ ಭಾರತದ ಕ್ರಿಕೆಟ್ ಮಂಡಳಿಯ ಕೆಲ ಅಧಿಕಾರಿಗಳ ಮೇಲೆ ಕಿಡಿ ಕಾರಿದ್ದರು. ಇದರಿಂದಾಗಿ ಅವರನ್ನು ಮಂಡಳಿ ಮುಂದೆ ಯಾವ ಕಾರ್ಯಕ್ರಮಕ್ಕೂ ನೆನಪಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಸ್ಕಾಟಿಷ್ ಲೀಗಿನಲ್ಲಿ ಡ್ರಮ್ ಪೆಲ್ಲಿಯರ್ ಪರವಾಗಿ ಆಡುತ್ತಿದ್ದ ಕುಂದರನ್ ಮುಂದೆ ೧೯೮೦ ರಲ್ಲಿ ತಮ್ಮ ೪೨ನೆ ವಯಸ್ಸಿನಲ್ಲಿ ಬೆನ್ಸನ್ ಆಂಡ್ ಹೆಡ್ಜಸ್ ಕಪ್ ನಲ್ಲಿ ಸ್ಕಾಟ್ ಲ್ಯಾಂಡ್ ತಂಡವನ್ನು ಪ್ರತಿನಿಧಿಸಿದರು. ಬುದಿಸಾಗರ್ ಅವರ ಸಹಾಯದಿಂದ ಕೋಟ್ ಬ್ರಿಡ್ಜ್ ತಂಡ ವೆಸ್ಟರ್ನ್ ಯುನಿಯನ್ ಚಾಂಪಿಯನ್ ಪಟ್ಟ ಗಳಿಸಿಕೊಂಡಿತು. ಮುಂದೆ ಅವರು ೧೯೯೫ರವರೆಗೂ ಡ್ರಮ್ ಪೆಲ್ಲಿಯರ್ ಪರವಾಗಿ ಕಾಣಿಸಿಕೊಳ್ಳುತ್ತಿದ್ದರು. ಈ ಮೂಲಕ ಭಾರತೀಯ ಕ್ರಿಕೆಟ್ ಮಂಡಳಿಯ ರಾಜಕೀಯದ ವಿರುದ್ಧ ಆಟದ ಮೂಲಕವೇ ಆಕ್ರೋಶ ಹೊರ ಹಾಕಲಾರಂಭಿಸಿದ್ದರು.
ಅಸಾಮಾನ್ಯ ಸಾಧನೆ

ಬುಧಿ ಸಾಗರ್ ಅತ್ಯಂತ ಕಡಿಮೆ ಅವಧಿಯಲ್ಲಿ ಮಾಡಿರುವ ಸಾಧನೆ ಸಾಮಾನ್ಯದ್ದೇನಲ್ಲ. ಹದಿನೆಂಟು ಟೆಸ್ಟ್ ಪಂದ್ಯಗಳಲ್ಲಿ ೩೨.೭೦ರ ಸರಾಸರಿಯಲ್ಲಿ ೯೮೧ ರನ್ನುಗಳನ್ನು ಪೇರಿಸಿದ್ದರು. ಅದರಲ್ಲಿ ಎರಡು ಶತಕ ಮೂರು ಅರ್ಧಶತಕಗಳು ಒಳಗೊಂಡಿವೆ. ಆಡಿದ ೩೪ ಇನ್ನಿಂಗ್ಸ್’ನಲ್ಲಿ ಅವರು ೨೧ ಬಾರಿ ಆರಂಭಿಕ ಆಟಗಾರನಾಗಿ ಕಾಣಿಸಿಕೊಂಡಿದ್ದರು. ವಿಕೆಟ್ ಕೀಪರ್ ಆಗಿ ೭ ಸ್ಟಂಪಿಂಗ್ ಮತ್ತು ೨೩ ಕ್ಯಾಚ್’ಗಳನ್ನು ಪಡೆದಿದ್ದರು. ೧೨೯ ಮೊದಲ ದರ್ಜೆ ಪಂದ್ಯಗಳಲ್ಲಿ  ೨೮.೯೭ರ ಸರಾಸರಿಯಲ್ಲಿ ಒಟ್ಟು ೫,೭೦೮ ರನ್ನುಗಳನ್ನು ಗಳಿಸಿದ್ದರು. ಅದರಲ್ಲಿ ೧೨ ಶತಕ, ೧೯ ಅರ್ಧಶತಕಗಳು. ೧೭೫ ಕ್ಯಾಚುಗಳು ಮತ್ತು ೮೫ ಸ್ಟಂಪಿಂಗ್’ಗಳು. ರಣಜಿಯಲ್ಲಿ ಅವರ ಒಟ್ಟು ಗಳಿಕೆ ೨,೩೬೭ ರನ್ನುಗಳನ್ನು ಪಡೆದಿದ್ದರು. ಈ ಅಂಕಿ ಅಂಶಗಳೇ ಆತ ಎಂಥಾ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರನಾಗಿದ್ದರು ಎಂಬುದಕ್ಕೆ ಪುರಾವೆಯಂತಿದೆ.


ಹೀಗೆ ಹಂತ ಹಂತವಾಗಿ ಸವಾಲು, ರಾಜಕೀಯವನ್ನು ಎದುರಿಸುತ್ತಾ ಬಂದಿದ್ದ ಬುಧಿ ಸಾಗರ್ ಒಂದು ಹಂತದಲ್ಲಿ ಅಕ್ಷರಶಃ ಸಿಡಿದೆದ್ದಿದ್ದರು. ೧೯೬೭ ರ ಇಂಗ್ಲೆಂಡ್ ಪ್ರವಾಸದ ವೇಳೆ ತಂಡದ ಆಟಗಾರರು ಅನುಭವಿಸಿದ ಕಷ್ಟಗಳ ಬಗ್ಗೆ ಬುದಿಸಾಗರ್ ಬಹಿರಂಗವಾಗಿ ಟೀಕಿಸಿದ್ದರು. ಸರಿಯಾದ ಉಡುಗೆಗಳು, ಕ್ರಿಕೆಟ್ ಪರಿಕರಗಳು ಮತ್ತು ಸರಿಯಾದ ಊಟದ ವ್ಯವಸ್ಥೆ ಮಾಡದ ಬಗ್ಗೆ ಮತ್ತು ಬ್ರಿಟಿಷರ ಗುಲಾಮರಂತೆ ವರ್ತಿಸಿದ ತಂಡದ ಅಧಿಕಾರಿಗಳು ಮತ್ತು ಮ್ಯಾನೇಜರ್ ಕೆಕಿ ತಾರಪೋರೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಕೊನೆ ಕೊನೆಗೆ ತಮ್ಮನ್ನು ಪದೆ ಪದೆ ತಂಡದಿಂದ ಕೈಬಿಡುತ್ತಿರುವ ಬಗ್ಗೆ ಆಕ್ರೋಶಗೊಂಡಿದ್ದ ಬುಧಿಸಾಗರ್ ನಾಯಕ ಶೋಕಿಲಾಲ ಮನ್ಸೂರ್ ಅಲಿ ಖಾನ್ ಪಟೌಡಿ ಬಗ್ಗೆ ಅಸಹನೆಗೊಂಡಿದ್ದರು. ಪಟೌಡಿ ಒಬ್ಬ ಮೂಡಿ, ಅಹಂಕಾರದ ಮೂರ್ತಿ ಮತ್ತು ಅವರು ಎಂದೂ ಆಟಗಾರರ ನಾಯಕನಾಗಿರಲಿಲ್ಲ ಎಂದಿದ್ದರು. ಇದೆಲ್ಲ ಮುಂದೆ ಬುಧಿಗೆ ತಿರುಗುಬಾಣವಾಗಿ ಪರಿಣಮಿಸಿತು. ಆದರೂ ಕೂಡಾ ಯಾರೊಂದಿಗೂ ಮಿಲಾಪಿ ನಡೆಸದೆ, ತೀವ್ರವಾಗಿ ಪ್ರತಿರೋಧ ಒಡ್ಗಡಿ ನಿರ್ಗಮಿಸಿದ್ದು ಬುಧಿ ಸಾಗರ್ ಅವರ ಹೆಚ್ಚುಗಾರಿಕೆ.
ಇಂಥಾ ಬುಧಿಸಾಗರ್ ಅವರದ್ದು ಸಾಹಸಮಯ ಬದುಕೂ ಹೌದು. ಸ್ಫೂರ್ತಿದಾಯಕ ಬದುಕೂ ಹೌದು. ಇಂಗ್ಲೆಂಡ್ ಪ್ರವಾಸದ ವೇಳೆ ಪರಿಚಯವಾದ ಬ್ರಿಟಿಷ್ ಯುವತಿ ಲಿಂಡಾಳನ್ನು ವರಿಸಿದ ಬುದಿಸಾಗರ್ ಅವರಿಗೆ ಇಬ್ಬರು ಪುತ್ರರಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬುಧಿ ೨೦೦೬ರ ಜೂನ್ ೨೩ರಂದು ಗ್ಲಾಸ್ಗೌ ನಲ್ಲಿ ನಿಧನ ಹೊಂದಿದ್ದರು. ಒಟ್ಟಾರೆಯಾಗಿ ಬುಧಿಸಾಗರ್ ಕೃಷ್ಣಪ್ಪ ಕುಂದರನ್ ಭಾರತ ಕಂಡ ಅತ್ಯುತ್ತಮ ವಿಕೆಟ್ ಕೀಪರ್, ಬ್ಯಾಟ್ಸ್ಮನ್. ಅರವತ್ತರ ದಶಕದಲ್ಲೆ ಟೆಸ್ಟ್ ಕ್ರಿಕೆಟನ್ನು ಈಗಿರುವ ಏಕದಿನ ಶೈಲಿಯಲ್ಲಿ ಆಡುತ್ತಿದ್ದ ಬುಧಿಸಾಗರ್ ಆಯ್ಕೆಗಾರ ಅವಕೃಪೆಗೆ ಒಳಗಾಗದೆ ಇರುತ್ತಿದ್ದರೆ ೧೯೮೩ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಕಿರ್ಮಾನಿ ಪ್ರವೇಶ ಅಸಾಧ್ಯವಾಗಿರುತ್ತಿತ್ತು. ಅಂತೂ ಭಾರತೀಯ ಕ್ರಿಕೆಟ್ ತಂಡ ಕೆಲ ಅವಿವೇಕಿಗಳ ದೆಸೆಯಿಂದ ಓರ್ವ ಅದ್ಭುತ ಆಟಗಾರನನ್ನುಉ ಕಳೆದುಕೊಂಡಂತಾಗಿತ್ತು. ಈಗಲೂ ಅವರನ್ನು ನೆನಪಿಸಿಕೊಳ್ಳುವ ಗೋಜಿಗೂ ಕ್ರಿಕೆಟ್ ಮಂಡಳಿ ಹೋಗೋದಿಲ್ಲ. ಆದರೆ ಭಾರತದ ಕ್ರಿಕೆಟ್ ಇತಿಹಾಸ ಅವರನ್ನು ಯಾವತ್ತಿಗೂಊ ಮರೆಯುವುದಿಲ್ಲ!

Tags: #budhisagarkrishnappakunderan#indiancricketer#indianteam

Latest Post

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!
Lifestyle

interesting facts: ತೂಕ ಹೆಚ್ಚಾದ್ರೆ ಚಿಂತೆ ಬಿಡಿ; ಬಂದಿದೆ ಸ್ಲಿಮ್ ಆಗಿಸೋ ಕನ್ನಡಿ!

01/05/2025
rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?
Majja Special

rice pulling scam: ಸಿಡಿಲು ಬಡಿದ ಲೋಹದ ಪಾತ್ರೆಗೆ ಅಂಥಾ ಶಕ್ತಿಯಿರುತ್ತಾ?

01/05/2025
spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!
Majja Special

spa mafia: ಸ್ಪಾಗಳ ಒಡಲಲ್ಲಿ ಬಡಪಾಯಿ ಹೆಣ್ಣುಮಕ್ಕಳ ಛೀತ್ಕಾರ!

30/04/2025
pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!
Majja Special

pahalgam terror attack: ಭಾರತದ ಕಿರೀಟ ಕಾಶ್ಮೀರಕ್ಕೆ ಭಯೋತ್ಪಾದನೆಯ ಕೊಳ್ಳಿ!

30/04/2025
Next Post
kannambadi katte: ಕನ್ನಂಬಾಡಿ ಕಟ್ಟೆ ಕಟ್ಟಿದ ಸಾಹಸಿ ಸರ್ ಎಂ ವಿಶ್ವೇಶ್ವರಯ್ಯ!

kannambadi katte: ಕನ್ನಂಬಾಡಿ ಕಟ್ಟೆ ಕಟ್ಟಿದ ಸಾಹಸಿ ಸರ್ ಎಂ ವಿಶ್ವೇಶ್ವರಯ್ಯ!

  • Contact Form
  • Its Majja Kannada

Powered by Media One Solutions.

No Result
View All Result
  • Home
  • Majja Special
  • Entertainment
  • Lifestyle

Powered by Media One Solutions.