ಭಾರತ ಆಧ್ಯಾತ್ಮಿಕವಾಗಿ ವಿವಿಧತೆ ಹೊಂದಿರುವ, ಅದರಲ್ಲಿಯೂ ಏಕತೆ ಸಾಧಿಸಿರುವ ಅತ್ಯಂತ ಅಪರೂಪದ ದೇಶ. ನಮ್ಮ ಸುತ್ತಮುತ್ತಲಿರುವ ಬಗೆ ಬಗೆಯ ನಂಬಿಕೆಗಳು ನಿಜಕ್ಕೂ ಅಚ್ಚರಿ ಮೂಡಿಸುತ್ತವೆ. ಇಲ್ಲಿ ಬೇರೆ ಬೇರೆ ಧರ್ಮಗಳಿವೆ. ಅವುಗಳೆಗೆಲ್ಲ ಪ್ರತ್ಯೇಕವಾದ ಆಚಾರ ವಿಚಾರಗಳಿದ್ದಾವೆ. ಆದರೆ, ಅದರ ಒಟ್ಟಾರೆ ಭಾವ ಒಂದಕ್ಕೊಂದು ಪೂರಕವಾಗಿರೋದರಿಂದಲೇ ಭಾರತದ ಆಧ್ಯಾತ್ಮಿಕ ಪ್ರಭೆ ವಿಶ್ವವೇ ತಿರುಗಿ ನೋಡುವಂತೆ ಮಿರುಗುತ್ತಿದೆ. ಒಂದಷ್ಟು ಎಡರು ತೊಡರುಗಳು, ವಿರೋಧಾಭಾಸಗಳಿದ್ದರೂ ಭಾರತವೆಂಬುದು ವಿಶ್ವದ ಮತ್ಯಾವ ದೇಶದಲ್ಲೂ ಕಾಣ ಸಿಗದಂಥಾ ವಿಶಿಷ್ಟವಾದ ಧಾರ್ಮಿಕ ವಾತಾವರಣ ಈ ದೇಶದಲ್ಲಿದೆ. ವಿಶೇಷವೆಂದರೆ, ಇಲ್ಲಿ ಕಾಲ ಕಾಲಕ್ಕೆ ಇಂಥಾ ಧಾರ್ಮಿಕ ಆಚರಣೆಯ ಹೆಸರಲ್ಲಿ ನಡೆಯುತ್ತಿದ್ದ ಕಂದಾಚಾರಗಳನ್ನು ಪ್ರಶ್ನಿಸುವ ಮನಃಸ್ಥಿತಿಗ್ಳಿದ್ದಾವೆ. ಈ ಕಾರಣದಿಂದಲೇ ಕಾಲ ಕಾಲಕ್ಕೆ ಇಲ್ಲಿದ ಅಧ್ಯಾತ್ಮ ಜಗತ್ತು ಮೌಢ್ಯಗಳನ್ನು ಕಳಚಿಕೊಳ್ಳುತ್ತಾ ಸಾಗಿ ಬಂದಿದೆ.
ಭಾರತೀಯರಂತೂ ಕಣ್ಣು ಬಿಡುತ್ತಲೇ ಧಾರ್ಮಿಕ ವಾತಾವರಣವನ್ನೇ ಉಸಿರಾಡಲ.ಆರಂಭಿಸುತ್ತಾರೆ. ಈ ಕಾರಣದಿಂದಲೇ ಇಲ್ಲಿ ನಂಬಿಕೆಗಳು ತೀವ್ರಗೊಂಡಿವೆ. ಹಾಗಂತ ಈ ಧಾರ್ಮಿಕತೆ, ಆಧ್ಯಾತ್ಮದ ಸುತ್ತಾ ಅನೇಕಾರು ಚರ್ಚೆಗಳು ನಡೆಯುತ್ತಿವೆ. ಚರ್ಚೆ ನಡೆದಷ್ಟೂ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಅಂಥಾ ಪ್ರಶ್ನೆಗಳಿಗೆ ಉತ್ತರ ಹುಡುಕುವ ಯಾನವೇ ಆಧ್ಯಾತ್ಮಿಕ ವಾತಾವರಣಕ್ಕೊಂದು ಚಲನೆಯ ಸ್ಥಿತಿ ದಕ್ಕಿದೆ. ಇಲ್ಲಿನ ಧಾರ್ಮಿಕತೆಯ ಬಗ್ಗೆ ಯಾರೂ ಕೂಡಾ ಇದಮಿತಂ ಅನ್ನುವಂಥಾ ವಿಶ್ಲೇಷಣೆಗಳನ್ನು ಮಾಡಲಾಗೋದಿಲ್ಲ. ಅದು ಒಂದು ವಿಶ್ಲೇಷಣೆಯ ಪರಿಧಿಗೆ ಇಡಿಯಾಗಿ ದಕ್ಕುವಂಥಾದ್ದೂ ಅಲ್ಲ. ಅದು ಸಿಕ್ಕು ಬಿಡಿಸಿದಷ್ಟೂ ಜಟಿಲವಾಗುವ, ನಿರಾಳಚಿತ್ತದಿಂದ ದಿಟ್ಟಿಸಿದಷ್ಟೂ ಆಪ್ತವಾಗುವ ಮಾಯೆ. ಈವತ್ತಿನ ಒಂದಷ್ಟು ತೋರಿಕೆಯ ಭಕ್ತಿಯಾಚೆಗೆ ನಿಂತುಜಜ ಸುಮ್ಮನೆ ಧ್ಯಾನಿಸಿದರೆ ಅಧ್ಯಾತ್ಮದ ಅಸಲೀ ಸುಖ ಮೈಮನಗಳನ್ನು ಆವರಿಸಿಕೊಳ್ಳುತ್ತದೆ.
ನಾವಂದುಕೊಂಡಿದ್ದು ಅಸಲಿಯಲ್ಲ!
ಭಾರತದ ಆಧ್ಯಾತ್ಮಿಕತೆಗೆ ಅನೇಕ ಕೊಂಬೆ ಕೋವೆಗಳಿದ್ದಾವೆ. ಅಷ್ಟಕ್ಕೂ ಭಾರತದಲ್ಲಿ ತತ್ತ್ವಶಾಸ್ತ್ರವನ್ನು ಮುನ್ನೆಲೆಗೆ ತಂದಿರೋದು ಜ್ಞಾನಕ್ಕಾಗಿಯಲ್ಲ. ಮನುಷ್ಯ ಮಾತ್ರರು ಈ ಬದುಕಿನಲ್ಲಿ ಸಾಧಿಸಬಹುದಾದ ಅತ್ಯುನ್ನತ ಗುರಿಯನ್ನು ತಲುಪುವುದಕ್ಕಾಗಿಯೇ ಈ ಮಾರ್ಗವನ್ನು ಕಂಡುಕೊಳ್ಳಲಾಗಿದೆ. ಇಲ್ಲಿ ತತ್ತ್ವಶಾಸ್ತ್ರ ಅನ್ನೋದು ಆಶ್ಚರ್ಯ, ಕುತೂಹಲಗಳಿಂದಾಗಿಯೂ ರೂಪುಗೊಂಡಿರುವಂಥಾದ್ದಲ್ಲ. ಅದು ಬದುಕನ್ನು ಸುಂದರಗೊಳಿಸಿಕೊಳ್ಳುವ ಘನ ಉದ್ದೇಶ ಹೊಂದಿದೆ.. ತತ್ತ್ವಾನುಸಂಧಾನ ಎಂಬುದು ಕೇವಲ ಬೌದ್ಧಿಕ ಜಿಜ್ಞಾಸೆಗೆ ಮಾತ್ರವೇ ಸೀಮಿತವಾಗುಳಿದಿಲ್ಲ. ಅದು ಕೇವಲ ಆಚರಣೆಗೆ ಸೀಮನಿತವಾದ ವಿಚಾರವೂ ಅಲ್ಲ. ಭಾರತೀಯ ಅಧ್ಯಾತ್ಮಿಕ ಚಿಂತಕರ ಮನಸ್ಸನ್ನು ಬದುಕಿನ ಮಿತಿಗಳು ಬಹುವಾಗಿನ ಕಾಡಿದ್ದವು. ಇವುಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಸಲುವಾಗಿಯೇ ತತ್ವಶಾಸ್ತ್ರ ಎಂಬುದು ಜೀವ ಪಡೆದುಕೊಂಡಿದೆ.
ಹೀಗೆ ಹಬ್ಬಿಕೊಂಡಿರುವ ತತ್ವಶಾಸ್ತ್ರದ ಪಾಲಿಗೆ ಆಧ್ಯಾತ್ಮ ತಾಯಿ ಬೇರಿದ್ದಂತೆ. ಆಧ್ಯಾತ್ಮ ಎಂದರೇನು ಎಂಬ ಪ್ರಶ್ನೆ ಅನಾದಿ ಕಾಲದಿಂದಲೂ ಎಲ್ಲರನ್ನೂ ಕಾಡಿದ, ಈ ಕ್ಷಣವೂ ಕಾಡುತ್ತಿರುವ ಪ್ರಶ್ನೆಯಾಗಿದೆ. ಕೆಲವರಿಗೆ ಆಧ್ಯಾತ್ಮವೆಂದರೆ ಬರಿಗಣ್ಣ ನಿಲುಕಿಗೆ ಸಿಗದ ಅದ್ಭುತ ಜಗತ್ತು. ಅಲ್ಲಿನ ಪ್ರಧಾನ ಕೇಂದ್ರದಲ್ಲಿ ದೇವರೆಂಬ ಶಕ್ತಿಯ ಸೆಳವಿರುತ್ತದೆ. ಇನ್ನು ಕೆಲವರ ಪಾಲಿಗೆ ಸ್ವತಃ ದಕ್ಕಿದ ಅನೇಕ ಅತೀಂದ್ರಿಯವೆಂದುಕೊಂಡ ವಿಚಿತ್ರ ಅನುಭವಗಳೇ ಆಧ್ಯಾತ್ಮ. ಅವರು ನೀರಿನ ಮೇಲೆ ನಡೆಯುತ್ತಾರೆ. ಸಮಾಧಿ ಸ್ಥಿತಿಯಲ್ಲಿ ಕೂರುತ್ತಾರೆ. ಕೆಲ ಮಂದಿ ಇದನ್ನೆ ಕಸುಬಾಗಿಸಿಕೊಂಡಿದ್ದಾರೆ. ಇಂಥಾದ್ದರಿಂದಾಗಿಯೇ ಆಧ್ಯಾತ್ಮದ ಅಸಲೀ ಸ್ವಾದವೇ ಅನೇಕರ ಪಾಲಿಗೆ ಸಿಗದೆ ಉಳಿದುಕೊಳ್ಳುತ್ತೆ. ಯಾಕೆಂದರೆ, ಆ ಮಂದಿಯಲ್ಲಿರೋದು ಜನರನ್ನು ಮರುಳು ಮಾಡೋ ಉದ್ದೇಶವಷ್ಟೆ. ಈ ಕಾರಣದಿಂದಲೇ ಅವರು ತಮ್ಮ ಭಕ್ತರ ಸಲುವಾಗಿ ದೇವರನ್ನು ಭೇಟಿ ಮಾಡುತ್ತಾರೆ. ಅವರಿಗೆ ಐಹಿಕ ಸುಖಭೋಗಗಳನ್ನು ಕರುಣಿಸೆಂದು ದೇವರ ಮನವೊಲಿಸುತ್ತಾರೆ. ಅದಕ್ಕಾಗಿ ಬಡಪಾಯಿ ಭಕ್ತರಿಂದ ಸರಿಯಾದ ಸಂಭಾವನೆಯನ್ನೂ ಕೀಳುತ್ತಾರೆ.
ಹೀಗೆ ಅಂಗೈಲಿ ಆಕಾಶ ತೋರಿಸೋ ಮಂದಿಯ ಕಾರಣದಿಂದಲೇ ನಮ್ಮ ದೇಶದ ಘನವಾದ ಆಧ್ಯಾತ್ಮಿಕ ಶಕ್ತಿ ಪ್ರಜ್ಞಾವಂತರ ಪಾಲಿಗೆ ಬೇರೆಯದ್ದೇ ರೀತಿಯಲ್ಲಿ ಗೋಚರಿಸುತ್ತಿದೆ. ಈ ಕಾರಣದಿಂದಲೇ ಅಮಾಯಕ ಭಕ್ತರಿಗೆ ಅವರು ಕೊಡುವ ಕಾಸಿಗೆ ತಕ್ಕಂತೆ ಕಜ್ಜಾಯ ಕಲ್ಪಿಸುವ ಕೆಲಸವೂ ಚಾಲ್ತಿಯಲ್ಲಿದೆ. ಇನ್ನುಳಿದಂತೆ ಪಾಪಗಳನ್ನು ಮಾಡಿದ್ದರೂ ಉಳ್ಳ ಮಂದಿ ಸುರಿಯೋ ಹಣಕ್ಕೆ ತಕ್ಕ ಹಾಗೆ ಅವರಿಗೆಲ್ಲ ದೇವರ ಕರುಣೆ ದಕ್ಕುವ ಭ್ರಮೆ ಹುಟ್ಟಿಸುವ ದಂಧೆಯೂ ನಡೆಯುತ್ತಿದೆ. ಇನ್ನೂ ಕೆಲ ಮಂದಿದೇವರನ್ನು ಭಜಿಸುತ್ತ ಭಜಿಸುತ್ತ ಅವರಲ್ಲಿಯೇ ಲೀನವಾಗುವ ಇರಾದೆ ಹೊಂದಿರುತ್ತಾರೆ. ಹೀಗೆ ಧ್ಯಾನಸ್ಥರಾದವರ ಪಾಲಿಗೆ ಎಲ್ಲವೂ ಮರೆತು ಹೋಗುತ್ತದೆ. ಇದೇ ರೀತಿ ಮುಂದುವರೆದರೆ ಮಾನಸಿಕ ಖಿನ್ನತೆಗೆ ಒಳಗಾಗುವ ಸಾಧ್ಯತೆಗಳಿದ್ದಾವೆ. ನಿಮಗೆ ಅಚ್ಚರಿಯಾದೀತೇನೋ… ಮೇಲೆ ಹೇಳಿದ ಯಾವುದೂ ಕೂಡಾ ಅಸಲಿ ಆಧ್ಯಾತ್ಮ ಜ್ಞಾನವಲ್ಲ. ಅವರವರ ದೃಷ್ಟಿಯಲ್ಲಿ ಒಂದು ಹಾದಿ ಸರಿಯೆನ್ನಿಸಿ ಅದರ ಪಯಣವೇ ನೈಜವೆಂಬಂತೆ ಕಾಣುತ್ತೆ. ಆದರೆ ಅದೂ ಕೂಡಾ ಅಸಲಿಯಲ್ಲ!
ಪೂಜೆ ಅಂದ್ರೆ ಅಧ್ಯಾತ್ಮವಾ?
ಈಗ ಆಧ್ಯಾತ್ಮ, ಧಾರ್ಮಿಕತೆಗಳ ನಡುವೆ ಅಸಲಿ ಯಾವುದು? ನೈಜವಾದ ಆಧ್ಯಾತ್ಮ ಯಾವುದೆಂಬುದೇ ಗೊಂದಲವಾಗಿ ಬಿಟ್ಟಿದೆ. ಕೆಲ ಪ್ರಾಜ್ಞರು ಇದನ್ನು ನಿವಾರಿಸುವಂಥಾ ಒಂದಷ್ಟು ಸಾಕ್ಷಾತ್ಕಾರಗಳನ್ನು ಕಂಡುಕೊಂಡಿದ್ದಾರೆ. ಧಾರ್ಮಿಕ ಸ್ಥಳಗಳಲ್ಲಿ ಪೂಜೆ ಮಾಡುವುದು ಅಧ್ಯಾತ್ಮವಾ ಅಂತ ನೋಡಿದರೆ, ಜ್ಞಾನಿಗಳ ಕಡೆಯಿಂದ ಅಲ್ಲ ಎಂಬಂಥಾ ಉತ್ತರ ದಕ್ಕುತ್ತೆ. ಆ ನಿಟ್ಟಿನಲ್ಲಿ ನೋಡ ಹೋದರೆ, ಆಧ್ಯಾತ್ಮವೇ ಬೇರೆ, ಭಕ್ತಿಯೇ ಬೇರೆ ಎಂಬ ಅಚ್ಚರಿಯ ಸಂಗತಿ ಜಾಹೀರಾಗುತ್ತೆ. ಭಕ್ತಿಯಲ್ಲಿ ಮೇಳೈಸುವ ಉನ್ಮಾದ ಕೂಡಾ ಭ್ರಮೆ. ನಿಖರವಾಗಿ ಹೇಳಬೇಕೆಂದರೆ, ನಾವು ಇದುವರೆಗೆ ಆಚರಿಸಿಕೊಂಡು ನಮ್ಮ ಪದ್ದತಿಗಳು, ಆಚಾರ-ವಿಚಾರಗಳು, ಪೂಜೆಯ ಪದ್ಧತಿಗಳು ಆಧ್ಯಾತ್ಮಿಕತೆಯಲ್ಲ ಅಂದರೆ ಅಚ್ಚರಿಯಾಗಬಹುದೇನೋ… ಯಾಕೆಂದರೆ, ಅಧ್ಯಾತ್ಮದ ನಿಜವಾದ ಅರ್ಥವೇ ಬೇರೆಯದ್ದಿದೆ. ಅದು ನಮ್ಮ ಅಂತರಂಗದಲ್ಲಿ ನಡೆಯುವ ಬದಲಾವಣೆ, ನಮ್ಮ ಅಂತರಂಗದಲ್ಲಿಯ ನಮ್ಮ ಅನುಭವ, ಅಂತರ್ಮುಖಿ ಅನ್ವೇಷಣೆ ಮತ್ತು ಅದರಿಂದ ಸಾಧ್ಯವಾಗಬಲ್ಲ ಅನ್ವೇಷಣೆಯೇ ನಿಜವಾದ ಭಕ್ತಿ!
ನಮ್ಮ ಆಧ್ಯಾತ್ಮಿಕ ವಲಯದಲ್ಲಿ ನಾನಾ ವಿಚಾರಧಾರೆಗಳಿದ್ದಾವೆ. ಸಾಕ್ಷು ಪಂಥಗಳೂ ಇದ್ದಾವೆ. ಅವೆಲ್ಲವೂ ಆಧ್ಯಾತ್ಮಿಕ ಸಾಧನೆಯ ಹೊಸಾ ಹೊಳಹುಗಳನ್ನು ನೀಡುತ್ತವೆ. ಅದರಲ್ಲಿ ಸೇರಿಕೊಳ್ಳುವ ಸಾಂಖ್ಯ ದರ್ಶನ ಎಂಬುದು ಭಾರತೀಯ ಆಧ್ಯಾತ್ಮಿಕ ಸಿದ್ಧಾಂತಗಳ ಬಹುಮುಖ್ಯವಾದೊಂದು ಪಂಥವಾಗಿ ಗುರ್ತಿಸಿಕೊಂಡಿದೆ. ಇದು ಅತ್ಯಂತ ಪ್ರಾಚೀನ ಹಾಗೂ ಸಂಪ್ರದಾಯಬದ್ಧ ಸಿದ್ಧಾಂತವೆಂದು ನಂಬಲಾಗಿದೆ. ಈ ಸಿದ್ಧಾಂತದ ಪಂಥ ಪುರುಷ ಹಾಗೂ ಪ್ರಕೃತಿಯ ಸಂಯೋಗವನ್ನು ಎತ್ತಿ ಹಿಡಿಯುತ್ತದೆ. ಸಾಂಖ್ಯ ದರ್ಶನದಲ್ಲಿ ನಿನ್ನನ್ನು ನೀನು ಅರಿ ಅನ್ನೋದೇ ಬೀಜಮಂತ್ರ. ಅದನ್ನೇ ಆ ನಂತರದ ದಾರ್ಶನಿಕರೂ ಕೂಡಾ ಸಾರಿ ಸಾರಿ ಹೇಳುತ್ತಾ ಬಂದಿದ್ದಾರೆ. ಸಾಂಖ್ಯ ದರ್ಶನದ ಪ್ರಕಾರ ಮನುಷ್ಯನಲ್ಲಿ ಐದು ಆಧ್ಯಾತ್ಮ ಕೋಶಗಳನ್ನು ಗುರುತಿಸಲಾಗುತ್ತದೆ. ಅನ್ನಮಯ ಕೋಶ ಅದರಲ್ಲಿ ಮೊದಲನೆಯದ್ದು.
ಈ ವಿಧಾನದಲ್ಲಿ ಮಾನವೀಯ ಬಯಕೆ, ಪ್ರೇರಣೆಗಳ ಪ್ರಾಣಮಯ ಕೋಶವಿದೆ. ಈ ಕೋಶದೊಳಗೆ ಇಂದ್ರಿಯ ಗ್ರಹಿಕೆಗಳ ಮನಸ್ಸಿಗೆ ಸಂಬಂಧಿಸಿದ ಮನೋಮಯ ಕೋಶ, ಇನ್ನೂ ಒಳಗೆ ಅತ್ಯುನ್ನತ ಮಟ್ಟದ ಅಂತರ್ಬೊಧೆ ಇರುತ್ತದೆ. ಅದುವೇ ಮುಂದುವರೆದು ಬುದ್ಧಿಶಕ್ತಿಗಳ, ವಿಶ್ವಸಮಾನತೆಯ ಆದ್ಯಾತ್ಮಿಕ ವಲಯದ ವಿಜ್ಞಾನಮಯ ಕೋಶ ಇರುತ್ತದೆ. ಇವೆಲ್ಲವುಗಳ ಮುಖ್ಯ ಕೇಂದ್ರದಲ್ಲಿ ಪರಿಪೂರ್ಣ ಆನಂದದ ಬೆಳಕು ನೀಡುವ ಆನಂದಮಯ ಕೋಶ ಸ್ಥಾಪಿತವಾಗಿರುತ್ತದೆ. ಜೀವನನ್ನು ಬಂಧನದಲ್ಲಿ ಹಾಗೂ ಅಜ್ಞಾನದಲ್ಲಿ ಇಟ್ಟಿರುವ ಐದು ಪದರಗಳಾದ ಪಂಚಕೋಶಗಳ ಬಗ್ಗೆ ಹೇಳುತ್ತಾ ಅವೂ ಸಹಾ ನಾನು ಎಂಬ ಆತ್ಮವಲ್ಲ ಅಂತಲೇ ಶಂಕರರು ಪ್ರತಿಪಾದಿಸುತ್ತಾರೆ. ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದ ಮಯ ಎಂಬ ಕೋಶಗಳನ್ನು ಆ ಐದು ಪದರಗಳಾಗಿ ಸಾಂಖ್ಯ ಪಂಥ ಗುರುತಿಸುತ್ತೆ.
ಈ ಕೋಶಗಳ ಬಗ್ಗೆಯೂ ಕೂಡಾ ಈ ಪಂಥದಲ್ಲಿ ವಿಸ್ತಾರವಾದ ವಿವರಣೆಗಳಿದ್ದಾವೆ. ಅನ್ನಮಯ ಕೋಶ ಸ್ಥೂಲ ದೇಹಕ್ಕೆ ಸಂಬಂಧಿಸಿದ್ದಾಗಿ ಗುರುತಿಸಲಾಗಿದೆ. ಅನ್ನ ಅನ್ನೋದು ಸ್ಥೂಲ ವಸ್ತುವನ್ನು ಸೂಚಿಸುತ್ತೆ. ಈ ಕಾರಣದಿಂದಲೇ ಸ್ಥೂಲ ದೇಹದಲ್ಲಿನ ಜೀವ ಅನ್ನದಿಂದ ಜೀವಿಸುತ್ತೆ. ಇದರಿಂದಾಗಿ ಅನ್ನದ ಮೇಲೆಯೇ ಅವಲಂಬಿತವಾಗಿದೆ. ಈ ಮೂಲಕ ಉಸಿರಾಡೋ ಜೀವ ಹುಟ್ಟು ಸಾವು, ಅನಾರೋಗ್ಯ, ಅಂಗವೈಕಲ್ಯ ಸೇರಿದಂತೆ ಎಲ್ಲ ಘಟ್ಟಗಳನ್ನೂ ದಾಟಿಕೊಳ್ಳುತ್ತೆ. ಪ್ರಾಣಮಯ ಕೋಶ ಪಂಚವಾಯುಗಳಿಂದ, ಪಂಚ ಕರ್ಮೇಂದ್ರಿಯಗಳಿಂದ ರೂಪುಗೊಂಡಿರುತ್ತದೆ.
ಈ ಹಿಂದೆಯೇ ಪಂಚವಾಯುಗಳಾಗಲೀ, ಕರ್ಮೇಂದ್ರಿಯಗಳಾಗಲೀ ನಾನು ಎನ್ನುವ ಆತ್ಮವಲ್ಲ ಎಂದು ಹೇಳಿದ ಮೇಲೆ ಇವುಗಳಿಂದ ಮಾಡಲ್ಪಟ್ಟ ಪ್ರಾಣಮಯ ಕೋಶವೂ ಕೂಡ ಆತ್ಮವಲ್ಲ. ಇನ್ನು, ಮನೋಮಯ ಕೋಶ ಮನಸ್ಸು ಮತ್ತು ಜ್ಞಾನೇಂದ್ರಿಯಗಳಿಗೆ ಸಂಬಂಧಿಸಿದ್ದು. ವಿಜ್ಞಾನಮಯ ಕೋಶ ಬುದ್ಧಿ ಮತ್ತು ಜ್ಞಾನೇಂದ್ರಿಯಗಳಿಗೆ ಸಂಬಂಧಿಸಿದೆ. ಮನೋಮಯ ಕೋಶ ಮತ್ತು ವಿಜ್ಞಾನಮಯ ಕೋಶಗಳು ಸೂಕ್ಷ್ಮ ದೇಹವೂ ಹೌದು. ಪ್ರಾಣಮಯ ಮತ್ತು ಮನೋಮಯ ಕೋಶಗಳು ಭಯ, ದುಃಖ, ರೋಗ, ಮುಂತಾದವುಗಳಿಗಷ್ಟೇ ಸೀಮಿತವಾಗಿರುವಂಥಾದ್ದು. ವಿಜ್ಞಾನಮಯ ಕೋಶದಲ್ಲಿ ಜೀವ ಬಿಸಿ, ತಂಪು, ದುಃಖ, ಭಯ ಮುಂತಾದವುಗಳಿಂದ ಮುಕ್ತವಾಗಿದ್ದರೂ ಕೂಡಾ ಜ್ಞಾನೇಂದ್ರಿಯಗಳಲ್ಲಿ ಸೂಕ್ಷ್ಮ ಅಸ್ತಿತ್ವದ ಬಂಧನ ಇದ್ದೇ ಇರುತ್ತೆ. ಆ ಬಂಧನವನ್ನೂ ಮೀರಿ ಮೇಲೇರಲು ಜೀವಿಗಳಿಗೆ ಸಾಧ್ಯವಿಲ್ಲ. ಇನ್ನುಳಿದಂತೆ ಅನಂದಮಯ ಕೋಶ ಕೂಡಾ ಶರೀರ ಮತ್ತದು ಎಲ್ಲಾ ಕರ್ಮಗಳ ದಾಸ್ತಾನು ಜಾಗ.
ಆಧ್ಯಾತ್ಮವೆಂದರೆ…
ಹಾಗಾದರೆ ಇಷ್ಟೆಲ್ಲ ಪಂಥಗಳು, ವಾದಗಳು, ಸಿದ್ಧಾಂತಗ್ಳಾಚೆಗೆ ಅಸಲೀ ಆಧ್ಯಾತ್ಮವೆಂದರೇನು? ಅಂತೊಂದು ಪ್ರಶ್ನೆ ಗಹನವಾಗಿ ಕಾಡುತ್ತೆ? ಅದು ಗಂಭೀರವಾದದ್ದೂ ಹೌದು. ಆಧ್ಯಾತ್ಮ ಎಂದರೆ ನಮ್ಮ ನಮ್ಮ ಮನಸ್ಸನ್ನು ನಿಗ್ರಹಿಸುವುದು. ನಿಖರವಾಗಿ ಹೇಳಬೇಕೆಂದರೆ, ಆಧ್ಯಾತ್ಮ ಎಂಬುದು ಪ್ರೀತಿ, ಆಧ್ಯಾತ್ಮ ಎಂದರೆ ಮುಗ್ಧತೆ, ಆಧ್ಯಾತ್ಮ ಎಂದರೆ ಅನುಭವಿಸುವಿಕೆ. ಮತ್ತು ಆಧ್ಯಾತ್ಮವೆಂದರೆ ಹುಡುಕು. ಮನಸ್ಸನ್ನು ನಿಗ್ರಹಿಸಿ ಸಮಾಜದಲ್ಲಿ ಸಕಲ ಜೀವಿಗಳಲ್ಲೂ ಸಹಬಾಳ್ವೆ ನಡೆಸುವುದೇ ಆಧ್ಯಾತ್ಮದ ಮೊದಲ ಹಂತ. ನಿಷ್ಕಳಂಕ ಪ್ರೀತಿಯಲ್ಲಿ ಜೀವನ ಸಾಗಿಸುವುದೇ ನಿಜವಾದ ಆಧ್ಯಾತ್ಮವೆಂಬುದನ್ನು ಪ್ರಾಜ್ಞರು ಕಂಡುಕೊಂಡಿದ್ದಾರೆ. ತಾಯಿ ಮಗುವಿನ ಪ್ರೀತಿ ಅದಕ್ಕೊಂದು ತಾಜಾ ಉದಾಹರಣೆ. ಮಗುವಿನ ನಗುವಿನಲ್ಲಿರುವ ಮುಗ್ದತೆ. ತಾಯಿಯ ಎದೆ ಹಾಲು ಕುಡಿಯುವ ಮಗು ತನಗೆ ಗೊತ್ತಿಲ್ಲದಂತೆಯೇ ಓರ್ವ ತಾಯಿಯು ಪರಮಾನಂದ ಪಡೆದುಕೊಳ್ಳುತ್ತಾ ತನ್ನಲ್ಲಿ ತಾನು ಕಳೆದುಹೋಗುವ ಸ್ಥಿತಿಯಿದೆಯಲ್ಲಾ? ಆಧ್ಯಾತ್ಮದ ಅಸಲಿ ಅನುಭೂತಿಯೂ ಅಂಥಾದ್ದೇ. ತಂದೆತಾಯಿ, ಬಂಧು ಬಾಂಧವರ ನಡುವಿನ ತಟವಟಗಳಿಲ್ಲದ ಅನುಬಂಧವೂ ಆಧ್ಯಾತ್ಮವೇ.
ಈ ಆಧ್ಯಾತ್ಮಕ್ಕೆ ಸಂಬಂಧಿಸಿದ ಬಹುತೇಕ ಪ್ರಶ್ನೆಗಳು ಮೇಲುನೋಟಕ್ಕೆ ಸರಳವಾಗಿ ಕಾಣಿಸುತ್ತವೆ. ಅದರೆ ಅದಕ್ಕೆ ದಕ್ಕಬಹುದಾದ ಉತ್ತರಗಳು ಮಾತ್ರ ಅಷ್ಟೇ ಸಂಕೀರ್ಣವಾಗಿರುತ್ತದೆ. ಭೂಮಿ ಆಕಾಶಗಳ ನಡುವೆ ಅಗೋಚರವಾಗಿ ಹಬ್ಬಿಕೊಂಡಿರುವ ಗಾಳಿಯ ನಾನಾ ದಿಕ್ಕುಗಳ ಸೋಕುವಿಕೆಯೇ ಆಧ್ಯಾತ್ಮ. ನವಮಾಸ ಗರ್ಭದಲ್ಲಿ ಹೊತ್ತು ಆ ಅವಧಿಯಲ್ಲಿ ಅನುಭವಿಸಿದ ಸಂಕಟ ಸೇರಿದಂತೆ ಎಲ್ಲ ಭಾವಗಳಾಚೆ ದಕ್ಕುವ ತಾಯ್ತನದ ಸುಖ. ಇದೆಲ್ಲವೂ ಒಂದು ಹೆಣ್ಣಿಗೆ ಪ್ರಕೃತಿ ನೀಡಿದ ಆಧ್ಯಾತ್ಮ. ನಮ್ಮ ಧರ್ಮದಲ್ಲಿ ಆಧ್ಯಾತ್ಮದ ಆರಂಭ ಬಿಂದು ಮನುಷ್ಯನೇ ಹೊರತು ದೇವರಲ್ಲ ಅಂತಲೂ ಹೇಳಲಾಗುತ್ತದೆ. ನಾವು ಯಾರಿಗೂ ಕೆಡುಕಾಗದಂತೆ ಪ್ರಕೃತಿಯಲ್ಲಿ ಬೆರೆತು ಬಾಳುವುದೇ ಆಧ್ಯಾತ್ಮ. ಪ್ರಕೃತಿಯಲ್ಲಿರುವ ನಿಗೂಢಗಳನ್ನು ಪರಾಮಾರ್ಶಿಸಿ ದಾರ್ಶನಿಕ ಅನುಭೂತಿ ದಕ್ಕಿಸಿಕೊಳ್ಳೋದೇ ಆಧ್ಯಾತ್ಮ.
ಹಾಗಂತ ಮೇಲೆ ಹೇಳಿದ್ದಕ್ಕಷ್ಟೇ ಆಧ್ಯಾತ್ಮ ಅಂತೇನಿಲ್ಲ. ಅದಲೀ ಆಧ್ಯಾತ್ಮ ಎಂಬುದು ವಿಶಾಲ ಹರವು ಹೊಂದಿರೋ ಮಾಯೆ. ಆಧ್ಯಾತ್ಮ ಮುಖ್ಯವಾಗಿ ಮಾನವನ ಪಾಲಿಗೆ ದೇಹ, ಮನಸ್ಸು, ಬುದ್ಧಿಶಕ್ತಿಗಳ ಆಯಾಮಗಳನ್ನು ಮೀರಿದ ವ್ಯಾಪ್ತಿ ಹೊಂದಿರೋದರ ಸಂಕೇತ. ಸೃಜನಶೀಲತೆ, ಕಲ್ಪನಾಶೀಲತೆಯನ್ನು ಮೀರುವ ಅಪಾರ ಸಾಧ್ಯತೆ ಮನುಷ್ಯನಿಗಿದೆ. ಮೊದಲು ನಿನ್ನ ಅಂತರ್ಬೋಧೆಯಲ್ಲಿ ವಿಶೇಷವಾದ ಶಕ್ತಿಯನ್ನು ಹುಡುಕು. ಯಾವುದೇ ಗುಡಿಗುಂಡಾರದಲ್ಲಿ ಆಧ್ಯಾತ್ಮವನ್ನು ಹುಡುಕಬೇಡ ಎಂದು ಶಂಕರ ಭಗವತ್ಪಾದಾಚಾರ್ಯರು ಹೇಳಿದ್ದಾರೆ. ಅವರು ಶಿವೋsಹಂ ಎಂದರೆ ನಾನೇ ಶಿವ ಎಂದಿದ್ದಾರೆ. ಈಶ್ವರ ಪ್ರಣಿಧಾನಾತ್ ವಾ ಎಂದಿದ್ದಾರೆ ಪತಂಜಲಿ ಮಹರ್ಷಿಗಳು. ಮನುಷ್ಯಕೇಂದ್ರಿತ ಆಧ್ಯಾತ್ಮದ ಗ್ರಹಿಕೆಯನ್ನು ಮೀರಿ ಆ ಮಾಯೆ ಹಬ್ಬಿಕೊಂಡಿದೆ. ಅದರೆಲ್ಲವೂ ಅಪ್ಪಟ ಮಾನವೀಯತೆಯ ಪಸೆ ಹೊಂದಿದೆ!
ಇಂಥಾ ಅಸಲೀ ಆಧ್ಯಾತ್ಮದ ಶೋಧವೆಂಬುದು ಲಾಗಾಯ್ತಿನಿಂದಲೂ ನಡೆಯುತ್ತಾ ಬಂದಿಕದೆ. ಈ ಕ್ಷಣಕ್ಕೂ ಕೂಡಾ ಅದು ಚಾಲ್ತಿಯಲ್ಲಿದೆ. ಕೆಲವು ವಿಚಾರವಂತರ ಮುಖ್ಯ ಸಂದೇಹದಂತೆ ತಾತ್ತ್ವಿಕತೆ, ಆಧ್ಯಾತ್ಮಿಕತೆ ಎಂಬುದು ಬರಿಯ ಶಬ್ದಜಾಲ, ಮೋಸದ ಮಾಯಾಜಾಲ. ಈ ಪ್ರಶ್ನೆ ಭಗವದ್ಗೀತೆಯದೂ ಹೌದು. ಅಧ್ಯಾತ್ಮದ ಒಂದು ಪರಿಕಲ್ಪನೆಯೆಂದರೆ ಅದು ಆತ್ಮ. ಆತ್ಮ ಎಂಬುದು ದೇಹದ ಜೊತೆಗೇ ಇರುವಂಥಾದ್ದು. ಆತ್ಮವನ್ನು ಗ್ರಹಿಸುವ ಇಚ್ಛೆಯುಳ್ಳವನು ದೇಹಭಾವ ಮತ್ತು ಅದನ್ನು ಪ್ರಕಟಿಸುವ ಹಾದಿ ಬಿಟ್ಟು ಆತ್ಮದ ಬಗ್ಗೆ ಏನನ್ನೂ ಅರಿಯಲು ಸಾಧ್ಯವಿಲ್ಲ. ವಾಸ್ತವಿಕತೆಗೆ ಜೈವಿಕ, ಅಜೈವಿಕ ಇತ್ಯಾದಿ ದ್ವಂದ್ವಾತ್ಮಕ ಚಹರೆಗಳಿಲ್ಲ. ಆದ್ದರಿಂದಲೇ ಇರುವುದೆಲ್ಲವನ್ನೂ ಅವು ಇರುವಂತೆ ಮೊದಲು ಸ್ವೀಕರಿಸು; ನಂತರ ಅದಕ್ಕೆ ಅನುಗುಣವಾಗಿ ಕೆಲಸ ಮಾಡು ಎನ್ನುವ ಸೂಚನಾತ್ಮಕ ಲಕ್ಷಣ ಮಾತ್ರ ಅಧ್ಯಾತ್ಮದ ಅಸಲೀ ಅನುಭೂತಿಯಂತೆ ಕಾಣುತ್ತದೆ.
ಈ ಬಗೆಯ ಆಧ್ಯಾತ್ಮಿಕತೆ ಅನುಭವಾತ್ಮಕವೇ ಆಗಿರುವಾಗ ಅದು ಹೇಗೆ ಬರಿಯ ಶಬ್ದಜಾಲ ಆದೀತು? ಮೋಸ ಮಾಡುವ ತಂತ್ರಗಾರಿಕೆ, ವ್ಯೂಹಜಾಲ ಹೇಗೆ ಆದೀತು ಎಂದು ಭಗವದ್ಗೀತೆ ಮರುಪ್ರಶ್ನಿಸುತ್ತದೆ. ಅಣು ತತ್ತ್ವವಾಗಿ ವ್ಯಕ್ತಿಯನ್ನು, ಬೃಹತ್ ತತ್ತ್ವವನ್ನಾಗಿ ವಿಶ್ವವನ್ನೊಳಗೊಂಡ ಬ್ರಹ್ಮಾಂಡವನ್ನು ಕಲ್ಪಿಸಿಕೊಳ್ಳದ ಹೊರತು ಯಾವುದೇ ಕಾರ್ಯಯೋಜನೆ ಅರ್ಥಪೂರ್ಣವಾಗದು ಎಂಬ ವಿಚಾರ ವೈಜ್ಞಾನಿಕವಾಗಿ ಸಾಬೀತಾಗಿದೆ. ಈ ಕಾರಣದಿಂದಲೇ ದೇವರುಯ ದಿಂಡಿರನ್ನು ನಂಬದವರೂ ಕೂಡಾ ಆಧ್ಯಾತ್ಮದ ಸೆಳೆತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಯಾಕೆಂದರೆ, ಅಂತವರು ದೇವರೆಂಬ ಕಲ್ಪನೆಯಾಚೆಗೆ ಮತ್ಯಾವುದೋ ಒಂದು ಶಕ್ತಿ ಈ ಜಗತ್ತನ್ನು ಹತೋಟಿಯಲ್ಲಿಟುಕೊಂಡು ಪೊರೆಯುತ್ತಿದೆ ಅಂತ ನಂಬುತ್ತಾರೆ. ಹಾಗೊಂದು ನಂಬಿಕೆ ಹುಟ್ಟಿಸುವಂಥಾ ಅನುಭೂತಿ ಇದೆಯಲ್ಲಾ? ಸದ್ಯದ ವಾತಾವರಣದಲ್ಲಿ ಅದುವೇ ಯಾವ ಗೊಂದಲಕ್ಕೂ ಎಡೆಯಿಲ್ಲದ ಅಸಲೀ ಅಧ್ಯಾತ್ಮವಾಗಿ ಗೋಚರಿಸುತ್ತದೆ!