ಹೆಚ್ಚೇನಲ್ಲ; ಹದಿನೈದಿಪ್ಪತ್ತು ಅಡಿಯಿಂದ ಕೆಳಕ್ಕೆ ಬಿದ್ದರೂ ಸೊಂಟವೂ ಸೇರಿದಂತೆ, ದೇಹದ ನಾನಾ ಭಾಗದ ಮೂಳೆಗಳು ಮುರಿಯೋ ಸಂಭವವಿದೆ. ತಲೆ ಕೆಳಗಾಗಿ ಬಿದ್ದರಂತೂ ಬದುಕೋದೇ ಡೌಟು. ಇನ್ನು ನೂರಾರು ಅಡಿಯಿಂದ ಬಿದ್ದರಂತೂ ಮೇಲೆದ್ದು ಬರೋ ಸಾಧ್ಯತೆಗಳೇ ಕಡಿಮೆ. ಹಾಗಿದ್ದ ಮೇಲೆ ಸಾವಿರಾರು ಅಡಿಯಿಂದ ಕೆಳಕ್ಕೆ ಬಿದ್ದರೆ ಬದುಕೋದು ಸಾಧ್ಯವೇ? ಇಂಥಾ ಪ್ರಶ್ನೆ ಎದುರಾದ್ರೆ ಸಾರಾಸಗಟಾಗಿ ಸಾಧ್ಯವಿಲ್ಲ ಎಂಬ ಉತ್ತರವೇ ಎದುರುಗೊಳ್ಳುತ್ತೆ. ಆದರೆ ಅದನ್ನು ಸುಳದ್ಳು ಮಾಡುವಂಥಾ ಘಟನೆಯೊಂದು ೧೯೭೦ರ ದಶಕದಲ್ಲಿಯೇ ನಡೆಯಲಾಗಿದೆ. ಅದು ಗಿನ್ನಿಸ್ ರೆಕಾರ್ಡಿನಲ್ಲಿಯೂ ದಾಖಲಾಗಿ ಬಿಟ್ಟಿದೆ!
ಆಕೆ ಗಟ್ಟಿಗಿತ್ತಿ
ಸರ್ಬಿಯಾ ದೇಶದ ಪ್ಲೈಟ್ ಅಟೆಂಡೆಂಟ್ ವೆಸ್ನಾ ವುಲೋವಿಕ್ ಎಂಬ ಗಟ್ಟಿಗಿತ್ತಿ ಹೆಣ್ಣು ಮಗಳು ಈ ಪವಾಡಸದೃಶ ಘಟನೆಯ ಕೇಂದ್ರಬಿಂದು. ಹಲವಾರು ವರ್ಷಗಳಿಂದಲೂ ವಿಮಾನ ಯಾನದ ಬಗ್ಗೆ ಕನಸು ಕಂಡು ಕಡೆಗೂ ಪ್ಲೈಟ್ ಅಟೆಂಡೆಂಟ್ ಆಗಿದ್ದ ಆಕೆ ವಿಮಾನ ಪತನದ ಆಘಾತ ಎದುರಿಸುವಂತಾಗಿತ್ತು. ಗಡಿಬಿಡಿಯಲ್ಲಿ ಪ್ಯಾರಾಚೂಟ್ ಅನ್ನೂ ಹಿಡಿದುಕೊಳ್ಳದೆ ಕ್ರ್ಯಾಶ್ ಆಗಿದ್ದ ವಿಮಾನದಿಂದ ಹಾರಿಕೊಂಡ ಆಕೆ ಮೂವತ್ಮೂರು ಸಾವಿರ ಅಡಿಗಳಷ್ಟು ಎತ್ತರದಿಂದ ಭೂಮಿಗೆ ಬಿದ್ದಿದ್ದಳು. ಈ ಎತ್ತರ ಕೇಳಿದ ಯಾರೇ ಆದರೂ ಆಕೆಯ ಮೂಳೆಗಳೂ ಸಿಗಲಿಕ್ಕಿಲ್ಲ ಎಂಬ ತೀರ್ಮಾನಕ್ಕೆ ಬರಬಹುದು. ಅದಕ್ಕೆ ತದ್ವಿರುದ್ಧ ಎಂಬಂತೆ ಆಕೆ ಬದುಕಿ ಬಂದಿದ್ದಳು!
ಈ ಘಟನೆ ನಡೆದದ್ದು ೧೯೭೨ರ ಜನವರಿ ಇಪ್ಪತ್ತಾರರಂದು. ಜೆಟ್ ಏರ್‌ವೇಸ್‌ನ ವಿಮಾನ ಕೋಪನ್ಹೆಗೆನ್ ವಿಮಾನ ನಿಲ್ದಾಣದಿಂದ ಮಧ್ಯಾನ್ಹ ಮೂರೂವರೆಯ ಹೊತ್ತಿಗೆಲ್ಲ ಟೇಕಾಫ್ ಆಗಿತ್ತು. ಅದಾಗಿ ನಲವತ್ತು ನಿಮಿಷ ಕಳೆಯೋದರೊಳಗಾಗಿ ವಿಮಾನ ಪತನಕ್ಕೀಡಾಗಿತ್ತು. ಕೆಳಕ್ಕೆ ಉದುರುತ್ತಿದ್ದ ವಿಮಾನದಿಂದ ಇಪ್ಪತ್ತೆರಡು ವರ್ಷದ ವೆಸ್ನಾ ವುಲೋವಿಕ್ ಪ್ಯಾರಾಚೂಟ್ ಕೂಡಾ ಇಲ್ಲದೆ ಕೆಳಕ್ಕೆ ಹಾರಿದ್ದಳು. ಆ ಕ್ಷಣ ಆಕೆಯೊಳಗೆ ಹೇಗಾದರೂ ಮಾಡಿ ಬದುಕೋ ಹಂಬಲವಿತ್ತು. ಹಾಗೆ ಮೂವತ್ಮೂರು ಸಾವಿರ ಅಡಿಯಿಂದ ಬರಿಗೈಲಿ ಧುಮುಕಿದ್ದ ವೆಸ್ನಾ ವುಲೋವಿಕ್ ಗಿಡಗಂಟಿಗಳಿರುವ ಪ್ರದೇಶವೊಂದರಲ್ಲಿ ಪ್ರಜ್ಞಾ ಹೀನಳಾಗಿ, ಗಾಯಗೊಂಡು ಬಿದ್ದಿದ್ದಳಂತೆ.
ಅದೃಷ್ಟ ಕೈ ಹಿಡಿದಿತ್ತು
ಒಂದು ವೇಳೆ ಅದೇನಾದರೂ ಜನ ಓಡಾಡುವ ಪ್ರದೇಶ ಅಲ್ಲದೇ ಹೋಗಿದ್ದರೆ ವೆಸ್ನಾ ವುಲೋವಿಕ್‌ಳನ್ನು ಯಾರೂ ಗಮನಿಸುತ್ತಿರಲಿಲ್ಲ. ಆದರೆ ಆಕೆ ಬಿದ್ದ ಕೆಲವೇ ಕ್ಷಣಗಳಲ್ಲಿ ಆ ಹಳ್ಳಿಯ ಬ್ರೂನೋ ಹೋಂಕೆ ಎಂಬಾತ ಅದೇ ದಾರಿಯಲ್ಲಿ ಸಾಗಿ ಬಂದಿದ್ದ. ಅಚಾನಕ್ಕಾಗಿ ವೆಸ್ನಾಳನ್ನ ಕಂಡು ತಡ ಮಾಡದೆ ಆಸ್ಪತ್ರೆಗೆ ದಾಖಲಿಸಿದ್ದ. ಆ ಕ್ಷಣದಲ್ಲಿ ವೈದ್ಯರಿಗೂ ಕೂಡಾ ಆಕೆ ಬದುಕೋ ಸಾಧ್ಯತೆಗಳು ಕಂಡು ಬರಲಿಲ್ಲ. ಆ ಥರದಲ್ಲಿ ವೆಸ್ನಾಳ ದೇಹ ನಜ್ಜುಗುಜ್ಜಾಗಿತ್ತು. ಆದರೆ ಪವಾಡವೆಂಬಂತೆ ಮೆಲ್ಲಗೆ ಆಕೆ ಚೇತರಿಸಿಕೊಳ್ಳಲಾರಂಭಿಸಿದ್ದಳು. ಕಡೆಗೂ ಹದಿನೆಂಟು ತಿಂಗಳ ನಿರಂತರ ಚಿಕಿತ್ಸೆ ಪಡೆದು ಆಕೆ ಗುಣಮುಖಳಾಗಿ ಬದುಕುಳಿದಿದ್ದಳು.
ಅಂದಹಾಗೆ ಆ ವಿಮಾನ ದುರಂತದಲ್ಲಿ ಇಪ್ಪತ್ತೆಂಟು ಮಂದಿ ಪ್ರಯಾಣಿಕರು ಪೈಲೆಟ್ ಸಮೇತ ಅಸು ನೀಗಿದ್ದರು. ಆ ದುರಂತದಲ್ಲಿ ಬದುಕುಳಿದಿದ್ದು ವೆಸ್ನಾ ವುಲೋವಿಕ್ ಮಾತ್ರ. ಆ ನಂತರವೂ ಆಕೆ ಎಂದಿನಂತೆಯೇ ಲವ ಲವಿಕೆಯಿಂದ, ಜೀವನೋತ್ಸಾಹದಿಂದ ಆಕೆ ಬದುಕಿದ್ದಳಂತೆ. ಬದುಕಿನ ಬಗ್ಗೆ ಮಹತ್ವಾಕಾಂಕ್ಷೆ ಹೊಂದಿದ್ದ ವೆಸ್ನಾ ವುಲೋವಿಕ್ ಆ ನಂತರ ಹೊಸಾ ಕಲಿಕೆಗೂ ತೆರೆದುಕೊಂಡಿದ್ದಳಂತೆ. ಅಂಥ ಮಹಾ ದುರಂತದಲ್ಲಿ ಬದುಕುಳಿದು ತುಂಬು ಜೀವನ ನಡೆಸಿದ್ದ ವೆಸ್ನಾ ೨೦೧೬ ಡಿಸೆಂಬರ್ ೨೩ರಂದು ನಿಧನ ಹೊಂದಿದ್ದಾರೆ.
ಬಾತುಕೋಳಿಗಳ ಭಯಾನಕತೆ
ನಮ್ಮ ಸುತ್ತಲೇ ಎಷ್ಟೊಂದು ಪ್ರಾಣಿ ಪಕ್ಷಿಗಳಿರುತ್ತವೆ. ಕೆಲವೊಂದು ಯಾವ ಸನ್ನಿವೇಷದಲ್ಲಿಯೂ ವ್ಯಘ್ರಗೊಳ್ಳದಷ್ಟು ಸಾಧು ಸ್ವಭಾವ ಹೊಂದಿರುತ್ತವೆ. ಆದರೆ ಅವುಗಳ ಜಗತ್ತಿನಲ್ಲಿ ನಡೆಯೋ ಭಯಾನಕ ಪಲ್ಲಟಗಳು ಮಾತ್ರ ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ಗಮನಕ್ಕೆ ಬರುವುದೇ ಇಲ್ಲ. ಅದಕ್ಕೆ ನಮಗೆಲ್ಲ ತುಂಬಾನೇ ಚಿರಪರಿಚಿತವಾಗಿರೋ ಬಾತುಕೋಳಿಗಳೇ ಸೂಕ್ತ ಉದಾಹರಣೆ. ನೋಡಿದರೆ ಮುದ್ದಾಡಬೇಕೆಂಬಷ್ಟು ಮುದ್ದು ಮುದ್ದಾಗಿರೋ ಬಾತುಕೋಳಿಗಳನ್ನ ಸಾಕಷ್ಟು ಮಂದಿ ಸಾಕುತ್ತಾರೆ. ಆದರೆ ಅವರ್‍ಯಾರಿಗೂ ಅವುಗಳ ಕ್ರೌರ್ಯದ ಮುಖ ಕಾಣಿಸೋದೇ ಇಲ್ಲ!
ಬಾತುಕೋಳಿಗಳು ನೀರು ಮತ್ತು ಕೆಸರಲ್ಲಿ ಸಿಗೋ ಹುಳು ಹುಪ್ಪಟೆಗಳನ್ನೇ ತಿಂದು ಬದುಕುತ್ತವೆ. ಮನೆಯಲ್ಲಿ ಸಾಕಿದರೆ ಕಾಳು ಕಡಿಗಳಿಗೇ ತೃಪ್ತವಾಗುತ್ತವೆ. ಆದರೆ ಅವು ಮೇಲು ನೋಟಕ್ಕೆ ಗೋಚರವಾಗುವಷ್ಟು ಸಾಧು ಸ್ವಭಾವದವುಗಳಲ್ಲ. ಹಾಗಂತ ಅವುಗಳೇನು ಕೆರಳೋದಿಲ್ಲ. ಅವುಗಳ ಮೂಡು ಬದಲಾಗಲು ಅರೆಕ್ಷಣ ಸಾಕು. ಕೆಲವೊಂಮ್ಮೆ ಅವು ಬೋರಾದಾಗ ಹದ್ದಿಗಿಂತಲೂ ಕ್ರೂರವಾಗಿ ತನ್ನ ಜೊತೆಗಾರ ಬಾತುಕೊಳಿಗಳ ಮೇಲೆಯೇ ಪ್ರಹಾರ ನಡೆಸುತ್ತವಂತೆ.
ಆ ಕ್ಷಣದಲ್ಲಿ ಅವುಗಳ ಉದ್ದೇಶ ಜೊತೆಗಾರ ಬಾತುಕೋಳಿಯನ್ನು ತಿನ್ನೋದೇ ಆಗಿರುತ್ತೆ. ಅವುಗಳಿಗೆ ಬೋರಾಗಿ ರೊಚ್ಚಿಗೆದ್ದ ಘಳಿಗೆಯಲ್ಲಿ ಬೇರೆ ಪಕ್ಷಿಗಳ ಮೇಲೂ ಅಟ್ಯಾಕ್ ಮಾಡುತ್ತವೆ. ಅವು ಗಾತ್ರದಲ್ಲಿ ಕೊಂಚ ಚಿಕ್ಕವಾದರಂತೂ ಹರಿದು ತಿಂದೇ ಬಿಡುತ್ತವಂತೆ. ಅಂಥಾ ಹೊತ್ತಿನಲ್ಲಿ ಪುಟ್ಟ ಕೋಳಿ ಮರಿಗಳು ಸಿಕ್ಕರಂತೂ ಸೀದಾ ಎತ್ತಿಕೊಂಡು ನೀರಿಗಿಳಿದು ತಿಂದು ಬಿಡುತ್ತವೆ. ಬಹುಶಃ ಬಾತುಕೋಳಿಗಳಿಗೂ ಇಂಥಾ ಕ್ರೂರ ಮುಖವಿದೆ ಎಂಬ ಸತ್ಯ ವರ್ಷಾಂತಗಳಿಂದ ಅವುಗಳನ್ನು ಸಾಕುತ್ತಿರುವವರಿಗೂ ಗೊತ್ತಿರಲಿಕ್ಕಿಲ್ಲ. ನೀವೇನಾದ್ರೂ ಬಾತುಕೋಳಿ ಸಾಗಿದರೆ ಸದಾ ಕಾಲವೂ ಅವುಗಳ ಮೂಡಿನ ಮೇಲೊಂದು ನಿಗಾ ಇಡೋದೊಳ್ಳೆಯದು.
ಸ್ನೇಹಿತರಿಲ್ಲದಿದ್ದರೆ…
ತಂದೆ, ತಾಯಿ, ಅಣ್ಣ ತಮ್ಮ, ಬಂಧು ಬಳಗ ಸೇರಿದಂತೆ ರಕ್ತ ಸಂಬಂಧಿಗಳು ಯಾವತ್ತಿದ್ದರೂ ಆಪ್ತ ಭಾವ ಮೂಡಿಸುತ್ತಾರೆ. ಈ ಜಗತ್ತೆಂಬ ಸಾವಿರ ಜೀವಗಳ ಸಂತೆಯಲ್ಲಿ ನಮ್ಮವರೆಂಬ ಬೆಚ್ಚಗಿನ ಭಾವ ಮೂಡಿಸೋ ಬಂಧಗಳು ಇವೇ. ಇದರಾಚೆಗೆ ನಮ್ಮನ್ನು ರಕ್ತ ಸಂಬಂಧಕ್ಕಿಂತಲೂ ಹೆಚ್ಚಾಗಿ ಹಬ್ಬಿಕೊಳ್ಳೋದು ಸ್ನೇಹ. ಒಡ ಹುಟ್ಟಿದವರು, ಹೆತ್ತವರ ಬಳಿಯೇ ಹೇಳಿಕೊಳ್ಳಲಾರದ ಸಂಗತಿಗಳನ್ನು ನಾವೆಲ್ಲ ಸ್ನೇಹಿತರ ಬಳಿ ಶೇರ್ ಮಾಡಿಕೊಳ್ಳುತ್ತೇವೆ. ಸಣ್ಣಗೊಂದು ಬೇಸರವಾದರೂ, ಮನಸು ಅಂಶಾಂತಿಗೀಡಾದರೂ ನಮಗೆಲ್ಲ ಸ್ನೇಹಿತರ ಹೆಗಲಿಗಾತುಕೊಂಡು ಎಲ್ಲವನ್ನೂ ಹೇಳಿಕೊಂಡರೇನೇ ಸಮಾಧಾನ.
ಈ ಕಾರಣದಿಂದಲೇ ಇಂದಿಗೂ ಸ್ನೇಹಕ್ಕೊಂದು ಪಾವಿತ್ರ್ಯ ಉಳಿದುಕೊಂಡಿದೆ. ನಮ್ಮ ದೇಶದಲ್ಲಿಯಂತೂ ಅದರೊಂದಿಗೆ ಭಾವುಕತೆಯೂ ಬೆರೆತುಕೊಂಡು ಸ್ನೇಹದ ಬಂಧ ಮತ್ತಷ್ಟು ಗಟ್ಟಿಯಾಗಿಯೇ ಬೆಸೆದುಕೊಂಡಿದೆ. ಹಾಗಾದ್ರೆ ಈ ಸ್ನೇಹ ಅನ್ನೋದು ನಮ್ಮ ಭಾವುಕತೆಯ ದೆಸೆಯಿಂದಲೇ ಇಷ್ಟೊಂದು ಆಪ್ಯಾಯವಾಗಿ ಕಾಣುತ್ತಾ ಅಥವಾ ಅದರ ಹಿಂದೇನಾದರೂ ಸೈನ್ಸ್ ಇದೆಯಾ ಅನ್ನೋ ಪ್ರಶ್ನೆ ಕೆಲವರನ್ನಾದ್ರೂ ಕಾಡಿರಬಹುದು. ಈ ಬಗ್ಗೆ ಮಾಡಿರೋ ಅಧ್ಯಯನವೊಂದು ತೀರಾ ಆಘಾತಕರ ವಿಚಾರವೊಂದನ್ನ ಬಯಲು ಮಾಡಿದೆ.
ಹಾರ್ವರ್ಡ್ ವಿಶ್ವ ವಿದ್ಯಾಲಯ ಸ್ನೇಹದ ಬಗ್ಗೆ ಒಂದು ಅಧ್ಯಯನ ನಡೆಸಿದೆ. ಅದರಲ್ಲಿ ಸ್ನೇಹಿತರೇ ಇಲ್ಲದೇ ಹೋದರೆ ಎಂತೆಂಥಾ ಅನಾಹುತಗಳಾಗಬಹುದೆಂಬುದರ ಬಗ್ಗೆ ಆಘಾತಕರ ಅಂಶಗಳನ್ನು ಹೊರ ಹಾಕಿದೆ. ಒಂದು ವೇಳೆ ಸ್ನೇಹಿತರನ್ನೇ ಹೊಂದಿರದೇ ಹೋದರೆ ಅದು ಮನುಷ್ಯನ ದೇಹದ ಮೇಲೆ ಧೂಮಪಾನ ಬೀರುವಂಥಾದ್ದೇ ಪರಿಣಾಮವನ್ನ ಉಂಟು ಮಾಡುತ್ತದೆಯಂತೆ. ಇದರಿಂದಾಗಿ ರಕ್ತ ಹೆಪ್ಪುಗಟ್ಟಿ ಮಾರಣಾಂತಿಕ ಅನಾರೋಗ್ಯಕ್ಕೀಡಾಗಿ ಸಾಯೋ ಸಂದರ್ಭಗಳೂ ಬರಬಹುದಂತೆ.
ಈ ಅಂಶವೇ ಸ್ನೇಹ ಅನ್ನೋದು ಪ್ರತಿಯೊಬ್ಬರ ಬದುಕಿಗೂ ಹೇಗೆ ಮಹತ್ವದ್ದು ಅನ್ನೋದನ್ನ ಸಾರಿ ಹೇಳುವಂತಿದೆ. ಆ ಅಧ್ಯಯನದಲ್ಲಿ ನಿಜಕ್ಕೂ ಸತ್ಯ ಅಡಗಿದೆ. ಸಾಮಾನ್ಯವಾಗಿ ಎಲ್ಲರಿಗೂ ಸಮಸ್ಯೆಗಳು ಬರುತ್ತವೆ. ಅದರಲ್ಲಿ ಕೆಲವು ಯಾರ ಬಳಿಯಾದರೂ ಹೇಳಿಕೊಂಡರೂ ನಿರಾಳವಾಗುತ್ತೆ. ಹಾಗಂತ ಯಾರ್‍ಯಾರ ಬಳಿಯೂ ಹೇಳಿಕೊಳ್ಳಲಾಗೋದಿಲ್ಲ. ಅದಕ್ಕೆ ಸ್ನೇಹಿತರೇ ಬೇಕು. ಒಂದು ಪಕ್ಷ ಸ್ನೇಹಿತರೇ ಇಲ್ಲದೆ ಹೋದರೆ ಯಾರ ಬಳಿಗೂ ಹೇಳಿಕೊಳ್ಳದೆ ಎಲ್ಲ ಬಾಧೆಗಳನ್ನೂ ಒಳಗೇ ಇಟ್ಟುಕೊಂಡು ಕೊರಗಬೇಕಾಗುತ್ತೆ. ಅದುವೇ ನಾನಾ ಅನಾರೋಗ್ಯಕ್ಕೂ ಈಡುಮಾಡುತ್ತೆ. ಹಾಗೆಂದ ಮಾತ್ರಕ್ಕೆ ಎಲ್ಲವನ್ನೂ ಎಲ್ಲ ಸ್ನೇಹಿತರ ಬಳಿಯೂ ಹೇಳಿಕೊಳ್ಳಲಾಗೋದಿಲ್ಲ. ಯಾಕಂದ್ರೆ ಕೆಲವೊಮ್ಮೆ ಸ್ನೇಹಿತರ ರೂಪದಲ್ಲಿ ವಿಷ ಸರ್ಪಗಳೂ ಇರುತ್ತವೆ!
ಮರಗಳಿಗೂ ಚಿಕಿತ್ಸೆ
ಮನಗೆಲ್ಲ ಆಂಬ್ಯುಲೆನ್ಸ್ ಸೇವೆ ತುಂಬಾನೇ ಚಿರಪರಿಚಿತ. ಕೆಲವಾರು ಆರೋಗ್ಯ ಸಮಸ್ಯೆಗಳು ಚಿಕಿತ್ಸೆ ತಡವಾಗಿಯೇ ಸಾವಿನಂಚಿಗೆ ತಳ್ಳುತ್ತವೆ. ಹಾಗೆ ಉಸಿರು ಚೆಲ್ಲುವ ಅಪಾಯದಿಂದ ದಿನನಿತ್ಯವೂ ಅದೆಷ್ಟೋ ಜೀವಗಳನ್ನ ಆಂಬ್ಯುಲೆನ್ಸ್ ಸೇವೆ ಪಾರುಗಾಣಿಸುತ್ತಿದೆ. ಆದರೆ ನಮ್ಮಿಂದಲೇ ಪ್ರತೀ ನಿತ್ಯವೂ ಘಾಸಿಗೊಳ್ಳುವ, ನಮ್ಮನ್ನು ಬದುಕಿಸಿಯೂ ತಾವು ಸಾವು ಕಾಣುತ್ತಿರುವ ಮರಗಳ ರಕ್ಷಣೆಯತ್ತ ಮಾತ್ರ ಅಷ್ಟಾಗಿ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಒಂದು ವೇಳೆ ಯಾರಾದರೂ ಪರಿಸರ ಸಂರಕ್ಷಣೆಯ ಬಗ್ಗೆ ಮಾತಾಡಿದರೂ ಅದು ಒಂದೆರಡು ದಿನ, ಕೆಲವೇ ಕೆಲ ಸಂದರ್ಭಗಳಿಗೆ ಮಾತ್ರವೇ ಸೀಮಿತ ಎಂಬಂತಾಗಿದೆ. ಆದರೆ ದೆಹಲಿ ಮಂದಿಗೆ ಮಾತ್ರ ಪೂರ್ತಿ ಕೆಟ್ಟ ಮೇಲೆ ಒಂಚೂರು ಬುದ್ಧಿ ಬಂದಂತಾಗಿದೆ!
ದೇಹಲಿ ಎಂಬುದು ಎಷ್ಟು ಪುರಾತನ ಸಿಟಿ ಎಂಬ ಹೆಗ್ಗಳಿಕೆ ಹೊಂದಿದೆಯೋ, ಅಷ್ಟೇ ಮಾಲಿನ್ಯದ ನಗರಿ ಎಂಬ ಕಪ್ಪು ಚುಕ್ಕೆಯನ್ನೂ ತನ್ನದಾಗಿಸಿಕೊಂಡಿದೆ. ಅದಕ್ಕೆ ಕಾರಣವಾಗಿರೋದು ಮರಗಳ ನಿರಂತರ ಹನನ ಎಂಬ ಜ್ಞಾನೋದಯವಾದದ್ದು ಮಾತ್ರ ತುಂಬಾನೇ ತಡವಾಗಿ. ವಾತಾವರಣವೆಲ್ಲ ಕಲುಶಿತಗೊಂಡು ಜನ ಉಸಿರಾಡೋದೇ ಕಷ್ಟ ಎಂಬಂಥ ಪರಿಸ್ಥಿತಿ ಬಂದಾಗ ಅಲ್ಲಿನ ಸರ್ಕಾರ ಎಚ್ಚೆತ್ತುಕೊಂಡಿತ್ತು. ಅಳಿದುಳಿದ ಗಿಡ ಮರಗಳನ್ನಾದರೂ ಉಳಿಸೋ ನಿರ್ಧಾರಕ್ಕೆ ಬಂದಿದ್ದ ಸರ್ಕಾರ ೨೦೦೯ರಲ್ಲಿ ಮರಗಳ ರಕ್ಷಣೆಗೆಂದೇ ಪ್ರತ್ಯೇಕ ಆಂಬ್ಯುಲೆನ್ಸ್ ಸೇವೆಯನ್ನ ಶುರು ಮಾಡಿಕೊಂಡಿತ್ತು.
ದೆಹಲಿಯಲ್ಲಿ ಎಲ್ಲಿಯೇ ಮರಗಳಿಗೆ ತೊಂದರೆಯಾಗುತ್ತಿರೋದು, ಅವು ಅನಾರೋಗ್ಯಕ್ಕೀಡಾಗುತ್ತಿರೋದು ಗೊತ್ತಾದರೆ ತಕ್ಷಣವೇ ಈ ಆಂಬ್ಯುಲೆನ್ಸ್ ಅತ್ತ ಧಾವಿಸುತ್ತೆ. ಅದು ದೆಹಲಿಯ ಮಂದಿ ತಾವೇ ತಾವಾಗಿ ತಂದುಕೊಂಡಿರೋ ಸ್ಥಿತಿ. ಇನ್ನೂ ಮೈ ಮರೆತರೆ, ಮೆರೆದಾಡಿದರೆ ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ ಬೆಂಗಳೂರಿನಲ್ಲಿಯೂ ಇಂಥಾದ್ದೊಂದು ಆಂಬ್ಯುಲೆನ್ಸ್ ಸೇವೆ ಆರಂಭಿಸುವ ಸ್ಥಿತಿ ಬಂದೊದಗುತ್ತೆ. ಯಾಕೆಂದರೆ ಅಭಿವೃದ್ಧಿ ಕಾರ್ಯಗಳಿಗೆ ಪ್ರತಿ ನಿತ್ಯವೂ ಅಲ್ಲಿ ನೂರಾರು ಮರಗಳನ್ನು ಧರೆಗುರುಳಿಸಲಾಗುತ್ತಿದೆ. ಅದು ಹೀಗೆಯೇ ಮುಂದುವರೆದರೆ ಬೆಂಗಳೂರೂ ಕೂಡಾ ನರಕ ಸೃಷ್ಟಿಸಿಕೊಳ್ಳುವ ದುಃಸ್ಥಿತಿಗಿಳಿಯುತ್ತೆ.
ಅಲ್ಲಿರೋದು ಒಬ್ಬಳೇ!
ನಾವು ಬದುಕು ಯಾಂತ್ರಿಕ ಅನ್ನಿಸಿದಾಗೆಲ್ಲ ಹೊಸದರ ಹುಡುಕಾಟಕ್ಕಿಳಿಯುತ್ತೇವೆ. ಅಂಥಾ ಘಳಿಗೆಯಲ್ಲಿ ಒಂದಷ್ಟು ಚಿತ್ರ ವಿಚಿತ್ರವಾದ ಅಂಶಗಳು ಅನಾಯಾಸವಾಗಿಯೇ ಸಿಕ್ಕು ಬಿಡುತ್ತವೆ. ಆದರೆ ನಮ್ಮ ಆಲೋಚನೆಯ ವ್ಯಾಪ್ತಿ ಮೀರಿದ, ನಮಗೆಲ್ಲ ತೀರಾ ವಿಚಿತ್ರ ಅನ್ನಿಸಿ ನಂಬಲು ಸಾಧ್ಯ ಅನ್ನಿಸಿ ಬಿಡುವ ಅದೆಷ್ಟೋ ಅಂಶಗಳು ಈ ಜಗತ್ತಿನ ಗರ್ಭದಲ್ಲಿವೆ. ಈಗ ನಿಮಗೆ ಹೇಳಲಿರೋದೂ ಕೂಡಾ ಅಂಥಾದ್ದೇ ಒಂದು ವಿಚಿತ್ರ ಊರಿನ ಬಗ್ಗೆ. ಒಂದು ಊರೆಂದರೆ ಹತ್ತಾರು ಮನೆ, ನೂರಾರು ಮಂದಿಯ ಚಿತ್ರಣ ನಿಮ್ಮ ತಲೆಯಲ್ಲಿ ಮಿಂಚಿ ಮರೆಯಾಗುತ್ತೆ. ಊರೆಂದು ಕರೆಸಿಕೊಳ್ಳಲು ಅಂಥಾ ಚಹರೆಗಳು ಇರಲೇ ಬೇಕಾಗುತ್ತೆ. ಆದರೆ ಅದೊಂದು ಪಟ್ಟಣದಲ್ಲಿ ವಾಸವಿರೋದು ಒಬ್ಬಳೇ ಗಟ್ಟಿಗಿತ್ತಿ ಮಹಿಳೆ. ಆ ಊರು ಯುನೈಟೈಡ್ ಸ್ಟೇಟ್ಸ್‌ನ ನೆಬ್ರಸ್ಕಾ. ಆ ಊರಿನಲ್ಲಿ ಲೈಬ್ರೇರಿಯನ್ ವೃತ್ತಿ ಮಾಡೋ ಒಬ್ಬಳೇ ಮಹಿಳೆ ವಾಸಿಸುತ್ತಿದ್ದಾಳಂತೆ. ಸರಿಯಾದ ಪ್ರಮಾಣದಲ್ಲಿ ತೆರಿಗೆ ಕಟ್ಟುತ್ತಾ ಆಕೆ ತನಗೆ ಬೇಕಾದ ಸೌಕರ್ಯಗಳನ್ನು ಪಡೆದುಕೊಂಡು ನೆಮ್ಮದಿಯಾಗಿದ್ದಾಳಂತೆ.
ಆ ಊರಿನಲ್ಲಿ ಒಂದು ಕಾಲಕ್ಕೆ ನೂರೈವತ್ತರಷ್ಟು ಮಂದಿ ವಾಸಿಸುತ್ತಿದ್ದರಂತೆ. ಬರ ಬರುತ್ತಾ ಆ ಪ್ರಮಾಣದಲ್ಲಿ ಇಳಿಕೆ ಕಾಣುತ್ತಾ ಸಾಗಿತ್ತು. ಆ ಬಳಿಕ ಒಂದು ಗಂಡ ಹೆಂಡತಿಯ ಜೋಡಿ ಮಾತ್ರವೇ ಅಲ್ಲಿ ವಾಸವಾಗಿತ್ತು. ಕಡೆಗೂ ಗಂಡ ಅಸುನೀಗಿ ಈಗ ಮಹಿಳೆ ಮಾತ್ರವೇ ಉಳಿದುಕೊಂಡಿದ್ದಾಳೆ. ಆಕೆ ಒಂದು ಮಟ್ಟಕ್ಕೆ ದೊಡ್ಡದಾದ ಆ ಪಟ್ಟಣದಲ್ಲಿ ಒಂಟಿಯಾಗಿ ಬದುಕುತ್ತಿದ್ದಾಳೆ. ಆಕೆಯ ಪಾಲಿಗೆ ಆ ಏಕಾಂತವೇ ಸ್ವರ್ಗ ಅನಿಸಿದೆಯಂತೆ. ಆಗಾಗ ಆಕೆಗೆ ಮಧ್ಯದ ವ್ಯವಸ್ಥೆಯೂ ಇರೋದರಿಂದ ಯಾವ ಜಂಜಾಟಗಳೂ ಇಲ್ಲದೆ ಆಕೆ ಆರೋಗ್ಯವಂತೆಯಾಗಿ ಖುಷಿಯಾಗಿ ಬದುಕುತ್ತಿದ್ದಾಳಂತೆ!
ಏಡಿಗಳ ಅಧಿಪತ್ಯ
ಪ್ರಪಂಚದ ಉದ್ದಗಲಕ್ಕೂ ಮನುಷ್ಯನ ಕ್ರೌರ್ಯ, ಸ್ವಾರ್ಥ, ಲಾಲಸೆಗಳು ಹಬ್ಬಿಕೊಂಡಿವೆ. ಕಾಡು ಮೇಡುಗಳನ್ನು ಆವರಿಸಿಕೊಂಡು ಮುನ್ನುಗ್ಗುತ್ತಿರೋ ನಮಗೆಲ್ಲ ಪ್ರಾಣಿ ಪಕ್ಷಿಗಳ ಬಗ್ಗೆ, ಜೀವ ಸಂಕುಲದ ಬಗ್ಗೆ ಕಿಂಚಿತ್ತು ಕಾಳಜಿಯೂ ಇಲ್ಲ. ನಾವು ಹಾಗೆ ಆಕ್ರಮಿಸಿಕೊಂಡು ಉಳಿದ ಕಾಡಿನಿಂದ ಆನೆಗಳು ಆಹಾರ ಅರಸಿ ನುಗ್ಗಿ ಬಂದರೆ ಹುಯಿಲೆಬ್ಬಿಸುತ್ತೇವೆ. ಮನೆಯ ಆಸುಪಾಸಲ್ಲಿ ಹುಲಿ, ಚಿರತೆಗಳು ಕಂಡರೆ ಜೀವ ಭಯದಿಂದ ಹೌಹಾರುತ್ತೇವೆ. ಆದರೆ ನಮ್ಮ ಆಕ್ರಮಣ ಅವುಗಳಿಗೆ ಅದೆಂಥಾ ಜೀವ ಭಯ ತಂದಿರಬಹುದೆಂಬುದನ್ನ ಮಾತ್ರ ಅಪ್ಪಿತಪ್ಪಿಯೂ ಆಲೋಚಿಸೋದಿಲ್ಲ. ಇಂಥಾ ದುರಂತಗಳಾಚೆಗೂ ಜಗತ್ತಿನ ಕೆಲ ಪ್ರದೇಶಗಳಲ್ಲಿ ಪ್ರಾಣಿ ಪಕ್ಷಿಗಳು ಸ್ವಚ್ಛಂದವಾಗಿ ಬದುಕುತ್ತಿವೆ.
ಅಂಥಾ ಪ್ರದೇಶಗಳಿಗೊಂದು ಉದಾಹರಣೆ ಕೊಡಬೇಕೆಂದರೆ ಕ್ರಿಸ್‌ಮಸ್ ಐಲ್ಯಾಂಡಿಗಿಂತಲೂ ಸೂಕ್ತವಾದದ್ದು ಬೇರೊಂದಿಲ್ಲ. ಪ್ರಾಕೃತಿಕ ಸೌಂದರ್ಯದ ಗಣಿಯಂತಿರೋ ಈ ಪ್ರದೇಶದಲ್ಲಿ ನಜ ವಸತಿ ಇದೆ. ಆದರೆ ಜನರಿಗಿಂತಲೂ ಹೆಚ್ಚು ಸಂಖ್ಯೆಯಲ್ಲಿ ಅಲ್ಲಿರೋದು ಏಡಿಗಳು. ಅವು ಆ ಪ್ರದೇಶದಲ್ಲಿ ಅದೆಷ್ಟೋ ವರ್ಷಗಳಿಂದ ಜೀವಿಸುತ್ತಿದ್ದಾವೆ. ಅವುಗಳ ಸಂಖ್ಯೆಯೇನು ಸಾಮಾನ್ಯ ಮಟ್ಟದ್ದಲ್ಲ. ಸರಿಸುಮಾರು ಐದು ಕೋಟಿಗೂ ಹೆಚ್ಚು ಏಡಿಗಳು ಆ ದ್ವೀಪದಲ್ಲಿವೆ. ಅಚ್ಚರಿಯೆಂದರೆ, ಅವೆಲ್ಲವೂ ಮನುಷ್ಯರಷ್ಟೇ ನಿರ್ಭೀತಿಯಿಂದ ಎಲ್ಲೆಂದರಲ್ಲಿ ಓಡಾಡಿಕೊಂಡಿರುತ್ತವೆ.
ಅವು ಅಷ್ಟಾಗಿ ಮನುಷ್ಯರ ತಂಟೆಗೆ ಹೋಗೋದಿಲ್ಲ. ಅಲ್ಲಿ ವಾಸಿಸುವವರೂ ಕೂಡಾ ಅವುಗಳನ್ನು ಜೊತೆಗಾರರಂತೆಯೇ ಪೊರೆಯುತ್ತಾರೆ. ವಾಹನ, ಕಾಲ್ತುಳಿತ ಸೇರಿದಂತೆ ಎಲ್ಲ ಅಪಾಯಗಳಿಂದಲೂ ತಾವೇ ಸಂರಕ್ಷಿಸುತ್ತಾ ಬಂದಿದ್ದಾರೆ. ಪ್ರತೀ ವರ್ಷವೂ ಒಂದು ಸೀಜನ್ನಿನಲ್ಲಿ ಅವು ಸಂತಾನೋತ್ಪತ್ತೆಗೆಂದು ಸಮುದ್ರ ತೀರಕ್ಕಿಳಿಯುತ್ತವೆ. ಆ ಸಂದರ್ಭದಲ್ಲಿ ಅವುಗಳ ಹಿಂಡನ್ನು ನೋಡೋದೇ ಹಬ್ಬ. ಅಂಥಾ ಸಂದರ್ಭದಲ್ಲಿ ಅವುಗಳಿಗೆ ಅನುಕೂಲವಾಗುವಂತೆ ರಸ್ತೆ ದಾಟಲು ಅನುವಾಗುವಂತೆ ಅಲ್ಲಲ್ಲಿ ವಿಭಿನ್ನವಾದ ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ಈ ಏಡಿಗಳನ್ನು ಕಣ್ತುಂಬಿಕೊಳ್ಳಲೆಂದೇ ಆ ಪ್ರದೇಶಕ್ಕೆ ಪ್ರವಾಸಿಗರ ದಂಡು ಹರಿದು ಬರುತ್ತೆ.