ಅವತ್ತು ವಿಜಯ್ `ದುನಿಯಾ’ ಚಿತ್ರದ ಮೂಲಕ ನಾಯಕನಟನಾಗಿ ಮೆರವಣಿಗೆ ಹೊರಟಾಗ ಅವರ ಬಣ್ಣ ನೋಡಿ ತಲೆಗೊಂದು ಮಾತನಾಡಿದರು. ಕೊನೆಗೆ ಹಂಗಿಸಿದವರೆಲ್ಲ ಅಂಗಾತ ಮಲಗಿದ್ದು, ವಿಜಯ್ ಹೀರೋ ಆಗಿ ಪ್ರೂ ಮಾಡಿ ತೋರಿಸಿದ್ದು, ಕಪ್ಪು ಕಸ್ತೂರಿ ಅಂತ ಜನ ಒಪ್ಪಿಕೊಂಡು ವಿಜಯ್ ಕೊರಳಿಗೆ ಹೂಮಾಲೆ ಹಾಕಿದ್ದು ಇದೆಲ್ಲ ಕಣ್ಣಮುಂದಿರುವ ಸತ್ಯ. ಅಷ್ಟಕ್ಕೂ, ನಾವ್ಯಾಕೆ ಈಗ ದುನಿಯಾ ಬಗ್ಗೆ, ನಾಯಕನಟ ವಿಜಯ್ ಅವರ ಬಗ್ಗೆ ಮಾತನಾಡ್ತಿದ್ದೀವಿ ಅಂದರೆ, ಅವರ ಚಿಕ್ಕಮಗಳ ಅಂದ-ಚೆಂದಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಅವಳೊಂದು ಅಂದದ ಉಯ್ಯಾಲೆ ಎನ್ನುತ್ತಾ ವಿಜಯ್ ಪುತ್ರಿಯ ಸೌಂದರ್ಯವನ್ನು ವರ್ಣನೆ ಮಾಡ್ತಿದ್ದಾರೆ.

ಸ್ಯಾಂಡಲ್ವುಡ್ ಅಂಗಳದಲ್ಲಿ ನಟರಾಗಿ ಮತ್ತು ನಿರ್ದೇಶಕರಾಗಿ ಸೈ ಎನಿಸಿಕೊಂಡಿರುವ ನಟ ವಿಜಯ್ ಅವರಿಗೆ ಮೂರು ಜನ ಮಕ್ಕಳಿದ್ದಾರೆ. ಮೋನಿಕಾ ಮತ್ತು ಮೋನಿಷಾ ಇಬ್ಬರು ಹೆಣ್ಣುಮಕ್ಕಳು, ಕುಲಪುತ್ರ ಸಾಮ್ರಾಟ್. ಮಗನನ್ನು ಇಂಡಸ್ಟ್ರಿಗೆ ಲಾಂಚ್ ಮಾಡಬೇಕು ಅಂತ ಸಾಕಷ್ಟು ತಯ್ಯಾರಿ ಮಾಡಿಕೊಂಡಿದ್ದರು. `ಕುಸ್ತಿ’ ಅಂತ ಟೈಟಲ್ ಇಟ್ಟು ಟೀಸರ್ ಕೂಡ ರಿಲೀಸ್ ಮಾಡಿದ್ದರು. ಆದರೆ, `ಸಲಗ’ ಸಿನಿಮಾ ಮೂಲಕ ವಿಜಯ್ ನಿರ್ದೇಶನಕ್ಕೆ ಕೈ ಹಾಕಿದ್ದರಿಂದ ಸಾಮ್ರಾಟ್ ಲಾಂಚ್ ತಡ ಆಯ್ತು. ಜೊತೆಗೆ ಸಲಗ ಬ್ಲಾಕ್ಬಸ್ಟರ್ ಹಿಟ್ ಆಗಿದ್ದರಿಂದ ವಿಜಯ್ ಮತ್ತೆ ಡೈರೆಕ್ಟರ್ ಕ್ಯಾಪ್ ತೊಟ್ಟರು. ಸದ್ಯ `ಭೀಮ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ನಟನೆಯ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನೂ ಹೆಗಲಿಗೇರಿಸಿಕೊಂಡಿದ್ದಾರೆ.

ವಿಶೇಷ ಅಂದರೆ ಅಪ್ಪನ `ಭೀಮ’ ಸಿನಿಮಾಗೆ ಮಗಳು ಮೋನಿಷಾ ಕೂಡ ಕೆಲಸ ಮಾಡ್ತಿದ್ದಾರೆ. ವಾಕಿಟಾಕಿ ಇಡ್ಕೊಂಡು ಸೀರಿಯಸ್ಸಾಗಿ ವರ್ಕ್ ಮಾಡ್ತಿರುವ ಫೋಟೋವೊಂದನ್ನ ಮೋನಿಷಾ ಶೇರ್ ಮಾಡ್ಕೊಂಡಿದ್ದರು. ಇದನ್ನ ನೋಡಿ ವಿಜಯ್ ಫ್ಯಾನ್ಸ್ ಸಿಕ್ಕಾಪಟ್ಟೆ ಥ್ರಿಲ್ಲಾಗಿದ್ದರು. ಅಪ್ಪನ ಸಿನಿಮಾಗೆ ಮಗಳ ಸಾಥ್ ಅಂತ ಮೋನಿಷಾ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆದ್ರೀಗ, ನೆಟ್ಟಿಗರು ಮೋನಿಷಾ ಅಂದ ನೋಡಿ ಮೆಚ್ಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮೋನಿಷಾ ಹಂಚಿಕೊಂಡಿರುವ ಫೋಟೋಗಳನ್ನ ನೋಡಿ ಕ್ಲೀನ್ಬೋಲ್ಡ್ ಆಗಿರುವ ನೆಟಿಜನ್ಸ್, ಡ್ರೀಮ್ ಗರ್ಲ್, ಬಾರ್ಬಿಡಾಲ್, ಹೊಸ ಕ್ರಷ್, ನಯಾ ಮಾಡೆಲ್, ಅಪ್ಕಮ್ಮಿಂಗ್ ಹೀರೋಯಿನ್ ಅಂತೆಲ್ಲಾ ಕಮೆಂಟ್ ಮಾಡ್ತಿದ್ದಾರೆ. ಯಾವ್ ಹೀರೋಯಿನ್ಗೂ ಕಮ್ಮಿಯಿಲ್ಲ ನೀವು, ಆದಷ್ಟು ಬೇಗ ಚಿತ್ರರಂಗಕ್ಕೆ ಎಂಟ್ರಿಕೊಡಿ ಅಂತ ಬೇಡಿಕೆ ಇಡುತ್ತಿದ್ದಾರೆ.

ಅಷ್ಟಕ್ಕೂ, ಮೋನಿಷಾಗೆ ಚಿತ್ರರಂಗಕ್ಕೆ ಎಂಟ್ರಿಕೊಡುವ ಆಸೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ನಟ ವಿಜಯ್ ಹಿಂದೊಮ್ಮೆ ಮಾತನಾಡುತ್ತಾ ಸಾಮ್ರಾಟ್ ಎಂಟ್ರಿಯಾಗಲಿ ಆ ಮೇಲೆ ಹೆಣ್ಣುಮಕ್ಕಳನ್ನು ಲಾಂಚ್ ಮಾಡ್ತೀನಿ ಎಂದಿದ್ದರು. ಈಗ ಹೇಗೂ ನಿರ್ದೇಶಕನಾಗಿ ಸೈ ಎನಿಸಿಕೊಂಡಿದ್ದಾರೆ. `ಸಲಗ’ ಸಿನಿಮಾದ ಮೂಲಕ ತಾವೊಬ್ಬ ನಟ ಕಂ ನಿರ್ದೇಶಕ ಅನ್ನೋದನ್ನ ಸಾಬೀತುಪಡಿಸಿದ್ದಾರೆ. ಹೀಗಾಗಿ, ತಮ್ಮ ಮಕ್ಕಳನ್ನ ಇಂಡಸ್ಟ್ರಿಗೆ ಲಾಂಚ್ ಮಾಡುವ ಜವಬ್ದಾರಿಯನ್ನ ಅವರೇ ವಹಿಸಿಕೊಂಡರೂ ಅಚ್ಚರಿಯಿಲ್ಲ. ಒಂದ್ವೇಳೆ ಹಿಂಗಾದ್ರೆ ಮೋನಿಷಾ ಲಕ್ಕಿಯಸ್ಟ್ ಹೀರೋಯಿನ್ ಅಂದರೆ ತಪ್ಪಾಗಲ್ಲ. ಎನಿವೇ, ಚಿತ್ರರಂಗಕ್ಕೆ ಪದಾರ್ಪಣೆ ಮಾಡುವ ಮೊದಲೇ ತಮ್ಮ ಸೌಂದರ್ಯದಿಂದ ನೆಟ್ಟಿಗರ ಕಣ್ಣುಕುಕ್ಕಿರುವ ಮೋನಿಷಾ, ಬೆಳ್ಳಿಪರದೆಗೆ ಲಗ್ಗೆ ಇಟ್ಟರೆ ಅಂದ-ಚೆಂದದ ಜೊತೆಗೆ ಅಭಿನಯದಿಂದಲೂ ಮೋಡಿ ಮಾಡುವುದರಲ್ಲಿ ಸಂಶಯವಿಲ್ಲ ಬಿಡಿ. ಈಗಾಗಲೇ ಸ್ಯಾಂಡಲ್ವುಡ್ ಸ್ಟಾರ್ ನಟರ ಮಕ್ಕಳು ಒಬ್ಬೊಬ್ಬರಾಗಿ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ, ಮಾಲಾಶ್ರೀಯವರ ಮಗಳು ಆರಾಧನಾ ಈಗಾಗಲೇ ಗಂಧದಗುಡಿಗೆ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾರೆ. ಕಿಚ್ಚ ಸುದೀಪ್ ಪುತ್ರಿ ಸಾನ್ವಿ ಸುದೀಪ್ ಗಾಯಕಿಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟಿದ್ದಾರೆ. ಇನ್ನೂ ಅನೇಕ ತಾರೆಯರ ಮಕ್ಕಳು ಬಣ್ಣದ ಜಗತ್ತಿಗೆ ಲಗ್ಗೆ ಇಡುವ ಲಿಸ್ಟ್ ನಲ್ಲಿದ್ದಾರೆ.





