ವರಮಹಾಲಕ್ಷ್ಮಿ ಹಬ್ಬಕ್ಕೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಖತ್ ಸರ್ಪೈಸ್ ಕೊಟ್ಟಿದ್ದರು. ಎರಡನೇ ಭಾರಿಗೆ ತಂದೆಯಾಗುತ್ತಿರುವ ಖುಷಿಸುದ್ದಿಯನ್ನ ಹಂಚಿಕೊಳ್ಳುವುದರ ಮೂಲಕ ಸರ್ಜಾ ಕುಟುಂಬದ ಅಭಿಮಾನಿಗಳಲ್ಲಿ ಸಂತೋಷ, ಸಂಭ್ರಮ ಮನೆಮಾಡುವಂತೆ ಮಾಡಿದ್ದರು.ಈಗ ಪತ್ನಿ ಪ್ರೇರಣಾಗೆ ಅದ್ದೂರಿಯಾಗಿ ಸೀಮಂತಶಾಸ್ತ್ರ ನೆರವೇರಿಸಿದ್ದಾರೆ. ಕೃಷ್ಣ ಜನ್ಮಾಷ್ಟಮಿಯಂದು ಸೀಮಂತ ನಡೆದಿದ್ದು, ಈ ಬಾರಿಯ ಕೃಷ್ಣ ಜನ್ಮಾಷ್ಟಮಿ ತಮ್ಮ ಪಾಲಿಗೆ ತುಂಬ ಸ್ಪೆಷಲ್ ಆಗಿತ್ತು ಎಂದು ಧ್ರುವ ಸರ್ಜಾ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.ಸರ್ಜಾ ಕುಟುಂಬದ ಆಪ್ತರು, ಬಂಧುಮಿತ್ರರು, ಅಭಿಮಾನಿಗಳು ಸೇರಿದಂತೆ ಸ್ಯಾಂಡಲ್ವುಡ್ ಸಿನಿಮಂದಿ ಧ್ರುವ ಹಾಗೂ ಪ್ರೇರಣಾಗೆ ಶುಭಹಾರೈಸುತ್ತಿದ್ದಾರೆ.
ಸಾಮಾನ್ಯವಾಗಿ ಸೀಮಂತಶಾಸ್ತ್ರವನ್ನ ಮನೆಯಲ್ಲೋ ಅಥವಾ ಖಾಸಗಿ ಹೋಟೆಲ್ನಲ್ಲೋ ಹಮ್ಮಿಕೊಳ್ತಾರೆ. ಆದರೆ ಬಹದ್ದೂರ್ ಗಂಡು ತಮ್ಮ ಪತ್ನಿ ಪ್ರೇರಣಾರ ಬೇಬಿಶವರ್ ಫಂಕ್ಷನ್ನಾ ಫಾರ್ಮ್ಹೌಸ್ನಲ್ಲಿ ಅರೇಂಜ್ ಮಾಡಿದ್ದರು. ಇದಕ್ಕೆ ಕಾರಣ ಚಿರು ಮೇಲಿರುವ ಪ್ರೀತಿ ಅಂದರೆ ಬಹುಷಃ ತಪ್ಪಾಗಲ್ಲ. ಹೌದು, ಅಣ್ಣ ಅಂದರೆ ಆ್ಯಕ್ಷನ್ ಪ್ರಿನ್ಸ್ ಗೆ ಜೀವ. ಆದರೆ, ಆ ಜೀವ ಅಗಲಿದ್ಮೇಲೆ ಧ್ರುವ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಈಗಲೂ ಚಿರುನಾ ಮರೆಯೋಕೆ ಆಗದೇ ಒದ್ದಾಡ್ತಿರುವ ಧ್ರುವಸರ್ಜಾ, ಆಗಾಗ ಅಣ್ಣನ ಪುಣ್ಯಭೂಮಿಗೆ ಭೇಟಿಕೊಡ್ತಾರೆ. ಇತ್ತೀಚೆಗೆ ಅಣ್ಣನ ಸಮಾಧಿ ಬಳಿಯೇ ಧ್ರುವ ಮಲಗಿರುವ ವಿಡಿಯೋ ವೈರಲ್ ಆಗಿತ್ತು. ಈಗ ಪತ್ನಿಯ ಸೀಮಂತ ಶಾಸ್ತ್ರವನ್ನ ಅಣ್ಣನ ಪುಣ್ಯಭೂಮಿಯಲ್ಲೇ ನೆರವೇರಿಸುವ ಮೂಲಕ ಸುದ್ದಿಯಾಗಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಅಣ್ತಮ್ಮಾಸ್ ಗಳ ಪ್ರೀತಿಗೆ ಮಾಧರಿಯಾಗಿದ್ದಾರೆ. ಅಚ್ಚರಿ ಅಂದರೆ ಚಿರು ಫೋಟೋ ನೋಡಿ ಧ್ರುವ ಮಗಳು ದಾದಾ ಅಂತ ಕೂಗಿದ್ದಾಳೆ. ಈ ಮೂಮೆಂಟ್ ಮೇಘನಾ ಕಣ್ಣನ್ನ ಮಾತ್ರವಲ್ಲ ಯುವಸಾಮ್ರಾಟ್ ಅಭಿಮಾನಿಗಳ ಕಣ್ಣಂಚನ್ನೂ ಒದ್ದೆ ಮಾಡುತ್ತೆ.

ಅಂದ್ಹಾಗೇ, ಧ್ರುವ-ಪ್ರೇರಣಾ 2019 ನವೆಂಬರ್ 25ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. 2022 ಅಕ್ಟೋಬರ್ 02ರಂದು ಮೊದಲ ಮಗುವಿಗೆ ಜನ್ಮ ನೀಡಿದ್ದರು. ಪ್ರೇರಣಾ ಮಡಿಲು ತುಂಬಿದ ಆ ಮುದ್ದುಬೊಂಬೆ, ಸಾಕ್ಷಾತ್ ಲಕ್ಷ್ಮಿಯಂತೆ ಸರ್ಜಾ ಕುಟುಂಬವನ್ನ ಪ್ರವೇಶಿಸಿದ್ದಳು. ಈಗ ಎರಡನೇ ಕಂದಮ್ಮನ ಆಗಮನಕ್ಕಾಗಿ ಈ ಜೋಡಿ ಮಾತ್ರವಲ್ಲ ಇಡೀ ವಿಐಪಿ ಬಳಗವೇ ಎದುರುನೋಡ್ತಿದೆ. ಇದೇ ಸೆಪ್ಟೆಂಬರ್ ನಲ್ಲಿ ಸರ್ಜಾ ಕುಟುಂಬಕ್ಕೆ ಮುದ್ದು ಕಂದಮ್ಮನ ಎಂಟ್ರಿಯಾಗಲಿದೆ. ಸದ್ಯ ಆರತಿಗೊಬ್ಬಳು ಮಗಳು ಇರೋದ್ರಿಂದ, ಕೀರ್ತಿಗೊಬ್ಬ ಮಗ ಬರಲಿ ಎನ್ನುವ ನಿರೀಕ್ಷೆ ಎಲ್ಲರದ್ದು. ಎನಿವೇ, ಹೆಣ್ಣಾಗಲೀ, ಗಂಡಾಗಲೀ ಸೂಸೂತ್ರವಾಗಿ ಕಂದಮ್ಮನ ಆಗಮನವಾಗಲಿ ಎನ್ನುತ್ತಾ ಅಭಿಮಾನಿ ದೇವರುಗಳು ಹಾಗೂ ಆಪ್ತವಲಯದವರು ಶುಭಕೋರುತ್ತಿದ್ದಾರೆ.





