ಸಾಮಾನ್ಯವಾಗಿ ಕಾಗೆ ತಾಕಿದ್ದರೆ ಸ್ನಾನ ಮಾಡಬೇಕು. ಕಾಗೆ ಅಪಶಕುನ, ಅದು ವಾಹನದ ಮೇಲೆ ಕೂರಬಾರದು ಮುಂತಾದ ನಂಬಿಕೆಗಳು ರೂಡಿಯಲ್ಲಿದೆ. ಆದರೆ ಇಲ್ಲೊಂದು ಸಿನಿಮಾದಲ್ಲಿ ಕಾಗೆಯೇ ಪ್ರಮುಖ ಪಾತ್ರಧಾರಿ. ಕಾಗೆಯಿಂದ ಸಾಕಷ್ಟು ಒಳ್ಳೆಯದಾಗುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ಚಿತ್ರತಂಡ ತೋರಿಸಲು ಹೊರಟಿದೆ. ಅಂದಹಾಗೆ ಆ ಸಿನಿಮಾದ ಹೆಸರು ‘ರಾವೆನ್’. ಕಾಗೆಯ ಪ್ರಬೇಧ ಒಂದರ ಹೆಸರು ‘ರಾವೆನ್’ ಎಂಬದಾಗಿದ್ದು, ಇದೇ ಹೆಸರನ್ನು ಚಿತ್ರತಂಡ ತಮ್ಮ ಸಿನಿಮಾದ ಟೈಟಲ್ ಆಗಿಟ್ಟುಕೊಂಡಿದೆ.
‘ವಿಶ್ವ ಪ್ರೊಡಕ್ಷನ್ಸ್’ ಹಾಗೂ ‘ಆತ್ಮ ಸಿನಿಮಾಸ್’ ಲಾಂಛನದಲ್ಲಿ ವಿಶ್ವನಾಥ್ ಜಿ. ಪಿ ಹಾಗೂ ಪ್ರಬಿಕ್ ಮೊಗವೀರ್ ನಿರ್ಮಿಸುತ್ತಿರುವ ಹಾಗೂ ವೇದ್ ನಿರ್ದೇಶನದ ‘ರಾವೆನ್’ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಶಾಸಕ ಗೋಪಾಲಯ್ಯ ಚಿತ್ರದ ಮೊದಲ ದೃಶ್ಯಕ್ಕೆ ಆರಂಭ ಫಲಕ ತೋರಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ. ಹರೀಶ್, ನಿರ್ದೇಶಕ ಎಂ. ಡಿ. ಶ್ರೀಧರ್ ಸೇರಿದಂತೆ ಅನೇಕ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

‘ರಾವೆನ್’ ಸಿನಿಮಾದಲ್ಲಿ ದಿಲೀಪ್ ಪೈ ನಾಯಕನಾಗಿ ನಟಿಸುತ್ತಿದ್ದಾರೆ. ಸ್ವಪ್ನ ಶೆಟ್ಟಿಗಾರ್, ಕುಂಕುಮ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸುಚೇಂದ್ರ ಪ್ರಸಾದ್, ಲೀಲಾ ಮೋಹನ್, ಶ್ರೇಯಾ ಆರಾಧ್ಯ ಮುಂತಾದವರು ಚಿತ್ರದ ತಾರಾಬಳಗದಲ್ಲಿ ಅಭಿನಯಿಸುತ್ತಿದ್ದಾರೆ. ಇದೇ ಸೆಪ್ಟೆಂಬರ್ ತಿಂಗಳ 21ರಿಂದ ‘ರಾವೆನ್’ ಚಿತ್ರೀಕರಣ ಆರಂಭವಾಗಲಿದೆ.





