ಪುರಾಣ, ಪುಣ್ಯಕಥೆಗಳನ್ನು ಕೇಳಿರುವವರಿಗೆ ‘ಗರುಡ ಪುರಾಣ’ದ ಪರಿಚಯವೂ ಇರುತ್ತದೆ. ಮನುಷ್ಯನಿಗೆ ಆತನ ಪಾಪ – ಪುಣ್ಯಕ್ಕೆ ಅನುಗುಣವಾಗಿ ಮೇಲೆ ಯಾವ ಯಾವ ಶಿಕ್ಷೆಯಿದೆ ಎಂದು ತಿಳಿಸುವ ಪುರಾಣವೇ ‘ಗರುಡ ಪುರಾಣ’. ಈಗ ಇದೇ ‘ಗರುಡ ಪುರಾಣ’ ಎಂಬ ಹೆಸರಿನಲ್ಲಿ ಸಿನಿಮಾವೊಂದು ತೆರೆಗೆ ಬರುತ್ತಿದೆ. ಅಂದಹಾಗೆ, ಈ ಸಿನಿಮಾದ ಹೆಸರು ‘ಗರುಡ ಪುರಾಣ’ ಅಂತಿದ್ದರೂ, ಇದು ಪೌರಾಣಿಕ ಸಿನಿಮಾವಲ್ಲ. ಸಿನಿಮಾದ ಸಬ್ಜೆಕ್ಟ್ ಗೆ ಹೊಂದಾಣಿಕೆಯಾಗುತ್ತದೆ ಎಂಬ ಕಾರಣಕ್ಕೆ ಚಿತ್ರತಂಡ, ತಮ್ಮ ಸಿನಿಮಾಕ್ಕೆ ‘ಗರುಡ ಪುರಾಣ’ ಅಂಥ ಹೆಸರಿಟ್ಟಿದೆ.
ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ‘ಕಾಂತಾರ’ ಸಿನಿಮಾದ ಆನ್ ಲೈನ್ ಎಡಿಟರ್ ಮಂಜುನಾಥ್ ಬಿ. ನಾಗಬಾ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ‘27 ಫ್ರೇಮ್ ಕ್ರಿಯೇಷನ್ಸ್ ‘ ಲಾಂಛನದಲ್ಲಿ ಸಿಂಧು ಕೆ. ಎಂ ಮತ್ತು ಬಿ. ಎಲ್ ಯೋಗೇಶ್ ಕುಮಾರ್ ನಿರ್ಮಿಸುತ್ತಿರುವ, ‘ಗರುಡ ಪುರಾಣ’ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯವಾಗಿ, ತೆರೆಗೆ ಬರಲು ಸಿದ್ದಾವಾಗಿದೆ.
ಚಿತ್ರದ ಒಂದು ಭಾಗಕ್ಕೆ ‘ಗರುಡ ಪುರಾಣ’ದ ಕೆಲವು ಅಂಶಗಳು ಹೊಂದಿಕೆಯಾಗುತ್ತದೆ. ಹಾಗಾಗಿ ‘ಗರುಡ ಪುರಾಣ’ ಶೀರ್ಷಿಕೆ ಇಟ್ಟಿದ್ದೇವೆ. ಇದು ಮಧ್ಯಮ ಕುಟುಂಬವೊಂದರಲ್ಲಿ (ಮಿಡಲ್ ಕ್ಲಾಸ್) ನಡೆಯುವ ಕಥೆ. ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಎನ್ನಬಹುದು. ಸದ್ಯ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ವರ್ಕ್ ಮುಕ್ತಾಯವಾಗಿದ್ದು, ‘ಗರುಡ ಪುರಾಣ’ ತೆರೆಗೆ ಬರಲು ಸಿದ್ದವಾಗಿದೆ ಎಂಬುದು ಚಿತ್ರತಂಡ ನೀಡುವ ಮಾಹಿತಿ.
ಸಿನಿಮಾದ ನಿರ್ದೇಶಕ ಮಂಜುನಾಥ್ ಬಿ. ನಾಗಬಾ ಈ ಸಿನಿಮಾದ ಚನಾಯಕನಾಗಿಯೂ ನಟಿಸಿದ್ದು, ದಿಶಾ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಚೆಲುವರಾಜು, ಸಂತೋಷ್ ಕರ್ಕಿ, ಕೆಂಚಣ್ಣ, ರಾಜಕುಮಾರ್, ಮಹೇಂದ್ರ ಗೌಡ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.





