ಬೆಳ್ಳಿತೆರೆ ಮೇಲೆ `ಜವಾನ್’ ಅಬ್ಬರ ಆರ್ಭಟ ಜೋರಾಗಿದೆ. ಇಂಡಿಯನ್ ಬಾಕ್ಸ್ ಆಫೀಸ್ನಲ್ಲಿ `ಜವಾನ್’ ನಾಗಾಲೋಟ ಮುಂದುವರೆದಿದ್ದು, ಏಳು ದಿನ ಕಳೆಯುವುದರೊಳಗೆ 300 ಕೋಟಿಗೂ ಅಧಿಕ ಕಲೆಕ್ಷನ್ ಆಗಿದೆ. ಕಿಂಗ್ ಖಾನ್ ಶಾರುಖ್ ಬಾಕ್ಸ್ ಆಫೀಸ್ ಕಿಂಗ್ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಪಠಾಣ್ ಮೂಲಕ ಸ್ಟ್ರಾಂಗ್ ಕಂಬ್ಯಾಕ್ ಮಾಡಿದ್ದ ಬಾಲಿವುಡ್ ಬಾದ್ಷಾ, `ಜವಾನ್’ ಸಿನಿಮಾದಿಂದ ಎರಡನೇ ಭಾರಿಗೆ ದಿಗ್ವಿಜಯ ಸಾಧಿಸಿದ್ದಾರೆ. ಇದಕ್ಕೆ ಕಾರಣ, ಕಾಲಿವುಡ್ನ ಯಂಗ್ ಅಂಡ್ ಸೆನ್ಸೇಷನ್ ಡೈರೆಕ್ಟರ್ ಅಟ್ಲಿಅಲಿಯಾಸ್ ಅರುಣ್ ಕುಮಾರ್

`ಜವಾನ್’ ಸಕ್ಸಸ್ಗೆ ತೆರೆಮರೆಯಲ್ಲಿ ನೂರಾರು ಜನ ಕೆಲಸ ಮಾಡಿರಬಹುದು ಆದರೆ ಮೂಲ ಸಾರಥಿ ಅಟ್ಲಿ. ಸುಮಾರು 4 ವರ್ಷಗಳಿಂದ ಚಿತ್ರರಂಗದಿಂದ ದೂರವೇ ಉಳಿದಿದ್ದ ಅರುಣ್ ಕುಮಾರ್ ‘ಜವಾನ್’ ಮೂಲಕ ಸುನಾಮಿ ಎಬ್ಬಿಸಿದ್ದಾರೆ. ರಾಜರಾಣಿ, ಥೇರಿ, ಮರ್ಸಲ್, ಬಿಗಿಲ್ ನಂತಹ ಬ್ಲಾಕ್ಬಸ್ಟರ್ ಹಿಟ್ ಕೊಟ್ಟು ಸೌತ್ ಸಿನಿಮಾ ಲೋಕದಲ್ಲಿ ತಲ್ಲಣ ಸೃಷ್ಟಿಸಿದ ಅಟ್ಲಿ, `ಜವಾನ್’ ಮೂಲಕ ಬಿಟೌನ್ಗೆ ಲಗ್ಗೆ ಇಟ್ಟು ಉತ್ತರ ಭಾರತಕ್ಕೆ ಮಾತ್ರವಲ್ಲ ಇಡೀ ಪ್ಯಾನ್ ಇಂಡಿಯಾಗೆ ತನ್ನ ಕ್ಯಾಪ್ಯಾಸಿಟಿ ಏನೆಂಬುದನ್ನು ಸಾಬೀತು ಪಡಿಸಿದ್ದಾರೆ. ಸದ್ಯ ಆಟ್ಲೀಗೆ ಡಿಮ್ಯಾಂಡ್ ಜಾಸ್ತಿಯಾಗಿದ್ದು, ಸ್ಟಾರ್ ಹೀರೋಗಳೇ ಬಿಗಿಲ್ ಡೈರೆಕ್ಟರ್ ಕಾಲ್ಶೀಟ್ ಗಾಗಿ ಕ್ಯೂ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇಲ್ಲಿತನಕ ವೆಟ್ರಿಮಾರನ್, ಲೋಕೇಶ್ ಕನಗರಾಜ್ ಜೊತೆ ಕೈ ಜೋಡಿಸಲಿಕ್ಕೆ ಹಲವು ಸ್ಟಾರ್ ನಟರು, ನಿರ್ಮಾಪಕರು ಕ್ಯೂ ನಿಲ್ಲುತ್ತಿದ್ದರು. ಈಗ ಅಟ್ಲಿ ಜೊತೆ ಕೈ ಜೋಡಿಸೋಕೆ ಸೌತ್ ಟು ನಾರ್ತ್ ಪಾಪ್ಯೂಲರ್ ಪ್ರೊಡಕ್ಷನ್ ಹೌಸ್ಗಳು ಮುಂದಾಗಿರುವ ಬಗ್ಗೆ ಸುದ್ದಿ ಹರಿದಾಡ್ತಿದೆ. ಹೀಗಿರುವಾಗಲೇ ಅಟ್ಲಿ ನೆಕ್ಸ್ಟ್ ಪಿಕ್ಚರ್ ಅಲ್ಲು ಅರ್ಜುನ್ ಜೊತೆ ಎನ್ನುವ ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. `ಜವಾನ್’ ಸಿನಿಮಾದ ವಿಮರ್ಶೆ ಮಾಡಿ ಸೋಷಿಯಲ್ ಪುಟದಲ್ಲಿ ಹಂಚಿಕೊಂಡಿದ್ದೇ ತಡ ಬನ್ನಿ ಮುಂದಿನ ಸಿನಿಮಾ ಅಟ್ಲಿ ಜೊತೆ ಕನ್ಫರ್ಮ್ ಅಂತ ಕಾಲಿವುಡ್ ವೆಬ್ಸೈಟ್ಗಳಲ್ಲಿ ವರದಿಯಾಗ್ತಿದೆ.

‘ಈ ದೊಡ್ಡ ಯಶಸ್ಸಿಗಾಗಿ ಜವಾನ್ ಸಿನಿಮಾದ ಇಡೀ ತಂಡಕ್ಕೆ ಅಭಿನಂದನೆಗಳು. ಶಾರುಖ್ ಖಾನ್ ಅವರು ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಮಗೆ ಈ ಗೆಲುವು ಸಿಗಲಿ ಎಂದು ನಾವೆಲ್ಲ ಪ್ರಾರ್ಥಿಸಿದ್ದೆವು. ಎಂದಿನಂತೆ ವಿಜಯ್ ಸೇತುಪತಿ ಅವರು ಭಯಂಕರವಾಗಿ ನಟಿಸಿದ್ದಾರೆ. ದೀಪಿಕಾ ಪಡುಕೋಣೆ ಅವರು ಕೂಡ ನಿರಾಯಾಸವಾಗಿ ಅಭಿನಯಿಸಿದ್ದಾರೆ. ರಾಷ್ಟ್ರಮಟ್ಟದಲ್ಲಿ ನಯನತಾರಾ ಅವರು ಮಿಂಚುತ್ತಿದ್ದಾರೆ. ಹಾಡುಗಳನ್ನು ಪದೇ ಪದೇ ಕೇಳುವಂತೆ ಮಾಡಿದ್ದಾರೆ ಅನಿರುದ್ಧ್ ರವಿಚಂದರ್. ನಮಗೆಲ್ಲ ನಿರ್ದೇಶಕ ಅಟ್ಲಿ ಅವರು ಹೆಮ್ಮೆ ತಂದಿದ್ದಾರೆ. ಆಲೋಚನೆಗೆ ಪ್ರೇರೇಪಿಸುವಂತಹ ಕಮರ್ಷಿಯಲ್ ಸಿನಿಮಾ ಮಾಡಿ, ಭಾರತದ ಬಾಕ್ಸ್ ಆಫೀಸ್ನಲ್ಲಿ ಇತಿಹಾಸ ನಿರ್ಮಿಸಿದ್ದಕ್ಕೆ ಅಟ್ಲಿ ಅವರಿಗೆ ದೊಡ್ಡ ಅಭಿನಂದನೆಗಳು’ ಎಂದು ಅಲ್ಲು ಅರ್ಜುನ್ ಟ್ವೀಟ್ ಮಾಡಿದ್ದಾರೆ.

ಸ್ಟೈಲಿಷ್ ಸ್ಟಾರ್ ಟ್ವೀಟ್ಗೆ ಅನಿರುದ್ದ್ ರವಿಚಂದರ್ `ಥ್ಯಾಂಕ್ಯೂ ಮೈ ಬ್ರೋ’ ಅಂತ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಮತ್ತೆ ರೀಟ್ವೀಟ್ ಮಾಡಿರುವ ನಟ ಅಲ್ಲು ಅರ್ಜುನ್, ಬರೀ ಥ್ಯಾಂಕ್ಸ್ ಹೇಳಿದರೆ ಸಾಕಾಗಲ್ಲ, ನಂಗೂ ಒಳ್ಳೊಳ್ಳೆ ಸಾಂಗ್ಸ್ ಕೊಡಬೇಕು ಅಂತ ಕೇಳಿದ್ದಾರೆ. ಅದ್ಯಾವಾಗ ಬನ್ನಿ ಹೀಗೊಂದು ಟ್ವೀಟ್ ಮಾಡಿದ್ರೋ ಫಿನೀಶ್ `ಅಲ್ಲು, ಅಟ್ಲಿ, ಅನಿರುದ್ದ್’ ಕಾಂಬೋದಲ್ಲಿ ಸಿನಿಮಾ ಬರೋದು ಫಿಕ್ಸು ಅಂತ್ಲೇ ಸುದ್ದಿ ಮಾಡ್ತಿದ್ದಾರೆ. ಸದ್ಯ ಅಲ್ಲು ಅರ್ಜುನ್ ಪುಷ್ಪ-2 ಚಿತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾ ನಂತರ ಸಂದೀಪ್ ರೆಡ್ಡಿ ವಾಂಗ ಅಖಾಡಕ್ಕೆ ಇಳಿಯುತ್ತಾರೆ. ತದನಂತರವಷ್ಟೇ ಅಟ್ಲಿ-ಅನಿರುದ್ ಜುಗಲ್ಬಂಧಿಯ ಜೊತೆ ಸಿನಿಮಾ ಘೋಷಣೆ ಮಾಡಬಹುದು. ಅಲ್ಲಿವರೆಗೂ ಕುತೂಹಲದಿಂದ ಕಾಯೋಣ.





