ದಶಕದ ಹಿಂದೆ ‘ಮನಸುಗಳ ಮಾತು ಮಧುರ’, ‘ಯುಗಪುರುಷ’, ‘ಗೌರೀಪುತ್ರ’ ಚಿತ್ರಗಳನ್ನು ನಿರ್ದೇಶಿಸಿದ್ದ ಹಿರಿಯ ನಿರ್ದೇಶಕ ಮಂಜು ಮಸ್ಕಲ್ ಮಟ್ಟಿ ಬಹಳ ವರ್ಷಗಳ ನಂತರ, ಆಧುನಿಕ ಪಂಚ ಪಾಂಡವರನ್ನು ಇಟ್ಟುಕೊಂಡು, ವಿಭಿನ್ನ ಕಥಾನಕದೊಂದಿಗೆ ಮತ್ತೆ ಚಿತ್ರ ನಿರ್ದೇಶನಕ್ಕೆ ಮರಳಿದ್ದಾರೆ. ತಮ್ಮ ಹೊಸ ಚಿತ್ರಕ್ಕೆ ‘ವರಾಹಚಕ್ರಂ’ ಎಂದು ಶೀರ್ಷಿಕೆ ಇಟ್ಟಿರುವ ಮಂಜು ಮಸ್ಕಲ್ ಮಟ್ಟಿ ಮತ್ತು ಚಿತ್ರತಂಡ ಇತ್ತೀಚೆಗೆ. ಸಿನಿಮಾದ ಟೈಟಲ್ ಅನ್ನು ಅನಾವರಣ ಮಾಡಿದೆ.

ಹಿಂದೆ ‘ಯುಗಪುರುಷ’ ಸಿನಿಮಾದಲ್ಲಿ ನಟಿಸಿದ್ದ ಅರ್ಜುನ್ ದೇವ ‘ವರಾಹಚಕ್ರಂ’ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಅವರೊಂದಿಗೆ ರಾಣಾ, ಇಮ್ರಾನ್ ಷರೀಫ್, ಆರ್ಯನ್, ಪ್ರತೀಕ್ ಗೌಡ ಪಂಚ ಪಾಂಡವರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಹಿರಿಯ ನಟ ಸಾಯಿಕುಮಾರ್, ಪ್ರೇಮಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

‘ವರಾಹಚಕ್ರಂ’ ಚಿತ್ರವನ್ನು ‘ಮನ್ವಂತರಿ ಮೂವಿಮೇಕರ್ಸ್’ ಅಡಿಯಲ್ಲಿ ಲಾವಣ್ಯ ಗ್ರೂಪ್, ನಾಗಭೂಷಣ್ ಎಂ. ರಾವ್, ಮಂಜುನಾಥ್ ಸಿ. ಗೌಡ್ರು, ಕೆ. ಎಸ್. ಜೈ ಸುರೇಶ್ ಒಂದಷ್ಟು ಸ್ನೇಹಿತರು ಸೇರಿ ನಿರ್ಮಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಅವ್ಯವಸ್ಥಿತ ರೂಲ್ಸ್, ಸಂಸ್ಕ್ರತಿಯ ಕಗ್ಗೊಲೆ, ದೌರ್ಜನ್ಯಗಳಿಗೆ ಫುಲ್ ಸ್ಟಾಪ್ ಕೊಟ್ಟು ಅವೇರ್ ನೆಸ್ ನೀಡುವ ಕಥೆ ಇಟ್ಟುಕೊಂಡು ‘ವರಾಹಚಕ್ರಂ’ ಸಿನಿಮಾ ಮಾಡಲಾಗಿದೆ. ಸಾಕಷ್ಟು ಒಳ್ಳೆಯ ಅಂಶಗಳು ಈ ಸಿನಿಮಾದಲ್ಲಿದೆ ಎಂಬುದು ಚಿತ್ರತಂಡದ ಮಾತು.

ಚಿತ್ರಕ್ಕೆ ಶರತ್‌ಕುಮಾರ್ ಜಿ. ಛಾಯಾಗ್ರಹಣ, ಭಾರ್ಗವ ಸಂಕಲನವಿದೆ. ಬೆಂಗಳೂರು, ನೆಲ್ಲೂರು, ಪೊಲ್ಲಾಚ್ಚಿ, ಭಟ್ಕಳ, ಹಿರಿಯೂರು ಸೇರಿ ಹಲವಾರು ಲೊಕೇಶನ್ ಗಳಲ್ಲಿ ‘ವರಾಹಚಕ್ರಂ’ ಚಿತ್ರೀಕರಣಗೊಳ್ಳಲಿದೆ.





