ಜವಾನ್ ಸಿನಿಮಾದ ಸಕ್ಸಸ್ ಸಂಭ್ರಮದಲ್ಲಿರುವ ಕಿಂಗ್ ಖಾನ್ ಶಾರುಖ್ `ಪುಷ್ಪ’ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಮೂರು ಭಾರಿ ಪುಷ್ಪ ಸಿನಿಮಾ ನೋಡಿದ್ದಾಗಿ, ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್ ಅವರಿಂದ ಹಲವು ವಿಷಯಗಳನ್ನು ಕಲಿತಿದ್ದಾಗ ಕಿಂಗ್ ಖಾನ್ ಮುಕ್ತವಾಗಿ ಹೇಳಿಕೊಂಡಿದ್ದಾರೆ. ಆದಷ್ಟು ಬೇಗ ಪುಷ್ಪರಾಜ್ನ ಭೇಟಿ ಮಾಡಿ ಅಪ್ಪುಗೆ ನೀಡುವುದಾಗಿಯೂ ತಿಳಿಸಿದ್ದಾರೆ.
ಪುಷ್ಪ-2 ಸಿನಿಮಾದ ಚಿತ್ರೀಕರಣದ ನಡುವೆಯೂ ಬಿಡುವು ಮಾಡಿಕೊಂಡ ಅಲ್ಲು ಅರ್ಜುನ್ `ಜವಾನ್’ ಸಿನಿಮಾ ನೋಡಿ ವಿಮರ್ಶೆ ಮಾಡಿದ್ದರು. ಚಿತ್ರಕ್ಕಾಗಿ ದುಡಿದ ಪ್ರತಿಯೊಬ್ಬರನ್ನೂ ಶ್ಲಾಘಿಸಿದ ಬನ್ನಿ, ಬಾಲಿವುಡ್ ಬಾದ್ಷಾರನ್ನು ಹಾಡಿಹೊಗಳಿ ತಮ್ಮ ಮನಸ್ಸಿನ ಮಾತುಗಳನ್ನು ಬಿಚ್ಚಿಟ್ಟಿದ್ದರು. ನಿಮ್ಮಿ ಮಾಸ್ ಅವತಾರ ಇಂಡಿಯಾ ಮಾತ್ರವಲ್ಲ ಅದರಾಚೆಗೆ ಮೋಡಿ ಮಾಡಿದೆ, ನಮ್ಮೆಲ್ಲರಿಗೂ ಸಂತಸ ತಂದಿದೆ. ಅಂದ್ಹಾಗೇ ನಾವೆಲ್ಲರೂ ಇದನ್ನೆ ಬಯಸಿದ್ದೆವು. ಇಂತಹದ್ದೊಂದು ದೊಡ್ಡ ಯಶಸ್ಸಿಗಾಗಿ ಪ್ರಾರ್ಥಿಸಿದ್ದೆವು ಅಂತ ಅಲ್ಲು ಅರ್ಜುನ್ ಟ್ವೀಟ್ ಮೂಲಕ ತಿಳಿಸಿದ್ದರು.
ಅಲ್ಲು ಅರ್ಜುನ್ರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಶಾರುಖ್ ಖಾನ್, “ಪ್ರಿಯ ಅಲ್ಲು ಅರ್ಜುನ್, ನಿಮಗೆ ತುಂಬಾ ಧನ್ಯವಾದಗಳು. ನಿಮ್ಮ ಪ್ರೀತಿ ಮತ್ತು ಹಾರೈಕೆ ನೀವೆಷ್ಟು ಸಹೃದಯರು ಎಂದು ತೋರುತ್ತಿದೆ. ಸ್ವಾಗ್ ವಿಷಯಕ್ಕೆ ಬಂದಾಗ ‘ದಿ ಫೈರ್’ ಸ್ವತಃ ನನ್ನನ್ನು ಹೊಗಳಿದ್ದು ಸಖತ್ ಖುಷಿ ನೀಡಿದೆ. ದುಪ್ಪಟ್ಟು ‘ಜವಾನ್’ (ಯುವಕ) ಆದಂತೆ ಅನಿಸುತ್ತಿದೆ. ನಿನ್ನಿಂದ ಹಲವು ವಿಷಯಗಳನ್ನು ಕಲಿತಿದ್ದೇನೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು. ನಾನು ಮೂರು ದಿನದಲ್ಲಿ ಮೂರು ಬಾರಿ ‘ಪುಷ್ಪ’ ಸಿನಿಮಾ ನೋಡಿದ್ದೆ. ನಿಮಗೆ ದೊಡ್ಡ ಅಪ್ಪುಗೆ ಮತ್ತು ಸಾಧ್ಯವಾದಷ್ಟು ಬೇಗ ಬಂದು ನಿಮಗೆ ವೈಯಕ್ತಿಕವಾಗಿ ಅಪ್ಪುಗೆ ನೀಡುತ್ತೇನೆ. ನಿಮ್ಮ ಸ್ವಾಗ್ ಮುಂದುವರೆಯಲಿ” ಎಂದಿದ್ದಾರೆ.

‘ಜವಾನ್’ ಸಿನಿಮಾ ಬಿಡುಗಡೆ ಮುನ್ನವೂ ಶಾರುಖ್ ಖಾನ್ ‘ಪುಷ್ಪ’ ಸಿನಿಮಾದಿಂದ ಕಲಿತಿದ್ದಾಗಿ ಹೇಳಿದ್ದರು. ದಕ್ಷಿಣ ಭಾರತದ ಸಿನಿಮಾಗಳನ್ನು ನೋಡಿ ‘ಜವಾನ್’ ಚಿತ್ರದ ಪಾತ್ರಕ್ಕೆ ತಯಾರಿ ಮಾಡಿಕೊಂಡಿದ್ದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಈಗ ಮತ್ತೊಮ್ಮೆ ಟ್ವೀಟ್ ಮಾಡಿ ಆ ವಿಷಯ ಹಂಚಿಕೊಂಡಿದ್ದಾರೆ. ‘ಜವಾನ್’ ಸಿನಿಮಾವನ್ನು ತಮಿಳಿನ ಅಟ್ಲಿ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ನಯನತಾರ, ದೀಪಿಕಾ ಪಡುಕೋಣೆ, ವಿಲನ್ ಆಗಿ ವಿಜಯ್ ಸೇತುಪತಿ, ನಟಿಯರಾದ ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರಾ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಅನಿರುದ್ಧ್ ರವಿಚಂದ್ರನ್ ಸಂಗೀತ ನೀಡಿದ್ದಾರೆ.

ಬೆಳ್ಳಿತೆರೆ ಮೇಲೆ ಜವಾನ್ ಅಬ್ಬರ ಆರ್ಭಟ ಜೋರಾಗಿದ್ದು, ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಮಾಯಿ ಆಗ್ತಿದೆ. ವಾರದ ಏಳು ದಿನದಲ್ಲಿ 700 ಕೋಟಿ ಗಳಿಕೆ ಕಂಡಿರೋ ಬಗ್ಗೆ ಗೂಗಲ್ ಮಾಹಿತಿ ನೀಡ್ತಿದೆ. ಈ ಬಗ್ಗೆ ಚಿತ್ರತಂಡದ ಕಡೆಯಿಂದ ಅಧಿಕೃತ ಘೋಷಣೆ ಇನ್ನಷ್ಟೇ ಹೊರ ಬೀಳಬೇಕಿದೆ. ದಕ್ಷಿಣ ಭಾರತ ಚಿತ್ರರಂಗ ಬಂದಿದ್ದು ಕಲಿಯಲಿಕ್ಕಾಗಿ. ಎಲ್ಲರೂ ಒಟ್ಟು ಸೇರಿ ಕಲಿಯೋಣ, ಅದ್ಭುತವಾದ ಸಿನಿಮಾಗಳನ್ನು ನಿರ್ಮಾಣ ಮಾಡೋಣ” ಎಂದಿರುವ ಬಾಜೀಘರ್ ಹೀರೋ ನೆಕ್ಸ್ಟ್ ಪಿಕ್ಚರ್ ಯಾರ ಜೊತೆ ಕೈ ಜೋಡಿಸ್ತಾರೆನ್ನುವ ಕುತೂಹಲವೂ ಇದೆ.





