ಇದು ಕಿಂಗ್ ಖಾನ್ ಶಾರುಖ್ ಹಾಗೂ ದಳಪತಿ ವಿಜಯ್ ಫ್ಯಾನ್ಸ್ ಖುಷಿಪಡುವ ಸುದ್ದಿ. ಇವರಿಬ್ಬರ ಅಭಿಮಾನಿಗಳು ಒಟ್ಟಿಗೆ ಸೇರಿ ಸರಪಟಾಕಿ ಹಚ್ಚಿ, ಸಿಹಿ ಹಂಚಿ ಸಂಭ್ರಮಿಸುವಂತಹ ಸುದ್ದಿ. ಯಾಕಂದ್ರೆ, ಈ ಇಬ್ಬರು ಸೂಪರ್ಸ್ಟಾರ್ಸ್ ಒಂದಾಗುತ್ತಿದ್ದಾರೆ. ಒಟ್ಟಿಗೆ ಸ್ಕ್ರೀನ್ ಶೇರ್ ಮಾಡುವುದಕ್ಕೆ ಇಬ್ಬರು ಒಪ್ಪಿಗೆ ಸೂಚಿಸಿದ್ದು, ನಿರ್ದೇಶಕ ಅಟ್ಲಿ ಆಕಾಶಕ್ಕೆ ಏಣಿ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಕೆಲ ಸಂದರ್ಶನಗಳಲ್ಲಿ ಅಟ್ಲಿ ಮಾತನಾಡಿದ್ದಾರೆ. ಹಾಗಾದ್ರೆ ಅಟ್ಲಿ ಏನ್ ಹೇಳಿದ್ರು? ಸೌತ್-ನಾರ್ತ್ ಬಾಕ್ಸ್ ಆಫೀಸ್ ಕಿಂಗ್ ಗಳು ಒಟ್ಟಿಗೆ ಕೈ ಜೋಡಿಸಲು ಅದ್ಹೇಗೆ ಒಪ್ಪಿಕೊಂಡರು? ಈ ಬಗ್ಗೆ ಚಿಕ್ಕದೊಂದು ರಿಪೋರ್ಟ್ ಇಲ್ಲಿದೆ ಓದಿ
ಬಾಲಿವುಡ್ ಬಾದ್ ಷಾ ಹಾಗೂ ಕಾಲಿವುಡ್ ಸೆನ್ಸೇಷನಲ್ ಡೈರೆಕ್ಟರ್ ಅಟ್ಲಿ ಈಗ ಜವಾನ್ ಸಿನಿಮಾ ಸಕ್ಸಸ್ ಅಲೆಯಲ್ಲಿ ತೇಲುತ್ತಿದ್ದಾರೆ. ಪಠಾಣ್ ನಂತರ ಜವಾನ್ ಚಿತ್ರವೂ ಕೈ ಹಿಡಿದಿದ್ದರಿಂದ ಕಿಂಗ್ ಖಾನ್ ಕೇಕೆ ಹೊಡೆಯುತ್ತಿದ್ದಾರೆ. ಇತ್ತ ಅಟ್ಲಿ ಕೂಡ ಬಾಲಿವುಡ್ಗೆ ಲಗ್ಗೆ ಇಟ್ಟ ಮೊದಲ ಹೆಜ್ಜೆಯಲ್ಲಿ ಬ್ಲಾಕ್ ಬಸ್ಟರ್ ಯಶಸ್ಸು ಕಂಡಿದ್ದಾರೆ. ಸದ್ಯ ಜವಾನ್ ಸಿನಿಮಾ ಬೆಳ್ಳಿತೆರೆ ಮೇಲೆ ಅಟ್ಟಹಾಸ ಮೆರೆಯುತ್ತಿದ್ದು, ಗಲ್ಲಾಪೆಟ್ಟಿಗೆಯಲ್ಲಿ ನಾಗಲೋಟ ಮುಂದುವರೆದಿದೆ. ಈಗಾಗಲೇ 900 ಕೋಟಿ ಕಲೆಕ್ಷನ್ ಮಾಡಿರೋ ಜವಾನ್, 1000 ಕೋಟಿ ಕ್ಲಬ್ ಸೇರುವತ್ತ ಮುನ್ನುಗುತ್ತಿದೆ. ಹೀಗಿರುವಾಗಲೇ `ಜವಾನ್’ ಸಾರಥಿ ಅಟ್ಲಿ ಕಡೆಯಿಂದ ಸೆನ್ಸೇಷನಲ್ ಸಮಾಚಾರ ಹೊರಬಿದ್ದಿದೆ. ಶಾರುಖ್- ವಿಜಯ್ ಜುಗಲ್ ಬಂಧಿಯಲ್ಲಿ ಅಟ್ಲಿ ಸಿನಿಮಾ ಮಾಡಲಿಕ್ಕೆ ಹೊರಟಿರುವ ಸುದ್ದಿ ಸಿನಿದುನಿಯಾದಲ್ಲಿ ಸುನಾಮಿ ಎಬ್ಬಿಸಿದೆ.
ಅಷ್ಟಕ್ಕೂ, ಬಾದ್ಷಾ ಹಾಗೂ ಭೈರವ ಕಾಂಬಿನೇಷನ್ ನಲ್ಲಿ ಅಟ್ಲಿ ಸಿನಿಮಾ ಮಾಡ್ತಾರೆನ್ನುವ ಸುದ್ದಿ ಹೊಸದೇನಲ್ಲ. ಯಾಕಂದ್ರೆ, ಅಟ್ಲಿ ಬರ್ತ್ಡೇ ದಿನ ಶಾರುಖ್-ವಿಜಯ್ ಭಾಗಿಯಾದಾಗ್ಲೇ ಫ್ಯಾನ್ಸ್ ಪ್ರಿಡಿಕ್ಟ್ ಮಾಡಿದ್ದರು. ಮುಂದೊಂದು ದಿನ ಇವರಿಬ್ಬರನ್ನು ಹಾಕ್ಕೊಂಡು ಅಟ್ಲಿ ಸಿನಿಮಾ ಮಾಡ್ತಾರೆ ಅಂತ ಅಭಿಮಾನಿಗಳು ಅಂದೇ ಷರಾ ಬರೆದಿದ್ದರು. ಅದನ್ನು ನೋಡ್ಕೊಂಡು ಕೆಲ ವೆಬ್ಸೈಟ್ ಗಳು ವರದಿ ಮಾಡಿದ್ದು ಉಂಟು. ಆದರೆ, ಅಧಿಕೃತವಾಗಿ ಅಟ್ಲೀ ಕಡೆಯಿಂದ ಕನ್ಫರ್ಮೇಷನ್ ಸಿಕ್ಕಿರಲಿಲ್ಲ. ಇದೀಗ, ಸ್ವತಃ ಅಟ್ಲಿಯೇ ಕೆಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಶಾರುಖ್-ವಿಜಯ್ ಕಾಂಬಿನೇಷನ್ ನಲ್ಲಿ ಸಿನಿಮಾ ಬರುವುದನ್ನು ಖಚಿತಪಡಿಸಿದ್ದಾರೆ. ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಲಿಕ್ಕೆ ಇಬ್ಬರು ಕೂಡ ಒಪ್ಪಿಕೊಂಡಿದ್ದು, ಸ್ಕ್ರಿಪ್ಟ್ ವರ್ಕ್ ತಯ್ಯಾರಿಯಲ್ಲಿರುವುದಾಗಿ ಹೇಳಿಕೊಂಡಿದ್ದಾರೆ.

ಅಟ್ಲಿ ಪಾಲಿಗೆ ದಳಪತಿ ವಿಜಯ್ ಸ್ವಂತ ಅಣ್ಣನಂತಿರುವುದು ನಿಮಗೆಲ್ಲ ಗೊತ್ತಿರುವ ವಿಚಾರವೇ. ಈಗ ಕಿಂಗ್ ಖಾನ್ ಅಟ್ಲಿಗೆ ಗಾಡ್ಫಾದರ್ ಸ್ಥಾನ ತುಂಬಿದ್ದಾರೆ. ಯಂಗ್ ಡೈರೆಕ್ಟರ್ಗೆ ಕಾಲ್ಶೀಟ್ ಕೊಟ್ಟು ಬಾಲಿವುಡ್ ಗೆ ಕರ್ಕೊಂಡು ಹೋಗಿರುವ ಬಾದ್ಷಾ, ನಿರ್ದೇಶಕ ಅಟ್ಲಿ ಗ್ಲೋಬಲ್ ಲೆವೆಲ್ನಲ್ಲಿ ಗುರ್ತಿಸಿಕೊಳ್ಳುವುದಕ್ಕೆ ಕಾರಣರಾಗಿದ್ದಾರೆ. ದಳಪತಿ ವಿಜಯ್ ಗೆ ಬ್ಯಾಕ್ ಟು ಬ್ಯಾಕ್ ಮೂರು ಬ್ಲಾಕ್ಬಸ್ಟರ್ ಹಿಟ್ ಸಿನಿಮಾಗಳನ್ನೇ ಕೊಟ್ಟ ಅಟ್ಲಿ ಅಲಿಯಾಸ್ ಅರುಣ್ ಕುಮಾರ್, ಕಿಂಗ್ ಖಾನ್ಗೆ `ಜವಾನ್’ ಮೂಲಕ ಮ್ಯಾಸೀವ್ ಹಿಟ್ ನೀಡಿದ್ದಾರೆ. ಹೀಗಿರುವಾಗ ಈ ಇಬ್ಬರು ಸೂಪರ್ ಸ್ಟಾರ್ಸ್ ಅಟ್ಲಿಗೆ ನೆಕ್ಸ್ಟ್ ಕಾಲ್ಶೀಟ್ ನೀಡದೇ ಇರ್ತಾರಾ? ಹಂಡ್ರೆಡ್ ಪರ್ಸೆಂಟ್ ಕೊಟ್ಟೇ ಕೊಡ್ತಾರೆ, ಈಗಾಗಲೇ ಕೊಟ್ಟಿದ್ದಾರೆ ಕೂಡ. ಹೀಗಾಗಿಯೇ, ಅಟ್ಲಿ ಎದೆಮುಟ್ಟಿ ಹೇಳಿಕೊಳ್ತಿದ್ದಾರೆ. ಸೌತ್-ನಾರ್ತ್ ಬಾಕ್ಸ್ ಆಫೀಸ್ ಕಿಂಗ್ ಗಳು ಒಟ್ಟಿಗೆ ಕಣಕ್ಕಿಳಿಯುವುದಕ್ಕೆ ಕಾರಣಕರ್ತರಾಗ್ತಿದ್ದಾರೆ.
ಸದ್ಯ ಸಿನಿದುನಿಯಾದಲ್ಲಿ ಪ್ಯಾನ್ ಇಂಡಿಯಾ ಟ್ರೆಂಡ್ ಹೇಗೆ ಟ್ರೆಂಡಿಂಗ್ನಲ್ಲಿದೆಯೋ ಹಾಗೆಯೇ ಮಲ್ಟಿಸ್ಟಾರರ್ ಟ್ರೆಂಡ್ ಕೂಡ ಮುಂದುವರೆಯುತ್ತಿದೆ. ಬಾಲಿವುಡ್, ಟಾಲಿವುಡ್, ಕಾಲಿವುಡ್, ಸ್ಯಾಂಡಲ್ವುಡ್ ಹೀಗೆ ಎಲ್ಲಾ ಚಿತ್ರರಂಗದಲ್ಲೂ ನಿರ್ದೇಶಕರು ಸೂಪರ್ ಸ್ಟಾರ್ಸ್ ಗಳನ್ನ ಒಟ್ಟುಗೂಡಿಸಿ ಒಟ್ಟಿಗೆ ಅಖಾಡಕ್ಕೆ ಇಳಿಸುತ್ತಿದ್ದಾರೆ. ಬೇರೆ ಬೇರೆ ಭಾಷೆಯ ನಟರು ಕೂಡ ಪರಭಾಷೆಯಲ್ಲಿ ಸ್ಪೆಷಲ್ ಅಪಿಯರೆನ್ಸ್ ಮಾಡ್ತಿದ್ದಾರೆ. ಅಂದ್ಹಾಗೇ, ಜವಾನ್ ಸಿನಿಮಾದಲ್ಲಿ ದಳಪತಿ ಕ್ಯಾಮಿಯೋ ರೋಲ್ ಪ್ಲೇ ಮಾಡ್ತಾರೆನ್ನುವ ಸುದ್ದಿ ಹಬ್ಬಿತ್ತು. ಆದರೆ, ಥಿಯೇಟರ್ಗೆ ಹೋದಾಗ ಕಿಂಗ್ ಖಾನ್ ಜೊತೆ ತಮಿಳು ತಲೈವಾ ಕಾಣಲೇ ಇಲ್ಲ. ಇದರಿಂದ ಇಬ್ಬರ ಫ್ಯಾನ್ಸ್ಗೆ ಕೊಂಚ ನಿರಾಸೆಯಾಗಿತ್ತು. ಆದ್ರೀಗ ಅಟ್ಲಿ ಕೊಟ್ಟ ಗುಡ್ನ್ಯೂಸ್ನಿಂದ ಫ್ಯಾನ್ಸ್ ಕೇಕೆ ಹೊಡೆಯುತ್ತಿದ್ದಾರೆ. ಆದಷ್ಟು ಬೇಗ ಸಿನಿಮಾ ಶುರು ಮಾಡಿ ಅಂತಿದ್ದಾರೆ.
ಈಗ ದಳಪತಿ ಲಿಯೋ ಸಿನಿಮಾ ಬಿಡುಗಡೆಗೆ ಎದುರು ನೋಡ್ತಿದ್ದಾರೆ. ಇದೇ ಮೊದಲ ಭಾರಿಗೆ ಪ್ಯಾನ್ ಇಂಡಿಯಾ ಹೋಗ್ತಿರೋ ಭೈರವ, ಈಗಾಗಲೇ ಅಮೇರಿಕಾದಲ್ಲಿ ಪ್ರಿರಿಲೀಸ್ ಬುಕ್ಕಿಂಗ್ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಇದೇ ಅಕ್ಟೋಬರ್ 19ರಂದು ಲಿಯೋ ತೆರೆಗೆ ಅಪ್ಪಳಿಸುತ್ತಿದೆ. ಅನಂತರ ಬಿಗಿಲ್ ಹೀರೋ ಯಾರ ಅಖಾಡಕ್ಕೆ ಇಳಿಯುತ್ತಾರಾ ಅನ್ನೋದು ಸದ್ಯಕ್ಕಿರೋ ಕುತೂಹಲ. ಯಾಕಂದ್ರೆ, ವಿಜಯ್ ಮುಂದಿನ ಸಿನಿಮಾ ಅಧಿಕೃತವಾಗಿ ಯಾವುದು ಘೋಷಣೆಯಾಗಿಲ್ಲ. ಇತ್ತ ಕಿಂಗ್ ಖಾನ್ ಅಪ್ಕಮ್ಮಿಂಗ್ ಡಂಕಿ ರಿಲೀಸ್ಗೆ ರೆಡಿಯಿದೆ. ಡಿಸೆಂಬರ್ 22ಕ್ಕೆ ರಿಲೀಸ್ ಅನ್ನೋ ಮಾತಿದೆ. ಅದು ಬಿಟ್ಟರೆ ಬಾದ್ಷಾ ಕೂಡ ಯಾವ ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಹೀಗಾಗಿ, ಇವರಿಬ್ಬರ ನೆಕ್ಸ್ಟ್ ಪಿಕ್ಚರ್ ಅಟ್ಲಿ ಆ್ಯಕ್ಷನ್ ಕಟ್ ಹೇಳುವ ಸಿನಿಮಾ ಆಗ್ಬೋದು. ಆ ಸಿನಿಮಾ `ಜವಾನ್-2′ ಆಗಿರುತ್ತಾ ಅಥವಾ ಬೇರೆಯದ್ದೇ ಸಿನಿಮಾ ಜೊತೆ ಬರುತ್ತಾರಾ? ಹೀಗೊಂದು ಸಂಶಯ ಇದೆ. ಇದರ ಜೊತೆಗೆ ದಕ್ಷಿಣದ ಖ್ಯಾತ ನಿರ್ದೇಶಕ ಅಟ್ಲಿಗೆ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು, ಅಲ್ಲು ಅರ್ಜುನ್ ಹಾಗೂ ಪ್ರಿನ್ಸ್ ಮಹೇಶ್ ಬಾಬು ಕಾಲ್ಶೀಟ್ ಸಿಕ್ಕಿದೆ. ಹೀಗಾಗಿ, ಅಟ್ಲಿ, ನೆಕ್ಸ್ಟ್ ಪಿಕ್ಚರ್ ಕಿಂಗ್ ಖಾನ್ ಪ್ಲಸ್ ವಿಜಯ್ ನಾ ಅಥವಾ ಬನ್ನಿ ಹಾಗೂ ಪ್ರಿನ್ಸಾ? ಜಸ್ಟ್ ವೇಯ್ಟ್ ಅಂಡ್ ವಾಚ್ ಅಷ್ಟೇ.





