ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸದ್ದಿಲ್ಲದೇ ಮುಂಬೈಗೆ ಹೋಗಿ ಬಾಲಿವುಡ್ನ ದಿ ಗ್ರೇಟ್ ಡೈರೆಕ್ಟರ್ ಅಶುತೋಷ್ ಗೋವಾರಿಕರ್ ಅವ್ರನ್ನ ಭೇಟಿ ಮಾಡಿದ್ದರು. ಅವತ್ತೇ ಮುಂಬೈ ಪಾಪರಾಜಿಗಳು ಶೆಟ್ರ ಫೋಟೋ, ವಿಡಿಯೋ ಸೆರೆಹಿಡಿದು ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿದ್ದರು. ಅಂದಿನಿಂದ ಸೌತ್-ನಾರ್ತ್ ಅಂಗಳದ ತುಂಬೆಲ್ಲಾ ಗೋವಾರಿಕರ್ ಹಾಗೂ ಡಿವೈನ್ಸ್ಟಾರ್ ಜುಗಲ್ಬಂಧಿಯದ್ದೇ ಸದ್ದುಸುದ್ದಿ. ಆ ಸುದ್ದಿಗೀಗ ಪುಷ್ಟಿ ಸಿಕ್ಕಂತಾಗಿದೆ, ಜನಪ್ರಿಯ ನಿರ್ದೇಶಕ ಅಶುತೋಷ್ ಗೋವಾರಿಕರ್ ಹೊಸ ಸಿನಿಮಾ ಅನೌನ್ಸ್ ಆಗಿದೆ. ಅದು `ಆದಿ ಗುರು ಶಂಕರಾಚಾರ್ಯರ’ ಕುರಿತಾದ ಚಿತ್ರ ಎಂಬುದೇ ವಿಶೇಷ.
ಲಗಾನ್, ಸ್ವದೇಶ್, ಜೋದಾ ಅಕ್ಬರ್, ಮೊಹೆಂಜೋದಾರೋ, ಪಾಣಿಪತ್ ಸೇರಿದಂತೆ ಹಲವು ಅದ್ಭುತ ಸಿನಿಮಾಗಳನ್ನ ಭಾರತೀಯ ಚಿತ್ರರಂಗಕ್ಕೆ ಕಾಣಿಕೆಯಾಗಿ ಕೊಟ್ಟಿರುವ ನಿರ್ದೇಶಕ ಅಶುತೋಷ್ ಗೋವಾರಿಕರ್, ಈಗ `ಆದಿ ಗುರು ಶಂಕರಾಚಾರ್ಯರ’ ಸಿನಿಮಾ ಮಾಡಲು ಹೊರಟಿದ್ದಾರೆ. ಚಿತ್ರಕ್ಕೆ `ಶಂಕರ್’ ಅಂತ ಹೆಸರಿಟ್ಟು ಅಧಿಕೃತವಾಗಿ ಸಿನಿಮಾ ಘೋಷಿಸಿರುವ ಗೋವಾರಿಕರ್, ಶಂಕರಾಚಾರ್ಯರ ಜೀವನ ಮತ್ತು ಲೋಕಜ್ಞಾನವನ್ನು ಸಿನಿಮೀಯ ನಿರೂಪಣೆ ಮೂಲಕ ಇಡೀ ಜಗತ್ತಿಗೆ ತೋರಿಸುವುದಕ್ಕೆ ಸಜ್ಜಾಗಿದ್ದಾರೆ. ಇವತ್ತಿನ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ನಲ್ಲಿ `ಶಂಕರ್’ ಚಿತ್ರ ಅದ್ದೂರಿಯಾಗಿ ಮೂಡಿಬರಲಿದೆ. ಆಚಾರ್ಯ ಶಂಕರ್ ಸ್ಯಾನ್ಸ್ ಕ್ರಿಟ್ ಏಕ್ತಾ ನ್ಯಾಸ್ ಸಂಸ್ಥೆಯ ಸಹಯೋಗದೊಂದಿಗೆ ಅಶುತೋಷ್ ಗೋವಾರಿಕರ್ ಪ್ರೊಡಕ್ಷನ್ ಹೌಸ್ ಈ ಸಿನಿಮಾವನ್ನ ತೆರೆಗೆ ತರಲಿದೆ.
ಹಾಗಾದ್ರೆ, ಶಂಕರಾಚಾರ್ಯರ ಪಾತ್ರವನ್ನ ಮಾಡ್ತಿರುವುದು ನಮ್ಮ ಡಿವೈನ್ ಸ್ಟಾರಾ? ಹೀಗೊಂದು ಕುತೂಹಲ ನಿಮ್ಮೆಲ್ಲರನ್ನೂ ಕಾಡುತ್ತೆ. ಆದರೆ, ಆ ನಿಮ್ಮ ಕುತೂಹಲ ತಣಿಸುವುದಕ್ಕೆ ನಮ್ಮ ಬಳಿಯೂ ಉತ್ತರವಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ನಿರ್ದೇಶಕರಾದ ಅಶುತೋಷ್ ಗೋವಾರಿಕರ್, ಶಂಕರಾಚಾರ್ಯರ ಪಾತ್ರ ಮಾಡ್ತಿರುವವರ್ಯಾರು ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಹೀಗಾಗಿ, ಖುದ್ದು ಅವರೇ ಅನೌನ್ಸ್ ಮಾಡುವವರೆಗೂ ನಾವೆಲ್ಲರೂ ಕಣ್ಣಿಗೆ ಎಣ್ಣೆಬಿಟ್ಕೊಂಡು ಕಾಯ್ಲೆಬೇಕು. ಆದರೆ, ತೀರಾ ಇತ್ತೀಚೆಗೆ ಲಗಾನ್ ನಿರ್ದೇಶಕರನ್ನ ನಮ್ಮ ಡಿವೈನ್ ಸ್ಟಾರ್ ಭೇಟಿ ಮಾಡಿ ಬಂದಿರುವುದರಿಂದ, ಶಂಕರಾಚಾರ್ಯರ ಪಾತ್ರವನ್ನ ಶೆಟ್ರೆ ನಿಭಾಯಿಸಬಹುದೆಂದು ಊಹಿಸಿಕೊಳ್ಳಬಹುದು. ಒಂದ್ವೇಳೆ ನಿಮ್ಮಗಳ ಈ ಕಲ್ಪನೆ ಸುಳ್ಳಾದರೆ `ಶಂಕರ್’ ಸಿನಿಮಾಗೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆಯಲಿಕ್ಕಾದ್ರೂ ಬಾಲಿವುಡ್ ಡೈರೆಕ್ಟರ್ ಗೆ ರಿಷಬ್ ನೆರವಾಗಿರುತ್ತಾರೆ. ಯಾಕಂದ್ರೆ, ನೆಲಮೂಲದ ಕಥೆಯನ್ನ ಕಾಂತಾರ ಮೂಲಕ ಇಡೀ ಜಗತ್ತಿಗೆ ಸಾರಿ ಸೈ ಎನಿಸಿಕೊಂಡವರು. ಹೀಗಾಗಿ, ಅದ್ವೈತ ಚಿಂತನೆಯ ಮೂಲಕ ಲೋಕ ಬೆಳಗಿದ ಮಹಾನ್ ಶಕ್ತಿಯ ಕಥೆಯನ್ನ ಬೆಳ್ಳಿತೆರೆಗೆ ತರುವಲ್ಲಿ ಗೋವಾರಿಕರ್ ಜೊತೆ ಡಿವೈನ್ ಸ್ಟಾರ್ ಕೈ ಜೋಡಿಸಿರುತ್ತಾರೆ ಎಂದರೆ ಬಹುಷಃ ತಪ್ಪಾಗಲಿಕ್ಕಿಲ್ಲ
ಸದ್ಯ ಶೆಟ್ರು ಕಾಂತಾರ ಪಾರ್ಟ್-2ನಲ್ಲಿ ಬ್ಯುಸಿ ಇದ್ದಾರೆ. ಪ್ರಿಪ್ರೊಡಕ್ಷನ್ ವರ್ಕ್ನಲ್ಲಿ ತೊಡಗಿಸಿಕೊಂಡಿರುವ ಶೆಟ್ರು, ನವೆಂಬರ್ ಅಥವಾ ಡಿಸೆಂಬರ್ನಿಂದ ಶೂಟಿಂಗ್ ಹೊರಡಲು ಪ್ಲ್ಯಾನ್ ರೂಪಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ ಎರಡ್ಮೂರು ತಿಂಗಳಲ್ಲಿ ಪಿಕ್ಚರ್ ಮುಗಿಸಿಬಿಡ್ತಾರೆ. ಅನಂತರ ಮುಂದೇನು ಅಂತ ಪ್ರಶ್ನೆ ಮಾಡುವವರಿಗೆ ಸದ್ಯ `ಶಂಕರ್’ ಸಿನಿಮಾ ಕಣ್ಮುಂದೆಯೇ ಇದೆ. ಅಷ್ಟಕ್ಕೂ, ಶೆಟ್ರು ಅಶುತೋಷ್ ಗೋವಾರಿಕರ್ ನಿರ್ದೇಶನದ `ಶಂಕರ್’ಗಾಗಿ ತೆರೆಹಿಂದೆ ಕೆಲಸ ಮಾಡಿದ್ದಾರಾ? ಅಥವಾ ಮುಖಕ್ಕೆ ಬಣ್ಣ ಹಚ್ಚಿಕೊಂಡು ಶಂಕರಾಚಾರ್ಯರ ಪಾತ್ರಕ್ಕೆ ಜೀವ ತುಂಬಲಿದ್ದಾರಾ ಗೊತ್ತಿಲ್ಲ. ಒಂದ್ವೇಳೆ `ಶಂಕರ್’ ಸಿನಿಮಾಗೆ ಮೇಕಪ್ ಹಚ್ಚಿದ್ದರೆ ಅಲ್ಲೊಂದು ಅದ್ಭುತವಂತೂ ಸೃಷ್ಟಿಯಾಗುತ್ತೆ. ಚರಿತ್ರೆಯ ಪುಟಗಳಲ್ಲಿ `ಶಂಕರ್’ ಸಿನಿಮಾ ದಾಖಲಾಗುತ್ತೆ ಎನ್ನುತ್ತಿದ್ದಾರೆ ಅವರಿಬ್ಬರ ಫ್ಯಾನ್ಸ್. ಹಂಗಾಗಲೀ ಅನ್ನೋದೇ ಮಜಾಕನ್ನಡದ ಆಶಯ ಕೂಡ





