ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಚಿತ್ರಗಳ ಪೈಕಿ `ಕೆಡಿ’ ಕೂಡ ಒಂದು. ಜೋಗಿ ಪ್ರೇಮ್ ನಿರ್ದೇಶನದಲ್ಲಿ ತಯ್ಯಾರಾಗುತ್ತಿರುವ ಕೆಂಡದಂತಹ ಈ ಸಿನಿಮಾದಲ್ಲಿ ಸ್ಟಾರ್ ನಟ-ನಟಿಯರ ದಂಡೇ ಇದೆ. ಇದೀಗ ಈ ಚಿತ್ರಕ್ಕೆ ಸ್ಯಾಂಡಲ್ವುಡ್ನ ಚಿರಯುವಕ ನಟ ರಮೇಶ್ ಅರವಿಂದ್ ಸೇರ್ಪಡೆಯಾಗಿದ್ದಾರೆ

ಹೌದು, ನಟ ರಮೇಶ್ ಅರವಿಂದ್ ‘ಕೆಡಿ’ ಚಿತ್ರದಲ್ಲಿ ನಾಯಕ ಧ್ರುವ ಸರ್ಜಾ ಅಣ್ಣನ ಪಾತ್ರ ಪೋಷಿಸುತ್ತಿದ್ದಾರೆ. ಈ ವಿಷಯವನ್ನು ಜೋಗಿ ಪ್ರೇಮ್ ಸ್ವತಃ ಬಹಿರಂಗಗೊಳಿಸಿದ್ದು, ಸದ್ಯದಲ್ಲೇ ರಮೇಶ್ ತಮ್ಮ ಚಿತ್ರದ ಶೂಟಿಂಗ್ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದಿದ್ದಾರೆ. ‘ಕೆಡಿ-ದಿ ಡೆವಿಲ್’ ಚಿತ್ರದ ಚಿತ್ರೀಕರಣದಲ್ಲಿ ಈಗಾಗಲೇ ಬಾಲಿವುಡ್ ನಟ ಸಂಜಯ್ ದತ್, ಶಿಲ್ಪಾ ಶೆಟ್ಟಿ, ಕನ್ನಡದ ಕ್ರೇಜಿ ಸ್ಟಾರ್ ರವಿಚಂದ್ರನ್ ಭಾಗವಹಿಸುತ್ತಿದ್ದಾರೆ. ಇದೀಗ ರಮೇಶ್ ಅರವಿಂದ್ ಚಿತ್ರತಂಡವನ್ನು ಸೇರಿಕೊಳ್ಳುವ ಮೂಲಕ ಇನ್ನಷ್ಟು ನಿರೀಕ್ಷೆ ಮೂಡಲು ಕಾರಣರಾಗಿದ್ದಾರೆ.

ಕೆಡಿ ಒಂದು ಬಿಗ್ ಬಜೆಟ್ ಸಿನಿಮಾ. ಕನ್ನಡ ಸೇರಿದಂತೆ ಪರಭಾಷೆಯ ಸಿನಿಮಾಗಳನ್ನು ವಿತರಣೆ ಮಾಡುವ ಮೂಲಕ ಸಾಕಷ್ಟು ಹೆಸರುವಾಸಿಯಾಗಿರುವ ಕೆವಿಎನ್ ಪ್ರೊಡಕ್ಷನ್ ಹೌಸ್ `ಕೆಡಿ’ ಚಿತ್ರಕ್ಕೆ ಬಂಡವಾಳ ಸುರಿದಿದೆ. ಬಹುಕೋಟಿ ವೆಚ್ಚದಲ್ಲಿ `ಕೆಡಿ’ ಚಿತ್ರ ಮೂಡಿಬರುತ್ತಿದ್ದು, ಶೂಟಿಂಗ್ ಭರದಿಂದ ಸಾಗಿದೆ. ‘ಕೆಡಿ-ದಿ ಡೆವಿಲ್’ ಚಿತ್ರದಲ್ಲಿ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ರೀಷ್ಮಾ ಭಾಗದ ಚಿತ್ರೀಕರಣ ಮರಳುಗಾಡಿನಲ್ಲಿ ನಡೆಯುತ್ತಿದ್ದು, ಬಿಡುವಿನ ವೇಳೆಯಲ್ಲಿ ನಟಿ ಮರಳಿನ ಜತೆ ಆಟವಾಡುತ್ತ ಎಂಜಾಯ್ ಮಾಡುತ್ತಿದ್ದಾರಂತೆ. ‘ಪೊಗರು’ ಚಿತ್ರದ ಬಳಿಕ ಧ್ರುವ ಸರ್ಜಾ ನಟಿಸುತ್ತಿರುವ ಚಿತ್ರ ಇದಾಗಿದ್ದು, ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ನಿರ್ಮಾಣಗೊಳ್ಳುತ್ತಿದೆ. ಆದಷ್ಟು ಬೇಗ ಚಿತ್ರೀಕರಣ ಮುಗಿಸಿ ಈ ವರ್ಷದೊಳಗೆ ತೆರೆಗೆ ತರುವ ಪ್ರಯತ್ನ ನಡೀತಿದೆ. ‘ಜೋಗಿ ಪ್ರೇಮ್-ಧ್ರುವ ಸರ್ಜಾ’ ಕಾಂಬಿನೇಷನ್ ಅಭಿಮಾನಿಗಳಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.





