ಒಂದಷ್ಟು ಸಮಾನ ಮನಸ್ಕರು ಸೇರಿಕೊಂಡು ಪ್ರತಿಭಾವಂತರಿಗೆ ಕೆಲಸ ನೀಡುವ ಸಲುವಾಗಿ ‘ಟಿಎಂಟಿ ಪ್ರೊಡಕ್ಷನ್ಸ್’ ಮೂಲಕ ’ಆರಾರಿರಾರೋ’ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ವೃತ್ತಿ ಇಂಜಿನಿಯರ್, ಪ್ರವೃತ್ತಿ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಸಂದೀಪ್ ಶೆಟ್ಟಿ ಕಥೆ ಬರೆದು ಆಕ್ಷನ್ ಕಟ್ ಹೇಳಿರುವ ‘ಆರಾರಿರಾರೋ’ ಸಿನಿಮಾ ಇದೇ ಸೆಪ್ಟೆಂಬರ್ 22 ರಂದು ಬಿಡುಗಡೆಯಾಗಿತ್ತು. ಇದೀಗ ಈ ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರತಂಡದ ಖುಷಿ ಹೆಚ್ಚಿಸಿದೆ. ‘ಆರಾರಿರಾರೋ’ ಸಿನಿಮಾವು ಭಾವನೆಗಳ ಮೌಲ್ಯವನ್ನು ಸಾರಲಿದೆ. ಕಥೆಯಲ್ಲಿ ಮುಗ್ದ ಕಳ್ಳನೊಬ್ಬ ಅಜ್ಜಿಯನ್ನು ಯಾವ ರೀತಿ ಆರೈಕೆ ಮಾಡುತ್ತಾನೆ. ಇದಕ್ಕೆ ಕಾರಣವೇನು? ಸಂಬಂಧವಿಲ್ಲದ ಆಕೆಯನ್ನು ನೋಡಿಕೊಳ್ಳುವ ಪ್ರಮೇಯವಾದರೂ ಏತಕ್ಕೆ ಬಂತು. ಹಾಗೆಯೇ ಪ್ರತಿಯೊಂದು ಜೀವಿಗೂ ನೈಸರ್ಗಿಕ ವಾತಾವರಣದಲ್ಲಿ ಬದುಕಬೇಕೆಂಬ ಆಸೆ ಇರುತ್ತದೆ ಎಂಬುದನ್ನು ಸನ್ನಿವೇಶಗಳ ಮೂಲಕ ಅರ್ಥಪೂರ್ಣವಾಗಿ ತೋರಿಸಲಾಗಿದೆ.
‘ಆರಾರಿರಾರೋ’ ಎಂಬುದು ತಾಯಿ ಮಗುವಿಗೆ ಹಾಡುವಾಗ ಬರುವ ಜೋಗುಳದ ಪದ. ಅದೇ ಶೀರ್ಷಿಕೆ ಪದ ಸೂಕ್ತ ಅನಿಸಿರುವುದರಿಂದ ‘ಆರಾರಿರಾರೋ’ ಎಂಬ ಟೈಟಲ್ ಬಳಸಲಾಗಿದೆ ಎಂಬುದು ಚಿತ್ರತಂಡ ನೀಡುವ ವಿವರಣೆ. ‘ಆರಾರಿರಾರೋ’ ಸಿನಿಮಾದಲ್ಲಿ ನಾಯಕನಾಗಿ ಪ್ರಸನ್ನ ಶೆಟ್ಟಿ, ಅಜ್ಜಿಯಾಗಿ ಮುತ್ಸದ್ದಿ ವೀಣಾಕಾಮತ್, ಮತ್ತೊಂದು ಮುಖ್ಯ ಪಾತ್ರದಲ್ಲಿ ನಿರೀಕ್ಷಾ ಶೆಟ್ಟಿ ಉಳಿದಂತೆ ಜೀವ, ಪಿಂಕಿರಾಣಿ, ರೂಪಾಶೆಟ್ಟಿ, ಮಂಗೇಶ ಭಟ್, ಗೌತಂ ಮುಂತಾದವರು ನಟಿಸಿದ್ದಾರೆ. ಈಗಾಗಲೇ ಈ ಸಿನಿಮಾ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದೆ. ಅಲ್ಲದೆ ಮುಂಬೈ ಹಾಗೂ ಆಸ್ಟ್ರೇಲಿಯಾ ಕಡೆಗಳಿಂದ ವಿತರಕರು ಆಹ್ವಾನ ನೀಡಿದ್ದಾರೆ. ತಮಿಳು ಭಾಷೆಗೆ ಡಬ್ಬಿಂಗ್ ಮಾಡಲು ಬೇಡಿಕೆ ಬಂದಿರುವುದು ತಂಡಕ್ಕೆ ಸಂತಸ ತಂದಿದೆ.





