‘ವಿಸಿಕ ಫಿಲಂಸ್’ ಹಾಗೂ ‘ಹನಿ ಚೌದ್ರಿ ಫಿಲಂಸ್’ ಬ್ಯಾನರ್ ಅಡಿಯಲ್ಲಿ ಮೂಡಿಬಂದಿರುವ ‘ಭೈರವ’ ಸಿನಿಮಾದ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಸಾಯಿ ಸರ್ವೇಶ್ ಸಾಹಿತ್ಯವಿರುವ ಚೇತನ್ ಕೃಷ್ಣ ಸಂಗೀತ ಸಂಯೋಜಿಸಿರುವ ‘ಹೇ ಮಂದಾರ…’ ಎಂಬ ಈ ಹಾಡಿಗೆ ಅಜಯ್ ವಾರಿಯರ್ ಧ್ವನಿಯಾಗಿದ್ದಾರೆ. ಉತ್ತರ ಪ್ರದೇಶದ ಸುಂದರ ಸ್ಥಳಗಳಲ್ಲಿ ಚಿತ್ರೀಕರಣಗೊಂಡ ಹಾಡಿಗೆ ಬಿ. ಧನಂಜಯ್ ನೃತ್ಯ ಸಂಯೋಜನೆ ಮಾಡಿದ್ದಾರೆ.
ಈ ಹಿಂದೆ ‘ಕಮರೊಟ್ಟು ಚೆಕ್ ಪೋಸ್ಟ್’ ಸಿನಿಮಾದಲ್ಲಿ ಅಭಿನಯಿಸಿದ್ದ ಸನತ್, ‘ಒಂದು ಮೊಟ್ಟೆಯ ಕಥೆ’ ಖ್ಯಾತಿಯ ಶೈಲಾಶ್ರೀ ಮುಲ್ಕಿ ಹಾಗೂ ‘ಬನ್- ಟಿ’ ಖ್ಯಾತಿಯ ಉಮೇಶ್ ಸಕ್ಕರೆನಾಡು ಹಾಗು ಇನ್ನೂ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ‘ಭೈರವ’ ಚಿತ್ರಕ್ಕೆ ‘ವಿಸಿಕ ಫಿಲಂಸ್’ ಹಾಗೂ ‘ಹನಿ ಚೌದ್ರಿ ಫಿಲಂಸ್’ ಬ್ಯಾನರ್ ಅಡಿಯಲ್ಲಿ ಹನಿ ಚೌದ್ರಿ ಹಾಗೂ ಶ್ರೀನಿವಾಸ್ ಭೆಟ್ಟದಪುರ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಚರಣ್ ಸುವರ್ಣ ಬರೆದಿರುವ ಕಥೆಗೆ, ರಾಮ್ ತೇಜ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

ಉತ್ತರ ಪ್ರದೇಶದ ಗೋವಿಂದಪುರಿ, ಹರಿದ್ವಾರ, ರಿಷಿಕೇಶ್, ಕಾಶಿ, ಬೆಂಗಳೂರು ಸುತ್ತಮುತ್ತ ‘ಭೈರವ’ ಸಿನಿಮಾದ ಚಿತ್ರೀಕರಣವಾಗಿದೆ. ಸದ್ಯ ಈ ಚಿತ್ರದ ಮೊದಲ ಹಾಡನ್ನು ಖ್ಯಾತ ನಿರ್ದೇಶಕರುಗಳಾದ ದಿನಕರ್ ತೂಗುದೀಪ್, ಭರ್ಜರಿ ಚೇತನ್ ಕುಮಾರ್, ಹಾಗೂ ಗರಡಿ ಚಿತ್ರದ ನಾಯಕರಾದ ಸೂರ್ಯ, ವಸಿಷ್ಠ ಸಿಂಹ ಹಾಗೂ ವಿಕ್ರಂ ರವಿಚಂದ್ರನ್, ಜಾಯಿದ್ ಖಾನ್, ಸೋನಲ್ ಮಾಂತೇರೋ, ಧರ್ಮಣ್ಣ ಕಡೂರ್ ಬಿಡುಗಡೆ ಮಾಡುವ ಮೂಲಕ ಚಿತ್ರ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಶೀಘ್ರದಲ್ಲಿಯೇ ‘ಭೈರವ’ನನ್ನು ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.





