ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದಲ್ಲಿ ಕೆಲ ವರ್ಷಗಳ ಹಿಂದೆ ‘ರಾವಣ್’ ಎಂಬ ಸಿನಿಮಾ ತೆರೆಕಂಡು ಯಶಸ್ಸು ಗಳಿಸಿತ್ತು. ಈಗ ಇದೇ ‘ರಾವಣ್’ ಹೆಸರಿನಲ್ಲಿ ಕನ್ನಡ ಚಿತ್ರವೊಂದು ಸೆಟ್ಟೇರಿದೆ. ಗಾಂಧಿಜಯಂತಿ ದಿನದಂದು ಉಳ್ಳಾಲಾದಲ್ಲಿರುವ ಶ್ರೀ ಮುನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸರಳವಾಗಿ ಈ ಚಿತ್ರದ ಮಹೂರ್ತ ನೆರವೇರಿತು. ಈ ಹಿಂದೆ ಶಿಕ್ಷಣ ವ್ಯವಸ್ಥೆ ಕುರಿತಾದ ’ಮಿಸ್ ನಂದಿನಿ’ ಸಿನಿಮಾ ಮಾಡಿರುವ ಗುರುದತ್ ಎಸ್. ಆರ್ ಸದ್ಯ ಸಸ್ಪೆನ್ಸ್, ಥ್ರಿಲ್ಲರ್, ಕ್ರೈಮ್ ಜಾನರ್ ನ ‘ರಾವಣ್’ ಸಿನಿಮಾಗೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್- ಕಟ್ ಹೇಳುತ್ತಿದ್ದಾರೆ. ಕಡೂರು ಮೂಲದ ನೀಲಕಂಠಸ್ವಾಮಿ ಬಂಡವಾಳ ಹೂಡುತ್ತಿದ್ದಾರೆ. ಜಗದೀಶ್ ನಿರ್ಮಾಣದಲ್ಲಿ ಪಾಲುದಾರರು.

ಒಂದು ಕೇಸ್‌ನ್ನು ಹತ್ತು ರೀತಿಯಲ್ಲಿ ಯೋಚಿಸಿ ಹೇಗೆ ಆರೋಪಿಯನ್ನು ಕಂಡು ಹಿಡಿಯುತ್ತಾರೆ. ಕ್ಲೈಮಾಕ್ಸ್‌ದಲ್ಲಿ ರಾವಣ್ ಯಾರು ಎಂಬುದು ತಿಳಿಯಲಿದೆ. ’ನೀವು ಮಾಡಿದ ಪಾಪಗಳು ಯಾವತ್ತಿದ್ದರೂ ನಿಮಗೆ ಮುಳುವಾಗುತ್ತದೆ’ ಎಂಬ ಅಡಿಬರಹವನ್ನು ಇಂಗ್ಲೀಷ್‌ನಲ್ಲಿ ಹೇಳಲಾಗಿದೆ. ’ಕಬ್ಜ’ ಸೇರಿದಂತೆ ನಾಲ್ಕಾರು ಚಿತ್ರಗಳಲ್ಲಿ ಖಳನಾಗಿ ನಟಿಸಿದ್ದ ರತನ್‌ಚೆಂಗಪ್ಪ ನಾಯಕನಾಗಿ ಬಡ್ತಿ ಹೊಂದಿದ್ದು, ತನಿಖಾಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ’ಹರಿಕಥೆ ಗಿರಿಕಥೆ’ ಖ್ಯಾತಿಯ ತಪಸ್ವಿನಿ ಪೂಣಚ್ಚ ಪತ್ರಕರ್ತೆಯಾಗಿ ನಾಯಕಿ. ನವಪ್ರತಿಭೆ ಸಮೀಕ್ಷಾ ಉಪನಾಯಕಿ. ನ್ಯಾಯಧೀಶರಾಗಿ ಸಿದ್ಲಿಂಗು ಶ್ರೀಧರ್, ಡಿಜಿಪಿಯಾಗಿ ಪ್ರಮೋದ್‌ಶೆಟ್ಟಿ, ಚರ್ಚ್ ಫಾದರ್ ಆಗಿ ರಂಗಾಯಣರಘು ಇವರೊಂದಿಗೆ ರಘುಪಾಂಡೇಶ್ವರ್, ಟಗರು ಸರೋಜ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಾರ್ತಿಕ್ ಮತ್ತು ಜಗ್ಗಪ್ಪ ಮುಂತಾದವರು ಅಭಿನಯಿಸುತ್ತಿದ್ದಾರೆ. ಛಾಯಾಗ್ರಹಣ ಮನು, ಸಂಕಲನ ವೆಂಕಿ.ಯುಡಿವಿ, ಸಂಭಾಷಣೆ ಕೀರ್ತಿ ಅವರದಾಗಿದೆ. ಕೇರಳ, ಸಾಗರ, ಮಡಕೇರಿ, ಮಂಗಳೂರು ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ.





