ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಕ್ರೇಜ್ ಕಡಿಮೆಯಾಯ್ತು, ಪುಷ್ಪ ಚೆಲುವೆಯ ಮಾರ್ಕೆಟ್ ಬಿದ್ದೋಯ್ತು ಅಂತ ಮಾತನಾಡುವವರೆಲ್ಲರೂ ಈ ಸ್ಟೋರಿನಾ ಓದ್ಲೇಬೇಕು. ಯಾಕಂದ್ರೆ, ಶ್ರೀವಲ್ಲಿ ಕೈಲಿ ಒಂದಲ್ಲ ಎರಡಲ್ಲ ಸುಮಾರು ಆರು ಸಿನಿಮಾಗಳಿವೆ. ಅದಕ್ಕೀಗ ಹೊಸದಾಗಿ `ಛತ್ರಪತಿ ಸಂಭಾಜಿ ಮಹಾರಾಜ್’ ಸಿನಿಮಾ ಸೇರ್ಪಡೆಯಾಗ್ತಿದೆ. ಮರಾಠಾ ಚಕ್ರವರ್ತಿಯ ಚರಿತ್ರೆಯ ಸಿನಿಮಾದಲ್ಲಿ ಧಗಧಗಿಸುವ ಅವಕಾಶ ಕೂರ್ಗ್ ಚೆಲುವೆ ರಶ್ಮಿಕಾರನ್ನ ಅರಸಿಕೊಂಡು ಬಂದಿದೆ. ಈ ಬಗ್ಗೆ ಬಿಟೌನ್ ಅಂಗಳದಲ್ಲಿ ಸಾಕಷ್ಟು ಸುದ್ದಿಯಾಗ್ತಿದ್ದು, ಶ್ರೀವಲ್ಲಿ ಡಿಮ್ಯಾಂಡ್ ಕಡಿಮೆಯಾಗ್ತಿಲ್ಲ ಎನ್ನುವುದಕ್ಕೆ ಸಾಕ್ಷಿ ಸಿಗ್ತಾಯಿದೆ.
ಚಲೋ ಅಂತ ಟಿಟೌನ್ಗೆ ಹೋದ ಕಿರಿಕ್ ಚೆಲುವೆ ಅಲ್ಲಿನ ಸ್ಟಾರ್ ನಾಯಕಿಯರನ್ನೆಲ್ಲಾ ಸೈಡಿಗೆ ಸರಿಸಿದ್ದು, ಸ್ಟಾರ್ ನಟಿಯಾಗಿದ್ದು ನಿಮಗೆಲ್ಲ ಗೊತ್ತೆಯಿದೆ. ಅತೀ ಕಡಿಮೆ ಅವಧಿಯಲ್ಲಿ ಡಿಮ್ಯಾಂಡಿಂಗ್ ಹೀರೋಯಿನ್ ಪಟ್ಟಕ್ಕೇರಿ, ಕೋಟಿ ಕೋಟಿ ಲೆಕ್ಕದಲ್ಲಿ ಸಂಭಾವನೆ ಪಡೆದ ಚಮಕ್ ಚೆಲುವೆ ಈಗ ಸೌತ್ ಮಾತ್ರವಲ್ಲ ನಾರ್ತ್ ಇಂಡಸ್ಟ್ರಿಯಲ್ಲೂ ರೂಲ್ ಮಾಡುತ್ತಿದ್ದಾರೆ. ಟಾಲಿವುಡ್ನ ಬಹುತೇಕ ಸೂಪರ್ ಸ್ಟಾರ್ಸ್ ಗಳ ಜೊತೆ ಸ್ಕ್ರೀನ್ ಶೇರ್ ಮಾಡಿ ಸೈ ಎನಿಸಿಕೊಂಡಿರುವ ಡಿಯರ್ ಕಾಮ್ರೇಡ್ ಲಿಲ್ಲಿ, ಈಗ ಬಾಲಿವುಡ್ ಸ್ಟಾರ್ಗಳಿಗೆ ಜೋಡಿಯಾಗುತ್ತಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್, ಸಿದ್ದಾರ್ಥ್ ಮಲ್ಹೋತ್ರಾ, ರಣಬೀರ್ ಕಪೂರ್ ನಂತರ ವಿಕ್ಕಿ ಕೌಶಲ್ ಪಕ್ಕದಲ್ಲಿ ನಿಲ್ಲುತ್ತಿದ್ದಾರೆ. `ಛತ್ರಪತಿ ಸಂಭಾಜಿ ಮಹಾರಾಜ್’ ಆಗಿ ಧಗಧಗಿಸಲು ಹೊರಟಿರುವ ಬಾಲಿವುಡ್ ವಿಕ್ಕಿಗೆ ನ್ಯಾಷನಲ್ ಕ್ರಷ್ ರಶ್ಮಿಕಾ ಜೊತೆಯಾಗುತ್ತಿದ್ದಾರೆ. ಫ್ರೀಡಂಫೈಟರ್ ಸರ್ದಾರ್ ಉದಾಮ್ ಸಿಂಗ್, ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣಿಕ್ ಶಾ ಲೈಫ್ಸ್ಟೋರಿಗೆ ಜೀವತುಂಬಿ ಪ್ರೇಕ್ಷಕರಿಂದ ಜೈಕಾರ ಹಾಕಿಸಿಕೊಂಡಿದ್ದ ವಿಕ್ಕಿಕೌಶಲ್ ಈಗ ಮರಾಠ ದೊರೆಯಾಗಿ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ
ಭಾರತೀಯ ಚಿತ್ರರಂಗದಲ್ಲಿ ಕಮರ್ಷಿಯಲ್ ಸಿನಿಮಾಗಳ ಅಬ್ಬರ-ಆರ್ಭಟದ ನಡುವೆಯೂ ಪೌರಾಣಿಕ, ಐತಿಹಾಸಿಕ ಸಿನಿಮಾಗಳು ಸೆಟ್ಟೇರುತ್ತವೆ. ಬೆಳ್ಳಿಭೂಮಿ ಮೇಲೆ ವಿರಾಜಮಾನವಾಗಿ ಹೊಳೆಯುವುದಲ್ಲದೇ ಸಿನಿ ಇತಿಹಾಸದ ಪುಟಗಳಲ್ಲೂ ಚರಿತ್ರೆಯನ್ನ ಸೃಷ್ಟಿಸುತ್ತವೆ. ಹೀಗಾಗಿಯೇ ಹಲವಾರು ನಿರ್ದೇಶಕರು ಹಿಸ್ಟ್ರಾರಿಕಲ್ ಹಾಗೂ ಮೈಥಾಲಾಜಿಕಲ್ ಸಿನಿಮಾಗಳನ್ನು ಕೈಗೆತ್ತಿಕೊಳ್ಳುತ್ತಾರೆ. ಅದರಂತೇ `ಮಿಮಿ’ ಸಿನಿಮಾ ಖ್ಯಾತಿಯ ನಿರ್ದೇಶಕರಾದ ಲಕ್ಷ್ಮಣ್ ಉಟೇಕರ್ ಅವರು ಛತ್ರಪತಿ ಸಂಭಾಜಿ ಮಹಾರಾಜರ ಜೀವನ ಚರಿತ್ರೆಯನ್ನ ಬೆಳ್ಳಿತೆರೆ ಮೇಲೆ ತರುವುದಕ್ಕೆ ಹೊರಟಿದ್ದಾರೆ. ಛತ್ರಪತಿ ಶಿವಾಜಿ ಮಹರಾಜರ ಬಗ್ಗೆ ಅನೇಕ ಸಿನಿಮಾಗಳು ಬಂದಿವೆ ಎನ್ನುವ ಅವರು ಛತ್ರಪತಿ ಸಂಭಾಜಿ ಮಹಾರಾಜರು ಎಂತಹ ವಾರಿಯರ್ ಅನ್ನೋದನ್ನ ಕಲಾಜಗತ್ತಿಗೆ ಹೇಳಬೇಕು. ಮರಾಠಾ ಸಾಮ್ರಾಜ್ಯಕ್ಕೆ ಹಾಗೂ ಮಹಾರಾಷ್ಟ್ರಕ್ಕೆ ಸಂಭಾಜಿ ಮಹಾರಾಜರ ಕೊಡುಗೆ ಎಷ್ಟಿದೆ ಅನ್ನೋದನ್ನ ಜನತೆಗೆ ತಿಳಿಸ್ಬೇಕು. ಹೀಗಾಗಿಯೇ ನಾನು ಛತ್ರಪತಿ ಸಂಭಾಜಿ ಮಹಾರಾಜರ ಬಯೋಪಿಕ್ಗೆ ಕೈಹಾಕಿದ್ದೇನೆ ಎಂದಿದ್ದಾರೆ.

ಬಿಗ್ ಬಜೆಟ್ನಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಜೀವನಗಾಥೆಯನ್ನ ಕಟ್ಟಿಕೊಡಲು ನಿರ್ಧರಿಸಿದ್ದಾರೆ. ಇದಕ್ಕೆ ಬೇಕಾದ ಪೂರ್ವ ತಯ್ಯಾರಿಯನ್ನೆಲ್ಲಾ ಮಾಡಿಕೊಂಡಿರುವ ನಿರ್ದೇಶಕ ಲಕ್ಷ್ಮಣ್ ಉಟೇಕರ್ ಅವರು, ಛತ್ರಪತಿ ಸಂಭಾಜಿ ಮಹಾರಾಜರ ಪಾತ್ರಕ್ಕೆ ಬಾಲಿವುಡ್ ನಟ ವಿಕ್ಕಿ ಕೌಶಲ್ ಅವ್ರನ್ನ ಆಯ್ಕೆ ಮಾಡಿದ್ದಾರೆ. ವಿಕ್ಕಿಗೆ ಯಾವುದೇ ಲುಕ್ ಟೆಸ್ಟ್ ಬೇಕಾಗಿಲ್ಲ. ಛತ್ರಪತಿ ಸಂಭಾಜಿ ಮಹಾರಾಜರ ಪಾತ್ರಕ್ಕೆ ವಿಕ್ಕಿ ಪರ್ಫೆಕ್ಟಾಗಿ ಸ್ಯೂಟ್ ಆಗ್ತಾರೆ ಎನ್ನುವ ಅವರು, ವಿಕ್ಕಿ ಹೈಟ್ -ಪರ್ಸನಾಲಿಟಿಗೆ ಮಾತ್ರವಲ್ಲ ಫ್ಯಾಬ್ಯೂಲಸ್ ಪರ್ಫಾಮರ್ ಕೂಡ ಹೌದು ಅಂತ ಹಾಡಿಹೊಗಳಿದ್ದಾರೆ. ಈಗಾಗಲೇ ನಟ ವಿಕ್ಕಿ ಕೌಶಲ್ ಕೂಡ ಪಾತ್ರಕ್ಕಾಗಿ ತಯಾರಿ ನಡೆಸಿದ್ದಾರಂತೆ. ಕತ್ತಿವರಸೆ, ಕುದುರೆ ಸವಾರಿ ತರಭೇತಿ ಪಡೆಯುತ್ತಿದ್ದಾರಂತೆ. ಪ್ರಿಪ್ರೊಡಕ್ಷನ್ ಸ್ಟೇಜ್ ನಲ್ಲಿರುವ ಈ ಸಿನಿಮಾ ಇನ್ನೇನು ಕೆಲವೇ ತಿಂಗಳಲ್ಲಿ ಸೆಟ್ಟೇರಲಿದೆ. ಜರಾ ಹಟ್ಕೆ ಜರಾ ಬಚ್ಕೆ ಸಿನಿಮಾದ ಮೂಲಕ ಮೋಡಿ ಮಾಡಿದ ಈ ಕಾಂಬಿನೇಷನ್ ಛತ್ರಪತಿ ಸಂಭಾಜಿ ಮಹಾರಾಜರ ಸಿನಿಮಾ ಮೂಲಕ ಮತ್ತೆ ಒಂದಾಗುತ್ತಿದೆ. ಡಿಸೆಂಬರ್ 06 2024 ವಲ್ರ್ಡ್ ವೈಡ್ ಸಿನಿಮಾ ತೆರೆಗೆ ತರಬೇಕು ಎನ್ನುವ ಪ್ಲ್ಯಾನ್ ಕೂಡ ಹಾಕಿಕೊಂಡಿದೆ. ಇಂತಹ ಐತಿಹಾಸಿಕ ಸಿನಿಮಾದಲ್ಲಿ ನಟಿಸುವ ಅವಕಾಶ ಕನ್ನಡತಿ ರಶ್ಮಿಕಾ ಗಿಟ್ಟಿಸಿಕೊಂಡಿದ್ದಾರೆನ್ನುವುದೇ ಅವರ ಅಭಿಮಾನಿಗಳಿಗೆ ಖುಷಿಯ ವಿಚಾರ.





