ಟೈಗರ್ ಶ್ರಾಫ್, ಕೃತಿ ಸನೂನ್ ಮತ್ತು ಅಮಿತಾಭ್ ಬಚ್ಚನ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಗಣಪತ್’ನ ಟ್ರೇಲರ್ ಬಿಡುಗಡೆಯಾಗಿದೆ. ಬಾಲಿವುಡ್‍ನ ಖ್ಯಾತ ನಿರ್ಮಾಣ ಸಂಸ್ಥೆಯಾದ ‘ಪೂಜಾ ಎಂಟರ್ ಟೈನ್ಮೆಂಟ್’ ಈ ಬಿಗ್ ಬಜೆಟ್ ನ ‘ಗಣಪತ್’ ಸಿನಿಮಾವನ್ನು ನಿರ್ಮಿಸಿ ತೆರೆಗೆ ತರುತ್ತಿದೆ. ವಿಕಾಸ್ ಬಹ್ಲ್ ನಿರ್ದೇಶಿಸಿರುವ ಚಿತ್ರ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಏಕಕಾಲಕ್ಕೆ ಅ. 20ರಂದು ಬಿಡುಗಡೆಯಾಗುತ್ತಿದೆ.
‘ಗಣಪತ್’ ಚಿತ್ರದ ಒಂದು ವಿಶೇಷತೆಯೆಂದರೆ, ಇದೊಂದು ಭವಿಷ್ಯದ ಚಿತ್ರವಾಗಿರುವುದು. ಚಿತ್ರದಲ್ಲಿ ಗ್ರಾಫಿಕ್ಸ್ ಕೆಲಸಗಳು ಹೆಚ್ಚಾಗಿದ್ದು, ಜಗತ್ತಿನಾದ್ಯಂತ ಇರುವ ನುರಿತ ಗ್ರಾಫಿಕ್ಸ್ ತಜ್ಞರು ಈ ಚಿತ್ರಕ್ಕೆ ಅಂತರರಾಷ್ಟ್ರೀಯ ಸ್ಪರ್ಶ ಕೊಟ್ಟಿದ್ದಾರೆ. ಇದುವರೆಗೂ ಯಾವುದೇ ಭಾರತೀಯ ಚಿತ್ರದಲ್ಲೂ ಕಂಡರಿಯದ ವಿಎಫ್‍ಎಕ್ಸ್ ಕೆಲಸ ಈ ಚಿತ್ರದಲ್ಲಿ ನೋಡಬಹುದಾಗಿದ್ದು, ಈ ನಿಟ್ಟಿನಲ್ಲಿ ‘ಗಣಪತ್’, ಭಾರತೀಯ ಚಿತ್ರರಂಗದಲ್ಲಿ ಹೊಸದೊಂದು ಮಾದರಿಯಾಗಿರಲಿದೆ. ಈ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಸಿನಿಮಾ ಅನುಭವ ನೀಡುವ ಪ್ರಯತ್ನವನ್ನು ಮಾಡಲಾಗಿದೆ ಎಂಬುದು ಚಿತ್ರತಂಡದ ಅನಿಸಿಕೆ. ಈಗಾಗಲೇ ’ಗಣಪತ್’ ಸಿನಿಮಾದ ಹಾಡು ಮತ್ತು ಟೀಸರ್ ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಈಗ ಟ್ರೇಲರ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.





