ಸೋಷಿಯಲ್ ಮೀಡಿಯಾದಿಂದ ಏನೇನೆಲ್ಲ ಅನಾಹುತಗಳು ನಡೆಯುತ್ತಿವೆ, ಅದರಲ್ಲಿ ಜನ ಯಾವ ರೀತಿ ಮೋಸಹೋಗುತ್ತಿದ್ದಾರೆ ಎಂಬುದರ ಕುರಿತಾದ ಕಥೆ ಇಟ್ಟುಕೊಂಡು ‘ಮಾಯೆ ಆ್ಯಂಡ್ ಕಂಪನಿ’ ಎಂಬ ಚಿತ್ರ ತಯಾರಾಗಿದೆ. ಈಗಾಗಲೇ ಈ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇತ್ತೀಚೆಗೆ ‘ಮಾಯೆ ಆ್ಯಂಡ್ ಕಂಪನಿ’ ಯ ಟ್ರೇಲರ್ ಬಿಡುಗಡೆಯಾಯಿತು.

ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ, ಗಾಯಕ ಶಂಕರ್ ಶಾನುಭೋಗ್, ನಟಿ ಮಾನಸ ಜೋಷಿ ಮೊದಲಾದವರು ‘ಮಾಯೆ ಆ್ಯಂಡ್ ಕಂಪನಿ’ ಸಿನಿಮಾದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು. ಕಳೆದ 34 ವರ್ಷಗಳಿಂದ ಬೆಂಗಳೂರು ದೂರದರ್ಶನ ಕೇಂದ್ರದಲ್ಲಿ ಸಂಕಲನಕಾರರಾಗಿ ಕೆಲಸಮಾಡಿ, ಈಗ ನಿವೃತ್ತಿ ಹೊಂದಿರುವ ಎಂ. ಎನ್. ರವೀಂದ್ರರಾವ್ ‘ಮಾತೃಶ್ರೀ ವಿಷನ್’ ಸಂಸ್ಥೆಯ ಮೂಲಕ ‘ಮಾಯೆ ಆ್ಯಂಡ್ ಕಂಪನಿ’ ಸಿನಿಮಾವನ್ನು ನಿರ್ಮಿಸಿದ್ದಾರೆ. ಸಂದೀಪ್ ಕುಮಾರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ನಿರ್ದೇಶನ ಮಾಡಿದ್ದಾರೆ.

‘ಮಾಯೆ ಆ್ಯಂಡ್ ಕಂಪನಿ’ ಸಿನಿಮಾದಲ್ಲಿ ಅರ್ಜುನ್ ಕಿಶೋರ್ ಚಂದ್ರ, ಯಶಶ್ರೀ, ಅನುಷಾ ಆನಂದ್, ಯಾಸೀನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಹಿರಿಯ ಸಾಹಿತಿ ಡಾ. ಹೆಚ್. ಎಸ್. ವೆಂಕಟೇಶಮೂರ್ತಿ ಸಾಹಿತ್ಯ ರಚಿಸಿದ್ದು, ಇಂಚರ ಪ್ರವೀಣ್ ಸಂಗೀತ ನೀಡಿದ್ದಾರೆ. ಸಿದ್ದಾರ್ಥ ಹಿನ್ನೆಲೆ ಸಂಗೀತ, ಲಿಂಗರಾಜ್ ಸಂಕಲನ, ಶಂಕರ್ ಆರಾಧ್ಯ ಛಾಯಾಗ್ರಹಣ ಈ ಚಿತ್ರಕ್ಕಿದೆ, ಸೆನ್ಸಾರ್ ಮಂಡಳಿಯಿಂದ ‘ಯು/ಎ’ ಪ್ರಮಾಣಪತ್ರವನ್ನು ಪಡೆದಿರುವ ‘ಮಾಯೆ ಆ್ಯಂಡ್ ಕಂಪನಿ’ ಸಿನಿಮಾವನ್ನು ಶೀಘ್ರದಲ್ಲಿಯೇ ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.





