ಈಗಾಗಲೇ ಹಲವು ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ ನಿರ್ಮಾಣದಲ್ಲಿ ಮೂಡಿಬಂದಿರುವ ‘ಶಿವಮ್ಮ’ ಸಿನಿಮಾ ಶೀಘ್ರದಲ್ಲಿಯೇ ಥಿಯೇಟರಿನಲ್ಲಿ ಬಿಡುಗಡೆಯಾಗಲಿದೆ.
‘ಬುಸಾನ್ ಚಲನಚಿತ್ರೋತ್ಸವ’ ಸೇರಿದಂತೆ ಜಗತ್ತಿನಾದ್ಯಂತ ಹಲವಾರು ಪ್ರತಿಷ್ಠಿತ ಚಲನಚಿತ್ರೋತ್ಸವಗಳ ಮೂಲಕ ಒಂದು ವರ್ಷಗಳ ಕಾಲ ಜಗತ್ತಿನ ವಿವಿಧ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿರುವ ‘ಶಿವಮ್ಮ’ ಅಂತಿಮವಾಗಿ ಭಾರತಕ್ಕೆ ಆಗಮಿಸಲಿದೆ. ಭಾರತದ ಪ್ರತಿಷ್ಠಿತ ಮಾಮಿ ಮುಂಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ದಕ್ಷಿಣ ಏಷ್ಯಾದ ಚೊಚ್ಚಲ ಪ್ರದರ್ಶನವನ್ನು ಕಾಣುತ್ತಿದೆ. ಇರಾನ್ನಲ್ಲಿ ನಡೆದ ‘ಫಜರ್ ಚಲನಚಿತ್ರೋತ್ಸವ’ದಲ್ಲಿ ಪ್ರಶಸ್ತಿ ಗೆದ್ದ ಮೊದಲ ಕನ್ನಡ ಚಿತ್ರ ಇದಾಗಿದ್ದು, ಚಿತ್ರವು ಈಗಾಗಲೇ ಐದು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

‘ಶಿವಮ್ಮ’ ಸಿನಿಮಾವನ್ನು ಸಂಪೂರ್ಣವಾಗಿ ಉತ್ತರ ಕರ್ನಾಟಕದ ಕೊಪ್ಪಳ ಜಿಲ್ಲೆಯ ಯರೇಹಂಚಿನಾಳ ಗ್ರಾಮದಲ್ಲಿ ಚಿತ್ರೀಕರಿಸಲಾಗಿದ್ದು, ಊರಿನ ಗ್ರಾಮಸ್ಥರೇ ಬಹುತೇಕ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ತನ್ನ ಕುಟುಂಬದ ಉನ್ನತಿಗೋಸ್ಕರ ನೆಟ್ವರ್ಕ್ ಮಾರ್ಕೆಟಿಂಗ್ ವ್ಯಾಪಾರದಲ್ಲಿ ತೊಡಗುವ ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡುವ ಹಳ್ಳಿ ಹೆಣ್ಣುಮಗಳ ಸುತ್ತ ‘ಶಿವಮ್ಮ’ ಸಿನಿಮಾದ ಕಥೆ ಸಾಗುತ್ತದೆ. ‘ರಿಷಬ್ ಶೆಟ್ಟಿ ಫಿಲಂಸ್’ ಯೂಟ್ಯೂಬ್ ಚಾನೆಲ್ನಲ್ಲಿ ‘ಶಿವಮ್ಮ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಸಿನಿಮಾಪ್ರೇಮಿಗಳ ಗಮನ ಸೆಳೆಯುತ್ತಿದೆ.





