ಹಿರಿತೆರೆ ಹಾಗೂ ಕಿರುತೆರೆಯಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಹೊಂದಿರುವ ನಟ ಅನಿರುದ್ಧ್ ಜತ್ಕರ್ ನಾಯಕರಾಗಿ ನಟಿಸುತ್ತಿರುವ, ‘ಶೆಫ್ ಚಿದಂಬರ’ ಸಿನಿಮಾದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯವಾಯಿತು. ‘ಶೆಫ್ ಚಿದಂಬರ’ ಸಿನಿಮಾವನ್ನು ಬೆಂಗಳೂರು, ಮಂಗಳೂರು, ತುಮಕೂರು, ದೇವರಾಯನದುರ್ಗ ಮುಂತಾದ ಕಡೆಗಳಲ್ಲಿ ಒಟ್ಟು 29 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.
‘ಶೆಫ್ ಚಿದಂಬರ’ ಆ್ಯಕ್ಷನ್-ಥ್ರಿಲ್ಲರ್ ಕಥಾಹಂದರ ಹೊಂದಿರುವ ಡಾರ್ಕ್ ಹ್ಯೂಮರ್ ಜಾನರ್ ನ ಸಿನಿಮಾವಾಗಿದ್ದು, ನಾಯಕ ನಟ ಅನಿರುದ್ದ್ ಸಿನಿಮಾದಲ್ಲಿ ಶೆಫ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ‘ನಾನು ಯಾವತ್ತಿಗೂ ಅಡುಗೆಮನೆ ಕಡೆ ಹೋದವನಲ್ಲ. ಈ ಸಿನಿಮಾದಲ್ಲಿ ಮೊದಲ ಬಾರಿಗೆ ಶೆಫ್ ಪಾತ್ರ ನಿರ್ವಹಿಸಿದ್ದೇನೆ. ತರಬೇತಿ ಪಡೆದು ಈ ಪಾತ್ರ ನಿರ್ವಹಣೆ ಮಾಡಿದ್ದೇನೆ. ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಾದರೂ, ನಿರ್ದೇಶಕರು ಕಥೆಯನ್ನು ಹಾಸ್ಯದ ಮೂಲಕ ಹೇಳಿದ್ದಾರೆ. ಸಹ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಚೆನ್ನಾಗಿದೆ’ ಎಂಬುದು ನಾಯಕ ನಟ ಅನಿರುದ್ಧ್ ಜತ್ಕರ್ ಮಾತು.
ನಿಧಿ ಸುಬ್ಬಯ್ಯ ಮತ್ತು ರೆಚೆಲ್ ಡೇವಿಡ್ ‘ಶೆಫ್ ಚಿದಂಬರ’ ಸಿನಿಮಾದಲ್ಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಹಿರಿಯ ನಟ ಶರತ್ ಲೋಹಿತಾಶ್ವ, ಶಿವಮಣಿ, ಶ್ರೀಧರ್, ಮಾಹಂತೇಶ್ ಮುಂತಾದವರು ‘ಶೆಫ್ ಚಿದಂಬರ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ದಮ್ತಿ ಪಿಕ್ಚರ್ಸ್’ ಲಾಂಛನದಲ್ಲಿ ರೂಪ ಡಿ. ಎನ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ವಿಜಯ ರಾಘವೇಂದ್ರ ಅಭಿನಯದ ‘ರಾಘು’ ಸಿನಿಮಾವನ್ನು ನಿರ್ದೇಶಿಸಿದ್ದ ಎಂ. ಆನಂದರಾಜ್ ‘ಶೆಫ್ ಚಿದಂಬರ’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ. ಎಲ್ಲರ ಸಹಕಾರದಿಂದ ಚಿತ್ರೀಕರಣ ಮುಕ್ತಾಯವಾಗಿದ್ದು ಪೋಸ್ಟ್ ಪ್ರೊಡಕ್ಷನ್ ವರ್ಕ್ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.





