ಸೆಂಚುರಿ ಸ್ಟಾರ್ ಅಭಿಮಾನಿಗಳು ಸರಪಟಾಕಿ ಹಚ್ಚಿ ಸಂಭ್ರಮಿಸುವಂತಹ ಸುದ್ದಿಯಿದು. ದೊಡ್ಮನೆ ಭಕ್ತರೆಲ್ಲಾ ಒಟ್ಟುಗೂಡಿ ಹಬ್ಬ ಮಾಡುವಂತಹ ಧಮಾಕೇದಾರ್ ಸಮಾಚಾರವಿದು. ಬಂಗಾರ ಸನ್ ಆಫ್ ಬಂಗಾರದ ಮನುಷ್ಯನಿಗಿರುವ ಬೇಡಿಕೆಯ ಕಥನವಿದು. ಇಷ್ಟು ಹೇಳಿದ್ಮೇಲೆ ಕುತೂಹಲ ಗರಿಗೆದರೋದು ಸಹಜ. ದೊಡ್ಮನೆ ದೊರೆಯ ಭಕ್ತರು ಒಂಟಿಕಾಲಿನಲ್ಲಿ ನಿಲ್ಲೋದು ಸತ್ಯ. ಹೀಗಾಗಿ, ಹೆಚ್ಚು ಹೊತ್ತು ಕಾಯಿಸದೇ `ಶಿವ ಮೆಚ್ಚಿದ ಕಣ್ಣಪ್ಪ’ನ ದರ್ಶನದ ಕಥೆನಾ ನಿಮ್ಮ ಮುಂದೆ ಹರವಿಡುತ್ತೇವೆ ಓದಿ.

`ಶಿವ ಮೆಚ್ಚಿದ ಕಣ್ಣಪ್ಪ’ ಹೆಸರು ಕೇಳಿದಾಕ್ಷಣ ನಿಮ್ಮ ಕಣ್ಣ ಮುಂದೆ ಅಣ್ಣಾವ್ರು, ಶಿವಣ್ಣಾವ್ರು, ಅಪ್ಪು ಅವ್ರು ಬಂದುನಿಲ್ಲೋದು ಸತ್ಯ. ಯಾಕಂದ್ರೆ, ಜನಮಾನಸದ ಅಕ್ಷಿಪಟಗಳಲ್ಲಿ ಅಷ್ಟರ ಮಟ್ಟಿಗೆ ಅಚ್ಚೊತ್ತಿರುವ ಸಿನಿಮಾವದು. ಸಾಕ್ಷಾತ್ ಶಿವಪ್ಪನಾಗಿ ಅಣ್ಣಾವ್ರು ಪರಕಾಯ ಪ್ರವೇಶ ಮಾಡಿದ್ದರು. ಬಾಲ ಕಣ್ಣಪ್ಪನಾಗಿ ಅಪ್ಪು, ಯುವ ಕಣ್ಣಪ್ಪನಾಗಿ ಶಿವಣ್ಣ ಕಮಾಲ್ ಮಾಡಿದ್ದರು. ಅಷ್ಟಕ್ಕೂ, ನಾವು ಈ ಕ್ಷಣ ಈ ಸಿನಿಮಾದ ಬಗ್ಗೆ ಮಾತನಾಡ್ತಿರುವುದಕ್ಕೆ ಕಾರಣ `ಕಣ್ಣಪ್ಪ’ ಸಿನಿಮಾ ಹೊಸ ರೂಪದಲ್ಲಿ ಮತ್ತೆ ಬರುತ್ತಿದೆ. ಟಾಲಿವುಡ್ ನಟ ವಿಷ್ಣು ಮಂಚು `ಕಣ್ಣಪ್ಪ’ ಚಿತ್ರಕ್ಕೆ ಕೈ ಹಾಕಿದ್ದು, ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಗೆ ರೆಡ್‍ಕಾರ್ಪೆಟ್ ಹಾಕಿದ್ದಾರೆ. ತನ್ನ ಮಹತ್ವಾಕಾಂಕ್ಷೆಯ ಸಿನಿಮಾಗೆ ದೊಡ್ಮನೆ ದೊರೆಯನ್ನು ಬರಮಾಡಿಕೊಳ್ಳಲು ಕಾತುರರಾಗಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ `ಹರ್ ಹರ್ ಮಹಾದೇವ್’ ಎಂದು ಟ್ವೀಟ್ ಮಾಡುವ ಮೂಲಕ ಕರುನಾಡ ಚಕ್ರವರ್ತಿ ಶಿವಪ್ಪ, `ಕಣ್ಣಪ್ಪ’ ಚಿತ್ರದ ಭಾಗವಾಗುವುದು ಖರ್ರೆ ಎನ್ನುವ ಸತ್ಯವನ್ನು ಒಪ್ಪಿಕೊಂಡಿದ್ದಾರೆ.

ಇಲ್ಲಿವರೆಗೂ `ಕಣ್ಣಪ್ಪ’ ಚಿತ್ರದ ಪಾತ್ರಧಾರಿಗಳ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕವೇ ನಟ ವಿಷ್ಣು ಮಂಚು ಸುಳಿವು ಕೊಟ್ಟಿದ್ದಾರೆ. ಮೊದಲಿಗೆ ಡಾರ್ಲಿಂಗ್ ಪ್ರಭಾಸ್ `ಕಣ್ಣಪ್ಪ’ ಸಿನಿಮಾದ ಭಾಗವಾಗ್ತಿದ್ದಾರೆ. ಗೆಳೆಯ ವಿಷ್ಣು ಮಂಚುಗೋಸ್ಕರ ಶಿವನ ಪಾತ್ರದಲ್ಲಿ ಅಭಿನಯಿಸೋದಕ್ಕೆ ಒಪ್ಪಿಕೊಂಡಿದ್ದಾರೆನ್ನುವ ರೂಮರ್ ಹಬ್ಬಿತ್ತು. ಇದಕ್ಕೆ ಸಾಮಾಜಿಕ ಜಾಲತಾಣದ ಮೂಲಕವೇ ಬ್ರೇಕ್ ಹಾಕಿದ ವಿಷ್ಣುಮಂಚು, `ಹರ್ ಹರ್ ಮಹಾದೇವ್’ ಎಂದು ಟ್ವೀಟ್ ಮಾಡುವ ಮೂಲಕವೇ ಅಮರೇಂದ್ರ ಬಾಹುಬಲಿ ಶಿವನ ಅವತಾರವೆತ್ತುವುದು ಗ್ಯಾರಂಟಿ ಎನ್ನುವುದನ್ನು ಖಚಿತಪಡಿಸಿದ್ದರು. ಅನಂತರ ಮಲೆಯಾಳಂ ಸೂಪರ್ ಸ್ಟಾರ್ ಮೋಹನ್‍ಲಾಲ್ ಎಂಟ್ರಿ ಸುದ್ದಿಯನ್ನು ಸ್ವಾಗತಿಸಿದ್ದರು. ಈ ಮಧ್ಯೆ ಲೇಡಿ ಸೂಪರ್ ಸ್ಟಾರ್ ನಯನ ತಾರಾ ಸೀತೆಯ ಪಾತ್ರದಲ್ಲಿ ಮಿಂಚುವ ಮ್ಯಾಟ್ರು ಹೊರಬಿದ್ದಿತ್ತು. ಆದರೆ, ವಿಷ್ಣು ಮಂಚು ಕಡೆಯಿಂದ ಈ ಸುದ್ದಿಗೆ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ಹೀಗಿರುವಾಗಲೇ ಸೆಂಚುರಿ ಸ್ಟಾರ್ ಶಿವರಾಜ್‍ಕುಮಾರ್ `ಕಣ್ಣಪ್ಪ’ ಚಿತ್ರದಲ್ಲಿ ಸ್ಪೆಷಲ್ ಅಪಿಯರೆನ್ಸ್ ಸಮಾಚಾರ್ ಲೀಕ್ ಆಗಿದೆ. ಇದಕ್ಕೆ ಸ್ವತಃ ವಿಷ್ಣು ಮಂಚು ಪ್ರತಿಕ್ರಿಯೆ ಕೊಟ್ಟಿದ್ದು ಭಜರಂಗಿ ಗ್ರ್ಯಾಂಡ್ ಎಂಟ್ರಿ ಫಿಕ್ಸಾಗಿದೆ.
ಅಂದ್ಹಾಗೇ, `ಕಣ್ಣಪ್ಪ’ ತೆಲುಗು ನಟ ವಿಷ್ಣು ಮಂಚು ಪಾಲಿನ ಡ್ರೀಮ್ ಪ್ರಾಜೆಕ್ಟ್. ಕಳೆದ ಏಳು ವರ್ಷಗಳ ಹಿಂದೆ ಈ ಸಿನಿಮಾದ ಬಗ್ಗೆ ಕನಸು ಕಂಡಿದ್ದರು. ಶಿವನ ಪರಮಭಕ್ತ ಕಣ್ಣಪ್ಪನ ಕಥೆನಾ ತೆರೆಮೇಲೆ ತರಬೇಕು, ತಾನು ಕಣ್ಣಪ್ಪನ ಪಾತ್ರಕ್ಕೆ ಜೀವ ತುಂಬಬೇಕು ಅಂತ ಫಿಕ್ಸಾಗಿದ್ದರು. ಅದರಂತೇ, ಈಗ `ಕಣ್ಣಪ್ಪ’ ಚಿತ್ರ ಶುರು ಮಾಡಿದ್ದಾರೆ. ಈ ಚಿತ್ರಕ್ಕಾಗಿ ಕೋಟಿ ಕೋಟಿ ಬಂಡವಾಳ ಸುರಿಯುತ್ತಿದ್ದಾರೆ. ಸೌತ್-ನಾರ್ತ್ ಸೂಪರ್ ಸ್ಟಾರ್ ಗಳನ್ನೆಲ್ಲಾ ಒಟ್ಟುಗೂಡಿಸಿ ಸಿನಿಮಾ ಮಾಡುವ ಪ್ರಯತ್ನದಲ್ಲಿದ್ದಾರೆ. ಈಗಾಗಲೇ ಚಿತ್ರಕ್ಕೆ ಡಾರ್ಲಿಂಗ್ ಪ್ರಭಾಸ್, ಎವರ್ ಗ್ರೀನ್ ಹೀರೋ ಮೋಹನ್ ಲಾಲ್, ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಆನ್‍ಬೋರ್ಡ್ ಆಗಿದ್ದಾರೆ. ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ಖಿಲಾಡಿ ಅಕ್ಷಯ್ ಕುಮಾರ್ ಜೊತೆ ಮಾತುಕತೆ ನಡೆಸಿದ್ದು ಅವರಿಬ್ಬರ ಕಾಲ್ ಶೀಟ್ ಗಾಗಿ ಎದುರುನೋಡ್ತಿರುವ ಕುರಿತು ಸುದ್ದಿಯಾಗ್ತಿದೆ.
ಕಳೆದೊಂದು ವರ್ಷದಿಂದ `ಕಣ್ಣಪ್ಪ’ ಸಿನಿಮಾದ ಮೇಲೆ ವರ್ಕ್ ಮಾಡಿರುವ ವಿಷ್ಣುಮಂಚು ತಮ್ಮದೊಂದು ಟೀಮ್ ಕಟ್ಟಿಕೊಂಡು ಕಣಕ್ಕಿಳಿದ್ದಾರೆ. ಕಾಳಹಸ್ತಿಯಲ್ಲಿ ಸಿನಿಮಾ ಮುಹೂರ್ತ ಮಾಡಿ `ಕಣ್ಣಪ್ಪ’ ಚಿತ್ರಕ್ಕೆ ಚಾಲನೆ ಕೊಡಿಸಿದ್ದರು. ಈಗ ನ್ಯೂಜಿಲ್ಯಾಂಡ್ ನಿಂದ ಶೂಟಿಂಗ್ ಶುರು ಮಾಡಿದ್ದಾರೆ. 90 ದಿನ ಫಸ್ಟ್ ಷೆಡ್ಯೂಲ್ಡ್ ಶೂಟಿಂಗ್ ಪ್ಲ್ಯಾನ್ ಆಗಿದ್ದು ಸುಮಾರು 600 ಜನರ ತಂಡ `ಕಣ್ಣಪ್ಪ’ನಿಗಾಗಿ ಶ್ರಮವಹಿಸಿ ದುಡಿಯುತ್ತಿದೆ. ಮಹಾಭಾರತ ಸರಣಿ ಖ್ಯಾತಿಯ ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡಲಿದ್ದಾರೆ. ಪರಚೂರಿ ಗೋಪಾಲಕೃಷ್ಣ , ತೋಟಾ ಪ್ರಸಾದ್, ಸಾಯಿನಾಥ್ ತೋಟಪಲ್ಲಿ ಹಾಗೂ ಸಾಯಿ ಮಾಧವ್ ಬುರ್ರಾ ಒಟ್ಟಾಗಿ ಸೇರಿ ಕಥೆ ಬರೆದು ಕೊಟ್ಟಿದ್ದಾರೆ. ಮಣಿಶರ್ಮಾ ಮತ್ತು ಸ್ಟೀಫನ್ ದೇವಸಿ ಅವರ ಪ್ರತಿಭಾವಂತ ಜೋಡಿ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡುತ್ತಿದೆ. ಅವಾ ಎಂಟರ್ಟೈನ್ಮೆಂಟ್ ಮತ್ತು 24 ಫ್ರೇಮ್ಸ್ ಫ್ಯಾಕ್ಟರಿ ಜಂಟಿಯಾಗಿ ಸಿನಿಮಾ ನಿರ್ಮಾಣಗೊಳ್ಳುತ್ತಿದ್ದು, ಮಗನ ಕನಸಿನ ಸಿನಿಮಾಗೆ ವಿಷ್ಣು ಮಂಚು ತಂದೆ ಮೋಹನ್ ಬಾಬು ಅವರು ಬೆಂಬಲವಾಗಿ ನಿಂತಿದ್ದಾರೆ. ನೂರಾರು ಕೋಟಿ ಬಂಡವಾಳ ಹೂಡಿ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ `ಕಣ್ಣಪ್ಪ’ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

ಇಂಟ್ರೆಸ್ಟಿಂಗ್ ಅಂದರೆ `ಕಣ್ಣಪ್ಪ’ ಸಿನಿಮಾ `ಭಕ್ತ ಕಣ್ಣಪ್ಪ’ ಸಿನಿಮಾದ ರಿಮೇಕ್. ಆ `ಭಕ್ತ ಕಣ್ಣಪ್ಪ’ ನಮ್ಮ ಅಣ್ಣಾವ್ರ `ಬೇಡರ ಕಣ್ಣಪ್ಪ’ ಚಿತ್ರದ ರಿಮೇಕ್ ಅನ್ನೋದು ದೊಡ್ಮನೆ ಅಭಿಮಾನಿಗಳಿಗೆ ಮತ್ತು ಕನ್ನಡಿಗರಿಗೆ ಹೆಮ್ಮೆಯ ವಿಚಾರ. ಈಗ ಅದೇ ಕಣ್ಣಪ್ಪ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಭಾಗವಾಗ್ತಿರುವುದು ಕೂಡ ಖುಷಿಯ ಸಂಗತಿ. ಆದರೆ, ಕನ್ನಡಕ್ಕೆ ಇರೋದೊಂದೆ ಕೊಹಿನೂರ್. ಆ ಕೊಹಿನೂರ್ ಮೇಲೆ ಈಗ ಪರಭಾಷಿಗರ ಕಣ್ಣು ಬಿದ್ದಿದೆ. `ಜೈಲರ್’ ಸಿನಿಮಾದಲ್ಲಿ `ನರಸಿಂಹ’ನಾಗಿ ಖದರ್ ತೋರಿಸಿದ್ಮೇಲಂತೂ ಮಾಸ್ ಲೀಡರ್ ಮೇನಿಯಾ ನೆಕ್ಸ್ಟ್ ಲೆವೆಲ್‍ನಲ್ಲಿದೆ. ಹೀಗಾಗಿ, ಆ ಲೀಡರ್‍ನ ಲಾಕ್ ಮಾಡಿಕೊಳ್ಳಬೇಕು ಅಂತ ಹಲವರು ಪ್ರಯತ್ನಪಡ್ತಿದ್ದಾರೆ. ಈಗಾಗಲೇ, ಮಲೆಯಾಳಂ ಸೂಪರ್ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಸೆಂಚುರಿ ಸ್ಟಾರ್ ಕಾಲ್ ಶೀಟ್ ತಗೊಂಡಿದ್ದಾರೆ. ಎಂಪೂರಾನ್ ಸಿನಿಮಾದಲ್ಲಿ ಮೋಹನ್ ಲಾಲ್ ಹಾಗೂ ಮಾಸ್ ಲೀಡರ್ ನ ಒಗ್ಗೂಡಿಸಬೇಕು ಅನ್ನೋದು ಅವರ ಪ್ಲ್ಯಾನ್ ಅಂತೆ. ಈಗಾಗಲೇ ಈ ಜೋಡಿ `ಜೈಲರ್’ ನಲ್ಲಿ ಸಮಾಗಮಗೊಂಡಿದ್ದು ನಿಮಗೆ ಗೊತ್ತೆಯಿದೆ. ಈಗ `ಕಣ್ಣಪ್ಪ’ ಚಿತ್ರದಲ್ಲಿ ಮತ್ತೊಮ್ಮೆ ಒಟ್ಟಾಗುತ್ತಿದ್ದು ಸಿನಿಮಾ ಪ್ರೇಮಿಗಳು ಕಣ್ಣರಳಿಸುವಂತಾಗಿದೆ. ಕಾಲಿವುಡ್, ಟಾಲಿವುಡ್, ಬಾಲಿವುಡ್ ಅಂಗಳದಿಂದ ದೊಡ್ಮನೆ ದೊರೆಗೆ ರತ್ನಗಂಬಳಿ ಹಾಕುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ದಸರಾ ಹಬ್ಬಕ್ಕೆ ಪ್ಯಾನ್ ಇಂಡಿಯಾ ತುಂಬೆಲ್ಲಾ ರಿಲೀಸ್ ಆಗ್ತಿರುವ ಘೋಸ್ಟ್ ಕ್ಲಿಕ್ ಆದರೆ ಹ್ಯಾಟ್ರಿಕ್ ಹೀರೋ ಹವಾ ಪ್ಯಾನ್ ವಲ್ರ್ಡ್ ತುಂಬಾ ಹಬ್ಬಿಕೊಳ್ಳೋದು ಗ್ಯಾರಂಟಿ.






