ಯಾವ ದಿನಕ್ಕಾಗಿ, ಯಾವ ಕ್ಷಣಕ್ಕಾಗಿ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅಖಂಡ ಅಭಿಮಾನಿಗಳು ಕಾದು ಕುಳಿತಿದ್ದರೋ ಆ ದಿನ ಬಂದೇ ಬಿಟ್ಟಿದೆ. ಭರ್ತಿ 33 ವರ್ಷಗಳಿಂದ ಕಣ್ಣಿಗೆ ಎಣ್ಣೆ ಬಿಟ್ಕೊಂಡು ಕಾಯುತ್ತಿದ್ದ ಭಕ್ತಗಣ ಇಂದು ಕೇಕೆ ಹೊಡೆಯುತ್ತಿದೆ. ಇತ್ತೀಚೆಗಷ್ಟೇ ಪಡೆಯಪ್ಪ ಕೊಟ್ಟ ಸರ್ ಪ್ರೈಸ್‍ಗೆ ಫ್ಯಾನ್ಸ್ ಸರಪಟಾಕಿ ಹೊಡೆದು ಸಂಭ್ರಮಿಸಿದ್ದರು. ಇವತ್ತು, ಲೈಕಾ ಸಂಸ್ಥೆ ರಿವೀಲ್ ಮಾಡಿದ ಫೋಟೋ ನೋಡಿ ಶಿವಾಜಿ ಹಾಗೂ ಶೆಹೆನ್‍ಷಾ ಅಭಿಮಾನಿಗಳು ಬಹುಪರಾಕ್ ಹಾಕ್ತಿದ್ದಾರೆ. ಬೆಳ್ಳಿತೆರೆ ಅಂಗಳಕ್ಕೆ ಈ ಇಬ್ಬರು ದಿಗ್ಗಜರನ್ನು ಬರಮಾಡಿಕೊಳ್ಳುವ ದಿವ್ಯಕ್ಷಣಕ್ಕಾಗಿ ಹೀಗಿಂದಲೇ ಎದುರುನೋಡ್ತಿದ್ದಾರೆ.

ಅಂದ್ಹಾಗೇ, ಭಾರತೀಯ ಚಿತ್ರರಂಗದ ಈ ಇಬ್ಬರು ದಂತಕಥೆಗಳನ್ನು ಒಟ್ಟುಗೂಡಿಸಿ ಸಿನಿಮಾ ಮಾಡುತ್ತಿರುವ ಬಗ್ಗೆ ಲೈಕಾ ಸಂಸ್ಥೆ ಅಧಿಕೃತ ಘೋಷಣೆ ಮಾಡಿತ್ತು. ತಲೈವಾ 170 ಸಿನಿಮಾದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಕಾಣಿಸಿಕೊಳ್ತಿದ್ದಾರೆಂದು ಪೋಸ್ಟರ್ ಹಂಚಿಕೊಂಡಿತ್ತು. ಅಂದೇ ಈ ಇಬ್ಬರು ದಿಗ್ಗಜರ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದರು. ಮೊನ್ ಮೊನ್ನೆ ಬಾಷಾ, ಬಾಲಿವುಡ್ ಬಾದ್‍ಷಾ ಅಮಿತಾಬ್‍ರನ್ನ ಭೇಟಿ ಮಾಡುವ ಮೂಲಕ ಅಭಿಮಾನಿ ದೇವರುಗಳು ಹಾಗೂ ಸಮಸ್ತ ಸಿನಿಮಾ ಪ್ರೇಮಿಗಳು ಹುಚ್ಚೇಳುವಂತೆ ಮಾಡಿದ್ದರು. 33 ವರ್ಷದ ನಂತರ ನನ್ನ ಗುರು ಅಮಿತಾಬ್ ಬಚ್ಚನ್ ಅವರೊಂದಿಗೆ ಕೆಲಸ ಮಾಡುತ್ತಿದ್ದೇನೆ. ನನ್ನ ಹೃದಯವೀಗ ಸಂತೋಷದಿಂದ ಬಡಿದುಕೊಳ್ತಿದೆ ಎಂದು ತಮ್ಮ ಮನಸ್ಸಿನ ಭಾವನೆಗಳನ್ನ ಬರಹರೂಪಕ್ಕೆ ತರುವ ಮೂಲಕ, ಬಿಗ್ ಬಿ ಜೊತೆಗಿನ ಫೋಟೋ ಶೇರ್ ಮಾಡಿದ್ದರು.

ಈಗ ಲೈಕಾ ಸಂಸ್ಥೆ ದಿಗ್ಗಜರ ಫೋಟೋ ಹಂಚಿಕೊಂಡಿದೆ. ಮುಂಬೈ ಶೂಟಿಂಗ್ ಷೆಡ್ಯೂಲ್ಡ್ ಕಂಪ್ಲೀಟ್ ಆಗಿದ್ದು, ದಂತಕಥೆಗಳಿಂದ `ತಲೈವಾ-170′ ಸಿನಿಮಾ ಡಬಲ್ ಡೋಸ್ ಕಿಕ್ ನೀಡಲಿದೆ ಎಂದು ಟ್ವೀಟ್ ಮಾಡಿದೆ. ಬಿಗ್ ಬಿ ಸೂಟುಬೂಟು, ಬಾಬಾ ಕಾಮನ್ ಮ್ಯಾನ್ ಲುಕ್ಕು ಕುತೂಹಲ ಕೆರಳಿಸಿದೆ. 33 ವರ್ಷಗಳ ನಂತರ ಬೆಳ್ಳಿತೆರೆ ಮೇಲೆ ಒಟ್ಟಿಗೆ ದರ್ಶನ ಕೊಡ್ತಿರುವ ಈ ಇಬ್ಬರು ಘಟಾನುಘಟಿ ನಾಯಕರ ಕಾಂಬೋ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದೆ. ಅಂದಾ ಕಾನೂನ್, ಗೆರಾಫ್ತಾರ್ ಮತ್ತು ಹಮ್ ಸೇರಿದಂತೆ ಹಲವು ಚಿತ್ರಗಳಲ್ಲಿ ಸ್ಕ್ರೀನ್ ಶೇರ್ ಮಾಡಿ ಕಮಾಲ್ ಮಾಡಿತ್ತು. ಹಮ್ ಸಿನಿಮಾ ನಂತರ ಇವರಿಬ್ಬರನ್ನು ತೆರೆಮೇಲೆ ತರುವ ಪ್ರಯತ್ನ ನಡೆದಿತ್ತಾದರೂ ಸಾಧ್ಯವಾಗಿರಲಿಲ್ಲ. ಇದೀಗ ಲೈಕಾ ಸಂಸ್ಥೆ ಆ ವಿಚಾರದಲ್ಲಿ ಯಶಸ್ವಿಯಾಗಿದೆ.
ಇಂಡಿಯನ್, ಖೈದಿ ನಂಬರ್ 150, 2.0, ದರ್ಬಾರ್ ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ನಂತಹ ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ, ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಮತ್ತೆ ಕೈ ಜೋಡಿಸಿದೆ. ರಜನಿಯ 170ನೇ ಚಿತ್ರಕ್ಕೆ ಹಣ ಹೂಡುವ ಮೂಲಕ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ಇನ್ನೂ ಈ ಸಿನಿಮಾವನ್ನು ನಿರ್ದೇಶಕ ಟಿಜೆ ಜ್ಞಾನವೇಲ್ ನಿರ್ದೇಶಿಸಲಿದ್ದಾರೆ. ಜೈ ಭೀಮ್ ಮೂಲಕ ಇಂಡಿಯನ್ ಸಿನಿಲೋಕದಲ್ಲಿ ಸಂಚಲನ ಸೃಷ್ಟಿಸಿದ್ದ ಜ್ಞಾನವೇಲ್ ರಜನಿ- ಅಮಿತಾಭ್ ಬಚ್ಚನ್ ನಂತಹ ಸೂಪರ್ ಸ್ಟಾರ್ಸ್ ಗೆ ಸಿನಿಮಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ತಲೈವರ್ 170 ಸಿನಿಮಾದಲ್ಲಿ ರಜನಿ- ಬಿಗ್ ಬಿ ಮಾತ್ರವಲ್ಲ ಬಾಹುಬಲಿ ಬಲ್ಲಾಳದೇವ ಖ್ಯಾತಿಯ ರಾಣಾ ದಗ್ಗುಭಾಟಿ, ಪುಷ್ಪ ಖ್ಯಾತಿಯ ಫಹಾದ್ ಫಾಸಿಲ್, ಮಂಜು ವಾರಿಯರ್, ದುಶಾರಾ ವಿಜಯನ್, ರಿತಿಕಾ ಸಿಂಗ್ ನಂತಹ ಪ್ರತಿಭಾನ್ವಿತ ಕಲಾದಂಡು ಚಿತ್ರದಲ್ಲಿದೆ.
ರಾಕ್ ಸ್ಟಾರ್ ಅನಿರುದ್ಧ್ ಒನ್ಸ್ ಎಗೇನ್ ರಜನಿ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ತಿರುವನಂತಪುರಂನಲ್ಲಿ ಮುಹೂರ್ತ ಮಾಡಿ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದ ಚಿತ್ರತಂಡ, ಈಗ ಮುಂಬೈ ಷೆಡ್ಯೂಲ್ಡ್ ಕಂಪ್ಲೀಟ್ ಮಾಡಿಕೊಂಡಿದೆ. ದಂತಕಥೆಗಳಿಬ್ಬರ ಸೀಕ್ವೆನ್ಸ್ ಮುಂಬೈ ಅಂಗಳದಲ್ಲಿ ಕ್ಯಾಪ್ಚರ್ ಆಗಿದೆ. ಅಚ್ಚರಿ ಅಂದರೆ ಜಸ್ಟ್ 20 ದಿನ ಕಾಲ್ ಶೀಟ್ ನೀಡಿರುವ ಬಾಲಿವುಡ್ ದಂತಕಥೆ ಅಮಿತಾಬ್ ಪಡೆಯುತ್ತಿರೋದು ಬರೋಬ್ಬರಿ 20 ಕೋಟಿಯಂತೆ. ಹಾಗಿದ್ರೆ ರಜನಿ ಈ ಚಿತ್ರಕ್ಕೆ ಪಡೆಯುತ್ತಿರುವ ಸಂಭಾವನೆ ಎಷ್ಟಿರಬಹುದು ಎಂಬ ಲೆಕ್ಕಚಾರ ಶುರುವಾಗಿದೆ. `ಜೈಲರ್’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆದ ಹಿನ್ನಲೆ ನಿರ್ಮಾಪಕರು 100 ಕೋಟಿ ಸಂಭಾವನೆ ಜೊತೆಗೆ ಮತ್ತೆ 100 ಕೋಟಿ ಕೊಟ್ಟಿದ್ದಾರೆನ್ನುವ ಸುದ್ದಿಯಿದೆ. ಸನ್ ಪಿಕ್ಚರ್ಸ್ ಸಂಸ್ಥೆಯ ಮಾಲೀಕರು ಪಡೆಯಪ್ಪನ ಭೇಟಿಯಾಗಿ ಚೆಕ್ ಹಸ್ತಾಂತರಿಸುವ ಫೋಟೋ ವೈರಲ್ ಆಗಿತ್ತು.ಅದರಲ್ಲಿ 100 ಕೋಟಿ ಚೆಕ್ ಇದೆ ಎಂಬ ಸುದ್ದಿ ಕೇಳಿಬಂದಿತ್ತು.





