ನಟ ಪ್ರಜ್ವಲ್ ದೇವರಾಜ್ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಸಿನಿಮಾಕ್ಕೆ ‘ಚೀತಾ’ ಎಂದು ಹೆಸರಿಡಲಾಗಿದ್ದು, ಈ ಸಿನಿಮಾದ ಮುಹೂರ್ತ ಸಮಾರಂಭ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಅದ್ಧೂರಿಯಾಗಿ ನೆರವೇರಿತು. ಪ್ರಜ್ವಲ್ ದೇವರಾಜ್ ಅಭಿನಯದ 39 ಸಿನಿಮಾ ಇದಾಗಿದ್ದು, ‘ರಾಜಲಕ್ಷ್ಮೀ ಎಂಟರ್ಟೈನ್ಮೆಂಟ್’ ಬ್ಯಾನರಿನಲ್ಲಿ ಪ್ರತಿಭಾ ನರೇಶ್ ನಿರ್ಮಾಣ ಮಾಡುತ್ತಿರುವ ‘ಚೀತಾ’ ಸಿನಿಮಾಕ್ಕೆ ರಾಜ ಕಲೈ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಸುಮಾರು 23 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ, ಇಲ್ಲಿಯವರೆಗೆ ನೃತ್ಯ ಸಂಯೋಜಕರಾಗಿ ಗುರುತಿಸಿಕೊಂಡಿರುವ ರಾಜ ಕಲೈ ಕುಮಾರ್ ಈ ಸಿನಿಮಾದ ಮೊದಲ ಬಾರಿಗೆ ನಿರ್ದೇಶಕರಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

‘ಚೀತಾ’ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಅವರೊಂದಿಗೆ ಶ್ರುತಿ ಹರಿಹರನ್, ಶಿವರಾಜ್ ಕೆ. ಆರ್. ಪೇಟೆ, ಗುರುರಾಜ್ ಜಗ್ಗೇಶ್, ಗೋವಿಂದೇ ಗೌಡ, ಸುನೀಲ್, ಅಭಯ್ ಪುನೀತ್ ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ‘ಚೀತಾ’ ಸಿನಿಮಾಕ್ಕೆ ನಾಯಕಿ ಸೇರಿದಂತೆ ಇನ್ನೂ ಕೆಲವು ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದ್ದು, ಶೀಘ್ರದಲ್ಲಿಯೇ ಅವರ ಬಗ್ಗೆಯೂ ಮಾಹಿತಿ ನೀಡುವುದಾಗಿ ಚಿತ್ರತಂಡ ಹೇಳಿದೆ.

ಇನ್ನು ‘ಚೀತಾ’ ಸಿನಿಮಾದ ಬಹುಭಾಗ ಕಥೆ ಮಾರ್ಕೇಟ್ ಒಂದರಲ್ಲಿ ನಡೆಯಲಿದ್ದು, ಅದಕ್ಕಾಗಿ ಬೆಂಗಳೂರಿನ ಹೆಚ್.ಎಂ.ಟಿ ಫ್ಯಾಕ್ಟರಿಯಲ್ಲಿ ಬೃಹತ್ ಆಗಿರುವ ಮಾರ್ಕೇಟ್ ಸೆಟ್ ಗಳನ್ನು ಹಾಕಲಾಗಿದೆೆ. ‘ಚೀತಾ’ ಸಿನಿಮಾದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದು, ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣವಿದೆ. ಸದ್ಯ ಮುಹೂರ್ತವನ್ನು ನೆರವೇರಿಸಿ ಶೂಟಿಂಗ್ ನತ್ತ ಮುಖ ಮಾಡಿರುವ ‘ಚೀತಾ’ ಸಿನಿಮಾದ ಬಗ್ಗೆ ಹೆಚ್ಚಿನ ಅಪ್ಡೇಟ್ ಗಳನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ಚಿತ್ರತಂಡ ತಿಳಿಸಿದೆ.





