ಟಾಲಿವುಡ್ ನ ಯುವ ನಟ ವಿಕ್ರಾಂತ್ ನಟನೆಯ ‘ಸ್ಪಾರ್ಕ್ ಲೈಫ್’ ಸಿನಿಮಾ ಕನ್ನಡದಲ್ಲೂ ತೆರೆ ಕಾಣುತ್ತಿದೆ. ಸದ್ಯ ಬಿಡುಗಡೆಗೆ ಹೊಸ್ತಿಲಿನಲ್ಲಿ ನಿಂತಿರುವ ‘ಸ್ಪಾರ್ಕ್ ಲೈಫ್’ ನವೆಂಬರ್ 17ಕ್ಕೆೆ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಈಗಾಗಲೇ ತನ್ನ ಟೈಟಲ್ ಪೋಸ್ಟರ್, ಟೀಸರ್ ಮೂಲಕ ನಿರೀಕ್ಷೆ ಹುಟ್ಟಿಸಿರುವ ‘ಸ್ಪಾರ್ಕ್ ಲೈಫ್’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ನೆರವೇರಿತು.
ಈ ವೇಳೆ ಮಾತನಾಡಿದ ನಾಯಕ ವಿಕ್ರಾಂತ್, ‘’ಸ್ಪಾರ್ಕ್ ಲೈಫ್’ ಸಿನಿಮಾ ನನ್ನ ಮೂರು ವರ್ಷದ ಕನಸು. ಎಲ್ಲರಿಗೂ ಟ್ರೇಲರ್ ಇಷ್ಟವಾಗಿದೆ ಎಂದು ಭಾವಿಸುತ್ತೇನೆ. ಈ ಸಿನಿಮಾಕ್ಕಾಗಿ ಒಂದುವರೆ ವರ್ಷ ಕಥೆ ಬರೆದು ಇನ್ನೊಂದುವರೆ ವರ್ಷ ನಿರ್ಮಾಣದಲ್ಲಿ ತೊಡಗಿಸಿಕೊಂಡೆ. ಮೇಕಿಂಗ್‌ನಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಕಾಮಿಡಿ, ಪ್ರೀತಿ, ಥ್ರಿಲ್ಲಿಂಗ್ ಎಲಿಮೆಂಟ್ ಎಲ್ಲವೂ ಸಿನಿಮಾದಲ್ಲಿದೆ. ನಾನು ನಾಯಕನಾಗಿಯೂ ಬಣ್ಣ ಹಚ್ಚಿದ್ದೇನೆ’ ಎಂದರು.

‘ಸ್ಪಾರ್ಕ್ ಲೈಫ್’ ಸಿನಿಮಾದಲ್ಲಿ ಮೆಹ್ರೀನ್ ಪಿರ್ಜಾದಾ ಮತ್ತು ರುಕ್ಷಾರ್ ಧಿಲ್ಲೋನ್ ನಾಯಕಿಯರಾಗಿ ಅಭಿನಯಿಸಿದ್ದಾರೆ. ಮಲಯಾಳಂನ ಹಿರಿಯ ನಟ ಗುರು ಸೋಮಸುಂದರಂ ಖಳನಾಯಕನಾಗಿ ನಟಿಸಿದ್ದಾರೆ. ನಾಸರ್, ಸುಹಾಸಿನಿ ಮಣಿರತ್ನಂ, ವೆನ್ನೆೆಲ ಕಿಶೋರ್, ಸತ್ಯ, ಬ್ರಹ್ಮಾಜಿ, ಶ್ರೀಕಾಂತ್ ಅಯ್ಯಂಗಾರ್, ಚಮಕ್ ಚಂದ್ರ, ಅನ್ನಪೂರ್ಣಮ್ಮ, ರಾಜಾ ರವೀಂದ್ರ ಮುಂತಾದ ತಾರಾಬಳಗದಲ್ಲಿದ್ದಾರೆ. ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ತಯಾರಾಗಿರುವ ಈ ಚಿತ್ರ, ನವೆಂಬರ್ 17ಕ್ಕೆ ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.





