ಸ್ಯಾಂಡಲ್ವುಡ್ ನ ಯಂಗ್ ಅಂಡ್ ಸೆನ್ಸೇಷನಲ್ ಮ್ಯೂಸಿಕ್ ಡೈರೆಕ್ಟರ್ ವಾಸುಕಿ ವೈಭವ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಬೃಂದಾ ಕೈ ಹಿಡಿದು ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದಿದ್ದಾರೆ. ಮೈಸೂರಿನ ಸಂಪ್ರದಾಯದ ಪ್ರಕಾರ ವಾಸುಕಿ-ಬೃಂದಾ ಕಲ್ಯಾಣ ನೆರವೇರಿದ್ದು, ಕುಟುಂಬಸ್ತರು, ಆಪ್ತರು, ಬಂಧು-ಮಿತ್ರರು ಸಾಕ್ಷಿಯಾಗಿದ್ದಾರೆ.
ವಾಸುಕಿ ಮದುವೆ ಆಗುತ್ತಿರುವ ಬೃಂದಾ ಯಾರು ಎನ್ನುವ ವಿಚಾರವನ್ನು ಈವರೆಗೂ ವಾಸುಕಿ ಯಾರ ಜೊತೆಯೂ ಹಂಚಿಕೊಂಡಿರಲಿಲ್ಲ. ಬೃಂದಾ ಕೂಡ ರಂಗಭೂಮಿ ಕಲಾವಿದರು. ಸಾಕಷ್ಟು ನಾಟಕಗಳಲ್ಲಿ ಅವರು ನಟಿಸಿದ್ದಾರೆ. ಸ್ವತಃ ವಾಸುಕಿ ಜೊತೆಯೇ ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ. ಹಲವು ವರ್ಷಗಳಿಂದಲೂ ಈ ಜೋಡಿ ಪ್ರೀತಿಸುತ್ತಿದ್ದ ಎನ್ನುತ್ತವೆ ಮೂಲಗಳು.ವಾಸುಕಿ ಅವರ ಮದುವೆ ತೀರಾ ಸರಳವಾಗಿ ಇಂದು ನಡೆದಿದೆ. ನಟ ಸಿಹಿ ಕಹಿ ಸೇರಿದಂತೆ ಹಲವು ಕಲಾವಿದರು, ಎರಡು ಕುಟುಂಬದ ಸದಸ್ಯರು ಮತ್ತು ಆಪ್ತರು ಮಾತ್ರ ಮದುವೆಯಲ್ಲಿ ಭಾಗಿಯಾಗಿದ್ದಾರೆ. ಮದುವೆ ತೀರಾ ಖಾಸಗಿ ಆಗಿರಲಿ ಎಂದು ಅವರು ಮಾಧ್ಯಮಗಳಿಗೂ ಮದುವೆ ವಿಚಾರವನ್ನು ತಿಳಿಸಿರಲಿಲ್ಲ.
ಅಂದ್ಹಾಗೇ, ಮದುವೆ ವಿಚಾರವನ್ನು ವಾಸುಕಿ ಗುಟ್ಟಾಗಿದ್ದರು. ಅಚಾನಕ್ಕಾಗಿ ನಟಿ ತಾರಾ ಈ ವಿಷಯವನ್ನು ಹೇಳಿಕೊಂಡಿದ್ದರು. ಟಗರು ಪಲ್ಯ ಸಿನಿಮಾದಲ್ಲಿ ವಾಸುಕಿ ಮದುವೆ ಆಗುವ ಗಂಡಿನ ಪಾತ್ರ ಮಾಡಿದ್ದರು. ಈ ಕುರಿತಾಗಿ ಮಾತನಾಡುತ್ತಾ ನಟಿ ತಾರಾ ಅತೀ ಶೀಘ್ರದಲ್ಲೇ ವಾಸುಕಿ ಮದುವೆ ಆಗುತ್ತಿರುವ ವಿಷಯವನ್ನು ಬಹಿರಂಗ ಪಡಿಸಿದ್ದರು. ಹಲವು ತಿಂಗಳ ಹಿಂದೆಯೇ ವಾಸುಕಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ವಿಷಯ ಕೂಡ ಹರಿದಾಡುತ್ತಿತ್ತು. ಅದೀಗ ನಿಜವಾಗಿದೆ. ಮನಮೆಚ್ಚಿದ ಹುಡುಗಿಯ ಜೊತೆ ವಾಸುಕಿ ವೈಭವ್ ಮದುವೆ ನೆರವೇರಿದೆ.ಬಾಳಬಂಧನಕ್ಕೆ ಕಾಲಿರಿಸಿದ ಪ್ರೇಮಿಗಳಿಗೆ ಶುಭಾಷಯ ಹರಿದುಬರ್ತಿದೆ





