ಮೋಸ್ಟ್ ವೈಲೆನ್ಸ್ ಮೆನ್ ದರ್ಶನವಾಗಿದೆ. ಜುರಾಸಿಕ್ ಪಾರ್ಕ್ ನಲ್ಲಿರೋ ಲಯನ್, ಚೀತಾ, ಟೈಗರ್ ಗಿಂತ ಡೈನೋಸಾರ್ ಎಷ್ಟು ಡೇಂಜರಸ್ ಅನ್ನೋದಕ್ಕೆ ಉತ್ತರ ಸಿಕ್ಕಿದೆ. ಡಾರ್ಲಿಂಗ್ ಅಭಿಮಾನಿಗಳನ್ನು ಒಂಟಿಗಾಲಲ್ಲಿ ನಿಲ್ಲಿಸಿದ್ದ ಸಲಾರ್ ಸಿನಿಮಾದ ಮೊದಲ ನೋಟ ಹೊರಬಿದ್ದಿದೆ. ಒಂದ್ ಮಾತಿನಲ್ಲಿ ಮಾಸ್ ಪ್ರಿಯರಿಗೆ ಹೇಳಿ ಮಾಡಿಸಿದ ಭರ್ಜರಿ ಬಾಡೂಟದಂತಿದೆ. ಕೆಜಿಎಫ್ ಸೂತ್ರಧಾರ ಪ್ರಶಾಂತ್ ನೀಲ್, ಬಾಹುಬುಲಿ ಪಾತ್ರಧಾರ ಡಾರ್ಲಿಂಗ್ ಪ್ರಭಾಸ್ ಹಾಗೂ ಹೊಂಬಾಳೆ ಸಂಸ್ಥೆ..ಈ ಮೂವರು ಸಂಗಮದಿಂದಲೇ ಸಲಾರ್ ಎಂಬ ಮೂರಕ್ಷರದ ಸಿನ್ಮಾ ಮೇಲೆ ಮೌಂಟ್ ಎವರೆಸ್ಟ್ ನಷ್ಟೇ ನಿರೀಕ್ಷೆ ಹುಟ್ಕೊಂಡಿರುವುದು. ಕೆಜಿಎಫ್ ಕೋಟೆಯಲ್ಲಿ ಚಿನ್ನ ದೋಚಿ ತಾಯಿ ಆಸೆ ಈಡೇರಿಸಿದ್ದ ರಾಕಿ ಕಥೆ ಹೇಳಿ ಪ್ಯಾನ್ ವರ್ಲ್ಡ್ ಸಿನಿಜಗತ್ತನ್ನು ಥಂಡಾ ಹೊಡೆಸಿದ್ದ ಮಿಸ್ಟರ್ ನೀಲ್ ಗಾರು ಈ ಬಾರಿ ಅದ್ಯಾವಾ ಕಥೆಯನ್ನು ಪ್ರೇಕ್ಷಕರ ಮುಂದೆ ಹರವಿಡಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರದ ಜೊತೆ ಬಂದ ಬೆಂಕಿ ಟ್ರೇಲರ್ ಯೂಟ್ಯೂಬ್ ನಲ್ಲಿ ಸುಂಟಗಾಳಿ ಎಬ್ಬಿಸಿದೆ.

ಸಲಾರ್ ಸಾಮ್ರಾಜ್ಯದ ಕಥಾನಕವನ್ನು ಹೊತ್ತು ಬಂದಿರುವ 3 ನಿಮಿಷ 46 ಸೆಕೆಂಡ್ ಝಲಕ್ ಡಾರ್ಲಿಂಗ್ ಭಕ್ತಗಣಕ್ಕೆ ಕಿಕ್ ಕೊಟ್ಟಿದೆ. ಖಾನ್ಸರ್ ಸಾಮ್ರಾಜ್ಯದ ಸ್ನೇಹಿತರ ಸಮರದ ಕಥೆಯನ್ನು ನೀಲ್ ಹೇಳೋದಿಕ್ಕೆ ಹೊರಟಿದ್ದಾರೆ. ಟ್ರೇಲರ್ ಆರಂಭದಲ್ಲಿಯೇ ಆತ್ಮೀಯ ಗೆಳೆಯ ವರದನಿಗಾಗಿ ಏನೂ ಬೇಕಾದ್ರೂ ಮಾಡುವ ದೇವನ ಸ್ನೇಹದ ಬಗ್ಗೆ ಪರಿಚಯಿಸಿರುವ ಪ್ರಶಾಂತ್ ನೀಲ್, ಖಾನ್ಸರ್ ಕೋಟೆಯಲ್ಲಿ ಕುರ್ಚಿಗಾಗಿ ನಡೆಯುವ ಕುತಂತ್ರ, ವರದನನ್ನು ಹೊಡೆದು ಹಾಕಲು ನಡೆಯುವ ಷಡ್ಯಂತ್ರ, ವರದನಿಗಾಗಿ ಗಾಳ ಆಗೋಕೂ ರೆಡಿ, ತಿಮಿಂಗಲ ಆಗೋಕೂ ರೆಡಿ ಎನ್ನುವ ದೇವನ ಧೈರ್ಯ. ಸ್ನೇಹಕ್ಕಾಗಿ ಸಮರಕ್ಕಿಳಿದು ವಿರೋಧಿಗಳ ಸದ್ದಡಗಿಸುವ ದೇವ ಕಥೆಯೇ ‘ಸಲಾರ್’.
ದೇವನಾಗಿ ಪ್ರಭಾಸ್, ವರದನಾಗಿ ಪೃಥ್ವಿರಾಜ್ ಸುಕುಮಾರ್ ನಟಿಸಿದ್ದಾರೆ. ಇದು ಡಾರ್ಲಿಂಗ್ ಸಿನಿಮಾವಾದ್ರೂ ಟ್ರೇಲರ್ ನ್ನು ಹೆಚ್ಚಾಗಿ ಕಬ್ಜ ಮಾಡಿರೋದು ಪೃಥ್ವಿರಾಜ್. ಪ್ರಭಾಸ್ ಗಿಂತ ಅವ್ರೇ ಹೆಚ್ಚು ದೃಶ್ಯಗಳನ್ನು ತಿಂದು ಹಾಕಿದ್ದಾರೆ. ಒನ್ ಮ್ಯಾನ್ ಆರ್ಮಿಯಾಗಿ ಮಿರ್ಚಿ ಬಾಯ್ ಸಿಂಗಲ್ ಡೈಲಾಗ್ ನಲ್ಲಿ ಗಹಗಹಿಸಿದ್ದಾರೆ. ಹಿಂಸೆ, ರಕ್ತಪಾತ, ಕೆಜಿಎಫ್ ಲೋಕದಂತೆ ಇಲ್ಲಿಯೂ ಕಪ್ಪು ಬಿಳುಪಿನ ಆಟವಿದೆ. ಸ್ನೇಹಿತ ವರದನ ಮೇಲೆ ಒಂದು ಗೆರೆಯೂ ಬೀಳದಂತೆ ಕಾಯುವ ಮೋಸ್ಟ್ ವೈಲೆಂಟ್ ಮೆನ್ ದೇವ ಪ್ಲೀಸ್ ಐ ಕೈಂಡ್ಲಿ ರಿಕ್ವೆಸ್ಟ್ ಎನ್ನುತ್ತಾ ವಿರೋಧಿಗಳಿಗೆ ಡೈಲಾಗ್ ನಲ್ಲಿಯೇ ಟಕ್ಕರ್ ಕೊಟ್ಟಿದ್ದಾನೆ.
ಸಲಾರ್ ಟ್ರೇಲರ್ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ. ಡಾರ್ಲಿಂಗ್ ನೀಲ್ ಬ್ರೇಕ್ ಕೊಟ್ಟು ಟ್ರ್ಯಾಕ್ ಗೆ ಕಂಬ್ಯಾಕ್ ಮಾಡಿಸ್ತಾರೆ ಎಂಬ ನಿರೀಕ್ಷೆ ದುಪ್ಪಟ್ಟಾಗಿದೆ. ಬಟ್ ಸಲಾರ್ ಝಲಕ್ ನೋಡಿದ ಕನ್ನಡ ಸಿನಿಪ್ರಿಯರು ಯುಟ್ಯೂಬ್ ನಲ್ಲಿ ಉಗ್ರಂ ಸಿನಿಮಾದ ಟ್ರೇಲರ್ ನೋಡಿ ಹುಬ್ಬೇರಿಸ್ತಿದ್ದಾರೆ. ಸಲಾರ್ ನಲ್ಲಿ ಉಗ್ರಂ ಛಾಯೆ ಎದ್ದು ಕಾಣಿಸ್ತಿದೆ. ಅಲ್ಲಿಯೂ ಸ್ನೇಹಿತರ ಅಗಸ್ತ್ಯ ಹಾಗೂ ಬಾಲದ ಕಥೆ ಹೇಳಿದ್ದರು ನೀಲ್. ಸಲಾರ್ ನಲ್ಲಿ ಖಾನ್ಸರ್ ಸಾಮ್ರಾಜ್ಯ ಉಗ್ರಂನಲ್ಲಿ ಮುಘೋರ್ ಪ್ರದೇಶ. ಸ್ನೇಹಿತನಿಗಾಗಿ ಜೀವ ತ್ಯಾಗ ಮಾಡಲು ಸಿದ್ದವಿರುವ ಅಗಸ್ತ್ಯನ ರೀತಿ ವರದನಿಗಾಗಿ ಏನ್ ಬೇಕಾದ್ರೂ ಮಾಡುವ ದೇವ..ಇದೆಲ್ಲವನ್ನೂ ತಾಳೆ ಹಾಕ್ತಿರುವ ಫ್ಯಾನ್ಸ್ ಸಲಾರ್ ಉಗ್ರಂ ರಿಮೇಕ್ ಅಂತಾ ಮತ್ತೆ ಚಕಾರ ಎತ್ತಿದ್ದಾರೆ.

ಸಲಾರ್ ಉಗ್ರಂ ಸಿನಿಮಾದ ರಿಮೇಕ್ ಅನ್ನೋದು ಟ್ರೇಲರ್ ರಿಲೀಸ್ ಆದಾಗಿನಿಂದ ಶುರುವಾಗಿರುವ ಟಾಕ್ ಅಲ್ಲವೇ ಅಲ್ಲ. ಸಿನ್ಮಾ ಸೆಟ್ಟೇರಿದ ದಿನದಿಂದಲೂ ಈ ಮಾತು ಸೌತ್ ಸಿನಿ ಬಜಾರ್ ನಲ್ಲಿ ಹರಿದಾಡ್ತಿದೆ. ಅದಕ್ಕೆ ಟ್ರೇಲರ್ ಈಗ ಮತ್ತಷ್ಟು ಪುಷ್ಠಿ ಕೊಟ್ಟಿದೆ. ಕೆಜಿಎಫ್ ಸೆಟ್ ನಲ್ಲಿ ನೀಲ್ ಸಲಾರ್ ಸಿನ್ಮಾ ಮಾಡಿದ್ದಾರೆ. ಉಗ್ರಂ ಅಪ್ ಡೇಟ್ ವರ್ಷನ್ ಸಲಾರ್..ಒರಿಜಿನಲ್ ಉಗ್ರಂ ಟ್ರೇಲರ್, ರಿಮೇಕ್ ಸಲಾರ್ ಟ್ರೇಲರ್ ಅಂತಾ ಟ್ರೋಲ್ ಮಾಡಲಾಗ್ತಿದೆ. ಸಲಾರ್ ಟ್ರೇಲರ್ ಬಗ್ಗೆ ಪಾಸಿಟಿವ್ ಹಾಗೂ ನೆಗೆಟಿವ್ ಎರಡು ಒಪಿನಿಯನ್ ಕೇಳಿ ಬರ್ತಿದೆ. ನೀಲ್ ಅದ್ಧೂರಿ ಮೇಕಿಂಗ್, ರವಿ ಬಸ್ರೂರ್ ಮ್ಯೂಸಿಕ್ ಮ್ಯಾಚಿಂಗ್, ಭುವನ್ ಕ್ಯಾಮೆರಾ ವರ್ಕ್, ಡಾರ್ಲಿಂಗ್-ಪೃಥ್ವಿ ಜುಗಲ್ ಬಂಧಿ ಟ್ರೇಲರ್ ಚಿಂದಿ ಊಡಾಯಿಸ್ತಿದೆ. ಮಿಲಿಯನ್ಸ್ ಗಟ್ಟಲೇ ವೀವ್ಸ್ ಪಡೆಯುತ್ತಾ ದಾಖಲೆ ಓಟದಲ್ಲಿದೆ.





