‘ಚಿಕ್ಕ ವಯಸ್ಸಿನಲ್ಲಿ ನನಗೆ ಪೊಲೀಸ್ ಆಫೀಸರ್ ಆಗಬೇಕೆಂಬ ಕನಸಿತ್ತು. ನಿಜ ಜೀವನದಲ್ಲಿ ಅಂಥದ್ದೊಂದು ಕನಸು ನನಸಾಗಲಿಲ್ಲ. ಆದರೆ ಈಗ ಸಿನಿಮಾದಲ್ಲಿ ಆ ಕನಸು ನನಸಾಗಿದೆ’ ಇದು ನಟಿ ಅದಿತಿ ಪ್ರಭುದೇವ ಮಾತು.
ಮದುವೆಯ ಬಳಿಕ ಅದಿತಿ ಪ್ರಭುದೇವ ಅಭಿನಯಿಸಿರುವ ಮತ್ತೊಂದು ಸಿನಿಮಾ ’ಅಲೆಕ್ಸಾ’ ಶೀಘ್ರದಲ್ಲಿಯೇ ಬಿಡುಗಡೆಗೆಯಾಗಲಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿರುವ ಅದಿತಿ ಪ್ರಭುದೇವ, ಇದೇ ಮೊದಲ ಬಾರಿಗೆ ಈ ಸಿನಿಮಾದಲ್ಲಿ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.
ಇತ್ತೀಚೆಗೆ ’ಅಲೆಕ್ಸಾ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಇದೇ ವೇಳೆ ಮಾತನಾಡಿದ ಅದಿತಿ ಪ್ರಭುದೇವ ತಮ್ಮ ಬಾಲ್ಯದ ಕನಸು ತೆರೆಮೇಲೆ ನನಸಾದ ಖುಷಿ ಹಂಚಿಕೊಂಡರು. ‘ಚಿಕ್ಕ ವಯಸ್ಸಿನಲ್ಲಿ ಪೊಲೀಸ್ ಆಫೀಸರ್ ಆಗಬೇಕೆಂಬ ಕನಸು ನನಸಾಗಲಿಲ್ಲ. ಆ ಮೇಲೆ ಮಾಲಾಶ್ರೀ ಅವರ ಸಿನಿಮಾಗಳನ್ನು ನೋಡುತ್ತಿದ್ದಾಗ, ನನಗೂ ಈ ಫೈಟ್ಸ್, ಆ್ಯಕ್ಷನ್ಸ್ ಮಾಡಬೇಕು ಅಂಥ ಅನಿಸುತ್ತಿತ್ತು. ಈಗ ಅದೆಲ್ಲವೂ ’ಅಲೆಕ್ಸಾ’ ಸಿನಿಮಾದಲ್ಲಿ ನನಸಾಗಿದೆ. ಈ ಸಿನಿಮಾದಲ್ಲಿ ನಾನು ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದೇನೆ. ಇದೊಂದು ಕ್ರೈಂ-ಥ್ರಿಲ್ಲರ್ ಶೈಲಿಯ ಸಿನಿಮಾ. ಇದರಲ್ಲಿ ನನಗೆ ಎರಡು-ಮೂರು ಭರ್ಜರಿ ಆ್ಯಕ್ಷನ್ಸ್, ಫೈಟ್ಸ್ ಸೀನ್ಸ್‌ಯಿದೆ. ಮೊದಲ ಬಾರಿಗೆ ಈ ಥರದ ಪಾತ್ರದಲ್ಲಿ ಅಭಿನಯಿಸಿದ್ದು, ಶೂಟಿಂಗ್ ಮಾಡಿದ್ದು ಎಲ್ಲವೂ ಹೊಸಥರನಾಗಿತ್ತು’ ಎಂದಿದ್ದಾರೆ.
ಜೀವ ನಿರ್ದೇಶಿಸಿರುವ ಈ ಸಿನಿಮಾವನ್ನು ವಿ.ಚಂದ್ರು ನಿರ್ಮಾಣ ಮಾಡಿದ್ದಾರೆ. ಮರ್ಡರ್ ಮಿಸ್ಟರಿ ಜೊತೆಗೆ ಆಕ್ಷನ್ ಜಾನರ್ ಒಳಗೊಂಡಿರುವ ಈ ಸಿನಿಮಾದಲ್ಲಿ ನಟಿ ಅದಿತಿ ಪ್ರಭುದೇವ ಮತ್ತು ಪವನ್ ತೇಜ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಾಗಾರ್ಜುನ್, ಮೇಘಶ್ರೀ, ಮಿಮಿಕ್ರಿ ಗೋಪಿ, ಚಂದ್ರಕಲಾ ಮೋಹನ್ ಮುಂತಾದವರು ಈ ಸಿನಿಮಾದಲ್ಲಿದ್ದಾರೆ. ಔಷಧ ಉದ್ಯಮದ ಮಾಫಿಯಾ ಬಗ್ಗೆ ಸಹ ಸಂದೇಶವನ್ನು ಈ ಸಿನಿಮಾ ಒಳಗೊಂಡಿದೆ. ಈ ಸಿನಿಮಾದ ಎರಡನೇ ಭಾಗವನ್ನು ಸಹ ಚಿತ್ರೀಕರಿಸಿ ತೆರೆಗೆ ತರುವ ಆಲೋಚನೆ ಇದೆ. ಮೈಸೂರು, ಮಡಿಕೇರಿ ಮುಂತಾದ ಕಡೆ ಶೂಟಿಂಗ್ ಮಾಡಿದ್ದೇವೆ. ಮೂರು ಹಾಡುಗಳು ಹಾಗೂ ನಾಲ್ಕು ಫೈಟ್ ದೃಶ್ಯಗಳು ಈ ಸಿನಿಮಾದಲ್ಲವೆ. ಅಕ್ಟೋಬರ್ ಅಂತ್ಯಕ್ಕೆ ಅಥವಾ ನವೆಂಬರ್ ಮೊದಲ ವಾರದಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲಿದ್ದೇವೆ ಎಂದು ನಿರ್ದೇಶಕ ಜೀವ ಹೇಳಿದ್ದಾರೆ.





